Advertisement
ನಾವು ಹೊರಗೋಡಿ ಹೋದದ್ದು ಯಾಕೆ?: ಸುಮಾವೀಣಾ ಸರಣಿ

ನಾವು ಹೊರಗೋಡಿ ಹೋದದ್ದು ಯಾಕೆ?: ಸುಮಾವೀಣಾ ಸರಣಿ

ಈಗ ನಾವು ನೋಡಿದ್ದ ವಿಶಾಲ ಗದ್ದೆಗಳು ಸಂಪೂರ್ಣ ಮನೆಗಳಿಂದ ಆವೃತವಾಗಿದೆ. ನೋಡಲಿಕ್ಕೆ ಬೇಸರವಾಗುತ್ತದೆ. ಉತ್ತ ಗದ್ದೆ, ನಾಟಿಯಾದ ಗದ್ದೆ, ತೆನೆಗಟ್ಟಿದ ಗದ್ದೆ, ಕೊಯ್ಲು ಮಾಡಿದ ಗದ್ದೆ, ಹಾಗೆ ಖಾಲಿಯಿದ್ದ ಗದ್ದೆ, ಕಚಡ ಬೆಳೆದ ಗದ್ದೆ ಹೀಗೆ ಕಾಲಕಾಲಕ್ಕೆ ಬದಲಾಗುತ್ತಿದ್ದ ಬಯಲ ಗದ್ದೆ ಈಗ ಮನೆಗಳಿಂದ ಆವೃತ. ಯಾವಾಗಲೂ ಒಂದೇ ರೀತಿಯ ದೃಶ್ಯ. ಬಹುಶಃ ಮನುಷ್ಯ ಇದಕ್ಕಿಂತ ಹೆಚ್ಚು ಮುಂದೆ ಹೋಗಲಾರ ಅನ್ನುವ ಸಂಕೇತವೇನೋ? ಬಿಡಿ!
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಎಂಟನೆಯ ಕಂತು ನಿಮ್ಮ ಓದಿಗೆ

ಆಟಿ ತಿಂಗಳು ಎಂದರೆ ಕೃಷಿಗೇ ಮೀಸಲು….. ಭತ್ತದ ಗದ್ದೆಗಳನ್ನು ಉತ್ತು, ಹದ ಮಾಡುವುದು ಈ ತಿಂಗಳ ವಿಶೇಷದಲ್ಲಿ ವಿಶೇಷ. ಕಾರಣ ಭತ್ತ ಬೆಳೆಯಲು ಮಾತ್ರವಲ್ಲ, ಕೆಸರು ಗದ್ದೆ ಕ್ರೀಡಾಕೂಟಕ್ಕೂ ಎನ್ನುವಂತೆ. ಬತ್ತದ ಉತ್ಸಾಹದಿಂದ ಸೋತುರು ಗೆದ್ದರೂ ಮಳೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸುತ್ತಿದ್ದರು.. ಕೆಸರುಗದ್ದೆ ಓಟ, ಕೊಕೊ, ಹ್ಯಾಂಡ್ ಬಾಲ್ ಮೊದಲಾದ ಕ್ರೀಡೆಗಳು ಇರುತ್ತವೆ. ಪ್ರೇಕ್ಷಕರನ್ನು ಅವಡುಕಚ್ಚಿಸಿ, ಫಿಂಗರ್ಸ್ ಕ್ರಾಸ್ ಮಾಡಿಸಿ ತುದಿಗಾಲಲ್ಲಿ ನಿಂತು ನೋಡುವಂತೆ ಮಾಡುತ್ತಿದ್ದ ಒನ್ ಅಂಡ್ ಓನ್ಲಿ ಇವೆಂಟ್ ಅಂದರೆ ಹಗ್ಗ ಜಗ್ಗಾಟ. ಸವಾಲಿನ ಆಟ. ಮಳೆಯಲ್ಲಿ ಅದೂ ಕೆಸರಲ್ಲಿ ಹಗ್ಗ ಎಳೆಯೋದು ಸಾಮಾನ್ಯವೆ. ಗೆಲುವು ಸೋಲುಗಳನ್ನು ಬದಿಗಿರಿಸಿದರೆ ಕೆಸರಿನ ಅವಾಂತರಗಳು ಹೆಚ್ಚು ಖುಷಿ ಕೊಡುತ್ತಿದ್ದವು. ಕೆಸರಿನ ಲೇಪನದಲ್ಲಿ ಯಾವ ಯಾವ ಕ್ರೀಡಾಪಟುಗಳು ಎಂದು ತಿಳಿಯುತ್ತಿರಲಿಲ್ಲ. ಕಣ್ಣು ಮಾತ್ರ ಪಿಳಿಪಿಳಿ ಎನ್ನುತ್ತಿದ್ದವು. ದೇಹವೆಲ್ಲಾ ಕೆಸರಿನಲ್ಲಿ ಅದ್ದಿ ತೆಗೆದ ಅಸ್ಪಷ್ಟ ಚಲಿಸುವ ಕಲಾಕೃತಿಗಳೇನೋ ಅನ್ನಿಸುತ್ತಿತ್ತು. ಕೆಸರಲ್ಲಿ ಬಿದ್ದುಎದ್ದ ಕ್ರೀಡಾಳುಗಳು ನಡೆಯುತ್ತಿದ್ದರೆ ಕೆಸರು ಅವರನ್ನೆ ಅನುಸರಿಸುವಂತೆ ತೊಟ್ಟ ಬಟ್ಟೆಯಿಂದ ತೊಟ್ಟಿಕ್ಕುತ್ತಾ ಮುಂಚಲಿಸುತ್ತಿತ್ತು. ಕ್ರೀಡಾಕೂಟಕ್ಕಾಗಿ ಬಗೆಬಗೆಯ ಯೂನಿಫಾರ್ಮ್ ತೆಗೆದುಕೊಂಡರೂ ಕ್ರೀಡಾಕೂಟದ ಮುಕ್ಕಾಯಕ್ಕೆ ಎಲ್ಲರದೂ ಏಕಮೇವ ಯೂನಿಫಾರ್ಮ್ ಆಗುತ್ತಿತ್ತು… ಅದುವೆ ಕೆಸರುಡುಗೆ.

ಕ್ರೀಡಾಕೂಟ ಎಲ್ಲೆಡೆ ಆಗುತ್ತಿದೆ ಎಂದರೆ ಮುಂದಿನದು ಕೈಳ್ಪೋಳ್ದು ಹಬ್ಬದ ಸಂಭ್ರಮ. ನಾಟಿ ಕೆಲಸ ಮುಗಿಯಿತು ಎಂಬುದರ ಅಧಿಕೃತ ಘೋಷಣೆ ಎಂದೇ ಅರ್ಥ. ಅಲ್ಲಿಗೆ ಮಳೆರಾಯನ ಆರ್ಭಟ ತುಸು ತಗ್ಗಿದಂತೆಯೇ ಸರಿ! ಮಳೆ ಕಡಿಮೆಯಾಗುತ್ತಿದ್ದಂತೆ ಸೂರ್ಯ ತಾನೂ ಮೋಡಗಳನ್ನು ಇಬ್ಬಗೆ ಮಾಡಿಕೊಂಡು ಇಬ್ಬನಿಯನ್ನು ದಾಟಿ ಕೊಡಗಿನ ಕಾಡು-ಬೆಟ್ಟಗಳನ್ನು ನೋಡುತ್ತಿದ್ದ ಅನ್ನಿಸುತ್ತದೆ. ನಮ್ಮ ಮನೆಯ ಮುಂದೆ ಇದ್ದ ತೋಡು ಅದರ ಬದಿಯ ರಸ್ತೆ ಏರುತ್ತಾ ಏರುತ್ತಾ ಹೋದಂತೆ ಅದೂ ಘಾಟ್ ರೀತಿಯೇ ಕಾಣಿಸುತ್ತಿತ್ತು. ಆದರೆ ಚಾರ್ಮಾಡಿ ಘಾಟ್ ರಸ್ತೆಗಳಷ್ಟು ಎತ್ತರವಾಗಲಿ ತಿರುವುಗಳಾಗಲಿ ಇಲ್ಲ. ಕಾಲೇಜ್ ರೋಡ್ ಘಾಟ್ ಎನ್ನಬಹುದಷ್ಟೆ. ಅಲ್ಲಿಂದಲೇ ಸೂರ್ಯ ನಮ್ಮ ಮನೆಗಳಿಗೆ ಪ್ರವೇಶ ತೆಗೆದುಕೊಳ್ಳುತ್ತಿದ್ದಾನೇನೋ ಅನ್ನಿಸುತ್ತಿತ್ತು. ಅಂತೂ ಎಳೆ ಬಿಸಿಲು ಮನೆಯೊಳಗೆ ನುಸುಳುವಷ್ಟರಲ್ಲಿ ಶಾಲೆಗೆ ಹೊರಡುವ ಸಮಯವಾಗುತ್ತಿತ್ತು. ಸೂರ್ಯನ ಎಳೆ ಬಿಸಿಲ ಮೃದುಸ್ಪರ್ಶ ಭಾಗ್ಯ ಕೈಜಾರುತ್ತಿತ್ತು. ಅಂತೂ ಶಾಲೆ ಸೇರಿದರೆ ಅಲ್ಲಿಯೂ ಬಿಸಿಲಿಗೆ ಮೈಯೊಡ್ಡುವ ಪರಿ 25 ನಿಮಿಷದ ಅಸೆಂಬ್ಲಿಯಲ್ಲಿ ಮಾತ್ರ ರಾಷ್ಟ್ರಗೀತೆ ಮುಗಿಯುತ್ತಲೇ ಅಯ್ಯೋ!!! ಕ್ಲಾಸಿಗೆ ಹೊರಡಬೇಕಾ ಅದರಲ್ಲೂ ಮೊದಲನೆ ಅವಧಿ ಮ್ಯಾಥ್ಸ್. ನಮಗೆ ಲೆಕ್ಕ ಅಷ್ಟಾಗಿ ಬರುತ್ತಿರಲಿಲ್ಲವಲ್ಲ. ಅದಕ್ಕೆ ಹೋಗಬೇಕಾ ಕ್ಲಾಸಿಗೆ ಅನ್ನಿಸುತ್ತಿತ್ತು.

ಸೂರ್ಯ ನಿರಂತರ ಕಾಣಿಸುತ್ತಿದ್ದಾನೆ. ಬಿಸಿಲು ಬರುತ್ತಿದೆ ಎಂದಾಗ ಎಲ್ಲಾ ಕಡೆ ಏಣಿ ಹಾಕಿಕೊಂಡು ಪಾಲಿಷ್ ಪೆಪರ್ ಹಿಡಿದು, ಕಟ್ಟಿದ ಪಾಚಿ ತೆಗೆದು ಬೆಳೆದ ಕಚಡ ತೆಗೆಯೋ ಕೆಲಸ ಶುರುವಾಗುತ್ತಿತ್ತು. (ಕಚಡ ಪದ ಕೊಡಗಿನಲ್ಲಿ ಕಳೆಸಸ್ಯ ಎನಿಸಿಕೊಂಡರೆ ಇತರೆ ಪ್ರಾಂತ್ಯಗಳಲ್ಲಿ ಕೆಟ್ಟ ಗುಣ, ನಡತೆ ಎನ್ನುವ ಅರ್ಥದಲ್ಲಿ ಬಳಕೆಯಲ್ಲಿದೆ) ಈ ಕ್ಲೀನಿಂಗ್ ಮನೆ, ಹೋಟೆಲ್, ಕಾಂಪ್ಲೆಕ್ಸ್‌ಗಳು, ಶಾಲೆಗಳು ಎನ್ನದೆ ಎಲ್ಲಾ ಕಡೆ ನಡೆಯುತ್ತಿತ್ತು. ಬಂದ ವೇಸ್ಟನ್ನು ಎಲ್ಲಿಗೆ ಹಾಕಬೇಕು ಎನ್ನುವ ಪ್ರಶ್ನೆ ಬಂದಾಗ ಅದಕ್ಕೊಂದು ಸುಲಭ, ಮಾರ್ಗವನ್ನು ಕೆಲವರು ಕಂಡುಕೊಂಡಿದ್ದರು. ಅದುವೆ ಈ ಕಾಲೇಜ್ ರೋಡ್ ಘಾಟ್ ಕೆಳಗೆ ಹಾಕುವುದು. ಅದು ಸುಲಭದ ಮಾರ್ಗವೆಂಬಂತೆ ಅನೇಕರಿಗೆ ಅಂದಿಗೆ ಉಪಯೋಗವಾಗುತ್ತಿತ್ತು. ಆಟೋಗಳಲ್ಲಿ, ಟ್ರ್ಯಾಕ್ಟರ್‌ಗಳಲ್ಲಿ ಕಸ ಸುರಿಯುತ್ತಿದ್ದರು. ತೋಡಿಗೆ ಹೊಂದಿಕೊಂಡಂತೆ ಇದ್ದ ಕಿರು ರಸ್ತೆಯನ್ನು ವಿಸ್ತಾರ ಮಾಡಿಸಿಕೊಂಡು ಬಾಣೆಯಂಥ ಪ್ರದೇಶದಲ್ಲಿ ಕೆಲವು ಸ್ಥಳೀಯ ಚುನಾಯಿತರು ಅಂಗಡಿ ಮುಗಟ್ಟುಗಳು ತಲೆ ಎತ್ತುವಂತೆ ಮಾಡಿದರು. ಬಿಲ್ಡಿಂಗ್ ವೇಸ್ಟ್, ಹೋಟೆಲ್ ವೇಸ್ಟ್ ಎಲ್ಲವೂ ಈ ರಸ್ತೆಯ ಕೆಳಗೆ ಜಾರಿ ರಾಶಿಯಾಗುತ್ತಿತ್ತು. ಆ ರಸ್ತೆಯ ಕೆಳಗೆ ವಿಶಾಲವಾದ ಗದ್ದೆಗಳು ಇದ್ದವು. ಈಗ ನಾವು ನೋಡಿದ್ದ ವಿಶಾಲ ಗದ್ದೆಗಳು ಸಂಪೂರ್ಣ ಮನೆಗಳಿಂದ ಆವೃತವಾಗಿದೆ. ನೋಡಲಿಕ್ಕೆ ಬೇಸರವಾಗುತ್ತದೆ. ಉತ್ತ ಗದ್ದೆ, ನಾಟಿಯಾದ ಗದ್ದೆ, ತೆನೆಗಟ್ಟಿದ ಗದ್ದೆ, ಕೊಯ್ಲು ಮಾಡಿದ ಗದ್ದೆ, ಹಾಗೆ ಖಾಲಿಯಿದ್ದ ಗದ್ದೆ, ಕಚಡ ಬೆಳೆದ ಗದ್ದೆ ಹೀಗೆ ಕಾಲಕಾಲಕ್ಕೆ ಬದಲಾಗುತ್ತಿದ್ದ ಬಯಲ ಗದ್ದೆ ಈಗ ಮನೆಗಳಿಂದ ಆವೃತ. ಯಾವಾಗಲೂ ಒಂದೇ ರೀತಿಯ ದೃಶ್ಯ. ಬಹುಶಃ ಮನುಷ್ಯ ಇದಕ್ಕಿಂತ ಹೆಚ್ಚು ಮುಂದೆ ಹೋಗಲಾರ ಅನ್ನುವ ಸಂಕೇತವೇನೋ? ಬಿಡಿ! ಮನಸ್ಸಿನ ಕಲ್ಮಶವನ್ನೂ ದೈಹಿಕ ಕಲ್ಮಶವನ್ನೂ ಒಮ್ಮೆಗೆ ಇಲ್ಲವಾಗಿಸುತ್ತಿದ್ದ ಸ್ವಚ್ಛಗಾಳಿ ಬರ ಬರುತ್ತ ಇಲ್ಲದ ರೋಗದ ಕಣಗಳನ್ನು ಒತ್ತೈಸಿಕೊಂಡು ಅಲ್ಲಿಗೆ ಬಂದವರಿಗೆಲ್ಲಾ ಕೊಡುತ್ತದೇನೋ ಅನ್ನುವಷ್ಟರ ಮಟ್ಟಿಗೆ ಅಲ್ಲಿ ಕಸ ಸಂಗ್ರಹವಾಗುತ್ತಿತ್ತು. ಈಗ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿದೆ ಎನ್ನುವ ವರ್ತಮಾನವಿದೆ.

ಒಂದು ಕಾಲಕ್ಕೆ ಮಡಿಕೇರಿ ನಗರದ ಕಡೆಯ ಭಾಗವೆಂಬಂತೆ ಇದ್ದ ಕಾಲೇಜು ರಸ್ತೆಯಲ್ಲಿ ಅಷ್ಟೇನೂ ಒತ್ತೊತ್ತಿಗೆ ಮನೆಗಳು ಇರಲಿಲ್ಲ. ಈಗ ಕಟ್ಟಡಗಳು ಒಂದರ ಮೇಲೆ ಒಂದು ಎಂಬಂತೆ ಎತ್ತರೆತ್ತರಕ್ಕೆ ರಾರಾಜಿಸುತ್ತಿವೆ. ಮಡಿಕೇರಿ ನಗರ ಈಗ ವಿಸ್ತರಿಸಿದೆ. ಕಾಲೇಜ್ ರೋಡ್ ಘಾಟ್ ಎಂದು ಕರೆಸಿಕೊಳ್ಳುವ ಈ ರಸ್ತೆಯಲ್ಲಿ ಗಾಳಿ ಬೀಡು, ಗಾಲ್ಫ್ ಗ್ರೌಂಡ್, ಶೂಟಿಂಗ್ ಸ್ಪಾಟ್‌ಗಳಿಗೆ ಹೋಗುವ ವಾಹನಗಳನ್ನು ಹೆಚ್ಚಾಗಿ ನೋಡಬಹುದಿತ್ತು. ಶೂಟಿಂಗ್ ವೇಹಿಕಲ್ಸ್ ಕಾಣುತ್ತಿದ್ದಂತೆ ಗಾಲ್ಫ್ ಗ್ರೌಂಡಿಗೆ ಶೂಟಿಂಗ್ ನೋಡಲು ಅನೇಕರು ತೆರಳುತ್ತಿದ್ದರು. ಗಾಳಿಬೀಡು, ಕರವರಲಬಾಡಗ, ಕಾಲೂರು, ಮೊಣ್ಣಂಗೇರಿಗೆ ಹೋಗುವ ಪ್ರೈವೇಟ್ ಬಸ್‌ಗಳು ಇದೇ ಘಾಟ್ ರಸ್ತೆಯಿಂದಲೇ ಹೋಗಬೇಕು. ಶೂಟಿಂಗ್ ನೋಡಲು ಕೊಡೆ ಸಹಿತ ಹೋದವರು ಮನೆಗೆ ಬರುವಷ್ಟರಲ್ಲಿ ಕೊಡೆ ಹಿಡಿಯಲೂ ತ್ರಾಣವಿಲ್ಲದವರಂತೆ ಕೊಡೆ ಮಡಿಸಿ ಮನೆಗೆ ಬರುತ್ತಾ “ಸ್ವಯ ಇಲ್ಲದವರು ಹಿಂದಿಂದ ದೂಡೋದೂ ಅಂತ. ಶ್ಯೆ! ನಿಂತು ಸಾಕಾಯ್ತು ಯವಯ್ಯ! ಎಂಥ ಲೇಟು ಗೊತ್ತುಂಟ? ಅವರು ಪಿಚ್ಚರಲ್ಲಿ ಮಾತ್ರ ಹಾಗೆ ಚಂದ ಕಾಣದು. ಮೇಕಪ್ ಹಾಕಿದ್ರೆ ನಾವೂ ಅವರ್ಗಿಂತ ಚಂದ ಗೊತ್ತುಂಟ” ಎನ್ನುತ್ತಿದ್ದ ಉದ್ಗಾರಗಳು ಸರ್ವೇ ಸಾಮಾನ್ಯವಾಗಿರುತ್ತಿದ್ದವು.

ಈ ಕಾಲೇಜ್ ಘಾಟ್ ರಸ್ತೆಗೆ ಸೀನಿಯರ್ ಕಾಲೇಜ್ ರೋಡ್, ಡಿಆರ್. ಕ್ವಾಟ್ರಸ್ ರೋಡ್, ಗಾಳಿಬೀಡು ರೋಡ್, ರೂರಲ್ ಪೋಲಿಸ್ ಸ್ಟೇಷನ್ ರೋಡ್, ಎನ್ನುವ ಹೆಸರುಗಳಿವೆ. ಅವರವರ ಭಾವಕ್ಕೆ ತಕ್ಕಂತೆ ಎಂಬಂತೆ ಕಾಲೆಜ್‌ಗೆ ಹೋಗುವವರಿಗೆ ಕಾಲೇಜು ರಸ್ತೆ, ಕ್ವಾಟ್ರಸ್‌ಗೆ ಹೋಗುವವರಿಗೆ ಕ್ವಾಟ್ರಸ್ ರಸ್ತೆ. ಸ್ಟೇಷನ್ನಿಗೆ ಹೋಗುವರಿಗೆ ಸ್ಟೇಷನ್ ರಸ್ತೆಯಾಗುತ್ತಿತ್ತು. ಈ ಸರಹದ್ದಿನ ನಾಲ್ಕು ಗ್ರೌಂಡ್‌ಗಳು ಭಾರೀ ಫೇಮಸ್. ಮೊದಲನೆಯದು ಗಾಲ್ಫ್ ಗ್ರೌಂಡ್. ಅದುವೆ ಶೂಟಿಂಗ್ ಸ್ಪಾಟ್, ಎರಡನೆಯದು ಕಾರಿಯಪ್ಪ ಕಾಲೇಜಿನ ಗ್ರೌಂಡ್, ಅರ್ಥಾತ್ ಹೆಲಿಪ್ಯಾಡ್ ಇರುವ ಗ್ರೌಂಡ್. ಯಾರೇ ಹೆಲಿಕ್ಯಾಪ್ಟರಲ್ಲಿ ಬಂದರೂ ಇಲ್ಲಿ ಬರಲೇಬೇಕು. ಇನ್ನೊಂದು ಪೋಲಿಸ್ ಗ್ರೌಂಡ್. ಪೋಲಿಸ್ ಇಲಾಖೆಯ ಕಾರ್ಯಕ್ರಮಗಳನ್ನು ಹೊರತುಪಡಿಸಿ ಸೇನಾ ರ್ಯಾಲಿಗಳು, ಸಾಹಿತ್ಯ ಸಮ್ಮೇಳನ ಆದಾಗ ಊಟದ ಪೆಂಡಾಲ್ ವ್ಯವಸ್ಥೆ ಆಗುವುದು ಇಲ್ಲಿಯೇ… ಅಷ್ಟು ವಿಸ್ತಾರವಾದ ಗ್ರೌಂಡ್. ಕಡೆಯದ್ದು ಸಾಯಿ ಹಾಕಿ ಗ್ರೌಂಡ್.

ಹೆಲಿಪ್ಯಾಡ್ ಇರುವುದು ನಾನೋದಿದ ಫೀಲ್ಡ್ ಮಾರ್ಷಲ್ ಕಾರಿಯಪ್ಪ (‘ಕಾರಿಯಪ್ಪ’ ಎನ್ನುವುದನ್ನು ‘ಕಾರ್ಯಪ್ಪ’ ಎಂದು ಬರೆಯುತ್ತಾರೆ ಆದರೆ ಅದು ತಪ್ಪು ‘ಕಾರಿಯಪ್ಪ’ ಪದವೆ ಸರಿಯಾದ ಪ್ರಯೋಗ) ಕಾಲೇಜಿನ ಗ್ರೌಂಡಿನಲ್ಲಿ. ನಾನಿನ್ನೂ ಶಾಲೆಗೆ ಸೇರಿರಿಲ್ಲ. ಆಗಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಮಡಿಕೇರಿಗೆ ಬಂದಿದ್ದರು. ಅವರನ್ನು ನೋಡಲು ಎಲ್ಲರೂ ಬೇಗ ಬೇಗ ಹೋಗಿದ್ದರು. ತಡವಾಗಿ ನಮ್ಮಮ್ಮನೂ ನನ್ನ ತಮ್ಮ ರಘುನನ್ನು ಎತ್ತಿಕೊಂಡು ನನ್ನನ್ನು ಕೈಯಲ್ಲಿ ಹಿಡಿದುಕೊಂಡು ಪಕ್ಕದ ಮನೆಯವರೊಂದಿಗೆ ಇದೇ ಕಾಲೇಜ್ ಘಾಟ್ ರಸ್ತೆಯ ಮೇಲ್ಭಾಗದಲ್ಲಿ ಹೋಗುತ್ತಿದ್ದ ನೆನಪು. ಹಾಗೆ ಹೋಗುತ್ತಿರುವಾಗಲೇ ತುಂಬಾ ಪೈಲಟ್ ವೆಹಿಕಲ್ಸ್ ನಡುವಿನಲ್ಲಿ ಬಿಗಿ ಭದ್ರತೆಯಲ್ಲಿ ಕಪ್ಪು ಕಾರಿನ ಮುಂಬದಿಯಲ್ಲಿ ಕುಳಿತು, ಕಣ್ಣುಗಳನ್ನರಳಿಸಿ, ಕಪ್ಪುಪಟ್ಟಿ ವಾಚ್ ಧರಿಸಿದ ಕೈಯಿಂದ, ನಮಸ್ಕಾರ ಮಾಡಿ, ಟಾಟಾ ಮಾಡಿದ ಮಂದಹಾಸ ತುಂಬಿದ, ಚೂಪು ಮೂಗಿನ ಮುಖದ ನೆನಪು ಇಂದಿಗೂ ಇದೆ. ಅದುವೆ ಇಂದಿರಾಗಾಂಧಿಯವರ ಮುಖ. ನಾವು ಪುನಃ ಕಾಲೇಜು ಗ್ರೌಂಡಿಗೆ ಹೋಗಲೇ ಇಲ್ಲ. ಇಲ್ಲಿಯೇ ಟಾಟಾ ಮಾಡಿದೆವೆಲ್ಲ ಎಂದೂ ಅಂತೂ ಇಂದಿರಾಗಾಂಧಿಯವರನ್ನು ನೋಡಿದ ಭಾರೀ ಖುಷಿಯಲ್ಲಿ ಮನೆಗೆ ಬಂದೆವು. ಮನೆಗೆ ಬಂದ ನಂತರವೂ ಪಕ್ಕದ ಮನೆಯವರು, ನಮ್ಮಮ್ಮ ಎಲ್ಲರೂ ಅದೇ ಘಟನೆಯನ್ನು ಆಗಾಗ ನೆನಪಿಸಿಕೊಳ್ಳುತ್ತಿದ್ದರು. ಹಾಗಾಗಿ ಮಂದವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಕಂಡ ಚೂಪು ಮೂಗಿನ ಇಂದಿರಾಗಾಂಧಿಯವರ ಮುಖ ಇನ್ನೂ ನೆನಪಲ್ಲಿದೆ.

ನಂತರದ ವರ್ಷಗಳಲ್ಲಿ ಪ್ರಧಾನಮಂತ್ರಿಗಳಾಗಿ ಶ್ರೀಯುತ ರಾಜೀವ್ ಗಾಂಧಿಯವರು ನಮ್ಮ ಮನೆಯ ಮುಂದಿನ ಸಾಯಿಗ್ರೌಂಡಿಗೆ ಬಂದಿದ್ದರು. ಅವರು ಬರುತ್ತಾರೆಂದೆ ಉರಿಬಿಸಿಲಲ್ಲೆ ಟೆಲಿಫೋನ್ ಕಂಬಗಳಿಗೆಲ್ಲ ಸಿಲ್ವರ್ ಪೇಯಿಂಟ್ ಮಾಡಿಸಿದ್ದು, ತರಾತುರಿಯಲ್ಲಿ ರಸ್ತೆಗೆ ಡಾಂಬರು ಹಾಕಿದ್ದು, ಬೀದಿ ದಿಪಗಳನ್ನು ಬದಲಿಸಿದ್ದು, ತೋರಣ ಕಟ್ಟಿಸಿದ್ದನ್ನು, ಆ ದಿನ ನೆರೆದ ಅಪಾರ ಜನರನ್ನೂ ನೋಡಿದೆವು. ನಾಲ್ವರಿಗೆ ಮಾತ್ರ ನಿಲ್ಲಲು ಸಾಧ್ಯವಾಗುವ ಕಬ್ಬಿಣದ ತೊಟ್ಟಿಲಿನಾಕಾರದ ಎತ್ತರದ ವೇದಿಕೆಯನ್ನು ರಾಜೀವ್ ಗಾಂಧಿಯವರು ಭಾಷಣ ಮಾಡಲೆಂದೇ ನಿರ್ಮಾಣಮಾಡಿ ಅದಕ್ಕೆ ಸಿಲ್ವರ್ ಕಲರ್ ಹಾಕಿದ್ದನ್ನೆಲ್ಲಾ ನೋಡಿದೆವು. ಕಡೆಗೆ ರಾಜೀವ್ ಗಾಂಧಿಯವರನ್ನು ನೋಡಲಾಗಲೇ ಇಲ್ಲ.

ವರ್ಷಗಳ ನಂತರ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಒಮ್ಮೆ ಅಂದಿನ ಮುಖ್ಯ ಮಂತ್ರಿಗಳಾಗಿದ್ದ ಜೆ. ಹೆಚ್. ಪಟೇಲರು ಬರುತ್ತಾರೆ ಎಂಬ ವಿಷಯ ತಿಳಿದಿತ್ತು. ಆದರೆ ಸಮಯ ತಿಳಿದಿರಲಿಲ್ಲ. ನಮಗೆ ಮಧ್ಯಾಹ್ನದ ತರಗತಿ 1.30 ಕ್ಕೆ ಆರಂಭವಾಯಿತು. ನಮ್ಮ ಉಪನ್ಯಾಸಕರು ಹಾಜರಿ ಕರೆದು ಜನ್ನನ ಕಾವ್ಯದ ‘ನಿರ್ಮಲ ಚಿತ್ತದಿಂ ಪಾಲಿಸು ಧರೆಯಂ’ ಭಾಗದ ಎರಡು ಪದ್ಯಗಳನ್ನು ಮಾಡಿರಲಿಲ್ಲ ಹೆಲಿಕ್ಯಾಪ್ಟರಿನ ಸದ್ದಾಯಿತು. ಆ ಸದ್ದು ಕೇಳಿದ ಕೂಡಲೆ ಕ್ಲಾಸಿನಲ್ಲಿದ್ದವರಿಗೆ ಹೊಟ್ಟೆ ತೊಳೆಸಿದಂಥ ಅನುಭವವಾಗುತ್ತಿತ್ತೇನೋ? ಗೊತ್ತಿಲ್ಲ! ಕುಳಿತುಕೊಳ್ಳಲು ಬಹಳ ಕಷ್ಟಪಡುತ್ತಿದ್ದರು. ಹೇಗ್ ಹೇಗೋ ಆಡುತ್ತಿದ್ದರು. ಹಾರುವವರಂತೆ, ಎದ್ದೆದ್ದು ಕೂರುವವರಂತೆ ಕಾಣುತ್ತಿದ್ದರು. ಸಂಕಟ ತಡೆಯಲಾಗದೆ ಯಾರೋ ಒಬ್ಬರು ಎದ್ದು ಯಾರ ಮರ್ಜಿಗೂ ಕಾಯದೆ ಬಾಗಿಲು ತೆಗೆದು ಓಡಿದರು. ಅದು ಎಂಥ ಫೋರ್ಸ್ ಗೊತ್ತಿಲ್ಲ? ಬೀಳುತ್ತಿದ್ದ ವೇಲ್‌ಗಳನ್ನೂ ಎಸೆದುಕೊಳ್ಳುತ್ತಲೇ ಹುಡುಗಿಯರೂ, ತಲೆ ನೀವಿಕೊಳ್ಳುತ್ತಾ ಹುಡುಗರು ಎಲ್ಲರೂ ಏಕಾಏಕಿ ಓಡಿದರು. ಕ್ಷಣಮಾತ್ರದಲ್ಲಿ ತುಂಬಿದ ಕ್ಲಾಸ್ ಖಾಲಿಯಾಯಿತು.

ಎಲ್ಲರಿಗೂ ಜೆ.ಹೆಚ್. ಪಟೇಲ್ ಅವರನ್ನು ನೋಡಬೇಕಿತ್ತೋ? ಹೆಲಿಕ್ಯಾಪ್ಟರ್ ನೋಡಬೇಕಿತ್ತೋ? ಗೊತ್ತಿಲ್ಲ! ಒಟ್ಟು ಎಲ್ಲರೂ ಗ್ರೌಂಡ್ ಸೇರಿದ್ದರು. ಕ್ಲಾಸಿನಲ್ಲಿ ಉಪನ್ಯಾಸಕರ ಸಹಿತ ಮೂವರು ಹುಡುಗಿಯರು ಮಾತ್ರ ಉಳಿದೆವು. ಆ ಮೂವರಲ್ಲಿ ನಾನೂ ಒಬ್ಬಳು. ಎಲ್ಲರೂ ಹೋಗುತ್ತಿದ್ದಂತೆ ಉಪನ್ಯಾಸಕರಿಗೆ ಸಹಜವಾಗಿ ಕೋಪ ಬಂದು “ಯಾಕೆ ಹೀಗೆ? ಚಿಕ್ಕದಿಂದ ನೀವ್ ಇದನ್ನೆ ಕಲಿತದ್ದು. ಅಪ್ಪ ಅಮ್ಮ ಇದನ್ನೆ ಕಲಿಸಿರೋದ? ಟೀಚರ್ಸ್ ಇದನ್ನೆ ಹೇಳಿಕೊಟ್ಟಿರೋದ?” ಎಂದು ಬಯ್ಯಲು ಶುರು ಮಾಡಿದರು. ನಾವೇನೂ ಮಾತನಾಡಲಿಲ್ಲ. ಹೊರಹೊರಡಲು ಹಾಜರಿ ಪುಸ್ತಕವನ್ನು ಸರಕ್ಕನೆ ತೆಗೆದುಕೊಂಡಾಗಲೂ “ಅವರ ಪರವಾಗಿ ಸಾರಿ! ನಮಗಾದ್ರೂ ಕ್ಲಾಸ್ ಮಾಡಿ” ಎನ್ನುವ ಧೈರ್ಯವೂ ಬರಲಿಲ್ಲ. ಸಿಟ್ಟಿನಿಂದ ಅವರು ಕನ್ನಡ ಡಿಪಾರ್ಟ್‌ಮೆಂಟಿನತ್ತ ಹೆಜ್ಜೆ ಹಾಕಿದರು. ಅವರು ಹೋದ ಮೇಲೆ ನಾವು ಮೂವರೂ ಸಿಟ್ಟಿನಿಂದ ಹೊರ ಹೋದ ಉಪನ್ಯಾಸಕರ ಮುಖ ಕಣ್ಮುಂದೆ ಇದ್ದರೂ ಕ್ಲಾಸ್ ಖಾಲಿಯಾದದ್ದಕ್ಕೆ, ಎಲ್ಲರೂ ಓಡುತ್ತಿದ್ದ ರೀತಿ ನೆನಪಿಸಿಕೊಂಡು ನಕ್ಕೆವು. ಬೆಲ್ ಆಗುವುದನ್ನೆ ಕಾಯ್ದು ನಾವು ಮನೆಗೆ ಹೋದೆವು. ಅವತ್ತಿನ ಘಟನೆ ಅಲ್ಲಿಗೆ ಮುಗಿಯಿತು… ಏನೂ ಅನ್ನಿಸಲಿಲ್ಲ.

ಆದರೆ ಇಂದಿಗೆ ಚಿಂತೆ ಮಾಡುವ ವಿಷಯವಾಗಿದೆ. ಉಪನ್ಯಾಸಕರೊಬ್ಬರು ತರಗತಿಯಲ್ಲಿದ್ದಾಗಲೆ ಹೀಗೆ ಹೇಳದೆ ಓಡುವುದು ಎಂದರೇನು? “ಸರ್ ಹೆಲಿಕ್ಯಾಪ್ಟರ್ ನೋಡಬೇಕು! ಸಿ. ಎಮ್ ನೋಡಬೇಕು! ಬಿಡಿ” ಎಂದಿದ್ದರೆ ಬಿಡುತ್ತಿದ್ದರೋ ಇಲ್ಲವೋ ಗೊತ್ತಿಲ್ಲ? ಆದರೆ ಒಬ್ಬರಾದರೂ ಕೇಳಬಹುದಿತ್ತು. ಅರ್ಹತೆ ಇಲ್ಲದೆ ಡಯಾಸ್ ಮುಂದೆ ಯಾರೂ ಬಂದು ನಿಲ್ಲುವುದಿಲ್ಲ. ಆ ಸ್ಥಾನಕ್ಕೆ ಅತ್ಯಂತ ಗೌರವವಿದೆ….. ನಮ್ಮ ಉತ್ಸಾಹಕ್ಕಿಂತ, ಕುತೂಹಲಕ್ಕಿಂತ ಒಬ್ಬ ವ್ಯಕ್ತಿಗೆ ಮಾಡಿದ ಅಪಮಾನ ನಾಚಿಕೆ ತರಿಸುವಂಥದ್ದು. ಕಡೆಗಾದರರೂ ಓಡಿಹೋದವರು ಕ್ಷಮೆ ಕೇಳಬಹುದಿತ್ತು. ಆದರೆ ಯಾರೂ ಕೇಳಲಿಲ್ಲ. ಮುಂದಿನ ತರಗತಿಗಳಲ್ಲಿ ನಮಗೆ ಆ ಉಪನ್ಯಾಸಕರು ಜನ್ನನ ಕಾವ್ಯವನ್ನು ಬಹಳ ಗಂಭಿರವಾಗಿಯೇ ಪಾಠ ಮಾಡಿ ಮುಗಿಸಿದರು. ನಮ್ಮ ತಪ್ಪಿಗೆ ಹೆತ್ತು -ಹೊತ್ತು ಸಾಕಿದ ಅಪ್ಪ – ಅಮ್ಮ, ವಿದ್ಯೆ ಕಲಿಸಿದ ಟೀಚರ್ಸ್ ಮಧ್ಯೆ ಬಂದು ನಿಲ್ಲಬೇಕಾಯಿತು. ಹೀಗೆ… ಕೆಲವೊಮ್ಮೆ ನಮ್ಮ ಕಣ್ಮುಂದೆ ನಡೆಯುವ ಅಪಸವ್ಯಗಳು ನಮ್ಮನ್ನು ಅಸಹಾಯಕರನ್ನಾಗಿ ಮಾಡುತ್ತವೆ ಹೌದಲ್ವ! ನೀವೂ ಯೋಚಿಸಿ……!! ಕೊಡಗಿನ ವರ್ಷಕಾಲ ಸರಣಿಯ ಮುಂದಿನ ಬರೆಹದಲ್ಲಿ ಮತ್ತೊಂದು ವಿಷಯದೊಂದಿಗೆ ಬರುವೆ.

About The Author

ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ