Advertisement
ಪತಿದೇವರಂತಹ ವಯೋವೃದ್ಧ ಉರಗ: ಅಬ್ದುಲ್ ರಶೀದ್ ಅಂಕಣ

ಪತಿದೇವರಂತಹ ವಯೋವೃದ್ಧ ಉರಗ: ಅಬ್ದುಲ್ ರಶೀದ್ ಅಂಕಣ

ಕಳೆದ ಶನಿವಾರ ಇಲ್ಲೊಂದು ಸಂಗತಿ ನಡೆಯಿತು. ಇಲ್ಲಿನ ಹಾಸ್ಟೆಲ್ ಒಂದರ ಹುಡುಗರು ಶಾಲೆಯಿಂದ ಮಳೆಯಲ್ಲಿ ನೆನೆದುಕೊಂಡು ಬರುವಾಗ ಮೂತ್ರ ಹೊಯ್ಯಲು ಶಿಥಿಲವಾಗಿರುವ ಮನೆಯೊಂದರ ಜರಿದ ಗೋಡೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ಸಾಮೂಹಿಕ ಮೂತ್ರ ಶಕ್ತಿಯಿಂದ ಈ ಗೋಡೆಯನ್ನು ಒಂದಿಲ್ಲ ಒಂದುದಿನ ಬೀಳಿಸುತ್ತೇವೆ ಎನ್ನುವುದು ಈ ಬಡ ಹುಡುಗರ ಕನಸಂತೆ.

ಈ ಹಾಸ್ಟೆಲಿನ ಪರಿಚಾರಿಕೆಯೊಬ್ಬರು ಮಧ್ಯಾಹ್ನದ ಹೊತ್ತು ಗಾಬರಿಯಲ್ಲಿ ಕರೆದು ‘ಯಾರಾದರೂ ಹಾವು ಹಿಡಿಯುವವರಿದ್ದರೆ ಕರೆದುಕೊಂಡು ಬನ್ನಿ’ ಎಂದು ಕೇಳಿಕೊಂಡರು. ‘ಹಾವು ಹಿಡಿಯುವವರು ದೂರದಲ್ಲಿ ಕಾರ್ಯಮಗ್ನರಾಗಿದ್ದಾರೆ, ನಾನೇ ಬರುತ್ತೇನೆ’ ಎಂದು ಹೋಗಿ ನೋಡಿದರೆ ದಾರಿ ಬದಿಯಲ್ಲೇ ಆ ಗೋಡೆಯ ಪಕ್ಕ ಮುದುಕನಂತೆ ಗಾಯಗೊಂಡಿದ್ದ ಆ ಅಪರಿಚಿತ ಹಾವು ಬಿದ್ದುಕೊಂಡಿತ್ತು. ಎಲ್ಲರೂ ಅದು ಕೇರೆ ಹಾವೆಂದು ಹೊಡೆದು ಬಡೆದು ಅದರ ಒಂದು ಕಣ್ಣು ಹೊರಬರುವಂತೆ ಮಾಡಿದ್ದರು. ಆದರೆ ನೋಡಲು ಅದು ಕೇರೆ ಹಾವಿನಂತೆ ಇರದೆ ನೋವಿನಲ್ಲಿ ತನ್ನ ಅಸಹಾಯಕ ಬಾಯನ್ನು ತೆರೆದು ಹಿಡಿದು ವಿಷದ ಹಾವಿನಂತೆ ಹೆದರಿಸಲು ನೋಡುತ್ತಿತ್ತು.

‘ನಮ್ಮ ಮಕ್ಕಳು ಇಲ್ಲೇ ಮೂತ್ರ ಹುಯ್ಯಲು ಬರುವುದು, ಕಳೆದ ಒಂದು ವಾರದಿಂದ ಈ ಹಾವು ಇಲ್ಲೇ ಓಡಾಡುತ್ತಿದೆ. ಈ ಮಕ್ಕಳಿಗೇನಾದರೂ ಇದು ಕಚ್ಚಿದರೆ ಏನು ಗತಿ ಭಗವಂತಾ’ ಎಂದು ಆ ಪರಿಚಾರಿಕೆ ಗೋಳಿಡುತ್ತಿದ್ದರು. ಅಷ್ಟರಲ್ಲಿ ಈ ಪ್ರದೇಶಕ್ಕೆ ಅಸಹಜ ಎನ್ನುವಷ್ಟರ ಮಟ್ಟಿಗೆ ಚಿನ್ನ ಹೇರಿಕೊಂಡು ತಲೆಗೆ ಚಿನ್ನದ ಬಣ್ಣದ ವಿಗ್ ಹಾಕಿಕೊಂಡು ಬಂದ ಮಹಿಳೆಯೊಬ್ಬಳು ಈ ವೃದ್ದ ಹಾವು ತನ್ನ ತೀರಿಹೋಗಿರುವ ಪತಿಯೋ ಎನ್ನುವ ಹಾಗೆ ಅದರ ಕುರಿತು ಇನ್ನಷ್ಟು ವಿವರಗಳನ್ನು ಅವಸರದಲ್ಲಿ ಹೇಳಿ ‘ಜಾಗ್ರತೆ, ವಿಷ’ ಎಂದೆಲ್ಲಾ ಎಚ್ಚರಿಸಿ ಮಾಯದಂತೆ ಕಣ್ಣರೆಯಾದಳು. 

ಎಷ್ಟು ಸಲ ಓಡಿಸಿದರೂ ಮತ್ತೆ ಮತ್ತೆ ಕಿಟಕಿಯೊಳಗಿಂದ ನುಗ್ಗಿ ಬರುವ ಅದನ್ನು ಹಿಮ್ಮೆಟ್ಟಿಸಲು ಆಕೆ ಕ್ರಿಮಿನಾಶಕವನ್ನು ಅದರ ಮುಖಕ್ಕೆ ಸಿಂಪಡಿಸಿರುವಳಂತೆ, ಇನ್ನೂ ಏನೇನೆಲ್ಲಾ ಮಾಡಿರುವಳಂತೆ.
ಆಕೆ ತೆರಳಿದ ಮೇಲೆ ಅಲ್ಲಿಗೆ ಬಂದ ಇನ್ನೂ ಹಲವರು ಇದೇ ಬಗೆಯ ಕಥೆಗಳನ್ನು ಹೇಳಿದರು. ಒಬ್ಬರಂತೂ ಶತಮಾನಗಳಿಂದ ಶಿಥಿಲವಾಗಿರುವ ತಮ್ಮ ಮನೆಯೊಳಕ್ಕೆ ಕರೆದುಕೊಂಡು ಹೋಗಿ ಬಿರುಕು ಬಿಟ್ಟ ಗೋಡೆಯ ಟೊಳ್ಳುಗಳನ್ನು ತೋರಿಸಿ ಅದರೊಳಗೆ ಈಗಲೂ ಮಲಗಿಕೊಂಡಿರುವ ಹಲವು ಬಗೆಯ ಉರಗಗಳ ಕುರಿತು ಹೇಳಿದರು.
ಅವರ ಅಡುಗೆ ಮನೆಯ ನಲ್ಲಿಯಿಂದ ಬಿಟ್ಟ ನೀರು ಹೊರಕ್ಕೆ ಹರಿಯದೆ ಅಲ್ಲೇ ಮಡುಗಟ್ಟಿರುವುದನ್ನು ತೋರಿಸಿ, ‘ಯಾಕೆ ನೀರು ಹೊರ ಹರಿಯುತ್ತಿಲ್ಲ ಗೊತ್ತಾ?’ ಎಂದು ಕೇಳಿದರು. ‘ಗೊತ್ತಾಗಲಿಲ್ಲ’ ಅಂದೆ. ‘ನೀರು ಹರಿದು ಹೋಗಬೇಕಾದ ಕೊಳವೆಯೊಳಗೆ ಹಾವೊಂದು ಮಲಗಿಕೊಂಡಿದೆ’ ಎಂದು ಹೇಳಿದರು.

ಅದು ಸುಮಾರು ವರ್ಷಗಳ ಹಿಂದೆ ತೀರಿಹೋದ ಈ ಊರಿನ ಪ್ರಖ್ಯಾತ ವೈದ್ಯರೊಬ್ಬರ ಹಳೆಯ ಕಾಲದ ಮನೆ. ಈ ವೈದ್ಯರ ಸಂತತಿಯೆಲ್ಲವೂ ಈಗ ಯುರೋಪಿನಲ್ಲಿದೆಯಂತೆ. ಈ ಮನೆಯನ್ನು ಹೆರಿಟೇಜ್ ಹೋಂ ಸ್ಟೇ ಮಾಡುವ ಕನಸಿದೆಯಂತೆ. ನಾನು ಈ ಮನೆಯ ಅಟ್ಟವನ್ನು ಕಷ್ಟಪಟ್ಟು ಹತ್ತಿ ಅಲ್ಲಿರುವ ಕೆಲವು ಕಬ್ಬಿಣದ ಪೆಠಾರಿಗಳ ಮುಚ್ಚಳವನ್ನು ಹೆದರುತ್ತಲೇ ನೋಡಿದೆ. ಆ ವೈದ್ಯರ ಹಳೆಯ ಪುಸ್ತಕಗಳು, ಅವರ ಸಂಸಾರದ ಚಿತ್ರಗಳು. ಆ ಕಾಲದಲ್ಲಿ ಕೊಡಗಿನಲ್ಲಿ ಇದ್ದ ಏಕೈಕ ಮಜಬೂತು ಕಾರಿನ ಚಿತ್ರ ಎಲ್ಲವೂ ಅಲ್ಲಿ ಇತ್ತು. ನಡುಗುತ್ತಲೇ ಕೆಳಗಿಳಿದು ಬಂದೆ.

ರಸ್ತೆ ಬದಿಯಲ್ಲಿ ಬಿದ್ದಿದ್ದ ಆ ಅಪರಿಚಿತ ವೃದ್ದ ಹಾವನ್ನು ಈಗ ಈ ನಗರದಂಚಿನ ಕಾಡಿಗೆ ಬಿಡಲಾಗಿದೆ. ಹೋಗಲು ಒಲ್ಲೆ ಅನ್ನುವಂತೆ ಅದು ಆಗಾಗ ರಸ್ತೆಯಂಚಲ್ಲೂ ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತವಂತೆ. ಹಾಸ್ಟೆಲಿನ ಹುಡುಗರು ಮತ್ತೆ ತಮ್ಮ ಮೂತ್ರ ಚಳವಳಿಯನ್ನು ಮುಂದುವರಿಸಿದ್ದಾರೆ. ಇದನ್ನು ಬರೆದು ಮುಗಿಸುವ ಹೊತ್ತಲ್ಲಿ ಆಕಾಶ ಮತ್ತೆ ಮುಖ ಕಪ್ಪು ಮಾಡಿಕೊಂಡು ನೋಡುತ್ತಿದೆ.

About The Author

ಅಬ್ದುಲ್ ರಶೀದ್

ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ