Advertisement
ಗುರುಪ್ರಸಾದ ಕುರ್ತಕೋಟಿ ಹೊಸ ಅಂಕಣ ‘ಗ್ರಾಮಡ್ರಾಮಾಯಣ’

ಗುರುಪ್ರಸಾದ ಕುರ್ತಕೋಟಿ ಹೊಸ ಅಂಕಣ ‘ಗ್ರಾಮಡ್ರಾಮಾಯಣ’

ಸಾಕಷ್ಟು ಸಂಬಳ ಒದಗುವ ಐಟಿ ವಲಯದಲ್ಲಿ ಉದ್ಯೋಗ ನಿರ್ವಹಿಸುವಾಗ, ಕಂಪ್ಯೂಟರ್ ಗಳ ಪರದೆ ಕಣ್ಣು ಕೀಲಿಸಿ ಕುಳಿತು ದಣಿವಾದಾಗ ಹಳ್ಳಿ ಮನೆಯ, ಹೊಲಗದ್ದೆಗಳ ಕಂಪು ಮನಸ್ಸನ್ನು ಕಾಡುವುದುಂಟು. ಹಾಗೆಯೇ ತಾನೂ ಕೃಷಿ ಮಾಡುವ ಅವಕಾಶವಿದ್ದಿದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಕನಸೂ ಮೊಳಕೆಯೊಡೆಯುವುದು. ಅಂತಹ ಕನಸನ್ನು ಬೆನ್ನಟ್ಟಿ ನನಸು ಮಾಡಿಕೊಳ್ಳುವುದು ಕೆಲವರಿಗಷ್ಟೇ ಸಾಧ್ಯ.  ಹೀಗೆ ಕನಸುಗಳ ಬೆನ್ನತ್ತಿ ಕೃಷಿ ಕ್ಷೇತ್ರದತ್ತ ಮುಖ ಮಾಡಿದವರು ಗುರುಪ್ರಸಾದ ಕುರ್ತಕೋಟಿ. ತಮ್ಮ ಕನಸಿನ ಹಾದಿಯಲ್ಲಿ ಕಂಡ ವಿಚಾರಗಳನ್ನು, ತಮ್ಮ ಅನುಭವಗಳನ್ನು ಅವರು ‘ಗ್ರಾಮ ಡ್ರಾಮಾಯಣ’  ಎಂಬ ಈ ಅಂಕಣದಲ್ಲಿ ಬರೆಯಲಿದ್ದಾರೆ.  ಅವರ ಮೊದಲ ಬರಹ  ಇಲ್ಲಿದೆ. 

ಬೆಳೆಸಿರಿ ರೈತ ಬಳಗದ ಜನನ

ದೇವೇಂದ್ರನಿಗೆ ಕೃಷಿ ಮಾಡಲು ವಹಿಸಿಕೊಟ್ಟು ಆ ಬಳಿಕ ಅವನ  ಕೈಯಲ್ಲಿ ಚೆನ್ನಾಗಿ ಪಾಠ ಕಲಿತ ಬಳಿಕ, ಇನ್ನು ಮೇಲೆ ನನ್ನ ಹೊಲ ನಾನೇ ಮಾಡಬೇಕು ಎಂಬ ಧೃಡ ನಿರ್ಧಾರ ಮಾಡಿದ್ದೆ. ಹಲವು ವರ್ಷಗಳ ಹಿಂದೆ ನನ್ನ ದುಡಿಮೆಯ ಹಣ ಹಾಕಿ ಮುಂದೊಮ್ಮೆ ರೈತನಾಗಬೇಕು ಎಂಬ ಕನಸು ಕಟ್ಟಿಕೊಂಡು, ಕೊಂಡುಕೊಂಡ ಹೊಲವನ್ನು ಯಾರಿಗೋ ಮಾಡಲು ಕೊಡುವುದಕ್ಕೆ ಮನಸ್ಸು ಹೇಗೆ ಒಪ್ಪೀತು? ಅದೂ ಅಲ್ಲದೆ ಅವರೆಲ್ಲರೂ, ರಸಗೊಬ್ಬರದ ರೂಪದಲ್ಲಿ ಎಗ್ಗಿಲ್ಲದೆ ಸುರಿಯುವ ವಿಷ ಮುಂದೊಮ್ಮೆ ನನ್ನ ಭೂಮಿಯನ್ನು ಬರಡು ಮಾಡುವುದರಲ್ಲಿ ಎಳ್ಳಷ್ಟೂ ಸಂಶಯ ಇರಲಿಲ್ಲ. ಹಾಗಂತ ಭೂಮಿಯಲ್ಲಿ ಏನೂ ಮಾಡದೆ ಹಾಗೆ ಬಿಟ್ಟರೆ ಬೇರೆಯವರ ಕಣ್ಣು ಕುಕ್ಕುವುದೂ ಸಹಜ. ನನ್ನ ಸ್ಥಿತಿ ಹೇಗಿತ್ತು ಅಂದರೆ, ಅಮೇರಿಕೆಯನ್ನು ಬಿಟ್ಟು, ಲಕ್ಷಗಟ್ಟಲೆ ಸಂಬಳದ ಕೆಲಸವನ್ನೂ ಬಿಟ್ಟು ಬೆಂಗಳೂರಿನಲ್ಲಿ ಕಟ್ಟಿ ಬೆಳೆಸಿದ “ಬೆಳೆಸಿರಿ” ಸಂಸ್ಥೆಯನ್ನು ಬಿಟ್ಟು ಹಳ್ಳಿಗೆ ಕೂಡಲೇ ಹೋಗುವುದಕ್ಕೂ ಸಾಧ್ಯವಿರಲಿಲ್ಲ. ಹಾಗಂತ ಹಳ್ಳಿಯಲ್ಲೊಂದು ಗೂಡು ಕಟ್ಟಲೇಬೇಕು ಎಂಬ ನನ್ನ ಕನಸನ್ನೂ ಹತ್ತಿಕ್ಕುವ ಪ್ರಶ್ನೆಯೇ ಇರಲಿಲ್ಲ. ಅಲ್ಲಿ ಬಿಡಲಾಗುತ್ತಿಲ್ಲ ಇಲ್ಲಿ ಬರಲಾಗುತ್ತಿಲ್ಲ ಎಂಬ ಸ್ಥಿತಿ. ಆ ತ್ರಿಶಂಕುವಿಗೆ ಅಂತ ಸ್ವರ್ಗವನ್ನೇ ಸೃಷ್ಟಿಸಲು ವಿಶ್ವಾಮಿತ್ರನಿದ್ದನಲ್ಲ! ನಾನೂ ಹಾಗೆಯೇ ಒಬ್ಬ ವಿಶ್ವಾಮಿತ್ರನಿಗಾಗಿ ಹುಡುಕಿ ಹುಡುಕಿ, ಸಾಕಾಗಿ ಕೊನೆಗೆ ನನಗೆ ಬೇಕಾದ ಸ್ವರ್ಗವನ್ನು ಹಳ್ಳಿಯಲ್ಲಿ ನಾನೇ ನಿರ್ಮಿಸಿಕೊಳ್ಳುವ ಮನಸ್ಸು ಕೊನೆಗೂ ಮಾಡಿದ್ದೆ.

ನನ್ನ ಹೊಲದ ಮೇಲೆ ಕಣ್ಣು ಹಾಕಿದವರು ಹಲವರು. ಮಿಕ್ಕವರು ತುಂಬಾ ಜನ ನಿನ್ನ ಕೈಯಲ್ಲಿ ಆಗದು, ಬಿಟ್ಟು ಬಿಡು ಅಂತ ನೇರವಾಗಿ ಹಾಗೂ ಪರೋಕ್ಷವಾಗಿ ಹೇಳುತ್ತಿದ್ದರು. ಅದೇನೋ ಹೇಳ್ತಾರಲ್ಲ “ಆಳಿಗೊಂದು ಕಲ್ಲು” ಅಂತ… ಹಾಗಿತ್ತು ನನ್ನ ಪರಿಸ್ಥಿತಿ. ಅದೇ ಸಮಯದಲ್ಲಿ ಶಿರಸಿಯ ಸಮೀಪ ಇರುವ ನನ್ನ ಸಂಬಂಧಿಯೊಬ್ಬರು “ನಿನ್ನೆ ನಿನ್ನ ಹೊಲ ನೋಡಿಕೊಂಡು ಬಂದೆ ಮಾರಾಯ” ಅಂದರು. ಆಗ ನಾನು ಬೆಂಗಳೂರಿನಲ್ಲಿದ್ದೆ. ದೇವೇಂದ್ರ ಜೋಳವನ್ನು ಬಳಿದುಕೊಂಡು ಹೋಗಿದ್ದನಾದ್ದರಿಂದ ಹೊಲದಲ್ಲಿ ದಂಟು ಬಿಟ್ಟರೆ ಬೇರೇನೂ ಇರಲಿಲ್ಲ. ಅವರು ಅಷ್ಟು ಇಷ್ಟಪಟ್ಟು ಏನೂ ಬೆಳೆಯದಿದ್ದ ನನ್ನ ಹೊಲ ನೋಡಿಕೊಂಡು ಬಂದರೆಂಬ ಖುಷಿ ಹಾಗೂ ಆಶ್ಚರ್ಯ ನನಗೆ. ಕೆಲವೇ ದಿನಗಳಲ್ಲಿ ಅದು ಯಾಕೆ ಅಂತ ಗೊತ್ತಾಯ್ತು! ಅವರ ಪರಿಚಯದವನೊಬ್ಬ ಆ ನನ್ನ ಹೊಲದ ಮೇಲೆ ಕಣ್ಣು ಹಾಕಿದ್ದನಂತೆ. ಖಾಲಿ ಇದೆ, ಒಳ್ಳೆಯ ನೀರಿನ ಸೆಲೆ ಇರುವ ಬೋರು ಇದೆ. ಹೀಗಾಗಿ ಅದನ್ನು ನನ್ನಿಂದ ಲೀಸ್ ಮೇಲೆ ಪಡೆಯುವ ಹುನ್ನಾರದಲ್ಲಿ ಅವರಿದ್ದರು. ಅವರು ನನ್ನ ಆ ಸಂಬಂಧಿಯ ಬಳಿ ಹೇಳಿ ಕಳಿಸಿದ್ದ ಆಫರ್ ಹೀಗಿತ್ತು.

ಹದಿನೈದು ವರ್ಷಗಳಿಗೆ ನನ್ನ ಜಮೀನನ್ನು ಅವರಿಗೆ ಬರೆದು ಕೊಡಬೇಕಂತೆ. ಅಲ್ಲವರು ಆಕಳು ಸಾಕಿ ಹಾಲಿನ ಡೈರಿ ಮಾಡುತ್ತಾರಂತೆ. ದುಡ್ಡು ಎಷ್ಟು ಅಡ್ವಾನ್ಸ್ ಬೇಕು ಹೇಳು… ಹಾಗೆ ಹೀಗೆ. ಆಗಲೇ ನನಗೆ ೪೫ ಆಗಿತ್ತು. ಇವರಿಗೆ ೧೫ ವರ್ಷ ಬರೆದುಕೊಟ್ಟರೆ ನನ್ನ ಜಮೀನು ನನ್ನ ಕೈಗೆ ವಾಪಸ್ಸು ಬರುವ ಹೊತ್ತಿಗೆ ನನಗೆ ೬೦ ಆಗಿರುತ್ತದೆ. ಆಮೇಲೆ ನಾನು ಏನು ಮಾಡಲು ಸಾಧ್ಯ? ಕೃಷಿ ಮಾಡಬೇಕು ಅಂತ ಕೆಲಸ ಬಿಟ್ಟು ಬಂದು ಬೇರೆಯವರಿಗೆ ಲೀಸ್ ಮೇಲೆ ಕೊಟ್ಟು ಮಾಡಿಸಲು ನನಗೆ ನಾಚಿಗೆ ಬರಬೇಡವೇ? ನಾನು ನಿರ್ಭಿಡೆಯಿಂದ ಆಗೋಲ್ಲ ಅಂತ ಹೇಳಿದೆ. ಆದರೆ ಅವರು ಕೇಳಬೇಕಲ್ಲ. ನನಗೆ ಎಲ್ಲಾ ದಿಕ್ಕುಗಳಿಂದ ಒತ್ತಡಗಳು ಬರಲು ಶುರುವಾದವು. ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದರು. ಕೆಲವರು ಹಿತೈಷಿಗಳು ನನಗೆ ತೊಂದರೆ ಆದೀತು ಅಂತಲೂ ಯೋಚಿಸುತ್ತಿದರು.

“ನೀನು ಬೆಂಗಳೂರು ಬಿಟ್ಟು ಇಲ್ಲಿ ಬಂದು ಹೇಗೆ ಮಾಡ್ತೀಯ?”

“ನಿನಗೆ ತಲೆ ಸರಿ ಇದೆಯಾ?”

“ನಾವೇ ಇಲ್ಲಿ ಒದ್ದಾಡ್ತಾ ಇದ್ದೀವಿ, ಇದರಲ್ಲಿ ಮಜಾ ಏನಿಲ್ಲ…”

“ಕೆಲಸ ಮಾಡೋಕೆ ಯಾರೂ ಸಿಗೋದಿಲ್ಲ”

“ಏನೂ ಲಾಭ ಇಲ್ಲ ಬರಿ ಗೊಬ್ಬರಕ್ಕೆ ಹಾಕಿಯೇ ಹೋಗುತ್ತೆ” (ಹಾಗಂತ ಮಾಡೋದು ಯಾರೋ ಬಿಟ್ಟಿಲ್ಲ ಕೂಡ!)

ಆದರೆ ಹಾಗೆ ಅವರು ಹೇಳಿದಾಗಲೊಮ್ಮೆ ನನ್ನ ಉತ್ಸಾಹ ಇಮ್ಮಡಿಯಾಗುತ್ತಿತ್ತು. ಅವರು ಹೇಳುತ್ತಿದ್ದ ಎಷ್ಟೋ ವಿಷಯಗಳು ಸರಿ ಇದ್ದರೂ ಕೂಡ, ಅದನ್ನು ನಾನೇ ಸಾಕ್ಷಾತ್ಕಾರ ಮಾಡಿಕೊಂಡು ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂಬ ಜಿದ್ದಿಗೆ ನಾನು ಬಿದ್ದಿದ್ದೆ. ನನ್ನಲ್ಲಿ ಹಲವು ಪ್ರಶ್ನೆಗಳು ಏಳುತ್ತಿದ್ದವು… ಬೇರೆಯವರ ಮೇಲೆ ಅವಲಂಬನೆ ಇಲ್ಲದೆ ನಾವೇ ಯಾಕೆ ಮಾಡಬಾರದು? ಯಾಕೆ ಗೊಬ್ಬರಕ್ಕೆ ಸುರಿಯಬೇಕು? ಗೊಬ್ಬರ ಏನೂ ಬಳಸದೆ ಮಾಡುವ ಸಹಜ ಕೃಷಿ ವಿಧಾನಗಳ ಬಗ್ಗೆ ನಾನಾಗಲೇ ತುಂಬಾ ಓದಿದ್ದೆ. ಅದನ್ಯಾಕೆ ನನ್ನ ಹೊಲದಲ್ಲಿ ಅಳವಡಿಸಬಾರದು? ಬೆಂಗಳೂರಿನಲ್ಲಿ ಮಣ್ಣು ರಹಿತ ವಿಧಾನ ಬಳಸಿ ಅದಾಗಲೆ ಹಲವು ಹಣ್ಣು ತರಕಾರಿಗಳನ್ನು ಬೆಳೆದಿದ್ದ ನನಗೆ ಸಹಜವಾಗಿಯೇ ನನ್ನ ಮೇಲೆ ನಂಬಿಕೆ ಇತ್ತು. ಅದೂ ಅಲ್ಲದೆ ನಾನೂ ಅಳವಡಿಸಿ ಅಲ್ಲಿಯ ರೈತರಿಗೂ ಒಂದಿಷ್ಟು ಹೊಸ ವಿಧಾನ ಕಲಿಸೋಣ ಎಂಬ ಆಸೆ ಇತ್ತು. ಆದರೆ ಅಲ್ಲಿಯವರ ಮನಸ್ಥಿತಿ ಹೇಗಿತ್ತು ಅಂದರೆ ನಾನು ಅಲ್ಲಿ ಬರಲು ಅವರು ಸಾಕಷ್ಟು ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೇನೋ ಅಂತ ಅನಿಸುತ್ತಿತ್ತು.

ಅವರು ಅಷ್ಟು ಇಷ್ಟಪಟ್ಟು ಏನೂ ಬೆಳೆಯದಿದ್ದ ನನ್ನ ಹೊಲ ನೋಡಿಕೊಂಡು ಬಂದರೆಂಬ ಖುಷಿ ಹಾಗೂ ಆಶ್ಚರ್ಯ ನನಗೆ. ಕೆಲವೇ ದಿನಗಳಲ್ಲಿ ಅದು ಯಾಕೆ ಅಂತ ಗೊತ್ತಾಯ್ತು! ಅವರ ಪರಿಚಯದವನೊಬ್ಬ ಆ ನನ್ನ ಹೊಲದ ಮೇಲೆ ಕಣ್ಣು ಹಾಕಿದ್ದನಂತೆ. ಖಾಲಿ ಇದೆ, ಒಳ್ಳೆಯ ನೀರಿನ ಸೆಲೆ ಇರುವ ಬೋರು ಇದೆ. ಹೀಗಾಗಿ ಅದನ್ನು ನನ್ನಿಂದ ಲೀಸ್ ಮೇಲೆ ಪಡೆಯುವ ಹುನ್ನಾರದಲ್ಲಿ ಅವರಿದ್ದರು.

ನಾನು ಅಷ್ಟು ಬೇಗ ಸೋಲಲು ಸಿದ್ಧನಿರಲಿಲ್ಲವಾದರೂ, ನಾನು ಹಳ್ಳಿಯಲ್ಲಿ ಇದ್ದು ಹೊಲದಲ್ಲಿ ಬೆಳೆ ತೆಗೆದು ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳುವುದು ಅಷ್ಟು ಸುಲಭ ಅಲ್ಲ ಎಂಬ ಕಟು ಸತ್ಯವೂ ನನಗೆ ತಿಳಿದಿತ್ತು. ಅದಕ್ಕಾಗಿ ಒಂದಿಷ್ಟು ಬೆಲೆ ತೆರಬೇಕು ಅಂತ ಕೂಡ ನನಗೆ ಗೊತ್ತಿತ್ತು. ಅದು ಕಷ್ಟ ಆದರೂ ನಾನೇ ಇಷ್ಟ ಪಟ್ಟು ಆರಿಸಿಕೊಂಡ ವಿಷವಾಗಿತ್ತು! ಅದು ಅಸಾಧ್ಯವೂ ಆಗಿರಲಿಲ್ಲ. ನಾನೇನು ಚಂದ್ರನ ಮೇಲೆ ಬೆಳೆ ತೆಗೆಯಲು ಹೊರಟಿದ್ದೆನೆ? ಜಗತ್ತಿನಲ್ಲಿ ಯಾರೂ ಮಾಡದ್ದಂತೂ ಅಲ್ಲವಲ್ಲ. ಆದರೆ ನನ್ನ ಹೊಲವೇ ನನಗೆ ಇನ್ನೂ ಪರಿಚಿತ ಇರಲಿಲ್ಲ, ಒಂದು ರೀತಿಯಲ್ಲಿ ಅದು ನನ್ನ ಮಟ್ಟಿಗೆ ಚಂದ್ರಲೋಕವೇ ಆಗಿತ್ತು. ಅಲ್ಲಿದ್ದುಕೊಂಡೆ ನಾನು ಅದನ್ನು ಅರಿಯಬೇಕಿತ್ತು. ಸ್ವಲ್ಪ ನಿಧಾನವಾದರೂ ಖಂಡಿತವಾಗಿಯೂ ಅದು ಸಾಧ್ಯ ಎಂಬ ಅರಿವು ನನಗಿತ್ತು.

ಹೀಗೆಯೇ ನನ್ನ ಚಿಂತನ ಮಂಥನಗಳು ನಡೆದ ಸಮಯದಲ್ಲಿ ನನಗೆ ಮತ್ತೊಬ್ಬರು ಕರೆ ಮಾಡಿದರು. ಅವರದೊಂದು ಸಂಸ್ಥೆಯಿತ್ತಂತೆ. ಅಲ್ಲಿ ಸೈನಿಕರಿಗೆ ತರಬೇತಿ ಕೊಡುತ್ತಾರಂತೆ. ಅದಕ್ಕಾಗಿ ಅವರಿಗೆ ಸಮತಟ್ಟಾದ ಜಾಗ ಬೇಕಿತ್ತು, ನನ್ನ ಹೊಲ ಅದಕ್ಕೆ ಸೂಕ್ತ ಅಂತ ಅವರಿಗೆ ಅನಿಸಿ, ಕೊಡುವಿರಾ ಅಂತ ಕೇಳಿದರು. ಅವರಿಗೂ ಇಲ್ಲ ಅಂತ ಹೇಳಿದೆನಾದರೂ, ಅವರು ಹಾಗೆ ಕೇಳಿದ್ದು ನಾನು ಒಂದು ಹೊಸ ಯೋಜನೆಯನ್ನು ರೂಪಿಸಲು ಕಾರಣವಾಯಿತು. ಬೆಂಗಳೂರಿನಲ್ಲಿ ಅದಾಗಲೇ ಎಷ್ಟೋ ಜನರಿಗೆ ಮಣ್ಣುರಹಿತ ಕೃಷಿ / Hydroponics ವಿಧಾನದ ತರಬೇತಿ ನೀಡಿದ್ದ ನಾನು ಹಳ್ಳಿಯಲ್ಲೂ ಒಂದು ಶಿಷ್ಯ ಬಳಗವನ್ನು ಯಾಕೆ ರೂಪಿಸಬಾರದು ಎಂಬ ಯೋಚನೆ ಅದು. ಅಲ್ಲೊಂದಿಷ್ಟು   ಹುಡುಗರನ್ನು ಒಯ್ದು ಅವರಿಗೆ ತರಬೇತಿ ಕೊಟ್ಟು ಅವರು ಅಲ್ಲಿಯೇ ಉಳಿಯುವಂತೆ ಮಾಡಿದರೆ ನನಗೂ ಅನುಕೂಲ ಅವರಿಗೂ ಕಲಿತಂತೆ ಆಗುತ್ತದೆ ಎಂಬ ಸ್ವಾರ್ಥ-ಪರಮಾರ್ಥ ರೀತಿಯ ಯೋಚನೆ ಬಂದು ಪುಳಕಗೊಂಡೆ.

ನನ್ನ ಎಷ್ಟೋ ಜನ ಶಿಷ್ಯಂದಿರಿಗೆ ನನ್ನ ಹಾಗೆಯೇ ಉಮೇದಿ ಇತ್ತು. ಅವರಿಗೆ ಹೇಗೆ ಮುಂದುವರಿಯಬೇಕು ಅಂತ ಗೊತ್ತಿರಲಿಲ್ಲ. ಅವರಲ್ಲಿ ಹಲವರಿಗೆ ಹೊಲ ಕೂಡ ಇರಲಿಲ್ಲ. ನನ್ನ ಬಳಿ ಎರಡೂ ಇತ್ತು! ಹೀಗಾಗಿ ನಾನು ನನ್ನದೇ ಜಮೀನಿನಲ್ಲಿ ಅವರಿಗೆ ಕಲಿಸುತ್ತಾ ಅಲ್ಲೊಂದು ರೈತರ ಸೇನೆ ಕಟ್ಟಬಹುದು ಎಂಬ ಕಲ್ಪನೆ ನನ್ನಲ್ಲಿ ಮೊಳಕೆ ಒಡೆಯಿತು. ಕೂಸು ಹುಟ್ಟಿದ ಮೇಲೆ ಅದಕ್ಕೊಂದು ಹೆಸರು ಇಡಬೇಕಲ್ಲ. ಅದೇನೋ ಗೊತ್ತಿಲ್ಲ ಹಲವಾರು ಸಂಘಟನೆಗಳ ಹೆಸರುಗಳಲ್ಲಿ “ಸೈನ್ಯ” ಅಂತ ಇರುವುದು ಸಾಮಾನ್ಯ. “ಬೆಳೆಸಿರಿ ರೈತ ಸೇನೆ” ಅಂತ ಒಂದು ಹೆಸರು ತಲೆಗೆ ಬಂತು. ನಮ್ಮ ಹೋರಾಟ ಅಜ್ಞಾನದ ವಿರುದ್ಧ, ವಿಷಪೂರಿತ ಆಹಾರ ಬೆಳೆಯುವ ಮನಸ್ಥಿತಿಯ ವಿರುದ್ಧ, ನೀರಿನ ದುರ್ಬಳಕೆಯ ವಿರುದ್ಧ… ಎಂಬೆಲ್ಲ ಉದಾತ್ತ ಧ್ಯೇಯಗಳನ್ನಿಟ್ಟುಕೊಂಡರೂ “ಸೇನೆ” ಎಂಬ ಪದ ವ್ಯವಸ್ಥೆಯ ವಿರುದ್ಧದ ಹೋರಾಟದಂತೆ ತಪ್ಪು ಸಂದೇಶ ಆಗಕೂಡದು ಅಥವಾ ಆ ಹೆಸರು ನಮ್ಮದೊಂದು ರಾಜಕೀಯ ಪ್ರೇರಿತ ಸಂಸ್ಥೆ ಅನ್ನುವ ತಪ್ಪು ಸಂದೇಶ ನೀಡಬಾರದು ಅಂದುಕೊಂಡು “ಬೆಳೆಸಿರಿ ರೈತ ಬಳಗ” ಅಂತ ಹೆಸರಿಟ್ಟೆ.

ಹೆಸರಿನಲ್ಲೇನಿದೆ ಬಿಡಿ.. ನಾನು ಕರೆದ ತಕ್ಷಣ ಹಳ್ಳಿಯಲ್ಲಿ ನನ್ನ ಜೊತೆಗೆ ಬಂದು ಉಳಿಯುವವರು ಬೇಕಲ್ಲ! ನನ್ನ ಜೊತೆ ಇರಲು ನನ್ನಂತಹ ಹುಚ್ಚು ಇರುವವರೇ ಬೇಕು. ಹಾಗೆ ಒಂದು ಸಂಶಯ ಇತ್ತಾದರೂ ಒಮ್ಮೆ ಪ್ರಯತ್ನಿಸೋಣ ಅಂತ ಅನಿಸಿ ನನ್ನ ಈ ಯೋಜನೆಯ ಬಗ್ಗೆ ಒಂದು ಇಮೇಲ್ ಕೀಲಿಸಿ ಅದನ್ನು ನನ್ನ ಶಿಷ್ಯಂದಿರಿಗೆ ಕಳಿಸಿ ಕೂತೆ…

(ಮುಂದುವರಿಯುವುದು)

ಬದುಕಿನಲ್ಲಿ ನಮ್ಮ ಬೀಳಿಸಿ, ಬುದ್ಧಿ ಕಲಿಸಿದಾತನೂ ಗುರುವೇ..

About The Author

ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿ ರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ), ಗ್ರಾಮ "ಡ್ರಾಮಾಯಣ" ಸೇರಿ ಇವರ ನಾಲ್ಕು ಕೃತಿಗಳು ಪ್ರಕಟಗೊಂಡಿವೆ.

8 Comments

  1. shankar Ajjampura

    ಬರಹದ ಓಘ, ಓಟಗಳೆರಡೂ ಸೊಗಸಾಗಿದೆ. ಇಲ್ಲಿ ಸೃಷ್ಟಿಸಿ ಬರೆಯುವಂಥದು ಏನೂ ಇಲ್ಲ; ಅನುಭವದ ಸರಕು ಬೆಂಬಲಕ್ಕಿರುವಾಗ. ಉತ್ತಮ ನಿರೂಪಣಾ ಕೌಶಲ ಹೊಂದಿರುವ ನಿಮಗೆ ಕಷ್ಟವಾಗದು. ಮುಂದುವರೆಯಲಿ, ಶುಭವಾಗಲಿ

    Reply
  2. Pramod Kulkarni

    Super sir, I know half of your struggling story…You really achieved impossible milestone…Keep going and all the best !!

    Reply
  3. Poorvi

    Nimma anubhavagalu kutoohalakariyagide. Mundina kantige kayuttirutteve.

    Reply
  4. ಸಿದ್ದಣ್ಣ. ಗದಗ

    ಗುರುಪ್ರಸಾದ್ ಸರ್, ಹಳ್ಳಿ ಕಡೆ ನಿಮ್ಮ ನಡೆ, ನಿಜಕ್ಕೂ ಬಹಳಷ್ಟು ಜನರಿಗೆ ಮಾದರಿ. ಕೃಷಿ ಬದುಕಿಗೆ ಮರಳಿದ ನಿಮ್ಮ ಗಟ್ಟಿ ನಿರ್ಧಾರಕ್ಕೆ ಅಭಿನಂದನೆಗಳು. ನಿಮ್ಮ ಗ್ರಾಮ ಡ್ರಾಮಾಯಣ ನಮ್ಮ ಓದುವ ಕುತೂಹಲ ಹೆಚ್ಚಿಸಿದೆ, ಮುಂದುವರೆಯಲಿ 🙏🙏

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ