Advertisement
ನನ್ನ ಮಾವ ರಾಮಚಂದ್ರ ಐತಾಳರು:ಸುದರ್ಶನ್ ಬರಹ

ನನ್ನ ಮಾವ ರಾಮಚಂದ್ರ ಐತಾಳರು:ಸುದರ್ಶನ್ ಬರಹ

ಈಗ ನನ್ನ ಮಾವ ರಾಮಚಂದ್ರರ ಬಗ್ಗೆ ಬರೆಯುವುದಕ್ಕೆ ಕಸಿವಿಸಿಯಾಗುತ್ತಿದೆ. ಆತ್ಮೀಯರ ಬಗ್ಗೆ ಅವರು ಇಲ್ಲದಾಗ ಹೇಗೆ ಬರೆಯುವುದು? ನಮ್ಮ ಆತ್ಮೀಯತೆ ಬರೀ ವೃತ್ತಿನಿರತ ಆತ್ಮೀಯತೆ ಅಷ್ಟೇ ಅಲ್ಲ. ಕುಟುಂಬದ, ಒಡನಾಟದ, ಬಾಲ್ಯದ ಆತ್ಮೀಯತೆ. ಈಗ ಯೋಚಿಸುವಾಗ ಅನಿಸುತ್ತದೆ – ಅವರ ಬಗ್ಗೆ ಬರೆಯುವುದು ಈಗ ಹೇಗೆ ಕಸಿವಿಸಿಯೋ, ಅವರು ಬದುಕಿದ್ದಾಗಲೂ ಕಸಿವಿಸಿಯೇ. ಅವರ ಕೆಲಸದ ಸಾಧನೆಯ ಬಗ್ಗೆ ಮಾತು ತಿರುಗದಂತೆ ಸದಾ ಎಚ್ಚರವಹಿಸುತ್ತಿದ್ದರು. ಒಂದು ಪಕ್ಷ ತಿರುಗಿದರೂ, ಅದರಿಂದ ನಾವು ಮುಂದೆ ಕಲಿಯಬಹುದಾದುದರ ಬಗ್ಗೆಯೇ ಅವರ ದೃಷ್ಟಿ ಇರುತ್ತಿತ್ತು. ಹಾಗಾಗಿ, ಮುಂದಿನ ದಾರಿಯ ಬಗೆಗಿನ ಅವರ ಆಸ್ಥೆಯನ್ನೇ ಭದ್ರವಾದ ನೆಲೆಯಾಗಿಸಿಕೊಂಡು ಅವರ ಬಗ್ಗೆ ಬರೆಯಬೇಕು ಅನಿಸುತ್ತದೆ.

ನನ್ನ ಅವರ ಸಂಬಂಧ ಮೂಲತಃ ಕೌಟಂಬಿಕದ್ದು. ನನ್ನನ್ನು, ನನ್ನ ಅಣ್ಣ-ತಂಗಿಯನ್ನು ಅವರು ಎತ್ತಿ ಆಡಿಸಿದವರು. ನಮ್ಮನ್ನು ಕೂರಿಸಿ ಫೋಟೋಗಳನ್ನು ತೆಗೆದವರು. ನಾವು ದೊಡ್ಡವರಾದಂತೆ ಪುಸ್ತಕಗಳನ್ನು ಕೊಡಿಸಿ ಓದಿಸಿದವರು. ಸಿನೆಮಾದ ಬಗ್ಗೆ ಭಾಷಣ ಬಿಗಿಯದೇ ಹುಚ್ಚು ಹಿಡಿಸಿದವರು. ಅದು ಹೇಗೆ ಮಾಡಿದರು ಎಂದು ವಿಸ್ಮಯವಾಗುತ್ತದೆ. ಬಹುಶಃ ಅವರ ಆಸಕ್ತಿ ಕೆರಳಿಸುವ ಮಾತಿನ ಪರಿಯಿಂದಲೇ ಇರಬೇಕು. ಬದುಕಿನ ಕತೆಗಳನ್ನು ಮಾತಿನಲ್ಲಿ ರಸವತ್ತಾಗಿ ಹೆಣೆಯುತ್ತಿದ್ದವರು ಅವರು. ಈಗ ಯೋಚಿಸಿದರೆ ಒಂದು ಬಗೆಯ ಆರ್ಕಿಟೈಪ್ ಸೋದರಮಾವನೇ ಆಗಿದ್ದರು ಅನಿಸುತ್ತದೆ.

೧೯೭೯ – ನಾನಿನ್ನು ಚಿಕ್ಕ ಹುಡುಗ. ಆ ವರ್ಷವನ್ನು “ಅಂತರರಾಷ್ಟ್ರೀಯ ಮಕ್ಕಳ ವರ್ಷ” ಎಂದು ಘೋಷಿಸಿದ್ದರು. ಅದರ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ASFOC-79 ಎಂಬ ಕಿರುಚಿತ್ರ ಉತ್ಸವ ಹಾಗು ಸ್ಪರ್ಧೆಯನ್ನು ನಡೆಸಿದ್ದರು. ಅದಕ್ಕೆ ನನ್ನ ಅಣ್ಣ ಒಂದು ಕಿರುಚಿತ್ರ ಮಾಡುತ್ತಿದ್ದ. ಅದಕ್ಕೆ ರಾಮಚಂದ್ರ ಬೆಂಬಲವಾಗಿ ನಿಂತಿದ್ದರು. ಆದರೆ ಚಿಕ್ಕವನಾದರೂ, ನನಗೆ ನನ್ನದೇ ಒಂದು ಕಿರುಚಿತ್ರ ಮಾಡಬೇಕು ಎಂಬ ಆಸೆ. ಒಂದೆರಡು ಪುಟದಷ್ಟು ಸ್ಕ್ರಿಪ್ಟ್ ಬರೆದು ಅವರಿಗೆ ತೋರಿಸಿದ್ದೆ. ಅವರು ಬೆನ್ನು ತಟ್ಟಿ ಮಾಡು ಎಂದಿದ್ದಷ್ಟೇ ಅಲ್ಲ, ಅದಕ್ಕೆ ತಾವೇ ಛಾಯಾಗ್ರಾಹಕರೂ ಆಗಿಬಿಟ್ಟಿದ್ದರು. ನೆನಪಿಡಿ-ಅವರಿಗಾಗಲೇ ತಮ್ಮ ಛಾಯಾಗ್ರಹಣಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ೮ಮಿಮಿ ಕ್ಯಾಮೆರಾ ಹೊಂದಿಸಿ ಚಿತ್ರ ತೆಗೆಸಿಯೂ ಬಿಟ್ಟರು. ನಾನೇ ಅದನ್ನು ಸಂಕಲಿಸುವುದಕ್ಕೆ ಬಿಟ್ಟರು. ಸಂಕಲಿಸುವುದಕ್ಕೆ ಬೇಕಾದ ೮ಮಿಮಿ ಕಟರ್‍, ಸಿಮೆಂಟ್, ಪುಟ್ಟ ಮೂವಿಯೋಲ ಎಲ್ಲವನ್ನೂ ಹೊಂದಿಸಿಕೊಟ್ಟರು. ಸೋದರ ಅಳಿಯನಾದ್ದರಿಂದ ಪ್ರೀತಿಯಿಂದ ಇಷ್ಟೆಲ್ಲಾ ಮಾಡಿರಬಹುದೆಂದು ನೀವು ಅಂದುಕೊಳ್ಳಬಹುದು – ಆದರೆ, ಮುಂದೆ ಅವರು ಇನ್ನಿತರ ಫಿಲಂ ಮೇಕರರನ್ನು ಹುರುದುಂಬಿಸಿರುವುದನ್ನು ನೋಡಿದರೆ ಸಿನೆಮಾದ ಬಗ್ಗೆ ಅವರಿಗಿದ್ದ ವಿಶಾಲ ಹೃದಯ ಹಾಗು ಪ್ರೀತಿ ನಿಮಗೆ ಅರ್ಥವಾದೀತು.

ಯಾಕೆ ಹೇಳಿದೆನೆಂದರೆ, ಪುಟ್ಟ ಹುಡುಗನಾಗಿದ್ದಾಗ ಎತ್ತಿ ಆಡಿಸಿದವರು, ನಾವು ಬೆಳೆದಂತೆ, ನಮ್ಮ ಮನಸ್ಸು ಬೆಳೆದಂತೆ ಅದಕ್ಕೆ ಸಮನಾಗಿ ಪ್ರತಿಕ್ರಿಯಿಸುತ್ತಿದ್ದರು – ಉತ್ತೇಜಿಸುತ್ತಿದ್ದರು. ದೊಡ್ಡವರಾದ ಮೇಲೂ ನಮ್ಮನ್ನು ಪುಟ್ಟವರಂತೆ ಮಾತಾಡಿಸುವ ತಪ್ಪನ್ನು ಅವರು ಎಂದೂ ಮಾಡಿರಲಿಲ್ಲ. ನಾನು ವಯಸ್ಸಿನಲ್ಲಿ ದೊಡ್ಡವನಾದಂತೆ ನಾನು ಬರೆಯುತ್ತಿದ್ದ ಹಾಗು ನಟಿಸುತ್ತಿದ್ದ ನಾಟಕಗಳ ಬಗ್ಗೆ ಪ್ರಬುದ್ಧವಾಗಿಯೇ ಪ್ರತಿಕ್ರಯಿಸುತ್ತಿದ್ದರು. ಅದು ಅವರ ಚಲನಶೀಲ ಮನಸ್ಸಿಗೆ ಸಾಕ್ಷಿ.

೭೯/೮೦ರ ಇಸವಿಯಲ್ಲಿ ಪ್ರೇಮಾ ಕಾರಂತರ ‘ಅಲಿಬಾಬಾ’ ನಾಟಕದಲ್ಲಿ ನಾನು ಅಲಿಬಾಬನಾಗಿ ನಟಿಸಿದ್ದೆ. ಅದನ್ನು ಬಿಡುವು ಮಾಡಿಕೊಂಡು ಬಂದು ನೋಡಿದ್ದರು. ಎಲ್ಲರೂ ನಾಟಕದಲ್ಲಿ ನನ್ನ ಮಾತು-ಕುಣಿತವನ್ನು ಹೊಗಳುತ್ತಿದ್ದರು. ನನ್ನ ತಲೆಗೆ ಎರಡು ಕೋಡುಬಂದಿತ್ತು. ನಾನು ಅಂತರಿಕ್ಷದಲ್ಲಿ ಹೋಗಿ ಕೂತಿದ್ದೆ. ಅವರು ಒಂದೆರಡು ದಿನದ ನಂತರ ನಗುತ್ತಾ ಹೇಳಿದ್ದು – “ನೀನು ತುಂಬಾ ಕಾನ್ಷಿಯಸ್ ಆಕ್ಟರ್‍. ಸಹಜವಾಗಿ ನಟಿಸಲು ನಿನಗೆ ಬರುವುದಿಲ್ಲ. ನೆನಪಿಟ್ಟುಕೋ”. ನಂತರ ಅವರ ಮಾತು ನೂರಕ್ಕೆ ನೂರು ನಿಜ ಎಂದು ನನ್ನ ಅರಿವಿಗೆ ಬಂದಿತ್ತು. ಆಸ್ಟ್ರೇಲಿಯಾದಲ್ಲಿ ‘ಜೋಕುಮಾರ ಸ್ವಾಮಿ’ ನಾಟಕ ಮಾಡಿಸಿದಾಗ ನಾನೇ ಬಸಣ್ಣ ಮಾಡಬೇಕಾದಾಗ ಅವರ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಿತ್ತು. ಹಾಗೆಯೇ ಸಿನೆಮಾ ನಟನೆಯ ಬಗ್ಗೆಯೂ ಸ್ಪಷ್ಟವಾದ ನಿಲುವು ರಾಮಚಂದ್ರರಿಗೆ ಇದ್ದದ್ದನ್ನು ಅವರೊಡನೆ ಕೆಲಸಮಾಡಿದ ಯಾವ ನಟರಾದರೂ ನಿಮಗೆ ಹೇಳಿಯಾರು. ಅಸಹಜತೆ, ಕೃತ್ರಿಮತೆಯನ್ನು ದೂರದಿಂದಲೇ ಗುರುತಿಸುವುದಷ್ಟೇ ಅಲ್ಲ – ಅದಕ್ಕೆ ತಟ್ಟನೆ ಪ್ರತಿಕ್ರಯಿಸುವುದಕ್ಕೆ ಅವರೆಂದೂ ಹಿಂಜರಿದವರಲ್ಲ.

ನಾನು ಆಸ್ಟ್ರೇಲಿಯಾಕ್ಕೆ ಬಂದ ಮೇಲೆ, ಯಾವು ಯಾವುದೋ ಸಿನೆಮಾಗಳ ಯಾವು ಯಾವುದೋ ದೃಶ್ಯಗಳ ಬಗ್ಗೆ ಫೋನಿನಲ್ಲಿ ಗಂಟೆಗಟ್ಟಲೆ ಮಾತಾಡುತ್ತಿದ್ದೆವು. ನಾನೊಮ್ಮೆ ಮೈಕ್ ಲೀ ತೆಗೆದ “ವೆರಾ ಡ್ರೇಕ್” ಚಿತ್ರದ ದೃಶ್ಯವೊಂದರ ಬಗ್ಗೆ ಅವರಿಗೆ ಹೇಳಿದ್ದೆ. ವೇರಾ ಡ್ರೇಕಳ ಮಗಳ ಸೀನು. ಅವಳು ಉತ್ಸಾಹದ ಹುಡುಗಿಯೇನೂ ಅಲ್ಲ. ಮನೆಯವರು ಅವಳಿಗೊಬ್ಬ ಜತೆಗಾರನನ್ನು ಹೊಂದಿಸಲು ಹವಣಿಸುತ್ತಿದ್ದಾರೆ. ಆ ಹುಡುಗಿಗೆ ಒಂದು ಫ್ಯಾಕ್ಟರಿಯಲ್ಲಿ ಬಲ್ಬುಗಳನ್ನು ಟೆಸ್ಟ್ ಮಾಡುವ ಕೆಲಸ. ಒಂದೇ ಉದ್ದದ ಶಾಟಿನ ಸೀನದು. ಸಿನೆಮಾಟಿಕಲೀ ಹೇಳಿಕೊಳ್ಳುವಂತಹುದೇನೂ ಅಲ್ಲ. ಆ ಸೀನಿನಲ್ಲೂ ಏನೂ ಆಗುವುದಿಲ್ಲ. ಆ ಹುಡುಗಿ ಬಲ್ಬನ್ನು ಒಂದು ಬದಿಯಿಂದ ತೆಗೆದು, ಹೋಲ್ಡರಿಗೆ ಚುಚ್ಚಿ, ಅದು ಹತ್ತಿಕೊಂಡೊಡನೆ ತೆಗೆದು ಪಕ್ಕಕ್ಕಿಟ್ಟು ಮತ್ತೊಂದು ಬಲ್ಬನ್ನು ತೆಗೆದು… ಹೀಗೇ ಮುಂದುವರೆಯುತ್ತದೆ. ಯಾಕೆ ನಮಗೆ ಆ ಬಗೆಯ ಸೀನುಗಳನ್ನು ಯೋಚಿಸಲು ಕಷ್ಟವಾಗುತ್ತದೆ ಎಂಬುದು ಅವರನ್ನು ಕಾಡಿತ್ತು. ಒಂದೆರಡು ವರ್ಷಗಳ ಮೇಲೆ ಕೂಡ ಅವರು ಆ ಸೀನನ್ನು ನೆನಪಿಸಿಕೊಂಡು ನಾವಿನ್ನೂ ಸೀನುಗಳನ್ನು ಹೊಸಬಗೆಯಲ್ಲಿ ಯೋಚಿಸುವುದನ್ನು ಕಲಿತಿಲ್ಲವೇ ಎಂದು ಹಪಹಪಿಸುತ್ತಿದ್ದರು. ಇಡೀ ಕಥಾನಿರೂಪಣೆಯ ಬಗ್ಗೆ ಚಿಂತಿಸುತ್ತಿದ್ದ ಅವರ ಸಿನೆಮಾದ ಬಗೆಗಿನ ಆಸ್ಥೆಯ ಆಳ ಬೆಚ್ಚಿಸುವಂತಹದು.

ಹೀಗೆ ಬರೆಯುತ್ತಾ ಹೋದರೆ ನೂರಾರು ನಿದರ್ಶನಗಳು, ಘಟನೆಗಳು, ಸಂಗತಿಗಳು ಮನಸ್ಸಿಗೆ ನುಗ್ಗಿ ಬಂದು ಕಾಡುತ್ತದೆ. ಅವರ ಅಚ್ಚುಕಟ್ಟುತನ ಹೆಚ್ಚೋ, ಕರಾರುವಕ್ಕು ಹೆಚ್ಚೋ, ಬೆಚ್ಚಗಿನ ಹೃದಯ ಹೆಚ್ಚೋ, ಕಲಾನೈಪುಣ್ಯತೆ ಹೆಚ್ಚೋ ಒಂದೂ ಗೊತ್ತಾಗದೆ ಗೊಂದಲ ಹಾಗು ವಿಷಣ್ಣತೆಯಲ್ಲಿ ಮುಳುಗುತ್ತೇನೆ. ಬರೆಯಬೇಕಂದುಕೊಂಡಿದ್ದು ಬರೆಯಲಾಗದ ಹಾಗಾಗುತ್ತದೆ…

ಹೋದ ವರ್ಷ ಯಾವುದೋ ಕುಟುಂಬದ ವಿಷಯಕ್ಕೆ ಅವರ ಜತೆ ಜಗಳವಾಡಿದ್ದೆ. ಫೋನಿನಲ್ಲಿ ನನ್ನ ಕೂಗಾಟವನ್ನು ಸುಮ್ಮನೆ ಕೇಳಿಸಿಕೊಂಡಿದ್ದರು. ಅದು ಸಾಧಾರಣವಾಗಿ ಅವರ ರೀತಿಯಲ್ಲ. ನಂತರ ಒಂದು ಸಾಲಿನ ಈಮೇಲ್ ಕಳಿಸಿದ್ದರು. ಆದರೂ ಐದಾರು ತಿಂಗಳಿಂದ ಸಿಟ್ಟು ಮಾಡಿಕೊಂಡು ಅವರ ಜತೆ ಮಾತು ಬಿಟ್ಟಿದ್ದೆ. ಅವರಿಗೆ ಹುಷಾರಿಲ್ಲ ಎಂದು ಗೊತ್ತಾದೊಡನೆ ತಟ್ಟನೆ ಫೋನ್ ಮಾಡಿದೆ. ಏನೂ ಆಗದವರಂತೆ ತಮ್ಮ ಅಸ್ವಾಸ್ಥ್ಯವನ್ನು ವಿವರವಾಗಿ ಹೇಳಿದರು. ತಮ್ಮ ಕರಾರುವಕ್ಕು ನಿರೀಕ್ಷೆಗೆ ಸರಿಯಾದ ಉತ್ತರಗಳು ಡಾಕ್ಟರುಗಳಿಂದ ಸಿಗದಾಗ ಎಂದಿನಂತೆ ಪರಿತಪಿಸಿದರು. ಹಲವು ಸಲ ತಮ್ಮ ನಡುಗುವ ದನಿಯ ಬಗ್ಗೆ “ಚಿಂತಿಸಿಬೇಡ, ಅದು ಬರೇ ನಿಶಕ್ತಿ ಅಷ್ಟೆ, ಸರಿ ಹೋಗುತ್ತದೆ” ಎಂದು ಸಮಜಾಯಿಷಿ ಹೇಳಿದರು. ನಂತರ ಗಂಟಲು ಒಣಗಿ ಸುಸ್ತಾಗುವವರೆಗೂ ಸಿನೆಮಾಗಳ ಬಗ್ಗೆ ಮಾತಾಡಿದೆವು. ಇನ್ನೂ ಮುಗಿದಿರಲಿಲ್ಲ. ಒಂದೆರಡು ದಿನದಲ್ಲಿ ಮತ್ತೆ ಮಾಡುತ್ತೇನೆ ಎಂದಿದ್ದೆ. ಅದು ಈ ವರ್ಷದ ಮೊದಲ ಭಾನುವಾರ. ಆದರೆ… ಅವರ ಬಗ್ಗೆ ಇಷ್ಟು ಬೇಗ ಹೀಗೆಲ್ಲಾ ಬರೆಯುತ್ತೇನೆ ಅಂದುಕೊಂಡಿರಲಿಲ್ಲ. ಏಕಂದರೆ ಅವರು ದಾಟಿ ಬಂದ ಕೋಟಲೆಯನ್ನು ನೆನಪಿಸಿಕೊಂಡಾಗ ಅಷ್ಟು ಸುಲಭದಲ್ಲಿ ಬಿಟ್ಟುಕೊಡದವರು ಅವರು. ನನ್ನ ಛಲವಾದಿ ಮಾವ ನನಗೆ ಎಂದೂ ಕಾಣುವುದು ಹಾಗೆಯೇ.

ಈಗಲೂ ನಮ್ಮ ಕೊನೆಯ ಜಗಳದಲ್ಲಿ ನಾನೇ ಸರಿ ಎಂಬ ಪಟ್ಟು ನನ್ನದು. ಈಗ ಅವರಿಲ್ಲದಾಗ ನನ್ನ ನಿಲುವು ಬದಲಾಗಿಲ್ಲ. ನಾನು ಹಾಗೆ ಪಟ್ಟು ಹಿಡಿಯುವುದೇ ಅವರಿಗೂ ಸರಿಕಾಣುತ್ತದೆ ಎಂದು ನನಗೆ ಚೆನ್ನಾಗಿ ಗೊತ್ತು.

 

About The Author

ಸುದರ್ಶನ್

ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ