Advertisement
ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

ಒಮ್ಮೆಯಾದ್ರೂ
ಬೇಷರಮ್ ಆಗಿ ನೋಡಿ…

ಅದೆಂತ ಸುಖ
ಬೇಷರಮ್ ಆಗುವುದರಲ್ಲಿ…!
ಜೊತೆ ಸಾಗುವಾಗ ಕೈ
ಬೆರಳು ಹಿಡಿದು ಒತ್ತುವುದರಲ್ಲಿ….!
ಕಿರು ನಗೆಯ ಚೆಲ್ಲಿ….!

ಮುಂಜಾನೆ ಅವಳು
ಕೊಸರುವಾಗಲೇ ನಿದ್ದೆಗಣ್ಣಲ್ಲಿ
ಮುತ್ತೊಂದು ಕೊಡುವಲ್ಲಿ…!
ಅವಳು ತುಟಿ ಸ್ಪರ್ಶಿಸಿ ಬಿಟ್ಟ
ಚಹಾ ಮತ್ತೆ ಮತ್ತೆ ಕುಡಿಯುವಲ್ಲಿ…!

ಮನೆ ಮಂದಿಯ ಕಣ್ಣ್ ತಪ್ಪಿಸಿ
ಕಣ್ಣೊಡೆದು…
ಅಮಾಯಕನಂತೆ ನಕ್ಕು
ಮೀಸೆ ಮೇಲೆ ಬೆರಳಾಡಿಸುವಲ್ಲಿ….!

ಒಮ್ಮೆಯಾದ್ರೂ ಬೇಷರಮ್
ಆಗಿ ನೋಡಿ…

ಅದೆಂತ ಸುಖ
ಬೇಷರಮ್ ಆಗುವುದರಲ್ಲಿ…
ಅವಳ ಕೈಗಳಿಗೆ
ಮೆಹಂದಿ ಹಚ್ಚಿ…..
ಮಲಗಿರುವಾಗ ನಿದ್ದೆ
ಅಮಲಿಗೆ ಸದ್ದಿಲ್ಲದೇ ಕೆನ್ನೆ ಮೈ
ಕೈಗೆ ಮೆತ್ತಿಸಿಕೊಳ್ಳುವಲ್ಲಿ….
ಮುಂಜಾನೆ ಅವಳು
ಕೇಳೋ ಸಾರೀ ಗೆ…
ಮತ್ತದೇ ಬೇಷರಮ್
ಕಿರು ನಗೆಯ ಚೆಲ್ಲಿ…
ಮುತ್ತಿನ ಮಳೆಗರೆಯುವಲ್ಲಿ….!!

ಅದೆಂತ ಸುಖ ಬೇಷರಮ್
ಆಗುವುದರಲ್ಲಿ…!!

ಸಭೆ ಸಮಾರಂಭಕೆ
ಹೊರಡುವಾಗ ಗಡಿಬಿಡಿಯಲ್ಲಿ
ಅವಳು ತೊಟ್ಟ ಸೀರೆಗೆ ನೆರಿಗೆ
ಹಿಡಿಯುವಲ್ಲಿ…!!
ಊಟದ ಕೊನೆಗೊಮ್ಮೆ
ಸೀರೆಯ ಸೆರಗನ್ನೇ ಕೈ
ವಸ್ತ್ರವಾಗಿಸುವಲ್ಲಿ….!!

ಮನೆಯಿಂದ ಹೊರಡುವಾಗ
ಅಕ್ಕಾ ಪಕ್ಕದ ಮನೆಯವರು
ನೋಡುತ್ತಿದ್ದರೂ ಆಗೊಮ್ಮೆ
ಈಗೊಮ್ಮೆ ಹೂವು ಮುತ್ತು
ಗಾಳಿಯಲಿ ಚೆಲ್ಲಿ….!
ಹೊರಡುವುದರಲ್ಲಿ..!

ಅದೆಂತ ಸುಖ ಹೀಗೆ
ಬೇಷರಮ್ ಆಗುವುದರಲ್ಲಿ…!!

ಚಲಿಸುವ ಬೈಕಲ್ಲಿ
ಕನ್ನಡಿಯ ನೋಡುತ್ತಾ….
ಮತ್ತಷ್ಟು ವೇಗ ಹೆಚ್ಚಿಸಿ
ನಿಧಾನ ಎನ್ನುವಾಗ
ಅವಳ ಮುಖ ನೋಡುವಲ್ಲಿ….!
ದುತ್ತೆಂದೂ ಆಚಾನಕ್
ಬ್ರೇಕ್ ಹಾಕಿವಲ್ಲಿ..!!

ಬೇಷರಮ್
ಆಗುವುದೆಂದರೆ
ಕನಸ ಬಳ್ಳಿ ನೂರೆಂಟು
ಹೂವ ಚೆಲ್ಲಿ…
ನೆಲ ಮುಗಿಲ
ಪರಿಮಳ ಹಬ್ಬಿಸಿ
ಬಿಡುವಂತೆ ಮನದಲ್ಲಿ….!!

ಬೇಷರಮ್ ಆಗುವುದು
ಸುಲಭವಲ್ಲ ಸ್ವಾಮಿ…!!
ಒಂದಷ್ಟು ತುಂಟತನ
ಮತ್ತಷ್ಟು ಭಂಡತನ
ಸಾಲದಕ್ಕೆ….
ವಯಸ್ಸು ಎಂಬತ್ತಾದರೂ
ಒಂದಿಷ್ಟು ಯೌವನ
ಇರಬೇಕು ಮೈ ಮನದಲ್ಲಿ…!!

ದೇವರಾಜ್‌ ಹುಣಸಿಕಟ್ಟಿ ರಾಣೇಬೆನ್ನೂರಿನವರು
ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು ಇವರ ಪ್ರಕಟಿತ ಕೃತಿ
ಕವಿತೆಯ ಓದು, ಬರೆಯುವುದು ಇವರ ಹವ್ಯಾಸ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. ಸ್ವಭಾವ ಕೋಳಗುಂದ

    ಚೆಂದದ ರಚನೆ. ಕೊನೆಯಲ್ಲಿ ಬೇಶರಮ್ ಆಗಿರಲು ಟಿಪ್ಸ್ ಕೊಟ್ಟು ಒಳ್ಳೆಯ ಕೆಲಸ ಮಾಡಿದ್ದೀರಿ. ನವಿರು ಹಾಸ್ಯದ ದಾಟಿಯಲ್ಲಿ ಪ್ರೇಮ ಸಲ್ಲಾಪದ ಕ್ಷಣಗಳನ್ನು ಸೊಗಸಾಗಿ ಚಿತ್ರಿಸಿದ್ದೀರಿ.

    Reply
  2. ravindra nayak sannakkibettu

    ಆಹಾ…ಬೇಷರಮ್ ಆಗುವ ಸುಖವನ್ನು ಕಟ್ಟಿಕೊಟ್ಟ ಬಗೆ ಮುದ ನೀಡಿತು.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ