Advertisement
“who talks for my country now?: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

“who talks for my country now?: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ವೆಸ್ಟರ್ನ್ ಆಸ್ಟ್ರೇಲಿಯವು ಆಸ್ಟ್ರೇಲಿಯದ ಅತಿ ದೊಡ್ಡ ರಾಜ್ಯ. ಈ ಭೂಖಂಡದ ಸುಮಾರು ಮೂರನೇ ಒಂದು ಭಾಗದಷ್ಟು ದೊಡ್ಡದು. ಆದರೆ ಈ ಮರಳುಗಾಡಿನ ರಾಜ್ಯದಲ್ಲಿ ಊರುಗಳು ವಿರಳ. ಪಶ್ಚಿಮದ ಕಡಲು ಹಾಗು ಉತ್ತರದ ಒಳನಾಡು ತುಂಬಾ ಚೆಂದವಿದೆಯಂತೆ. ಹತ್ತಾರು ಸಾವಿರ ವರ್ಷದ ಹಿಂದಿಂದ ಹಾಗು ಇಲ್ಲಿಗೆ ಬಿಳಿಯರು ಬಂದು ಇಳಿದ ಮೇಲೆ ಇಂದಿಗೂ ಆಸ್ಟ್ರೇಲಿಯಾದ ಮೂಲವಾಸಿಗಳು ಅದನ್ನು ತಮ್ಮ ನೆಲೆಯಾಗಿಸಿಕೊಂಡಿದ್ದಾರೆ. ಖಂಡದ ಸುತ್ತಲೂ ಕಡಲತಡಿಯಲ್ಲಿ ಊರು ಬೆಳೆದು ಜನವಸತಿ ಹೆಚ್ಚಿದರೂ ಈ ಒಳನಾಡು ಜನವಿರಳವಾಗಿಯೇ ಉಳಿದಿದೆ.

ಅತ್ಯಂತ ತೀವ್ರ ತಾಪಮಾನಗಳ ಎಡೆಯಾದ್ದರಿಂದ ಚಿನ್ನ ಹಾಗು ಇನ್ನಿತರ ಲೋಹದ ಅದಿರು ಇಲ್ಲಿ ಪತ್ತೆಯಾಗುವವರೆಗೂ ಬಿಳಿಯರಿಗೆ ಅಲ್ಲಿಯ ನೆಲದ ಬಗ್ಗೆ ಆಸಕ್ತಿಯಾಗಲೀ ಉತ್ಸಾಹವಾಗಲೀ ಇರಲಿಲ್ಲ ಎಂದೇ ಹೇಳಬೇಕು. ಆದರೆ ಅವು ಪತ್ತೆಯಾದ ಮೇಲೆ ಆ ನೆಲೆ ಹಾಗು ನೆಲದ ಮೇಲಿನ ಅತ್ಯಾಚಾರ ನಿಂತಿಲ್ಲ.

ಮಾಧ್ಯಮಗಳ ಹಾಗು ಮುಖ್ಯವಾಹಿನಿಗಳ ಗಮನಕ್ಕೆ ಸಿಗದ ಎಷ್ಟೋ ದುರಾಚಾರಗಳು ಅಲ್ಲಿ ನಡೆದಿವೆ, ನಡೆಯುತ್ತಲೇ ಇದೆ. ಭೌಗೋಲಿಕ ದೂರ ಎಂಬ ಕಾರಣ ತಂತ್ರಜ್ಞಾನ ಬೆಳೆದಂತೆ ದಿನೇದಿನೇ ಸಡಿಲಾಗಿ ಕಾಣುತ್ತಿದೆ. ಅದಕ್ಕಿಂತಲೂ ಆಳವಾದ ಹಾಗು ವಿಷಾದಮಯವಾದುದು ಬಹುಸಂಖ್ಯಾತ ಮುಖ್ಯ ಜನಾಂಗದ ತಣ್ಣನೆಯ ಅವಜ್ಞೆ. ಈ ಅವಜ್ಞೆಯ ಒಂದು ಮುಖ ಸರ್ಕಾರ ಹಾಗು ವ್ಯವಸ್ಥೆಯ ಮೇಲಿನ ಅತಿ ವಿಶ್ವಾಸ. ಇನ್ನೊಂದು ಅಸಹ್ಯವಾದ ಮುಖ – ರೇಸಿಸಂ.

ಹೋದ ವರ್ಷದ “ಆಸ್ಟ್ರೇಲಿಯ ಡೇ” ಮರುದಿನ ಜನವರಿ ೨೭ರಂದು ಈ ರಾಜ್ಯದ ವಾರ್ಬರ್ಟನ್ ಎಂಬ ಸಣ್ಣ ಊರಲ್ಲಿ ೪೬ ವರ್ಷದ ವಾರ್ಡ್ ಎಂಬ ಅಬಾರಿಜಿನಲ್ ಹಿರಿಯನನ್ನು ಕುಡಿದು ಕಾರುಬಿಡುತ್ತಿದ್ದ ಕಾರಣಕ್ಕೆ ಪೋಲೀಸರು ಹಿಡಿದು ಚಾರ್ಜ್ ಮಾಡಿದರು. ಸ್ಥಳಿಯ ಲಾಕಪ್ಪಿಗೆ ಕರಕೊಂಡು ಹೋಗಿ ನಂತರ ೫೭೦ ಕಿ.ಮಿ ದೂರದ ಲೇವರ್ಟ್‌ನ್ ಊರಿನ ಕೋರ್ಟಿಗೆ ವ್ಯಾನೊಂದರಲ್ಲಿ ಕರೆದೊಯ್ದರು. ಅಲ್ಲಿ ಅವನಿಗೆ ಸಿಗಬೇಕಿದ್ದ ಬೇಲ್ ಸಿಕ್ಕದೆ ಮತ್ತೆ ೩೫೦ ಕಿ.ಮಿ ದೂರದ ಕಾಲ್‌ಗೂರ್ಲಿಗೆ ಮತ್ತೊಂದು ವ್ಯಾನ್ ಹಿಂದಿನ ಡಬ್ಬಿಯಲ್ಲಿಟ್ಟು ಸಾಗಿಸಿದರು.

ಕಾಲ್‌ಗೂರ್ಲಿ ತಲುಪಿದಾಗ ವ್ಯಾನಿನಲ್ಲಿ ವಾರ್ಡ್ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆಸ್ಪತ್ರೆಗೆ ಸಾಗಿಸಿದರು. ವ್ಯಾನಿನ ಹಿಂಬದಿಯ ಡಬ್ಬಿಯಲ್ಲಿ ತಾಪಮಾನ ೫೦ ಡಿಗ್ರಿಯಷ್ಟು ಹೆಚ್ಚಿತ್ತು. ಸುಡುಸುಡುವ ಮರಳುಗಾಡಿನ ನಡುವೆ ಎಲ್ಲಿಯೂ ನಿಲ್ಲಿಸಿ ಅವನಿಗೆ ಒಂದು ಗುಟುಕು ನೀರು ಕೂಡ ಕೊಟ್ಟಿರಲಿಲ್ಲ. ಡಾಕ್ಟರರು ಎಷ್ಟೇ ಪ್ರಯತ್ನಿಸಿದರೂ ಅವನ ದೇಹವನ್ನು ತಂಪಾಗಿಸಲು ಆಗಲಿಲ್ಲ. ವ್ಯಾನಿನಲ್ಲಿ ಬಿದ್ದುದರಿಂದ ಅವನ ತಲೆಗೆ ಪೆಟ್ಟುಬಿದ್ದು ರಕ್ತ ಒಸರುತ್ತಿತ್ತು. ಮರಳುಗಾಡಿನ ಬಿಸಿಲಿಗೆ ಕಾದ ವ್ಯಾನಿನ ನೆಲಕ್ಕೆ ತಗುಲಿದ್ದ ಅವನ ಹೊಟ್ಟೆಯ ಭಾಗ ಸುಟ್ಟು ಹೋಗಿತ್ತು. ಡಾಕ್ಟರರ ಎಲ್ಲ ಪ್ರಯತ್ನಗಳನ್ನೂ ಮೀರಿ ಐದು ಮಕ್ಕಳ ತಂದೆ, ವಾರ್ಬರ್ಟನ್ನಿನ ಮೂಲವಾಸಿಗಳ ಹಿರಿಯ ವಾರ್ಡ್ ದುರಂತಮಯವಾಗಿ ಅಸುನೀಗಿದ.

ವಾರ್ಡ್‌ನ ಸಾವಿನ ಹೊತ್ತಿಗಾಗಲೇ ೨೦೦೮ರಲ್ಲಿ ಎಂಟು ಜನ ಮೂಲವಾಸಿಗಳು ಪೋಲೀಸ್ ಬಂಧನದಲ್ಲಿ ತೀರಿಕೊಂಡಿದ್ದರು. ಸಿಡ್ನಿಯಂತಹ ಊರಲ್ಲಿ ಎಂಟು ಜನ ಬಿಳಿಯರೇನಾದರೂ ಪೋಲೀಸ್ ಬಂಧನದಲ್ಲಿ ಸತ್ತಿದ್ದರೆ ದೇಶ ನಡುಗುವಂತಹ ಹಗರಣವಾಗುತ್ತಿತ್ತು. ಆದರೆ ದೂರದ ಈ ದುರಂತಕ್ಕೆ ದೇಶ ತಣ್ಣಗೇ ಇತ್ತು. ಈಗಲೂ ಇದೆ. ವಾರ್ಡ್‌ನನ್ನು ಬಂಧಿಸಲು ಗಟ್ಟಿಯಾದ ಕಾರಣವಿರಲಿಲ್ಲ. ಈ ದೇಶದ ಜನನಿಬಿಡ ಊರುಗಳಲ್ಲಿ ಆಟಗಾರರೋ ಅಥವಾ ಇನ್ನಾರೋ ಜನಪ್ರಿಯ ಜನ ಕುಡಿದು ಕಾರೋಡಿಸಿ ಸಿಕ್ಕಿಕೊಂಡರೆ, ಅವರು ಚಾರ್ಜ್ ಮಾಡಿದಾಗ ಗಲಾಟೆ ಮಾಡಿದರೂ ಕೂಡ ಮನೆಗೆ ಹೋಗಲು ಬಿಡುತ್ತಾರೆ. ಆದರೆ ಮರಳುಗಾಡಿನ ಊರಲ್ಲಿ ಹಾಗಾಗಲಿಲ್ಲ. ಮೂಲವಾಸಿ ವಾರ್ಡ್ ಕೂಡ ತನ್ನ ಜನರ ಬಗ್ಗೆ ಆಸ್ಟ್ರೇಲಿಯದಲ್ಲಿ ಹಾಗು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದ. ಆದರೆ ಅವನಿಗೆ ಬೇಲ್ ಕೊಡಬೇಕಾದ ಅಧಿಕಾರಿ “ಅವನೊಬ್ಬ ಕುಡಿದ ಅಬಾರಿಜಿನಲ್ ಮನುಷ್ಯ” ಎಂದಷ್ಟೇ ತಾನು ನೋಡಿದ್ದು. ಹೆಚ್ಚೇನೂ ಗೊತ್ತಿರಲಿಲ್ಲ ಅಂದಿದ್ದಾನೆ.

ಆ ಹಿರಿಯ ಜೀವದ ಸಾವಿನ ಬಗ್ಗೆ ಈಗ ನಡೆದ ಇನ್‌ಕ್ವೆಸ್ಟ್‌ನಲ್ಲಿ ಹೊರಬಿದ್ದ ಸಂಗತಿಗಳು ಅವನ ಸಾವನ್ನು ಮತ್ತೂ ದಾರುಣ ಮಾಡಿವೆ. ಏಕೆಂದರೆ ಅವನನ್ನು ಸಾಗಿಸಲು ಬಳಸಿದ ವ್ಯಾನುಗಳ ಬಗ್ಗೆ ಮೂರ್ನಾಕು ವರ್ಷಗಳಿಂದಲೇ ದೂರುಗಳಿದ್ದವು. ಪೋಲೀಸ್ ಬಂಧಿತರ ಸಾವುಗಳನ್ನು ತನಿಖೆ ಮಾಡಿದವರು ಆ ವ್ಯಾನುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಎಷ್ಟೋ ವೇಳೆ ಸುಡುವ ಮರಳುಗಾಡಿನ ನಡುವಲ್ಲಿ ಅವು ಕೆಟ್ಟು ನಿಂತ ಹಲವಾರು ಘಟನೆಗಳನ್ನು ದಾಖಲಿಸಿದ್ದರು. ರಾಜ್ಯದ ಮಂತ್ರಿಗೆ ಆ ರಿಪೋರ್ಟುಗಳು ತಲುಪಿತ್ತು ಕೂಡ. “ಮೈನಿಂಗ್ ಬೂಮ್” ಎಂದೇ ಪ್ರಖ್ಯಾತವಾದ ಆ ವರ್ಷಗಳಲ್ಲಿ ದುಡ್ಡಿನ ಹೊಳೆ ಹರಿಯುತ್ತಿದ್ದರೂ, ಅಲ್ಲಿನ ರಾಜ್ಯದ ಮಂತ್ರಿಮಂಡಲ ಈ ವ್ಯಾನುಗಳಿಗೆ ದುಡ್ಡು ಖರ್ಚು ಮಾಡಲು ಹಿಂಜರಿದಿತ್ತು. ಆ ನಿರ್ಧಾರದ ಹಿಂದೆ ಮೂಲವಾಸಿಗಳೇ ಹೆಚ್ಚಾಗಿ ಸಾಗಿಸಲ್ಪಡುವ ವ್ಯಾನೆಂಬ ನಿಲುವು ದಟ್ಟವಾಗಿ ಕೆಲಸಮಾಡಿರುವುದು ನಿರ್ವಿವಾದ. ಇವೆಲ್ಲಾ ನೇರವಾಗಿ ಬೊಟ್ಟುಮಾಡಲಾಗದ, ಹಲವು ಮಜಲುಗಳಲ್ಲಿ ಸಾಂಸ್ಥಿಕವಾಗಿ ರೇಸಿಸಂ ಕೆಲಸ ಮಾಡುವ ಜಟಿಲವಾದ ಬಗೆಗಳು. ಆದರೂ, ಈ ಇನ್‌ಕ್ವೆಸ್ಟ್ ನಡೆಸಿದ ಕಾರನರ್ ವಾರ್ಡನ ಸಾವಿಗೆ ಖಾಸಗಿ ಸಂಸ್ಥೆ, ಪೋಲೀಸ್ ಹಾಗು ಸರ್ಕಾರವೇ ಜವಾಬ್ದಾರಿ ಎಂದು ತೀರ್ಪಿತ್ತಿತು. ಅದಕ್ಕಿನ್ನು ಶಿಕ್ಷೆ ಯಾರಿಗೆ ಏನು ಎಂದು ನಿರ್ಧಾರವಾಗಬೇಕಷ್ಟೆ.

ಜಾಗತಿಕತೆಯ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಸಾಂಸ್ಥಿಕ ದುರಾಚಾರಗಳೂ ಜಾಗತಿಕವಾಗುವುದನ್ನು ಎಚ್ಚರಿಕೆಯಿಂದ ಗಮನಿಸಬೇಕು. ಏಕೆಂದರೆ ವಾರ್ಡ್‌ನನ್ನು ಸಾಗಿಸಲು ಪೋಲೀಸರು ಅವಲಂಬಿಸಿದ್ದು Global Solutions Limited ಎಂಬ ಖಾಸಗಿ ಸಂಸ್ಥೆಯನ್ನು. ಅದೊಂದು ಸೆರೆಮನೆಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆ. ಆಸ್ಟ್ರೇಲಿಯದ ಸರ್ಕಾರ ಆಶ್ರಯ ಬೇಡಿ ಬಂದ ನಿರಾಶ್ರಿತರನ್ನು ಕ್ರೂರವಾಗಿ ನಡೆಸಿಕೊಳ್ಳಲು ಇದೇ ಸಂಸ್ಥೆಯನ್ನು ಬಳಸಿಕೊಂಡಿತ್ತು. ಆಗಿನಿಂದಲೂ ಈ ಸಂಸ್ಥೆಯ ಬಗ್ಗೆ ದೂರು, ಅನುಮನದ ಕೂಗು ಏಳುತ್ತಲೇ ಇದೆ. ಆದರೂ ಅವರನ್ನೇ ಸರ್ಕಾರ ಇಂದಿಗೂ ಬಳಸುತ್ತಿದೆ. ಈ ಅಮೇರಿಕನ್ ಕಂಪನಿಯನ್ನು ಈಗ ಯೂರೋಪಿನ G4S ಎಂಬ ಜಾಗತಿಕ ಕಂಪನಿ ಕೊಂಡಿದೆ. ಆ ಕಂಪನಿ ಇಂದಿಗೂ ತನ್ನ ತಪ್ಪಿಗೆ ಯಾವುದೇ ಕ್ಷಮೆ ಕೇಳದೆ, ತನ್ನ ಕೆಲಸಗಾರರು, ಕಂಪನಿಯ ಪಾಲಸಿ ಅನ್ವಯ ನಡಕೊಂಡಿದ್ದು ಯಾವುದೇ ತಪ್ಪು ಮಾಡಿಲ್ಲ ಎಂದೇ ಸಾಧಿಸುತ್ತಿದೆ.

ಪೂರ್ವ-ಪಶ್ಚಿಮ, ಹಿಂದುಳಿದ-ಮುಂದುವರಿದ ದೇಶ ಎಂದೆಲ್ಲಾ ಬೊಟ್ಟುಮಾಡುವ ವ್ಯಸನದಾಚೆ ಆಧುನಿಕ ಮನುಷ್ಯರಾಗಿ ನಿಂತು ಇವನ್ನೆಲ್ಲಾ ಗಮನಿಸಬೇಕು. ಇಲ್ಲದಿದ್ದರೆ ವಾರ್ಡ್‌ನಂತವರ ಜೀವಕ್ಕೆ ಮತ್ತೆ ಅವಮಾನ ಮಾಡಿದಂತಾಗುತ್ತದೆ. ೨೧ನೇ ಶತಮಾನದಲ್ಲೂ ಇಂತಹ ಕ್ರೂರ ನಡತೆಗಳು ನಮ್ಮ ನಡುವೆ ನಡೆಯುವುದು ದಿಟವಾಗಿಯೂ ತೀವ್ರವಾಗಿ ಕಾಡುವ ಸಂಗತಿ. ನಾನಿಲ್ಲಿ ಹೇಳಿರುವುದು ನನ್ನ ಪರಿಸರದಲ್ಲಿ ನಡೆದಿರುವ ದುರಂತವನ್ನು. ಇಂತಹವು ಎಲ್ಲ ದೇಶಗಳಲ್ಲೂ ಒಂದಲ್ಲ ಒಂದು ಬಗೆಯಲ್ಲಿ ನಡೆದೇ ಇರುತ್ತದೆ. ಅಲ್ಲಿ ಹೆಚ್ಚು ಇಲ್ಲಿ ಕಡಿಮೆ ಎಂಬ ಸಬೂಬು ಇಲ್ಲಿ ಅಸಂಗತ. ಹುಟ್ಟಿದಲ್ಲೇ ಬಾಳುವವರಂತೆಯೇ, ಇನ್ನೊಂದು ಕಡೆಗೆ ಬಂದು ಬೇರುಬಿಡುವವರ ಮನಸ್ಸು ಕೂಡ ಮುಖ್ಯವಾಹಿನಿಯ ಜತೆ ಸೇರಿ ಜಡ್ಡುಕಟ್ಟದಂತೆ ಸದಾ ಹೋರಾಡುತ್ತಲೇ ಇರಬೇಕಾಗುತ್ತದೆ.

ಗಿಬ್ಸನ್ ಮರಳುಗಾಡಿನ ಅಲೆಮಾರಿ ಜನಾಂಗದ ಅಳಿದುಳಿದ ಕೆಲವರಲ್ಲಿ ವಾರ್ಡ್ ಕೂಡ ಒಬ್ಬನಾಗಿದ್ದ. ಅವನನ್ನು ಬಂಧಿಸಿ ಆಸ್ಟ್ರೇಲಿಯದ ಚಿನ್ನದ ಗಣಿಗಳ ಮರಳುಗಾಡಿನಗಲಕ್ಕೂ ಬೇಯುವಂತಹ ವ್ಯಾನಿನ ಡಬ್ಬಿಯಲ್ಲಿ ಕೊಂಡೊಯ್ದು ಕೊಂದಿದ್ದಾರೆ. ಆ ಚಿನ್ನದ ಗಣಿಗಳು ಈ ದೇಶಕ್ಕೆ ಸಂಪತ್ತು ಸವಲತ್ತುಗಳನ್ನು ದಯಪಾಲಿಸಿತ್ತು ಎಂಬುದು ಸಣ್ಣ ವಿಪರ್ಯಾಸ ಅಷ್ಟೆ. ವಾರ್ಡ್‌ನಂತವರ ನೆಲೆಯಾಗಿದ್ದ ಗಿಬ್ಸನ್ ಮರಳುಗಾಡಿನ ಸೆರಗಿನಲ್ಲಿರುವ ಕಾಲ್‌ಗೂರ್ಲಿಯ ರಾಷ್ಟ್ರೀಯ ಮೈನಿಂಗ್ ಮ್ಯೂಸಿಯಂನ ಗೋಡೆಯ ಮೇಲೆ “who talks for my country now?” ಎಂಬ ಇದೇ ವಾರ್ಡ್‌ನ ಹೇಳಿಕೆಯನ್ನು ಒಮ್ಮೆ ಕೆತ್ತಲಾಗಿತ್ತು. ಇದನ್ನು ವಿಪರ್ಯಾಸ ಅನ್ನಲೂ ಮನಸ್ಸು ಒಪ್ಪುತ್ತಿಲ್ಲ.

About The Author

ಸುದರ್ಶನ್

ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ