Advertisement
ಚುಕ್ಕೆ ರಾಟುವಾಳ, ನಾನು ಮತ್ತು ನಂಬಿಕೆ

ಚುಕ್ಕೆ ರಾಟುವಾಳ, ನಾನು ಮತ್ತು ನಂಬಿಕೆ

ಬಹುಶಃ ಒಂದು ತಿಂಗಳಲ್ಲಿ ಅವುಗಳ ಗೂಡು ತಯಾರಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ೧೨-೧೩ ದಿನಗಳಲ್ಲಿ ಆ ಎರಡು ಲವ್ ಬರ್ಡ್ಸ್ ತಮ್ಮ ಗೂಡಿಗೆ ನಾಲ್ಕು ಹೊಸ ಅತಿಥಿಗಳ ಕೊಡುಗೆಯನ್ನು ಜಗತ್ತಿಗೆ ನೀಡಿದವು. ಕಿಟಗಿ ಹಿಂಭಾಗದಲ್ಲಿ ಅರೆ ಪಾರದರ್ಶಕ ಗಾಜಿನೊಳಗಿಂದ ಅವುಗಳನ್ನು ನೋಡುತ್ತಾ ಬಹಳ ಖುಷಿಯಾದೆ. ಅವುಗಳನ್ನು ಕಂಡು ಮಕ್ಕಳಂತೂ ಹಿಗ್ಗಿ ಕುಣಿದಾಡಿದರು. ಬೆಳಿಗ್ಗೆ ಎದ್ದೊಡನೆ ಅವುಗಳ ದರ್ಶನ.. ನಂತರ ಏಳು ಗಂಟೆಗೇ ದೊಡ್ಡ ಗುಬ್ಬಿಗಳು ಗುಟುಕು ಕೊಡುವುದನ್ನು ನೋಡಿ ಅಮ್ಮಾ ಅವು ಆಗಲೇ ನಾಷ್ಟಾ ಮಾಡುತ್ತಿವೆ ಎಂದು ನಗುವುದು ನಡೆದೇ ಇತ್ತು.
ಚುಕ್ಕೆ ರಾಟುವಾಳ ಹಕ್ಕಿಯೊಂದಿಗಿನ ಪ್ರಸಂಗವನ್ನು ಬರೆದಿದ್ದಾರೆ ಮಹಮ್ಮದ್‌ ರಫೀಕ್‌ ಕೊಟ್ಟೂರು

ನಮ್ಮ ಮನೆಯ ಕಿಟಕಿಯಲ್ಲಿ ಕಂದು ಬಣ್ಣದ, ಬಿಳಿ ಹೊಟ್ಟೆಯ ಕಂದು ಡುಬ್ಬದ ಮೇಲೆ ಬಿಳೀ‌ಚುಕ್ಕಿಗಳಿರುವ ಸಣ್ಣ ಕೊಕ್ಕಿನ ಮೂರು ಇಂಚಿನಷ್ಟಿರಬಹುದಾದ ಗುಬ್ಬಿಗಳು ಮೂರು ನಾಲ್ಕು ತಿಂಗಳ ಹಿಂದೆ ಗೂಡು ಕಟ್ಟಲು ಆರಂಭಿಸಿದವು. ಹುಲ್ಲು ಗರಿಯನ್ನು ತರುವುದು ಕಿಟಕಿಗೆ ಸಿಕ್ಕಿಸಲು ಪ್ರಯತ್ನಿಸುವುದು. ಅದು ಕೆಳಗೆ ಬೀಳುವುದು… ಹೀಗೆಯೇ 20-25 ದಿನ ಮುಂದುವರಿಯಿತು. ಅವು ಜಾಗದ ಸುರಕ್ಷತೆಯ ಪರೀಕ್ಷಿಸುತ್ತಿದ್ದವೋ, ಗೂಡು ಕಟ್ಟುವುದನ್ನು ಕಲಿಯುತ್ತಿದ್ದವೋ… ದೇವರಿಗೇ ಗೊತ್ತು. ಬಹುಶಃ ನನ್ನ ಪ್ರಕಾರ ಅವು ಎರಡನ್ನೂ ಒರೆಗೆ ಹಚ್ಚಿ ನೋಡುವಂತಿತ್ತು. ಅವು ಗೂಡು ಕಟ್ಟಲು ಆರಂಭಿಸಿದ ದಿನದಿಂದ ಇಲ್ಲಿಯವರೆಗೆ ಆ ಕಿಟಕಿಗಳ ತೆರೆಯುವುದನ್ನು ಮನೆಯ ಸದಸ್ಯರಿಂದ ಅಘೋಷಿತವಾಗಿ ನಿರ್ಭಂಧಿಸಲಾಯಿತು. ತೆರೆದರೆ ಎಲ್ಲಿ ಅವುಗಳ ಶ್ರಮ ವ್ಯರ್ಥವಾಗುತ್ತದೋ…. ಎಂದು.

ಬಹುಶಃ ಒಂದು ತಿಂಗಳಲ್ಲಿ ಅವುಗಳ ಗೂಡು ತಯಾರಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ೧೨-೧೩ ದಿನಗಳಲ್ಲಿ ಆ ಎರಡು ಲವ್ ಬರ್ಡ್ಸ್ ತಮ್ಮ ಗೂಡಿಗೆ ನಾಲ್ಕು ಹೊಸ ಅತಿಥಿಗಳ ಕೊಡುಗೆಯನ್ನು ಜಗತ್ತಿಗೆ ನೀಡಿದವು. ಕಿಟಗಿ ಹಿಂಭಾಗದಲ್ಲಿ ಅರೆ ಪಾರದರ್ಶಕ ಗಾಜಿನೊಳಗಿಂದ ಅವುಗಳನ್ನು ನೋಡುತ್ತಾ ಬಹಳ ಖುಷಿಯಾದೆ. ಅವುಗಳನ್ನು ಕಂಡು ಮಕ್ಕಳಂತೂ ಹಿಗ್ಗಿ ಕುಣಿದಾಡಿದರು. ಬೆಳಿಗ್ಗೆ ಎದ್ದೊಡನೆ ಅವುಗಳ ದರ್ಶನ.. ನಂತರ ಏಳು ಗಂಟೆಗೇ ದೊಡ್ಡ ಗುಬ್ಬಿಗಳು ಗುಟುಕು ಕೊಡುವುದನ್ನು ನೋಡಿ ಅಮ್ಮಾ ಅವು ಆಗಲೇ ನಾಷ್ಟಾ ಮಾಡುತ್ತಿವೆ ಎಂದು ನಗುವುದು ನಡೆದೇ ಇತ್ತು. ನೋಡು ನೋಡುತ್ತಿದ್ದಂತೆ ಆ ಗುಬ್ಬಿಗಳು ತಮ್ಮ ಮರಿಗಳಿಗೆ ಗುಟುಕು ನೀಡುತ್ತಾ ರೆಕ್ಕೆ ಬಲಿಯಲು ಸಹಕರಿಸತೊಡಗಿದ್ದವು.

ನಿನ್ನೆ ಹಾರಲು ಹೋದ ಗುಬ್ಬಿಯೊಂದು ಗೂಡಿನಿಂದ ಹೊರಬಂದು ನನ್ನ ಮನೆಯ ಸಣ್ಣ ಪ್ಯಾಸೇಜಿನಲ್ಲಿ ಬಿತ್ತು. ಅಯ್ಯೋ ಇದನ್ನು ಹೇಗೆ ಕಾಪಾಡುವುದು ಎಂಬ ಚಿಂತೆ ಅದನ್ನು ನೋಡಿದೊಡನೆ ಆರಂಭವಾಯಿತು. ಇದನ್ನು ಹೇಗಾದರೂ ಮಾಡಿ ಅದರ ಗೂಡಿನೊಳಗೆ ಬಿಡಬೇಕು ಇಲ್ಲದಿದ್ದರೆ ಇದು ಸಾಯುತ್ತದೆ ಎಂದು ಹಿಡಿಯಲು ನೋಡಿದೆ. ಅರ್ಧ ಮುಕ್ಕಾಲು ಗಂಟೆ ಪ್ರಯತ್ನಿಸಿದರೂ ಮರಿಗುಬ್ಬಿ ನನ್ನ ಕೈಗೆ ಸಿಗಲಿಲ್ಲ.

ಅಷ್ಟರಲ್ಲಾಗಲೇ ಅದು ದಣಿಗಿತ್ತು ಹಾಗಾಗಿ ಸ್ವಲ್ಪ ಸಮಯ ಅದಕ್ಕೆ ದಣಿವಾರಿಸಿಕೊಳ್ಳಲು ಅವಕಾಶ ನೀಡಿ ನಂತರ ಪ್ರಯತ್ನಿಸುವ ಎಂದು ಸ್ವಲ್ಪ ದೂರದಲ್ಲಿ ಕುಳಿತು ಅದನ್ನು ಕಾಯತೊಡಗಿದೆ. ಪಕ್ಕದ ಮನೆಯಲ್ಲಿ ಬೆಕ್ಕು ಸಾಕಿದ್ದರಾದ್ದರಿಂದ ಅದರಿಂದ ಗುಬ್ಬಿ ರಕ್ಷಿಸಲು.

ನಂತರ ಮೂಲೆಯಲ್ಲಿದ್ದ ಗುಬ್ಬಿಯನ್ನು ಎರಡು ಕೈಗಳಿಂದ ನಿಧಾನವಾಗಿ ಆವರಿಸಿ ಒಂದು ಕೈ ಮುಷ್ಟಿಯೊಳಗೆ ಅದನ್ನು ಹಿತವಾಗಿ ಬಂಧಿಸಿದೆ. ನನ್ನ ಮುಷ್ಟಿಯನ್ನು ಗೂಡಿನಂತೆ ಮಾಡಿ ನಿಮಿಷಗಳ ಕಾಲ ಹಾಗೆಯೇ ಅದಕ್ಕೆ ಇರಲು ಬಿಟ್ಟೆ. ಒದ್ದಾಡುತ್ತಿದ್ದ ಅದು ತಾನು ಕ್ಷೇಮವಾಗಿದ್ದೇನೆ ಎಂದು ಅನಿಸಿದೊಡನೆ ಸುಮ್ಮನಾಯಿತು. ನಿಧಾನವಾಗಿ ಕತ್ತು ಹೊರಹಾಕಿ ನನ್ನನ್ನು ನೋಡಿತು. ನಾನೂ ನಗುತ್ತಾ ಅದನ್ನು ನೋಡಿದೆ. ಅದಕ್ಕೆ ಈಗ ಸಂಪೂರ್ಣ ನಂಬಿಕೆ ಬಂದಿತ್ತು.

ಕೈಯ ಮುಷ್ಟಿಯನ್ನು ಹಾಗೇ ಗೂಡಿನೆಡೆ ತೆಗೆದುಕೊಂಡು ಹೋಗಿ ಕೈಯೊಳಗಿನ ಗುಬ್ಬಿ ಹೊರಹೋಗುವಂತೆ ಸ್ವಲ್ಪವೇ ಮುಖ ತೆರೆದು ಗೂಡಿನ ಮುಖಕ್ಕೆ ಹಿಡಿದೆ. ಅದು ನಿಧಾನವಾಗಿ ಗೂಡಿನೊಳಕ್ಕೆ ಜಾರಿತು. ನನಗೂ ಅದರ ಜೀವ ಉಳಿಸಿದ ಖುಷಿ, ನೆಮ್ಮದಿಯಿಂದ ಶಾಲೆಗೆ ಹೋದೆ.

ಆದರೆ ಇಂದು ಮತ್ತೆ ಗೂಡಿನಿಂದ ಹೊರಗೆ ಜಿಗಿಯಿತು. ಅದನ್ನು ಪುನಃ ಗೂಡಿಗೆ ಸೇರಿಸಲು ಹರ ಸಾಹಸ ಪಡಬೇಕಲ್ಲ ಎಂದು ಸಂಕಟವಾಯಿತು. ಆದರೆ ಹಾಗಾಗಲಿಲ್ಲ. ನಾನು ಹಿಡಿಯಲು ಹೋದಾಗ ಅದು ಕೊಸರಿಕೊಳ್ಳಲಿಲ್ಲ. ಬದಲಿಗೆ ನನ್ನೆಡೆಗೆ ಆಪ್ತತೆಯಿಂದ ತನ್ನನ್ನು ಗೂಡಿಗೆ ಸೇರಿಸುವಂತೆ ಬೇಡುವಂತಿತ್ತು ಅದರ ನೋಟ. ಅದೇ ಭರವಸೆಯೊಂದಿಗೆ ನನ್ನ ಅಂಗೈಯೊಳಗೆ ಬಂದು ಸೇರಿಕೊಂಡಿತು. ಅದರ ಕಣ್ಣುಗಳಲ್ಲಿ ನಂಬಿಕೆಯ ಭಾವ ಇಣುಕುತ್ತಿತ್ತು. ಹಾಗಾಗಿ ನಾನು ಅದರ ನಂಬಿಕೆಯನ್ನು ಹುಸಿಗೊಳಿಸಲಿಲ್ಲ.

ಇದು ಚುಕ್ಕೆ ರಾಟುವಾಳ(Scaly breasted Munia) ಎಂದು ವರಸೆಯಲ್ಲಿ ದೂರದಿಂದ ಅಣ್ಣನವರೂ ಆದ ಖ್ಯಾತ ಪರಿಸರ ತಜ್ಙ ಡಾ. ಸಮದ್‌ ಕೊಟ್ಟೂರು ಅವರು ಹೇಳಿದಾಗ, ಕುತೂಹಲದಿಂದ ಅದರ ಕುರಿತು ಮಾಹಿತಿಯನ್ನು ಸಂಗ್ರಹಿಸಲು ಅಂತರ್ಜಾಲದ ಮೊರೆಹೋದೆ. ಗ್ರಾಮೀಣ ಪ್ರದೇಶದಲ್ಲಿ ಇವುಗಳನ್ನು ಅಬ್ಬಲಕ್ಕಿ ಹೆಸರಿನಿಂದ ಗುರುತಿಸುವರಂತೆ. ಶ್ರೀಲಂಕಾ, ಇಂಡೋನೇಷಿಯಾ, ಫಿಲಿಪೈನ್ಸ್‌ ಮತ್ತು ಬರ್ಮಾ ದೇಶಗಳಲ್ಲಿಯೂ ಇವುಗಳನ್ನು ಕಾಣಬಹುದಂತೆ. ಆಫ್ರಿಕಾದ ಕ್ಯಾಮರೂನ್‌ ದೇಶದಲ್ಲಿ ಹಲವು ಬಣ್ಣದ ಚುಕ್ಕೆ ರಾಟುವಾಳಗಳನ್ನು ನೋಡಬಹುದಂತೆ. ಇನ್ನೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಹಾರ ಹುಡುಕಿಕೊಂಡು ಹೋಗುವ ಭತ್ತದ ಗದ್ದೆಯ ಎಳೆಯ ಕಾಳುಗಳನ್ನು ಇಷ್ಟ ಪಟ್ಟು ತನ್ನುತ್ತವಾದ್ದರಿಂದ ರೈತರ ಇವುಗಳ ಬೇಟಯಾಡುತ್ತಾರೆ ಎಂದು ಮಾಹಿತಿ ದೊರೆಯಿತು. ಅಲ್ಲದೆ ಯೂರೋಪ್‌ ದೇಶದಲ್ಲಿ ಇವುಗಳನ್ನು ಪಂಜರದೊಳಗೆ ಸಾಕುವುದೂ ಸಹ ಇದೆಯೆಂದು ಮಾಹಿತಿ ದೊರೆಯಿತು. ಇಂಥ ಹಕ್ಕಿ ನಮ್ಮನೆಯ ಆಶ್ರಯ ಪಡೆಯ ಬಂದದ್ದು ನಮಗೆ ಖುಷಿಯ ವಿಚಾರ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ