Advertisement
ಊರು ಬಿಟ್ಟವರ ಹಾಡುಪಾಡು

ಊರು ಬಿಟ್ಟವರ ಹಾಡುಪಾಡು

ಜೀವದಿಂದಿಡಿದು ಜೀವನದೊಟ್ಟಿಗೆ ಬೆರೆತುಹೋಗಬೇಕಿದ್ದ ಭಾಷೆಯನ್ನು ನಿಧಾನಕ್ಕೆ ಮರೆಯಲಾರಂಭಿಸಿ, ಸಾಂಸ್ಕೃತಿಕ ಕೇಂದ್ರಗಳಾಗಿದ್ದ ಹಳ್ಳಿಗಳನ್ನ ತೊರೆದು ಎಲ್ಲವೂ ವ್ಯಾಪಾರವಾಗಿರುವ ಪಟ್ಟಣದ ಮೋಹಕ್ಕೆ ಒಂದು ತಲೆ ಮಾರನ್ನೇ ವರ್ಗಾಯಿಸಿದ್ದು ದುರಂತವಲ್ಲದೇ ಮತ್ತೇನು? ಪಟ್ಟಣದಲ್ಲಿ ಸೈಟು ಮಾಡಿ, ದೊಡ್ಡ ದೊಡ್ಡ ಬಂಗಲೆ ಕಟ್ಟುವುದನ್ನೇ ಜೀವನದ ಅತಿದೊಡ್ಡ ಯಶಸ್ಸು ಎಂಬ ಹುಸಿ ಸುಳ್ಳನ್ನು ಮುಗ್ಧ ಮನಸ್ಸುಗಳಲ್ಲಿ ಬಿತ್ತಲಾರಂಭಿಸಿದ ಪರಿಣಾಮ ಬಾಗಿಲು ಹಾಕಿದ ದೊಡ್ಡ ದೊಡ್ಡ ಬಂಗಲೆಗಳಲ್ಲಿ ವೈಚಾರಿಕತೆ, ಸಾಂಸ್ಕೃತಿಕ ನೆಲೆಗಟ್ಟುಗಳು ಮಾಯವಾಗಿ, ಹಳ್ಳಿಯ ಹೆಂಚಿನ ಮನೆಗಳಲ್ಲೇ ಉಳಿದುಬಿಟ್ಟವು.
ಹಳ್ಳಿ ಬಿಟ್ಟು ನಗರಕ್ಕೆ ಸೇರಿದ ಜನರ ಜೀವನ ವಿಧಾನ ಬದಲಾಗುತ್ತಿರುವುದರ ಕುರಿತು ಬರೆದಿದ್ದಾರೆ ಪ್ರಕಾಶ್‌ ಪೊನ್ನಾಚಿ.

‘ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡೋದು ಬಾಕಿ ಇದೆ. ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಶಿ, ಎದ್ದೇಳು ಕೊನೆ ಬಸ್ಸು ಟೈಮಾಗಿದೆ’ ಅನ್ನೋ ಹಾಡು ನನ್ನನ್ನ ಯಾಕೋ ಗಾಢವಾಗಿ ಕಾಡಲಾರಂಭಿಸಿತ್ತು. ಎಲ್ಲವನ್ನು ಬಿಟ್ಟು ಪಟ್ಟಣ ಸೇರಿಕೊಂಡು ಹೀಗೆ ಪರದೇಶಿಗಳಂತೆ ಬದುಕುತ್ತಿರೊ ಎಷ್ಟೋ ಜನರಲ್ಲಿ ನಾನೂ ಒಬ್ಬನಾಗಿದ್ದೆ. ಬದುಕಿನ ಅನಿವಾರ್ಯತೆ, ಜೀವನಕ್ಕಾಗಿನ ಪರದಾಟ ಪಟ್ಟಣದ ಬಾಡಿಗೆ ಮನೆಗಳಿಗೆ ನಮ್ಮನ್ನ ಎಳೆದು ತಂದಾಗಿತ್ತು. ಹಾಗಂತ ಇದೇ ಬದುಕನ್ನ ಆಯ್ಕೆ ಮಾಡಿಕೊಳ್ಳಬೇಕಿತ್ತಾ? ಎಂದುಕೊಂಡರೆ, ಇಲ್ಲಾ ಅನ್ನೋ ಉತ್ತರಾನೂ ಸುಲಭವಾಗಿ ಸಿಕ್ತಿತ್ತು. ಆಕಾರವನ್ನ ಬಿಟ್ಟು ನಿರಾಕಾರವನ್ನ ಅರಸಿ, ಆಯ್ಕೆ ಮಾಡಿಕೊಂಡ ತಪ್ಪು ಹೀಗೆ ಅಲೆಮಾರಿಯಂತೆ ಪಟ್ಟಣದ ಬೀದಿಯಲ್ಲಿ ನಮ್ಮನ್ನ ಅಲೆಸುತ್ತಿತ್ತು. ಅಪ್ಪನ ಏರು, ಮೇಳಿ, ನೊಗ, ಕಣ್ಣುಗಳಿಗೆ ಕಸದಂತೆ ಕಂಡಿದ್ದವು. ವ್ಯವಸಾಯ ಅನ್ನೋದು ಬದುಕಲ್ಲೇ ಅತ್ಯಂತ ನಿಕೃಷ್ಠವಾದ ಕೆಲಸ ಅಂತ ಯಾರೋ ಮೆದುಳು ತುಂಬಿದ್ದು ಹೀಗೆ ಊರು ಊರು ಅಲೆದು ಬದುಕು ಕಟ್ಟಿಕೊಳ್ಳಲು ಹೆಣಗಬೇಕಾದ ಸ್ಥಿತಿಯನ್ನ ನಿರ್ಮಿಸಿತ್ತು. ತಪ್ಪುಗಳೆಲ್ಲಾ ನನ್ನನ್ನೇ ಬೊಟ್ಟು ಮಾಡುತ್ತಿವೆಯಾದ್ದರಿಂದ ಹೇಗೋ ಈ ಕಾಂಕ್ರೀಟ್ ಕಾಡುಗಳಲ್ಲಿ ಅನ್ನಕ್ಕಾಗಿ ಹೆಣಗಾಡುವ, ಪ್ರೀತಿಗಾಗಿ ಹಾತೊರೆಯುವಂತಹ ಸ್ಥಿತಿಗೆ ನಮ್ಮನ್ನ ನಾವೇ ದೂಡಿಕೊಂಡಾಗಿದೆ ಎನಿಸಿ ಹೊಂದಾಣಿಕೆ ಜೀವನಕ್ಕೆ ನಾನೂ ಶರಣಾಗಿದ್ದೆ.

ಯಾರು ಹೀಗೆ ಬದುಕಬೇಕು ಎಂದುಕೊಂಡು ಒಂದಷ್ಟು ಕನಸುಗಳೊಟ್ಟಿಗೆ ಕನವರಿಸಿಕೊಳ್ಳುತ್ತಾನೋ ಎಷ್ಟೋ ಸಲ ಆತ ಸೋತುಬಿಡುತ್ತಾನೆ. ಆಯ್ಕೆಯಲ್ಲೋ, ಶ್ರಮದಲ್ಲೋ ಬದುಕು ಅವನನ್ನು ಮಂಡಿಯೂರಿಸಿರುತ್ತದೆ. ಹೀಗೆ ಆಗಬೇಕು ಎಂದು ಊರು ಬಿಟ್ಟು ಪಟ್ಟಣ ಸೇರೋ ಎಷ್ಟೋ ಜನರ ಬದುಕು ಹೀಗೆ ಹೊಂದಿಕೆಗೆ ಕಟ್ಟುಬೀಳಲಾಗದೆ ಅರ್ಧದಲ್ಲೇ ಸೋತುಹೋದ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ.

ಈ ಪಟ್ಟಣಗಳೇ ಹಾಗೆ, ಇಲ್ಲಿ ಜನ ಸೈಟಿಗೆ ಬೆಲೆ ಕಟ್ಟುವ ಹಾಗೆ ಸಂಬಂಧಗಳಿಗೂ ಬೆಲೆ ಕಟ್ಟಿ ಬೇಲಿಗಳನ್ನ ಹಾಕಿಕೊಂಡಿದ್ದಾರೆ. ಸದಾ ಮುಚ್ಚಿದ ಬಾಗಿಲುಗಳು ಮನೆಯೊಳಗೆ ಬೆಳಕನ್ನೇ ಕಾಣದೆ ಅವರ ಮುಕ್ಕಾಲು ಜೀವನ ಕತ್ತಲೆಯೊಟ್ಟಿಗೆ ವಿಲೀನವಾಗಿ ಹೋಗಿದೆ. ಪ್ರೀತಿ, ಮಮತೆ ಅನ್ನುವುದನ್ನ ಇಲ್ಲಿ ಮಾರ್ಕೆಟ್ಟಿನಲ್ಲಿ ತರಕಾರಿ ಖರೀದಿಸಿದಂತೆ ವ್ಯಾಪಾರಕ್ಕಿಟ್ಟಿದ್ದಾರೆ. ಹಿರಿಯ ಜೀವಗಳು ಇಲ್ಲಿ ಮನೆ ಕಾಯಲೋ, ಮಕ್ಕಳನ್ನು ಶಾಲೆಯ ಬಸ್ಸು ಏರಿಸಲಸ್ಟೇ ಮೀಸಲುಗೊಂಡು ಮನೆಯಾಚೆ ಕಾಯ್ದು ಕುಳಿತಿರುವ ದೃಶ್ಯಗಳು ಆಗಾಗ್ಗೆ ಕಣ್ಣಿಗೆ ಬೀಳುವುದು ಹೊಸದೇನು ಅಲ್ಲ. ಇಲ್ಲಿ ವಾತ್ಸಲ್ಯಕ್ಕಿಂತ ಹೆಚ್ಚು ಸಮಯಕ್ಕೆ ಜನ ಗೌರವ ಕೊಡುತ್ತಾರೆ. ಬದುಕು ನಿಂತ ನೀರಾಗಿ ಜಲಚರಗಳ ಇಟ್ಟು ಸಾಕಿ ನಲಿವ ಒಂದು ಕೊಳದಂತಾಗದೆ ಎಲ್ಲವನು ತಳ್ಳಿ ದೂರ ದೂರ ಓಡುವ ನದಿಯಂತಾಗಿರುತ್ತದೆ. ಮನುಷ್ಯ ವಸ್ತುಗಳಿಗೆ ಬೆಲೆ ಕೊಡುವಷ್ಟು ಮನುಷ್ಯತ್ವಕ್ಕೆ ಕೊಡುವುದಿಲ್ಲ, ಮನುಷ್ಯತ್ವಕ್ಕೆ ತೀರಾ ಕಡಿಮೆಯಾಗಿಯೇ ಬೆಲೆಯನ್ನ ಕೊಡುತ್ತಾನೆ. ಕನಸುಗಳು ಸುಲಭವಾಗಿ ಹುಟ್ಟುತ್ತವೆ ಅಷ್ಟೇ ಸುಲಭವಾಗಿ ಸತ್ತು ಹೋಗುತ್ತವೆ. ಒಟ್ಟಿನಲ್ಲಿ ಆದಾಯದೊಟ್ಟಿಗೆ ವಿದಾಯವು ಇಲ್ಲಿ ಬಹು ಬೇಗನೆ ಆಗಿ ಹೋಗುತ್ತದೆ.

ಕುಟುಂಬಗಳು ಒಡೆಯುತ್ತಾ ಹೋದಂತೆ ಸಂಬಂಧಗಳು ಬೆಲೆ ಕಳೆದುಕೊಳ್ಳಲಾರಂಭಿಸಿದವು. ಅವಿಭಕ್ತವಾಗಿ ಅನ್ಯೋನ್ಯತೆಯಿಂದ ಬದುಕಿನ ಬಂಡಿ ಎಳೆಯುತ್ತಿದ್ದ ಕಾಲ ಹೋಗಿ ವಿಭಕ್ತವಾಗಿ ಸಂಬಂಧಗಳು ಸಂಕೀರ್ಣವಾಗುವತ್ತಾ ಸಾಗಿದ್ದು ಮಾತ್ರ ವಿಪರ್ಯಾಸ. ಜೇನಿನ ಗೂಡಿನಂತೆ ಮಕ್ಕಳು ಮರಿ, ಅಜ್ಜ ಅಜ್ಜಿಯೊಟ್ಟಿಗೆ ಒಂದಿಡೀ ಕುಟುಂಬ ಅನ್ಯೋನ್ಯವಾಗಿ ಜೀವಿಸುವುದನು ಬಹುಷಃ ನಾವೀಗ ಧಾರಾವಾಹಿಗಳಲ್ಲೋ, ಸಿನಿಮಾಗಳಲ್ಲೋ ಮಾತ್ರ ಕಾಣಬಹುದು. ಅತ್ತೆಯನ್ನು, ಮಾವನನ್ನು, ಚಿಕ್ಕಮ್ಮ, ದೊಡ್ಡಮ್ಮ, ಚಿಕ್ಕಪ್ಪ, ದೊಡ್ಡಪ್ಪ ಎಲ್ಲರನ್ನು ಅವರವರ ಸಂಬಂಧ ಗುರುತಿಸಿ ಮಾತನಾಡಿಸುತ್ತಿದ್ದ ಮಕ್ಕಳು ಯಾವಾಗ ಎಲ್ಲರನ್ನು ಅಂಕಲ್, ಆಂಟಿ ಎಂದು ಸಂಬೋಧಿಸತೊಡಗಿದರೋ ಸಂಬಂಧಗಳಿಗಿದ್ದ ಒಂದು ಗಟ್ಟಿಯಾದ ನೆಲೆ ಸಂಪೂರ್ಣವಾಗಿ ಅರ್ಥಕಳೆದುಕೊಂಡಿತು. ಅದು ವ್ಯವಸ್ಥೆಯ ತಪ್ಪು. ಮಕ್ಕಳ ಮನಸ್ಸಿನ ಮೇಲೆ ಇಂಗ್ಲೀಷ್ ಶಿಕ್ಷಣ ಯಾವ ಪರಿಯ ಪರಿಣಾಮವನ್ನು ಬೀರಿದೆ ಎಂಬುದಕ್ಕೊಂದು ಉದಾಹರಣೆ ಅಷ್ಟೇ. ಎಷ್ಟೋ ಜನ ಕೂಲಿ ಮಾಡುವವರು ಸಹ ನಮ್ಮ ಮಕ್ಕಳಿಗೆ ಇಂಗ್ಲೀಷ್ ಶಿಕ್ಷಣ ಸಿಗಬೇಕೆಂಬ ಒಂದೇ ಬಯಕೆಯಿಂದ ಊರು ಬಿಟ್ಟು ಊರಿಗೆ ಅಲೆಯಲಾರಂಭಿಸಿದರು. ಮುದ್ದೆ ಮುರಿಯುತ್ತಿದ್ದ ಕೈಗಳನ್ನ ಸ್ಪೂನಿಗೋ, ಫೋರ್ಕಿಗೋ ಒಗ್ಗಿಸಿಕೊಳ್ಳುವುದು ಅಷ್ಟು ಸುಲಭದ್ದಾಗಿರಲಿಲ್ಲ. ಆದರೂ ಜನ ವ್ಯಾಮೋಹಿಗಳಾದರು. ಸದಾ ಹಳ್ಳಿಗಳಲ್ಲಿ ತೆರೆದಿರುತ್ತಿದ್ದ, ಸದಾ ಗಾಳಿ ಬೆಳಕಿನಲ್ಲಿ ‘ಆಡಿ ಬಾ ನನ ಕಂದ ಅಂಗಾಲ ತೊಳೆದೇನ’ ಎಂದು ಹಾಡುತ್ತಿದ್ದ ಅಮ್ಮಂದಿರು ಅದೇ ಮಕ್ಕಳನ್ನು ಸದಾ ಬಾಗಿಲು ಮುಚ್ಚಿಕೊಂಡಿರುವ ಪಟ್ಟಣದ ಮನೆಗಳಲಿ ಕತ್ತಲಿನಲಿ ಕೂಡಿಹಾಕಿದರು. ಯಾವ ಮಗು ಅಜ್ಜಿಯ ತೊಡೆಯ ಮೇಲೆ ಮಲಗಿ ರಾಜ ಮಹಾರಾಜರ ಕಥೆಗಳನ್ನೆಲ್ಲಾ ಕೇಳುತ್ತಿತ್ತೋ, ಯಾವ ಮಗು ಅಜ್ಜನ ಹೆಗಲ ಮೇಲೆ ಕೂತು ಬೇರೆಯದ್ದೇ ಒಂದು ಪ್ರಪಂಚವನ್ನ ನೋಡುತ್ತಿತ್ತೋ, ಯಾವ ಮಗು ತನ್ನ ಗೆಳೆಯರ ಬಳಗ ಕೂಡಿಕೊಂಡು ಉಯ್ಯಾಲೆ, ಚಿನ್ನಿದಾಂಡು, ಕಬಡ್ಡಿ, ಲಗೋರಿ ಆಟಗಳನ್ನ ಆಡುತ್ತಿತ್ತೋ, ಯಾವ ಮಗು ಸಮಾಜದೊಟ್ಟಿಗೆ ಬೆರೆತು ತನ್ನನ್ನ ತಾನು ಮೌಲ್ಯೀಕರಿಸುತ್ತಿತ್ತೋ ಆ ಮಗುವನ್ನು ತಂದು ಜೈಲಿನಲಿ ಇಟ್ಟ ಹಾಗೆ ಕೂಡಿಟ್ಟುಬಿಟ್ಟರು. ಜೀವಂತ ಗೆಳೆಯರೊಡನೆ ಆಟವಾಡಬೇಕಿದ್ದ ಮಗುವಿನೊಟ್ಟಿಗೆ ನಿರ್ಜೀವವಾದ ಗೊಂಬೆಗಳನ್ನಿಟ್ಟರು. ಸುಂದರವಾದ ಹಸಿರು ಪರಿಸರದಲ್ಲಿ ಸುತ್ತಿ ಬರುತ್ತಿದ್ದ ಮಗುವಿಗೆ ಟಿವಿಯಲ್ಲೋ, ಮೊಬೈಲಿನಲ್ಲೋ ಕಾಡು ತೋರಿಸಿ ಎಂಥಾ ಅದ್ಭುತ ಎನ್ನಲಾರಂಭಿಸಿದರು. ಬ್ಯಾಟು, ಬಾಲು, ಚಿನ್ನಿದಾಂಡನೆಲ್ಲಾ ಮೂಲೆಗೆಸೆದು ಆನ್‌ಲೈನ್ ಗೇಮುಗಳಿಗೆ ಅಂಟಿಕೊಳ್ಳುವಂತೆ ಮಾಡಿದಾಗಲೇ, ಯಾವ ಮಗು ನಾಭಿಯಲ್ಲಿ ಹುಟ್ಟಿ ಬಾಯಿಯಲ್ಲಿ ಅಂತ್ಯವಾಗುತ್ತಿದ್ದ ‘ಅಮ್ಮ’ ಎಂಬ ಪದದಿಂದ ಬಾಯ್ತುಂಬ ಕರೆಯುತ್ತಿತ್ತೋ, ಆ ಮಗುವನ್ನು ಗದರಿಸಿ ಬಾಯಿಯಲ್ಲೇ ಹುಟ್ಟಿ ಬಾಯಿಯಲ್ಲೇ ಅಂತ್ಯವಾಗುವ ‘ಮಮ್ಮಿ’ ಎಂದು ಕರೆಯುವಂತೆ ಮಾಡಿದರು. ಅಪ್ಪ ಎಂದು ಕರೆದಾಗ ಏಟು ಕೊಟ್ಟು ಡ್ಯಾಡಿ ಅಂತ ಕರಿ ಎಂದು ಒತ್ತಡ ಹಾಕಿದರು. ಏಕಾಂತವೆಂದರೆ ಏನು ಎಂದು ಗೊತ್ತಿಲ್ಲದ ಮಕ್ಕಳಿಗೆ ಏಕಾಂಗಿಯಾಗಿ ಪ್ರಪಂಚದಲಿ ಇರುವಂತೆ ತಾವೇ ಒಂದು ಸನ್ನಿವೇಶವನ್ನ ಸೃಷ್ಠಿಸಿಬಿಟ್ಟರು. ಯಾವ ಶಿಕ್ಷಣ ಸಂಸ್ಥೆಗಳು ಕನ್ನಡದಲಿ ಮಾತಾಡಿದರೆ ಇಂತಿಷ್ಟು ಎಂದು ಜುಲ್ಮಾನೆಯನ್ನ ಹಾಕುತ್ತಿದ್ದವೋ ಹಾಗೆಯೇ ಮನೆಯಲ್ಲಿಯೂ ಕನ್ನಡದಲ್ಲಿ ಮಾತಾಡಿದರೆ ಮಗುವಿಗೆ ಶಿಕ್ಷೆ ಕೊಡಲು ಪ್ರಾರಂಭಿಸಿ, ಯಾವ ಮಗು ಹಳ್ಳಿ ಶಾಲೆಗಳಲ್ಲಿ ಬಾರೋ ಬಾರೋ ಮಳೆರಾಯ ಎನ್ನುತ್ತಿತ್ತೋ ಅದೇ ಮಗುವಿನ ಬಾಯಲ್ಲಿ ‘ರೈನ್ ರೈನ್ ಗೋ ಅವೆ’ ಎನ್ನಿಸಲಾರಂಭಿಸಿದರು. ಒಳ್ಳೆಯ ಬಟ್ಟೆ, ಟೈ, ಷೂ ಹಾಕಿ ಸ್ಕೂಲ್ ವ್ಯಾನಿನಲಿ ಮಗು ಶಾಲೆಗೆ ಹೋಗಿ ಮಮ್ಮಿ, ಡ್ಯಾಡಿ ಎಂದು ಬಿಟ್ಟಷ್ಟಕ್ಕೆ ಮಗು ಸಮಾಜದಲಿ ಉದ್ಧಾರವಾಗಿ ಬಿಡುತ್ತದೆ ಎಂಬ ಒಂದು ಕಾಲ್ಪನಿಕ ಸನ್ನಿವೇಶವನ್ನ ತಾವೇ ಸೃಷ್ಠಿಸಿ, ‘Education is not preparation for life. Education itself life’ ಎನ್ನುವುದನ್ನೇ ಮರೆತು ಮಗುವನ್ನ ಒತ್ತಾಯ ಪೂರ್ವಕವಾಗಿ ಜೀವನಕ್ಕೆ ಒಗ್ಗಿಸುವ ಒಂದು ತಂತ್ರಗಾರಿಕೆಯನ್ನ ಸದ್ದಿಲ್ಲದೇ ಹೆಣೆದುಕೊಂಡರು.

ಹಳ್ಳಿ ಜನ ಒಳ್ಳೇ ಜನ ಎನ್ನುವುದನ್ನೇ ಮರೆತು ಮಕ್ಕಳನ್ನ ಊರಿಗೆ ಕಳುಹಿಸುವುದನ್ನ ಬಿಟ್ಟು, ಯಾವ ಮಗು ಮಣ್ಣಿನಲ್ಲಿ ಕೂತು ಬೊಂಬೆಗಳನ್ನ ಮಾಡಿಕೊಂಡು ಆಟವಾಡುತ್ತಿತ್ತೋ ಅದೇ ಮಗುವಿಗೆ ಕೈ ಮಣ್ಣಾಗುತ್ತದೆಂದು ಬೀದಿಗೆ ಬಿಡುವುದನ್ನು ನಿಲ್ಲಿಸಿದರು. ಅಜ್ಜಿ ಅಜ್ಜನೊಟ್ಟಿಗೆ ಬೆರೆತು ಮಗು ಸಂಸ್ಕೃತಿ, ಕಟ್ಟಳೆಗಳನ್ನ ತನ್ನ ಕಾಲಕ್ಕೆ ವರ್ಗಾಯಿಸಿಕೊಳ್ಳುತ್ತಿತ್ತೋ ಅದೇ ಮಗು ಅಜ್ಜ ಅಜ್ಜಿಯನ್ನು ಸೇರದ ಹಾಗೆ ಒಂದು ಬೇಲಿಯನ್ನ ಅದರ ಸುತ್ತಾ ತಾವೇ ಹೆಣೆದು, ನೆಲ್ಲಿಕಾಯಿ, ಬೇಲದ ಕಾಯಿ, ಸೊಡಲಿಹಣ್ಣು, ಹುಳಿಜಾಗಡಿ ಹಣ್ಣುಗಳನ್ನ ತಿಂದು ಬೆಳೆಯುತ್ತಿದ್ದ ಮಗುವಿಗೆ ಅವು ಏನು ಎಂದು ಕೇಳುವ ಹಾಗೆ ಮಾಡಿದರು. ರಾಮಾಯಣ, ಮಹಾಭಾರತ, ಪುಣ್ಯಕೋಟಿ ಕಥೆಗಳನ್ನ ಯಾವ ಮಗು ಕೇಳುತ್ತಾ, ಹಾಡುತ್ತಾ, ಅಭಿನಯಿಸುತ್ತಾ ಆದರ್ಶಗಳನ್ನ ತನಗರಿವಿಲ್ಲದೆ ತನ್ನೊಳಗೆ ರೂಪಿಸಿಕೊಳ್ಳಬೇಕಿದ್ದ ಮಗುವಿಗೆ ಅವುಗಳ ಅರಿವೇ ಇಲ್ಲದಂತೆ ಮಾಡಿ, ರೂಢಿಯಿಂದ ಬೆಳೆಯಬೇಕಿದ್ದ, ತಲೆಮಾರಿನಿಂದ ತಲೆಮಾರಿಗೆ ವರ್ಗವಾಗಬೇಕಿದ್ದ, ಸಮಾಜದ ಸಾಂಸ್ಕೃತಿಕ ಬಲವರ್ಧನೆಗೆ ಹಿಡಿಯಾಗಬೇಕಿದ್ದ ಒಂದು ಸಂಸ್ಕೃತಿಯನ್ನ ನಿಧಾನವಾಗಿ ಕೊಲ್ಲಲಾರಂಭಿಸಿದರು. ಜೀವದಿಂದಿಡಿದು ಜೀವನದೊಟ್ಟಿಗೆ ಬೆರೆತುಹೋಗಬೇಕಿದ್ದ ಭಾಷೆಯನ್ನು ನಿಧಾನಕ್ಕೆ ಮರೆಯಲಾರಂಭಿಸಿ, ಸಾಂಸ್ಕೃತಿಕ ಕೇಂದ್ರಗಳಾಗಿದ್ದ ಹಳ್ಳಿಗಳನ್ನ ತೊರೆದು ಎಲ್ಲವೂ ವ್ಯಾಪಾರವಾಗಿರುವ ಪಟ್ಟಣದ ಮೋಹಕ್ಕೆ ಒಂದು ತಲೆ ಮಾರನ್ನೇ ವರ್ಗಾಯಿಸಿದ್ದು ದುರಂತವಲ್ಲದೇ ಮತ್ತೇನು? ಪಟ್ಟಣದಲ್ಲಿ ಸೈಟು ಮಾಡಿ, ದೊಡ್ಡ ದೊಡ್ಡ ಬಂಗಲೆ ಕಟ್ಟುವುದನ್ನೇ ಜೀವನದ ಅತಿದೊಡ್ಡ ಯಶಸ್ಸು ಎಂಬ ಹುಸಿ ಸುಳ್ಳನ್ನು ಮುಗ್ಧ ಮನಸ್ಸುಗಳಲ್ಲಿ ಬಿತ್ತಲಾರಂಭಿಸಿದ ಪರಿಣಾಮ ಬಾಗಿಲು ಹಾಕಿದ ದೊಡ್ಡ ದೊಡ್ಡ ಬಂಗಲೆಗಳಲ್ಲಿ ವೈಚಾರಿಕತೆ, ಸಾಂಸ್ಕೃತಿಕ ನೆಲೆಗಟ್ಟುಗಳು ಮಾಯವಾಗಿ, ಹಳ್ಳಿಯ ಹೆಂಚಿನ ಮನೆಗಳಲ್ಲೇ ಉಳಿದುಬಿಟ್ಟವು.

ಮನುಷ್ಯ ವಸ್ತುಗಳಿಗೆ ಬೆಲೆ ಕೊಡುವಷ್ಟು ಮನುಷ್ಯತ್ವಕ್ಕೆ ಕೊಡುವುದಿಲ್ಲ, ಮನುಷ್ಯತ್ವಕ್ಕೆ ತೀರಾ ಕಡಿಮೆಯಾಗಿಯೇ ಬೆಲೆಯನ್ನ ಕೊಡುತ್ತಾನೆ. ಕನಸುಗಳು ಸುಲಭವಾಗಿ ಹುಟ್ಟುತ್ತವೆ ಅಷ್ಟೇ ಸುಲಭವಾಗಿ ಸತ್ತು ಹೋಗುತ್ತವೆ. ಒಟ್ಟಿನಲ್ಲಿ ಆದಾಯದೊಟ್ಟಿಗೆ ವಿದಾಯವು ಇಲ್ಲಿ ಬಹು ಬೇಗನೆ ಆಗಿ ಹೋಗುತ್ತದೆ.

ಹಳ್ಳಿಗಳಲ್ಲಿ ಹಾಗಿರಲಿಲ್ಲ. ತಾತನಿಗೆ ಎಷ್ಟು ವಯಸ್ಸಾದರು ಅವನೇ ಮನೆಯ ಯಜಮಾನ, ಅಪ್ಪ ಚಿಕ್ಕಪ್ಪ ದೊಡ್ಡಪ್ಪಂದಿರೆಲ್ಲಾ ತಾತನ ಮಾತನ್ನು ಎಂದಿಗೂ ಎತ್ತಾಕುತ್ತಿರಲಿಲ್ಲ. ಉರಿಯುತ್ತಿದ್ದ ಒಂದೇ ಒಲೆಯಲ್ಲಿ ಅಮ್ಮ, ಚಿಕ್ಕಮ್ಮ, ದೊಡ್ಡಮ್ಮಂದಿರು ಹಂಚಿಕೊಂಡು ಅಡಿಗೆ ಮುಗಿಸುತ್ತಿದ್ದರು. ತೊಟ್ಟಿ ಮನೆಯ ದೊಡ್ಡ ಹಜಾರದಲಿ ನಾವು ಮೊಮ್ಮಕ್ಕಳು ಸೇರಿದಂತೆ ಎಲ್ಲರೂ ಒಟ್ಟಿಗೆ ಊಟಕ್ಕೆ ಕೂರುತ್ತಿದ್ದೆವು. ಬಿಸಿ ಬಿಸಿ ಮುದ್ದೆ, ಬಸಿದ ಉಪ್ಪು ಸಾರು ಜೊತೆಗೆ ತೊಟ್ಟಿ ಮನೆಯ ಒಟ್ಟಿಯಲ್ಲಿ ಮೆಲ್ಲನೆ ಜಾರುತ್ತಿದ್ದ ಬೆಳದಿಂಗಳು. ಅದು ಹೇಳಲಾಗದ ಒಂದು ಅದ್ಭುತ ಅನುಭವ.

ಇಡೀ ವಠಾರಕ್ಕೆಲ್ಲಾ ಕಥಾಕಣಜದಂತೆ ಇದ್ದವಳು ಗೌರಜ್ಜಿ. ರಾತ್ರಿ ಇಡೀ ವಠಾರದವರೆಲ್ಲಾ ಊಟ ಮುಗಿಸಿ ಬೀದೀಲಿ ಬಂದು ತಡರಾತ್ರಿವರೆಗೂ ಹರಟೆ ಹೊಡೆಯುತ್ತಾ ಕುಳಿತಿರುತಿದ್ದರು. ಗ್ರಾಮಪಂಚಾಯಿತಿಯ ರಾಜಕೀಯ ಸುದ್ದಿಗಳಿಂದ ಹಿಡಿದು ದಿಲ್ಲಿಯ ಸಂಸತ್ ಭವನದವರೆಗಿನ ಸುದ್ದಿಗಳು ಅಲ್ಲದೆ ಮಳೆ ಸುದ್ದಿ, ಬೆಳೆ ಸುದ್ದಿ, ಮದುವೆ ಮುಂಜಿ ಸುದ್ದಿಗಳು, ಇವೆಲ್ಲವೂ ಎಲ್ಲರೊಟ್ಟಿಗೂ ವಿನಿಮಯವಾಗಿ ಹೋಗುತ್ತಿತ್ತು. ವಠಾರದ ಎಲ್ಲ ಮಕ್ಕಳನ್ನ ತನ್ನ ಸುತ್ತಾ ಕೂಡಿ ಹಾಕುತ್ತಿದ್ದ ಗೌರಜ್ಜಿ ತರಹೇವಾರಿ ಕಥೆಗಳನ್ನ ಮನಮುಟ್ಟುವಂತೆ ಹೇಳುತ್ತಿದ್ದಳು. ಗೋಡ್ಸೆ ಗಾಂಧಿಯನ್ನ ಕೊಂದ ಕಥೆಗಳಿಂದಿಡಿದು ಅರ್ಜುನ ಕರ್ಣನನ್ನ ಕೊಲ್ಲುವವರೆಗಿನ ಕಥೆಗಳೊಟ್ಟಿಗೆ ತಾನೇ ಸೃಷ್ಠಿಸಿಕೊಂಡ ಒಂದಷ್ಟು ಸಾಂಪ್ರದಾಯಿಕ ಕಥೆಗಳನ್ನ ಹೇಳಿ ರಂಜಿಸುತ್ತಿದ್ದಳು. ಹೀಗಾಗಿಯೇ ನಾವೆಲ್ಲಾ ಊಟ ಮುಗಿದ ತಕ್ಷಣ ಇರುವೆಗಳು ಸಕ್ಕರೆಗೆ ಹಾತೊರೆಯುವಂತೆ ಗೌರಜ್ಜಿಗಾಗಿ ಕಾದು ಕುಳಿತಿರುತ್ತಿದ್ದೆವು. ಯಾರದೋ ಮನೆಯ ಮದುವೆಯೋ ಇನ್ನಿತರ ಶುಭಕಾರ್ಯಗಳೋ ಇದ್ದಾಗ ಇಡೀ ವಠಾರದವರೆಲ್ಲಾ ನಮ್ಮದೇ ಮನೆಯ ಕಾರ್ಯವೆಂದು ಹಿಗ್ಗುವುದಲ್ಲದೆ ಕೆಲಸಗಳನ್ನು ಹಂಚಿಕೊಂಡು ಮುಗಿಸುತ್ತಿದ್ದರು.

ಆಗ ಇಡೀ ಊರಿಗೆ ಇದ್ದದ್ದು ಗೌಡರ ಮನೆಯ ಕಪ್ಪುಬಿಳುಪಿನ ಟಿವಿಯೊಂದೆ. ವಾರಕ್ಕೊಮ್ಮೆ ಬರುತ್ತಿದ್ದ ರಾಮಾಯಣ ಧಾರಾವಾಹಿಗೋ, ಶಕ್ತಿಮಾನ್ ಮಕ್ಕಳ ಕಥೆಗೋ, ಅಥವಾ ರಾಜ್‌ಕುಮಾರ್ ಚಲನಚಿತ್ರಗಳಿಗೊ ಇಡೀ ಊರಿಗೂರೆ ಗೌಡರ ಮನೆಯಂಗಳದಲಿ ಜಮಾಯಿಸಿಬಿಡುತ್ತಿತ್ತು. ಒಳ್ಳೆಯ ರಾಜ್‌ಕುಮಾರ್ ಚಲನಚಿತ್ರ ಬಂದಾಗಂತು ವಾರಗಟ್ಟಲೆ ರಾತ್ರಿ ಜಗಲೀಕಟ್ಟೆಯಲಿ ಅದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕೆಲವೊಂದು ವಿಶೇಷ ಸಂದರ್ಭಗಳಿಗೆ ಊರಿನಲ್ಲಿ ಟೆಂಟ್ ಸೀನರಿಯನ್ನು ತಂದು ನಾಟಕಗಳನ್ನ ಆಯೋಜಿಸಲಾಗುತ್ತಿತ್ತು. ನಮ್ಮೂರಿನ ಕೆಂಪಯ್ಯ ಮೇಷ್ಟ್ರು ನಾಟಕದ ಪ್ರವೀಣರಾಗಿದ್ದರು. ಕರ್ಣಭಾರತ, ಸೀತಾಪಹರಣ, ಬಸವೇಶ್ವರ ಚರಿತ್ರೆ, ವಿಕ್ರಮ ಬೇತಾಳನ ಕುರಿತಾದ ನಾಟಕಗಳು ಹಬ್ಬ ಹರಿದಿನಗಳಲ್ಲಿ ರಾತ್ರಿ ತುಂಬುತ್ತಿದ್ದವು. ನಾಟಕ ಒಂದು ತಿಂಗಳು ಎನ್ನುವಾಗಲೆ ಪ್ರತೀ ರಾತ್ರಿ ಕೆಂಪಯ್ಯನವರ ಗರಡಿಯಲ್ಲಿ ಪಾತ್ರಗಳ ಅಭ್ಯಾಸ ನಡೆಯುತ್ತಿತ್ತು. ಪ್ರತೀ ದಿನ ಇದನ್ನು ನೋಡುತ್ತಾ, ನೋಡುತ್ತಾ ಆ ಪಾತ್ರಗಳ ಸಂಭಾಷಣೆಗಳು ಊರಿನ ಮಕ್ಕಳ ಬಾಯಲ್ಲಿ ಸರಾಗವಾಗಿ ಹರಿದಾಡುತ್ತಿತ್ತು. ಮಕ್ಕಳು ಆಟ ಆಡುವಾಗ ತಾವೇ ಆ ಪಾತ್ರಗಳೆಂದುಕೊಂಡು ಅಭಿನಯಿಸಿ ನಲಿಯುತ್ತಿದ್ದರು. ನಾಟಕದ ಕಥೆಗಳನ್ನು ಮಕ್ಕಳು ಲೀಲಾಜಾಲವಾಗಿ ಹೇಳುತ್ತಿದ್ದರು. ಇದರಿಂದ ಸಂಸ್ಕಾರದ ಎಳೆಯೊಂದು ತನಗರಿವಿಲ್ಲದಂತೆ ಮಕ್ಕಳಲ್ಲಿ ತಾನಾಗಿ ರೂಪುಗೊಳ್ಳುತ್ತಿತ್ತು.

ಮತ್ತೆ ಆಗೆಲ್ಲ ಊರಿಗೆ ಒಂದೇ ಬಸ್ಸು ಬರುತ್ತಿದ್ದರಿಂದ ಶಿಕ್ಷಕರು ಅಲ್ಲೇ ತಂಗುತ್ತಿದ್ದರು. ಈಗಿನ ಹಾಗೆ ಯಾವುದೇ ಇಂಗ್ಲೀಷ್ ವ್ಯಾಮೋಹ ಆಗ ಇರಲಿಲ್ಲ. ದೇವಸ್ಥಾನ ಜಗುಲಿಯ ಮೇಲೆ ಸಂಜೆಪಾಠಗಳು ನಡೆಯುತ್ತಿತ್ತು. ಇಂತಿಷ್ಟೇ, ಹೀಗೆ ಕಲಿಯಬೇಕೆಂಬ ಯಾವ ನಿಯಮವೂ ಅಲ್ಲಿ ಇರುತ್ತಿರಲಿಲ್ಲ. ಚಿನ್ನಿದಾಂಡು, ಲಗೋರಿ, ಗೋಲಿ, ಬುಗುರಿಗಳನ್ನು ಶಿಕ್ಷಕರೇ ಮಕ್ಕಳೊಟ್ಟಿಗೆ ಆಡುತ್ತಿದ್ದರು. ತಪ್ಪಿಗೆ ಅಷ್ಟೇ ಸರಿಯಾದ ದಂಡನೆಯೂ ಇರುತ್ತಿತ್ತು. ಐದನೇ ಇಯತ್ತೆಯಿಂದ ಇಂಗ್ಲೀಷ್ ಕಲಿಸಲು ಪ್ರಾರಂಭಿಸುತ್ತಿದ್ದರಾದರೂ ಏಳನೇ ಇಯತ್ತೆ ಮುಗಿಯುವುದರೊಳಗೆ ಬಹುತೇಕ ಇಂಗ್ಲೀಷ್ ಮಾತಾಡುವಂತೆ ಮಾಡುತ್ತಿದ್ದರು ಸ್ವಾಮಿ ಮಾಸ್ಟರ್. ಶಾಲೆಯೊಟ್ಟಿಗೆ ಮನೆಯಲ್ಲಿ ಅಪ್ಪ ಕೇಳುತ್ತಿದ್ದ ಬಾಯ್ದರೆ ಲೆಕ್ಕಗಳು, ಅವ್ವನ ಜಾನಪದ ಹಾಡುಗಳು ಶೈಕ್ಷಣಿಕ ವಾತಾವರಣವನ್ನ ಒಟ್ಟೊಟ್ಟಿಗೆ ಎಳೆದುಕೊಂಡು ಹೋಗುತ್ತಿತ್ತು.

ಅಜ್ಜ ಆಗಾಗ್ಗೆ ಬಿದಿರುಕಡಲೆ ತರಲೆಂದು ನಮ್ಮನ್ನೆಲ್ಲಾ ಕಾಡಿಗೆ ಕರೆದುಕೊಂಡು ಹೋಗುತ್ತಿದ್ದ. ಹೋದಾಗಲೆಲ್ಲಾ ಅಜ್ಜ ಅಲ್ಲಿನ ಮರಗಳನ್ನ ಪರಿಚಯಿಸುತ್ತಿದ್ದ. ನೇಗಿಲಿಗೆ ಯಾವ ಮರ, ನೊಗಕ್ಕೆ ಯಾವ ಮರ, ಬಾಗಿಲಿಗೆ, ಕಿಟಕಿಗೆ ಯಾವ ಮರ ಶ್ರೇಷ್ಠ ಎಂದು ತಿಳಿಸುತ್ತಿದ್ದ. ಹೀಗಾಗಿಯೇ ನಮ್ಮೂರಿನ ಅದೆಷ್ಟೋ ಮಕ್ಕಳು ಕಾಡಿನ ಸುಮಾರು ಇಪ್ಪತ್ತರಿಂದ ಮೂವತ್ತು ಮರಗಳನ್ನು ಗುರುತಿಸುತ್ತಿದ್ದರು. ಬಿದ್ದು ಗಾಯ ಆದಾಗಲು ಯಾವುದೋ ಸೊಪ್ಪು ಅರೆದು ವಾಸಿಮಾಡಿಬಿಡುತ್ತಿದ್ದರು. ದವಾಖಾನೆ ಊರಿನ ಪ್ರತೀ ಮನೆಯಲ್ಲೂ ರೂಪು ತಳೆದಿತ್ತು.

ನಮ್ಮ ಪಕ್ಕದ ಮನೆಯ ಗೆಳೆಯರೊಬ್ಬರ ತಾಯಿ ಮೊನ್ನೆ ತೀರಿಕೊಂಡಿದ್ದರು. ಮನೆಯ ಮುಂಭಾಗ ಪೆಂಡಾಲೊಂದನ್ನು ಹಾಕಿ ಒಂದಷ್ಟು ಕುರ್ಚಿಗಳನ್ನು ಹಾಕಿ ಹೆಣವನ್ನು ಮನೆಯ ಮುಂಭಾಗದಲ್ಲೇನೋ ಇರಿಸಲಾಗಿತ್ತು. ಆದರೆ ಇವರ ಮನೆ ಬಿಟ್ಟರೆ ಇಡೀ ಏರಿಯಾದ ಯಾವ ಮನೆಯ ಬಾಗಿಲುಗಳು ತೆರೆದಿರಲಿಲ್ಲ. ಕುರ್ಚಿಗಳಲಿ ನನ್ನನೂ ಸೇರಿ ಮೂರು ಮತ್ತೊಂದು ಜನ ಕುಳಿತಿದ್ದು ಬಿಟ್ಟರೆ ಉಳಿದೆಲ್ಲವೂ ಖಾಲಿಯಾಗೆ ಇದ್ದವು. ಸ್ವಲ್ಪ ಹೊತ್ತಿನ ನಂತರ ಶವಸಾಗಿಸುವ ವಾಹನವೊಂದರಲ್ಲಿ ಹೆಣ ಸಾಗಿಸಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಅಲ್ಲೂ ಇದ್ದುದು ಕೇವಲ ಮೂರರಿಂದ ನಾಲ್ಕು ಜನ ಮಾತ್ರ. ಒಂದು ಜೀವವನ್ನ ಹೀಗೆ ನಿಕೃಷ್ಟವಾಗಿ ಬೀಳ್ಕೊಡುವ ಸಂಪ್ರದಾಯಕ್ಕೆ ಸಮಾಜ ಬಂದಿದ್ದು ದುರಂತವೇ ಸರಿ.

ಹಳ್ಳಿಗಳಲ್ಲಿ ಯಾರಾದರು ಸತ್ತರೆ ಇಡೀ ಊರಿಗೂರೆ ಸೇರಿಬಿಡುತ್ತಿತ್ತು. ಹೂ ಹಾರ, ಬಣ್ಣ ಬಣ್ಣದ ಕಾಗದಗಳಿಂದ ಕುರುಜನ್ನು ತಯಾರಿಸಿ ಸ್ಮಶಾನದವರೆಗೆ ಒಬ್ಬರಿಗೊಬ್ಬರು ಹೆಗಲು ಬದಲಿಸಿ ನೆರೆದಿದ್ದ ಅಷ್ಟೂ ಜನ ಹಿಡಿ ಮಣ್ಣು ಹಾಕಿ ಸತ್ತ ಜೀವವನ್ನ ಅತ್ಯಂತ ಗೌರವವಾಗಿ ಬೀಳ್ಕೊಡುವ ಕಾಲದೊಟ್ಟಿಗೆ ಈಗಿನ ಪರಿಸ್ಥಿತಿ ನೋಡಿದರೆ, ವ್ಯಾಪಾರೀಕರಣದ ಜಗತ್ತು ನಿಜಕ್ಕೂ ಎತ್ತ ಸಾಗುತ್ತಿದೆ ಅನ್ನಿಸಿತು.

ಬೀದಿಯಲ್ಲಿ ಗೋಲಿ ಬುಗುರಿ ಆಡುವ ಮಕ್ಕಳನ್ನು ವಿಚಿತ್ರವಾಗಿ ನೋಡುವ, ಕಾಲಿಗೆ ಚೂರು ಮಣ್ಣಾದರು ಥೂ ಮಣ್ಣು ಎಂದು ಅಸಹ್ಯ ಪಡುವ, ಯಾವುದೋ ನಾಟಕದ ಒಂದು ಸಣ್ಣ ಸಾಲನ್ನು ಶಾಲೋತ್ಸವಕ್ಕಾಗಿ ಹಿಂಸೆ ಪಟ್ಟು ಕಲಿಯುವ, ಡ್ಯಾಡಿ ಭತ್ತ ಯಾವ ಮರದಲ್ಲಿ ಬಿಡುತ್ತದೆ? ಎಂಬ ವಿಚಿತ್ರ ಪ್ರಶ್ನೆಗಳನ್ನು ನನ್ನ ಮಗ ನನ್ನ ಮುಂದಿಡುವಾಗಲೆಲ್ಲಾ ಈ ವ್ಯಾಪಾರೀಕರಣ ಜಗತ್ತು, ಪಟ್ಟಣ ಸಂಸ್ಕೃತಿಗಳು ಮುಂದಿನ ಪೀಳಿಗೆಯನ್ನ ಎತ್ತ ಕೊಂಡೊಯ್ಯುತ್ತಿವೆ ಎಂದು ನೆನೆಸಿಕೊಂಡಾಗಲೆಲ್ಲಾ ಯಾಕೋ ಹಳ್ಳಿಯಲ್ಲಿ ಗೋಲಿ ಆಡುವ ಮಕ್ಕಳು ಪಟ್ಟನೆ ನೆನಪಿಗೆ ಬಂದುಬಿಡುತ್ತಾರೆ.

About The Author

ಪ್ರಕಾಶ್ ಪೊನ್ನಾಚಿ

ಪ್ರಕಾಶ್ ಪೊನ್ನಾಚಿ ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮದವರು. ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹನೂರು ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಮಣ್ಣಿಗೆ ಬಿದ್ದ ಮಳೆ’ ಮೊದಲ ಕವನ ಸಂಕಲನವು 2014 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನಸಹಾಯದಲ್ಲಿ ಆಯ್ಕೆಯಾಗಿ ಬಿಡುಗಡೆಯಾಗಿದೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ