Advertisement
ದೇಮಾಜಿ ಎಂಬ ಸುಂದರ ತಾಣದಲ್ಲೊಂದು ತಂಗುದಾಣ

ದೇಮಾಜಿ ಎಂಬ ಸುಂದರ ತಾಣದಲ್ಲೊಂದು ತಂಗುದಾಣ

ಅಸ್ಸಾಮಿನ ಹಳ್ಳಿಗಳು, ತಾಲೂಕುಗಳು ಅರುಣಾಚಲ ಪ್ರದೇಶದಂತೆ ಅಲ್ಲ. ಟಾರು ಮೆತ್ತಿಸಿಕೊಂಡ ವಿಶಾಲ ರಸ್ತೆಗಳು ಪ್ರಯಾಣಿಗರಿಗೆ ಹಿತವಾಗಿವೆ. ಒಂದೊಂದೇ ಮರಗಿಡಗಳು ಕಿಟಿಕಿಯಿಂದಾಚೆಗೆ ನನ್ನಿಂದ ದೂರದೂರವಾಗುತ್ತಿರುವುದನ್ನು ನೋಡುತ್ತಲೇ ಮುಂದೆ ಹೋಗುತ್ತಿದ್ದೆ. ಅಸ್ಸಾಂ ಪೂರ್ತೀ ತುಂಬಾ ಖುಷಿ ನೀಡುವ ನೋಟವೆಂದರೆ ಅಲ್ಲಿನ ಹೆಣ್ಣು ಮಕ್ಕಳು ವಯೋಬೇಧವಿಲದೆ ಸೀರೆಗಳನ್ನುಟ್ಟು ಸೈಕಲ್‌ಗಳಲ್ಲಿ ಓಡಾಡುತ್ತಾರೆ. ರಸ್ತೆಯ, ಅಲ್ಲಿನ ಜನರ, ವಾಹನಗಳ, ಇಕ್ಕೆಲಗಳ ಹಸುರಿನ ಉಸಿರಿನಂಥಾ ಹೆಣ್ಣುಗಳು. ಬಣ್ಣಬಣ್ಣದ ಸೀರೆಗಳುಟ್ಟು ಸೈಕಲ್ ತುಳಿಯುತ್ತಾ ಕಾಲನಿಗೆ ಸೆಡ್ಡು ಹೊಡೆವ ಜೀವಧಾತುಗಳಂತೆ ಕಾಣುತ್ತಾರೆ. ತುಂಬಾ ಹೊತ್ತು ಅವರುಗಳನ್ನೇ ನೋಡುತ್ತಾ ಒಂದೆಡೆ ನಿಂತುಬಿಟ್ಟಿದ್ದೆ. ಎಷ್ಟೊಂದು ಫೋಟೋಗಳನ್ನು ತೆಗೆದುಕೊಂಡೆ.
ಅಂಜಲಿ ರಾಮಣ್ಣ ಬರೆಯುವ “ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ಹೊಸ ಬರಹ

ಅರುಣಾಚಲ ಪ್ರದೇಶದ ಝೀರೋ ಪರ್ವತ ಶ್ರೇಣಿಯಿಂದ ಇಳಿದು 150 ಕಿಲೋಮೀರ್‌ಗಳಷ್ಟು ನೇರ ರಸ್ತೆಯಲ್ಲಿ ಪ್ರಯಾಣ ಮುಗಿಸಿ ಅಸ್ಸಾಮಿನ ಲಖೀಂಪುರ ಜಿಲ್ಲೆ ಸೇರಿದ್ದೆ. ಸಂಜೆ 5 ಗಂಟೆಯ ಹತ್ತಿರದ ಹೊತ್ತು. ಸೂರ್ಯ ಮುಳುಗುವುದರಲ್ಲಿದ್ದ. ಅಲ್ಲೆಲ್ಲಾ ಸಂಜೆ 5 ಗಂಟೆಯ ನಂತರ ಹೆಚ್ಚು ವಾಹನಗಳು ಓಡಾಡುವುದಿಲ್ಲ. ಅವರೆಲ್ಲರೂ ಮನೆಗಳನ್ನೋ, ತಂಗುದಾಣವನ್ನೋ ಸೇರಿ ಬಿಡುತ್ತಾರೆ. ಅಪ್ಪಿತಪ್ಪಿಯೂ ರಸ್ತೆಗಳಲ್ಲಿ ಹೆಂಗಸರ ಸುಳಿವು ಇರೋದಿಲ್ಲ. ಸಂಜೆ 5 ರಿಂದ 7 ಗಂಟೆಯವರೆಗಿನ ಸಮಯವನ್ನು ಅಪಾಯದ ಸಮಯ ಎಂದೇ ಗುರುತಿಸಲಾಗಿದೆ. ಉಲ್ಫ, ಅಲ್ಫ ಗುಂಪುಗಳ, ಬೋಡೋ ಜನರ ಭಯೋತ್ಪಾದಕ ಚಟುವಟಿಕೆಗಳಿಗೆ ಆ ಸಮಯ ಮೀಸಲು.

ಅದಕ್ಕೇ ಇಡೀ ವಾತಾವರಣದಲ್ಲೇ ಆತಂಕ ಉಸಿರಾಡುತ್ತಿರುತ್ತದೆ. ಮಿಲಿಟರಿ ಪಡೆಯ ಅಧಿಕಾರಿಗಳು, ಪೊಲೀಸರು ಬಿಟ್ಟರೆ ರಸ್ತೆಗಳಲ್ಲಿ ಮತ್ತ್ಯಾವ ವ್ಯವಹಾರವೂ ಇರುವುದಿಲ್ಲ. ಮುಂದಿನ ತಾಣ ಸೇರಲು ಇನ್ನೂ 250 ಕಿಲೋಮೀಟರ್‌ಗಳ ಪ್ರಯಾಣ ಬಾಕಿ ಇತ್ತು. ಪೂರ್ತೀ ಅಲ್ಲದಿದ್ದರೂ ಇನ್ನೊಂದು ನೂರು ಕಿಲೋಮೀಟರ್‌ಗಳು ಮುಂದೆ ಹೋಗಬೇಕೆನ್ನುವ ಇರಾದೆ ಮತ್ತು ಧೈರ್ಯ ನನಗಿದ್ದರೂ ಚಾಲಕ ಲಖೀಂಪುರದಲ್ಲೇ ರಾತ್ರಿ ತಂಗಿ ಬಿಡುವ ಸಲಹೆ ನೀಡುತ್ತಿದ್ದ. ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡೆ. ಅಷ್ಟರಲ್ಲಿ ಚಾಲಕ ಆತಂಕ, ಭಯದಲ್ಲಿ ಗಮನಿಸದೆ ಒಂದು ಕ್ಷಣದ ಸಿಗ್ನಲ್ಸ್ ಹಾರಿ ಬಿಟ್ಟ. ತಕ್ಷಣವೇ ಪೊಲೀಸರು ಅವನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ 3000 ರೂಪಾಯಿಗಳ ದಂಡ ವಿಧಿಸಿ ಬಿಟ್ಟರು. ಇವನ ಗಂಟಲು ಒಣಗಿ ಹೋಯ್ತು. ಬೆವರುತ್ತಾ ನಡುಗುತ್ತಿದ್ದ.

ಕೊನೆಗೆ ನಾನೇ ಹೋಗಿ ಪೊಲೀಸರೊಂದಿಗೆ ರಾಜಿ ಸಂಧಾನ ಮಾಡಿದ ನಂತರ 500 ರೂಪಾಯಿಗಳ ದಂಡಕ್ಕೆ ಒಪ್ಪಂದವಾಗಿ ನಿರಾಳವಾಯಿತು ವಾತಾವರಣ. ನಿಜ, ಕಾನೂನಿನ ಅವಗಣನೆಗೆ ಕ್ಷಮೆಯಿಲ್ಲ. ಆದರೆ ಚಾಲಕ ಒಂದಷ್ಟೇ ಇಂಚಿನಷ್ಟು ಗೆರೆ ದಾಟಿದ್ದ. ತತ್ಷಣವೇ ಬ್ರೇಕ್ ಹಾಕಿ ನಿಂತುಕೊಂಡಿದ್ದ. ಯಾವ ಅನಾಹುತವೂ ಆಗಿರಲಿಲ್ಲ. ಗಾಡಿಯ ಎಲ್ಲಾ ದಾಖಲೆಗಳು, ಅವನ ಪರವಾನಿಗೆ ಎಲ್ಲವೂ ಸುಸ್ಥಿತಿಯಲ್ಲೇ ಇದ್ದವು. ಇಂತಿಷ್ಟೆ ದಂಡ ವಿಧಿಸಬೇಕು ಎನ್ನುವ ಕಾನೂನು ಇದ್ದರೂ ಕಾರಿಗೆ ಅರುಣಾಚಲ ಪ್ರದೇಶದ ನೊಂದಣಿ ಇದ್ದ ಕಾರಣ ಅಷ್ಟೊಂದು ದೊಡ್ಡ ಮೊತ್ತದ ದಂಡ ವಿಧಿಸಲು ಪೊಲೀಸರು ಮುಂದಾಗಿದ್ದರು. ಅಸ್ಸಾಮಿನ ನೊಂದಣಿ ಇದ್ದ ಗಾಡಿಗಳಿಗೆ ಅರುಣಾಚಲ ಪ್ರದೇಶದಲ್ಲಿ ಹೀಗೇ ಮಾಡುತ್ತಾರೆ ಎಂದು ನಂತರದ ದಿನಗಳಲ್ಲಿ ತಿಳಿದೆ. ಇಲ್ಲೂ ನೆರೆ ರಾಜ್ಯದಲ್ಲಿ ಇಂತಹ ಅನುಭವ ಇರುವುದರಿಂದ ನನಗೆ ಅದು ಹೊಸದಾಗಿ ಕಾಣಲಿಲ್ಲ. ಆದರೆ 500 ರೂಪಾಯಿ ಕಳೆದುಕೊಂಡ ಸಂಕಟದಲ್ಲಿ ಚಾಲಕ ಮತ್ತೂ ಒತ್ತಡಕ್ಕೆ ಒಳಗಾಗಿದ್ದ. ಬೆವರುತ್ತಿದ್ದ.

ಆ ಗಡಿಬಿಡಿಯಲ್ಲಿ ಊರಿನ ಹೊರಭಾಗಕ್ಕೆ ಬಂದಾಗಿತ್ತು. ಕತ್ತಲಾಗಿತ್ತು. ಅಲ್ಲಿ ತಂಗಬಹುದಾದ ಯಾವ ಜಾಗವೂ ಕಾಣುತ್ತಿರಲಿಲ್ಲ. 120 ಕಿಲೋಮೀಟರ್‌ಗಳ ದೂರದಲ್ಲಿ ಮುಂದಿನ ಜಿಲ್ಲೆ ದೇಮಾಜಿ ಎನ್ನುತ್ತಿತ್ತು ಮೈಲಿಗಲ್ಲು. ರಸ್ತೆ ಚೆನ್ನಾಗಿದ್ದುದ್ದರಿಂದ ಚಾಲಕನಿಗೆ ಧೈರ್ಯ ತುಂಬುತ್ತಿದ್ದೆ. ಕುಶಲೋಪರಿ ಮಾತನಾಡುತ್ತಾ ದಾರಿ ಸವೆಸುತ್ತಿದ್ದೆವು. ಮುಂದಿನೂರಿಗೆ ಹತ್ತಿರವಾಗುತ್ತಿದ್ದೆವು. ಅಂತೂ 8 ಗಂಟೆಯ ವೇಳೆಗೆ ದೇಮಾಜಿ ಜಿಲ್ಲೆಯ ಮುಖ್ಯ ರಸ್ತೆ ತಲುಪಿದ್ದೆವು. ಎಡಗಡೆಗೆ ಮೊದಲು ಕಂಡದ್ದು ಹೋಟೆಲ್ ದೇಮಾಜಿ ಎನ್ನುವ ಬೋರ್ಡು. ಎರಡನೆ ಯೋಚನೆ ಇಲ್ಲದೆ ಅಲ್ಲಿಗೆ ಕಾರು ತಿರುಗಿಸಿದ್ದಾಯ್ತು.

ಓಣಿಯಂತಹ ಜಾಗದ ಒಂದು ಬದಿಯಲ್ಲಿ ನಾಲ್ಕು ಕೋಣೆಗಳು. ಮುಂಬಾಗಿಲಲ್ಲೆ ಚೌಕಾರಾದ ಜಾಗದಲ್ಲಿ ಟೇಬಲ್ ಕುರ್ಚಿಗಳು ಮತ್ತು ಒಂದು ಮೂಲೆಯಯಲ್ಲಿ ಗಲ್ಲಾಪೆಟ್ಟಿಗೆ, ಅದರ ಹಿಂದೆ ಯುವ ಮಾಲೀಕ. ಕತ್ತಲಲ್ಲಿ ಆ ಜಾಗ ಇರಲು ಎಷ್ಟು ಯೋಗ್ಯವೋ, ಸುರಕ್ಷಿತವೋ ಒಂದೂ ತಿಳಿಯುತ್ತಿರಲಿಲ್ಲ. ಆದರೆ ಅನಿವಾರ್ಯತೆ ಉಳಿದುಕೊಳ್ಳಲೇಬೇಕಿತ್ತು. ತಗಡಿನ ಚಾವಣಿಯಿದ್ದ, ಒಂಟಿ ಕುಂಟು ಮಂಚವಿದ್ದ, ಬಾಗಿಲಿನ ಚಿಲಕ ಅಲ್ಲಾಡುತ್ತಿದ್ದ, ಇಲ್ಲಣಗಳಲ್ಲೇ ದೈತ್ಯ ಜೇಡಗಳು ನೇತಾಡುತ್ತಿದ್ದ ಕೋಣೆಯದು. ಅದಕ್ಕೇ ಸೇರಿಕೊಂಡಿದ್ದ, ನಲ್ಲಿಯಿಲ್ಲದ ಬಚ್ಚಲುಮನೆ. ಚಿಕ್ಕ ಹುಡುಗನೊಬ್ಬ ಬಂದು ಲಗೇಜ್ ಒಳಗಿಟ್ಟು ಊಟ ಏನು ಬೇಕು ಎಂದು ಕೇಳಿದ. ಅಲ್ಲಿ ಏನು ಮಹಾ ತಾನೆ ಸಿಕ್ಕೀತು ಎನ್ನುವ ಧೋರಣೆಯಲ್ಲಿ ಒಂದು ರೋಟಿ ದಾಲ್ ಸಿಕ್ಕರೆ ಸಾಕು ಅಂದೆ. ಅವನು ಒಳ ಹೋದ. ಮೂರು ದಿನಗಳಿಂದ ಚಾಲಕ ರಂಜುವಿನೊಡನೆ ವಿಶ್ವಾಸಾರ್ಹ ಸಂಬಂಧ ಬೆಳೆದು ಬಿಟ್ಟಿತ್ತು. ಆತ ವಿಪರೀತ ಒಳ್ಳೆಯವನಾಗಿದ್ದ. ಅಲ್ಲಿ ಇರಲು ಅವನಿಗೆ ಜಾಗದ ತೊಂದರೆಯಾದರೆ ನನ್ನ ಕೋಣೆಯಲ್ಲೇ ಮಲಗಲು ಹೇಳಿದೆ. ಅದಕ್ಕವನು “ದೀದಿ ನೀವು ಚಿಲಕ ಹಾಕಿಕೊಂಡು ಮಲಗಿ. ನಾನು ಬಾಗಿಲಲ್ಲೇ ಇರುತ್ತೇನೆ” ಎಂದ. ಕತ್ತಲಲ್ಲಿ ರಸ್ತೆಯಲ್ಲಿರಲು ಹೆದರುತ್ತಿದ್ದವನು ಈಗ ಒಡಹುಟ್ಟಿದವನಂತೆ ನನ್ನ ರಕ್ಷಣೆಗೆ ನಿಂತಿದ್ದ. ಬಹುಶಃ ಭಾರತೀಯ ಮೌಲ್ಯಗಳು ಎಂದು ಭಾರೀ ಸದ್ದು ಮಾಡುತ್ತೇವಲ್ಲ ಅದು ಈ ಸ್ವಭಾವವೇ ಇರಬೇಕು ಅನ್ನಿಸಿ. ಆ ಹುಡುಗನ ಮೇಲೆ ಗೌರವ ಬಂತು.

ಅರ್ಧ ಗಂಟೆಯಲ್ಲಿ ಅನ್ನ, ದಾಲ್, ನಾಲ್ಕಾರು ತರಹದ ಪಲ್ಯೆ, ಕುಡಿಯುವ ನೀರು ಎಲ್ಲವನ್ನೂ ತಂದಿಟ್ಟ ಆ ಚಿಕ್ಕ ಹುಡುಗ. ಆದರೂ ಏನೂ ತಿನ್ನಲಾಗಲಿಲ್ಲ. ಶೂಸ್ ಕೂಡ ಬಿಚ್ಚದೆ, ದೀಪ ಹಾಕಿಕೊಂಡೇ ಅಂತೂ ಮಲಗಿದೆ. ನಿದ್ದೆಯು ಎಂದೂ ಆಜ್ಞಾಕಾರಿ ತಾನೆ. ಬೆಳಗ್ಗೆ ಬೇಗ ಎದ್ದು ತಯಾರಾದೆ ಮುಂದಿನ ಊರಿಗೆ ಹೊರಡಲು. “ದೀದಿ ಚಾ ಕುಡಿಯದೆಯೇ ಹೋಗ್ಬೇಡಿ” ಎನ್ನುತ್ತಾ, ನನಗೆ ಸೇರುವುದೇ ಇಲ್ಲ ಎನ್ನುವಂತಹ ಉಗುರು ಬೆಚ್ಚಗಿನ ಹಸಿ ಹಸಿ ವಾಸನೆಯ ಚಹಾ ತಂದಿಟ್ಟ ಆ ಹುಡುಗ. ಅವನಿಗೆ ಬೇಸರವಾಗದಿರಲೆಂದು ಒಂದೆರಡು ಗುಟುಕನ್ನು ಕುಡಿದು ಬಿಲ್ ಹಣ ಸಂದಾಯ ಮಾಡುತ್ತಿದ್ದೆ. ಅಷ್ಟರಲ್ಲಿ ರಂಜು ಅವನಿಗೆ ನನ್ನ ಬಗ್ಗೆ ಅದೇನು ಹೇಳಿದ್ದನೋ ಗೊತ್ತಿಲ್ಲ, ಈ ಹುಡುಗ ಸೀದಾ ಬಳಿಗೆ ಬಂದು “ದೀದಿ ನಮ್ಮ ಹೋಟೆಲಿನ ಪಕ್ಕದ ರಸ್ತೆಯಲ್ಲಿಯೇ ದೇಮಾಜಿ ಬಾಂಬ್ ದುರ್ಘಟನೆಯಲ್ಲಿ ಮಡಿದ ಕಾಲೇಜು ವಿದ್ಯಾರ್ಥಿಗಳ ಸ್ಮಾರಕ ಇದೆ ನೋಡಿಕೊಂಡು ಹೋಗಿ. ನಿಮಗೆ ಅನುಕೂಲವಾಗುತ್ತೆ” ಅಂದ. ಆದರೆ ನನ್ನ ಗಮನವೆಲ್ಲಾ ಮುಂದಿನ ಊರಿನ ಮೇಲಿತ್ತು. ಹೇಗೂ ಮತ್ತೊಮ್ಮೆ ಈ ಜಾಗವನ್ನು ಮುಟ್ಟಲೇಬೇಕಿತ್ತು. ಆಗ ನೋಡಿದರಾಯಿತು ಅಂದುಕೊಂಡು, ಹಾಗಂತ ಅವನಿಗೆ ಹೇಳದೆ ನಗುವೊಂದನ್ನು ಹಂಚಿಕೊಂಡು ಅಲ್ಲಿಂದ ಹೊರಟೆ. ಮುಂದಿನ ಎರಡು ಗಂಟೆಗಳ ಕಾಲ ನಿಲ್ಲದೆ ಪಯಣಿಸಬೇಕಿತ್ತು.

ಅಸ್ಸಾಮಿನ ನೊಂದಣಿ ಇದ್ದ ಗಾಡಿಗಳಿಗೆ ಅರುಣಾಚಲ ಪ್ರದೇಶದಲ್ಲಿ ಹೀಗೇ ಮಾಡುತ್ತಾರೆ ಎಂದು ನಂತರದ ದಿನಗಳಲ್ಲಿ ತಿಳಿದೆ. ಇಲ್ಲೂ ನೆರೆ ರಾಜ್ಯದಲ್ಲಿ ಇಂತಹ ಅನುಭವ ಇರುವುದರಿಂದ ನನಗೆ ಅದು ಹೊಸದಾಗಿ ಕಾಣಲಿಲ್ಲ. ಆದರೆ 500 ರೂಪಾಯಿ ಕಳೆದುಕೊಂಡ ಸಂಕಟದಲ್ಲಿ ಚಾಲಕ ಮತ್ತೂ ಒತ್ತಡಕ್ಕೆ ಒಳಗಾಗಿದ್ದ. ಬೆವರುತ್ತಿದ್ದ.

ಅಸ್ಸಾಮಿನ ಹಳ್ಳಿಗಳು, ತಾಲೂಕುಗಳು ಅರುಣಾಚಲ ಪ್ರದೇಶದಂತೆ ಅಲ್ಲ. ಟಾರು ಮೆತ್ತಿಸಿಕೊಂಡ ವಿಶಾಲ ರಸ್ತೆಗಳು ಪ್ರಯಾಣಿಗರಿಗೆ ಹಿತವಾಗಿವೆ. ಒಂದೊಂದೇ ಮರಗಿಡಗಳು ಕಿಟಿಕಿಯಿಂದಾಚೆಗೆ ನನ್ನಿಂದ ದೂರದೂರವಾಗುತ್ತಿರುವುದನ್ನು ನೋಡುತ್ತಲೇ ಮುಂದೆ ಹೋಗುತ್ತಿದ್ದೆ. ಅಸ್ಸಾಂ ಪೂರ್ತೀ ತುಂಬಾ ಖುಷಿ ನೀಡುವ ನೋಟವೆಂದರೆ ಅಲ್ಲಿನ ಹೆಣ್ಣು ಮಕ್ಕಳು ವಯೋಬೇಧವಿಲದೆ ಸೀರೆಗಳನ್ನುಟ್ಟು ಸೈಕಲ್‌ಗಳಲ್ಲಿ ಓಡಾಡುತ್ತಾರೆ. ರಸ್ತೆಯ, ಅಲ್ಲಿನ ಜನರ, ವಾಹನಗಳ, ಇಕ್ಕೆಲಗಳ ಹಸುರಿನ ಉಸಿರಿನಂಥಾ ಹೆಣ್ಣುಗಳು. ಬಣ್ಣಬಣ್ಣದ ಸೀರೆಗಳುಟ್ಟು ಸೈಕಲ್ ತುಳಿಯುತ್ತಾ ಕಾಲನಿಗೆ ಸೆಡ್ಡು ಹೊಡೆವ ಜೀವಧಾತುಗಳಂತೆ ಕಾಣುತ್ತಾರೆ. ತುಂಬಾ ಹೊತ್ತು ಅವರುಗಳನ್ನೇ ನೋಡುತ್ತಾ ಒಂದೆಡೆ ನಿಂತುಬಿಟ್ಟಿದ್ದೆ. ಎಷ್ಟೊಂದು ಫೋಟೋಗಳನ್ನು ತೆಗೆದುಕೊಂಡೆ.

ಪ್ರಯಾಣ ಸುಖಕರವಾಗಿತ್ತು. ಅಸ್ಸಾಂನ ರಸ್ತೆಗಳು ನುಣುಪಾಗಿದ್ದವು. ಸೂರ್ಯ ಹದವಾಗಿದ್ದ. ಹಸಿರು ನಗುತ್ತಿತ್ತು. ಸೀರೆಧಾರಿಯರು ನನ್ನಿಷ್ಟದ ಸೈಕಲ್ ತುಳಿಯುತ್ತಿದ್ದರು. ವಿಶಾಲವಾದ ರಸ್ತೆಯಲ್ಲಿ ಎರಡೂ ಬದಿಗೆ ಕಾಣುತ್ತಿತ್ತು. ಬಿದಿರಿನಲ್ಲಿ ಕಟ್ಟಿಕೊಂಡಿದ್ದ ಮನೆಗಳು. ಇನ್ನು ಕಾರಿನಲ್ಲಿ ಕುಳಿತಿರಲು ಸಾಧ್ಯವಾಗಲಿಲ್ಲ. ಕೆಳಗಿಳಿದೆ. ಕಾಲುಗಳು ಹಠ ಹಿಡಿಯುವವರೆಗೂ ನಡೆಯುತ್ತಿದ್ದೆ. ಒಂದು ಬಿದಿರನ ಮನೆಯ ಮುಂದೆ ಇಬ್ಬರು ಬಾಲಕಿಯರು ಅರಿಶಿನ ಬಿಡಿಸುತ್ತಿದ್ದರು. ಅವರಿಗೆ ಅಸ್ಸಾಮಿ ಭಾಷೆ ಬಿಟ್ಟೂ ಮತ್ತ್ಯಾವ ಮಾತೂ ಬಾರದು. ನನ್ನದು ಕನ್ನಡ. ಏನೇನೋ ಮಾತನಾಡಿದೆವು, ನಕ್ಕೆವು. ಬ್ಯಾಗಿನಲ್ಲಿದ್ದ ರವೆಉಂಡೆಕೊಟ್ಟೆ. ಖುಷಿಯಿಂದ ತಿಂದರು. ರಂಜು ಕತ್ತಲಾಗುವ ಮೊದಲು ಮುಂದಿನ ಊರು ಸೇರಬೇಕು ಕಾರು ಹತ್ತಿ ಎಂದು ತಾಕೀತು ಮಾಡಿದ.

ಬೆಟ್ಟದ ತಪ್ಪಲಲ್ಲಿ ನಿಂತಾಗ ಸುಂದರ ಸ್ತ್ರೀಯರು ಮೆಟ್ಟಲುಗಳನ್ನು ಹತ್ತಿ ಇಳಿಯುತ್ತಿದ್ದರು. ಅರುಣಾಚಲ ಪ್ರದೇಶವಾಸಿಗಳಿಗಿಂತ ಮಾಲಿನಿಗೆ ಅಸ್ಸಾಂನ ಜನಗಳೆ ಹೆಚ್ಚು ಭಕ್ತರು. ಒಂದೇ ಗೋಡೆಯ ಆಚೀಚೆ ಜನಗಳಾದರೂ ಇವರ ಅಳತೆ ಆಕಾರ, ಬಾಗು, ವಕ್ರ ತಿರುವುಗಳಲ್ಲಿ ಸಾಮ್ಯತೆಯೇ ಇಲ್ಲದ ಅಂತರ. ಅಸ್ಸಾಂನ ಹೆಂಗಸರು ಇಷ್ಟೊಂದು ಸುಂದರಿಯರು ಎನ್ನುವ ಅನುಭವ ಮೊದಲ ಬಾರಿಗೆ ಆಯ್ತು. ಮೇಖಲ ಎನ್ನುವ ಎರಡು ತುಂಡುಗಳ (ದಕ್ಷಿಣ ಭಾರತದಲ್ಲಿ ಇರುವ ಲಂಗ ದಾವಣಿಯಂತಹ ಉಡುಪು) ಸೀರೆಯನ್ನುಟ್ಟ ಹೆಂಗಸರು ಮತ್ತೊಮ್ಮೆ ತಿರುಗಿ ನೋಡೋಣ ಎನ್ನಿಸುವಷ್ಟು ಸುಂದರಿಯರಿದ್ದಾರೆ. ಅವರ ಬಿಗಿ ಮೈಕಟ್ಟು ಮತ್ತು ಫಳಫಳ ಹೊಳೆಯುವ ತ್ವಚೆಯ ಮೇಲೆ ನನ್ನ ಗಮನ ಹೋಗದೇ ಇರಲು ಸಾಧ್ಯವಿರಲಿಲ್ಲ. ಯಾವುದೇ ಮುಜುಗರವಿಲ್ಲದೆ ಕ್ಯಾಮೆರಾಕ್ಕೆ ಪೋಸು ಕೊಡುತ್ತಿದ್ದರು.

ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಅರುಣಾಚಲ ಪ್ರದೇಶದ ಸುಂದರ ವನಸಿರಿಯಿಂದ ಆವೃತವಾಗಿ, ದಕ್ಷಿಣದಲ್ಲಿ ಬ್ರಹ್ಮಪುತ್ರ ನದಿಯ ದಡವಾಗಿ, ಪಶ್ಚಿಮದಲ್ಲಿ ಲಖೀಂಪುರ ಎನ್ನುವ ಜಿಲ್ಲೆಯನ್ನು ಹೊಂದಿರುವ 3237 ಚದರ ಕಿಲೋಮೀಟರ್ ಅಳತೆಯ ಸುಂದರ ಜಿಲ್ಲೆ ದೇಮಾಜಿ. ಆರಂಭದಲ್ಲಿ ದೇಮಾಲಿ ಎನಿಸಿಕೊಂಡಿದ್ದ ನಗರ ಇಂದು ದೇಮಾಜಿಯಾಗಿದೆ. ಗೌಹಾಟಿಯಿಂದ 12 ಗಂಟೆಗಳ ದೂರದಲ್ಲಿರುವ ಈ ಊರು ಮುಂದಿನ ಊರುಗಳಿಗೆ ಹೋಗುವವರಿಗೆ ತಂಗುದಾಣ ಮಾತ್ರ. ಇದೇ ದೇಮಾಜಿಗೆ ಮಾಲಿನಿ ತಾನ್‌ನಿಂದ ಹಿಂದಿರುಗಿದ್ದೆ. ಹಿಂದಿನ ರಾತ್ರಿ ಉಳಿದು ಕೊಂಡಿದ್ದ ಹೋಟೇಲಿನ ಹಿಂದಿನ ತಿರುವಿನಲ್ಲೇ ಇದೆ ದೇಮಾಜಿ ಕಾಲೇಜು.

2004ನೇ ಇಸವಿಯ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಉಲ್ಫಾ ಭಯೋತ್ಪಾದಕರು ಇಲ್ಲಿ ಬಹು ದೊಡ್ದ ಬಾಂಬ್‌ ಅನ್ನು ಸ್ಪೋಟಿಸಿದ್ದರು. ಅದರ ಪರಿಣಾಮವಾಗಿ ಹದಿನೇಳು ವಿದ್ಯಾರ್ಥಿಗಳು ಮೃತ ಪಟ್ಟು 40 ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಆ ದಿನವೇ ಇದೇ ಜಿಲ್ಲೆಯಲ್ಲಿ ಉಲ್ಫಾದವರಿಂದ ಯೋಜನೆಯಂತೆ ಮೂರು ಸ್ಥಳಗಳಲ್ಲಿ ಬಾಂಬ್ ಸ್ಪೋಟಿಸಲಾಗಿತ್ತು. ರಾಜ್ಯದ ಅಂದಿನ ಮುಖ್ಯ ಮಂತ್ರಿಗಳು ಸೂಪರಿಡೆಂಟ್ ಆಫ್ ಪೊಲೀಸ್ ಅನ್ನು ಕೆಲಸದಿಂದ ವಜಾಗೊಳಿಸಿದ್ದರು. ಈಶಾನ್ಯ ರಾಜ್ಯಗಳಲ್ಲಿ ವಿದ್ಯಾರ್ಥಿ ಚಳುವಳಿಗೆ ರಾಜ್ಯ ರಾಜಕಾರಣದಲ್ಲಿ ಅತೀ ಮಹತ್ವದ ಸ್ಥಾನ ಇರುವುದರಿಂದ, ಸತ್ತ ಹದಿನೇಳು ವಿದ್ಯಾರ್ಥಿಗಳಿಗೆ ಕಾಲೇಜಿನ ಒಳಾವರಣದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಈಗಲೂ ವಿಶೇಷ ದಿನಗಳಲ್ಲಿ ಅಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಮುಗ್ಧ ಜನರ ಮರಣಕ್ಕೆ ಮರುಗುತ್ತಾ, ಬಾಂಬ್ ಸಂಸ್ಕೃತಿಯೆಡೆಗೆ ಕೊನೆಯಿಲ್ಲದ ವಿರೋಧ ತುಂಬಿಕೊಳ್ಳುತ್ತಾ ಅಲ್ಲಿಂದ ಹೊರಟೆ. ಬಲಕ್ಕೆ ತಿರುಗಿದರೆ ಇಟಾನಗರದ ದಾರಿ, ಎಡಕ್ಕೆ ಹೊರಳಿ ದೂರ ದೂರ ಸುಮಾರು 347 ಕಿಲೋಮೀಟರ್‌ಗಳಷ್ಟು ದಾರಿ ಸವೆಸಿದರೆ ಸಿಗುತಿತ್ತು ಮತ್ತೊಂದು ಹೊಸ ಜಾಗ.

About The Author

ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ  ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ.  ‘ರಶೀತಿಗಳು - ಮನಸ್ಸು ಕೇಳಿ ಪಡೆದದ್ದು’, 'ಜೀನ್ಸ್ ಟಾಕ್' ಇವರ ಲಲಿತ ಪ್ರಬಂಧಗಳ ಸಂಕಲನ.

2 Comments

  1. ನೂತನ

    ಚಂದದ ಪ್ರವಾಸ ಕಥನ ಅಂಜಲಿ..ಎಷ್ಟೊಂದು ಆಯಾಮಗಳಿವೆ

    Reply
  2. ವೀಣಾ

    ಓದಿ ಖುಷಿ ಆಯಿತು

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ