Advertisement
ಚಳಿಗಾಲದ ಕತ್ತಲಲ್ಲಿ ಸೇತುವೆ ಬಳಿ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಚಳಿಗಾಲದ ಕತ್ತಲಲ್ಲಿ ಸೇತುವೆ ಬಳಿ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

“ಮರೆತೇ ಬಿಟ್ಟಿದ್ದೆ! ಚಳಿಗಾಲ ಶುರುವಾಗಿ ಆಗಲೇ ಹತ್ತು ದಿನವಾಗಿದೆಯಲ್ಲ, ಅಯ್ಯೋ!” ಎಂದು ತನ್ನನ್ನೇ ಬಯ್ದುಕೊಂಡಂತೆ- ಈ ಚಳಿ ರಾತ್ರಿ ಬೆಳಗಾಗುವಾಗ ದಬ್ಬಕ್ಕನೆ ಅವುಚಿಕೊಂಡಿದೆ. ನಾನು ಹೇಳುತ್ತಿರುವುದು ತುಂಬಾ ನಾಟಕೀಯ ಅನಿಸಿದರೆ ಅದು ನನ್ನ ತಪ್ಪಲ್ಲ. ಏಕೆಂದರೆ, ಈ ವರ್ಷ ಸಿಡ್ನಿಗೆ ಚಳಿ ಆವರಿಸಿದ್ದೇ ಹಾಗೆ. ಈವತ್ತು ಬೆಳಿಗ್ಗೆ. ಹಚ್ಚವಾಗಿ ಕತ್ತರಿಸಿಟ್ಟ ಹುಲ್ಲಿನ ಮೇಲೆಲ್ಲಾ ದಟ್ಟವಾಗಿ ಇಬ್ಬನಿಗಟ್ಟಿದೆ. ಹೌದು ಐಸಾಗಿ ಒಂದು ಪದರ ಹರಡಿದೆ. ಹಲವು ದಿನಗಳ ಇಂತಹ ಫ್ರಾಸ್ಟಿನಡಿ ಹುಲ್ಲು ಕಳೆಗುಂದಿ ಸಾಯುತ್ತವೆ. ಇಬ್ಬನಿಯನ್ನು ತೊಲಗಿಸಬೇಕಾದ ಸೂರ್ಯ ತನ್ನ ಕೆಲಸ ಮರೆತು ಉತ್ತರದ ಬೇಸಿಗೆಯಲ್ಲಿ ಅಂಡಲೆಯುತ್ತಿದ್ದಾನೆ. ಅವನ ವಾರೆ ಬಿಸಿಲಿನ ನಿಸ್ತೇಜವನ್ನು ಇಬ್ಬನಿ ಪದರ ಅಣಕಿಸಿ ನಗುತ್ತಿರುವಂತೆ ಹರಡಿಕೊಂಡಿದೆ.

ಚಳಿಗಾಲದಲ್ಲಿ ಹಗಲುಗಳು ಚಿಕ್ಕವು. ಸಂಜೆ ಐದಕ್ಕೇ ದೀಪ ಹಚ್ಚಬೇಕು. ಮನೆಗೆ ಹಿಂದುರುಗುವ ದಾರಿಯೆಲ್ಲಾ ಕತ್ತಲು. ಹತ್ತು ವರ್ಷಕ್ಕಿಂತ ಹಿಂದಿನ ಮಾತು ಈವತ್ತು ತುಂಬಾ ನೆನಪಾಯಿತು. ನಾವು ಆಗಿದ್ದ ಅಪಾರ್ಟ್‌ಮೆಂಟ್ ಮನೆ ಸಡ್ನಿಯನ್ನು ಇಬ್ಭಾಗಿಸಿ ಹರಿಯುವ “ಪ್ಯಾರಾಮಟ” ಎಂಬು ಹೊಳೆಯ ದಡದ ಪಕ್ಕದ ರಸ್ತೆಯಲ್ಲಿತ್ತು. ಮನೆಯಿಂದ ರೈಲ್ವೇ ಸ್ಟೇಷನ್ನಿಗೆ ಹೋಗಿ ಬರಲು ಒಂದು ಕಿರಿದಾದ ಕಾಲ್ಸೇತುವೆಯನ್ನು ದಾಟಿ ಹೋಗಿಬರಬೇಕಾಗಿತ್ತು. ಆ ಉದ್ದದ ಸೇತುವೆಯ ನಟ್ಟ ನಡುವಲ್ಲಿ ಮಾತ್ರ ಒಂದು ಪುಟ್ಟ ದೀಪ ಮಿಣಿಮಿಣಿ ಎನ್ನುತ್ತಿರುತ್ತಿತ್ತು. ಉಳಿದಂತೆ ಕತ್ತಲು. ಹೊಳೆಯ ಒಂದು ಪಕ್ಕದಲ್ಲಿ ಎತ್ತರದ ಕಟ್ಟಡಗಳು ಇದ್ದವು. ಅವುಗಳ ನಡುವಿನ ಒಂದು ಕಿರಿಯ ಓಣಿಯನ್ನು ಹೊಕ್ಕು ಸೇತುವೆ ತಲುಪಬೇಕಿತ್ತು. ಆ ಓಣಿಯಲ್ಲೂ ದೀಪವಿಲ್ಲ, ಕತ್ತಲು.

ಇಂತಹದೇ ಒಂದು ಚಳಿಗಾಲದ ಸಂಜೆ ಕೆಲಸದಿಂದ ಹಿಂತಿರುಗುತ್ತಿದ್ದೆ. ರೈಲಿನಲ್ಲಿ ಓದುತ್ತಿದ್ದ ಯಾವುದೋ ಪುಸ್ತಕದ ಬಗ್ಗೆ ಯೋಚಿಸುತ್ತಾ ನನ್ನ ಲೋಕದಲ್ಲೇ ಮುಳುಗಿಹೋಗಿದ್ದೆ. ರಸ್ತೆಯಲ್ಲಿ ಹೆಚ್ಚು ಟ್ರಾಫಿಕ್ ಇಲ್ಲದ ಕಾರಣ ಹಾಗೆ ಮೈಮರೆಯುವುದು ಅಪಾಯಕಾರಿಯಲ್ಲ. ಕೊಂಚವೇ ಎಚ್ಚರವಿದ್ದು ಅತ್ತಿತ್ತ ನೋಡಿ ಹೋದರೆ ಸಾಕು. ಹೀಗೆ ಏನೋ ಯೋಚಿಸುತ್ತಾ ಸೇತುವೆಗೆ ಹೋಗುವ ಓಣಿಗೆ ತಿರುಗಿದೆ. ಅಲ್ಲಿಂದಲೇ ಕಾಣುವ ಸೇತುವೆ ನಡುವಿನ ದೀಪದ ಸಣ್ಣ ಬೆಳಕು ಇದ್ದೂ ಇಲ್ಲದಂತಿತ್ತು. ಆ ಉದ್ದದ ಓಣಿಯಲ್ಲಿ ಎರಡು ಹೆಜ್ಜೆ ಇಟ್ಟೊಡನೆ, ದೂರದ ಸೇತುವೆಯ ಶುರುವಿನಲ್ಲಿ ನನ್ನ ಅರ್ಧ ಎಚ್ಚರಕ್ಕೆ ಎರಡು ಮನುಷ್ಯಾಕೃತಿ ಕಂಡಿತು. ಯಾರೋ ಇರಲಿ ಎಂದುಕೊಂಡು ಮತ್ತೊಂದೆರಡು ಹೆಜ್ಜೆ ಹೋಗುತ್ತಲೂ ಅನುಮಾನವಾಯಿತು. ಮರಗಟ್ಟುವಂತಹ ಚಳಿಯಲ್ಲಿ, ಸಂಜೆಯ ಕತ್ತಲಲ್ಲಿ ಯಾರನ್ನೋ ಕಾಯುತ್ತಾ ನಿಂತಿರುವಂತೆ ಕಂಡಿತು. ನನ್ನ ನಡಿಗೆ ನಿಧಾನವಾಯಿತು.

ನನ್ನನ್ನು ನೋಡಿದ್ದೆ ಆ ಮನುಷ್ಯಾಕೃತಿಗಳು ಎಚ್ಚೆತ್ತುಕೊಂಡು ಚುರುಕಾದ ಹಾಗಾಯಿತು. ನನ್ನತ್ತ ತಿರುಗಿ ನಿಂತಂತಾಯಿತು. ನಾನು ನಿಂತುಬಿಟ್ಟೆ. ಯಾಕೋ ಸರಿಯಿಲ್ಲ ಅನಿಸಿತು. ಆ ಇಬ್ಬರು ಹುಡುಗರು ನನ್ನತ್ತ ತಿರುಗಿ ಹೆಜ್ಜೆಯಿಟ್ಟರು. ನಾನು ಒಂದೆರಡು ಕ್ಷಣ ಮರಗಟ್ಟಿ ನಿಂತುಬಿಟ್ಟೆ. ಹಿಂದೆ ತಿರುಗಿ ಹೋಗಲೇ? ಅಥವಾ ಮುಂದಕ್ಕೆ ಹೋಗಲೆ? ಅಥವಾ ನಿಂತಲ್ಲೇ ನಿಂತುಬಿಡಲೆ? ಎಂದೆಲ್ಲಾ ಯೋಚನೆ ತಲೆಯಲ್ಲಿ ಮಿಂಚಿಹೋಯಿತು. ಅದಕ್ಕೆಲ್ಲಾ ಉತ್ತರ ಕಂಡುಕೊಳ್ಳುವ ಮೊದಲೇ, ಯಾವುದೋ ಒಳದನಿಗೆ ಶರಣುಹೋಗಿ ತಿರುಗಿ ಹೊರಟು ಬಿಟ್ಟಿದ್ದೆ. ಹೆಜ್ಜೆ ಚುರುಕಾಗಿ ಹಾಕುತ್ತಿದ್ದೆ. ಇದೆಲ್ಲಾ ನಾನು ಪ್ರಜ್ಞಾಪೂರ್ವಕವಾಗಿ ಮಾಡುತ್ತಲೇ ಇರಲಿಲ್ಲ. ಎಲ್ಲಾ ಬೊಂಬೆ ಆಟದಂತೆ ನಡೆಯುತ್ತಿತ್ತು.

ಓಣಿಯಿಂದ ಹೊರಬಂದು ಎತ್ತ ಹೋಗುವುದೆಂದು ನೋಡುತ್ತಾ ಒಮ್ಮೆ ಹಿಂದೆ ತಿರುಗಿದೆ. ಆ ಹುಡುಗರೂ ನನ್ನತ್ತ ಸರಸರ ಬರುತ್ತಿದ್ದರು. ಆ ನಿರ್ಜನ ರಸ್ತೆಯ ಇನ್ನೊಂದು ಪಕ್ಕ ಅಷ್ಟು ದೂರದಲ್ಲಿ ಒಂದು ರೆಸ್ಟೋರೆಂಟ್ ಕಂಡಿತು. ಓಡುತ್ತ ರಸ್ತೆ ದಾಟಿ ಅದನ್ನು ಹೊಕ್ಕುಬಿಟ್ಟೆ. ಅಲ್ಲಿದ್ದ ವೇಟ್ರೆಸ್ಸಿಗೆ ಯಾರೋ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆ ಮನೆಗೆ ಫೋನ್ ಮಾಡಬೇಕು ಅಂತ ಕೇಳಿಕೊಂಡೆ. ಪರಿಸ್ಥಿತಿ ಅರ್ಥವಾದವಳಂತೆ ಫೋನತ್ತ ಕೈಚಾಚಿ ಮಾಡು ಅಂದಳು. ನನ್ನ ಹೆಂಡತಿಗೆ ಫೋನ್ ಮಾಡಿ ನಡೆದದ್ದು ಹೇಳುತ್ತಿರುವಾಗ ಗಾಜಿನ ಕಿಟಕಿಯ ಮೂಲಕ ನನ್ನತ್ತ ನೋಡುತ್ತಾ ಅವರಿಬ್ಬರು ಹಾದು ಹೋಗಿದ್ದು ಕಂಡಿತು. ಅವರ ನೋಟ “ಬಾ ಮಗನೆ ಹೊರಗೆ, ನೋಡ್ಕೋತೀವಿ” ಅನ್ನೋ ಹಾಗಿತ್ತು. ತುಸು ಹೊತ್ತು ಅಲ್ಲೇ ಕಾದಿದ್ದು, ಹೆಂಡತಿ ಬಂದು ಪಿಕ್ ಮಾಡುವಾಗ ಅವರಿಬ್ಬರೂ ಎತ್ತಲೋ ಕಾಣೆಯಾಗಿದ್ದರು. ಬಹುಶಃ ನಾನು ಸೇತುವೆಯತ್ತ ಮುಂದೆ ಹೋಗಿದ್ದರೆ ಬಡಿದು ನನ್ನ ಬಳಿಯಿರುವುದೆಲ್ಲಾ ಕಿತ್ತುಕೊಳ್ಳುತ್ತಿದ್ದರೋ, ದುಡ್ಡು ಕೇಳುತ್ತಿದ್ದರೋ, ಸಿಗರೇಟು ಕೇಳುತ್ತಿದ್ದರೋ ಯಾರಿಗೆ ಗೊತ್ತು. ಆದರೆ ಅಂದಿನಿಂದ ಪ್ರತಿದಿನವೂ ಸ್ಟೇಷನ್ನಿನಿಂದ ಪಿಕ್ ಮಾಡುತ್ತೇನೆ ಎಂಬ ಹೆಂಡತಿಯ ಒತ್ತಾಯವನ್ನು ಒಪ್ಪಿಕೊಂಡರೂ ನನಗೆ ಅದು ಅಗತ್ಯವೆನಿಸಿರಲಿಲ್ಲ. ಆಮೇಲೂ ಹಲವು ಸಲ ಕತ್ತಲಲ್ಲಿ ಅಲ್ಲಿಯೇ ಹಾದು ಬಂದಿದ್ದೇನೆ.

ನನಗೆ ಅಂದು ಇದ್ದ ಸಾಧನ ಸವಲತ್ತು ಇಲ್ಲದವರ ಬಗ್ಗೆ ಯೋಚಿಸುವಾಗ ಅಭದ್ರತೆಯ ಅರ್ಥ ಆಗುತ್ತದೆ. ಆ ಅಭದ್ರತೆಯೇ ನೀಚ ಕೆಲಸವನ್ನು ಮಾಡಿಸುತ್ತದೆ. ಅಲ್ಲದೆ, ನೀಚತನಕ್ಕೆ ತುತ್ತಾದವರಿಗೆ ಸ್ವಾರೋಪಿತ ಅವಮಾನವನ್ನೂ ಅದೇ ಅಭದ್ರತೆಯೇ ಲೇಪಿಸುತ್ತದೆ. ಇಂಡಿಯನ್ ಹುಡುಗರು ತುತ್ತಾಗುತ್ತಿರುವ ನೀಚತನಕ್ಕೆ ಹಲವು ಮುಖಗಳು, ಹಲವು ಕೋನಗಳು ಮೆಲ್ಲನೆ ಒಂದೊಂದಾಗಿ ತೆರೆದುಕೊಳ್ಳುತ್ತಿದೆ. ಇಡೀ ಪೋಲಿಸಿಂಗ್ ಹಾಗು ಎಲ್ಲ ಸಾಮಾನ್ಯರ ರಕ್ಷಣೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ನಾವಿನ್ನೂ ಹೆಚ್ಚು ಕೆಲಸ ಮಾಡಬೇಕೆಂದು ಪೋಲೀಸರು ಒಪ್ಪಿಕೊಳ್ಳುವಂತಾಗಿದೆ. ಇವೆಲ್ಲಾ ಹೀಗಿರಬೇಕಾಗಿಲ್ಲ. ಹೀಗಿರದೇ ಇರಲು ಸಾಧ್ಯವಿದೆ ಎಂಬ ಒತ್ತಡ ಎಲ್ಲ ಕಡೆ ಕಾಣುತ್ತಿದೆ. ಇದರಿಂದ ಹುಟ್ಟುವ ಪರಿಹಾರಕ್ಕೆ ಮಾತ್ರ ಇಲ್ಲಿಯ ನಗರವಾಸಿಗಳು ತಾಳ್ಮೆಯಿಂದ ಕಾಯಬೇಕಷ್ಟೆ. ಈಗ ಆ ಹಳೆಯ ಸೇತುವೆಯನ್ನು ಹೊಸದಾಗಿ ಕಟ್ಟಿದ್ದಾರೆ. ಅಲ್ಲದೆ, ಸಣ್ಣ ಹಗಲುಗಳು ಹಾಗು ಬೇಗ ಕತ್ತಲಾಗುವ ಸವಾಲು ಚಳಿಗಾಲದಲ್ಲಿ ಮಾತ್ರ.

 

About The Author

ಸುದರ್ಶನ್

ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ