Advertisement
ರಾತ್ರಿ ತೀರಿಕೊಂಡ ತಾತ ಬೆಳಗ್ಗೆ ಎದ್ದು ಬಂದಿದ್ದರು!

ರಾತ್ರಿ ತೀರಿಕೊಂಡ ತಾತ ಬೆಳಗ್ಗೆ ಎದ್ದು ಬಂದಿದ್ದರು!

ಎಲ್ಲರೂ ಕೂತು ತೂಕಡಿಸುತ್ತಾ ಇದ್ದೀವಿ. ಊರುಗೋಲು ಟಕ್ ಟಕ್ ಎಂದು ಹೆಜ್ಜೆ ಸಮೇತ ಶಬ್ದ ಕೇಳಿಸಿತು. ಕಣ್ಣು ಬಿಟ್ಟು ನೋಡಿದರೆ ಅದೇನು ಆಶ್ಚರ್ಯ ಅಂತೀರಿ… ತಾತ ಕೋಲು ಊರಿಕೊಂಡು ಬಚ್ಚಲಿಗೆ ಹೋಗುತ್ತಿದ್ದಾರೆ! ತಾತ ಬದುಕಿದೆ, ಸತ್ತಿಲ್ಲ. ಖುಷಿಯಿಂದ ಮೊಮ್ಮಕ್ಕಳು ಕುಣಿದಾಡಿದರು. ದೊಡ್ಡವರೂ ಸಹ ದೊಡ್ಡ ನಿಟ್ಟುಸಿರುಬಿಟ್ಟು ಮುಖದಲ್ಲಿ ನಗು ತಂದುಕೊಂಡರು. ಬೆಳಿಗ್ಗೆ ಎದ್ದ ಕೂಡಲೇ ಡಾಕ್ಟರ ಮನೆಗೆ ನನ್ನನ್ನೇ ಕಳಿಸಿದರು. ತಾತ ಬದುಕಿದೆ, ಹೀಗೆ ರಾತ್ರಿ ಒಂದೂವರೆಗೆ ಅವರೇ ಎದ್ದು ಒಂದಕ್ಕೆ ಹೋದರು ಅಂತ ಹಾವಭಾವ ಸಮೇತ ವಿವರಿಸಿದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ

ನಮ್ಮ ರಿಕ್ರೀಯೇಷನ್, ಆಟಗಳು ಇವನ್ನು ಹೇಳಿದೆ. ಆಗಿನ ನಮ್ಮ ಆರ್ ಎಸ್ ಎಸ್ ನಂಟು, ನಮ್ಮ ಚಿನ್ನಿಕೋಲು, ಕ್ರಿಕೆಟ್, ಫುಟ್ ಬಾಲ್ ಆಟದ ಬಗ್ಗೆ ವಿವರಿಸಿದೆ. ನಮ್ಮನ್ನು ಅಯಸ್ಕಾಂತದ ಹಾಗೆ ಸೆಳೆದ ಕನ್ನಡ ಚಳವಳಿ, ಅನಕೃ, ರಾಮಮೂರ್ತಿ, ನಾಡಿಗೇರ ಕೃಷ್ಣರಾವ್, ತರಾಸು ಅವರನ್ನು ಪರಿಚಯಿಸಿದೆ. ಸೂರ್ಯನಾರಾಯಣ ಚಡಗರೂ ಸಹ ಚಳವಳಿ ಮುಂಚೂಣಿಯಲ್ಲಿದ್ದರು. ಕುಮಾರವ್ಯಾಸ ಮಂಟಪ, ಕಾವ್ಯವಾಚನ ಇವು ಹೇಳಿದೆ. ನವ್ಯರ ಕಾಲಕ್ಕೆ ಬಂದು ನವ್ಯರ ವಿಮರ್ಶೆ ಬಗ್ಗೆ ಹೇಳುತ್ತಾ ವಿ ಸೀ ಅವರು ಲೆಜೆಂಡ್ ಅಂತ ಬರೆದು ಅವರ ಕುರಿತು ಒಂದು ತಮಾಷೆ ಸುದ್ದಿ ಹಂಚಿಕೊಳ್ಳುತ್ತಾ ಇದ್ದೆ. ವಿ ಸೀ ಅವರ ಬರಹ ಸಪ್ಪೆ ಎಂದು ಅನಂತಮೂರ್ತಿ ಅವರು ಹಿಗ್ಗಾ ಮುಗ್ಗಾ ವಿಮರ್ಶೆ ಮಾಡಿದ್ದು ಹೇಳಿದ್ದೆ.. ಕಳೆದ ಸಂಚಿಕೆಯಲ್ಲಿ. ಈಗ ಮುಂದಕ್ಕೆ….

(ವಿ. ಸೀತಾರಾಮಯ್ಯ)

ವಿ.ಸೀ. ಅವರ ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನು…. ಹಳೇ ಮೈಸೂರಿನ ಪ್ರತಿ ಸಂಸಾರದಲ್ಲಿ ಮದುವೆ ಆದ ಹೆಣ್ಣು ಕೂಸನ್ನು ಗಂಡನ ಮನೆಗೆ ಕಳಿಸುವ ರಾಷ್ಟ್ರಗೀತೆ ಆಗಿತ್ತು ಮತ್ತು ಆಗಿದೆ.

ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು||
ನಿಮ್ಮ ಮಡಿಲೊಳಗಿರಲು ತಂದಿರುವೆವು
ಕೊಳಿರೀ ಮಗುವನ್ನು ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನು ತುಂಬಲು ಒಪ್ಪಿಸುವೆವು
ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ
ಈ ಮನೆಯೆ ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಗುವವರು
ಇವರ ದೇವರೆ ನಿನ್ನ ದೇವರುಗಳು
ನಿಲ್ಲು ಕಣ್ಣೋರಿಸಿಕೊ ನಿಲ್ಲು ತಾಯ್ ಹೋಗುವೆವು
ತಾಯಿದಿರ ತಂದೆಯಿರ ಕೊಳಿರಿ ಇವಳಾ
ಎರಡು ಮನೆಗಳ ಹೆಸರು ಖ್ಯಾತಿಯನು ಪಡೆವಂತೆ
ತುಂಬಿದಾಯುಷ್ಯದಲಿ ಬಾಳಿ ಬದುಕು
— ವಿ. ಸೀತಾರಾಮಯ್ಯ

ಈ ಹಾಡು ಹೇಳುತ್ತ ಹೇಳುತ್ತಾ ಕುಸಿದು ಗೋಡೆಗೆ ಒರಗುವ ಎಷ್ಟೋ ಅಮ್ಮಂದಿರನ್ನು ನಾನೇ ನೋಡಿದ್ದೆ. ಈಗಲೂ ಎಮ್ಮ ಮನೆಯಂಗಳದಿ….. ಹಾಡು ಎಲ್ಲೇ ಕೇಳಿಸಿದರೂ ನಿಂತು ಕೇಳಿ ಕಣ್ಣು ಒರೆಸಿಕೊಂಡು ಮುಂದಡಿ ಇಡುವ ಜನ ನನಗೆ ಕಾಣುತ್ತಾರೆ. ಅಂತಹ ಪವರ್ ಫುಲ್ ಹಾಡು ಅದು. ಅಂತಹ ಶಕ್ತಿಯುತವಾದ ಹೃದಯವನ್ನು ಹಿಂಡಿ ಬಿಡುವ ಮತ್ತೊಂದು ಹಾಡನ್ನು ನಾವು ಅಂದರೆ ನಮ್ಮ ಪೀಳಿಗೆಯವರು ಕೇಳಿಲ್ಲ. ಅದರ ಸಂಗಡ ಅವರ ಮತ್ತೊಂದು ಅತ್ಯಂತ ಜನಪ್ರಿಯ ಕವನ ಎಂದರೆ ಕಾದಿರುವಳು ಶಬರಿ ರಾಮ ಬರುವನೆಂದು… ಈ ಎರಡೂ ಹಾಡನ್ನು ಹಾಡದ ನಮ್ಮ ಓರಗೆಯವರು ಕನ್ನಡದಲ್ಲಿ ಇಲ್ಲವೇ ಇಲ್ಲ! ಕುಲವಧು ಚಿತ್ರದಲ್ಲಿ ಜಾನಕಿಯವರು ಈ ಹಾಡನ್ನು ಸೊಗಸಾಗಿ ಹಾಡಿದ್ದಾರೆ. ಈಗಲೂ ಈ ಹಾಡು ಕೇಳಿದರೆ ಹೃದಯ ವಿಲ ವಿಲ ಒದ್ದಾಡುತ್ತೆ.

ಕಾದಿರುವಳು ಶಬರಿ,
ರಾಮ ಬರುವನೆಂದು,
ತನ್ನ ಪೂಜೆಗೊಳುವನೆಂದು॥
ಎಳಗಾಳಿ ತೀಡುತಿರಲು
ಕಿವಿಯೆತ್ತಿ ಆಲಿಸುವಳು
ಎಲೆಯಲುಗೆ ಗಾಳಿಯಲ್ಲಿ
ನಡೆ ಸಪ್ಪುಳೆಂದು ಬಗೆದು.॥
ದೂರಕ್ಕೆ ನೋಳ್ಪೆನೆಂದು
ಮರವೇರಿ ದಿಟ್ಟಿಸುವಳು
ಗಿರಿಮೇಲಕೈದಿ ಕೈಯ
ಮರೆಮಾಡಿ ನೋಡುತಿಹಳು.॥
ಶಬರಿವೊಲು ಜನವು,
ದಿನವೂಯುಗ ಯುಗವೂ
ಕರೆಯುತಿಹುದು ಕರೆ
ಇಳೆಗಳೇಳಲರಸಿ
ತವಕದಲಿ ತಪಿಸುತಿಹುದು॥

ಹಳೇ ಮೈಸೂರಿನ ಪ್ರತಿಮನೆಯಲ್ಲೂ ಸಂಗೀತಗಾರರು ಇದ್ದೇ ಇರುತ್ತಿದ್ದರು. ಸಹಜವಾಗಿ ಮನೆಯ ಹಿರಿಯ ಮತ್ತು ಕಿರಿಯ ಹೆಣ್ಣುಮಕ್ಕಳು ಕೂತು ಒಟ್ಟಾರೆ ಸಮೂಹ ಗಾಯನ ಮಾಡುತ್ತಿದ್ದರು. ಅವರು ಕಲಿಯಲೇಬೇಕಿದ್ದ ಹಾಡುಗಳಲ್ಲಿ ವಿ ಸೀ ಅವರ ಎಮ್ಮ ಮನೆಯಂಗಳದಿ ಬೆಳೆದೊಂದು ಹೂವೂ ಸಹ ಸೇರಿತ್ತು. ಈ ಹಾಡು ಹೆಣ್ಣು ಗಂಡಿನ ಮನೆಗೆ ಹೋಗುವಾಗ ಹಾಡುವುದು ಕಂಪಲ್ಸರಿ, ಅಲಿಖಿತ ನಿಯಮ. ಈಗಲೂ ಕೆಲವು ಸಂಪ್ರದಾಯಸ್ಥ ಕುಟುಂಬದಲ್ಲಿ ಈ ಹಾಡು must.

ತನ್ನ ಜೀವಿತ ಕಾಲದಲ್ಲಿಯೇ ತನ್ನ ಕವಿತೆಯೊಂದು ಜನರ ನಾಲಗೆ ಮೇಲೆ ಈ ಮಟ್ಟದಲ್ಲಿ ಹರಿದಾಡುವುದು ಎಂದರೆ ಕವಿಗೆ ಎಷ್ಟು ಸಂತೋಷ ಆಗಿರಬೇಕು….! ಎಷ್ಟು ಹೆಮ್ಮೆ ಅನಿಸಿರಬೇಕು, ಇಂತಹ ಸ್ಥಾನ ನೀಡಿದ ಕನ್ನಡ ಜನತೆ ಬಗ್ಗೆ ಅದೆಷ್ಟು ಅಭಿಮಾನ ಹುಟ್ಟಿರಬೇಕು…..!

ವೀ ಸೀ ಅವರ ಕವಿತೆಗಳಿಗೆ ಅವರೇ ಚಿತ್ರ ಬರೆಯುತ್ತಿದ್ದರು. ಇವರನ್ನು ಕುರಿತು ಶ್ರೀ ಬೀ. ಜಿ. ಎಲ್. ಸ್ವಾಮಿಯವರ ಪಂಚ ಕಲಶ ಗೋಪುರ ಗ್ರಂಥದಲ್ಲಿನ ಲೇಖನ ಅದೆಷ್ಟು ಸಲ ಓದಿದ್ದೀನೋ ನೆನಪಿಲ್ಲ. ಒಂದೊಂದು ಸಲ ಓದಿದಾಗಲೂ ವಿ ಸೀ ಅವರ ಮೇಲಿನ ಗೌರವ ಹೆಚ್ಚುತ್ತದೆ.

(ಯು. ಆರ್.‌ ಅನಂತಮೂರ್ತಿ)

ವೀ ಸೀ ಅವರಿಗೆ ಅನಂತಮೂರ್ತಿ ಅವರ ವಿಸೀ ಸಪ್ಪೆ ಎನ್ನುವ ಈ ವಿಮರ್ಶೆ ಸಹಜವಾಗಿಯೇ ಸಿಟ್ಟು ಬರಿಸಿತು. ಮಾರನೇ ದಿವಸ ಇಬ್ಬರೂ ಎದುರುಬದುರಾದರು. ಉಭಯ ಕುಶಲೋಪರಿ ನಂತರ ವೀ ಸೀ ಅನಂತ ಮೂರ್ತಿಗೆ ಒಂದು ನೇರ ಪ್ರಶ್ನೆ ಹಾಕಿದರು,
“ಲೋ, ಅನಂತ ಮೂರ್ತಿ, ಸಪ್ಪೆ ಸಹ ಒಂದು ರುಚಿ ಕಣಯ್ಯಾ, ಗೊತ್ತಾ?…”. ಅನಂತ ಮೂರ್ತಿ ವೀ ಸೀ ಅವರ ಮುಖ ನೋಡಿದರು. ನಮಸ್ಕರಿಸಿ ತಲೆ ಆಡಿಸಿದರು! ಮತ್ತೊಮ್ಮೆ ನಮಸ್ಕರಿಸಿ ತಲೆ ಆಡಿಸಿದರು! ವೀ ಸೀ ನಸು ನಕ್ಕು ಅನಂತ ಮೂರ್ತಿ ಬೆನ್ನು ತಟ್ಟಿದರು.

ಇದು ವೀ ಸೀ ಅವರ ನೆನಪಿನ ಒಂದು ಗ್ರಂಥದಲ್ಲಿ ನಾನು ಓದಿದ್ದು. ಸುಮಾರು ಇದೇ ಸಮಯ ಅಂತ ಕಾಣುತ್ತೆ. ದೊಡ್ಡ ಕಾಲುವೆಯ ಮೇಲೆ ಒಂದು ಕಟ್ಟಡ ನಿರ್ಮಾಣ ಆಯಿತು. ರಾಜ ಕಾಲುವೆ ಮೇಲೆ ಮನೆ ಕಟ್ಟಿದ ಪ್ರಕರಣ ಬಹುಶಃ ಬೆಂಗಳೂರಿನಲ್ಲಿ ಇದೇ ಮೊದಲನೆಯದು. ಅಲ್ಲಿ ಒಂದು ಪತ್ರಿಕೆ ಸಹ ಆರಂಭಗೊಂಡಿತು. ಅದೆಂತಹದೋ ಕರ್ನಾಟಕ ಎನ್ನುವ ಹೆಸರಿತ್ತು, ಪತ್ರಿಕೆಗೆ. ಇದು ಆಗ ಉತ್ತರ ಕರ್ನಾಟಕದ ಮಂತ್ರಿ ಒಬ್ಬರ ಪತ್ರಿಕೆ (ಪಾಟೀಲ್ ಎಂದೇನೋ ಹೆಸರು) ಎಂದು ಸುದ್ದಿ ಇತ್ತು.

ವೀ ಸೀ ಅವರ ಕವಿತೆಗಳಿಗೆ ಅವರೇ ಚಿತ್ರ ಬರೆಯುತ್ತಿದ್ದರು. ಇವರನ್ನು ಕುರಿತು ಶ್ರೀ ಬೀ. ಜಿ. ಎಲ್. ಸ್ವಾಮಿಯವರ ಪಂಚ ಕಲಶ ಗೋಪುರ ಗ್ರಂಥದಲ್ಲಿನ ಲೇಖನ ಅದೆಷ್ಟು ಸಲ ಓದಿದ್ದೀನೋ ನೆನಪಿಲ್ಲ. ಒಂದೊಂದು ಸಲ ಓದಿದಾಗಲೂ ವಿ ಸೀ ಅವರ ಮೇಲಿನ ಗೌರವ ಹೆಚ್ಚುತ್ತದೆ.

ರಾಜಾಜಿನಗರದ ಮೊದಲನೇ ಡಾಕ್ಟರ್‌ ಶಾಪ್ ಎಂದರೆ ಡಾಕ್ಟರ್ ಸುಂದರ್ ಹಾಗೂ ಅವರ ಪತ್ನಿ ಡಾಕ್ಟರ್ ಕಸ್ತೂರಿ ಸುಂದರ್ ಅವರದ್ದು. ಇಬ್ಬರೂ ಎಲ್ ಎಂ ಪಿ ಓದಿದ್ದರು. ಎಲ್ ಎಂ ಪಿ ಅಂದರೆ ಆಗಿನ ನಮ್ಮ ಬಾಲ ಭಾಷೆಯಲ್ಲಿ ಲವ್ ಮ್ಯಾರೇಜ್ ಪ್ರಾಕ್ಟೀಸ್!

ನಮ್ಮ ಮೊದಲನೇ ಫ್ಯಾಮಿಲಿ ಡಾಕ್ಟರ್ ಅವರು. ನಮ್ಮ ತಂದೆ ತೆಲುಗಿನಲ್ಲಿ ಇವರ ಜತೆ ಮಾತಾಡುತ್ತಾ ಇದ್ದರು. ಆಂಧ್ರ ಕರ್ನಾಟಕದ ಗಡಿ ಭಾಗದ ಮಡಕಶಿರಾದವರಾದ ನಮ್ಮ ಅಪ್ಪನಿಗೆ ತೆಲುಗು ಎಂದರೆ ಎಲ್ಲಿಲ್ಲದ ವ್ಯಾಮೋಹ. ತೆಲುಗು ಮಾತು ಕೇಳಿದ ಕೂಡಲೇ ಮುಖ ಸೆವೆಂಟಿ ಎಂ ಎಂ ಆಗುತ್ತಿತ್ತು! ಮೊದಲು ಎಂಟ್ರೆನ್ಸ್‌ನಲ್ಲಿ ಇವರ ಕ್ಲಿನಿಕ್ ಶುರು ಆಗಿ ಎರಡೋ ಮೂರೋ ಸ್ಥಳ ಬದಲಾವಣೆ ನಂತರ ಇ ಎಸ್ ಐ ಮುಂದೆ ಸುಮಾರು ವರ್ಷ ಇದ್ದರು. ಈಗ ಎರಡು ವರ್ಷ ದ ಹಿಂದೆ ಡಾ. ಸುಂದರ್ ತೀರಿದರು. ಅದಕ್ಕೂ ಮೊದಲೇ ಡಾ. ಕಸ್ತೂರಿ ತೀರಿದ್ದರು.

(ತಂದೆ ನರಸಿಂಗರಾವ್, ಮೊಮ್ಮಗಳ ಜೊತೆ)

ಡಾಕ್ಟರ್‌ ಫೀಸ್ ತಿಂಗಳ ಲೆಕ್ಕದಲ್ಲಿರುತ್ತಿತ್ತು. ತಿಂಗಳಿಗೊಮ್ಮೆ ಬಿಲ್ ತಂದು ಅವರ ಕೆಲಸದ ಹುಡುಗ attendar ಕೊಡುತ್ತಿದ್ದ. ಕವರ್‌ನಲ್ಲಿ ಬಿಲ್ಲು, ಅದರ ಮೇಲೆ ಮನೆ ಯಜಮಾನರ ಹೆಸರು, ವಿಳಾಸ. ನಮ್ಮ ಮನೆಯಲ್ಲಿ ಬಿಲ್ ಕಟ್ಟದೆ ಸಾಲ ಮುಂದುವರಿಕೆ carry on ಆಗುತ್ತಾ ಇತ್ತು. ಡಾಕ್ಟರು ಬೇಸರ ಪಡದೇ ಪ್ರತಿತಿಂಗಳು ಶ್ರದ್ಧೆಯಿಂದ ಅವರೇ ಕೂತು ಬರೆದು ಅದನ್ನು ಕವರ್‌ನಲ್ಲಿ ಹಾಕಿ ಅದರ ಮೇಲೆ ಇಂಗ್ಲಿಷ್‌ನಲ್ಲಿ ವಿಳಾಸ ಬರೆದು ಕವರ್ ಅಂಟಿಸಿ ಅವರ ಅಟೆಂಡರ್ ಮೂಲಕ ಬಿಲ್ ರವಾನೆ ಮಾಡುತ್ತಿದ್ದರು. ಈ ತಿಂಗಳ ಲೆಕ್ಕ ಅದಕ್ಕೆ ಸೇರುತ್ತಿತ್ತು. ಮುಂದಿನ ತಿಂಗಳ ಲೆಕ್ಕ ಮತ್ತೆ ಸೇರ್ಪಡೆ…. ಆರು ತಿಂಗಳಿಗೋ ಏಳು ತಿಂಗಳಿಗೋ ಸದರಿ ಬಿಲ್ ಚುಕ್ತಾ ಮಾಡುತ್ತಿದ್ದೆವು. ಇಡೀ ಪ್ರಪಂಚದಲ್ಲಿ ಈಗೆಲ್ಲೂ ಇಂತಹ ವ್ಯವಸ್ಥೆ ಇದ್ದ ಹಾಗೆ ಕಾಣೆ. ಈಗ ಚಿಕಿತ್ಸೆಗೆ ಮೊದಲೇ ಎರಡು ಪಟ್ಟು ಮೂರು ಪಟ್ಟು ದುಡ್ಡು ಪಾವತಿಸಿಕೊಳ್ಳುತ್ತಾರೆ. ಈಗ ತಿಂಗಳಿಗೊಮ್ಮೆ ಬಿಲ್ಲಿಂಗ್ ಎಂತಹ ಒಳ್ಳೆಯ ಸಿಸ್ಟಂ ಅಂತ ಅನಿಸುತ್ತದೆ. ಈ ಡಾಕ್ಟರ್‌ ದಂಪತಿಗಳ ಬಗ್ಗೆ ಒಂದು ವಿಷಯ ಈಗಲೂ ನನ್ನ ತಲೆಯಲ್ಲಿ ಇದೆ ಮತ್ತು ಆಗಾಗ ಅದು ನಾನು ಎಷ್ಟು ಬುದ್ಧಿವಂತ ಅಂತ ಜ್ಞಾಪಿಸುತ್ತೆ..! ಈ ಕತೆಗೆ ಮೊದಲು ಒಂದು ಪುಟ್ಟ ಕತೆ ನಮ್ಮ ತಾತನದ್ದೇ…

ಎಂಬತ್ತ ಐದು ವರ್ಷದ ನಮ್ಮ ತಾತ (ಅಪ್ಪನ ಅಪ್ಪ) ನಮ್ಮ ಜತೆಯೇ ಇದ್ದರು. ಅವರ ಹಾಸಿಗೆಯಲ್ಲಿ ಅವರೊಂದಿಗೆ ಬೆಚ್ಚಗೆ ಮಲಗುವುದು ಎಂದರೆ ನಮಗೇನೋ ಒಂದು ರೀತಿಯ ಖುಷಿ. ಒಂದು ಸಲ ರಾತ್ರಿ ಇವರು ಬಚ್ಚಲಿನಲ್ಲಿ ಜಾರಿ ಬಿದ್ದರು. ಅವರನ್ನು ಎತ್ತಿಕೊಂಡು ಬಂದು ಹಾಸಿಗೆ ಮೇಲೆ ಮಲಗಿಸಿದೆವು. ಡಾಕ್ಟರ್ ಸುಂದರ್ ದಂಪತಿಗಳು ಊರಿನಲ್ಲಿ ಇರಲಿಲ್ಲ. ಬೇರೆ ಡಾಕ್ಟರಿಗೆ ಮನೆಗೆ ಬನ್ನಿ ಅಂತ ಆಹ್ವಾನ ಹೋಯಿತು. ಆಗ ಈಗಿನ ಹಾಗೇ ಊರ ತುಂಬಾ ನರ್ಸಿಂಗ್ ಹೋಮುಗಳು ಇರಲಿಲ್ಲ ಮತ್ತು ಡಾಕ್ಟರು ಮನೆಗಳಿಗೆ ಬಂದು ಭೇಟಿ ಮಾಡುತ್ತಿದ್ದರು. ಡಾಕ್ಟರು ಬಂದರು, ತಾತನನ್ನು ಕೂಲಂಕುಷವಾಗಿ ನೋಡಿದರು. ತಾತನ ಕತೆ ಮುಗೀತು, ಹತ್ತಿರದವರಿಗೆ, ಬರೋವರಿಗೆ ಬರಲು ತಿಳಿಸಿ ಅಂದರು. ರಾತ್ರಿ ಹತ್ತು ಗಂಟೆ ಸಮಯ. ಹತ್ತಿರದವರು ಅಂದರೆ ನಮ್ಮ ಚಿಕ್ಕ ತಾತ. ಅವರಿಗೂ ಮುಪ್ಪು. ಆಗ ತುಂಬಾ ಹತ್ತಿರದವರು (ಹತ್ತು ದಿನದವರು… ಅಂದರೆ ಸೂತಕ ಹತ್ತು ದಿವಸ ಇರಬೇಕಾದವರು) ಅಂದರೆ ತಂತಿ ಕಳಿಸುತ್ತಿದ್ದರು. ತಂತಿ ಅಂದರೆ ಟೆಲಿಗ್ರಾಂ. ಕೊಂಚ ದೂರದವರು ಆದರೆ ಪೋಸ್ಟ್ ಕಾರ್ಡ್ ಬರೆದು ಹಾಕಿದರೆ ಆಯಿತು. ತಾತನ ತಮ್ಮನಿಗೆ ಅಂದರೆ ನಮ್ಮ ಚಿಕ್ಕ ತಾತನಿಗೆ(ಹತ್ತು ದಿನದೋರು ಎಂದು ಲೆಕ್ಕ) ತಂತಿ ಕಳಿಸೋದು ಅಂತ ತೀರ್ಮಾನಿಸಿದರು. ಬೆಳಿಗ್ಗೆ ಮುಂದಿನದು ನೋಡೋಣ ಅಂತ ಮನೆಯಲ್ಲಿದ್ದವರು ಅಲ್ಲಲ್ಲೇ ಗೋಡೆಗೆ ಒರಗಿದರು.

ಎಲ್ಲರೂ ಕೂತು ತೂಕಡಿಸುತ್ತಾ ಇದ್ದೀವಿ. ಊರುಗೋಲು ಟಕ್ ಟಕ್ ಎಂದು ಹೆಜ್ಜೆ ಸಮೇತ ಶಬ್ದ ಕೇಳಿಸಿತು. ಕಣ್ಣು ಬಿಟ್ಟು ನೋಡಿದರೆ ಅದೇನು ಆಶ್ಚರ್ಯ ಅಂತೀರಿ… ತಾತ ಕೋಲು ಊರಿಕೊಂಡು ಬಚ್ಚಲಿಗೆ ಹೋಗುತ್ತಿದ್ದಾರೆ! ತಾತ ಬದುಕಿದೆ, ಸತ್ತಿಲ್ಲ. ಖುಷಿಯಿಂದ ಮೊಮ್ಮಕ್ಕಳು ಕುಣಿದಾಡಿದರು. ದೊಡ್ಡವರೂ ಸಹ ದೊಡ್ಡ ನಿಟ್ಟುಸಿರುಬಿಟ್ಟು ಮುಖದಲ್ಲಿ ನಗು ತಂದುಕೊಂಡರು. ಬೆಳಿಗ್ಗೆ ಎದ್ದ ಕೂಡಲೇ ಡಾಕ್ಟರ ಮನೆಗೆ ನನ್ನನ್ನೇ ಕಳಿಸಿದರು. ತಾತ ಬದುಕಿದೆ, ಹೀಗೆ ರಾತ್ರಿ ಒಂದೂವರೆಗೆ ಅವರೇ ಎದ್ದು ಒಂದಕ್ಕೆ ಹೋದರು ಅಂತ ಹಾವಭಾವ ಸಮೇತ ವಿವರಿಸಿದೆ. ಡಾಕ್ಟರು ಓಹ್ ಹೌದಾ? ವಾಟ್ ಎ ಮಿರಾಕಲ್….. ಅಂತ ಪ್ರತಿಕ್ರಿಯಿಸಿದರು. ಈ ಹಿನ್ನೆಲೆಯಲ್ಲಿ ಮುಂದಿನ ಪ್ರಸಂಗ. ಐದು ವರ್ಷದ ನಂತರ ನಡೆದದ್ದು.

ತೊಂಬತ್ತು ವರ್ಷದ ನಮ್ಮ ತಾತ ರಾತ್ರಿ ಒಂಬತ್ತರ ಸುಮಾರಿಗೆ ತೀರಿಕೊಂಡರು. ಕೈಕಾಲು ತಣ್ಣಗೆ ಆಯಿತು. ಕೈಕಾಲು ಮಡಿಸಿ ತಲೆಗೆ ಒಂದು ದಿಂಬು ಇರಿಸಿದರು. ಅವರು ಡಾ. ಸುಂದರ್ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗ್ಗೆ ಅಪ್ಪ ಅಲ್ಲೇ ಠಲಾಯಿಸುತ್ತಿದ್ದ ನನ್ನ ಕರೆದು ಡಾಕ್ಟರಿಗೆ ತಾತ ತೀರಿಹೋದರು ಅಂತ ಹೇಳಿಬಿಟ್ಟು ಬಾ ಅಂದರು. ನೇರ ಮುಂದಿನ ರಸ್ತೆಯಲ್ಲಿನ ಡಾಕ್ಟರ ಮನೆಗೆ ಹೋದೆ. ವರಾಂಡದಲ್ಲಿ ಖುರ್ಚಿ ಮೇಲೆ ಇಬ್ಬರು ಡಾಕ್ಟರೂ ಪೇಪರ್ ಓದುತ್ತಾ ಕೂತಿದ್ದರು. ಎದುರು ಕಾಫಿ ಕಪ್ ಇತ್ತು. ತೆರೆದ ಬಾಗಿಲ ಮೂಲಕ ಒಳಗೆ ನುಗ್ಗಿದ ನನ್ನನ್ನು ನೋಡಿದರು.

ನಮ್ಮ ತಾತ ನಿನ್ನೆ ರಾತ್ರಿ ತೀರಿ ಹೋದರು… ಅಂದೆ.
ಓ ಹೌದಾ ಸಾರಿ.. ಅಂತ ಗಂಡು ಡಾಕ್ಟರು ಅಂದರು.
ಮನೆಗೆ ಬನ್ನಿ.. ಅಂದೆ.
ಯಾಕೆ… ಅಂತ ಹೆಣ್ಣು ಡಾಕ್ಟರು ಕೇಳಿದರು.
ತಾತ ಸತ್ತಿದ್ದಾರೆ, ನೀವು ಮನೆಗೆ ಬರಬೇಕು…. ಅಂದೆ
ಇಬ್ಬರೂ ಒಂದು ನಿಮಿಷ ಕಕ್ಕಾಬಿಕ್ಕಿ ಆದರು.
ಸರಿ ಬರ್ತೀನಿ ಹೋಗು…. ಅಂದರು, ಗಂಡು ಡಾಕ್ಟರು.
ಮನೆಗೆ ಬಂದೆ. ನಡೆದ ವಿಷಯ ಹೇಳಿ ಡಾಕ್ಟರಿಗೆ ಮನೆಗೆ ಬನ್ನಿ ಅಂದೆ, ಬರ್ತೀನಿ ಹೋಗು ಅಂದರು…. ಅಂತ ವಿವರಿಸಿದೆ.

ಅಪ್ಪ, ಅಮ್ಮ, ಅಕ್ಕ, ಅಣ್ಣಂದಿರು ಹೊ ಅಂತ ನಕ್ಕರು. ಸಾವಿನ ಮನೆಯಲ್ಲಿ ಹೋ ಅಂತ ನಗುವ ಜೋಕ್ ಏನು ಮಾಡಿದೆ ಅಂತ ಕಕ್ಕಾ ಬಿಕ್ಕಿ ಆದೆ. ಅವರು ಯಾಕೋ ಬರಬೇಕು ಈಗ…. ಅಂತ ಮತ್ತೆ ನಕ್ಕರು…!

ಅವರ ನಗು ಅರ್ಥ ಆಗದೇ ಪೆಚ್ಚಾಗಿ ನಿಂತಿದ್ದೆ..! ತಮಾಷೆ ಅಂದರೆ ಇಷ್ಟುವರ್ಷಗಳ ನಂತರವೂ ಮನೆಯವರೆಲ್ಲಾ ನಕ್ಕಿದ್ದು ಯಾಕೆ ಎಂದು ತಿಳಿಯದಿರುವುದು.

(ಆಗ ಸ್ಮಶಾನದಲ್ಲಿ ಹೆಣ ಸುಡಲು, ದಫನ್ ಮಾಡಲು ವೈದ್ಯರ ಸರ್ಟಿಫಿಕೇಟ್ ಬೇಕಿತ್ತೋ ಇಲ್ಲವೋ ತಿಳಿಯದು. ವೈದ್ಯರು ನೀಡುವ ಡೆತ್ ಸರ್ಟಿಫಿಕೇಟ್‌ಗೆ ಡಾಕ್ಟರನ್ನು ಮನೆಗೆ ಬನ್ನಿ ಅಂತ ನಾನು ಕರೆದಿರಬಹುದಾ ಅಂತ ಯೋಚಿಸಿದ್ದೇನೆ. ನೆನಪು ಕೊಂಚ ಉಲ್ಟಾ ಹೊಡೆದಿದೆ, ಅಸ್ಪಷ್ಟ!)

ಐದನೇ ಎಪಿಸೋಡ್‌ಗೆ ಪೂರಕ ಅಂಶ… ರಾಜಾಜಿನಗರದಲ್ಲಿ ಇಬ್ಬರು ಎಂ. ಎಸ್. ನಾಗರಾಜ್ ಇದ್ದರು. ಅವರಲ್ಲಿ ಒಬ್ಬರು ವಿಮಲ್ ಎಂಬ ಹೆಸರಿನಲ್ಲಿ ಬರೆಯುತ್ತಿದ್ದರು. ಟೈಡ್ ವಾಟರ್ ಆಯಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಇಂಟರ್ ಈಡಿಯಟ್ ನಾಟಕದ ಕರ್ತೃ.

(ಮುಂದುವರಿಯುವುದು….)

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ