Advertisement
ತನ್ನೋಟಿ ಮಾತಾ ಆಶೀರ್ವಾದವೇ ಸೈನಿಕರಿಗೆ ಸ್ಫೂರ್ತಿ

ತನ್ನೋಟಿ ಮಾತಾ ಆಶೀರ್ವಾದವೇ ಸೈನಿಕರಿಗೆ ಸ್ಫೂರ್ತಿ

ಇಂಡೋ-ಪಾಕ್ ಸರಹದ್ದು ನೋಡಲೇ ಬೇಕು ಎನ್ನುವ ಆಸೆ ಗುದ್ದತೊಡಗಿತು. ದೇಶಭಕ್ತಿ ಮರುಭೂಮಿಯ ಓಯಸಿಸ್ನಂತೆ ಚಿಮ್ಮುತ್ತಿತ್ತು. ಕಾಲೇಜು ದಿನಗಳಲ್ಲಿ ಎನ್.ಸಿ.ಸಿ ಜಲಸೇನೆ ವಿಭಾಗದಲ್ಲಿದ್ದೆ. ಹಿಂದೂ ಮಹಾಸಾಗರವನ್ನು ಉದ್ದಗಲಕ್ಕೂ ಈಜಿ ವರಾಹವತಾರವೆತ್ತಿ ಭಾರತ ಮಾತೆಯನ್ನು ರಕ್ಷಿಸಿಕೊಂಡು ಬಂದ್ಹಾಗೆ ಕಂಡಿದ್ದ ಕನಸು ನೆನಪಾಗುತ್ತಲೇಯಿತ್ತು. ದೇಶ ಭಕ್ತಿಯೊಂದೇ ಸ್ಥಾಯಿ ಭಾವ ಅಂದುಕೊಂಡು ಅಲ್ಲಿದ್ದ ಸೈನಿಕರನ್ನು ನೋಡುತ್ತಾ ತನ್ನೋಟಿ ಮಾತಾಳನ್ನು ‘ಬಾರ್ಡರ್ ಗೆ ಕರೆದುಕೊಂಡು ಹೋಗು ‘ ಎಂದು ಬೇಡಿಕೊಳ್ಳುತ್ತಿದ್ದೆ.‌ ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಬರಹ.

ಗಾಂಧಿ ಜಯಂತಿಯಂದು ರಾಜಾಸ್ಥಾನದ ಜೈಸಲ್ಮೇರ್ ನಲ್ಲಿ ಇದ್ದೆ. ನಾನಿದ್ದ ಜಾಗ ನಮ್ಮ ದೇಶದ ಅಂಚಿನಿಂದ ಕೇವಲ 200 ಕಿಲೋಮೀಟರ್ಗಳಷ್ಟೇ. ಡ್ರೈವರ್ ಮಾನ್ಸಿಂಗ್ “ತನ್ನೋಟಿ ಮಾ ಕಿ ದರ್ಶನ್ ಕೇಲಿಯೆ ಚಲೇ?” ಎಂದು ಕೇಳಿದ್ದಷ್ಟೇ ಹೊರಟೇಬಿಟ್ಟೆವು. “ಇದು ಬೇರೆ ಎಲ್ಲಾ ಮಾತಾ ದೇವಸ್ಥಾನಗಳಂತೆ ಅಲ್ಲ ಮೇಡಮ್ ಜಿ. ಬಹಳ ಪವರ್ ಫುಲ್ ದೇವಿ. ಈ ದೇವಸ್ಥಾನ ಸೈನಿಕರ ಕಾಶಿ ಇದ್ದಂತೆ” ಎನ್ನುತ್ತಾ ಕಥೆ ಹೇಳುತ್ತಾ ಕಾರು ಓಡಿಸುತ್ತಿದ್ದದ ಆತ.

122 ಕಿಲೋಮೀಟರ‍್ಗಳ ಪ್ರಯಾಣ. ಸಲ್ಪವೂ ಎಕ್ಕಾಸಕ್ಕ ಎಕ್ಕಾಸಕ್ಕಾ ಎಂದು ಮುಗ್ಗರಿಸದ, ಸಪಾಟು ಟಾರು ರಸ್ತೆ. ಎಲ್ಲಿಯೂ ತಿರುವು, ಬಾಗು ಕಾಣದ ನೇರಾನೇರ ಹಾದಿ. ನಿಶಬ್ಧ ಅಂದರೆ ಇದೇಏನು ಎಂದು ಕೇಳಿಕೊಳ್ಳುವಷ್ಟು ಏಕಾಂತ. ಎರಡೂ ಬದಿಯಲ್ಲಿಯೂ ಮರಳುದಿಬ್ಬಗಳು. ವಿಧವಿಧ ಅಳತೆ, ಆಕಾರದಲ್ಲಿ ಇದ್ದ ದಿಣ್ಣೆಗಳು ಬಣ್ಣದಲ್ಲಿ ಮಾತ್ರ ಸಾಧಿಸಿದ್ದು ಏಕತೆ. ಅವುಗಳ ಒಳಿಗಿನಿಂದ ’ಇಲ್ಲೊಂದು ಉಸಿರಿದೆ’ ಎಂದು ಎದ್ದು ನಿಂತಿದ್ದ ಕುರುಚಲು ಹಸಿರು ಗಿಡಗಳು. ನೀರವತೆಯ ಹಿತದಲ್ಲಿ ಮರಳುದಿಬ್ಬಗಳು ಗೌರಮ್ಮನನ್ನು ಗಣಪನೊಂದಿಗೆ ಸ್ವಸ್ಥಾನಕ್ಕೆ ಮರಳಿಸಿದ ನಂತರ ಸಂಭ್ರಮದ ಸುಸ್ತಿಗೆ ಸೆರಗಂಚಿನಿಂದ ಗಾಳಿ ಹಾಕಿಕೊಳ್ಳುವ ಅಮ್ಮಂದಿರಂತೆ ಕಾಣುತ್ತಿದ್ದವು. ಕಿಟಕಿ ಗಾಜು ಇಳಿಸಿದರೆ ಧಡಕ್ ಎಂದು ಒಳನುಗ್ಗುತ್ತಿತ್ತು ಬಿಸಿ ಹಬೆ. ನಿಜ; ಮಗಳು, ಮೊಮ್ಮಕ್ಕಳು ಎಲ್ಲರೂ ಸ್ವಸ್ಥಾನ ಸೇರಿದರೆ ಹಿರಿಯರ ಬದುಕು ಧಗೆಧಗೆ ತಾನೆ?!

ಮಗನ್ ಸಿಂಗ್ ಕಥೆ ಮುಂದುವರೆಸುತ್ತಿದ್ದ “ಒಬ್ಬವ ಮಾರ್ವಾಡಿ ವ್ಯಾಪಾರಿಗೆ ಮದುವೆಯಾಗಿ ಎಷ್ಟೋ ವರ್ಷಗಳಾದರೂ ಮಕ್ಕಳು ಆಗದೆ, ಆತ ಹಿಂಗಲಾಜ್ ಮಾತ (ಪಾರ್ವತಿ ದೇವಿ) ದೇವರಿಗೆ ಹರಕೆ ಹೊತ್ತಾಗ ಹುಟ್ಟಿದ 7 ಹೆಣ್ಣು ಮಕ್ಕಳಲ್ಲಿ ದೇವಿಯ ಅಂಶವನ್ನೇ ಹೊತ್ತುಕೊಂಡು ಹುಟ್ಟಿದವಳು ತನ್ನೋಟಿ ಮಾತ. 9ನೆಯ ಶತಮಾನದಲ್ಲಿ ರಜಪೂತ ರಾಜ ತನು ರಾವ್ ತನ್ನೋಟಿ ಮಾತಾಳ ವಿಗ್ರಹವನ್ನು ಈ ದೇವಸ್ಥಾನದಲ್ಲಿ ಸ್ಥಾಪಿಸಿದ್ದು” ಹೀಗೆ ಮುಂದುವರೆಯುತ್ತಿತ್ತು ನಂಬಿಕೆಗಳನ್ನು, ಚರಿತ್ರೆಯೊಡ ನೆ ಪೋಣಿಸಿಕೊಂಡ ಕಥೆ. ಈಗ ಮತ್ತೊಮ್ಮೆ ಹರಿದು ಮತ್ತೆಷ್ಟೋ ಜನರ ಪುನರುಜ್ಜೀವನ ಮಾಡಲು ತಯಾರಿ ನಡೆಸುತ್ತಿರುವ ಸರಸ್ವತಿ ನದಿ ಈ ದೇವಸ್ಥಾನದ ಕೆಳಗೆ ಈಗಲೂ ಇದೆಯಂತೆ, ಭೂಮಿಗೆ ಕಿವಿಯೊತ್ತಿ ಆಲಿಸಿದರೆ ಝುಳು ಝುಳು ನಾದ ಕೇಳಿಸುತ್ತಂತೆ. ನಾನೂ ಪ್ರಯತ್ನಿಸಿದೆ. ಈ ಮರುಳ ಮನಸ್ಸು ಭೂಮಿಯ ಸದ್ದು ಗುರುತಿಸಲು ಶಕ್ಯವೇ?!

“ಯಾಕೆ ಈ ದೇವಸ್ಥಾನವನ್ನು ಮಿಲಿಟರಿ ವಹಿಸಿಕೊಂಡಿದೆ” ಎನ್ನುವ ಪ್ರಶ್ನೆಗೆ ಚಾಲ ಮಾತ್ರವಲ್ಲ ಗೂಗ್ಲೆ ಕೂಡ ಉತ್ತರಿಸುತ್ತೆ. 1965ರಲ್ಲಿ ಪಾಕಿಸ್ತಾನದೊಡನೆ ಯುದ್ಧವಾದನಂತರ ಆ ಜಾಗ ಮಿಲಿಟರಿ ಆಡಳಿತಕ್ಕೊಳಪಟ್ಟಿದೆ. ಆ ಯುದ್ಧದಲ್ಲಿ ಎದುರಾಳಿಗಳು ಹಾಕಿದ ನೂರಾರು ಬಾಂಬ್‍ಗಳು ಒಂದೂ ಸ್ಪೋಟಗೊಳ್ಳದೆ ಇಲ್ಲಿ ಹಾಗೇ ಇದ್ದವಂತೆ. ನಂತರ 1971ರಲ್ಲಿ ನಡೆದ ಯುದ್ಧದಲ್ಲೂ ಇದೇ ಪುನರಾವರ್ತನೆ ಆಗಿದ್ದು ಮಾತ್ರ ಸೋಜಿಗ. ಹೀಗೆ ಸ್ಪೋಟಗೊಳ್ಳದ ತೋಪುಗಳನ್ನು ಗಾಜಿನ ಶೋ‍ಕೇಸ್‍ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಇಲ್ಲಿ ಸೈನಿಕರೇ ನಿತ್ಯಪೂಜೆ ಮಾಡುವುದು. ನಿಗದಿಪಡಿಸಿದ ಹಬ್ಬ ಹರಿದಿನಗಳಲ್ಲಿ ಮಾತ್ರ ಸಾರ್ವಜನಿಕ ಭಕ್ತರಿಗೆ ಪ್ರವೇಶವುಂಟು.

ತನ್ನೋಟಿ ಮಾತಾಳ ದೇವಸ್ಥಾನದಿಂದ ಮುಂದಕ್ಕೆ 30 ಕಿಲೋಮೀಟರ್ಗಳ ದೂರದಲ್ಲಿ ಭಾರತ ಪಾಕಿಸ್ತಾನದ ಸೂಕ್ಷ್ಮ ಗಡಿ ಪ್ರದೇಶ. ಅದಕ್ಕೆ ಈ ದೇವಸ್ಥಾನದಿಂದ ಮುಂದಕ್ಕೆ ಉಹೂಂ, ಬಿಲ್ಕುಲ್ ಸಾಮಾನ್ಯ ನಾಗರೀಕರ್ಯಾರಿಗೂ ಪ್ರವೇಶವಿಲ್ಲ. ಅಲ್ಲಿ ಒಂದೆರಡು ರಾಜಸ್ಥಾನಿ ಕುಟುಂಬಗಳು ಪೂಜೆಗೆ ಕಾಯುತ್ತಿದ್ದವು. ಒಬ್ಬ ಸೈನಿಕನ ತಾಯಿ, ತಂದೆ ,ಹೆಂಡತಿ ಮತ್ತು ಮೂರು ವರ್ಷದ ಮಗು ಆತನನ್ನು ಭೇಟಿ ಮಾಡಲು ಬಂದಿದ್ದರು. ಮೂರು ಇಟ್ಟಿಗೆಯ ಒಲೆ ಮಾಡಿ ಮಗನಿಗೆ ಅಲ್ಲಿಯೇ ದಾಲ್ ಬಾಟಿ ಮಾಡಿಕೊಡುತ್ತಿದ್ದಳು ತಾಯಿ. ಯೂನಿಫಾರ್ಮ್‍ನಲ್ಲಿದ್ದ ಮಗ ಒದ್ದೆ ಚೊಣ್ಣದ ತನ್ನ ಮಗುವನ್ನು ಕಂಕುಳಲ್ಲಿ ಇರಿಸಿಕೊಂಡು ಸಹೋದ್ಯೋಗಿಗಳನ್ನೂ ಊಟಕ್ಕೆ ಕರೆಯುತ್ತಿದ್ದ. ಕ್ಯಾಮೆರ ಬಂದ್ ಮಾಡಿ ತುಟಿಯಂಚಿನಲ್ಲಿ ಇದ್ದ ನಗುವನ್ನು ನೆನಪಾಗಿಸಿ ಎರಕ ಹುಯಿದುಕೊಳ್ಳುತ್ತಿದ್ದೆ.

ಸ್ಪೋಟಗೊಳ್ಳದ ತೋಪುಗಳನ್ನು ಗಾಜಿನ ಶೋ‍ಕೇಸ್‍ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಇಲ್ಲಿ ಸೈನಿಕರೇ ನಿತ್ಯಪೂಜೆ ಮಾಡುವುದು. ನಿಗದಿಪಡಿಸಿದ ಹಬ್ಬ ಹರಿದಿನಗಳಲ್ಲಿ ಮಾತ್ರ ಸಾರ್ವಜನಿಕ ಭಕ್ತರಿಗೆ ಪ್ರವೇಶವುಂಟು.

ಇಷ್ಟೆಲ್ಲಾ ಕೇಳಿ, ನೋಡಿದವಳಿಗೆ ಇಂಡೋ-ಪಾಕ್ ಸರಹದ್ದು ನೋಡಲೇ ಬೇಕು ಎನ್ನುವ ಆಸೆ ಗುದ್ದತೊಡಗಿತು. ದೇಶಭಕ್ತಿ ಮರುಭೂಮಿಯ ಓಯಸಿಸ್ನಂತೆ ಚಿಮ್ಮುತ್ತಿತ್ತು. ಕಾಲೇಜು ದಿನಗಳಲ್ಲಿ ಎನ್.ಸಿ.ಸಿ ಜಲಸೇನೆ ವಿಭಾಗದಲ್ಲಿದ್ದೆ. ಹಿಂದೂ ಮಹಾಸಾಗರವನ್ನು ಉದ್ದಗಲಕ್ಕೂ ಈಜಿ ವರಾಹವತಾರವೆತ್ತಿ ಭಾರತ ಮಾತೆಯನ್ನು ರಕ್ಷಿಸಿಕೊಂಡು ಬಂದ್ಹಾಗೆ ಕಂಡಿದ್ದ ಕನಸು ನೆನಪಾಗುತ್ತಲೇಯಿತ್ತು. ದೇಶ ಭಕ್ತಿಯೊಂದೇ ಸ್ಥಾಯಿ ಭಾವ ಅಂದುಕೊಂಡು ಅಲ್ಲಿದ್ದ ಸೈನಿಕರನ್ನು ನೋಡುತ್ತಾ ತನ್ನೋಟಿ ಮಾತಾಳನ್ನು ಕೇಳಿಕೊಳ್ಳುತ್ತಿದ್ದೆ- ಬಾರ್ಡರ್ ಗೆ ಕರೆದುಕೊಂಡು ಹೋಗು ಎಂದು.

ಸೈನಿಕರ ತೀರ್ಥ ಸ್ಥಳ ಅಂತ ಗುರುತಿಸಿಕೊಂಡಿರುವ ಈ ದೇವಸ್ಥಾನದ ಸುತ್ತಮುತ್ತಲಿನಲ್ಲಿಯೇ ಹಿಂದಿಯ ಬಾರ್ಡರ್ ಸಿನೆಮಾದ ಚಿತ್ರೀಕರಣ ನಡೆದಿರುವುದು. ವಾಸ್ತವದಲ್ಲಿ ಈಗಲೂ ಪ್ರತೀ ಯೋಧನು ಯುದ್ಧಕ್ಕೆ ಹೊರಡುವ ಮೊದಲು ಇಲ್ಲಿ ಬಂದು ಪೂಜೆ ಸಲ್ಲಿಸಿಯೇ ಹೋಗುತ್ತಾನಂತೆ. ಯಾವಾಗ ಬಾರ್ಡರ್ ಕಂಡೆನೋ ಅಂತ ತುಡಿಯುತ್ತಿದ್ದವಳಿಗೆ “ನಹೀ ನಹೀ ನಹೀ, ಕೋಯೀ ಭೀ ಉಧರ್ ನಹೀ ಜಾಸಕ್ತಾ” ಎನ್ನುವ ಸೈನಿಕರ ಹುಕುಂ ವಿಪರೀತ ನಿರಾಸೆ ತಂದಿತು. ಆದರೂ ಹುಚ್ಚು ಭರವಸೆ. . “ಏನಿದು ಅನ್ಯಾಯ ಭಾರತ ಮಾತೆಯ ಸ್ವಂತ ಮಗಳಾಗಿ, ಭಾರತೀಯತೆಯ ಕಟ್ಟಾಭಿಮಾನಿಯಾದ ನನಗೇ ಅವಳ ಗಡಿಯನ್ನು ನೋಡಲು ಅವಕಾಶವಿಲ್ಲವೇ” ಅಂತ ಮನದಲ್ಲೇ ಹಲುಬುತ್ತಾ, ದೇವಸ್ಥಾನದ ಹಜಾರದಲ್ಲಿ ಚಕ್ಕಳಮಕ್ಕಳ ಹಾಕಿ ಕೂತಿದ್ದೆ.

ಸೈನಿಕರ ತೀರ್ಥ ಸ್ಥಳ ಅಂತ ಗುರುತಿಸಿಕೊಂಡಿರುವ ಈ ದೇವಸ್ಥಾನದ ಸುತ್ತಮುತ್ತಲಿನಲ್ಲಿಯೇ ಹಿಂದಿಯ ಬಾರ್ಡರ್ ಸಿನೆಮಾದ ಚಿತ್ರೀಕರಣ ನಡೆದಿರುವುದು.

ಆವರಣದಲ್ಲಿ ಥಟ್ ಅಂತ ಸರಬರ ಸಂಚಲನ. ಬಿದ್ದ ಊಟ, ಚೆಲ್ಲಿದ ನೀರು ಎಲ್ಲವನ್ನೂ ಸ್ವಚ್ಛಗೊಳಿಸಲು ಶುರುವಿಟ್ಟರು. ಯುವ ಸೈನಿಕರು ಅಟೆಂಷನ್ ಭಂಗಿಗೆ ಬರಲು ತಯಾರಾಗುತ್ತಿದ್ದರು. ಮಟಮಟ ಮಧ್ಯಾಹ್ನ. ಏನಾಗುತ್ತಿದೆ ಎಂದು ವಿಚಾರಿಸಿದಾಗ ಹಿರಿಯ ಸೇನಾಧಿಕಾರುಗಳು ಬರುತ್ತಿದ್ದಾರೆ ಎಂದು ತಿಳಿಯಿತು. ಒಬ್ಬ ಅಧಿಕಾರಿ ಬಂದು ನೀವು ಇಲ್ಲಿಂದ ಹೊರಡಬೇಕು ಎಂದು ಹೇಳಿದಾಗ ದುಃಖ ಉಮ್ಮಳಿಸಿತು- ಥೇಟ್ ಸದ್ದಾಗದ ಸರಸ್ವತಿ ನದಿಯಂತೆ. ದಯವಿಟ್ಟು ನನ್ನನ್ನು ಇರಲು ಬಿಡಿ ಎಂದು ಗೋಗರೆದೆ. ಸುತಾರಾಮ್ ಒಪ್ಪದಾದರು. ನನ್ನ ಮನವಿ ಮುಂದುವರೆಯುತ್ತಿತ್ತು. ಆಗ ಮೂರು ಜೀಪ್‍ಗಳಲ್ಲಿ ಜ್ಜರ್ ಅಂತ ಬಂದು ಇಳಿದರು ಗರಿಗರಿ ಉಡುಪು ತೊಟ್ಟ ಖಡಕ್ ಅಧಿಕಾರಿಗಳು. ಅವರವರಲ್ಲೇ ಮಾತುಗಳು.

ಹಿರಿಯ ಅಧಿಕಾರಿ ದೇವಸ್ಥಾನದೊಳಗೆ ಬರುವಾಗ ಅವರ ಯೂನಿಫಾರ್ ಷರ್ಟಿನ ಮೇಲಿದ್ದ ಹೆಸರು ಓದಿದೆ. ಕರ್ನಲ್ ಸಾರಸ್ವತ್ ಹಿಂದೊಮ್ಮೆ ಬೆಂಗಳೂರಿನಲ್ಲೂ ಸ್ವಲ್ಪ ದಿನಗಳು ಇದ್ದದ್ದು ನೆನಪಾಯ್ತು. ಬ್ಯಾಗ್‍ನಿಂದ ವಿಸಿಟಿಂಗ್ ಕಾರ್ಡ್ ತೆಗೆದುಕೊಂಡು ಸೀದಾ ಅವರ ಮುಂದೆ ಹೋಗಿ ನಿಂತು. ಸರಹದ್ದು ತೋರಿಸಿ ಎನ್ನುವ ಮನವಿ ಮುಂದಿಟ್ಟೆ. ನನ್ನ ವಿವರವಾದ ಪರಿಚಯವನ್ನು ಅವರೇ ಪ್ರಶ್ನೆಗಳ ಮೂಲಕ ಮಾಡಿಕೊಂಡರು. ಇದೆಲ್ಲಾ ಪಾರ್ವತಿ ರೂಪದ ತನ್ನೋಟಿ ಮಾತಾಳ ಆಶೀರ್ವಾದವೇ ಇರಬೇಕು ಎನ್ನುವ ಹಾಗೆ ಅವರು ಆಶುತೋಷ್ ಎನ್ನುವ ಅಧಿಕಾರಿಯನ್ನು ಕರೆದು ಅವರ ಜೀಪಿನಲ್ಲೇ ಕರೆದುಕೊಂಡು ಹೋಗಲು ನಿರ್ದೇಶನ ನೀಡಿದರು.

ಇನ್ನು 30 ಕಿಲೋಮೀಟರ್ಗಳ ಪ್ರಯಾಣ ಕುತೂಹಲಕಾರಿಯಾಗಿ ಉತ್ಸಾಹದಿಂದ ಸಾಗಿತ್ತು. ಆ ಸೈನಿಕ ತಾನು ಮಿಲಿಟರಿ ಸೇರಿದ್ದು, ಸಂಸಾರ, ಭಾರತದ ತಾಕತ್ತು, ಪಾಕಿಸ್ತಾನಿಯರ ಬೆನ್ನು ಹಿಂದಿನ ಮಸಲತ್ತು ಹೀಗೇ ಮತ್ತೂ ಏನೇನೋ ಹೇಳುತ್ತಾ, ಅನುಮಾನ ಬರಿಸುವಷ್ಟು ತೀವ್ರವಾಗಿದ್ದ  ನನ್ನ ಕುತೂಹಲಕ್ಕೆ ಉತ್ತರಿಸುತ್ತಿರುದ್ದ. ನಾವು ಹೋಗುತ್ತಿದ್ದ ಗಡಿಗೆ ‘ರಾಮ್ ಘರ್’ ಕ್ಷೇತ್ರ ಪೋಸ್ಟ್ 609  ಎನ್ನುತ್ತಾರೆ- ಎಂಬ ವಿಷಯ ಕಿವಿಗೆ ಬೀಳುತ್ತಿತ್ತು, ನನ್ನ ಕಣ್ಣು ಇಕ್ಕೆಲಗಳಲ್ಲೂ ಇದ್ದ ಮರಳು ದಿಬ್ಬದೆಡೆಗಿತ್ತು. ಆಹ, ಸಿಕ್ಕೇ ಬಿಟ್ಟಿತು ಅಲ್ಲಿ.. . .ಅಲ್ಲಿ. . .ಗಡಿ!

ಮತ್ತಿಬ್ಬರು ಸೈನಿಕರು ಜೊತೆಗೂಡಿದರು. ನಾನು ಉನ್ಮಾದದಿಂದ ಕೂಗಿದೆ, ಕಿರುಚಿದೆ. ಅವರುಗಳು ಅಷ್ಟೇ ಉತ್ಸುಕತೆಯಿಂದ ನನ್ನ ನೋಡಿ ಮುಗುಳುನಗುತ್ತಿದ್ದರು. ನನ್ನೊಳಗೆ ಅದು ಯಾವುದೋ ಶಕ್ತಿಯ ಆವಾಹನೆಗೊಂಡ ಭಾವ. ಮೈಮೇಲಿದ್ದ ದುಪ್ಪಟ್ಟವನ್ನು ಕಿತ್ತೊಗೆದು 25 ಅಡಿಗಳಷ್ಟು ಎತ್ತರವಿದ್ದ ಅಟ್ಟಣಿಗೆಯ ಮೇಲೆ ಸರಸರನೆ ಹತ್ತಿ ಗಜಗಾತ್ರದ ಬೈನಾಕ್ಯುಲರ್ನಲ್ಲಿ ಪಾಕಿಸ್ತಾನವನ್ನು ನೋಡಿಯೇ ಬಿಟ್ಟೆ! ನಾವು ಮಾಮೂಲಿ ಕೆಲಸಗಳಿಗೆ ಉಪಯೋಗಿಸುವುದಕ್ಕಿಂತ 8 ಪಟ್ಟು ದೊಡ್ಡದಾದ ಬೈನ್ಯಾಕ್ಯುಲರ್ ಅದು. ಗಡಿಯನ್ನು ಮುಳ್ಳು ಬೇಲಿ ಆವರಿಸಿಕೊಂಡಿದೆ, ಆ ಕಡೆಯೂ ಹಾಗೆ. ಅವೆರಡರ ಮಧ್ಯದ್ದು ‘No man’s Land’  ಸದಾ ಕಾಲವೂ ಪಾಳಿಯಲ್ಲಿ ಇಬ್ಬರು ವೀರರು ಒಂಟೆಯ ಮೇಲೆ ಕುಳಿತು ಗಸ್ತು ತಿರುಗುತ್ತಾರೆ. ಆದ್ಯಾವ ಶಕ್ತಿ ಹೊಕ್ಕಿತ್ತೋ, ದೈತ್ಯಾಕಾರದ ದೇಹದಿಂದ ಭಯಾನಕವಾದ ಧ್ವನಿ ಹೊರಡಿಸುತ್ತಿದ್ದ ಒಂಟೆಯ ಡುಬ್ಬವನ್ನು ಯಾರ ಸಹಾಯವೂ ಪಡೆಯದೆ ನಿಮಿಷ ಮಾತ್ರದಲ್ಲಿ ಹತ್ತಿಬಿಟ್ಟೆ.

ಬೇಲಿಯಿಂದೀಚೆಗೆ ಮೂರಡಿಗಳಷ್ಟು ಅಂತರದಲ್ಲಿ ಯಾರ ಹೆಜ್ಜೆ ಗುರುತು ಮೂಡಬಾರದು ಎಂಬುದು ಕಾನೂನು. ಹಾಗೇನಾದರು ಹೆಜ್ಜೆ ಗುರುತು ಕಂಡರೆ ಯುದ್ಧ ಘೋಷಣೆ ಆಗುತ್ತದೆ.

ನಾನು ಅಲ್ಲಿದ್ದಾಗಲೇ ಸ್ಯಾಟಲೈಟ್ ಮೂಲಕ ನಮ್ಮ ನಡುವಳಿಕೆಗಳು, ನಮ್ಮ ಬಟ್ಟೆಯ ಬಣ್ಣವೂ ಕೂಡ ರೆಕಾರ್ಡ್ ಆಗುತ್ತಿತ್ತು. ಅದು ಎರಡೂ ದೇಶಗಳ ಮಿಲಿಟರಿಗೆ ರವಾನೆಯಾಗುತ್ತಿತ್ತು ಎಂದು ನಂತರ ಆಶುತೋಷ್ ತಿಳಿಸಿದರು. ನಾನು ಏರಿದೆ, ಇಳಿದೆ, ಅತ್ತೆ, ನಕ್ಕು ಕೂಗಿದೆ, ಕುಳಿತೆ, ಬರಿಗಾಲಲ್ಲಿ ಮರಳ ಮೇಲೆ ನಿಂತೆ, ಹೊರಳಿದೆ, ಮುತ್ತಿಟ್ಟೆ. ಅಭೂತಪೂರ್ವ ಆನಂದಾನುಭವ ಪಡೆದಿದ್ದೆ. ಅಟ್ಟಣಿಗೆ ಇಳಿಯುವಾಗ ಮೀನಖಂಡಗಳು ನಡುಗುತ್ತಿದ್ದವು.

ಈ ಜಾಗ ಎಷ್ಟು ಚೆನ್ನಾಗಿದೆ ಎನ್ನುವ ನನ್ನ ಉದ್ಗಾರಕ್ಕೆ ಅಲ್ಲಿಯೇ ಇದ್ದ (ಹೆಸರು ಕೇಳಲಿಲ್ಲ) ಒಂಟೆ ಮೇಲೆ ಕುಳಿತಿದ್ದ ಸೈನಿಕರೊಬ್ಬರು “ಅಯ್ಯೋ ಈ ಜಾಗ ಏನು ಚೆನ್ನಾಗಿದೆ. ನೀವಿರುವ ಊರು ಚಂದ” ಎಂದರು. ಅನಾಯಾಸವಾಗಿ “ಭಯ್ಯಾ, ಜಗತ್ತಿನಲ್ಲಿ ಎರಡೇ ಜಾಗ ಸುಂದರವಾಗಿ ಇರುವುದು. ಒಂದು ಪ್ರತೀ ಹೆಣ್ಣಿನ ತವರು, ಇನ್ನೊಂದು ಸೈನಿಕ ಕೆಲಸ ಮಾಡುವ ಜಾಗ” ಎನ್ನುವ ಪ್ರಾಮಾಣಿಕ ಮಾತು ಹೊರಬಿತ್ತು ನನ್ನಿಂದ. ಅವರೆಲ್ಲರೂ “ಸರಿ. . .ಸರಿ. . .” ಎನ್ನುತ್ತಾ ಮುಖದಲ್ಲಿ ತೆಳುನಗು ಹೊತ್ತು ನಿಂತರು.

ಹೊರಡುವ ವೇಳೆ ಬಂದಿತು. ಅಕಸ್ಮಾತಾಗಿ ನನ್ನ ಜೀನ್ಸ್ ಪ್ಯಾಂಟಿನ ಜೇಬಿನಲ್ಲಿ ಒಂದು ಸಣ್ಣ ಪ್ಲಾಸ್ಟಿಕ್ ಚೀಲ ಸಿಕ್ಕಿತು. ಅದರಲ್ಲಿ ಒಂದಷ್ಟು ಮರಳು ತುಂಬಿಕೊಳ್ಳುವುದು ಮರೆಯಲಿಲ್ಲ. ಅದನ್ನು ಈಗಲೂ ನನ್ನ ಮನೆಯಲ್ಲಿ ಒಂದು ಗಾಜಿನ ಕುಪ್ಪಿಯಲ್ಲಿ ಹಾಕಿಟ್ಟಿದ್ದೇನೆ.

ನೋಡಿದಾಗಲೆಲ್ಲ ಗಡಿ ಮುಟ್ಟಿ ಬಂದ ನೆನಪು ಮತ್ತು ಹುರುಪಿನಿಂದ ಭಾರತಾಂಬೆಗೆ ಸಲಾಮ್ ಹೇಳುತ್ತೇನೆ. ಫೋಟೊ ತೆಗೆದುಕೊಂಡೆ. ಅವರುಗಳ ಮುಖ ಇರುವ ಫೋಟೊಗಳನ್ನು ಪ್ರಕಟಿಸಬೇಡಿ ಎನ್ನುವ ತಾಕೀತು ಇದೆ. ಈಗಲೂ ಆಶುತೋಷ್ ಫೋನ್ ಮಾಡುತ್ತಿರುತ್ತಾರೆ. ಇದರ ಬಗ್ಗೆ ಇನ್ನು ಹೆಚ್ಚಿಗೆ ಏನೂ ಹೇಳಲಾರೆ. ಹೇಳಿ ಅನುಭವದ ಸಾಂದ್ರತೆಯನ್ನು ಜಾಳುಗೊಳಿಸಿಕೊಳ್ಳಲಾರೆ.
**

About The Author

ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ  ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ.  ‘ರಶೀತಿಗಳು - ಮನಸ್ಸು ಕೇಳಿ ಪಡೆದದ್ದು’, 'ಜೀನ್ಸ್ ಟಾಕ್' ಇವರ ಲಲಿತ ಪ್ರಬಂಧಗಳ ಸಂಕಲನ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ