Advertisement
ನೈನಿತಾಲ್ ಟ್ರಿಪ್ ನಲ್ಲಿ ಭೇಟಿಯಾದ ಭಗಿನಿ ಮತ್ತು ಕವಿ

ನೈನಿತಾಲ್ ಟ್ರಿಪ್ ನಲ್ಲಿ ಭೇಟಿಯಾದ ಭಗಿನಿ ಮತ್ತು ಕವಿ

ಕೌಸಾನಿ ಎನ್ನುವ ಹಸಿರೂರಿನಲ್ಲಿ ಅನಾಸಕ್ತಿಗೇ ಒಂದು ಅಶ್ರಮ ಇದೆ ಎಂದರೆ ತಬ್ಬಿಬ್ಬಾಗಬಹುದು. 1929ರಲ್ಲಿ ಗಾಂಧೀಜಿ ಕೌಸಾನಿಗೆ ಬಂದು, ಒಂದು ಅತಿಥಿ ಗೃಹದಲ್ಲಿ 3 ತಿಂಗಳು ತಂಗಿದ್ದರು. ಅಲ್ಲಿ ಅವರು “ ಅನಾಸಕ್ತಿ ಯೋಗ” ದ ಬಗ್ಗೆ ಬರೆದ್ದದ್ದರಿಂದ ಆ ಗೆಸ್ಟ್ ಹೌಸ್ ಈಗ ಅನಾಸಕ್ತಿ ಆಶ್ರಮ ಎಂದು ಕರೆಸಿಕೊಳ್ಳುತ್ತಿದೆ. ಗಾಂಧಿ ಆಗ ಕೌಸಾನಿಯನ್ನು ‘ಸ್ವಿಟ್ಸರ್ ಲ್ಯಾಂಡ್’ ಎಂದು ಕರೆದಿದ್ದರಂತೆ. ಈಗ ಅನಾಸಕ್ತಿ ಆಶ್ರಮದಲ್ಲಿ ಮ್ಯೂಸಿಯಮ್, ಪುಸ್ತಗಳ ಸಂಗ್ರಹಾಲಯ ಮಾಡಲಾಗಿದೆ. ಸರ್ಕಾರದ ದೇಖ್‍ರೇಕಿಯಲ್ಲಿ ಇನ್ನೂ ಮೌನ ಮತ್ತು ಕಳಚಿಕೊಳ್ಳುವುದರ ಬಗ್ಗೆ ಆಸಕ್ತಿ ಹುಟ್ಟಿಸುತ್ತಾ ಸದ್ದು ಮಾಡದೆ ನಿಂತಿದೆ ಅನಾಸಕ್ತಿ ಆಶ್ರಮ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ  ಅಂಜಲಿ ರಾಮಣ್ಣ ಬರಹ ಇಂದಿನ ಓದಿಗಾಗಿ
.

ದಿಲ್ಲಿಯಿಂದ ನೈನಿತಾಲ್ ವರೆಗೂ 9 ಗಂಟೆಗಳ ರಸ್ತೆ ಪ್ರಯಾಣದಲ್ಲಿ, ಮೂಲತಃ ನೇಪಾಳಿ, ಕಳೆದ 33 ವರ್ಷಗಳಿಂದ ದಿಲ್ಲಿಯಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿರುವ ಕಾನ್ಷಿರಾಮ್ ಹೇಳುತ್ತಾ ಹೋದ; ಕೇಜ್ರಿವಾಲ ಸರ್ಕಾರ ಬಂದ ಮೇಲೆ ಕೆಳಮಟ್ಟದಲ್ಲಿ ಭ್ರಷ್ಟಾಚಾರ ಕಡಿಮೆ ಆಗಿದೆ. ಸರ್ಕಾರಿ ಅಧಿಕಾರಿಗಳಲ್ಲಿ ಕೆಲಸ ಕಳೆದುಕೊಳ್ಳುವ ಭಯ ಬಂದಿದೆ, ವಿದ್ಯುತ್ ಮತ್ತು ನೀರಿನಿಂದಾಗಿ ಕೆಳಮಧ್ಯಮವರ್ಗ ತಿಂಗಳಿಗೆ 1500-2000 ರೂಪಾಯಿ ಉಳಿತಾಯ ಮಾಡಲು ಸಾಧ್ಯವಾಗಿದೆ, ದಿ ಒಳ್ಳೆಯವರು ಆದರೆ ಪಕ್ಷ ಕಟ್ಟರ್ ವಾದಿ ಹಾಗಾಗಿ ಕಷ್ಟ ಆಗುತ್ತಿದೆ, ಕನ್ಹಯ್ಯ ಬಿಹಾರಿ. ಹಾಗಾಗಿ ಅವನು ದೇಶದ್ರೋಹಿ ಆಗಿರಲು ಸಾಧ್ಯವಿಲ್ಲ. ಯಾರದ್ದೋ ಪ್ರಚೋದನೆಯಿಂದ ಇಂತಹ ತಪ್ಪು ಕೆಲಸ ಮಾಡಿದ್ದಾನೆ. ಅವನಿಗೆ ರಾಹುಲ್ ಗಾಂಧಿ ಸಪೋರ್ಟ್ ತುಂಬಾ ಇದೆ. ಆದರೂ ವಿದ್ಯಾವಂತ ಆಗಿ ಜನರ ಭಾವನೆ ಕೆರಳಿಸುವುದು ಸರಿ ಇಲ್ಲ. ಹೀಗೆ, ಇನ್ನೂ. . . ಮತ್ತೂ. . . ಅಂತೂ ತಲುಪಿತ್ತು ಪಯಣ ನೈನಿತಾಲ್ ಅನ್ನು.

(ನೈನಾದೇವಿಯ ದೇವಸ್ಥಾನದ ಪ್ರವೇಶ ದ್ವಾರ)

ಸ್ಕಂದಪುರಾಣದ ಮಾನಸಕಾಂಡದಲ್ಲಿಯೇ ತನ್ನ ಗುರುತನ್ನು ಛಾಪಿಸಿಕೊಂಡಿರುವ ಗಿರಿದಾಣ ಇವತ್ತಿನ ಪ್ರಖ್ಯಾತ ಪ್ರವಾಸಿ ಸ್ಥಳ. ದಕ್ಷಯಜ್ಞದಲ್ಲಿ ಬೆಂದುಹೋದ ಪಾರ್ವತಿಯ ದೇಹವನ್ನು ಹೊತ್ತು ಭೋಲೆನಾಥಾ ಬ್ರಹ್ಮಾಂಡವನ್ನೆಲ್ಲಾ ಅಲೆಯುತ್ತಿದ್ದಾಗ ಅವಳ ದೇಹದ ಒಂದೊಂದೇ ಭಾಗ ಕಳಚಿಹೋಗುತ್ತಿತ್ತಲ್ಲ, ಆಗ ಪಾರ್ವತಿಯ ಎಡಗಣ್ಣು ಇಲ್ಲಿ ಬಿತ್ತಂತೆ. ಕಣ್ಣು ಅಂದರೆ ನೈನಾ, ತಾಲ್ ಎಂದರೆ ಜಾಗ ಹಾಗಾಗಿ ಈ ಧಾಮಕ್ಕೆ ನೈನಿತಾಲ್ ಎನ್ನುವ ಹೆಸರು ಬಂತಂತೆ. ಇಲ್ಲಿ ಇರುವ ನೈನಾದೇವಿಯ ದೇವಸ್ಥಾನವನ್ನು ಶಕ್ತಿಪೀಠಗಳಲ್ಲಿ ಒಂದು ಎನ್ನುತ್ತಾರೆ ತಿಳಿದವರು. ದರ್ಶನ ಮುಗಿಸಿ ಪ್ರಾಂಗಣದ ಒಂದು ಸುತ್ತು ಬಂದಾಗ ಕಂಡಿದ್ದುದೇವಸ್ಥಾನದ ಹಿಂಭಾಗದ ಗೋಡೆಗೆ ಆತುಕೊಂಡ ಒಂದು ಗುರುದ್ವಾರ. ಅಲ್ಲಿಂದ ಎಡ ಮೊಳಕೈಯನ್ನು ಚಾಚಿದರೆ ಒಂದು ಮಸೀದಿ. ಹಾಗಾದರೆ ಇದು ಭಾರತವೇ ಎನ್ನುವುದು ಖಚಿತ ಆದಂತೆ.

ಇಲ್ಲೊಂದು ಕೆರೆ ಇದೆ, ನೈನಿಲೇಕ್ ಎಂದು ಈಗಿನ ಹೆಸರು. ಇದಕ್ಕೂ ಪುರಾಣದ ನೆಂಟಿದೆ ಎನ್ನುತ್ತಾರೆ ಸ್ಥಳೀಯರು. ಒಮ್ಮೆ ಅತ್ರಿ, ಪುಲಸ್ತ್ಯ ಮತ್ತು ಪುಲಹ ಮಹಾಮುನಿಗಳು ತಮ್ಮ ಪವಿತ್ರ ಯಾತ್ರೆ ಮಾಡುತ್ತಿರುವಾಗ ಇಲ್ಲಿಗೆ ಧಣಿವಾರಿಸಿಕೊಳ್ಳಲು ಬಂದರಂತೆ. ನೀರು ಕಾಣದೆ ತಮ್ಮ ಶಕ್ತಿಯಿಂದ ಈ ಕೆರೆಯನ್ನು ಸೃಷ್ಟಿಸಿ, ಅಲ್ಲಿಗೆ ಮಾನಸಸರೋವರದಿಂದ ನೀರು ಹರಿಸಿದರಂತೆ. ಅದಕ್ಕೇ ಈಗಿನ ನೈನೀತಾಲ್‍ಗೆ ಆಗ “ತ್ರಿರಿಷಿ ಸರೋವರ್” ಎನ್ನುತ್ತಿದ್ದರಂತೆ. ಯಾವ ಕಥೆಯೂ ಕೇವಲ “ಅಂತೆ” ಆಗಿ ಇರಲು ಸಾಧ್ಯವೇ ಇಲ್ಲ. ಭೂತಕಾಲದ ವಾಸ್ತವವೇ ನಂಬಿಕೆಯಾಗಿ ಜನಮಾನಸದಲ್ಲಿ ಹರಿದು ವರ್ತಮಾನಕ್ಕೆ ಇಳಿದು, ರೂಪಾಂತರದಲ್ಲಿ ಭವಿಷ್ಯಕ್ಕೂ ಉಳಿಯುತ್ತದೆ ಎನ್ನುವ ನನ್ನ ನಂಬಿಕೆಯನ್ನು ಪುಷ್ಟಿಗೊಳಿಸುತ್ತಿತ್ತು ಅಲ್ಲಿನ ನಿರುಮ್ಮಳ ವಾತಾವರಣ ಮತ್ತು ನೀರಿನ ಉಸಿರು.

(ಅನಾಸಕ್ತಿ ಆಶ್ರಮ)

ಅಲ್ಲಿಂದ ಮುಂದೆ, ಮುಂದೆ ಪಾದಬೆಳೆದಿತ್ತು ಕೌಸಾನಿ ಎನ್ನುವ ಹಸಿರೂರಿಗೆ. ಇದರ ಬಗ್ಗೆ ಆಕರ್ಷಣೆ ಹುಟ್ಟಿಸಿದ ಒಂದೇ ಪದ “ಅನಾಸಕ್ತಿ ಯೋಗ’. ಇಲ್ಲಿ ಅನಾಸಕ್ತಿಗೇ ಒಂದು ಅಶ್ರಮ ಇದೆ ಎಂದರೆ ತಬ್ಬಿಬ್ಬಾಗಬಹುದು. 1929ರಲ್ಲಿ ಗಾಂಧೀಜಿ ಕೌಸಾನಿಗೆ ಬಂದು, ಒಂದು ಅತಿಥಿ ಗೃಹದಲ್ಲಿ 3 ತಿಂಗಳು ತಂಗಿದ್ದರು. ಅಲ್ಲಿ ಅವರು “ ಅನಾಸಕ್ತಿ ಯೋಗ” ದ ಬಗ್ಗೆ ಬರೆದ್ದದ್ದರಿಂದ ಆ ಗೆಸ್ಟ್ ಹೌಸ್ ಈಗ ಅನಾಸಕ್ತಿ ಆಶ್ರಮ ಎಂದು ಕರೆಸಿಕೊಳ್ಳುತ್ತಿದ್ದೆ. ಪ್ರವಾಸ ಎನ್ನುವ ಹವ್ಯಾಸ ಅಭ್ಯಾಸವಾಗಿ ಹೋಗಿರುವ ಈ ಕಾಲಘಟ್ಟದಲ್ಲಿ ಪ್ರತೀ ಮನೆಯ ಫ್ರಿಡ್ಜ್ ಅನ್ನೇ “ಭಾರತದ ಸ್ವಿಟ್ಜರ‍್ಲ್ಯಾಂಡ್” ಎಂದು ಬರೆಯಲಾಗುತ್ತಿದೆ. ಆದರೆ ಗಾಂಧಿ ಆಗ ಕೌಸಾನಿಯನ್ನು ಹೀಗೆ ಕರೆದಿದ್ದರಂತೆ. ಈಗ ಅನಾಸಕ್ತಿ ಆಶ್ರಮದಲ್ಲಿ ಮ್ಯೂಸಿಯಮ್, ಪುಸ್ತಗಳ ಸಂಗ್ರಹಾಲಯ ಮಾಡಲಾಗಿದೆ. ಸರ್ಕಾರದ ದೇಖ್‍ರೇಕಿಯಲ್ಲಿ ಇನ್ನೂ ಮೌನ ಮತ್ತು ಕಳಚಿಕೊಳ್ಳುವುದರ ಬಗ್ಗೆ ಆಸಕ್ತಿ
ಹುಟ್ಟಿಸುತ್ತಾ ಸದ್ದು ಮಾಡದೆ ನಿಂತಿದೆ ಅನಾಸಕ್ತಿ ಆಶ್ರಮ.

ಓಹೋಹೋ, ಹೀಗೆ ನೈನಿತಾಲ್‍ನಿಂದ ಕೌಸಾನಿಗೆ ಬರುತ್ತಿರುವಾಗ ಸ್ವಾಮಿ ವಿವೇಕಾನಂದ ಸ್ಮಾರಕ ವಿಶ್ರಾಂತಿ ಗೃಹ ಎನ್ನುವ ಫಲಕ ಕಣ್ಣಿಗೆ ಬಿದ್ದೊಡನೆ ಜೂಗರಿಸುತ್ತಿದ್ದ ಮನಸ್ಸು ಕೊಡವಿಕೊಂಡು 8ನೆಯ ತರಗತಿ ಓದುತ್ತಿದ್ದಾಗಿನ ದಿನಕ್ಕೆ ಥಕಪಕ ಓಡಿ ಹೋಯಿತು. ಭಾಷಣ ಸ್ಪರ್ಧೆಯೊಂದರಲ್ಲಿ ಗೆಲುವಿಗೆ ಬಂದಿದ್ದ ಬಹುಮಾನ “ಅಲ್ಮೋರಾದಿಂದ. . .” ಎನ್ನುವ ಸ್ವಾಮಿ ವಿವೇಕಾನಂದರ ಪುಸ್ತಕ. ಹೋಯ್, ಅದೇ ಅಲ್ಮೋರಾದಲ್ಲಿ ನಾನಿದ್ದೆ ಈಗ. ದೇವದಾರು ಮರಗಳ ಗುಚ್ಛದ ನಡುವೆ ಸೂರ್ಯಕಾಂತಿಯಂತೆ ಫಳಗುಟ್ಟುತ್ತಿರುವ ಈ ಊರಿನ ಇತಿಹಾಸ ಈಗ ಎಲ್ಲೆಡೆಯೂ ಲಭ್ಯ.

ಇಲ್ಲಿನ ಲಕ್ಷ್ಮಿ ಸ್ವೀಟ್ಸ್ ಅಂಗಡಿಯಲ್ಲಿ ಬಲ್ ಮಿಠಾಯಿ (ಹಾಲಿನಿಂದ ಕಂದುಬಣ್ಣದ ಖೋವಾ ತೆಗೆದು ಅದಕ್ಕೆ ಸಕ್ಕರೆ ಪಾಕದ ಮಣಿಗಳನ್ನು ಅಂಟಿಸಿರುವ ಸಿಹಿ ತಿಂಡಿ, ಈ ಊರಿನ ಹೆಗ್ಗಳಿಕೆ) ಕೊಂಡು ತಿಂದು, ಅದರ ಎದುರುಗಡೆಯ ಓಣಿ ಮಾರುಕಟ್ಟೆಯಲ್ಲಿ ಆಗತಾನೇ ಕಿತ್ತುಹೋದ ನನ್ನ ಪರ್ಸ್ ನ ಹಿಡಿಯನ್ನು ರೆಪೇರಿ ಮಾಡಿಸಿಕೊಂಡು ಸುತ್ತುತ್ತಿರುವಾಗ ಅಚಾನಕ್ ಆಗಿ ಸಿಕ್ಕವರು ಮಾರ್ಗರೇಟ್ ಎಲಿಜಬೆತ್ ನೋಬಲ್. ಐಲ್ರ್ಯಾಂಡಿನ ಪಾದ್ರಿಯೊಬ್ಬರ ಮಗಳಾಗಿ ಹುಟ್ಟಿದ ಈಕೆ ಮೊದಲಿನಿಂದಲೂ ಸದಾಲೋಚನೆಗೆ ಗುರುತಿಸಿಕೊಂಡಿದ್ದರು. ತಕ್ಕಮಟ್ಟಿಗಿನ ಶ್ರೀಮಂತ ಕುಟುಂಬ, ಬದುಕಿ ಬಾಳಲು ಬೇಕಾದ ಎಲ್ಲಾ ಸವಲತ್ತುಗಳು, ಒಳ್ಳೆಯ ವಿದ್ಯಾಭ್ಯಾಸ ಮಾತ್ರವಲ್ಲ ಲಂಡನ್ ನಗರದ ಉನ್ನತ ಬುದ್ಧಿಜೀವಿಗಳಲ್ಲಿ ಒಬ್ಬರು ಎನ್ನುವ ಸ್ಥಾನ ಪಡೆದಿದ್ದಾಕೆ, ಆಗಲೇ ಬರಗಾರ್ತಿಯೆಂದು ಹೆಸರು ಮಾಡಿದ್ದವರು.

ಯಾವ ಕಥೆಯೂ ಕೇವಲ “ಅಂತೆ” ಆಗಿ ಇರಲು ಸಾಧ್ಯವೇ ಇಲ್ಲ. ಭೂತಕಾಲದ ವಾಸ್ತವವೇ ನಂಬಿಕೆಯಾಗಿ ಜನಮಾನಸದಲ್ಲಿ ಹರಿದು ವರ್ತಮಾನಕ್ಕೆ ಇಳಿದು, ರೂಪಾಂತರದಲ್ಲಿ ಭವಿಷ್ಯಕ್ಕೂ ಉಳಿಯುತ್ತದೆ ಎನ್ನುವ ನನ್ನ ನಂಬಿಕೆಯನ್ನು ಪುಷ್ಟಿಗೊಳಿಸುತ್ತಿತ್ತು ಅಲ್ಲಿನ ನಿರುಮ್ಮಳ ವಾತಾವರಣ ಮತ್ತು ನೀರಿನ ಉಸಿರು.

ಇಲ್ಲ ಎನ್ನುವ ಯೋಚನೆಯೂ ಬಾರದಂತಹ ಪರಿಪೂರ್ಣ ಬದುಕು ಹೊಂದಿದ್ದ ಈಕೆಯ ಮದುವೆಗೆ ಇನ್ನು ಸ್ವಲ್ಪವೇ ದಿನಗಳು ಉಳಿದಿದ್ದಾಗ ಬಾವಿ ವರ ಅಕಸ್ಮಾತಾಗಿ ತೀರಿಕೊಂಡ. ನೋವಿನಿಂದ ಝರ್ಜರಿತರಾಗಿದ್ದ ಮಾರ್ಗರೇಟ್ ಭಾಷಣದ ಕಾರ್ಯಕ್ರಮವೊಂದರಲ್ಲಿ ವಿವೇಕಾನಂದರನ್ನು ಭೇಟಿಯಾಗುತ್ತಾರೆ.

ಆ ದಿನದಿಂದ ವಿವೇಕಾನಂದ ತತ್ವಗಳ ಮೋಡಿಗೆ ಒಳಗಾದ ಈಕೆ ಮತ್ತ್ಯಾವ ಕಾರಣಗಳಿಂದಲೂ ನೆಮ್ಮದಿ ಪಡೆಯಲಾರದೆ ತಮ್ಮ 31ನೆಯ ವಯಸ್ಸಿನಲ್ಲಿಬಂದಿಳಿದದ್ದು ಭಾರತಕ್ಕೆ. ತಮ್ಮ 49ನೇ ವಯಸ್ಸಿನಲ್ಲಿ ಡಾರ್ಜಿಲಿಂಗ್ನಲ್ಲಿ ತೀರಿಕೊಳ್ಳುವವರೆಗೂ ಭಾರತೀಯ ಸಂಸ್ಕೃತಿ ಮತ್ತು ಕಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವತ್ತ ಅಪಾರ ಆಸಕ್ತಿ ತೋರಿಸಿ, ಪ್ಲೇಗ್ನಂತಹ ಮಾರಣಾಂತಿಕ ಪಿಡುಗಿಗೆ ಒಳಗಾದವರ ಸೇವೆ ಮಾಡುತ್ತಾ, ನಿರ್ಗತಿಕರಿಗೆ ಆಶ್ರಯದಾತೆಯಾಗುತ್ತಾ ಈ ನೆಲದ ಮಣ್ಣಲ್ಲಿ ಮಣ್ಣಾಗಿ ಹೋದ ಮಾರ್ಗರೇಟ್ಗೆ ಅಲ್ಮೋರಾದ ದೇವದಾರು ಮರಗಳ ಉದ್ಯಾನದಲ್ಲಿ ‘ಭಗಿನಿ ನಿವೇದಿತಾ’ ಎಂದು ನಾಮಕರಣ ಮಾಡಿ ಜ್ಞಾನಾರ್ಜನೆಗೆ ಬಾಗಿಲು ತೆರೆದುಕೊಟ್ಟಿದ್ದು ವಿವೇಕಾನಂದರು. ಹೌದು ತಾಳ್ಮೆಯೇ ಮೂರ್ತಿವೆತ್ತಂಥಾ ಈ ಮಾರ್ಗರೇಟ್ ನನಗೆ ಸಿಕ್ಕಿದ್ದು ಅಲ್ಮೋರಾದ ನಿವೇದಿತಾ ಕುಟೀರ ಎನ್ನುವ ಸಂಗ್ರಹಾಲಯದಲ್ಲಿ.

(ನಿವೇದಿತಾ ಕುಟೀರ)

ವಿವೇಕಾನಂದರು ಉಪಯೋಗಿಸುತ್ತಿದ್ದರು ಎನ್ನಲಾದ ಖುರ್ಚಿ, ಟೇಬಲ್, ಮಂಚ, ಕನ್ನಡಕ, ಬಾಚಣಿಗೆ, ಪೆನ್ನು, ಪತ್ರಗಳು ಎಲ್ಲವನ್ನೂ ಒಪ್ಪಓರಣವಾಗಿಸಿದ್ದಾರೆ. ಅದೀಗ ರಾಮಕೃಷ್ಣ ಗೆಸ್ಟ್ ಹೌಸ್ ಎನ್ನುವ ಖಾಸಗೀ ಆಸ್ತಿ ಮಾಲೀಕರ ಸುಪರ್ದಿಯಲ್ಲಿ ಇದೆ. ಈ ಜಾಗವನ್ನು ಆ ವ್ಯಕ್ತಿಯ ಪೂರ್ವಜರೇ ಸ್ವಾಮಿ ವಿವೇಕಾನಂದರಿಗೆ ನೀಡಿದ್ದರಂತೆ. ಅವರು ನೀಡಿದ್ದೋ, ಇವರು ಇದ್ದದ್ದೋ, ಮತ್ತವರೇ ಪಡೆದದ್ದೋ ಯಾವುದರ ಗೊಡವೆಯೂ ಇಲ್ಲದೆ ಸಿಸ್ಟರ್ ನಿವೇದಿತಾ ಒಂದಷ್ಟು ಘಳಿಗೆ ಜೊತೆಯಾಗಿದ್ದರು.

ಮತ್ತೀಗ ಮತ್ತೆ ಅದೇ ಅನಾಸಕ್ತಿ ಆಶ್ರಮದಿಂದ ಹೊರ ಬಂದು ಕೌಸಾನಿಯಲ್ಲಿ ನಡಿಗೆ ಆಗುತ್ತಿದ್ದಾಗ ಒಂದು ಹಳೇ ಕಾಲದ , ಹಸಿರು ಬಣ್ಣ ಬಳಿದುಕೊಂಡ, ಮುರುಕಲು ಬಾಗಿಲಿದ್ದ, ಎಡ್ಡಂದಿಡ್ಡ ಅಳತೆಯ ನಾಲ್ಕು ಮೆಟ್ಟಲುಗಳಿದ್ದ ಓಣಿ ಮನೆ ಕಂಡಿತು, ಬಗ್ಗಿ ನೋಡಿದರೆ ಒಳಗೆ ಆಕಾಶ ತೋರಿಸುತ್ತಿದ್ದ ಅಂಗಳ. ಕತ್ತುಕೊಂಕಿಸಿದರೆ ಇತ್ತ ಕಡೆಯ ಫಲಕ ಬರೆಸಿಕೊಂಡಿತ್ತು ’ಸುಮಿತ್ರಾನಂದನ್ ಪಂತ್ ರಸ್ತೆ’ ಅಂತ. ಓಹೋ, ಇದೂ ಇಲ್ಲಿದೆ. ಇವರೇ ಅಲ್ವಾ ಅಮಿತಾಬ್ ಬಚ್ಚನ್ ಅವರ ತಂದೆ ಹರಿವಂಶ್ ರಾಯ್ ಬಚ್ಚನ್ ಅವರ ಖಾಸ ದೋಸ್ತ್ ಆಗಿದ್ದದ್ದು? ಸರಿ ಒಳಗೆ ಹೋಗದ್ದಿದ್ದರೆ ಆದೀತೇ?! ಹೌದು ಅದು ಜ್ಞಾನಪೀಠ ಪ್ರಶಸ್ತಿ ಪಡೆದ ಹಿಂದಿಯ ಮೊದಲ ಕವಿ ಸುಮಿತ್ರಾನಂದನ್ ಅವರ ಮನೆ. ಅದನ್ನು ಈಗ ವಸ್ತುಸಂಗ್ರಹಾಲಯ ಮಾಡಿದ್ದಾರೆ. ಆ ಸ್ಥಳವನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹೇಳಿದ್ದು ಅಲ್ಲಿಗೆ ಈ ವರೆಗೂ ಯಾವ ಭಾರತೀಯ ಪ್ರವಾಸಿಯೂ ಬರದೆ ಇದ್ದ ವಿಷಯ. ಆಗೊಮ್ಮೆ ಈಗೊಮ್ಮೆ ಪ್ರವಾಸಿ ಗೈಡ್‍ಗಳು ವಿದೇಶೀ ಪ್ರವಾಸಿಗರನ್ನು ಕರೆತರುತ್ತಿರುತ್ತಾರಂತೆ. ಒಂದು ಓಣಿ, ಒಂದು ಅಂಗಳ, ಎರಡು ಕೋಣೆಯ ಮನೆಯನ್ನು ಒಬ್ಬಳೆ ಎರಡೆರಡು ಬಾರಿ ಸುತ್ತಿ ಅಲ್ಲಿಯೇ ಕುಳಿತು ಅವರ ಹಿಂದಿ ಕವಿತೆಗಳನ್ನು ನನಗೆ ಬರುವ ಏಕೈಕ ಭಾಷೆ ಕನ್ನಡಲ್ಲಿ ಓದಿಕೊಂಡು, ಹಗುರವಾದ ತಲೆಹೊತ್ತು ಹೊರಬಂದವಳಿಗೆ ಸಿಕ್ಕರು ಇನ್ನೊಬ್ಬ ಮಹಿಳೆ ಕ್ಯಾಥೆರಿನ್ ಮೇರಿ ಹೀಲ್ಮನ್.

ಲಂಡನ್ನಲ್ಲಿ ಹುಟ್ಟಿದಾಕೆ. ಜರ್ಮನಿ ಮೂಲದ ತಂದೆ ಕಡ್ಡಾಯವಾಗಿ ಮೊದಲನೆಯ ವಿಶ್ವಯುದ್ಧದಲ್ಲಿ ಭಾಗವಹಿಸಬೇಕಾಗಿತ್ತು. ಇದಕ್ಕಾಗಿಯೇ ಯೂರೋಪಿಯನ್ರಿಂದ ಅವಮಾನಕ್ಕೆ, ಅವಗಣನೆಗೆ ತುತ್ತಾಗಬೇಕಾಗಿ ಬಂದಿತು. ಮೊದಲನೆಯ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಎನ್ನುವ ಒಂದೇ ಕಾರಣಕ್ಕೆ ಆತನನ್ನು ದೇಶದ್ರೋಹಿ ಪಟ್ಟ ಕಟ್ಟಿ ದೂರವಿಡಲಾಯಿತು. ಈಕೆ ಆತನ ಮಗಳು ಎನ್ನುವುದಕ್ಕಾಗಿಯೇ ಇನ್ನೂ ಶಾಲೆಗೆ ಹೊಗುತ್ತಿದ್ದ ಬಾಲಕಿಯನ್ನು ಸಮಾಜದಿಂದ ಬಹಿಷ್ಕರಿಸಲಾಯ್ತು. ಸರ್ಕಾರ ಪ್ರಜೆಗಳಿಗೆ ನೀಡುತ್ತಿದ್ದ ಎಲ್ಲಾ ಮೂಲಭೂತ ಸೌಕರ್ಯಗಳಿಂದಲೂ ಈಕೆಯನ್ನು ಹೊರದಬ್ಬಲಾಯಿತು. ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ನಿಂದನೆಗೆ ಗುರಿಯಾಗಿದ್ದ ಗಾಂಧಿಯ ಮನಸ್ಥಿತಿ ಈಕೆಯನ್ನು ಇನ್ನಿಲ್ಲದಂತೆ ಆಕರ್ಷಿಸಿತು. ಆ ಸೆಳೆತದ ಎಳೆಯನ್ನು ಹಿಡಿದುಕೊಂಡು ತುಂಬು ಯೌವ್ವನದ ಹುಡುಗಿ ಹೊರಟು ಬಂದೇ ಬಿಟ್ಟಳು ಭಾರತದ ಕಡೆಗೆ ಇನ್ನೆಂದೂ ಹಿಂದಿರುಗಿ ಹೋಗಲಾರದಂತೆ. ಹಿಮಾಲಯ ಪ್ರದೇಶದಲ್ಲಿ ನೆಲೆಗೊಂಡ ತಮ್ಮ ಅಚ್ಚುಮೆಚ್ಚಿನ ಈ ಶಿಷ್ಯೆಗೆ ಗಾಂಧಿಯೇ ’ಸರಳಾ ಬೆಹನ್’ ಎಂದು ಮರುನಾಮಕರಣ ಮಾಡಿದ್ದು.

ಹಿಮಾಲಯ ಪ್ರದೇಶದ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಸಬಲೀಕರಣದೆಡೆಗೆ ಅಪಾರವಾದ ಕೆಲಸ ಮಾಡುತ್ತಿದ್ದ ಸರಳಾ ಬೆಹನ್ ಪರಿಸರ ಸಂರಕ್ಷಣೆಯ ಉಸಿರಾದ ’ಚಿಪ್ಕೋ ಚಳುವಳಿ’ಯನ್ನು ಆರಂಭಿಸಿದರು. ಭಾರತ ಬಿಟ್ಟು ತೊಲಗಿ ಆಂದೋಲನದ ಸಂಘಟಕಿಯಾಗಿ ಕೆಲಸ ಮಾಡಿ ಎರಡು ಬಾರಿ ಜೈಲು ಪಾಲಾಗಿದ್ದರು. ಸರ್ವೋದಯ ಸಂಘಟನೆಯ ಹರಿಕಾರಳಾಗಿದ್ದ ಸರಳಾ, ಮದ್ಯಪಾನ ವಿರೋಧಿ ವಿಷಯದಲ್ಲಿ ಆ ಪ್ರದೇಶದ ಮಹಿಳೆಯರೊಡಗೂಡಿ ದೇಶದಾದ್ಯಂತ ಸಂಚಲನ ಮೂಡಿಸಿದ್ದರು.

ಪರಿಸರ ಸಂರಕ್ಷಣೆ ಮತ್ತು ಮಹಿಳೆಯರ ಸಬಲೀಕರಣದ ಬಗ್ಗೆ 22 ಪುಸ್ತಕಗಳನ್ನು ಬರೆದಿರುವ ಇವರನ್ನು ಅವರ ಮರಣದ 45 ವರ್ಷಗಳ ನಂತರವೂ “ಹಿಮಾಲಯದ ಪುತ್ರಿ” ಎಂದು ಗೌರವಿಸಲಾಗುತ್ತಿದೆ. ಹೌದು, ಇಂತಹ ಸುಂದರ ಆಲೋಚನೆಯ ಹೆಣ್ಣು ಮಗಳು ಸಿಕ್ಕಿದ್ದು ಕೌಸಾನಿಯ ‘ಸರಳಾ ಬೆಹನ್ ಸಂಗ್ರಹಾಲಯದಲ್ಲಿ. ಬೇರು ಕಿತ್ತೊಗೆದರೂ ಕಸಿ ಮಾಡಿಕೊಳ್ಳುವಿಕೆಯಿಂದ ಮತ್ತೊಮ್ಮೆ ಮೊಳೆತು, ಚಿಗುರಿ, ಬೆಳೆದು, ಬೇರಾಗಿ ಹೋದ ಸರಳಾ ಬೆಹೆನ್ ಇವರುಗಳ ಬಗ್ಗೆ ವಿಸ್ಮಿತಳಾಗಿ ಆ ರಾತ್ರಿ ಕಳೆದು ಬೆಳಗ್ಗೆ ಕಾಲಿಟ್ಟಿದ್ದು ಬೈಜನಾಥ್ ದೇವಸ್ಥಾನಕ್ಕೆ.
ಪುರಾತತ್ವ ಇಲಾಖೆಯ ಈ ದೇವಸ್ಥಾನ 17 ಕಳಶ ಆಕಾರದ ದೇವಸ್ಥಾನಗಳ ಗುಂಪು. ಮುಖ್ಯ ಶಿಖರದಲ್ಲಿ ಆರೋಗ್ಯ ಕಾಪಾಡುವ ವೈದ್ಯನಾಥ ಶಿವನ ಪೂಜೆ ನಡೆಯುತ್ತದೆ. ತೀರ್ಥ ತೆಗೆದುಕೊಂಡು ಹತ್ತಿದ್ದು ಗುಡ್ಡದ ಮೇಲಿನ ಶಾರದೆಯನ್ನು ಭೇಟಿಯಾಗಲು. ರಾಮಕೃಷ್ಣ ಪರಮಹಂಸರಿಗೆ ಈ ದೇವಸ್ಥಾನದಲ್ಲಿ ಜ್ಞಾನೋದಯ ಆಗಿದ್ದು ಎಂದು ಅಲ್ಲಿನ ಪುರೋಹಿರತು ಹೇಳುತ್ತಿದ್ದರು. ಸುಮ್ಮನೆ ಕೇಳಿಸಿಕೊಂಡೆ.

(‘ಸರಳಾ ಬೆಹನ್ ಸಂಗ್ರಹಾಲಯʼ)

ಗುಡ್ಡದ ಮೆಟ್ಟಿಲು ಇಳಿದು ದಾರಿ ಹೊರಳಿದ್ದು ಅಲ್ಲಿಂದ 8 ಕಿಲೋಮೀಟರ್ ದೂರದಲ್ಲಿ ಪಂಚಾಚುಲಿ ಮಹಿಳಾ ನೇಕಾರರ ಸಂಘದೆಡೆಗೆ. ಇದೊಂದು ಸ್ತ್ರೀ ಶಕ್ತಿ ಪರಿಕಲ್ಪನೆಯಲ್ಲಿ ಆರಂಭವಾಗಿರುವ, ಮಹಿಳೆಯರಿಂದ ನಡೆಸಲ್ಪಡುತ್ತಿರುವ, ಮಹಿಳೆಯರಿಗೆ ಮಾತ್ರ ಕೆಲಸ ಕೊಟ್ಟು ಅವರನ್ನು ಸ್ವಾವಲಂಬಿ ಆಗಿಸುತ್ತಿರುವ ಉಲ್ಲನ್ ನೇಯ್ಗೆ ಗುಡಿ ಕೈಗಾರಿಗೆ. ವಿದೇಶಗಳಿಗೂ ರಫ್ತು ಮಾಡುವಷ್ಟು ಬೆಳೆದಿರುವ ಅಲ್ಲಿನ ನೇಕಾರ ಹೆಣ್ಣುಗಳೊಡನೆ ಮಾತನಾಡುತ್ತಾ ಒಂದು ಬಿಳಿಉಣ್ಣೆಯ ಶಾಲು ಕೊಂಡೆ. ಅದನ್ನೇ ಹೊದ್ದು ಕುಮಾವು ರೆಜಿಮೆಂಟ್ ಮ್ಯೂಸಿಯಮ್ ನೋಡಿಕೊಂಡು, ರಾಣಿಕೇತಿನ ಸೇಬು ಉದ್ಯಾನವನದಲ್ಲಿ ಹಣ್ಣಿನ ಹದವನ್ನು ಆಘ್ರಾಣಿಸಿ ಹೊರಟಿದ್ದು ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ಕಡೆಗೆ.

(ಕುಮಾವೋ ರೆಜಿಮೆಂಟ್‌ ಸ್ಮಾರಕ)

ಅಲ್ಲಿ ಸಿಂಹ, ಹುಲಿ, ಆನೆ, ಚಿರತೆ ಕಡೆಗೆ ಜಿಂಕೆ, ಕೋತಿಯೂ ಕಾಣ ಸಿಗಲಿಲ್ಲ. ಆದರೆ ಹುಲಿ ಮರಿಯೊಂದು ಹಸಿ ಮಣ್ಣೀನ ಮೇಲೆ ಹೆಜ್ಜೆ ಗುರುತು ಮೂಡಿಸಿದ್ದರ ಯಥಾವತ್ ನಕಲು ಮಾಡಿಕೊಂಡು ಮರದಲ್ಲಿ ಅದರ ಕೆತ್ತನೆ ಮಾಡಿಟ್ಟಿದ್ದ ಪಂಜವೊಂದನ್ನು ಕೊಂಡುಕೊಂಡಿದ್ದೇ ಕಾಡಿನ ಹಿತ ನೀಡಿತ್ತು, ಬೆಂಗಳೂರು ಕರೆದಿತ್ತು.

About The Author

ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ  ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ.  ‘ರಶೀತಿಗಳು - ಮನಸ್ಸು ಕೇಳಿ ಪಡೆದದ್ದು’, 'ಜೀನ್ಸ್ ಟಾಕ್' ಇವರ ಲಲಿತ ಪ್ರಬಂಧಗಳ ಸಂಕಲನ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ