Advertisement
ಮೊಬೈಲು ಟವರು ಹತ್ತಿದ್ದ ಕಿಶೋರನ ಕಥೆ: ಅಬ್ದುಲ್ ರಶೀದ್ ಅಂಕಣ

ಮೊಬೈಲು ಟವರು ಹತ್ತಿದ್ದ ಕಿಶೋರನ ಕಥೆ: ಅಬ್ದುಲ್ ರಶೀದ್ ಅಂಕಣ

‘ಈ ಸಲ ಮದ್ದಿಗೆ ಅಂತ ಹುಡುಕಿದರೂ ಒಂದು ಜಿಗಣೆ ಸಿಗುವುದಿಲ್ಲ. ಅಷ್ಟು ಮಳೆ ಸಾರ್. ಇರುವೆಗಳೂ ಇಲ್ಲ ಏಡಿಗಳೂ ಇಲ್ಲ ಜಿಗಣೆಗಳೂ ಇಲ್ಲ ಎಲ್ಲ ಖಲಾಸ್’ ಎಂದು ದಾರಿ ತೋರಿಸುತ್ತಾ ನಡೆಯುತ್ತಿದ್ದ ಕಿಶೋರ ಗೊಣಗುತ್ತಿದ್ದ. ನನಗೆ ಮಾರ್ಗದರ್ಶಿಯಾಗಿರುವನೆಂಬ ಒಂದು ದೊಡ್ಡ ಹೆಮ್ಮೆ, ಆದರೆ ತಾನಿನ್ನೂ ಬಾಲ್ಯಾವಸ್ತೆಯನ್ನ ದಾಟಿ ಪರಿಪೂರ್ಣ ಯುವಕನಾಗಿಲ್ಲವಲ್ಲ ಎಂಬ ಒಂದು ಸಣ್ಣ ಸಂಕೋಚ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಈ ಊರಿನಲ್ಲಿ ಯಾರೂ ತನ್ನ ಸಾಹಸಗಳನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲವಲ್ಲ ಎಂಬ ಒಂದು ಶಾಶ್ವತವಾದ ಬೇಸರ ಅವನ ಮುಖದಲ್ಲಿ ಸುಳಿಯುತಿತ್ತು.

ಈ ಊರಿನಲ್ಲಿ ಎಲ್ಲರ ಹಾಗೆ ತಾನಿಲ್ಲ ಎಂದು ತೋರಿಸಿಕೊಳ್ಳಲು ಆತ ಬೆಂಗಳೂರಿನಿಂದ ಬರುವಾಗ ತನ್ನ ಎಡ ತೋಳಿಗೊಂದು ಹಚ್ಚೆ ಹೊಯ್ಯಿಸಿಕೊಂಡಿದ್ದ. ಹಸಿರು ಬಣ್ಣದಲ್ಲಿ ಹೊಯ್ಯಿಸಿಕೊಂಡಿದ್ದ ಚೀನಾದ ಆ ಡ್ರಾಗನ್ ವಿನ್ಯಾಸವೂ ಇಲ್ಲಿನ ಚಳಿಮಳೆಗಾಳಿಗೆ ಸಿಲುಕಿ ತನ್ನ ಒರಿಜಿನಲ್ ರೂಪಬಣ್ಣಗಳನ್ನು ಕಳೆದುಕೊಂಡು ಒಂಥರಾ ತಮಾಷೆಯಾಗಿ ಕಾಣಿಸುತ್ತಿತ್ತು. ಈ ಕಿಶನ್ ತಾನಾಗಿಯೇ ನನ್ನ ಮಾರ್ಗದರ್ಶಕನಾಗಿರಲು ಮುಂದೆ ಬಂದಿದ್ದ. ಯಾವುದೋ ದಾರಿಯಲ್ಲಿ ಹೊರಟಿದ್ದ ನಾನು ಆ ದಾರಿಯನ್ನು ತಪ್ಪಿ ಯಾವುದೋ ಕೇರಿಯೊಂದರ ಹೆಸರು ಹುಡುಕುತ್ತಾ ಇನ್ನೊಂದು ಕೇರಿಯನ್ನು ತಲುಪಿದ್ದೆ.

ಇಲ್ಲೇ ಎಲ್ಲೋ ಒಂದು ಕಡೆ ಯಾರೋ ಒಬ್ಬರು ಬಹಳ ಹಳೆಯದಾದ ನಾಲ್ಕುಕಟ್ಟಿನ ತೊಟ್ಟಿಮನೆಯೊಂದನ್ನು ನೆಲಸಮ ಮಾಡಿ ಆ ಜಾಗದಲ್ಲಿ ಐಶಾರಾಮವಾದ ಕಾಂಕ್ರೀಟು ಮನೆಯೊಂದನ್ನು ಕಟ್ಟಿಸಲು ಹೊರಟಿದ್ದಾರೆಂದೂ ಮಡಿಕೇರಿಯ ಸಂತೆಗೆ ಬಂದಿದ್ದವರೊಬ್ಬರು ಹೇಳಿದ್ದರು. ಹಳೆಯ ಮನೆಗಳು, ಹಳೆಯ ಸೇತುವೆಗಳು, ಹಳೆಯ ದಾರಿಗಳು ಮತ್ತು ಹಳೆಯ ಮನುಷ್ಯರು ಇವು ಯಾವುವೂ ಒಮ್ಮೆ ಕಳೆದುಹೋದರೆ ಮತ್ತೆ ಕಾಣಲು ಸಿಗದು ಎಂದು ಕಳೆದುಹೋಗುತ್ತಿರುವ ಹಳೆಯ ಚೌಕಟ್ಟಿನ ಮನೆಯನ್ನು ಹುಡುಕಿಕೊಂಡು ಹೊರಟಿದ್ದೆ.

ಊರ ದನಗಳನ್ನು ಕಾಯುವ ಕೆಲಸದ ಬಾಲಕರನ್ನು ಬಿಟ್ಟರೆ ಉಳಿದವರೆಲ್ಲರೂ ಸುರಿವ ಮಳೆಯಲ್ಲಿ ಬಂಧಿಗಳಾಗಿ ಬಹುಶಃ ಮನೆಯೊಳಗೆ ಚಳಿಕಾಯಿಸಿಕೊಳ್ಳುತ್ತಿದ್ದರು. ಉಳಿದಂತೆ ಮೂರುದಾರಿ ಸೇರುವಲ್ಲಿ ಇರುವ ಹೆಸರಿಲ್ಲದ ಚಾದಂಗಡಿಗಳಲ್ಲಿ ಸಿಲುಕಿಕೊಂಡಿರುವ ಸಣ್ಣಪುಟ್ಟ ಕುಡುಕರು ಮತ್ತು ಕೆಲವು ಒಳ್ಳೆಯವರು ಬೇರೇನೂ ಕೆಲಸವಿಲ್ಲದೆ ಊರ ಸಮಾಚಾರಗಳನ್ನು ಹರಟುತ್ತಿದ್ದರು. ಅಂತದೊಂದು ಚಾದಂಗಡಿಯಲ್ಲೇ ನನಗೆ ಎಳೆಯನಾದ ಈ ಕಿಶೋರ ಎಂಬವನು ಸಿಕ್ಕಿದ್ದು. ಒಂದಿಷ್ಟು ಹಿರಿಯರ ಮತ್ತು ಒಂದಿಷ್ಟು ತರುಣರ ನಡುವೆ ಅವರ ಹಾಗೆಯೇ ಮಾತನಾಡುತ್ತ ಅವರ ಹಾಗೆಯೇ ತುಟಿಯ ನಡುವೆ ಸಿಗರೇಟೊಂದನ್ನು ಸಿಲುಕಿಸಿಕೊಂಡು ತಾನೂ ಅವರಂತೆಯೇ ಲೋಕಾಭಿರಾಮವಾಗಿರುವೆನು ಎಂದು ತೋರಿಸಿಕೊಳ್ಳಲು ಆತನು ಹೆಣಗುತ್ತಿದ್ದ. ಆದರೆ ಆತನ ತುಟಿಯ ಮೇಲೆ ಇನ್ನೂ ಮೂಡದ ಮೀಸೆ ಮತ್ತು ಆತನ ಕಣ್ಣುಗಳಲ್ಲಿ ಇನ್ನೂ ಉಳಕೊಂಡಿದ್ದ ಹೊಳಪು ಅವನನ್ನು ಅವರೆಲ್ಲರಿಂದ ಬೇರೆಯನ್ನಾಗಿ ಮಾಡಿತ್ತು. ಅದು ಸಾಲದೇನೋ ಎಂಬಂತೆ ಅವರೆಲ್ಲರೂ ‘ನೋಡಿ ಸಾರ್, ಇವನು ಶಾಲೆಗೂ ಹೋಗುವುದಿಲ್ಲ ಕೆಲಸವನ್ನೂ ಮಾಡುವುದಿಲ್ಲ ಸುಮ್ಮನೆ ಬೀಡಿ ಸೇದಿಕೊಂಡು ಓಡಾಡುತ್ತಿರುತ್ತಾನೆ. ಬೇಕಾದರೆ ನೀವೇ ಇವನನ್ನು ಅಸಿಸ್ಟೆಂಟಾಗಿ ಇಟ್ಟುಕೊಳ್ಳಿ.ಎಲ್ಲ ಕೆಲಸಕ್ಕೂ ಆಗುತ್ತಾನೆ.’ ಎಂದು ಗಹಗಹಿಸಿದ್ದರು.

ಆ ಚಾದಂಗಡಿ ನಡೆಸುತ್ತಿದ್ದ ದೊಡ್ಡ ನಡುವಿನ ಹೆಂಗಸಂತೂ ಅವನ ಕಿವಿಯನ್ನು ಚಿವುಟುತ್ತಾ, ‘ಏನು ಸಾರ್ ಇವನು. ಬೀಡಿ ಸೇದಕ್ಕೂ ಸಾಲ, ಚಾ ಕುಡಿಯಕ್ಕೂ ಸಾಲ. ಅವನಿಗೆ ಸಾಲ ಕೊಟ್ಟೇ ನಾನು ಫುಲ್ ಲಾಸಾಗಿ ಹೋಗಿದ್ದೇನೆ’ ಎಂದು ಅಲವತ್ತುಕೊಂಡಿದ್ದಳು. ಅವನನ್ನು ಇವರೆಲ್ಲರಿಂದ ಬಚಾವ್ ಮಾಡುವ ಸಲುವಾಗಿ ‘ಬಾರೋ ಕಿಶೋರ ನನಗೆ ಈ ಊರಿನಲ್ಲಿ ದಾರಿ ಗೊತ್ತಿಲ್ಲ. ದಾರಿ ತೋರಿಸು’ ಎಂದು ಜೀಪಿನಲ್ಲಿ ಹತ್ತಿಸಿಕೊಂಡು ಹೊರಟಿದ್ದೆ. ಜೀಪಿನೊಳಗೆ ಕುಳಿತಂತೆ ಆತನಿಗೆ ಜೀವ ಬಂದ ಹಾಗಿತ್ತು.

‘ಜನ ಸರಿ ಇಲ್ಲ ಸಾರ್. ಇವರಿಗೆ ಏನೂ ಗೊತ್ತಿಲ್ಲ. ಎಲ್ಲ ಪುಕ್ಸಾಟೆ ಜನ’ ಅಂದಿದ್ದ. ‘ಸರಿ ಮಾರಾಯ. ಜನ ಪುಕ್ಸಾಟೆ.ನೀನು ಪರ್ಕಟ್ಟೆ. ನಿನಗೆ ಏನು ಗೊತ್ತುಂಟು ಹೇಳು’ ಅಂದಿದ್ದೆ. ‘ಏನು ಬೇಕಾದರೂ ಕೇಳಿ ಸಾರ್. ಈ ಕೋಣನಕೇರಿಯಿಂದ ಹಿಡಿದು ಬೆಂಗಳೂರಿನ ಎಲೆಕ್ಟಾನಿಕ್ ಸಿಟಿಯ ಇನ್ಫೋಸಿಸ್ ತನಕ ಏನು ಬೇಕಾದರೂ ಕೇಳಿ’ ಅಂದಿದ್ದ. ‘ಮಾರಾಯ ಮೀಸೆಯೇ ಬಾರದ ನಿನಗೆ ಇನ್ಫೋಸಿಸ್ ಏನು ಗೊತ್ತು?’ ಎಂದು ಕೇಳಿದೆ.

‘ಸರ್ ನಾನು ಶಾಲೆ ಬಿಟ್ಟು ಓಡಿ ಹೋಗಿ ಬೆಂಗಳೂರಿನಲ್ಲಿ ಇನ್ಫೋಸಿಸ್ ಹತ್ತಿರ ಪ್ಯಾಂಟ್ರಿ ಅಸಿಸ್ಟೆಂಟ್ ಆಗಿ ಎಂಟು ತಿಂಗಳು ಇದ್ದೆ. ಟಾಟಾ, ಸತ್ಯಂ ಎಲ್ಲ ಗೊತ್ತುಂಟು’ ಅಂದ. ಆಮೇಲೆ ಮುಖದಲ್ಲಿ ಸುಳ್ಳು ಮೀಸೆ ಬಿಡಿಸಿಕೊಂಡು ಗನ್ ಮ್ಯಾನ್ ಆಗಿಯೂ ಎರಡು ತಿಂಗಳು ಇದ್ದನಂತೆ ಅಲ್ಲಿ ಇವನಿಗೆ ವಯಸ್ಸಾಗಿಲ್ಲ ಎಂದು ಗೊತ್ತಾಗಿ ಆಲ್ಲಿಂದ ಓಡಿಸಿದರಂತೆ. ಆಮೇಲೆ ಅಲ್ಲಿ ಇಲ್ಲಿ ಬಾರಿನಲ್ಲಿ, ಜಿಮ್ಮಿನಲ್ಲಿ ಎಮ್ಮೆಲ್ಲೆ ಒಬ್ಬರ ತೋಟದ ಮನೆಯಲ್ಲಿ ಹೀಗೆ ಎಲ್ಲ ಕಡೆ ದುಡಿದು ಅನುಭವಿಸಿ ಪುನ: ಊರಿಗೆ ಬಂದು ಅಲೆಯುತ್ತಿದ್ದ. ಬೆಂಗಳೂರಲ್ಲಿ ಜಿಮ್ಮಿನಲ್ಲಿರುವಾಗ ಯಾರದೋ ತೋಳಲ್ಲಿ ಚೈನೀಸ್ ಹಚ್ಚೆಯೊಂದನ್ನು ನೋಡಿ ತಾನೂ ಹಾಕಿಸಿಕೊಂಡು ಬಂದಿದ್ದ. ಅದನ್ನು ಕಂಡ ಇವನ ಅಪ್ಪ ಕಂಡಾಪಟ್ಟೆ ಸಿಟ್ಟಾಗಿದ್ದರು. ಅದನ್ನು ತೆಗೆಯದಿದ್ದರೆ ಉಳಿಯಿಂದ ಸಿಗಿದು ಹಾಕುವುದಾಗಿ ಬೊಬ್ಬೆ ಹಾಕಿದ್ದರು.

ಇವನೂ ಅದನ್ನು ತೆಗೆಯಲು ಹೋಗಿ ಏನೆಲ್ಲಾ ಮಾಡಿ ಅದರ ಬಣ್ಣವೂ ರೂಪವೂ ಹಾಳಾಗಿ ಒಂಥರಾ ತಮಾಷೆಯಾಗಿ ಕಾಣುತ್ತಿತ್ತು. ‘ಅಲ್ಲ ಸರ್ ನನ್ನ ತೋಳಲ್ಲಿ ಟಾಟೂ ಇದ್ದರೆ ಇವರಿಗೇನು ಲಾಸು’ ಅವನು ಮಗುವಿನಂತೆ ಕೇಳುತ್ತಿದ್ದ. ‘ಲಾಸೇನಿಲ್ಲ. ಆದರೆ ಈ ಸುರೂಪದಲ್ಲಿ ಇದ್ದು ಲಾಭವೂ ಇಲ್ಲ.ಅದು ಹೋಗಲಿ ಬಿಡು ನಿನ್ನ ಅಪ್ಪ ಏನು ಮಾಡುತ್ತಾರೆ?’ಎಂದು ಕೇಳಿದೆ. `ಅವರು ವಿಶ್ವಕರ್ಮ’ ಎಂದು ಅವನು ಹೇಳಿದ. ‘ಅಂದರೆ?’ ಎಂದು ಕೇಳಿದೆ. ‘ಅದೇ ಸಾರ್ ಮರದ ಕೆಲಸ’ ಎಂದು ಹೇಳಿದ. ‘ಸರಿ ಹಾಗಾದರೆ ಈ ಕಾಡಿನಲ್ಲಿ ಕಾಣಿಸುವ ಮರಗಳ ಹೆಸರುಗಳನ್ನು ಹೇಳು’ ಎಂದು ಕೇಳಿದೆ. ಅಚ್ಚರಿಯಾಗುವಂತೆ ಅವನು ಎಲ್ಲ ಮರಗಳ ಹೆಸರುಗಳನ್ನ ಹೇಳಿದ. ಮರಗಳ ಕುರಿತ ಕೆಲವು ತಮಾಷೆಗಳನ್ನೂ ಹೇಳಿದ.

ಉದಾಹರಣೆಗೆ ಮನೆಕಟ್ಟುವಾಗ ಹಲಸಿನ ಮರವನ್ನೂ ಹೆಬ್ಬಲಸಿನ ಮರವನ್ನೂ ಜೋಡಿಸಬಾರದಂತೆ. ಯಾಕೆಂದರೆ ಅವು ಅಣ್ಣತಮ್ಮ ಮರಗಳಂತೆ. ಹಾಗಾಗಿ ಅವುಗಳನ್ನು ಜೋಡಿಸಿದರೆ ಆ ಮನೆಯಲ್ಲಿ ಅಣ್ಣತಮ್ಮಂದಿರಿಗೆ ಜಗಳ ನಿಲ್ಲುವುದೇ ಇಲ್ಲವಂತೆ. ಆದರೆ ಜೋಡಿಸಲೇಬೇಕಾಗಿ ಬಂದರೆ ಒಂದು ಪರಿಹಾರವುಂಟಂತೆ. ಅದೇನೆಂದರೆ ಹಾಗೆ ಜೋಡಿಸುವಾಗ ಅವೆರಡು ಮರಗಳ ನಡುವೆ ಮೂರನೆಯ ಮರವೊಂದರ ಆಪನ್ನು ಹಾಕಬೇಕಂತೆ. ಆತ ಇಂತಹದೇ ಹಲವು ಹತ್ತು ಕಥೆಗಳನ್ನು ಹೇಳುತ್ತಿದ್ದ. ನಡುವಲ್ಲಿ ಕೆಲವು ತಮಾಷೆಗಳನ್ನೂ. ಜೊತೆಯಲ್ಲಿ ಆತ ಆ ಸುತ್ತಮುತ್ತಲಿನ ಹತ್ತಾರು ಪಾಳುಬಿದ್ದ ಪುರಾತನ ತೊಟ್ಟಿ ಮನೆಗಳನ್ನೂ ತೋರಿಸಿದ್ದ.

‘ಅಯ್ಯೋ ಬಿಡಿ ಸಾರ್ ಇವೆಲ್ಲಾ ಈಗ ಯಾರಿಗೆ ಬೇಕು ಇಲ್ಲಿ.ಜನ ಯಾರೂ ಸರಿಯಿಲ್ಲ. ಎಲ್ಲರಿಗೂ ಬೇಕಾಗಿರುವುದು ಕಾಂಕ್ರೀಟು ಮನೆಗಳೇ’ ಎಂದು ನೆಲಕ್ಕೆ ಉಗುಳಿ ‘ಒಂದು ಸಿಗರೇಟಿದ್ದರೆ ಕೊಡಿ ಸಾರ್’ ಎಂದು ಕೇಳಿದ್ದ ‘ಸಾರ್ ನಿಮ್ಮ ಹತ್ತಿರ ಏನೋ ಹೇಳಬೇಕಿತ್ತು’ ಅಂದ. ‘ಸಾರ್, ನಿಮಗೆ ನನ್ನ ವಿಷಯ ಗೊತ್ತಿರಬಹುದು’ಅಂದ ‘ಸಾರ್ ಅಲ್ಲಿ ಕಾಣ್ತಾ ಇದೆಯಲ್ಲ ಆ ಬಿಎಸ್ಸೆನ್ನೆಲ್ ಮೊಬೈಲ್ ಟವರ್. ಅದರ ಮೇಲೆ ಹತ್ತಿ ಸಾಯಲು ಹೊರಟಿದ್ದೆನಲ್ಲ. ಅದೇ ಕಿಶೋರ್ ಸಾರ್ ನಾನು’ ಅಂದ. ‘ಅಯ್ಯೋ ಮಾರಾಯ ತುಂಬಾ ಜನ ಸಾಯಲು ಮೊಬೈಲು ಟವರ್ ಹತ್ತುತ್ತಾರೆ. ನಿನ್ನ ಕಥೆ ನೆನಪಿಲ್ಲ. ಯಾಕೆ ಸಾಯಲು ಹೊರಟಿದ್ದೆ.ಹೇಳು’ ಎಂದು ಬೇಕೆಂತಲೇ ನಿರ್ವಿಕಾರನಾಗಿ ಅಂದೆ. ‘ಗೊತ್ತಿಲ್ಲ ಸಾರ್. ಎಲ್ಲಿ ಬದುಕಬೇಕು. ಹೇಗೆ ಬದುಕಬೇಕು ಗೊತ್ತಿಲ್ಲ. ಅದಕ್ಕೆ ಸಾಯುವ ಅಂತ ಹತ್ತಿದ್ದೆ. ನೀವೂ ರೇಡಿಯೋದಲ್ಲಿ ಈ ಸುದ್ದಿ ಓದಿದ್ದೀರಿ. ಅದಕ್ಕೆ ನಿಮ್ಮ ಜೊತೆ ಹೇಳಬೇಕನಿಸಿತು. ಹೋಗುತ್ತೇನೆ ಬಾಯ್ ಸಾರ್’ ಎಂದು ಹೊರಟ. `ಅಯ್ಯೋ ಮಾರಾಯ ಹೆಚ್ಚುಕಡಿಮೆ ನನ್ನದೂ ಇಂತಹದೇ ಕಥೆ ಆದರೆ ಮೊಬೈಲು ಟವರು ಹತ್ತುವುದು ಬೋರು ಎಂದು ಗೊಣಗಿಕೊಂದು ನಾನೂ ಅಲ್ಲಿಂದ ಹೊರಟೆ.

About The Author

ಅಬ್ದುಲ್ ರಶೀದ್

ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ