ಇಲ್ಲಿನ ಬಿಸಿನೀರ ಬುಗ್ಗೆಯ ಅನುಭವವನ್ನು ಸ್ವಲ್ಪವಾದರೂ ಪಡೆದುಕೊಳ್ಳಬೇಕೆಂದಲ್ಲಿ ನೀವು ಈ ಪರೀಕ್ಷೆ ಉತ್ತರ ಬಾಗಿಲಿನ ಹೊರಗೆ ಅನತಿ ದೂರದಲ್ಲಿ ಹರಿವ ಗಾರ್ಡನರ್ ನದೀತೀರಕ್ಕೆ ನಡೆದುಕೊಂಡು ಹೋಗಬೇಕು. ಅಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ತಣ್ಣಗೆ ಹರಿವ ನದಿಗೆ ಪಕ್ಕದ ಭೂಮಿಯಾಳದೊಳಗಿಂದ ಬಿಸಿನೀರ ಬುಗ್ಗೆಯೊಂದು ಹರಿದು ಬಂದು ಸೇರಿಕೊಳ್ಳುತ್ತೆ. ಇಲ್ಲಿ ಕೂತರೆ ಸ್ನಾನದ ನೀರನ್ನು ಹದಮಾಡಿಕೊಳ್ಳುವಂತೆ ಬಿಸಿ ನೀರು ತಣ್ಣೀರು ಬೆರೆಸಿಕೊಳ್ಳುತ್ತ ಬೆಚ್ಚಗೆ ಕುಳಿತುಕೊಳ್ಳಬಹುದು. ಆ ಬಗ್ಗೆ ಸೇರುವ ಜಾಗದಲ್ಲಿ ಒಂದು ಕಾಲನ್ನು ತಣ್ಣೀರಲ್ಲೂ, ಇನ್ನೊಂದು ಕಾಲನ್ನು ಬಿಸಿನೀರಲ್ಲೂ ಇಟ್ಟು ಕುಳಿತುಕೊಳ್ಳಬಹುದು.
ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ಅಮೆರಿಕಾದ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನದ ಕುರಿತು ಬರೆದಿದ್ದಾರೆ ವೈಶಾಲಿ ಹೆಗಡೆ
ಕಣ್ಣು ಹಾಯಿಸಿದಲ್ಲೆಲ್ಲ ಭುಸುಗುಡುವ ಬಿಸಿನೀರ ಬುಗ್ಗೆ. ಕಾಲಿಟ್ಟಲ್ಲೆಲ್ಲ ಪದ ಕುಸಿಯೆ ಪಾತಾಳ ಮಂಕುತಿಮ್ಮ ಎಂಬಂತಿಹ ಸೃಷ್ಟಿವೈಚಿತ್ರ್ಯ! ಆಳ ಕಣಿವೆಗಳ ಕೊರಕಲಿನಲ್ಲಿ ಧುಮ್ಮಿಕ್ಕುವ ಜಲಪಾತಗಳ ರಾಶಿ. ಅನಂತ ಆಗಸದೆತ್ತರಕ್ಕೂ ನಿಂತ ಗುಡ್ಡಸಾಲು, ತಪ್ಪಲಲ್ಲಿ ಹಾಸಿದ ಹುಲ್ಲುಗಾವಲು. ಬಣ್ಣಬಣ್ಣದ ಕುದಿನೀರ ಕೊಳ ಕಣ್ಮುಂದೆ. ಎಲ್ಲೆಲ್ಲೂ ಬಿಡುಬೀಸಾಗಿ ತಿರುಗುವ ಮಹಿಷಮಂದೆ!
ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್! ಅದೆಂಥ ಮಾಯಾಲೋಕ! ಅಲ್ಲಿನ ಒಂದೊಂದು ಕ್ಷಣವೂ ಶಿವಸಾಕ್ಷಾತ್ಕಾರ!
ಮಾರ್ಚ್ ೧ನೇ ತಾರೀಕು ೧೮೭೨ರಲ್ಲಿ ಅಮೆರಿಕಾದ ಮೊಟ್ಟಮೊದಲ ರಾಷ್ಟ್ರೀಯ ಉದ್ಯಾನವೆಂದು ನೇಮಕಗೊಂಡು ಕಾಯ್ದಿಟ್ಟ ಪ್ರದೇಶವಾಗಿ ಘೋಷಿಸಲ್ಪಟ್ಟಿತು ಯೆಲ್ಲೋಸ್ಟೋನ್. ಈ ೩೫೦೦ ಚದರ ಮೈಲಿಗಳ, ಬಹುತೇಕ ವಯೋಮಿಂಗ್ ಮತ್ತು ಕೆಲಭಾಗ ಮೊಂಟಾನಾ ಮತ್ತು ಐಡಾಹೊ ರಾಜ್ಯಗಳಲ್ಲಿ ಅಂದರೆ ಒಟ್ಟೂ ಮೂರುರಾಜ್ಯಗಳಲ್ಲಿ ಹರಡಿಕೊಂಡಿರುವ ಈ ಪ್ರದೇಶ ಜಗತ್ತಿನ ಬಹು ಅಪರೂಪದ ನೈಸರ್ಗಿಕ ಅದ್ಭುತ. ಯಾರೂ ಕುಲಗೆಡಿಸದಂತೆ ಜತನದಿಂದ ಕಾಯ್ದುಕೊಂಡು ಬಂದ ಪರಿಸರ ವ್ಯವಸ್ಥೆ. ಈ ಭೂಪ್ರದೇಶಕ್ಕೆಲ್ಲಾ ನೀರುಣಿಸುವ ಯಲ್ಲೋಸ್ಟೋನ್ ನದಿಗೆ ನೀರುಣಿಸುವವು ಇಲ್ಲಿನ ಹಲವಾರು ಬಿಸಿನೀರ ಬುಗ್ಗೆಗಳು. ಇಲ್ಲಿನ ಪ್ರಾಣಿ ಪಕ್ಷಿ ಸಸ್ಯ ಸಮೂಹ ಒಂದು ಸೂಕ್ಷ್ಮ ಎಳೆಯಲ್ಲಿ ನೇಯ್ದುಕೊಂಡಂತೆ ಸಮತೋಲನದಲ್ಲಿ ನಡೆಯುತ್ತಿರುವ ನಾಜೂಕು ನೈಸರ್ಗಿಕ ಲೋಕ ಯೆಲ್ಲೋಸ್ಟೋನ್.
ಈ ಜಗತ್ತಿನಲ್ಲಿ ದೇವರ ಪ್ರಯೋಗಶಾಲೆ ಎಂಬಂತಾ ಪ್ರದೇಶವೇನಾದರೂ ಇದ್ದಲ್ಲಿ ಅದು ಖಂಡಿತ ಯೆಲ್ಲೋಸ್ಟೋನ್ ಇದ್ದಿರಬೇಕು. ಅಲ್ಲಿ ಅಣುರೇಣು ತೃಣಕಾಷ್ಟವೆಲ್ಲ ಹುಟ್ಟುತ್ತಾ ವಿಕಾಸಗೊಳ್ಳುತ್ತ ಭೂಮಿ ಮಿಲಿಯಗಟ್ಟಲೆ ವರ್ಷಗಳ ಹಿಂದೆ ಇದ್ದಿರಬಹುದಾದ ಹೊಳಹೊಂದನ್ನು ತೋರಿಸುತ್ತೆ. ಒಂದು ಲೆಕ್ಕದ ಪ್ರಕಾರ ಯೆಲ್ಲೋಸ್ಟೋನ್ ಉದ್ಯಾನದಲ್ಲಿ ಹತ್ತುಸಾವಿರಕೂ ಮಿಕ್ಕಿ ಬಿಸಿನೀರ ಬುಗ್ಗೆ, ಕೊಳಗಳಿವೆ. ಕೆಲವು ಕುಡಿಯುತ್ತಲೂ, ಎಲವೂ ಬೆಚ್ಚಗೂ, ಕೆಲವು ಸ್ಫಟಿಕ ನೀಲಿಯೂ, ಮತ್ತೆ ಕೆಲವು ತನ್ನೊಳಗಿನ ಖನಿಜಕ್ಕನುಗುಣವಾಗಿ ಬಣ್ಣಬಣ್ಣದವೂ, ಮತ್ತೊಂದಿಷ್ಟು, ಕುದಿ ಮಣ್ಣಿನ ಹೊಂಡಗಳೂ, ಮತ್ತೆ ಕೆಲವು ಎತ್ತರೆತ್ತರ ಆಗಾಗ ಚಿಮ್ಮುವ ಕಾರಂಜಿಗಳು. ಜಗತ್ಪ್ರಸಿದ್ಧ “ಓಲ್ಡ್ ಫೇತ್ಫುಲ್” ಬಗ್ಗೆ ಇಂದಿಗೂ ತಾಸಿಗೊಮ್ಮೆಯಂತೆ ಕುಕ್ಕರ್ ಸೀಟಿ ಹಾರಿದಂತೆ ಸಿಳ್ಳೆಹೊಡೆಯುತ್ತಾ ಭೂಮಿಯೊಡಲಿಂದ ಎದ್ದು ೧೦೦-೧೮೫ ಅಡಿಗಳಷ್ಟು ಎತ್ತರಕ್ಕೆ ಚಿಮ್ಮುತ್ತದೆ. ಜಗತ್ತಿನ ಮೂರನೇ ವಿಶಾಲ ಕುದಿವ ಸರೋವರ “ಗ್ರಾಂಡ್ ಪ್ರಿಸ್ಮಾಟಿಕ್ ಸ್ಪ್ರಿಂಗ್” ಕೂಡ ಇಲ್ಲೇ ಇದೆ. ಈ ಸರೋವರದ ಸೌಂದರ್ಯ ನಿಜಕ್ಕೂ ಅನೂಹ್ಯ. ಕಡುನೀಲಿ ಕನ್ನಡಿಯಂತ ಗೋಳದ ಸುತ್ತ ಬಂಗಾರದ ಕಟ್ಟು ಹಾಕಿಟ್ಟಂತೆ ತೋರುವ ಈ ಸರೋವರ ತನ್ನೊಡಲ ಖನಿಜದಿಂದಾಗಿ ಮತ್ತು ೭೦ ಡಿಗ್ರಿ ಸೆಂಟಿಗ್ರೇಡಿನ ತಾಪಮಾನದಲ್ಲಿ ಹುಟ್ಟುತ್ತಲಿರುವ ಸೂಕ್ಷ್ಮಜೀವಿಗಳಿಂದಾಗಿ ವಿಶಿಷ್ಟ ಬಣ್ಣಗಳನ್ನು ಹೊಂದಿದೆ. ಕಾಮನಬಿಲ್ಲಿನ ಬಣ್ಣಗಳಂತೆ ತೋರುವ ಈ ಸರೋವರ ಬೆಳಕಿನ ವಕ್ರೀಭವನವನ್ನು ತೋರುವ ಪ್ರಿಸಂನಂತೆನಿಸುವುದರಿಂದ ಆ ಹೆಸರು ಬಂದಿದೆ.
ಇದು ಹತ್ತಿರದ ಹಲವು ಚಿಕ್ಕ ಪುಟ್ಟ ಬುಗ್ಗೆಗಳನ್ನು ಬೆಸೆದು ವಿಶಿಷ್ಟ ಸೂಕ್ಷ್ಮ ಜೀವಿ ಜೀವಸಂಕುಲದ ವ್ಯವಸ್ಥೆಯನ್ನು ಕಾಯ್ದುಕೊಂಡಿದೆ. ಇದರಂತೆ ಇಲ್ಲಿ ಪಚ್ಚೆಕಲ್ಲಿನಂತೆ ತೋರುವ ಎಮರಾಲ್ಡ್ ಪೂಲ್, ಬೊಯ್ಲಿಂಗ್ ಮಡ್ ಪಾಟ್, ಪೇಂಟರ್ಸ್ ಪ್ಯಾಲೆಟ್, ಮ್ಯಾಮತ್ ಹಾಟ್ ಸ್ಪ್ರಿಂಗ್ ಹೀಗೆ ನೀವು ಅವುಗಳ ಹೆಸರಿನ ಮೇಲಿಂದಲೇ ಊಹಿಸಿಕೊಳ್ಳಬಹುದಾದ ಹಲವು ಬಗೆಯ ಬುಗ್ಗೆಗಳೂ, ಕೊಳಗಳೂ ಇವೆ. ಇಲ್ಲಿನ ಯಾವುದೇ ಬುಗ್ಗೆಗಳನ್ನಾಗಲೀ, ಕೊಳಗಳನ್ನಾಗಲೀ ಮುಟ್ಟುವಂತಿಲ್ಲ. ಅವುಗಳ ಮೂಲ ಸಮತೋಲನವನ್ನು ಹದಗೆಡಿಸುವಂತಿಲ್ಲ. ಹಲವು ಬುಗ್ಗೆಗಳಂತೂ ಕುದಿವ ಆಸಿಡ್ಗಳು. ನೀವು ಕೈಹಾಕಹೋದರೆ ನಿಮ್ಮ ಅವಶೇಷ ಹೋಗಲಿ ನಿಮ್ಮ ಅಸ್ತಿತ್ವದ ಲವಲೇಶವೂ ಇಲ್ಲಿ ಸಿಕ್ಕಲಿಕ್ಕಿಲ್ಲ.
ಇಲ್ಲಿನ ಬಿಸಿನೀರ ಬುಗ್ಗೆಯ ಅನುಭವವನ್ನು ಸ್ವಲ್ಪವಾದರೂ ಪಡೆದುಕೊಳ್ಳಬೇಕೆಂದಲ್ಲಿ ನೀವು ಈ ಪರೀಕ್ಷೆ ಉತ್ತರ ಬಾಗಿಲಿನ ಹೊರಗೆ ಅನತಿ ದೂರದಲ್ಲಿ ಹರಿವ ಗಾರ್ಡನರ್ ನದೀತೀರಕ್ಕೆ ನಡೆದುಕೊಂಡು ಹೋಗಬೇಕು. ಅಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ತಣ್ಣಗೆ ಹರಿವ ನದಿಗೆ ಪಕ್ಕದ ಭೂಮಿಯಾಳದೊಳಗಿಂದ ಬಿಸಿನೀರ ಬುಗ್ಗೆಯೊಂದು ಹರಿದು ಬಂದು ಸೇರಿಕೊಳ್ಳುತ್ತೆ. ಇಲ್ಲಿ ಕೂತರೆ ಸ್ನಾನದ ನೀರನ್ನು ಹದಮಾಡಿಕೊಳ್ಳುವಂತೆ ಬಿಸಿ ನೀರು ತಣ್ಣೀರು ಬೆರೆಸಿಕೊಳ್ಳುತ್ತ ಬೆಚ್ಚಗೆ ಕುಳಿತುಕೊಳ್ಳಬಹುದು. ಆ ಬಗ್ಗೆ ಸೇರುವ ಜಾಗದಲ್ಲಿ ಒಂದು ಕಾಲನ್ನು ತಣ್ಣೀರಲ್ಲೂ, ಇನ್ನೊಂದು ಕಾಲನ್ನು ಬಿಸಿನೀರಲ್ಲೂ ಇಟ್ಟು ಕುಳಿತುಕೊಳ್ಳಬಹುದು. ನೀವು ಯೆಲ್ಲೋಸ್ಟೋನ್ವರೆಗೆ ಹೋಗಿದ್ದಾದಲ್ಲಿ, ಈ ಆನಂದದಾಯಕ ಅನುಭವವನ್ನು ಪಡೆಯದೇ ಹಿಂದಿರುಗಬೇಡಿ.
ಈ ಸರೋವರದ ಸೌಂದರ್ಯ ನಿಜಕ್ಕೂ ಅನೂಹ್ಯ. ಕಡುನೀಲಿ ಕನ್ನಡಿಯಂತ ಗೋಳದ ಸುತ್ತ ಬಂಗಾರದ ಕಟ್ಟು ಹಾಕಿಟ್ಟಂತೆ ತೋರುವ ಈ ಸರೋವರ ತನ್ನೊಡಲ ಖನಿಜದಿಂದಾಗಿ ಮತ್ತು ೭೦ ಡಿಗ್ರಿ ಸೆಂಟಿಗ್ರೇಡಿನ ತಾಪಮಾನದಲ್ಲಿ ಹುಟ್ಟುತ್ತಲಿರುವ ಸೂಕ್ಷ್ಮಜೀವಿಗಳಿಂದಾಗಿ ವಿಶಿಷ್ಟ ಬಣ್ಣಗಳನ್ನು ಹೊಂದಿದೆ.
ಇಲ್ಲಿ ಬರೀ ಬಿಸಿನೀರ ಬುಗ್ಗೆಯಷ್ಟೇ ಅಲ್ಲ ಇರುವುದು, ಜಿಲ್ಲೆಂದು ಹಾರುವ ಬಿಸಿನೀರ ಬುಗ್ಗೆಯ ಪಕ್ಕದಲ್ಲೇ ಇದೆ ಮೇಯುವ ಅಸಂಖ್ಯ ಪ್ರಾಣಿ ಸಂಕುಲ. ಅಲ್ಲೇ ಕೊತಕೊತ ಕುದಿವ ಸಲ್ಫರ್ ಹೊಂಡದೊಳಗಡೆ ರೂಪುಗೊಳ್ಳುತ್ತಿರುವ ಏಕಕೋಶ ಜೀವಿಗಳ ಸಮೂಹವಷ್ಟೇ ಅಲ್ಲ, ದಟ್ಟ ಕಾಡಿನ ನಡುವೆ ದೂರದಲ್ಲಿ ಕೇಳುವುದು ತೋಳಗಳ ಊಳಾಟ. ಕಣ್ಣು ಕಿರಿದು ಮಾಡಿಕೊಂಡು ನೋಡಿದರೆ ಅದೋ ಅಲ್ಲಿ ಗೀಸ್ಲಿ ಕರಡಿಗಳ ಕಾದಾಟ. ಪುಟುಪುಟನೆ ಹುಲ್ಲಿಗಾವಲ ತುಂಬಾ ಚಂಗನೆ ನೆಗೆವ ಕಡವೆ ಮರಿಗಳ ಓಡಾಟ. ಎಲ್ಲ ಮೀರಿಸುವಂತೆ ಮೋಡದೋಪಾದಿಯಲ್ಲಿ ಧೂಳೆಬ್ಬಿಸುತ್ತ ಬರುವುದು ಕಾಡೆಮ್ಮೆಗಳ ಒಕ್ಕೂಟ. ಹಗಲಲ್ಲಿ ಹೊಳೆವ ಇಲ್ಲಿನ ಲಾಮಾರ್ ಕಣಿವೆ, ಸಂಜೆಗತ್ತಲಲ್ಲಿ ಸಂಪೂರ್ಣ ನಿಗೂಢ ಕಾಡು.
ಇಂಥದ್ದೊಂದು ಪ್ರದೇಶ ನಮ್ಮ ದೇಶದಲ್ಲೇನಾದರೂ ಇದ್ದಿದ್ದಲ್ಲಿ ಅದು ಹೀಗೆ ತನ್ನಷ್ಟಕ್ಕೆ ತಾನು ಇದ್ದುಬಿಟ್ಟಿರಲು ಸಾಧ್ಯವಿತ್ತೆ? ಎಂತ ಚಂದದ್ದೊಂದು ಕಥೆ ಹುಟ್ಟಿಕೊಳ್ಳುತ್ತಿತ್ತಲ್ಲಿ! ಅದಾಗಲೆ ನನ್ನ ತಲೆಯಲ್ಲಿ ಸ್ಥಳಮಹಾತ್ಮೆಯೊಂದು ಉದ್ಭವಿಸುತ್ತಿತ್ತು.
ಮಹಿಷಾಸುರನ ಸಂಹಾರವಾದ ಮೇಲೆ ತಾಯಿ ದುರ್ಗಾಪರಮೇಶ್ವರಿ ಶಾಂತಗೊಂಡು, ಮುಕ್ತಿಗೊಂಡ ಮಹಿಷನ ಹರಸುತ್ತಾ, ನಿನ್ನ ದುಷ್ಕರ್ಮದಿಂದ ದುಃಖಿತರಾಗಿರುವ ನಿನ್ನ ಸಂತತಿಗೆ ಯಾವ ಹಾನಿ ಬಾರದಿರಲಿ, ಅವರಿಲ್ಲಿ ಸ್ವಚ್ಚಂದವಾಗಿ ಅಲೆಯುತ್ತಾ ಈ ಪ್ರದೇಶಕ್ಕೆ ಕಾವಲಾಗಿರಲಿ ಎಂದಳಂತೆ. ಅಂತೆಯೇ ಇಂದಿಗೂ ಇಲ್ಲಿ ಸಹಸ್ರಾರು ಕಾಡೆಮ್ಮೆಗಳ ದಂಡು ಅಂಡಲೆಯುತ್ತವಂತೆ.
ರಾಕ್ಷಸರೊಡನೆ ಹೋರಾಡುವಾಗ ಆಕೆಯ ಕುದಿವ ಉರಿಮೈಯಿಂದ ಬಿದ್ದ ಒಂದೊಂದು ಬೆವರ ಹನಿಯೂ ಬಿಸಿನೀರ ಬುಗ್ಗೆಯಾಗಿ ಇಂದಿಗೂ ಚಿಮ್ಮುತ್ತವಂತೆ. ಯುದ್ಧಾನಂತರ ದುರ್ಗಮ್ಮ ತಾನು ಶಾಂತಳಾಗಿ ಕೈಲಾಸ ಸೇರುವ ಮುನ್ನ ಶುಭ್ರಗೊಳಲೆಂದು ಕೊಳವೊಂದರಲಿ ಇಳಿದಳಂತೆ. ಆಕೆಯ ನೀಲಿ ಮೈಯ ಸ್ಪರ್ಶದಿಂದ ಕೊಳವು ಸ್ಫಟಿಕ ನೀಲಿಯಾಗಿ ಪರಿವರ್ತಿತಗೊಂಡು, ಪಾರ್ವತಿ ತಾನು ತಣ್ಣಗಾಗುತ್ತಾ, ಆಕೆಯ ಸುಡುಮೈಯ ಬಿಸಿಯಿಂದ ಕೊಳವು ಬಿಸಿಯಾಗುತ್ತಾ ಇಂದಿಗೂ ಕೊತಕೊತನೆ ಕುದಿಯುತ್ತಾ ಸಹಸ್ರಾರು ಜೀವಾಣುಗಳನ್ನು ಹುಟ್ಟಿಸುತ್ತಿದೆಯಂತೆ. ಭೂಲೋಕದ ಉದ್ಧಾರಕ್ಕೆ ಅವತರಿಸಿದ ತನ್ನ ಉದ್ದೇಶ ಮುಗಿದರೂ ಇಲ್ಲಿನ ಸೌಂದರ್ಯಕ್ಕೆ ಮರುಳಾಗಿ ಮಹಾದೇವಿ ಅಲ್ಲೇ ವಿಹರಿಸುತ್ತಿದ್ದಳಂತೆ. ಕೈಗೊಂಡ ಕಾರ್ಯ ಮುಗಿದರೂ ಕೈಲಾಸಕ್ಕೆ ಮರಳದ ಕಾತ್ಯಾಯಿನಿಗಾಗಿ ಚಿಂತಾಕ್ರಾಂತನಾದ ಕಾಂತ ತಾನೇ ಭೂಮಿಗಿಳಿದು ಬಂದನಂತೆ. ಶಿವ ತಾ ವಿರಹದಲ್ಲಿ ನೊಂದು ಮೈಮರೆತವರಂತೆ ಅರಸುತ್ತಾ ಬರುತ್ತಿದ್ದರೆ ಆತನ ಜಟೆಯೆಲ್ಲ ಮರಗಿಡಗಳಿಗೆ ಸಿಕ್ಕು ಶಿವನ ಜಟೆಯ ಕೂದಲು ಉದುರಿದಲ್ಲೆಲ್ಲ ವಿಶಿಷ್ಟ ಜಾತಿಯ ಬೇರೆಲ್ಲೂ ಕಾಣದ ಕೈಲಾಸದತ್ತ ಕತ್ತೆತ್ತಿ ಬೆಳೆವ ಸೂಚೀಪರ್ನೀ ಮರಗಳು ಹುಟ್ಟಿದವಂತೆ. ಬೆಟ್ಟಬಯಲುಗಳಲ್ಲಿ ಕುಣಿದಾಡಿ, ಹೊನಲು ಕೊಳಗಳಲ್ಲಿ ಈಜಾಡಿ ಪ್ರಶಾಂತವಾದ ಪಾರ್ವತಿಯನ್ನು ಕೊನೆಗೂ ಕಂಡ ಶಿವನು ಮೋಹದ ಹೆಂಡತಿಯ ಮೇಲೆ ಮತ್ತೊಮ್ಮೆ ಮೋಹಗೊಂಡನಂತೆ.
ನಾನು ಇನ್ನೂ ಮುಂದೆಲ್ಲ ಕತೆ ಕಟ್ಟುವವಳಿದ್ದೆ, ಅಷ್ಟರಲ್ಲಿ ನನ್ನ ಕಾರಿನಲ್ಲಿದ್ದ ಅರಸಿಕ ಸಹಪ್ರಯಾಣಿಕರು ಮುಂದಿನ ವಾಕ್ಯ ಸೇರಿಸಿದರು. ಸರಿ ಅವರಿಬ್ಬರೂ ಅಲ್ಲೆಲ್ಲ ನಲಿದಾಡಿ, ಉರುಳಿ ಹೊರಳಿದಲ್ಲೆಲ್ಲ ಪ್ರಪಾತಗಳೂ ಕಣಿವೆಗಳೂ ಸೃಷ್ಟಿಯಾದವಂತೆ.
.. ಏಯ್ ಹೋಗು ಅದೆಂತ ಬಾಲಿವುಡ್ ಸಿನೆಮಾನ ಎಂದು ನಾನೇ ಮತ್ತೆ ಕತೆಯ ಜವಾಬ್ದಾರಿ ವಹಿಸಿಕೊಂಡೆ. ಆದರೆ ಅಷ್ಟರಲ್ಲಾಗಲೇ ಕಥೆ ಮುಗಿದಿತ್ತು. ಶಿವ ಪಾರ್ವತಿ ಕೈ ಕೈ ಹಿಡಿದುಕೊಂಡು ಕೈಲಾಸಕ್ಕೆ ಹೋಗಿಯಾಗಿತ್ತು.
ಆದರೆ ಈ ಸ್ಥಳಕ್ಕೊಂದು ನಾಮಕರಣವಾಗಲಿಲ್ಲವಲ್ಲ?
ಪೀತ ಶಿಲಾಂಬಿಕಾ ದೇವಿಯ ಪ್ರದೇಶವೆಂದು ಕರೆದರಾಯಿತು. ನನ್ನವನಿಂದ ಬಂತು ಉತ್ತರ.
ಆದರೆ ಪೀತ ಯಾಕೆ?
ಅಂದರೆ ಯೆಲ್ಲೋಸ್ಟೋನ್ ದೇವಿ, ಅಮ್ಮ. ಅಂತ ಅರ್ಥ. ಯಾಕೆಂದರೆ ಬಹುದಿನಗಳ ಮೇಲೆ ಒಂದಾದ ಶಿವಪಾರ್ವತಿಯರ ಪ್ರಭೆಯಿಂದ ಸುತ್ತಲ ಪ್ರದೇಶವೆಲ್ಲ ಬಂಗಾರ ಬಣ್ಣದಲ್ಲಿ ಅದ್ದಿಹೋಗಿದ್ದರಿಂದ, ಕಲ್ಲೂ ಮಣ್ಣೂ ಪಾರ್ವತಿಯ ಚಿನ್ನದ ಪದತಳದಲ್ಲಿ ಪಾವನವಾದ್ದರಿಂದ ಈ ಪ್ರದೇಶಕ್ಕೆ ಪೀತ ಶಿಲಾಂಬಿಕಾ ದೇವಿಯ ನೆಲೆಯೆಂದು ಕರೆಯಲಾಯಿತು. ಎಂದು ಎಲ್ಲ ಸೇರಿ ಕತೆ ಮುಗಿಸಿದೆವು. ಅಲ್ಲಿಗೆ ಸ್ಥಳಮಹಾತ್ಮೆ ಸಮಾಪ್ತಿಗೊಂಡಿತು.
ಕತೆಯೇನೋ ಪೂರ್ಣಗೊಂಡಿತು. ಆದರೆ ನಮಗೆ ಮುಂದೆ ಎಲ್ಲಿ ಯಾವ ಬುಗ್ಗೆ ಕಂಡರೂ, ಬಿಸಿನೀರ ಕೊಳ ಎದುರಾದರೂ, ಸುತ್ತಲ ಪರ್ವತಗಳ ಕೋಡಿನ ತುದಿಯಲ್ಲೊಂದು ಕಥೆ ಕಾಣಿಸಹತ್ತಿತು.
ನಮಗೆ ಭಾರತೀಯರಿಗೆ ಪ್ರಕೃತಿಯನ್ನು, ಅದರ ಸೌಂದರ್ಯವನ್ನು ಅದಿರುವಂತೆಯೇ ಆಸ್ವಾದಿಸಲು, ರಕ್ಷಿಸಲು, ಆ ಸೌಂದರ್ಯದಲ್ಲಿ ಒಂದಾಗಲು ಸಾಧ್ಯವಿಲ್ಲವೇ? ಯಾಕೆ ಭಾರತದಲ್ಲಿ ಗ್ಲೇಸಿಯರ್ನಂಥ ಪ್ರಾಕೃತಿಕ ರಚನೆಯೊಂದು ಅಮರನಾಥ್ ಆಗುತ್ತದೆ?
ಜ್ವಾಲಾಮುಖಿಯಿಂದಾದ ಗುಹೆಯೂ ಸುರಂಗವೂ ವೈಷ್ಣೋದೇವಿಯಾಗುತ್ತದೆ! ದೇವರನ್ನು ಹೇರದೆ ನಮಗೆ ದೈವತ್ವದ ದರ್ಶನವೇ ಆಗುವುದಿಲ್ಲವೇ? ಅದೆಲ್ಲ ಇರಲಿ, ನನ್ನೂರಿನ ಯಾಣವೇ ಇಂದು ಭೈರವೇಶ್ವರನ ಮಹಾ ಸನ್ನಿಧಿಯಾಗಿದೆ. ಚಿಕ್ಕಂದಿನಲ್ಲಿ ಯಾಣದಲ್ಲಿ ಗುಡಿಯೂ ಇಲ್ಲದ, ಪೂಜೆಯೂ ಇಲ್ಲದ ಕಾಲದಲ್ಲಿಯೂ ಯಾಣಕ್ಕೆ ಹೋಗುತ್ತಿದ್ದೆವು. ಏನಿಲ್ಲದೆಯೂ ಅಲ್ಲಿ ಭೈರವೇಶ್ವರನಿದ್ದ. ಪ್ರತಿಬಾರಿಯೂ ಆ ಮಹಾಶಿಖರದ ಅದ್ಭುತಕ್ಕೆ ಅಚ್ಚರಿಗೊಂಡು ಅಡ್ಡಾಡಿ ಬರುತಿದ್ದೆವು. ನಿಧಾನಕ್ಕೆ ಭೈರವೇಶ್ವರ ಶಿಖರದೊಳಕ್ಕೊಂದು ಚಿಕ್ಕ ಲಿಂಗದಾಕಾರವಿದೆ ಎಂದಾಯಿತು. ಬರಬರುತ್ತ, ಶಿವರಾತ್ರಿಯ ಸಣ್ಣ ಸಮೂಹ ಸಾಗರದಷ್ಟಾಯಿತು. ಕೊನೆಗೆ ಅಲ್ಲೊಂದು ಕಲ್ಲು, ಕಬ್ಬಿಣ, ಸಿಮೆಂಟಿನ ಗುಡಿ ಹುಟ್ಟಿತು. ಸುತ್ತಲಿನ ಸೌಂದರ್ಯಕ್ಕೆ ಒಂದಿಷ್ಟೂ ಹೊಂದಿಕೆಯಾಗದ ಕಟ್ಟಡವೊಂದು ಎದ್ದು ಕೂತಿತು.
ಆದರೆ ಅದರ ಬೆನ್ನಲ್ಲೇ ಇರುವ ಸತ್ಯವೆಂದರೆ ಅಲ್ಲಿ ದೇವರನ್ನು ಬಲವಂತವಾಗಿ ಕೂರಿಸದಿದ್ದಲ್ಲಿ, ಮೋಹಿನಿ ಶಿಖರದ ಮುಖ ಒಡೆದು ಭೈರವೇಶ್ವರದ ಭಗ್ನವಾಗಿ ಅದಿರಿನ ಗುಡ್ಡವೊಂದು ಕಾರವಾರದ ಬಂದರಿನಲ್ಲಿ ಜಾರಿ ಹೋಗಿರುತ್ತಿತ್ತು. ಅದಕ್ಕೆ ಏನೋ ನಮ್ಮವರು ಸೌಂದರ್ಯ ಕಂಡಲ್ಲೆಲ್ಲ ಶಿವನನ್ನೂ ಕಂಡರು. ಹಾಗೆ ಕಂಡಲ್ಲೆಲ್ಲ ಅಲ್ಲೊಂದು ಕಥೆಯೂ ಅ ಕಥೆಗೊಂದು ಬಲವಂತದ ಗುಡಿಯೂ ಹುಟ್ಟಿಕೊಂಡಿದೆ. ಹಾಗಿದ್ದರೆ ನಮ್ಮೆಲ್ಲ ಸ್ಥಳಪುರಾಣಗಳು ನಮ್ಮ ಪೂರ್ವಜರ ಇಂಥದ್ದೊಂದು ಪ್ರಕೃತಿ ರಕ್ಷಣೆಯ ಮುಂದಾಲೋಚನೆಯ ಹುನ್ನಾರವೇ? ಹಲವು ಬಗೆಯ ಸಂಪ್ರದಾಯ, ಆಚರಣೆ, ಬುಡಕಟ್ಟು, ನಂಬಿಕೆಗಳ ಹೆಣಿಗೆಯ ಜನರಿರುವ ಭಾರತದಲ್ಲಿ, ಭಕ್ತಿಯೊಂದೇ ಭಿನ್ನಾಭಿಪ್ರಾಯವಿರದೆ ಒಗ್ಗೂಡಿಸುವ ತಂತ್ರವೇನೋ. ಇದನ್ನೆಲ್ಲಾ ಬಹು ಹಿಂದೆಯೇ ಮನಗಂಡ ಮುತ್ಸದ್ದಿಗಳೆಂದೇ ಹೇಳಬೇಕು ನಮ್ಮ ಪುರಾಣಕರ್ತರನ್ನು. ಹಿಮಾಲಯದಲ್ಲಿ ಅಮರನಾಥನನ್ನು ಕಾಣದಿದ್ದಲ್ಲಿ ಗ್ಲೇಸಿಯರ್ ಗುಹೆ ಎಂಬಂತ ರಚನೆಯೊಂದು ನೋಡಲೂ ಉಳಿಯುತ್ತಿರಲಿಲ್ಲವೆನೋ, ವೈಷ್ಣೋದೇವಿ ಯಾತ್ರೆಯ ಹೆಸರಲ್ಲಾದರೂ ಜೀವನದ ಅನುಭವವೊಂದಕ್ಕೆ ತೆರೆದುಕೊಳ್ಳುವ ಜನಕ್ಕೆ, ದೇವರ ಛಾಪಿರದಿದ್ದಲ್ಲಿ, ಅದೊಂದು ಪ್ರಕೃತಿಯ ಅದ್ಭುತ ಸೃಷ್ಟಿ ಎಂಬ ಸಾಕ್ಷಾತ್ಕಾರವೇ ಆಗುತ್ತಿರಲಿಲ್ಲವೇನೋ.
ಪಂಚಭೂತಗಳಲ್ಲಿ ವಿಶ್ವವನ್ನೇ ಕಂಡ ಸಂಸ್ಕೃತಿಗೆ ಸೃಷ್ಟಿ ಸೌಂದರ್ಯದಲ್ಲಿ ಸತ್ಯವನ್ನೂ, ಶಿವನನ್ನೂ ಕಾಣುವುದು ಯಾಕೆ ಸಾಧ್ಯವಾಗಲಿಲ್ಲ?! ಯಾಕೆ ಅಲ್ಲೊಬ್ಬ ಬಲವಂತದ ಶಿವನ ಗುಡಿಯ ಸೃಷ್ಟಿಯಾಗಬೇಕು? ಗುಡಿಗೋಪುರಗಳ ಗಲಾಟೆಯಲ್ಲಿ ಅಲ್ಲಿಯೇ ಇದ್ದ ಶಿವನನ್ನು ಮತ್ತೆ ಮತ್ತೆ ಹುಡುಕತೊಡಗುವಂತಾಗಬೇಕು? ಆಚರಣೆಗಳ ಸಿಕ್ಕಿನಲ್ಲಿ ಆಧ್ಯಾತ್ಮವನ್ನು ಕಳೆದುಕೊಂಡುಬಿಟ್ಟಿದೆಯೇ ಭಾರತ? ಮುಂದೊಂದು ದಿನ ಪ್ರಕೃತಿಯಲ್ಲಿ ಪರಮೇಶ್ವರನ ಪ್ರೀತಿಯನ್ನು ಕಾಣುವ ಘಳಿಗೆ ಬಂದೀತು. ಅಲ್ಲಿಯವರೆಗೆ ಹೊಸತೊಂದು ಸೌಂದರ್ಯಕ್ಕೆ ಕತೆಯೊಂದ ಹುಟ್ಟಿಸುವುದೊಂದೇ ಕಾಪಿಡುವ ಉಪಾಯವೇನೋ!
ಭಾರತದ ಉದ್ದಗಲಕ್ಕೂ ಅಸಂಖ್ಯಾತ ಬೆಟ್ಟಗುಡ್ಡಗಳನ್ನು ಇಂದಿಗೂ ರಕ್ಷಿಸುತ್ತಿರುವ ಕತೆಗಳೇ ಅಲ್ಲೇ ಅನುರಣಿಸುತ್ತಿರಿ.
ನನಗೋ ಗುಡಿಯಲ್ಲಿ ಒಮ್ಮೆಯೂ ಸಿಗದ ಶಿವ ಗುಡ್ಡಗಳಲ್ಲಿ ಸದಾ ಎಡತಾಕುತ್ತಾನೆ. ಅಂಡಲೆಯುವ ಶಿವೆಯ ನರ್ತನದಲ್ಲಿ ಬಿದ್ದುಹೋದ ಗೆಜ್ಜೆಸದ್ದು ಯೆಲ್ಲೋಸ್ಟೋನ್ನಂಥ ಪರಿಸರದಲ್ಲಿ ಜಗತ್ತಿನ ಹಲವು ಮೂಲೆಗಳಲ್ಲಿ ಕೇಳಿದೆ ನನಗೆ. ಮನದ ಗೆಜ್ಜೆಗೆ ಹೆಜ್ಜೆ ಕೂಡಿಸಬೇಕೆನಿಸಿದಾಗೆಲ್ಲ ಮತ್ತೆ ಮತ್ತೆ ಹುಡುಕಿ ಹೊರಡುತ್ತೇನೆ ನಾನು ಹೊಸ ಕಾಡೊಂದ ಹುಡುಕಿ, ಕೊಳವೊಂದ ಅರಸಿ.
ಹೋಗಿಬನ್ನಿ ನೀವೂ, ಕಾಣುವುದು ನಿಮಗೂ ಅಲ್ಲಿ ಸತ್ಯಂ ಶಿವಂ ಸುಂದರಂ…
ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ.