Advertisement
ಆ ಹೂವಿನಿಂದಲೆ ಇಷ್ಟೆಲ್ಲ ಆಯಿತು ಅನ್ನಬಹುದೆ. ಗೊತ್ತಿಲ್ಲ!

ಆ ಹೂವಿನಿಂದಲೆ ಇಷ್ಟೆಲ್ಲ ಆಯಿತು ಅನ್ನಬಹುದೆ. ಗೊತ್ತಿಲ್ಲ!

ಕೆಂಪುಹುಡಿಮಣ್ಣಿನ ಮೂರು ಸುತ್ತು ಎಡಕ್ಕೆ ಹೊರಳುವ ನಾಲ್ಕು ಸುತ್ತು ಬಲಕ್ಕೆ ಹೊರಳುವ ದಾರಿ ಮುಗಿಯಿತು. ಈಗ ಕಪ್ಪುಮಣ್ಣಿನ ಬೇರೆ ತರಹದ ಮರಗಳ ದಟ್ಟಕಾಡುದಾರಿ. ಕಾಲಿಗೋ ಪುಳಕ! ದಾರಿ ಹೊರಳಿದಂತೆ ಹೊರಳುತ್ತಾ ನಡೆದೆ. ಸಣ್ಣ ಸಣ್ಣ ತಿರುವುಗಳು. ಎಡಬಲ ಎದೆಮಟ್ಟದ ಪೊದೆಗಳು. ಸಣ್ಣಸಣ್ಣ ಕಾಡುಹೂಗಳು, ಸಣ್ಣಸಣ್ಣ ಕಾಡುಹಣ್ಣುಗಳು. ಹಾವಿನಂತೆ ಸುರುಳಿಸುರುಳಿ ಸುತ್ತಿಕೊಂಡು ಮರವನ್ನೇ ಬಗ್ಗಿಸಿದಂತೆ ಮೇಲಿಂದ ತೇಲಾಡುವ ಬಳ್ಳಿಗಳು. ದಪ್ಪನೆಯ ಕಾಂಡದ ಮರಗಳ ಮೇಲೆ ಬೇರೆ ತರಹದ ಸಣ್ಣಸಣ್ಣ ಎಲೆಯ ಸಸ್ಯಗಳು. ಜೀವವೈವಿಧ್ಯದ ಸ್ಪಷ್ಟ ಮಾದರಿ.
ಇಂದ್ರಕುಮಾರ್ ಎಚ್.ಬಿ. ಹೊಸ ಕಾದಂಬರಿ “ಎತ್ತರ”ದ ಕೆಲ ಪುಟಗಳು ನಿಮ್ಮ ಓದಿಗೆ

ಹೆಗ್ಗಾನಿನ ನಡುವಿನ ಸಣ್ಣಕಾಡುಹಳ್ಳಿಯಂಥ ಕತ್ಲೆಕಾನು ಊರಿನ ಜನರ ಮನೆಗಳ ದಾಟಿ, ಮರಗಳ ಮನೆಯ ಕಾಡುದಾರಿಯನ್ನು ಪ್ರವೇಶಿಸಿದ್ದೆ. ಕಾಡಿನ ಮನಮೋಹಕ ದಾರಿ. ಯಾವ ಜೀವಜಂತು ಬೇಕಾದರೂ ಬರಬಹುದು ಎದುರು ನಿಲ್ಲಬಹುದು ಹಿಂದಿನಿಂದ ಕಾಣಿಸಿಕೊಳ್ಳಬಹುದು ಮೇಲಿನಿಂದ ಹಾರಬಹುದು ಅನ್ನುವ ಆತಂಕಿತ ನಿರೀಕ್ಷೆ ವಿಶೇಷ ಸುಖದ್ದು. ಬಹಳ ವರ್ಷಗಳ ಮೇಲೆ ಬಹಳ ದೂರ ಒಬ್ಬನೇ ಕಾಡಿನಲ್ಲಿ ನಡೆಯುತ್ತಿದ್ದೆ. ಬಹಳ ವರ್ಷಗಳ ಮೇಲೆ ನನ್ನನ್ನು ನಾನೇ ಎಚ್ಚರಿಸಿಕೊಂಡು ಕೈಬಾಯಿಮುಖಮೈ ತೊಳೆಸಿಕೊಂಡು ನನ್ನ ಹಸಿವಿಗೆ ನಾನೇ ಉಪಾಹಾರವನ್ನು ಹುಡುಕಿಕೊಂಡು ಹೋಗಿ ದುಡ್ಡಿಗೆ ಆಹಾರವನ್ನು ಖರೀದಿಸಿ ಹೊಟ್ಟೆ ತುಂಬಿಸಿಕೊಂಡು ನಡೆಯುತ್ತಿದ್ದೆ. ಬಹಳ ವರ್ಷಗಳ ಮೇಲೆ ನನ್ನ ಶ್ವಾಸಕೋಶಗಳಲ್ಲಿ ವಾಹನಗಳ ಮಾಲಿನ್ಯವಿರದ ಗಾಳಿ, ಅತಿಹೆಚ್ಚಿನ ಮರಗಳು ಬಿಡುವ ಅತಿಹೆಚ್ಚಿನ ಆಮ್ಲಜನಕವಿರುವ ಗಾಳಿ ತುಂಬಿಕೊಂಡಿತ್ತು. ಆಧುನಿಕತೆಯ ಯಂತ್ರಗಳು ಕರ್ಕಶ ಶಬ್ಧವನ್ನು ಮಾಡದ ಕಾಡಿನ ಸಜೀವ ಸದ್ದು ನನ್ನ ಕಿವಿಗಳಿಗೆ ಬಿದ್ದು ಪುಳಕವನ್ನೆಬ್ಬಿಸುತ್ತಿತ್ತು.

(ಇಂದ್ರಕುಮಾರ್ ಎಚ್.ಬಿ.)

ಕೆಂಪುಹುಡಿಮಣ್ಣಿನ ಮೂರು ಸುತ್ತು ಎಡಕ್ಕೆ ಹೊರಳುವ ನಾಲ್ಕು ಸುತ್ತು ಬಲಕ್ಕೆ ಹೊರಳುವ ದಾರಿ ಮುಗಿಯಿತು. ಈಗ ಕಪ್ಪುಮಣ್ಣಿನ ಬೇರೆ ತರಹದ ಮರಗಳ ದಟ್ಟಕಾಡುದಾರಿ. ಕಾಲಿಗೋ ಪುಳಕ! ದಾರಿ ಹೊರಳಿದಂತೆ ಹೊರಳುತ್ತಾ ನಡೆದೆ. ಸಣ್ಣ ಸಣ್ಣ ತಿರುವುಗಳು. ಎಡಬಲ ಎದೆಮಟ್ಟದ ಪೊದೆಗಳು. ಸಣ್ಣಸಣ್ಣ ಕಾಡುಹೂಗಳು, ಸಣ್ಣಸಣ್ಣ ಕಾಡುಹಣ್ಣುಗಳು. ಹಾವಿನಂತೆ ಸುರುಳಿಸುರುಳಿ ಸುತ್ತಿಕೊಂಡು ಮರವನ್ನೇ ಬಗ್ಗಿಸಿದಂತೆ ಮೇಲಿಂದ ತೇಲಾಡುವ ಬಳ್ಳಿಗಳು. ದಪ್ಪನೆಯ ಕಾಂಡದ ಮರಗಳ ಮೇಲೆ ಬೇರೆ ತರಹದ ಸಣ್ಣಸಣ್ಣ ಎಲೆಯ ಸಸ್ಯಗಳು. ಜೀವವೈವಿಧ್ಯದ ಸ್ಪಷ್ಟ ಮಾದರಿ. ನೋಡಿ ಕಣ್ತುಂಬಿಸಿಕೊಳ್ಳುವುದು ದಿನದ ಅಪರೂಪದ ಸಮಯ. ಕಳೆದೆರೆಡು ವಾರಗಳಿಂದ ಅನುಭವಿಸುತ್ತ ಬಂದಿದ್ದೆ. ದೇಹವನ್ನು ಹುರಿಗೊಳಿಸುತ್ತ. ಅನುಭವದ ಹೊಸ ಶಾಖೆ ಬುದ್ಧಿಯಲ್ಲಿ ಆಪ್ತವಾಗಿ ಸ್ಥಾಪಿಸಿತ್ತು. ಹೊಸ ಹೊಸ ಪಕ್ಷಿ ಸದ್ದು ಹೊಸ ಹೊಸ ವಾಸನೆ ನನ್ನ ಗುರುತಿಸು ನನ್ನ ಕಂಡು ಹಿಡಿ ಹೊಸ ಹೊಸ ಎತ್ತರ ನನ್ನ ಕ್ರಮಿಸು ಅಂತ ಪ್ರೇರಣೆ ನೀಡುತ್ತಿತ್ತು. ಪ್ರಕೃತಿ ಸಹಜ ಶುದ್ಧ ಪ್ರೇರಣೆ. ಸ್ಪಂದಿಸುತ್ತಿದ್ದೆ. ಹೊಸ ಮನುಷ್ಯನಾಗುತ್ತಿದ್ದೆ.

ಎದ್ದ ಮೇಲಿನ ಮುಖತೊಳೆ, ಸ್ನಾನ ಮಾಡು, ಬಟ್ಟೆ ಹಾಕಿಕೋ, ಸಾಮಾನು ಜೋಡಿಸಿಕೋ, ಬೀಗ ಹಾಕು ಕೆಲಸಗಳಿಗೆ ಅರ್ಧ ಗಂಟೆ ಹಿಡಿದರೂ, ತಿಂಡಿ ತಿಂದು ಸಣ್ಣ ಪೇಟೆಯ ಎಡಬಲದ ಅಂಗಡಿಮುಂಗಟ್ಟು ದೇವಸ್ಥಾನ, ಚರ್ಚಿನ ದಾರಿ ಕ್ರಮಿಸಿ ಕಾಡಿಗೆ ಹೊರಳಲು ಮುಕ್ಕಾಲು ಗಂಟೆ ಹಿಡಿದರೂ, ಈ ಕಾಡಿನ ಮಾರ್ಗದಲ್ಲಿ ಕ್ರಮಿಸಿ ನನ್ನ ಪ್ರಕೃತಿ ಸೌಂದರ್ಯದ ಜೀವವೈವಿಧ್ಯದ ಸೃಷ್ಟಿಸೊಬಗಿನ ಕೀಟಹುಳುಗಳ ಲೋಕದ ಸರೀಸೃಪಗಳ ಸಸ್ತನಿಗಳ ಹಕ್ಕಿಗಳ ಪ್ರಪಂಚ ತಡೆದು ನಿಲ್ಲಿಸಿ ನನ್ನ ನೋಡು ನನ್ನ ಮುಟ್ಟು ನನ್ನ ಬಳಸು ನನ್ನ ವಿಶೇಷತೆ ಗಮನಿಸು ಎಂದಂತಾಗಿ ಒಂದೂವರೆ ಗಂಟೆ ಮೀರಿ ಬಿಡುತ್ತಿತ್ತು. ಹತ್ತು ಗಂಟೆಯ ಆಸುಪಾಸಿಗೆ ಈ ಕಾಡು ನನ್ನ ಕೈ ಬಿಡುತ್ತಿತ್ತು. ವಿಶೇಷ ಕಳೆ ಬೆವರಿನ ಮುಖದ ಮೇಲೆ ಆಡುತ್ತಿರುತ್ತಿತ್ತು.

ಇಂದು ಇಷ್ಟು ದಿನ ಕಾಣಿಸಿರದ ಹೂವೊಂದು ಕಾಣಿಸಿ, ನನ್ನ ಮುಂದೆ ಹೋಗದೆ ತಡೆದು ನಿಲ್ಲಿಸಿತು. ಅದರ ವಿಶೇಷ ನೆರಳೆ ಬಿಳಿ ಮಿಶ್ರಿತ ಬಣ್ಣ ಒಮ್ಮೆಲೆ ಕಣ್‌ಸೆಳೆಯಿತು. ಕಿತ್ತೆ. ಕಿತ್ತ ಮೇಲೆ ಮೂಸಿದೆ, ಹೊರಳಿಸಿ ನೋಡಿದೆ. ಕನಕಾಂಬರ ದಾಸವಾಳದ ಮಿಶ್ರಿತ ಆಕೃತಿಯ ಹೊಸ ಹೂವು. ವಿಶೇಷ ವಾಸನೆ. ಎಲ್ಲ ದಳ ಮುಟ್ಟಿ ಅರಳಿಸಿ ಅಗಲಿಸಿ ನೋಡಿದೆ. ನಡೆದೆ. ಬಿಸಾಡಲು ಮನಸ್ಸು ಬರಲಿಲ್ಲ. ಏನು ಮಾಡಬೇಕೆಂದು ಹೊಳೆಯಲಿಲ್ಲ. ಒಮ್ಮೆಲೆ ಸಣ್ಣ ಜ್ಞಾನೋದಯ. ಹಾಗೇ ಹೂವಿದ್ದಲ್ಲೇ ಗಿಡದ ಬಳಿ ಬಗ್ಗಿ ಅದನ್ನು ಮುಟ್ಟಿ ಹೊರಳಿಸಿ ಮೂಸಿ ನೋಡಬಹುದಿತ್ತಲ್ಲ, ಕೀಳಬಾರದಿತ್ತು. ಇನ್ನು ಸ್ವಲ್ಪ ಹೊತ್ತಾದರೂ ಅದು ತಾನಾಗಿ ಇರುತ್ತಿತ್ತು. ದೊಡ್ಡ ವಿಜ್ಞಾನದ ಸಂಶೋಧಕ, ಲೇಖಕ, ಬೋಧಕನಂತೆ ಕಿತ್ತು ಬಿಟ್ಟೆ. ಈಗಿನಿಂದ ಅದರ ಕೊನೆಯ ಕ್ಷಣಗಳು ಶುರು. ಈಗ ಏನು ಮಾಡಲಿ, ಎಲ್ಲಿ ಇಡಲಿ. ಕಿತ್ತ ಜಾಗದಲ್ಲೀಗ ಇದಕ್ಕೆ ಸ್ಥಾನವಿಲ್ಲ. ಜೇಬಲ್ಲಿಟ್ಟರೆ ಹಾಳಾದೀತೆಂದು, ಕೈಯಲ್ಲೇ ಹಿಡಿದು ನಡೆದೆ. ಕಾಡುದಾರಿ ನಿಧಾನ ಏರುದಾರಿಯಾಗಿ ಸುರುಳಿದಾರಿಯಾಗಿ ಏದುಸಿರಿನ ಸುಸ್ತಿನ ದಾರಿಯಾಯಿತು. ನಡೆದೆ. ಹತ್ತಿದಂತೆ ನಡೆದೆ. ಈಗ ದೊಡ್ಡ ಆವರಣದಲ್ಲಿ ಮಧ್ಯ ನೆಟ್ಟಗೆ ನಿಂತ ಬೃಹತ್ ಬಂಗಲೆಮನೆಯ ತೋರಿಸಿತು.

ಇಂತಹುದೊಂದು ಕನಸಿನ ಕಟ್ಟಡದಲ್ಲಿ ಕನಸಿನಂತೆ ಜನರು ವಾಸಿಸುತ್ತ ಅವರೊಡನೆ ನಾನು ಒಡನಾಡುತ್ತ ಹೆಚ್ಚು ಅವಸರದಲ್ಲದ ಹೆಚ್ಚು ಒತ್ತಡವಲ್ಲದ ಹೆಚ್ಚು ಮೈಕೈನೋವಿಲ್ಲದ ಬಿಸಲಲ್ಲದ ನೆರಳೇ ಆಗಿರುವ ಗಾಳಿ ಬೆಳಕು ಸುಳಿಯುತ್ತಲೇ ಇರುವ ವಿರಾಮಕ್ಕೆ ಎದ್ದು ಓಡಾಡಿದರೆ ಮತ್ತೆ ಇದೇ ಕಾಡಿನ ಮರಗಳ ನೆತ್ತಿ ಅವುಗಳ ಮೇಲಿನ ನೀರಾವಿಯ ಮಬ್ಬು ಅವುಗಳ ಮೇಲಿನ ಪಶ್ಚಿಮ ಘಟ್ಟಗಳು ಅವುಗಳ ಮೇಲಿನ ನೀಲಿ ನೀಲಿ ನೀಲಿ ಆಕಾಶ. ಸ್ವರ್ಗದ ಬಾಗಿಲಿಗೆ ಬಂದು ನಿಂತಿದ್ದೆ. ಅಡ್ಡಗಲದ ದೊಡ್ಡ ಗೇಟು ತೆರೆದೆ. ಶಬ್ದ ಮಾಡಿತು. ನಾಯಿ ಓಡಿಬರಲಿಲ್ಲ. ದೂರದಲ್ಲಿ ಟೋಪಿ ಗಡ್ಡದ ಮುದಿಕೆಲಸಗಾರ ಕುಕ್ಕುರು ಕೂತು ಬಗ್ಗಿ ಹೂ-ಗಿಡಗಳನ್ನು ಗಮನಿಸುತ್ತಿದ್ದ. ಆವರಣ ಪ್ರವೇಶಿಸಿದೆ. ದುಂಡನೆಯ ಕಲ್ಲುಗಳನ್ನು ಹಾಕಿ ದಾರಿ ಮಾಡಿದ ಜಾಗದಲ್ಲಿ ನಡೆದೆ. ಕಾಲುದಾರಿಯ ಆಚೀಚೆ ಸಣ್ಣಹುಲ್ಲುಗಳು ಇನ್ನಾದರೂ ಇಬ್ಬನಿಯನ್ನು ಇಟ್ಟುಕೊಂಡಿದ್ದವು. ನಾಲ್ಕೇ ಮೆಟ್ಟಲೇರಿ ಬೃಹತ್ ಕಟ್ಟಡದ ಬೃಹತ್‌ಬಾಗಿಲ ಬಳಿ ನಿಂತೆ. ದೀರ್ಘ ಉಸಿರು ತೆಗೆದುಕೊಂಡೆ. ಎತ್ತರದ, ಮೇಲೆ ಕಮಾನಿ ಆಕಾರದಲ್ಲಿರುವ, ಮುಟ್ಟಿದರೆ ತಾನು ನಮ್ಮನ್ನು ಮುಟ್ಟಿ ಖುಷಿಕೊಡುವಂತಹ ಸಾಗುವಾನಿಯ ಕಲಾಕೃತಿಯುಳ್ಳ ಬಾಗಿಲು. ಅದಕ್ಕೆ ತಟ್ಟಲೆಂದೇ ಇಳಿಬಿಟ್ಟಿರುವ ವಿಶೇಷ ವಿನ್ಯಾಸದ ಲೋಹದ ಬಳೆ. ಟಕ್ ಟಕ್ ಎರಡು ಬಾರಿ ತಟ್ಟಿದೆ. ಎರಡು ನಿಮಿಷ ಕಾದೆ. ಬಾಗಿಲು ತೆರೆದುಕೊಳ್ತು. ತಳ್ಳಿ ಒಳ ಹೊಕ್ಕೆ. ಹೊರಗಿನ ಲೋಕ ಮರೆಯಾಯಿತು. ಹೊಸ ಒಳಲೋಕ ಶುರುವಾಯಿತು. ಪ್ರಕೃತಿಸೃಷ್ಟಿಯಿಂದ ಮನುಷ್ಯ ಸೃಷ್ಟಿಗೆ. ಹೊರಗೊಂದು ಲೋಕ, ಒಳಗೊಂದು ಲೋಕ. ಮನುಷ್ಯನ ಆಯ್ಕೆಯ ಮನುಷ್ಯನ ವಾಸದ ಮನುಷ್ಯ ವಾಸನೆಯ – ಸುಖದ ಇರುವಿಕೆಯ ಸೌಲಭ್ಯದ ಲೋಕ. ಕಣ್ಣು ಮೂಗು ಚರ್ಮ ನಾಲಗೆಗಳಿಗೆ ಮತ್ತೊಂಥರ ಸುಖದ ಲೋಕ. ಅದೇ ವಿಶೇಷ ವಾಸನೆ ವಿಶೇಷ ಭಾವವನ್ನು ಸ್ಫುರಿಸಿತು. ಅದೇ ಮೌನ. ಅವವೇ ಕೋಣೆಗಳೊಳಗೆ ನೋಡಲಾರದೆ ನೋಡಲಾಗದೆ ಇರಲಾರದೆ ಕಣ್ಣಂಚಿನಿಂದ ಅಲ್ಲಿಂದ ಹೊರಬಹುದಾದ ಅಥವಾ ಅಲ್ಲಿರಬಹುದಾದ ವಸ್ತುವಿಶೇಷಗಳನ್ನು ಗಮನಿಸುತ್ತ ಡೈನಿಂಗ್ ಟೇಬಲ್ ಇರುವ ಜಾಗದಲ್ಲಿ ನಿಂತೆ. ಮನೆಯ ಕೆಲಸದವಳು ಬಂದಳು. ಕಪ್ಪುಬಣ್ಣದವಳು, ಗುಂಗುರುಗೂದಲಿನವಳು. ಈ ಎರಡು ವಾರಗಳಲ್ಲಿ ನಾಲ್ಕೇ ಬಾರಿ ಮಾತನಾಡಿದವಳು. ಟ್ರೇನಲ್ಲಿ ಜ್ಯೂಸ್ ಹಿಡಿದಿದ್ದಳು. ತೆಳ್ಳನೆಯ ಉದ್ದನೆಯ ಗಾಜಿನ ಲೋಟದಲ್ಲಿನ ಹಸಿರು ಬಣ್ಣದ ಜ್ಯೂಸ್. ಗಾಜಿನ ಲೋಟವನ್ನು ಬಾಯಿಕಚ್ಚಿ ಕುಡಿದು ಟ್ರೇನಲ್ಲೇ ಇಟ್ಟೆ. ಹೊರಳಿದಳು ಕಿಚನ್ನಿನ ಕಡೆ. ಜೀವ ತಣ್ಣಗಾಯಿತು. ಮೈಮೇಲಿನ ಬೆವರೂ ತಣ್ಣಗಾಯಿತು.ಬಾಯೊಳಗೆ ಒಂಥರಾ ಹೊಸ ಸಪ್ಪೆಸಪ್ಪೆ ಸಿಹಿಸಿಹಿ ಒಗರು ಮಿಶ್ರಿತ ರುಚಿ. ಬದಲಾವಣೆ ತರುವ ರುಚಿ ಅಂತಲೇ ಅದಕ್ಕೆ ಹೆಸರಿಟ್ಟಿದ್ದೆ.

ಬಲಕ್ಕೆ ಹೊರಳಿ ಸುರುಳಿಯಾಕಾರದ ಮೆಟ್ಟಿಲುಗಳನ್ನು ಮರದ ಹ್ಯಾಂಡ್‌ರೇಲಿಂಗ್ ಹಿಡಿದು ನಿಧಾನಕ್ಕೆ ಏರಿದೆ. ಸಂಭ್ರಮವೂ ಏರತೊಡಗಿತು. ಈಗಾಗಲೇ ಕತ್ಲೆಕಾನಿನಿಂದ ಬಹಳಷ್ಟು ದೂರ ಬಂದಿದ್ದೇನೆ. ಬೆಳಕಿನಕಾನು, ಐಷಾರಾಮಿ ಕಾನು ಇದು. ಈಗ ಬಹಳಷ್ಟು ಎತ್ತರಕ್ಕೆ ಹೋಗುತ್ತಿದ್ದೇನೆ. ಇದೊಂಥರ ಸುತ್ತಲೆಕಾನು. ತಿರುಗಲೆ ಕಾನು. ನನ್ನ ದೂರದ ಬಾಡಿಗೆಮನೆ ಗೂಡೇಶಾ, ಸಣ್ಣಚುಕ್ಕೆಯಾಗುವಷ್ಟು ಎತ್ತರ ಮತ್ತು ದೂರ. ಮೊದಲನೆಯ ಮಹಡಿ. ಮೂರುದಿಕ್ಕಿಗೂ ವಿಸ್ತರಿಸಿದ ಸಣ್ಣದಾರಿ, ಎಡಬಲ ಕೋಣೆಗಳು. ಮತ್ತೊಂದು ಮಹಡಿಗೆ ಮೆಟ್ಟಿಲೇರಿದೆ. ಮೆಟ್ಟಿಲ ಪಕ್ಕದ ಒಂದು ಗಾಜಿನಕಿಟಕಿ ಪ್ರಪಾತವನ್ನು ತೋರಿಸಿ ಮನುಷ್ಯನನ್ನು ಸೊಕ್ಕಿಲ್ಲದವನನ್ನಾಗಿ ಮಾಡಿಸುವಂತ ಅದ್ಭುತರಮ್ಯ ದೃಶ್ಯ. ಎರಡು ನಿಮಿಷ ನಿಲ್ಲಲೇಬೇಕು ನೋಡಲೇ ಬೇಕು. ಪಾಚಿಹಸಿರು, ಗಿಣಿಹಸಿರು, ಕೆಂಪಸಿರು, ಕೆಂದಸಿರು, ಕಪ್ಪಸಿರುಗಳ ಅಲೆಅಲೆಅಲೆ ಮರಗಳ ನೆತ್ತಿ.. ಹೊಗೆ-ಆವಿ-ಇಬ್ಬನಿಮಿಶ್ರಿತ ಗಾಳಿಯಾಟ. ಅಲ್ಲೆಲ್ಲೋ ಸಣ್ಣಗೆ ಬೀಳುವ ಜಲಪಾತವೊಂದರ ಬಿಳಿನೊರೆನೀರು. ಮತ್ತೊಂದು ಮಹಡಿ ದಾಟಿದೆ ಮತ್ತೆ ಮೂರು ದಿಕ್ಕಿಗೆ ಹೊರಟ ಎಡಬಲ ಕೋಣೆಗಳ ಜಾಗ. ಮತ್ತೆ ಹೊರಳಿ ಕೊನೆಮಹಡಿಯ ಮೆಟ್ಟಿಲೇರಿದೆ. ಒಮ್ಮೆಲೆ ಒಬ್ಬನೇ ಅನ್ನುವಷ್ಟು ಹೆದರಿಕೆಯಾಗುವ ಜಾಗ. ವಿಲಕ್ಷಣ ಗಾಳಿಯ ಸುಯ್ದಾಟದ ಸದ್ದಿನ ಜಾಗ. ಒಂದೇ ವಿಶಾಲಕೋಣೆ. ಚೂಪುಛಾವಣಿಯ ನಾಲ್ಕು ದಿಕ್ಕಿಗೆ ಬಾಲ್ಕನಿ ತೆರೆಯಲ್ಪಟ್ಟ ದೊಡ್ಡ ಕಿಟಕಿಗಳ ವಿಶೇಷ ವಿನ್ಯಾಸದಲ್ಲಿ ಹಾರಾಡುವ ತೆಳುಬಿಳಿ ಕರ್ಟನ್ನುಗಳ ದೊಡ್ಡಪೇಂಟಿಂಗ್‌ಗಳ ಅಪರೂಪದ ಮರಮುಟ್ಟುಗಳ ಪೀಠೋಪಕರಣಗಳ ನಮ್ಮನ್ನು ಬೇರೆ ಯಾರೋ ಆಗಿಸಿಬಿಡುವಂಥಹ ಜಾಗ.

ಈಗ ಏನು ಮಾಡಲಿ, ಎಲ್ಲಿ ಇಡಲಿ. ಕಿತ್ತ ಜಾಗದಲ್ಲೀಗ ಇದಕ್ಕೆ ಸ್ಥಾನವಿಲ್ಲ. ಜೇಬಲ್ಲಿಟ್ಟರೆ ಹಾಳಾದೀತೆಂದು, ಕೈಯಲ್ಲೇ ಹಿಡಿದು ನಡೆದೆ. ಕಾಡುದಾರಿ ನಿಧಾನ ಏರುದಾರಿಯಾಗಿ ಸುರುಳಿದಾರಿಯಾಗಿ ಏದುಸಿರಿನ ಸುಸ್ತಿನ ದಾರಿಯಾಯಿತು. ನಡೆದೆ. ಹತ್ತಿದಂತೆ ನಡೆದೆ. ಈಗ ದೊಡ್ಡ ಆವರಣದಲ್ಲಿ ಮಧ್ಯ ನೆಟ್ಟಗೆ ನಿಂತ ಬೃಹತ್ ಬಂಗಲೆಮನೆಯ ತೋರಿಸಿತು.

ಇಲ್ಲಿ, ಈ ಜಾಗದಲ್ಲಿ ನನಗೆ ಒಂದು ಕೆಲಸ ಹುಟ್ಟಿಸಲಾಗಿತ್ತು. ಇದೊಂಥರ ಪುಣ್ಯವೇ ಅಂದುಕೊಂಡರೂ ನಿಜವೆಂದು ನಂಬಲಾಗದ ಸ್ಥಿತಿಯಲ್ಲಿ ನಾನಿದ್ದೆ. ಈ ಕೆಲಸ ನೆಚ್ಚಿಕೊಂಡು, ನಂಬಿಕೊಂಡು ಇನ್ನೂರು ಕಿಲೋಮೀಟರ್ ಕ್ರಮಿಸಿ ಬಂದಿದ್ದೆ. ನನ್ನ ಕೆಲಸದಲ್ಲಿ ಲೋಪವಿರಲಿಲ್ಲ, ಮೊದಲ ದಿನದ ಕೆಲನಿಮಿಷಗಳಲ್ಲೇ ನಾನು ಅವರು ಹುಡುಕುತ್ತಿದ್ದ ಸೂಕ್ತ ವ್ಯಕ್ತಿ ಅನ್ನುವಂತೆ ತಲೆಯಾಡಿಸಿದ್ದರು. ಬದುಕಿನ ವಿಲಕ್ಷಣ ಸನ್ನಿವೇಶದ ವಿಚಿತ್ರ ಸಮಯದಲ್ಲಿ ದೇಹ ಬಲುವಿಕಾರವಾಗಿ ವರ್ತಿಸುತ್ತಿದ್ದ ಕಾಲದಲ್ಲಿ ಈ ಸ್ವರ್ಗವನ್ನು ಕನಸಿನಂತೆ ನನಗೆ ಕೊಡಲಾಗಿತ್ತು. ವಿದೇಶದ ಮಹಾಘನಿ ಮರದ್ದೆನಿಸುವ ಪಕ್ಕಾ ಪಶ್ಚಿಮಘಟ್ಟಗಳ ಬಹಳ ವರ್ಷಗಳ ಸಮೃದ್ಧ ಬೀಟೆಯ ಮರದಿಂದ ನುರಿತ ಬಡಗಿಯಷ್ಟೇ ಮಾಡಲು ಸಾಧ್ಯವಾದ ಮರದ ದೊಡ್ಡ ಟೇಬಲ್ಲು, ಮನಮೋಹಿಸುವ ವಿನ್ಯಾಸದ ಮರದ ಕುರ್ಚಿಗಳು, ಟಿಪಾಯಿ.

ಮೆಟ್ಟಿಲೇರಿದ ತಕ್ಷಣ ಸಿಗುವ ಜಾಗದಲ್ಲೊಂದು ಗೋಡೆಗೆ ಅಂಟಿಕೊಂಡೇ ಇರುವ ಚೆಸ್ಟ್ ಆಫ್ ಡ್ರಾರ‍್ಸ್ ಇರುವ ಟೇಬಲ್ಲು. ಅದರ ಮೇಲೊಂದು ಅಗಲವಾದ ವೃತ್ತಾಕಾರದ ಹಿತ್ತಾಳೆಯಂಥಹ ಪಾತ್ರೆಯಲ್ಲಿ ನೀರು ತುಂಬಿ ಅದರಲ್ಲಿ ಅಗಲವಾಗಿ ಹರಡಿಕೊಂಡು ಸಮವಿನ್ಯಾಸದಲ್ಲಿ ತೇಲುತ್ತ ನಿಲ್ಲುವ ಆಕರ್ಷಕ ಹೂಗಳನ್ನು ಇಡಲಾಗಿತ್ತು. ಒಂದೊಂದು ದಿನ ಒಂದೊಂದು ತರಹದ ಹೂಗಳು. ಇಂದು ನೇರಳೆ ಬಣ್ಣದ ಐದೈದು ದಳಗಳ ಸಣ್ಣ ಹೂಗಳು ಈಸುವಂತೆ ನೀರಿನೊಳಗೆ ಓಡಿಯಾಡುತ್ತಿದ್ದವು. ಅಂಗಿ ಜೇಬಿನಿಂದ ಕಾಡಿನಲ್ಲಿ ಕಿತ್ತ ಹೂವನ್ನು ಮೃದುವಾಗಿ ತೆಗೆದೆ. ಇದು ಅವುಗಳಿಗಿಂತ ಭಿನ್ನ. ಹೂವಿನ ಹಿತ್ತಾಳೆ ಪಾತ್ರೆಯ ಪಕ್ಕ ಇಟ್ಟೆ. ಅದರ ಮೇಲೊಂದು ದೊಡ್ಡ ಪೇಂಟಿಂಗ್ ಗೋಡೆಗೆ ಅಂಟಿಕೊಂಡಂತೇ ಇತ್ತು. ಇಂದೇ ಕಂಡವನಂತೆ ಗಮನಿಸತೊಡಗಿದೆ. ದೇವರ ಎದುರು ಜನ ನಿಲ್ಲುವ ಭಾವದಲ್ಲಿ ಕೈಕಟ್ಟಿ ನಿಂತೆ. ಅದೆಷ್ಟು ನಾಜೂಕಿನಲ್ಲಿ ಬಣ್ಣಗಳನ್ನು ಬಳಸಿ ಅದೆಷ್ಟು ಏಕಾಗ್ರತೆಯಲ್ಲಿ ಚಿತ್ರಿಸಿದ್ದಾನೆ ಕಲಾವಿದ ಎಂಬ ಗೌರವ. ಅಮೂರ್ತಚಿತ್ರದಲ್ಲಿ ಕಾಡು, ಮರಗಳು, ಬೆಂಕಿ, ಪ್ರಾಣಿಗಳು. ಹಿನ್ನೆಲೆಯಲ್ಲಿ ಮನುಷ್ಯ ಹೀಗೆ. ಒಂದರೊಳಗೊಂದು ಸೇರಿ ಮತ್ತಿನ್ನೇನೋ ಆಗಿ, ಬಣ್ಣಗಳು ಒಂದು ತುದಿಯಲ್ಲಿ ಆಸೆಯನ್ನೂ ಇನ್ನೊಂದು ತುದಿಯಲ್ಲಿ ಕುತೂಹಲವನ್ನೂ ಮತ್ತೊಂದು ತುದಿಯಲ್ಲಿ ವೈಚಿತ್ರ್ಯವನ್ನೂ ಮಗದೊಂದು ತುದಿಯಲ್ಲಿ ಭಯವನ್ನೂ ಮೂಡಿಸುವಂತಿದ್ದವು. ಮಧ್ಯದಲ್ಲಿ ಶಾಂತಿ, ನಾಲ್ಕೂದಿಕ್ಕಿಗೆ ಹರಡುವಂತೆ, ಹೂವು ಅದರ ಕೇಂದ್ರವಾಗಿರುವಂತೆ. ಅಲ್ಲಿಂದ ಬಳ್ಳಿಗಳೋಪಾದಿಯ ತೆಳುಗೆರೆಗಳೂ ಹರಡಿಕೊಂಡಿರುವಂತೆ ಇತ್ತು. ಎಡಕೆಳತುದಿಯ ಭಾಗದಿಂದ ವೃತ್ತಾಕಾರವಾಗಿ ನೋಡುತ್ತ ಬಂದರೆ ಒಂದು ಕಥನ ಒಂದು ಅರ್ಥ, ಬಲಕೆಳತುದಿಯ ಭಾಗದಿಂದ ನೋಡಿದರೆ ಮತ್ತೊಂದು ಕಥನ ಮತ್ತೊಂದು ಅರ್ಥ, ಮಧ್ಯದಿಂದ ಬಳ್ಳಿಗಳು ಸೂಚಿಸಿರುವ ಸೂಕ್ಷ್ಮಗಳನ್ನು ಗಮನಿಸಿದರೆ ಮತ್ತಷ್ಟು ಗೂಢಾರ್ಥಗಳು. ಮುಗಿಯದ ಕಥನ ಮುಗಿಯದ ದಾಹ ಮುಗಿಯದ ಕಲೆಗೆ ತೋರುವ ಗೌರವ. ಒಮ್ಮೆ ಕಣ್ಮುಚ್ಚಿ ಅಂಗೈಗಳಿಂದ ಮುಖವೊರೆಸಿಕೊಂಡೆ. ಉಳಿದ ಕಲಾಸಂಶೋಧನೆ ನಾಳೆಗೆ. ಈಗ ಕೆಲಸ ಎಂದುಕೊಂಡು ಸುತ್ತಲೂ ಕಣ್ಣಾಡಿಸಿದೆ.

ಎಲ್ಲ ಕಿಟಕಿಗಳು ಎಂದಿನಂತೆ ತೆರೆದಿದ್ದವು. ವುಡನ್ ಫ್ಲೋರಿಂಗ್‌ನ ಕರಾರುವಕ್ ಜೋಡಣೆ ಹೆಜ್ಜೆ ಇಟ್ಟಂತೆ ಹೆಜ್ಜೆಗಳನ್ನು ಸಾಧನೆಯ ನಡಿಗೆಯಂತೆ ಬಿಂಬಿಸುತ್ತಿದ್ದವು. ಸಣ್ಣ ಕಿರಕ್‌ಕಿರಕ್ ಸದ್ದು ಆ ಸುತ್ತಣ ಮೌನದಲ್ಲಿ ಎದೆಯಲ್ಲೊಂದು ಹೆಮ್ಮೆಯನ್ನೇ ಮೂಡಿಸುತ್ತಿದ್ದವು. ಎಲ್ಲ ಕಿಟಕಿಗಳ ಬಳಿ ನಿಂತು, ಅಲ್ಲಲ್ಲಿನ ಆಯಾ ಪಾಲಿನ ಸ್ವರ್ಗವನ್ನು ಅನುಭವಿಸಿದೆ. ಇದರ ನೂರನೆಯ ಒಂದು ಭಾಗದ ಅನುಭವಕ್ಕೆ ದುಡ್ಡು ಕಸಿದುಕೊಳ್ಳುವ ರೆಸಾರ್ಟ್ ಹೊಟೆಲಿನ ಲೋಕ ಬಹುವೇಗದಲ್ಲಿ ಬೆಳೆಯುತ್ತಲಿರುವುದು ನೆನಪಾಯಿತು. ಈ ಅನುಭವಕ್ಕೆ ಈ ಸಮಾಧಾನಕ್ಕೆ ಈ ಎತ್ತರಕ್ಕೆ ಈ ಕಾಡಿಗೆ ಈ ಗಾಳಿಗೆ ಮನಸ್ಸು ದೇಹವನ್ನು ಪ್ರಫುಲ್ಲಗೊಳಿಸುವುದಕ್ಕೆ ನಾನೇ ಹಣ ಕೊಡಬೇಕೇನೋ ಅನ್ನಿಸುತ್ತಿತ್ತು. ಅಧೋಲೋಕದ ತುತ್ತತುದಿಯ ಮೇಲ್ಛಾವಣಿಯ ಸುತ್ತಣ ಚಿತ್ರಕಥನವನ್ನು ನೋಡಲು ಇನ್ನಾದರೂ ಸಾಧ್ಯವಾಗಿರಲಿಲ್ಲ. ತಲೆಯೆತ್ತಿ ಒಂದೆರೆಡು ಸಣ್ಣ ಚಿತ್ರ ಗಮನಿಸುತ್ತಿದ್ದೆಯಷ್ಟೆ.

ಕೆಳಗಿನಿಂದ ಬೆಡ್‌ರೂಮ್ ಕೋಣೆ ಬಾಗಿಲು ಹಾಕಿಕೊಳ್ಳುವ ಸದ್ದು. ನನ್ನ ಇಲ್ಲಿನ ಕೆಲಸವನ್ನು ಶುರುಮಾಡುವ ಸದ್ದು. ಟೈಪಿಂಗ್ ಕೆಲಸ. ನಾನು ಟೈಪಿಸ್ಟ್. ಸೃಜನಶೀಲ ಬರವಣಿಗೆಗೆ ಮುದ್ರಣ ಮಾರ್ಗ ತೋರಿಸಬಲ್ಲ ನಿರ್ದೇಶಕ.

ಸರಕ್ಕನೆ ಹೋಗಿ ಟೈಪಿಂಗ್ ಟೇಬಲ್ಲಿಗೆ ಕೂತೆ. ಹಾಳೆ, ಟೈಪ್‌ರೈಟರ್, ಕಂಪ್ಯೂಟರ್, ಕ್ಲಿಪ್‌ಬೋರ್ಡ್, ರೆಡ್ ಇಂಕ್ ಪೆನ್ನು, ಪೆನ್ಸಿಲ್, ಸ್ಪೈರಲ್‌ಬೈಂಡೆಡ್ ಮ್ಯಾನುಸ್ಕಿçಪ್ಟು ನೋಡಿಕೊಂಡೆ. ಕೆಳಗಿನ ಡ್ರಾ ಒಳಗೆ ಎರಡುಮೂರು ವರ್ಷಗಳಿಗಾಗುವಷ್ಟು ಎ-ಫೋರ್ ಸೈಜಿನ ಪೇಪರಿನ ಬಂಡಲ್‌ಗಳು. ಒಂದನ್ನು ಎಳೆದು ಅದರ ಬಿಳಿತನವನ್ನು ನೋಡಿದರೆ ಅದರಲ್ಲೇನೋ ಬರೆದುಬಿಡುವ ಕಪ್ಪನೆ ಪೆನ್ನಿನಲ್ಲಿ ಚಿತ್ರವನ್ನು ಇಳಿಸುವ ಆಸೆ ಮತ್ತೆ ಒತ್ತೊತ್ತಿ ಬಂತು. ಇಲ್ಲಿಗೆ ಬಂದು ಬೀಳುವ ಇಲ್ಲಿನ ಕಿಟಕಿ ಕರ್ಟನ್ನು ಗೋಡೆಯ ಬಣ್ಣಗಳಿಂದ ಪ್ರತಿಫಲಿತವಾದ ಚದುರಿದ ಈ ಬಿಸಿಲು ಅಚ್ಚುಕಟ್ಟಾಗಿ ಯಂತ್ರ ಕತ್ತರಿಸಿಟ್ಟ ಈ ಬಿಳಿಕಾಗದವನ್ನು ಹೆಚ್ಚುಗಾರಿಕೆಯಲ್ಲಿ ತೋರಿಸುತ್ತಿದೆಯೆಂದೆನಿಸುತ್ತಿತ್ತು. ಕೈಗಳು ಕಪ್ಪನೆಯ ಬಣ್ಣದ ಪೆನ್ನಿನಿಂದ ಮೆಲ್ಲಗೆ ಬಳ್ಳಿಗಳಾಕಾರದಲ್ಲಿ ಎಲೆಗಳ ವಿನ್ಯಾಸದಲಿ ಚಿತ್ರಗಳನ್ನು ಮೂಡಿಸಲು ಶುರು ಮಾಡಿದ್ದವು. ಲೋಕ ಸೃಷ್ಟಿಯಾಗತೊಡಗಿತ್ತು. ನಿಶಬ್ದತೆಗೊಂದು ಅಪರೂಪದ ಶಕ್ತಿ. ಬರೆಸತೊಡಗಿತ್ತು. ಬರೆಯತೊಡಗಿದ್ದೆ. ಅಚ್ಚಬಿಳಿಮೈ ಮೇಲೆ ಕಪ್ಪನೆಯ ಗೆರೆಗಳು ಎಲ್ಲಿಬೇಕಲ್ಲಿ ಹೇಗೆಬೇಕೋ ಹಾಗೆ ಓಡಿಯಾಡತೊಡಗಿದ್ದವು. ಉಲ್ಲಾಸ ಎದೆಯೊಳಗೆ ಕಾರಂಜಿಯಂತೆ ಏಳತೊಡಗಿತ್ತು. ನನ್ನ ಬೆರಳುಗಳು ಸೃಷ್ಟಿಸುತ್ತಿದ್ದ ಇಂದಿನ ಈ ಚಿತ್ರವನ್ನು ಹೆಮ್ಮೆಯಲಿ ಸ್ಪರ್ಶಿಸಿ ನೋಡತೊಡಗಿದೆ.

ವಿದ್ಯುತ್ತೇ ಬಾರದ ಕಗ್ಗಾಡಿನಲ್ಲಿ ಒಂದು ಕ್ಷಣವೂ ನಿಲ್ಲದ ನಿರಂತರ ವಿದ್ಯುತ್ ಸಂಪರ್ಕ! ಪ್ರಶ್ನೆಯೇಳಿಸಿ ಅಚ್ಚರಿ ಮೂಡಿಸುತ್ತಿತ್ತು. ಕಂಪ್ಯೂಟರ್ ಸ್ವಿಚ್ ಆನ್ ಮಾಡಿದೆ. ಡೂಮ್‌ಮಾನೀಟರ್ ಹೊತ್ತಿಕೊಂಡು ಬೆಳಗಿತು. ತನ್ನ ಸೃಷ್ಟಿಪ್ರಕ್ರಿಯೆಯ ಮಾಹಿತಿಯನ್ನು ಪರದೆ ಮೇಲೆ ಪ್ರದರ್ಶಿಸಿಕೊಂಡು ಸಂಪೂರ್ಣ ಚಾಲನೆಗೊಂಡು ವಿದೇಶಿ ಸಪಾಟುಹುಲ್ಲುಗಾವಲಿನ ಸ್ಕ್ರೀನ್‌ಸೇವರಿಗೆ ಬಂದು ನಿಂತಿತು. ಮೈಕ್ರೊಸಾಫ್ಟ್ ವರ್ಡ್ ಫೈಲ್ ತೆರೆದೆ. ನಿನ್ನೆಯ ಟೈಪಿಂಗ್ ಹಂತ ನೋಡಿಕೊಂಡೆ. ಒಮ್ಮೆ ತಪ್ಪುಗಳಿಗೆ ಕಣ್ಣಾಡಿಸಿದೆ.. ಮೊನ್ನೆ ತೆಗೆದ ಪ್ರಿಂಟ್‌ಔಟ್ ಕಾಗದ ಜೋಡಿಸಿಟ್ಟೆ. ಐದು ಹಂತದ ಐದು ಬಣ್ಣದ ಕ್ಲಿಪ್‌ಬೋರ್ಡ್ಗಳಲ್ಲಿ ಸಿಕ್ಕಿಸಿದ ಶಿಸ್ತನ್ನು ಪ್ರಶಂಸೆಯಲಿ ನೋಡಿದೆ. ಟೈಪ್ ಮಾಡಬೇಕಾದ ಕೆಂಪು, ಟೈಪ್ ಮಾಡಿದ ಹಳದಿ, ಟೈಪ್ ಮಾಡಿ ಪ್ರಿಂಟ್‌ಔಟ್ ತೆಗೆದಿಟ್ಟ ನೀಲಿ, ಪ್ರಿಂಟ್‌ಔಟ್ ಓದಿ ಪ್ರೂಫ್ ಹಾಕಿದ ಹಸಿರು, ಪ್ರೂಫ್ ಹಾಕಿದ್ದನ್ನು ಕ್ಯಾರಿ ಮಾಡಿ ಮತ್ತೆ ಪ್ರಿಂಟ್‌ಔಟ್ ತೆಗೆದಿರಿಸಿದ ಫೈನಲ್ ಕಪ್ಪುಬಣ್ಣದ ಕ್ಲಿಪ್‌ಬೋರ್ಡ್ ಸಾಲಾಗಿ ಕ್ರಮವಾಗಿ ಜೋಡಿಸಲಾಗಿತ್ತು. ಪ್ರಾಕೃತಿಕ ಶಿಸ್ತಿನ ಕಾಡಿನಲ್ಲಿ ಈ ಮಾನುಷ ಶಿಸ್ತು ಏನೋ ಕಲಿಸುತ್ತಿತ್ತು.

‘ನಂಬಿಕೆ ಮುಖ್ಯ’ ಅನ್ನೋ ಸಾಲಿನ ಮುಂದೆ ಕಪ್ಪನೆಯ ಕಡ್ಡಿಯಂತಹ ಕರ್ಸರ್ ನೆಟ್ಟಗೆ ನಿಂತು ಕುಣಿಯುತಿತ್ತು. ಟೈಪಿಸು ಟೈಪಿಸು ಟೈಪಿಸು ಅಂತ. ನಾನೇ ಈ ಬರವಣಿಗೆ ಮುಂದುವರೆಸಿಬಿಡಲೆ ಅನ್ನುವಂತೆ ಕೆಣಕುತ್ತಿತ್ತು. ಇಪ್ಪತ್ತೆರಡು ಪುಟವಷ್ಟೇ ಈ ಹನ್ನೆರಡು ದಿನಗಳಲ್ಲಿ ಟೈಪ್ ಆದದ್ದು. ನಿಧಾನ ಸಾಗಿತ್ತು ಕೆಲಸ. ಯಾರಿಗೂ ಅವಸರವಿರಲಿಲ್ಲ. ಬರೆಸುವವಳಿಗೂ, ಈ ಪಠ್ಯಕ್ಕೂ. ಪಾತ್ರಗಳು ತಮ್ಮ ಸಹಜ ದೈನಿಕದಲ್ಲೇ ಇರುತ್ತಿದ್ದವು. ಮುಂದಕ್ಕೆ ಹೋಗಿ ಹಿಂದಕ್ಕೆ ಬರುವಂಥ ನಿರೂಪಣೆ. ಬರಿ ಚಹಾ-ಕಾಫಿಗಳೇ.

ಕೆಳಗಿನ ಕೋಣೆಯ ಬಾಗಿಲು ತೆರೆದ ಸದ್ದಿನ ಬಹಳ ಹೊತ್ತಿನ ನಂತರ ಅವಳು ಬಂದಳು. ಮೆಟ್ಟಿಲು ಹತ್ತಿ ಬಂದು ನನ್ನೆಡೆಗೆ ಬಾರದೇ ಅಲ್ಲೇ ನಿಂತಳು. ಕಣ್ಣಂಚಿನಿಂದ ಗಮನಿಸಿದೆ. ಹೊರಳಿ ನೋಡಿದೆ. ರೇಶಿಮೆಯ ಲಿಂಬೆಬಣ್ಣದ ನೈಟಿಯೊಳಗೆ ಬಳಕುವ ದೇಹ. ಉದ್ದನೆಯ ತೆಳ್ಳನೆಯ ತೆಳುದೇಹ. ತಲೆಗೂದಲು ಸುರುಳಿಸುತ್ತಿ ಹಿಂದೆ ಕ್ಲಿಪ್ಪಿನಡಿ ಬಂಧಿಸಿದ್ದಳು. ನಿರಾಭರಣ ಬಿಳಿಚಿಕೊಂಡ ಆಕರ್ಷಕವಲ್ಲದ ಮುಖ. ತೆಳುಬೆರಳು ಉದ್ದ ನೇರಮೂಗು ದೊಡ್ಡಕಣ್ಣು ತೆಳುತುಟಿ ಉದ್ದನೆಯ ಕುತ್ತಿಗೆ. ಮೊದಲನೆಯ ದಿನ ಗಮನಿಸಿದ್ದ ವಿವರಗಳ ಹಾಗೇ ಇದ್ದಳು. ಅವಳ ಧ್ವನಿ ಮಾತ್ರ ಗೌರವ ಪಡೆದುಕೊಳ್ಳುವಂತೆ ಅವಳ ಭಾಷೆ ತುಂಬಾ ಕಲಿತ ಓದಿದವಳ ಮಾದರಿಯದ್ದು.

ಅಲ್ಲೇ ಇದ್ದ ಟೇಬಲ್ಲಿನ ಮೇಲಿಟ್ಟುಬಂದಿದ್ದ ಆ ಹೂವನ್ನು ಕೈಯಲ್ಲಿ ಹಿಡಿದು ನೋಡಿದಳು. ಹೊರಳಿಸಿ ಹೊರಳಿಸಿ ನೋಡಿದಳು. ತೆಳುಬೆರಳುಗಳ ನಡುವೆ ನಾನು ತಂದಿದ್ದ ಹೂವಿನ ಉದ್ದನೆಯ ತೊಟ್ಟು ಹಿಡಿದು ಹೊರಳಾಡಿಸುತ್ತ ನನ್ನ ಕಡೆ ಹೊರಳಿದಳು. ಸಣ್ಣ ಭಯ. ದಿನದ ಮೊದಲನೆಯ ನಮಸ್ಕಾರ ಗೌರವದ ತರಹ ತಲೆಯನ್ನು ಸಣ್ಣಗೆ ಆಡಿಸಿ, ಕುರ್ಚಿ ಹಿಂದೆ ಸದ್ದಾಗದಂತೆ ಸರಿಸಿ, ಎದ್ದು ನಿಂತೆ. ದೇವಸ್ಥಾನದ ನೈವೇದ್ಯದ ಜಾಗದಲ್ಲಿ ನಾಯಿ ಓಡಾಡಿ ಗಲೀಜು ಮಾಡಿದಂತೆ ಮಾಡಿದಳು ತನ್ನ ಮುಖಭಾವವ. ಅಸಹನೆಯ ಉಸಿರುಗಳನ್ನು ಎಣಿಸುವಂತೆ ಕೇಳಿಸಿಕೊಂಡು ಉಗುಳು ನುಂಗುತ್ತಿದ್ದೆ. ಹೂವು ತಂದಿಡಬಾರದಿತ್ತು. ಅವಳ ಕರಾರುವಕ್ ಆಯ್ಕೆಗಳೇನಿದ್ದವೋ. ಈ ಪೇಂಟಿಂಗನ್ನು ದೇವರಂತೆ ನೋಡುತ್ತಿದ್ದಳೇನೋ ಅಪಚಾರವಾಯಿತೇನೋ. ಹೊರಗಿನದ್ದು ಕಾಡಿನದ್ದು ಏನೂ ಇಲ್ಲಿ ಬರುವಂತಿಲ್ಲವೇನೋ ಗಾಳಿಯೂ. ಇವಳ ಮನೆ ಮುಂದಿನ ವಿಸ್ತಾರ ಅರ್ಧವೃತ್ತಾಕಾರ ಜಾಗದ ಅಂಚಿನುದ್ದಕ್ಕೂ ಬೆಳೆಸಿದ್ದ ಹೂಗಳ ಗಿಡಗಳಿಂದಲೇ ಇಲ್ಲಿಗೆ ಹೂಗಳು ಬರಬೇಕೇನೋ ಪ್ರಮಾದ ಮಾಡಿಬಿಟ್ಟೆನಾ!

ಹೂವನ್ನು ಬೆಕ್ಕಿನ ಕಿವಿಹಿಡಿದೆತ್ತುವಂತೆ ತೊಟ್ಟುಹಿಡಿದು ಎತ್ತಿದಳು. ಕೆಳಮುಖವಾಗಿ ಹಿಡಿದಿದ್ದಳು. ‘ಲಲಿತಾ…’ ಅರಚಿದಂತೆ ಕೂಗಿದಳು. ನಿಟ್ಟುಬಿದ್ದೆ. ಹೊರಳಿದೆ.

ನನ್ನೆಡೆಗೇ ನೋಡುತ್ತ ಮತ್ತೆ ಕೂಗಿದಳು. ತಪ್ಪನ್ನು ಆದಷ್ಟು ಬೇಗ ಒಪ್ಪಿಕೊಂಡರೆ ಸರಿ ಎಂದು ನಾನೇ ಎದ್ದು ಅವಳೆಡೆ ತಿರುಗಿ, ‘ಆ ಹೂವನ್ನು ನಾನೇ ತಂದಿದ್ದೆ ಬಿಸಾಕುವೆ ಬಿಡಿ’ ಅಂದೆ. ಮುಂದೆ ನಡೆದು ಕೈ ಮುಂದೆ ಮಾಡಿದೆ. ದೊಡ್ಡಕಣ್ಣುಗಳಲ್ಲಿ ಅರ್ಧಕರಗಿದ ಸಿಟ್ಟಿನಲ್ಲಿ ನೋಡಿ ತನ್ನನ್ನು ತಾನೇ ಸಾವರಿಸಿಕೊಂಡು, ಹೂವು ಹಿಡಿದೇ ಇಳಿಯುತ್ತ ನಡೆದು ಹೋದಳು. ಇವಳು ನಡೆದರೆ ಶಬ್ದವಾಗುವುದಿಲ್ಲ. ಮಾರ್ಗ ಮಧ್ಯೆಯಲ್ಲಿ ಲಲಿತಾ ಸಿಕ್ಕು ಅವಳೊಡನೆ ಮಾತನಾಡಿದ್ದು ಕೇಳಿಸಿತು.

ಇಲ್ಲಿ ನೂರಕ್ಕೆ ನೂರರಷ್ಟು ಸ್ವಾಂತಂತ್ರ್ಯತೆ ಎಂದುಕೊಂಡು ಬಂದವನಿಗೆ ಒಂದು ಪರ್ಸೆಂಟ್ ಕಡಿಮೆಯಾದಂತೆನಿಸಿತು. ಆದರೂ ಇನ್ನೊಮ್ಮೆ ಹಾಗೆ ಮಾಡದಿದ್ದರಾಯಿತು. ಎಂದುಕೊಂಡು ಟೈಪ್ ಮಾಡಬೇಕಾದ ಪಠ್ಯವನ್ನು ತೆಗೆದಿಟ್ಟುಕೊಂಡೆ.

‘ನಂಬಿಕೆ ಮುಖ್ಯ’ ಸಾಲು ಹಂಗಿಸಿತು. ಕೈಬೆರಳು ಮೂಸಿಕೊಂಡೆ. ಆ ಹೂವಿನ ವಿಲಕ್ಷಣ ಘಮ, ಈ ವಿಲಕ್ಷಣ ಸನ್ನಿವೇಶದಲ್ಲಿ ವಿಚಿತ್ರವೆನ್ನಿಸಿತು. ಮತ್ತೆ ಮತ್ತೆ ಮೂಸುವಂತೆ ಹುಚ್ಚು ಪ್ರಚೋದನೆ, ಪ್ರೇರಣೆ. ತಲೆಕೊಡವಿಕೊಂಡೆ. ಡೆಸ್ಕ್ಟಾಪ್ ಸ್ಕ್ರೀನ್ ನೋಡಿದೆ. ಅದರ ಸ್ಕ್ರೀನಿನ ಕೆಳಗಿನ ಬಲಮೂಲೆಯಲ್ಲಿ ಟೈಮ್ ತೋರಿಸುತ್ತಿತ್ತು. ಹನ್ನೊಂದುವರೆ ಆಗಿಹೋಗಿತ್ತು. ಹೊಟ್ಟೆ ಹಸಿಯಲೂ ಶುರುವಾಗಿತ್ತು. ಕೆಲಸ ಒಂದಕ್ಷರ ಶುರುವಾಗಿರಲಿಲ್ಲ. ತಲೆ ಏನೆಲ್ಲ ಎಷ್ಟೆಲ್ಲ ಯೋಚನೆ ಮಾಡಿಮುಗಿಸಿತ್ತು. ಅಷ್ಟೊಂದು ಯೋಚನೆ ಬೇಕಿಲ್ಲ ಸಾಮಾನ್ಯ ಮನುಷ್ಯನಿಗೆ ಅನ್ನಿಸಿತು. ನಾನು ಸಾಮಾನ್ಯ ಮನುಷ್ಯನಲ್ಲ ಅಂತಲೂ ಅನ್ನಿಸಿತು. ಅಸಾಮಾನ್ಯ ಮನುಷ್ಯನಾಗಲು ಹೋಗಿ ಮಾಡಿಕೊಂಡು ಅವಾಂತರ ನೆನಪಾಯಿತು. ಸರ್ವೇಸಾಮಾನ್ಯ ಮನುಷ್ಯನೇ ಆಗಬೇಕೆಂದು ತೀರ್ಮಾನ ಮಾಡಿದವನಂತೆ ಮಿಸುಕಾಡಿ ಸರಿಯಾಗಿ ಕೂತೆ. ಮೌಸ್‌ನ ಬಾಣದ ಗುರುತನ್ನು ಆ ವಿಹಂಗಮ ಹುಲ್ಲುಗಾವಲಿನ ಮೇಲಾಡಿಸಿದೆ. ಪಕ್ಕದಲ್ಲಿದ್ದ ಬಿಳಿಯ ಕಾಗದದಲ್ಲಿ ಅದರ ಚಿತ್ರ ಮೂಡಿಸಲು ಕೈಬೆರಳು ಹಾತೊರೆದವು. ಡ್ರಾನಲ್ಲಿ ಹತ್ತಾರು ತರಹದ ಪೆನ್ಸಿಲ್, ಬಣ್ಣದ ಪೆನ್‌ಗಳಿದ್ದವು. ತಲೆಗೆ ಟಪ್ಪೆಂದು ಮೊಟಕಿಕೊಂಡು ಮತ್ತೆ ನೇರ ಕೂತೆ. ಕಣ್ಣು ಬಲಕೆಳ ಮೂಲೆಯ ಟೈಮ್‌ಸ್ಟ್ಯಾಂಪ್ ಪಕ್ಕದ ನೆಟ್‌ವರ್ಕ್ ಸಿಂಬಲ್ ಕಡೆ ಹೋಯಿತು. ಪೂರ್ತಿ ಸಿಗ್ನಲ್ಲುಗಳಿರುವ ಇಂಟರ್ನೆಟ್ ಓಡುತ್ತಿದೆ! ನನ್ನ ಬದುಕಿನ ದುಡಿಮೆಯ ಅರ್ಧದಷ್ಟನ್ನು ಇಂಟರ್ನೆಟ್ ಬಾಡಿಗೆಗೆ ಖರ್ಚುಮಾಡಿದ್ದೆ. ಈಗ ಇಲ್ಲಿ ಇಂಟರ್ನೆಟ್ ಇದೆ. ಈ ಕಗ್ಗಾಡಿನಲ್ಲಿ! ನಿಲ್ಲದೆ ಹರಿಯುವ ಸದಾ ಹರಿಯುವ ನೀರಿನ ಒರತೆಯಂತೆ. ಅದರ ಮೇಲೆ ಮೌಸ್‌ನ ಬಾಣ ತೆಗೆದುಕೊಂಡು ಹೋದವನು ಒತ್ತುವಷ್ಟರಲ್ಲಿ ಮೆಟ್ಟಿಲಬಳಿ ಸದ್ದು ಆದಂತಾಯಿತು. ಕೆಮ್ಮಿ ಸರಿಯಾಗಿ ಕೂತು ತೆಗೆದಿರಿಸಿಕೊಂಡಿದ್ದ ಮೈಕ್ರೊಸಾಫ್ಟ್ ವರ್ಡ್ ಫೈಲ್‌ನಲ್ಲಿ ಇವತ್ತಿನ ದಿನಾಂಕ ಹಾಕಿ ಟೈಪ್ ಮಾಡಲು ಶುರುಮಾಡಿದೆ.
‘ಬದುಕು ಹೀಗೆ ಇರುತ್ತದೆಂದು ನನಗೆ ಅನ್ನಿಸಿರಲಿಲ್ಲ…’

(ಕೃತಿ: ಎತ್ತರ (ಕಾದಂಬರಿ), ಲೇಖಕರು: ಇಂದ್ರಕುಮಾರ್ ಎಚ್.ಬಿ., ಪ್ರಕಾಶಕರು: ಇಂಪನಾ ಪುಸ್ತಕ, ಪುಟಗಳು: 530, ಬೆಲೆ: 500/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ