Advertisement
ಮುಳ್ಳಿನ ಮೇಲಿನ ಹೂವು: ವೇದಾ ಮನೋಹರ ಜೀವನ ಪಯಣದ ಕತೆ

ಮುಳ್ಳಿನ ಮೇಲಿನ ಹೂವು: ವೇದಾ ಮನೋಹರ ಜೀವನ ಪಯಣದ ಕತೆ

“ಪಂಚಮವೇದ” ಎಂಬುದು ಕೇವಲ ಹಾಡಲ್ಲ, ಇದೊಂದು ಬದುಕು, ಕಲಿಕಾ ಪಯಣ. ಶಿವಮೊಗ್ಗ ಜಿಲ್ಲೆಯ, ಭದ್ರಾವತಿ ತಾಲೂಕಿನ ಬಾರಂದೂರು ಸಮೀಪದ ಗುಡ್ಡದ ಹಟ್ಟಿಯಲ್ಲಿ 25 ಎಕರೆ ಜಾಗದಲ್ಲಿ ವೇದಾ ಮನೋಹರ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಕೃಷಿಯನ್ನು ಮಾಡುತ್ತಿರುವುದನ್ನು ನಾವು ಕಾಣಬಹುದು. ಇವತ್ತು “ಪಂಚಮವೇದ” ನಾನಾ ಕಾರಣಗಳಿಗೆ ಸ್ಟಡೀ ಸೆಂಟರ್ ಆಗಿದೆ. ಕೃಷಿಗೆ, ಕೃಷಿ ಉತ್ಪನ್ನಗಳಿಗೆ, ಹೈನುಗಾರಿಕೆಗೆ ಇತ್ಯಾದಿಗಳಿಗೆ ಪ್ರಸಿದ್ಧವಾಗಿದೆ. ಆದರೆ ಈ ಎಲ್ಲದರ ಹಿಂದೆ ವೇದಾ ಮನೋಹರ ಅವರ ಸತತ ಪರಿಶ್ರಮವಿದೆ. ಜೊತೆಗೆ ಅವರ ಪ್ರೀತಿಯ ಸಂಗಾತಿ ಮನೋಹರ ಮಸ್ಕಿ ಅವರ ಸಾತ್ ಕೂಡ ಇದೆ. ಅಪ್ಪಟ ಕೊಡಗಿನ ಹೆಣ್ಣುಮಗಳಾದ ವೇದಾ ಬಯಲು ಸೀಮೆಯ ಮನೋಹರ ಮಸ್ಕಿ ಅವರನ್ನು ಪ್ರೀತಿಸಿ ಮದುವೆಯಾಗಿ ಹೋದದ್ದು ಬಿಸಿಲ ನಾಡು ಸಿಂಧನೂರಿಗೆ. ಅಲ್ಲಿ ಅವರು ಬದುಕಿದ್ದು, ಹೋರಾಡಿದ್ದು, ಅವರ ಸಂಕಷ್ಟಗಳು, ಅವನ್ನೆಲ್ಲ ಎದುರಿಸಿ ನಿಂತಿದ್ದೆಲ್ಲ ಒಂದು ಇತಿಹಾಸ. ಅಂಥ ಎಲ್ಲ ಸಂಘರ್ಷಗಳ ನಡುವೆಯೂ ಬದುಕನ್ನು ಧನಾತ್ಮಕವಾಗಿ ನೋಡಿ ಮುಂದೆ ಸಾಗಿದವರು ಈ ದಂಪತಿ. ಸಂಕಷ್ಟ ಬಂದಾಗ ಸಿಂಧನೂರಿನಲ್ಲಿ ಮೊದಲ ಬ್ಯೂಟಿಪಾರ್ಲರ್ ತೆರೀತಾರೆ. ಅದು ಸಿಂಧನೂರಿನ ಮೊದಲ ಬ್ಯೂಟಿಪಾರ್ಲರ್. ನಂತರ ಜನತಾ ಬಜಾರ್ ಎಂಬ ಸೂಪರ್ ಮಾರ್ಕೆಟ್, ಅದರ ನಂತರ ಸುಕೋಬ್ಯಾಂಕ್.. ಹೀಗೆ ಒಂದಾದರೊಂದರಂತೆ ಉದ್ಯಮ ಪ್ರಾರಂಭಿಸಿ ಗೆದ್ದು ಇಂದು ಯಶಸ್ಸು ಸಾಧಿಸಿದ್ದಾರೆ. ಒಬ್ಬರಿಗೊಬ್ಬರು ಭರವಸೆ ಕೊಟ್ಟುಕೊಂಡು ಮುನ್ನಡೆಯುತ್ತಾ ಇಂದು ಪ್ರಕೃತಿಯ ಮಡಿಲಲ್ಲಿ ವಾಸವಾಗಿದ್ದಾರೆ. ಇವರ ಯಶಸ್ವೀ ಬದುಕಿನ ಚಿತ್ರಣವೇ ಈ ಪುಸ್ತಕ.
ಪರ್ತಕರ್ತೆ ಭಾರತಿ ಹೆಗಡೆ ನಿರೂಪಣೆಯಲ್ಲಿ ಪ್ರಕಟಿತ “ಪಂಚಮವೇದ” ಕೃತಿ ನಾಳೆ ಬಿಡುಗಡೆಯಾಗಲಿದ್ದು, ಅದರ ಒಂದು ಅಧ್ಯಾಯ ನಿಮ್ಮ ಓದಿಗೆ

ಒಂದು ನಡು ಮಧ್ಯಾಹ್ನದ ಬಿಸಿಲು, ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತು ಎದುರಿಗಿನ ತೋಟವನ್ನೇ ನೋಡುತ್ತಿದ್ದೇನೆ. ಬಿರುಬಿಸಿಲು ಇನ್ನೂ ಕಣ್ಣಿಗೆ ರಾಚುತ್ತಿತ್ತು. ಮನೆಯ ಪಕ್ಕದ ಗಿಡವೊಂದರಲ್ಲಿ ಜೋಡಿ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದವು. ಸೂರ್ಯ ನೆತ್ತಿಯಿಂದಾಚೆಗೆ ನಿಧಾನಕ್ಕೆ ಸರಿದು ಹೋಗುತ್ತಿದ್ದ. ಮನೆಯ ಮುಂದಿನ ಹೂವಿನ ಗಿಡಗಳು, ನಾನೇ ನೆಟ್ಟ ತೆಂಗಿನ ಮರಗಳು, ಅದರಾಚೆಗಿನ ಅಡಿಕೆ ಮರಗಳೆಲ್ಲ ಈ ಬಿರುಬೇಸಿಗೆಯಲ್ಲೂ ತಂಪನ್ನೆರೆಯುತ್ತಿದ್ದವು. ಎಡಕ್ಕೆ ಹೊರಳಿದರೆ ನಾನೇ ಸಾಕಿದ ದನಗಳು, ಆಗಾಗ ಅಂಬಾ ಎಂದು ಕರೆಯುತ್ತಿರುತ್ತವೆ. ಎದುರಿಗೆ ಈಗ ಫಸಲು ನೀಡುತ್ತಿರುವ ಅಡಿಕೆ, ತೆಂಗು ಮರಗಳು. ಬೆನ್ನ ಹಿಂದೆ ಬಂಗ್ಲೆಯಂತಹ ಮನೆ, ಅದಕ್ಕೆ ತೆರೆದ ಪುಸ್ತಕದಂತಿರುವ ಹೆಬ್ಬಾಗಿಲು…ಎಲ್ಲ ಸೇರಿ ಇಡೀ ಪಂಚಮವೇದ ಫಾರ್ಮ್ ಹೌಸ್ ಇಂದು ನಳನಳಿಸುತ್ತಿದೆ. ಇದೆಲ್ಲ ಹೇಗೆ ಸಾಧ್ಯವಾಯಿತು? ಇವೆಲ್ಲ ನಾನು ಮಾಡಿದ್ದಾ? ನಾವು ಮಾಡಿದ್ದಾ…? ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ ಊರಿಂದೂರಿಗೆ ಅಲೆದಾಡುತ್ತ, ಬಿಸಿಲನಾಡಿನಲ್ಲಿ ಬಸವಳಿದು ಸಾಕಾಗಿ ಕುಳಿತಾಗಲೂ ಪಂಚಮವೇದದ ಕನಸಿರಲಿಲ್ಲ. ಆದರೆ ಏನನ್ನಾದರೂ ಸಾಧಿಸಲೇಬೇಕೆಂಬ ಹಠ ಇತ್ತು. ಆ ಹಠ ನನ್ನಲ್ಲಿ, ನಮ್ಮಿಬ್ಬರಲ್ಲಿ ಮೊಳೆತದ್ದಾದರೂ ಹೇಗೆ…?

ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದು ಕನಸ ಕಂಡು ಮಾತಿಗೊಲಿಯದಮೃತವುಂಡು
ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ…?

ನರಸಿಂಹಸ್ವಾಮಿಯವರ ಬಾರೆ ನನ್ನ ಶಾರದೆ ಪದ್ಯ ಸದಾ ನನ್ನೊಳಗೆ ಮೊರೆಯುತ್ತಲೇ ಇರುತ್ತದೆ. ನಾವು ಕೂಡ ಹೀಗೆಯೇ… ಬದುಕಿನ ಒಂದು ತಿರುವಿನಲ್ಲಿ ಸಿಕ್ಕೆವು, ಒಪ್ಪಿದೆವು, ಹೊಸ ಹೊಸ ಕನಸುಗಳನ್ನು ಕಟ್ಟಿದೆವು. ಅದನ್ನು ನನಸಾಗಿಸುವತ್ತ ಹೋರಾಡಿದೆವು. ಹೇಳಿಕೇಳಿ ಪ್ರೇಮಿಸಿ ಮದುವೆಯಾದವರು ನಾವು. ಅದೂ ಜಾತಿಯ ಸಂಕೋಲೆಗಳನ್ನು ಕಿತ್ತು ಹಾಕಿ ಮದುವೆಯಾದವರು. ನಾನು ತಂಪು ಪ್ರದೇಶವಾದ ಕೊಡಗಿನಿಂದ ಬಂದಿದ್ದರೆ ಅವರು ಬಿಸಿಲನಾಡಿನವರು. ಪ್ರೇಮಕ್ಕೆ ಪ್ರಾಂತ್ಯದ ಹಂಗಿರಲಿಲ್ಲ. ಜಾತಿಯೂ ಬೇಕಿರಲಿಲ್ಲ. ಜಾತಿಯ ಅಡ್ಡಗೋಡೆ ನಮ್ಮನ್ನು ಕಾಡಿರಲಿಲ್ಲ. ಆದರೆ ಸಮಾಜಕ್ಕೆ ಅದು ಕಾಡಿತ್ತು. ಈಗ 35 ವರ್ಷಗಳ ಹಿಂದೆ ಅದೂ ಮಸ್ಕಿಯಂತಹ ಗ್ರಾಮದ ಅಪ್ಪಟ ಸಾಂಪ್ರದಾಯಿಕ ಮನಸ್ಥಿತಿಯುಳ್ಳಂತಹ ಮನೆತನವೊಂದಕ್ಕೆ ಅನ್ಯ ಸಮುದಾಯದ ಹುಡುಗಿಯೊಬ್ಬಳು ಮದುವೆಯಾಗಿ ಹೋಗುವುದೆಂದರೆ ಸಾಮಾನ್ಯದ ವಿಷಯವಾಗಿರಲಿಲ್ಲ. ಹಾಗೆಯೇ ಅತ್ಯಂತ ಕಟ್ಟುನಿಟ್ಟಿನ ಸಂಪ್ರದಾಯವಿರುವ ಕೊಡವ ಜನಾಂಗದಲ್ಲೂ ಇದು ಸಾಮಾನ್ಯದ ಮಾತಾಗಿರಲಿಲ್ಲ. ಹಾಗಾಗಿ ವಿರೋಧದ ನಡುವೆಯೇ ನಾವು ಸೇರಿದೆವು.

ನಾವಿಬ್ಬರೂ ಪ್ರೇಮಿಸುತ್ತೇವೆಂದು ಅರಿವಾದ ತಕ್ಷಣವೇ ನಮ್ಮೊಳಗೊಂದು ಹಠ ಮೊಳೆತಿತ್ತು. ಯಾವತ್ತೂ, ಯಾವ ಕಾರಣಕ್ಕೂ ನಾವು ಸೋಲಬಾರದೆಂದು. ನಮ್ಮನ್ನು ನೋಡಿ ಜನ ಹಾಸ್ಯ ಮಾಡಬಾರದೆಂದು. ಅದಕ್ಕಾಗಿಯೇ ಒಬ್ಬರಿಗೊಬ್ಬರು ಭರವಸೆ ಕೊಟ್ಟುಕೊಂಡು ಮುನ್ನಡೆದೆವು. ಜೊತೆಜೊತೆಯಾಗಿ ಹೆಜ್ಜೆ ಇರಿಸಿದೆವು. ಅಲ್ಲಿ ಹೋರಾಟವಿತ್ತು, ಸಂಘರ್ಷವಿತ್ತು, ಏನೆಲ್ಲ ಇತ್ತು… ಬಡತನದ ಬೇಗೆಯಲ್ಲಿ ನರಳಿದ್ದಿದೆ. ಬಿಸಿಲಿನ ಝಳಕ್ಕೆ ಬಾಡಿದ್ದಿದೆ. ಉದ್ಯೋಗವಿಲ್ಲದೆ ಮುಂದೇನು ಎಂಬ ಭೀತಿಯಲ್ಲಿ ತೊಳಲಾಡಿದ್ದೂ ಇದೆ. ಹೀಗಿದ್ದೂ ಸೋಲಲಿಲ್ಲ. ಅಂತರ್ಜಾತಿ ವಿವಾಹವಾದವರು ನೀವು ಎಂಬ ಮಾತು ಸೋಲಕೂಡದು ಎಂದು ನಮ್ಮೊಳಗೆ ಸದಾ ಎಚ್ಚರಿಸುತ್ತಲೇ ಇರುತ್ತಿತ್ತು. ನಾವು ವಿವಾಹವಾಗುತ್ತೇವೆಂದು ಹೇಳಿದಾಗ, ‘ಮುಳ್ಳಿನ ಮೇಲೆ ಬಿದ್ದ ಹೂವಿದು. ಹೂವು ನೋಡಲು ಚೆಂದ ಕಾಣಿಸುತ್ತದೆ. ಆದರೆ ಆಯ್ದುಕೊಳ್ಳಲು ಹೋದರೆ ಚುಚ್ಚುತ್ತದೆ. ಎತ್ತಿಕೊಂಡರೂ, ಅಲ್ಲೇ ಬಿಟ್ಟರೂ ಹೂವು ಹರಿದೇ ಹೋಗುತ್ತದೆ’ ಎಂದು ಹೇಳಿದ ಅಪ್ಪನ ಮಾರ್ಮಿಕ ಮಾತುಗಳು ಯಾವಾಗಲೂ ಚುಚ್ಚುತ್ತಲೇ ಇರುತ್ತಿತ್ತು. ಏನೂ ಹೇಳದೆ ಮೌನವಾಗಿಯೇ ರೋದಿಸಿದ ಅಮ್ಮ, ಬೇರೆ ಜಾತಿ ಎಂದು ಮನೆಗೇ ಕರೆಯದ ಸರೀಕರ ನಡುವೆ ತಲೆ ಎತ್ತಿ ನಿಲ್ಲಲೇಬೇಕೆಂಬ ಹಠವಿತ್ತು. ಆರ್ಥಿಕ ಸಂಕಷ್ಟವೂ ನಮ್ಮನ್ನು ಕಾಡಿತ್ತು. ಆಗೆಲ್ಲ ಮತ್ತೆ ಮತ್ತೆ ನಮ್ಮ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಳ್ಳುತ್ತಿದ್ದೆವು. ಅದಕ್ಕೆ ಬೆನ್ನ ಹಿಂದೆ ನಿಂತವರು ಪತಿ ಮನೋಹರ್. ಸ್ನೇಹಿತರೊಬ್ಬರು ಹೇಳಿದ್ದರು, ಅವರು ತಳಪಾಯ ಹಾಕುತ್ತಾರೆ, ನಾನು ಗೋಪುರ ಕಟ್ಟುತ್ತೇನೆಂದು. ಇದ್ದರೂ ಇರಬಹುದು. ಬೆನ್ನ ಹಿಂದೆ ನಿಂತು ಅವರು ಮುಂದೆ ಕೈ ತೋರಿಸಿದರು, ಆ ಹಾದಿಯಲ್ಲಿ ನಾನೂ ಮುನ್ನಡೆದೆ. ಒಬ್ಬರಿಗೊಬ್ಬರು ಆತುಕೊಂಡೆವು. ನಾನು ಸೋತಾಗ ಅವರು ಕೈ ಹಿಡಿದರು, ಅವರು ಸೋತಾಗ ನಾನು ನಿಂತು ಮುನ್ನಡೆದೆ. ಹೀಗೆ ಮುನ್ನಡೆಯುತ್ತಾ ಇಂದು ಈ ಪಂಚಮವೇದದಲ್ಲಿ ಬಂದು ನಿಂತಿದ್ದೇವೆ.

ಜಾತಿಯ ಅಡ್ಡಗೋಡೆ ನಮ್ಮನ್ನು ಕಾಡಿರಲಿಲ್ಲ. ಆದರೆ ಸಮಾಜಕ್ಕೆ ಅದು ಕಾಡಿತ್ತು. ಈಗ 35 ವರ್ಷಗಳ ಹಿಂದೆ ಅದೂ ಮಸ್ಕಿಯಂತಹ ಗ್ರಾಮದ ಅಪ್ಪಟ ಸಾಂಪ್ರದಾಯಿಕ ಮನಸ್ಥಿತಿಯುಳ್ಳಂತಹ ಮನೆತನವೊಂದಕ್ಕೆ ಅನ್ಯ ಸಮುದಾಯದ ಹುಡುಗಿಯೊಬ್ಬಳು ಮದುವೆಯಾಗಿ ಹೋಗುವುದೆಂದರೆ ಸಾಮಾನ್ಯದ ವಿಷಯವಾಗಿರಲಿಲ್ಲ. ಹಾಗೆಯೇ ಅತ್ಯಂತ ಕಟ್ಟುನಿಟ್ಟಿನ ಸಂಪ್ರದಾಯವಿರುವ ಕೊಡವ ಜನಾಂಗದಲ್ಲೂ ಇದು ಸಾಮಾನ್ಯದ ಮಾತಾಗಿರಲಿಲ್ಲ.

ಜೊತೆಯಾಗಿ ನಡೆದು ೩೫ ವರ್ಷಗಳಾದವು. ಈ ಇಷ್ಟೂ ವರ್ಷವೂ ಪರಸ್ಪರ ಜಗಳ ಆಡಿದ್ದೇವೆ, ಕಿತ್ತಾಡಿದ್ದೇವೆ, ಮತ್ತೆ ಒಂದಾಗಿದ್ದೇವೆ. ಮಳೆ ನಿಂತು ಹೋದ ಮೇಲಿನ ಒದ್ದೆ ನೆಲದಂತೆ… ಈ ಬದುಕು ಆರ್ದ್ರವಾಗಿಸುವ ಅದೆಷ್ಟೋ ಸಂಗತಿಗಳಿಗೆ ಸಾಕ್ಷಿಯೆಂಬಂತೆ ಇಲ್ಲಿ ಪಂಚಮವೇದ ನಿಂತಿದೆ.

ಈಗ ಗಿಡದಲ್ಲಿ ಕುಳಿತ ಹಕ್ಕಿ ಹಾರಿ ಹೋಯಿತು. ಬಹುಶಃ ಅದು ಗಂಡು ಹಕ್ಕಿಯೇ ಇರಬೇಕು. ಇನ್ನೊಂದು ಹಕ್ಕಿ ಗೂಡೊಳಗಿನ ಮರಿಗಳಿಗೆ ಆಹಾರ ಹಾಕುತ್ತಿರುವುದನ್ನು ನೋಡುತ್ತಿದ್ದೇನೆ. ಇಡೀ ಜೀವಸಂಕುಲಕ್ಕೇ ತಮ್ಮದೇ ಆದ ಸ್ವಂತ ಗೂಡೊಂದರ ಕಲ್ಪನೆ ಅದೆಷ್ಟು ಅದ್ಭುತವಾಗಿದೆ. ಇಂಥದ್ದೇ ಗೂಡಿಗಾಗಿಯಲ್ಲವೇ ನಮ್ಮೆಲ್ಲರ ಹೋರಾಟ…? ಇಂಥದ್ದೇ ಆಹಾರಕ್ಕಾಗಿಯಲ್ಲವೇ ನಮ್ಮ ಸಂಘರ್ಷ…? ಹೊರಳಿ ನೋಡುತ್ತೇನೆ. ಬದುಕಿನ ಅದೆಷ್ಟು ಸಂಘರ್ಷಗಳ ಹೆಜ್ಜೆಗಳು ಅಲ್ಲಿದ್ದವು…!

ಮಲೆನಾಡಿನ ತಪ್ಪಲಲ್ಲಿ ಹುಟ್ಟಿ, ಜಗತ್ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಗಿಗೆ ಹೋಗಿ, ಅಲ್ಲಿ ಬಾಲ್ಯ ಕಳೆದು, ಉಕ್ಕಿನ ಕಾರ್ಖಾನೆಗೆ ಹೆಸರಾದ ಭದ್ರಾವತಿಯ ಸಮೀಪದ ಬಯಲನಾಡು ತಿಮ್ಮಾಪುರಕ್ಕೆ ಬಂದು, ನನ್ನ ಯೌವನದ ದಿನಗಳನ್ನು ಸವೆಸಿದ್ದು, ಇಲ್ಲಿಯೇ ಮನೋಹರ್ ಅವರನ್ನು ಪ್ರೇಮಿಸಿದ್ದು, ನಂತರ ಬಿಸಿಲನಾಡು ಸಿಂಧನೂರಿಗೆ ಹೋಗಿದ್ದು, ಮಗ ಹುಟ್ಟಿದ ಮೇಲೆ ಮಾಯಾನಗರಿ ಬೆಂಗಳೂರಿಗೆ ಪಯಣಿಸಿದ್ದು, ಈಗ ಎಲ್ಲವನ್ನೂ ಬಿಟ್ಟು, ಮತ್ತದೇ ಭದ್ರಾವತಿಯ ಸಮೀಪದ ಗುಡ್ಡದ ಹಟ್ಟಿಗೆ ಬಂದು ಪಂಚಮವೇದ ತೋಟದಮನೆ ತಲೆ ಎತ್ತುವಂತೆ ಮಾಡಿದ್ದು…
ಎಲ್ಲವೂ ನನ್ನ ಕಣ್ಣಮುಂದೆ ನಿಚ್ಚಳವಾಗಿ ಕಾಣಿಸುತ್ತಿದೆ. ಬದುಕಿನಲ್ಲಿ ಬಂದು ಹೋದ ಪಾತ್ರಗಳೆಲ್ಲವೂ ನನ್ನ ಕಣ್ಣೆದುರು ಹಾದು ಬರುತ್ತಿವೆ. ಈ ಪಂಚಮವೇದದ ಒಟ್ಟು 27 ಎಕರೆ ಜಾಗದಲ್ಲಿ ನಿಂತು ಬದುಕಿನ ಒಂದೊಂದೇ ಪುಟಗಳನ್ನು ಮಗುಚಿ ಹಾಕುತ್ತಿದ್ದೇನೆ. ಇದರಲ್ಲಿ ಒಳ್ಳೆಯದಿತ್ತು, ಕೆಟ್ಟದಿತ್ತು, ನೋವಿತ್ತು, ನಲಿವಿತ್ತು, ಸೋಲಿತ್ತು, ಯಶಸ್ಸಿತ್ತು…

(ಭಾರತಿ ಹೆಗಡೆ)

ಯಾವುದೇ ಸಂಘರ್ಷವಿಲ್ಲದ ಬದುಕು ಅದೊಂದು ಬದುಕೇ ಅಲ್ಲ ಎಂದು ಬಗೆದವಳು ನಾನು. ನಷ್ಟವಿಲ್ಲದ ವ್ಯಾಪಾರವಿಲ್ಲ, ಕಷ್ಟವಿಲ್ಲದ ಬೇಸಾಯವಿಲ್ಲ, ನೋವಿಲ್ಲದ ಸಂಸಾರವಿಲ್ಲ, ಕಷ್ಟವಿಲ್ಲದ ಮನುಷ್ಯನೂ ಇಲ್ಲ. ಆದರೆ ಇದೆಲ್ಲವನ್ನೂ ಜಯಿಸಿ ಅಲ್ಲಿ ಖುಷಿ ಕಾಣುವುದೇ ಜೀವನ ಎಂಬ ಪಾಠವನ್ನೂ ಕಲಿತವಳು…!

ಅಪ್ಪ ಹೇಳಿದಂತೆ ನಿಜಕ್ಕೂ ಇದು ಮುಳ್ಳಿನ ಮೇಲಿನ ಹೂವೇ… ಯಾವತ್ತೂ ನಾವು ಹೂವಿನ ಹಾಸಿಗೆಯ ಮೇಲೆ ನಡೆದವರಲ್ಲ. ಅಷ್ಟು ಸುಲಭಕ್ಕೆ ಯಾವುದೂ ನಮಗೆ ದಕ್ಕಲೂ ಇಲ್ಲ. ಆದರೆ ಮುಳ್ಳುಗಳನ್ನು ನಿವಾರಿಸಿಕೊಂಡು ಮುನ್ನಡೆದಿದ್ದೇವೆ. ಈಗ ಅರಳಿದ ಹೂವಂತೆ ಈ ಪಂಚಮವೇದ ಇಂದು ತಲೆ ಎತ್ತಿ ನಿಂತಿದೆ.

ಈ ಹೋರಾಟಗಳಲ್ಲೆಲ್ಲಿಯೂ ನನಗೆ ಪಶ್ಚಾತ್ತಾಪವಿರಲಿಲ್ಲ. ಹಾಗೆ ನೋಡಿದರೆ ಇದು ನಾನೇ ಆಯ್ದುಕೊಂಡ ಬದುಕು. ನನ್ನ ಬದುಕನ್ನು ಅಪ್ಪ ಅಮ್ಮನ ಮಡಿಲಿಗೆ ಹಾಕಲಿಲ್ಲ. ಪ್ರೇಮಿಸಿ ಮದುವೆಯಾಗಿ ನನ್ನ ಹಾದಿಯನ್ನು ನಾನೇ ಕಂಡುಕೊಂಡೆ. ಮನೋಹರ್ ಅವರನ್ನು ಮದುವೆಯಾದ ಮೇಲೂ ಸಂಪೂರ್ಣವಾಗಿ ಅವರನ್ನು ಅವಲಂಬಿಸಕೂಡದು ಎಂಬ ತತ್ವ ನನ್ನದಿತ್ತು. ಅದಕ್ಕೆ ನೀರೆರೆದವರು ಮನೋಹರ್. ಅದೀಗ ಫಲ ಕೊಟ್ಟಿದೆ. ಯಾಕೆಂದರೆ ನಮ್ಮನ್ನು ನಾವು ನಂಬಿ ಮುನ್ನಡೆದಾಗ ಮಾತ್ರ ನಮಗೆ ಯಶಸ್ಸು ಸಿದ್ಧ ಎಂಬ ತತ್ವದಡಿ ಬದುಕಿದವಳು ನಾನು. ಆ ತತ್ವವೇ ಇಂದಿಗೂ ಮುಂದೆಯೂ ಮುನ್ನಡೆಸುತ್ತದೆ ಎಂದು ನಂಬಿದ್ದೇನೆ…

ಮತ್ತೆ ನೆನಪಾಗುತ್ತಿದೆ, ಪ್ರೇಮವೆನಲು ಹಾಸ್ಯವೇ ಎಂಬ ಸಾಲುಗಳು. ಪ್ರೇಮಕ್ಕೊಂದು ಜವಾಬ್ದಾರಿ ಇದೆ. ಅದು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಮರ ಸುತ್ತುವ ಸಿನಿಮೀಯವಾದ ಪ್ರೇಮವಾಗಿರಲಿಲ್ಲ. ಬದುಕಿನ ಛಲ ಹುಟ್ಟಿಸುವ ಪ್ರೇಮವದು… ಬದುಕಲು ಸಾಧ್ಯವೇ ಇಲ್ಲ ಎಂಬಂತಹ ದಿನಗಳು ನಮಗೂ ಬಂದಿದ್ದವು. ಆದರೂ ಸೋಲಲಿಲ್ಲ… ಸೋಲುವುದಕ್ಕೆ ಈ ಪ್ರೇಮ ಬಿಡಲೂ ಇಲ್ಲ…!

ಇದು ಇಳಿಸಂಜೆಯ ತೃಪ್ತ ಜೀವನದ ಕಥೆಯಲ್ಲ, ಮುಸ್ಸಂಜೆಯ ಪ್ರಸಂಗವೂ ಅಲ್ಲ, ಬೆಳ್ಳಂಬೆಳಗಿನ ಚೇತೋಹಾರಿಯಾದ ವಾತಾವರಣವೂ ಅಲ್ಲಿರಲಿಲ್ಲ. ಇದು ನಟ್ಟ ನಡು ಮಧ್ಯಾಹ್ನದ ಇಂಚಿಂಚೇ ಆಗಿ ಸರಿದು ಹೋಗುವ ಸೂರ್ಯನ ಪ್ರಖರ ಬೆಳಕಿನ ಕೋಲ್ಮಿಂಚಿನ ಥರಹದ ಬದುಕಿನ ಪುಟಗಳು… ಒಂದೊಂದೇಯಾಗಿ ಮಗುಚಿಕೊಳ್ಳುತ್ತಿವೆ ನನ್ನೆದುರು…!

(ಕೃತಿ: ಪಂಚಮವೇದ (ವೇದಾ ಬದುಕಿನ ಸಾರ), ನಿರೂಪಣೆ: ಭಾರತಿ ಹೆಗಡೆ, ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ, ಯಳಗಲ್ಲು, ಪುಸ್ತಕದ ಬೆಲೆ : 250/- , ಪುಟಗಳು – 248)

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. Sujatha

    ಅದ್ಭುತವಾದ ನಿರೂಪಣೆ.. ಅಭಿನಂದನೆಗಳು…ಶುಭವಾಗಲಿ…????????????

    Reply
  2. Bharathi hegde

    Thank you

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ