Advertisement
‘ಹೂಧೂಳಿ’ ಮುಹೂರ್ತ…..

‘ಹೂಧೂಳಿ’ ಮುಹೂರ್ತ…..

ಚಾಂದಿನಿಯವರ ಈ ಕವಿತೆಗಳ ಮುಖ್ಯ ಧಾಟಿ ಬಿಗುಮಾನವಿಲ್ಲದ ನಿವೇದನೆಯದು, ಅವರ ಅನುಭವಜನ್ಯ ಕವಿತೆಗಳಾದ “ಕ್ಲಾಸ್ ರೂಂ”, “ಅವನಾರು”, “ನನ್ನ ಬಾಲ್ಯ”, “ಅಣ್ಣ ಬರಲಿಲ್ಲ”-ಗಳ ಜೀವಂತಿಕೆ ಅನುಭವ ಮೂಲದಿಂದಲೇ ಬರುತ್ತದೆ. ಮುಂದಿನ ಸಾಲಿನ ಮತ್ತು ಹಿಂದಿನ ಸಾಲಿನ ಖಾಲಿ ಬೆಂಚುಗಳ ಲಕ್ಷಣಗಳು “ಕ್ಲಾಸ್ ರೂಂ” ಕವಿತೆಯನ್ನು ರೂಪಿಸಿದ ರೀತಿ, ಬಾಲ್ಯದ ಅನುಭವಗಳು ಹೊಳೆಯಲ್ಲಿ ಹಿಡಿದು ಅಲ್ಲೇ ಸುಟ್ಟು ತಿಂದ ಏಡಿಯಷ್ಟೆ ತಾಜಾ ಆಗಿ ಬರುವ ರೀತಿ ಆಪ್ತವಾಗಿದೆ. “ಅಣ್ಣ ಬರಲಿಲ್ಲ” ಕವಿತೆಗೆ ತಂತಾನೆ ಬಂದಂತಿರುವ ಜನಪದೀಯ ಗುಣ ಅದರ ವಿಷಾದಕ್ಕೆ, ಆತ್ಮಮರುಕವನ್ನು ಮೀರುವ ಸ್ಪರ್ಶವನ್ನು ಕೊಟ್ಟಿದೆ.
ಚಾಂದಿನಿ ಖಲೀದ್‌ ಕವನ ಸಂಕಲನ “ಸೂಜಿಮೊಗದ ಸುಂದರಿ”ಕ್ಕೆ ಜಯಂತ ಕಾಯ್ಕಿಣಿ ಬರೆದ ಮುನ್ನುಡಿ

ಮತ್ತೆ ಮತ್ತೆ ಕತ್ತ್ಹೊರಳಿಸಿ
ಬೀರುತಿಹಳು ಹೂನಗೆಯ
ಸೂಜಿ ಮೊಗದ ಸುಂದರಿ
ಊಟದ ಪಂಕ್ತಿಯ
ಕಡೆಯ ಸಾಲಿನಲಿ

(ಚಾಂದಿನಿ ಖಲೀದ್‌)

ಓದುವ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುವ ಸರಳವಾದ ಚಿತ್ರವತ್ತಾದ ಪಂಕ್ತಿ ಇದು. ಇಲ್ಲಿ ‘ಮತ್ತೆ ಮತ್ತೆ ಕತ್ತು ಹೊರಳಿಸುವ’, ‘ಹೂನಗೆಯ ಬೀರುವ’, ‘ಊಟದ ಪಂಕ್ತಿ’ ಮತ್ತು ‘ಕಡೆಯ ಸಾಲು’ ಈ ನಾಲ್ಕೂ ಸಾಲುಗಳನ್ನು ಬಿಡಿ ಬಿಡಿಯಾಗಿ ನೋಡಿದಾಗ ಇಲ್ಲದ ಧ್ವನಿಯೊಂದು, ಅವೆಲ್ಲವನ್ನು ಒಟ್ಟಿಗೇ ಓದಿದಾಗ ಉಂಟಾಗುತ್ತದೆ. ಇದು ಯಾವುದೇ ಕಾವ್ಯದ ಮುಖ್ಯ ಮತ್ತು ಐಚ್ಛಿಕವಾದ ಲಕ್ಷಣಗಳಲ್ಲಿ ಒಂದು. ಇಂಥ ಲಕ್ಷಣಗಳನ್ನು ತಮ್ಮ ಈ ಮೊದಲ ಸಂಕಲನದ ಕೆಲವು ಕವನಗಳಲ್ಲಿ ಹೊಂದಿರುವ ಚಿತ್ರದುರ್ಗದ ಚಾಂದಿನಿ ಅವರನ್ನು ಕಾವ್ಯಲೋಕಕ್ಕೆ ಈ ಮೂಲಕ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನನ್ನ ಈ ಶುಭಾಶಯದ ಎರಡು ಮಾತುಗಳಿಗಾಗಿ ಹಸ್ತಪ್ರತಿ ಕೊಟ್ಟು ಐದಾರು ವರ್ಷಗಟ್ಟಲೆ ಪಿಟ್ಟೆನ್ನದೆ ಕಾದಿರುವ ಅವರ ತಾಳ್ಮೆ ದೊಡ್ಡದು. ಈ ಅವಧಿಯಲ್ಲಿ ಕೆಲವು ಕವಿತೆಗಳನ್ನು ತಿದ್ದಲು ಅವರು ಹಿಂಜರಿಯಲಿಲ್ಲ. ಈ ಚಡಪಡಿಕೆ ಕವಿಗೆ ಇರಲೇಬೇಕು. ಈ ನಿಷ್ಠೆಗಾಗಿ ಅವರನ್ನು ಅಭಿನಂದಿಸುತ್ತೇನೆ.

ಕನ್ನಡದಲ್ಲಿ ಇಂದು ಕವಿತೆ ಮತ್ತು ಕಥೆಗಳನ್ನು ಬರೆಯುವವರಲ್ಲಿ ಶಿಕ್ಷಕರು, ಶಿಕ್ಷಕಿಯರು ಹೆಚ್ಚು ಹೆಚ್ಚು ಕಂಡು ಬರುತ್ತಿರುವುದು ತುಂಬಾ ಉತ್ಸಾಹದ ವಿಷಯವಾಗಿದೆ. ಏಕೆಂದರೆ ಇದು ಅವರ ಸಂವೇದನಾಶೀಲತೆಯನ್ನು, ಜೀವನ್ಮುಖಿ ನಿಲುಕುಗಳನ್ನು ವಿಸ್ತರಿಸಿ-ಅವರ ವಿದ್ಯಾರ್ಥಿಗಳನ್ನು ಸಹಜವಾಗಿ ಆಳವಾಗಿ ಪ್ರಭಾವಿಸಬಲ್ಲುದು. ಏಕೆಂದರೆ ಒಬ್ಬ ಶಿಕ್ಷಕಿ ಅಥವಾ ಶಿಕ್ಷಕನ ಮುಂದೆ ನಾಳಿನ ಸಮಾಜವೇ ಪುಟ್ಟ ಕಣ್ಣುಗಳನ್ನು ಅರಳಿಸಿಕೊಂಡು ಕೂತಿರುತ್ತದೆ. ಕವಿಹೃದಯ ಅಂದರೆ ಇನ್ನೇನೂ ಅಲ್ಲ- ಅದೊಂದು ಚಿಂತನಶೀಲ ಮಾನವೀಯ ಹೃದಯ. ಶಿಕ್ಷಕರಿಗೆ ಇರಬೇಕಾದದ್ದೂ ಅದೇ. ಸಮಾಜವನ್ನು ಒಂದು ಕೂಡು ಕುಟುಂಬವಾಗಿಯೇ ಗ್ರಹಿಸುವ, ಪ್ರಕೃತಿಯನ್ನು ಒಂದು ಆದರ್ಶ ಮಾದರಿಯೆಂದು ಆರಾಧಿಸುವ, ಉತ್ತರದ ಹಂಗಿರದ ಪ್ರಶ್ನೆಗಳನ್ನು ಕೇಳುವ, ನಿತ್ಯದ ಬಾಳುವೆಯ ಹೋರಾಟದಲ್ಲಿ ಪ್ರೀತಿಯ ಅಭಯದ ಕಾವಿಗಾಗಿ ಹಂಬಲಿಸುವ ಮನೋಭೂಮಿಕೆ ಇದು.

ಚಾಂದಿನಿಯವರ ಈ ಕವಿತೆಗಳ ಮುಖ್ಯ ಧಾಟಿ ಬಿಗುಮಾನವಿಲ್ಲದ ನಿವೇದನೆಯದು, ಅವರ ಅನುಭವಜನ್ಯ ಕವಿತೆಗಳಾದ “ಕ್ಲಾಸ್ ರೂಂ”, “ಅವನಾರು”, “ನನ್ನ ಬಾಲ್ಯ”, “ಅಣ್ಣ ಬರಲಿಲ್ಲ”-ಗಳ ಜೀವಂತಿಕೆ ಅನುಭವ ಮೂಲದಿಂದಲೇ ಬರುತ್ತದೆ. ಮುಂದಿನ ಸಾಲಿನ ಮತ್ತು ಹಿಂದಿನ ಸಾಲಿನ ಖಾಲಿ ಬೆಂಚುಗಳ ಲಕ್ಷಣಗಳು “ಕ್ಲಾಸ್ ರೂಂ” ಕವಿತೆಯನ್ನು ರೂಪಿಸಿದ ರೀತಿ, ಬಾಲ್ಯದ ಅನುಭವಗಳು ಹೊಳೆಯಲ್ಲಿ ಹಿಡಿದು ಅಲ್ಲೇ ಸುಟ್ಟು ತಿಂದ ಏಡಿಯಷ್ಟೆ ತಾಜಾ ಆಗಿ ಬರುವ ರೀತಿ ಆಪ್ತವಾಗಿದೆ. “ಅಣ್ಣ ಬರಲಿಲ್ಲ” ಕವಿತೆಗೆ ತಂತಾನೆ ಬಂದಂತಿರುವ ಜನಪದೀಯ ಗುಣ ಅದರ ವಿಷಾದಕ್ಕೆ, ಆತ್ಮಮರುಕವನ್ನು ಮೀರುವ ಸ್ಪರ್ಶವನ್ನು ಕೊಟ್ಟಿದೆ. ಇದೆ ಜಾಡಿಗೆ ಸೇರುವ “ದೀಪಮಾಲೆ” ಎನ್ನುವ ಆರ್ತ ವಚನಗಳ ಗುಚ್ಛಕ್ಕೂ ಒಂದು ಪ್ರಾಮಾಣಿಕ ಭಕ್ತಿಯ ಕಂಪನ ಇದೆ.

‘ಭಾವಗಳ ಮರಳಲ್ಲಿ ಕಟ್ಟಿದ ಗುಬ್ಬಚ್ಚಿ ಗೂಡ’ ನ್ನು ಸೆಳೆದೊಯ್ಯುವ ಅಲೆಗಳ ಭಯವನ್ನು ಮೀರಲೆಂದೆ ಕವಿ ‘ಬಲಗಾಲಿಟ್ಟು ಬಾರೆ ನೀಲ’-ಎಂದು ಗಗನದ ನೀಲಿಯನ್ನು ಅಂತರಂಗಕ್ಕೆ ಆಹ್ವಾನಿಸುತ್ತಾರೆ. “ಭೇದಭಾವಗಳ ಅಗ್ನಿ ಕಂದಕ”-ವನ್ನು ದಾಟಲೆಂದೇ ‘ನೆಲೆಸು ಮನದಲಿ ಪ್ರೀತಿಯಾಗಿ ನೀ ದೇವಾ’ ಎಂದು “ಅನಂತ ಮಾಯೆ”ಯನ್ನು ಪ್ರಾರ್ಥಿಸುತ್ತಾರೆ. ಈ ಕವಿತೆಗಳ ‘ಉದ್ವಿಗ್ನ ಮನಸು’, ‘ಸೌಗಂಧಿಯ ಕಂಪಿ’ಗಾಗಿ ಹಂಬಲಿಸುತ್ತದೆ. ‘ಮನ್ವಂತರ’, ‘ಭೇದ’-ಕವಿತೆಗಳು ಸಮನ್ವಯದ ಸಹಬಾಳ್ವೆಗಾಗಿ ಮಿಡಿಯುತ್ತವೆ.

(ಜಯಂತ ಕಾಯ್ಕಿಣಿ)

ಈ ಸಂಕಲನದ ಇನ್ನು ಕೆಲವು ಕವಿತೆಗಳಲ್ಲಿ ಜೀವನ ಪ್ರೀತಿಯ ವಿಸ್ತರಣೆಯೇ ಆಗಿರುವ ಪ್ರೇಮ ಸಖ್ಯದ ರಮ್ಯ ಪ್ರಲಾಪ ಇದೆ. “ಕಾದಿರುವೆ ನಿನಗಾಗಿ ಓ ಮಾಧವ”, “ಹೊಸ ಅಧ್ಯಾಯ”, “ಮರೆಯಾದೆ ಎಲ್ಲಿ”, “ತಲ್ಲಣ”, “ರಾಧೆಯ ನಿರೀಕ್ಷೆ”-ಈ ಕವಿತೆಗಳಲ್ಲಿ ಹೊಮ್ಮುವ ಪ್ರೀತಿಗಾಗಿನ ಹಂಬಲ, ದೈನಿಕದಿಂದ ಎತ್ತುವ ದೈವಿಕ ಸೆಳೆತದ ಹಂಬಲವೇ ಆಗಿದೆ ಹೊರತು ದೈಹಿಕ ದಾಹವಾಗಿಲ್ಲ. ಅದಕ್ಕೇ ಇಲ್ಲಿ “ನೆನಹುಗಳ ಬೆರಳು ಹಿಡಿದು”-ನಡೆವ ಯತ್ನವಿದೆ. ನೆನಪುಗಳು ಒಂದು ಕಡೆ ಚಿಟ್ಟೆಗಳಾದರೆ, ಇನ್ನೊಂದು ಕಡೆ ಮಿಂಚು ಹುಳುಗಳಾಗುತ್ತವೆ ‘ಒದ್ದೆ ಭಾವಗಳಲ್ಲಿ ಮುದ್ದೆಯಾಗಿರುವ ಮನಸ್ಸಿಗೆ’-“ಬನ ಬನದಾಗಿ ಆಡಿ, ಸದ್ದಿಲ್ಲದೆ ಮುದ್ದು ಮಾಡಿ ಹೂಧೂಳಿಯಲಿ ಮಿಂದ ಪಾತರಗಿತ್ತಿ”-ಯ ಕನಸಾಗುತ್ತದೆ. ‘ಹೂಧೂಳಿ’ ಪದ ಎಷ್ಟು ಚೆನ್ನಾಗಿದೆ! ಇದು ಚಾಂದಿನಿ ಅವರ ‘ಹೂಧೂಳಿ ಮುಹೂರ್ತ’ವೇ ಸರಿ.

ಇಂಥs ತನ್ಮಯಗೊಳಿಸುವ ಬದುಕಿನ ನಡುವೆಯೇ ಹಠಾತ್ತಾನೆ ಎರಗುವ ಸಾವಿನ ಕುರಿತ ಜಿಜ್ಞಾಸೆ ಚಾಂದಿನಿಯವರ “ಮರೀಚಿಕೆ”, “ಅಗಲುವ ಮುನ್ನ”, “ಅಂತಿಮ ಯಾತ್ರೆ” ಮತ್ತು “ಪಯಣ” ಈ ಕವಿತೆಗಳಲ್ಲಿ ಇದೆ. ಸಾವಿನ ಅನಿವಾರ್ಯತೆಯನ್ನು ಮನಗಾಣುತ್ತಲೇ ಬದುಕಿನ ತೀವ್ರತೆಯನ್ನು ಹೆಚ್ಚಿಸುವ ತುಡಿತ ಇಲ್ಲಿದೆ. ರಾಜಕೀಯ ಶಕ್ತಿಗಳು ತಮ್ಮ ಐಹಿಕ ಸ್ವಾರ್ಥಕ್ಕಾಗಿ ಬಹುಮುಖೀ ಸಮಾಜದ ಮಮತೆಯ ನಂಟುಗಳಲ್ಲಿ ವೈಷಮ್ಯದ ವಿಷವನ್ನು ಪಸರಿಸುತ್ತಿರುವ ಇಂದಿನ ಪರೀಕ್ಷಾ ಸಮಯದಲ್ಲಿ, ಶಿಕ್ಷಕರ ಮೇಲಿನ ಜವಾಬ್ದಾರಿ ತುಂಬ ಮಹತ್ವದ್ದಾಗಿದೆ. ಸಮಾಜಶೀಲ ಶಿಕ್ಷಕಿಯಾಗಿರುವ ಚಾಂದಿನಿ ಅವರ ಸಂವೇದನೆ ಅವರ ಕಾವ್ಯಯಾನದಿಂದ ವಿಶಾಲವಾಗಲಿ. ಈ ಯಾನದಲ್ಲಿ ಕನ್ನಡದ ವಿಶಿಷ್ಟ ಕವಿಗಳನ್ನು ಅವರು ಓದಬೇಕು. ತಕ್ಕ ಓದು ಮತ್ತು ತಹತಹಗಳು ಚಾಂದಿನಿ ಅವರ ಮುಂದಿನ ಬರವಣಿಗೆಗೆ ಹೆಚ್ಚಿನ ಕಸುವನ್ನೂ ಹಸಿವನ್ನೂ ಕೊಡಲಿ ಎಂದು ಅಕ್ಕರೆಯಿಂದ ಹಾರೈಸುತ್ತೇನೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Dr. Chandni khalid

    ಪ್ರೀತಿಯ ಧನ್ಯವಾದಗಳು ಕೆಂಡ ಸಂಪಿಗೆ ❤️

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ