Advertisement
ಸಂಡೇ ಬಜಾರ್.. “ಮಂಡೆ” ಬಜಾರ್..: ಎಚ್. ಗೋಪಾಲಕೃಷ್ಣ ಸರಣಿ

ಸಂಡೇ ಬಜಾರ್.. “ಮಂಡೆ” ಬಜಾರ್..: ಎಚ್. ಗೋಪಾಲಕೃಷ್ಣ ಸರಣಿ

ಮತ್ತೊಮ್ಮೆ ಆಗಲೇ ಅಪರೂಪ ಅನಿಸಿದ್ದ ಲೆಗ್ ಹಾರ್ಮೋನಿಯಂ ನೋಡಿದ್ದೆ. ಒಮ್ಮೆ ಅಲ್ಲೇ ಬುಲ್ ಬುಲ್ ತರಂಗ ಮಾರೋದನ್ನು ನೋಡಿ ಅದನ್ನ ಕೊಂಡು ತಂದೆ. ಅದನ್ನು ನುಡಿಸುವ ಬಗ್ಗೆ ಒಂದು ಕತ್ತೆ ಕಾಗದದಲ್ಲಿ ಪ್ರಿಂಟ್ ಮಾಡಿದ್ದ ಪುಸ್ತಕ ಬೇರೆ ಕೊಟ್ಟಿದ್ದ. ಅದನ್ನು ಸುಮಾರು ತಿಂಗಳು ನುಡಿಸಲು ಪ್ರಯತ್ನ ಪಟ್ಟೆ. ಹೇಗೆ ನುಡಿಸಿದರೂ ಒಂದೇ ಶಬ್ದ ಬರುತ್ತಿತ್ತು. ಸುಮಾರು ವರ್ಷ ಅಟ್ಟದ ಮೇಲೆ ಕೂತಿತ್ತು ಇದು. ಆಮೇಲೆ ಯಾರೋ ಗೆಳೆಯ ತೆಗೆದುಕೊಂಡು ಹೋದ, ಅವನು ಇನ್ಯಾರಿಗೋ ಕೊಟ್ಟ. ಹಾಗೇ ಅದು ಕಣ್ಮರೆ ಆಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನೇಳನೆಯ ಕಂತು ನಿಮ್ಮ ಓದಿಗೆ

ಹದಿನೈದನೇ ಸಂಚಿಕೆಯಲ್ಲಿ ನಿಮಗೆ ಪುಸ್ತಕದ ಅಂಗಡಿಗಳ ಬಗ್ಗೆ ಹೇಳಿದ್ದೆ. ಹೊಸ ಪುಸ್ತಕಗಳು ಮಾರಾಟ ಆಗುತ್ತಿದ್ದ ಬುಕ್ ಶಾಪ್ ನೆನೆದುಕೊಂಡೆ ಮತ್ತು ಹಾಗೇ ಹಳೇ ಪುಸ್ತಕದ ಅಂಗಡಿ ಸುತ್ತು ಹೊಡೆದೆವು. ಆಗಿನ ಪ್ರಕಾಶನ ಸಂಸ್ಥೆ ಬಗ್ಗೆ ನಾನು ಮರೆತ ಒಂದು ಸಂಗತಿ ನನ್ನ ಅಣ್ಣನ ಮಗಳು ಶಶಿ ನೆನಪಿಸಿದರು. ಅದು ನಿರಂಜನ ಅವರು ಮುಖ್ಯ ಸಂಪಾದಕರಾಗಿ ಹೊರತಂದ ಕಿರಿಯರಿಗಾಗಿ ವಿಶ್ವಕೋಶ ಸಂಪುಟ, “ಜ್ಞಾನಗಂಗೋತ್ರಿ”. ಎಂಟು, ಒಂಬತ್ತು ಭಾಗದ ಈ ವಿಶ್ವಕೋಶ ಕೊಳ್ಳಲು ಕೆನರಾ ಬ್ಯಾಂಕ್ ಸಾಲ ನೀಡಿತ್ತು. ಪುಸ್ತಕ ಕೊಳ್ಳಲು ಸಾಲ ನೀಡಿದ ಬ್ಯಾಂಕ್ ಇದೊಂದೇ ಇರಬೇಕು, ಇದೇ ಮೊದಲ ಹಾಗೂ ಕೊನೆಯ ಬ್ಯಾಂಕ್ ಇರಬಹುದು ಅಂದುಕೊಂಡಿದ್ದೇನೆ! ಒಂದೊಂದೂ ಐನೂರು ಆರುನೂರು ಪುಟಗಳ ಈ ಬೃಹತ್ ಯೋಜನೆಗೆ ಸರ್ಕಾರ ಸಾಲ ನೀಡಿತ್ತು ಮತ್ತು ಪ್ರತಿ ಸಂಪುಟ ಐವತ್ತು ರೂಪಾಯಿ ಇದ್ದ ನೆನಪು. ಒಂದೊಂದೂ ಸಂಪುಟ ರೆಡಿ ಆದ ಹಾಗೇ ಅದರ ಬಿಡುಗಡೆ, ಮಾರಾಟ ಆಗುತ್ತಿತ್ತು. ಪ್ರತಿ ಸಂಪುಟವು ಜ್ಞಾನದ ವಿಶೇಷ ಒಂದು ಭಾಗ ಒಳಗೊಂಡಿರುತ್ತಿತ್ತು. ಅದರಲ್ಲಿ ಮಾನವನ ವಿಕಾಸವು ಸಹ ಒಂದು ಭಾಗವಾಗಿ ಸೇರಿತ್ತು. ಛಾಯಾಚಿತ್ರಗಳು, ರೇಖಾಚಿತ್ರಗಳು, ಮಕ್ಕಳಿಗೂ ಅರ್ಥವಾಗುವ ಸರಳ ಬರವಣಿಗೆ ಈ ಗ್ರಂಥಗಳ ವಿಶೇಷ. ಈಗಲೂ ಆ ಪುಸ್ತಕ ಹಿಡಿದು ಕೂತರೆ ಎಷ್ಟೋ ಹೊಸ ವಿಷಯ ಅರಿತ ಹಾಗೆ ಅನಿಸುತ್ತದೆ. ವಿಶೇಷವಾಗಿ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಯೋಜನೆ ಇದು. ಇದು ನಮ್ಮ ಹಾಗೂ ಸುತ್ತಮುತ್ತಲಿನ ಮನೆಯಲ್ಲಿನ ಎಲ್ಲಾ ಮಕ್ಕಳಿಗೂ ಬಹಳ ನೆರವಾಯಿತು. ಮತ್ತೆ ಇದು ಮರುಮುದ್ರಣ ಕಾಣಲಿಲ್ಲ. ಅದೇ ರೀತಿ ಜನಪ್ರಿಯ ವಿಜ್ಞಾನ, ಅನುಪಮಾ ನಿರಂಜನ ಅವರ ದಿನಕ್ಕೊಂದು ಕತೆ, ಕೇಳು ಕಿಶೋರಿ, ಮಾಸಿಕಗಳಾದ ಚಂದಮಾಮ, ಬಾಲಮಿತ್ರ….. ಮೊದಲಾದ ಪುಸ್ತಕಗಳು. ಹಾಗೇ ಶಶಿ ನೆನಪು ಹೀಗೆ ಮುಂದುವರೆಯುತ್ತೆ..

ಮಕ್ಕಳಿಗೆ ಜನಪ್ರಿಯ ವಿಜ್ಞಾನ, ದಿನಕ್ಕೆ ಒಂದು ಕಥೆ, ವಿಶ್ವ ಕೋಶ ಸಂಪುಟ, ಬಾಲ ವಿಜ್ಞಾನ ,Phantom book, Digest – ಅಣ್ಣ ರಾಜು ಗೆ… ನಾವು ಆರೂಜನ (ರಮಾ, ಸುಬ್ಬು, ರವಿ, ಶಶಿ, ರಘು, ಮಧು) ಪುಸ್ತಕ ಓದುವುದನ್ನು ಕಲಿತದ್ದೇ ನಿನ್ನಿಂದ…. (ಇದು ಶಶಿ ಅವರ ಅನಿಸಿಕೆ) ನಂತರ ಸೇರಿದ್ದು ಡಿವಿಜಿ ಸಮಗ್ರ, ಸಂಸ್ಕೃತಿ ಇಲಾಖೆ ಪ್ರಕಟ.

ಸಪ್ನಾ, ಐ ಬೀ ಹೇಚ್, ನವಕರ್ನಾಟಕ ಬಗ್ಗೆ ಹೇಳಿದ್ದೆ. ನವಕರ್ನಾಟಕ ಸಂಸ್ಥೆಗೆ ಮತ್ತೂ ಒಂದು ಕೋಡು ಮೂಡಿದೆ. ಆಗಸ್ಟ್ ೯ರ ಸುದ್ದಿ ಇದು.. ಭಾರತೀಯ ಪ್ರಕಾಶಕರ ಒಕ್ಕೂಟವು ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ನೀಡುತ್ತಿರುವ ಪ್ರತಿಷ್ಟಿತ ರಾಷ್ಟ್ರೀಯ ಪ್ರಶಸ್ತಿಗೆ ‘ನವಕರ್ನಾಟಕ ಪ್ರಕಾಶನ’ ಆಯ್ಕೆಯಾಗಿದೆ. ‘ಪುಸ್ತಕಗಳ ಮೂಲಕ ಮಾನವ ಲೋಕದ ಸೇವೆ’ ಎನ್ನುವ ಧ್ಯೇಯದೊಂದಿಗೆ ಆರಂಭವಾದ ನವಕರ್ನಾಟಕ ಸಂಸ್ಥೆ ಇಂದು ನಾಲ್ಕು ಕೇಂದ್ರಗಳಲ್ಲಿ ಆರು ಮಾರಾಟ ಮಳಿಗೆಗಳನ್ನು ಹೊಂದಿದ್ದು 6500 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ.

ದೂರದ ಆಸ್ಟ್ರೇಲಿಯಾದಿಂದ ಡಾ. ವಿನತೆ ಶರ್ಮಾ ಅವರು ಅಂದಿನ ಪುಸ್ತಕದ ಅಂಗಡಿಗಳನ್ನ ನೆನೆಸಿಕೊಂಡರೆ ಗೆಳೆಯ ಪ್ರಸನ್ನ ಅವರು ನನ್ನ ಜತೆ ಸುತ್ತು ಹಾಕಿದ ಅಂಗಡಿಗಳ ನೆನಪು ಮಾಡಿಕೊಂಡರು. ಸುಮಾರು ಪುಸ್ತಕ ಪ್ರಸನ್ನ ನನಗೆ ಕೊಡುತ್ತಿದ್ದ, ಇದು ಚೆನ್ನಾಗಿದೆ ಅಂತ ಹೇಳಿ. Parkinsan laws, Art of Advocacy ಮುಂತಾದ ಪುಸ್ತಕ ಇವನು ಕೊಟ್ಟಿದ್ದು. Dostoveski ದಾಸ್ಟೋ ವೆಸ್ಕಿ ಮೊದಲು ಓದಲು(Brothers Karamazov,The Idiot)ಪ್ರೇರೇಪಣೆ ಮತ್ತು ಪುಸ್ತಕ ಕೊಟ್ಟಿದ್ದು ಇವನು. ಪ್ರಸನ್ನ ಮನೆಯಲ್ಲೂ ಒಂದು ದೊಡ್ಡ ಲೈಬ್ರರಿ ಇಟ್ಟಿದ್ದಾನೆ. ಇವನ ಹಾಗೇ ಈಗಲೂ ತಾನು ಓದುವ ಎಲ್ಲಾ ಪುಸ್ತಕಗಳನ್ನು ನಾನೂ ಓದಲಿ ಅಂತ. ನಟರಾಜ ಕೊಡುತ್ತಾನೆ, ಇವನ ಮನೇಲಿ ಸಹ ದೊಡ್ಡ ಲೈಬ್ರರಿ ಇದೆ. ಇಂದು ನಮ್ಮೊಂದಿಗೆ ಇಲ್ಲದ ನಾಗರಾಜ್ ಸಹ ದೊಡ್ಡ ಗ್ರಂಥಾಲಯ ಇಟ್ಟಿದ್ದ. ಗೆಳೆತನದ ಬೆಲೆ ಗೊತ್ತಾಗೋದು ಹೀಗೆ, ನಮಗೆ ಇಷ್ಟ ಆಗಿದ್ದು ಇನ್ನೊಬ್ಬರಿಗೆ ಸಹ ಇಷ್ಟವಾಗಲೀ ಎನ್ನುವ ಚಿಂತನೆಯಿಂದ. ಗೆಳೆಯ ಡಾ. ಪ್ರಕಾಶ್ ಅಂದಿನ ಸರ್ಕ್ಯುಲೇಟಿಂಗ್ ಲೈಬ್ರರಿ ನೆನೆದರೆ, ಚಂದ್ರಿಕಾ ಎಂ ಜಿ ರಸ್ತೆಯ ಗಂಗಾರಾಂ ಮತ್ತು ಎಲ್ ಬೀ ಪಬ್ಲಿಷರ್ಸ್ ನೆನೆದರು.

ನನ್ನ ಹಿರಿಯ ಮಿತ್ರ ಶ್ರೀ ಆನಂದ ರಾಮರಾವ್ ಬರೆಯುತ್ತಾರೆ…

….. ಬೆಂಗಳೂರು ಕಥೆಗಳು ಹದಿನೈದನೆಯ ಕಂತಿನಲ್ಲಿ ತಾವು ಬರೆದಿರುವ ಪುಸ್ತಕದ ಅಂಗಡಿಗಳ ಬಗ್ಗೆ ಓದುತ್ತಿದ್ದಾಗ ನನ್ನಲ್ಲಿಯೂ ಹಿಂದಿನ ನೆನಪುಗಳು ಹಾದು ಹೋದವು. ನನ್ನ ಸಂಪರ್ಕ ಕೇವಲ ನಗರ ಪ್ರದೇಶದ ಅಂಗಡಿಗಳಿಗೆ ಮಾತ್ರ ಸೀಮಿತವಾಗಿತ್ತು. ಮೆಜೆಸ್ಟಿಕ್ ಟಾಕೀಸ್ ಪಕ್ಕದಲ್ಲಿ ಒಂದು ಪೇಪರ್ ಅಂಗಡಿ ಇತ್ತು. ಅಲ್ಲಿ ಕನ್ನಡದ ಎಲ್ಲ ಪತ್ರಿಕೆಗಳೂ ಅಲ್ಲದೆ ಎಲ್ಲ ಭಾರತೀಯ ಪ್ರಮುಖ ಭಾಷೆಯ ಪತ್ರಿಕೆಗಳೂ ಸಿಗುತ್ತಿದ್ದವು. ಅಲ್ಲಿಂದ ಹಾಗೆಯೇ ಬಳೇಪೇಟೆಯ ಕಡೆಗೆ ಬಂದರೆ ಜಂಗಮ ಮೇಸ್ತ್ರಿಗಲ್ಲಿಯಲ್ಲಿದ್ದ ಸಾಹಿತ್ಯ ಭಂಡಾರ ಪ್ರಕಾಶನ ಹಾಗೂ ಪುಸ್ತಕ ಮಾರಾಟ ಮಳಿಗೆ. ಭೈರಪ್ಪನವರ ಎಲ್ಲ ಪುಸ್ತಕಗಳೂ ಈ ಪ್ರಕಾಶನದಿಂದಲೇ ಪ್ರಕಟವಾಗುತ್ತಿದ್ದವು, ಈಗಲೂ ಸಹ ಆಗುತ್ತಿವೆ. ಕಾರಣ – ಭೈರಪ್ಪನವರೇ ಭಿತ್ತಿ ಪುಸ್ತಕ (ಅವರ ಆತ್ಮವೃತ್ತಾಂತ) ದಲ್ಲಿ ತಿಳಿಸಿರುವಂತೆ ಅವರಿಗೂ ಮತ್ತು ಸಾಹಿತ್ಯ ಭಂಡಾರದ ಗೋವಿಂದ ರಾಯರಿಗೂ ಇದ್ದ ಅವಿನಾಭಾವ ಸಂಬಂಧ. ಬಳೇಪೇಟೆಯ ಮುಖ್ಯ ರಸ್ತೆಯಲ್ಲಿದ್ದ ಮತ್ತೊಬ್ಬ ಪ್ರಕಾಶಕರು ಟಿ. ಎನ್ ನಾರಾಯಣ ಅಯ್ಯಂಗಾರ್. ಪತ್ತೇದಾರಿ ಕಾದಂಬರಿಗಳಿಂದಲೇ ಪ್ರಸಿದ್ಧರಾಗಿದ್ದ ಎನ್. ನರಸಿಂಹಯ್ಯನವರ ಎಲ್ಲಾ ಕಾದಂಬರಿಗಳ ಪ್ರಕಾಶಕರು. ಪೈಜಾಮ, ಷರ್ಟ್ ಧರಿಸಿಕೊಂಡು ಈ ಅಂಗಡಿಯಲ್ಲಿ ಇರುತ್ತಿದ್ದ ನರಸಿಂಹಯ್ಯನವರನ್ನು ಹಲವಾರು ಬಾರಿ ನೋಡಿದ್ದೆ. ಈ ಅಂಗಡಿಯ ಪಕ್ಕದಲ್ಲಿಯೇ ಮಲಬಾರ್ ಲಾಡ್ಜ್ ಇತ್ತು. ಮಸಾಲೆ ದೋಸೆ ಹಾಗೂ ಉದ್ದನೆಯ ಬಾಳೆಕಾಯಿ ಬಜ್ಜಿಗೆ ಈ ಹೋಟೆಲ್ ಬಹಳ ಹೆಸರುವಾಸಿಯಾಗಿತ್ತು. ಹಾಗೆ ಮುಂದುವರೆದರೆ ಬಳೇಪೇಟೆಯ ಸರ್ಕಲ್‌ನಲ್ಲಿ ಮಹಡಿಯ ಮೇಲೆ ಗೀತಾ ಏಜನ್ಸಿ ಇತ್ತು. ರಾಮಚಂದ್ರಯ್ಯನವರು ಅದರ ಮಾಲೀಕರು. ಸಾಮಾನ್ಯವಾಗಿ ಎಲ್ಲ ಕನ್ನಡದ ಪುಸ್ತಕಗಳೂ ಚಿಲ್ಲರೆಯಾಗಿ ಹಾಗೂ ಸಗಟಾಗಿ ಸಿಗುತ್ತಿದ್ದವು. ಅವರು ಪುಸ್ತಕ ಪ್ರಕಾಶಕರೂ ಆಗಿದ್ದರು. 1965-66 ರ ಸಮಯದಲ್ಲಿ ಕನ್ನಡ ಸಾಹಿತ್ಯ ಕೂಟಕ್ಕೆ ಅಲ್ಲಿಂದ ಪುಸ್ತಕಗಳನ್ನು ತಂದಿದ್ದು ಇನ್ನೂ ನೆನಪಿನಲ್ಲಿದೆ. ಅರಳೇಪೇಟೆಯಲ್ಲಿ ಹೇಮಂತ ಸಾಹಿತ್ಯ ಪ್ರಕಾಶನ ಇತ್ತು. ಅದರ ಮಾಲೀಕರು ವೆಂಕಟೇಶ್. ಈ ಸಂಸ್ಥೆಯ ಮೂಲಕ ಹಲವಾರು ಮೌಲ್ಯಯುತ ಪುಸ್ತಕಗಳು ಪ್ರಕಟವಾಗಿವೆ. ವೆಂಕಟೇಶ್‌ರವರು ಸಹ ನಾನು ಓದಿದ ಕೋಟೆ ಹೈಸ್ಕೂಲ್‌ನಲ್ಲಿಯೇ ನನ್ನ ಸಮಕಾಲೀನರಾಗಿ ಓದಿದವರು. ಆದರೆ ಅವರು ತೆಲುಗು ಮಾಧ್ಯಮದಲ್ಲಿ ಓದಿದವರಾದ್ದರಿಂದ ನನಗೂ ಅವರಿಗೂ ಸಂಪರ್ಕವಿರಲಿಲ್ಲ. ಈ ವಿಷಯವನ್ನು ಒಮ್ಮೆ ನಾನು ಸುಂದರ ಪ್ರಕಾಶನದ ಗೌರಿಸುಂದರ್‌ರವರೊಂದಿಗೆ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ವೆಂಕಟೇಶ್‌ವರೇ ತಿಳಿಸಿದರು. ಅದೇ ಕಾಟನ್ ಪೇಟೆಯ ತಲಕಾಡು ಸುಬ್ಬರಾವ್ ಗಲ್ಲಿಯಲ್ಲಿ ಒಂದು ಪ್ರಕಾಶನ ಸಂಸ್ಥೆ ಇತ್ತು. ಇಂದು ಅದರ ಹೆಸರು ನೆನಪಿಲ್ಲ. ಬಹುಶಃ ಪ್ರಕಾಶ ಸಾಹಿತ್ಯ ಎಂದಿರಬೇಕು. ಚಿಕ್ಕಪೇಟೆಯ ವಿಜಯಲಕ್ಷ್ಮಿ ಟಾಕೀಸ್‌ನ ಎದುರಿಗೆ ಹೆಚ್. ಎನ್. ರಾವ್ ಎಂಬ ಪ್ರಕಾಶನ ಸಂಸ್ಥೆ ಇತ್ತು. ಅವೆನ್ಯೂ ರಸ್ತೆಯಲ್ಲಿದ್ದ ರಂಗನಾಥ ಬುಕ್ ಸ್ಟಾಲ್ ಹಳೆಯ ಪುಸ್ತಕಗಳ ಮಾರಾಟಕ್ಕೆ ಪ್ರಸಿದ್ಧವಾಗಿತ್ತು. ಅದೇ ರಸ್ತೆಯ ಮತ್ತೊಂದು ಸುಭಾಷ್ ಸ್ಟೋರ್. ಪಠ್ಯ ಪುಸ್ತಕಗಳ ಪ್ರಕಾಶಕರಾಗಿದ್ದರೂ ಬೇರೆ ಸಾಹಿತ್ಯ ಪುಸ್ತಕಗಳನ್ನು ಸಹ ಪ್ರಕಟಿಸುತ್ತಿದ್ದರು. ಅದರ ಪಕ್ಕದಲ್ಲಿ ಸ್ಟ್ಯಾಂಡರ್ಡ್ ಬುಕ್ ಡಿಪೋ. ಕಮಲನಾಥ್ ಇದರ ಮಾಲೀಕರು. ಪಠ್ಯ ಪುಸ್ತಕಗಳ ಜೊತೆ ಜೊತೆಗೆ ಸಾಹಿತ್ಯ ಕೃತಿಗಳನ್ನು ಸಹ ಪ್ರಕಟಿಸುತ್ತಿದ್ದರು. ಇನ್ನು ಸಪ್ನ ಬುಕ್ ಹೌಸ್. ನವಕರ್ನಾಟಕ ಐ ಬಿ ಹೆಚ್ ಸಂಸ್ಥೆಗಳು ಕೆಲವು ಪ್ರಸಿದ್ಧ ಪ್ರಕಾಶನ ಸಂಸ್ಥೆ ಗಳು. ಮತ್ತೊಂದು ಪ್ರಕಾಶನ ವಾಹಿನೀ ಪ್ರಕಾಶನದ ಹೆಸರನ್ನು ಹೇಳಲೇಬೇಕು. ಕನ್ನಡದ ಶ್ರೇಷ್ಠ ಸಾಹಿತ್ಯವನ್ನು ಅತ್ಯಂತ ಕಡಿಮೆ ಬೆಲೆಗೆ ಓದುಗರಿಗೆ ನೀಡಿ ಓದುವ ಅಭಿರುಚಿಯನ್ನು ಬೆಳೆಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲಬೇಕು. ಕೇವಲ ಒಂದೂವರೆ ರೂಪಾಯಿಗಳಿಗೆ ಪ್ರಮುಖ ಲೇಖಕರು ಬರೆದ ಕಾದಂಬರಿಗಳನ್ನು ನೀಡಿದರು. ಸುಪ್ರಸಿದ್ಧ ಕಾದಂಬರಿಕಾರರಾದ ಅನಕೃ (ಗೃಹ ಲಕ್ಷ್ಮಿ. ರುಕ್ಮಿಣಿ) ತರಾಸು. ನಿರಂಜನ, ಕೃಷ್ಣ ಮೂರ್ತಿ ಪುರಾಣಿಕ ಮುಂತಾದವರು ಬರೆದ ಕೃತಿಗಳನ್ನು ಪ್ರಕಟಿಸಿದರು. ಇಷ್ಟೇ ಅಲ್ಲದೆ ಹಲವಾರು ಸರ್ಕುಲೇಟಿಂಗ್ ಲೈಬ್ರರಿ ಗಳಿದ್ದವು. ದಿನಕ್ಕೆ ಅಥವ ವಾರಕ್ಕೆ ಇಂತಿಷ್ಟು ಎಂದು ನೀಡಿ ಪುಸ್ತಕಗಳನ್ನು ಎರವಲು ತಂದು ಓದಬಹುದಾಗಿತ್ತು. ಇಂತಹ ಲೈಬ್ರರಿಗಳಲ್ಲಿ ಒಂದನ್ನು ಹೆಸರಿಸಬಹುದಾದರೆ ವಿಜಯ ಲೈಬ್ರರಿ. ಚಿಕ್ಕ ಪೇಟೆಯ ನಮ್ಮ ಸಂಬಂಧಿಕರ ಮನೆಯಲ್ಲಿ ಇತ್ತು. ಇದನ್ನು ನಡೆಸುತ್ತಿದ್ದವರು. ಕೆ.ಟಿ. ಚಂದ್ರಶೇಖರ್ ಎಂಬ ಅಪ್ಪಟ ಕನ್ನಡಾಭಿಮಾನಿ. ಸಾಹಿತ್ಯಾಭಿಮಾನಿ. ಐಟಿಐಯಲ್ಲಿ ಉದ್ಯೋಗದಲ್ಲಿ ಇದ್ದ ಅವರು ಅಲ್ಲಿ ಕನ್ನಡ ವಾತಾವರಣವನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಅನಕೃರವರ ಅಪ್ಪಟ ಅಭಿಮಾನಿ. ಕನ್ನಡದ ಬರಹ ತತ್ರಾಂಶವನ್ನು ರೂಪಿಸಿದ ಶೇಷಾದ್ರಿ ವಾಸುರವರು ಇವರ ಸುಪುತ್ರ. ನನಗೆ ತುಂಬಾ ಆಪ್ತರಾಗಿದ್ದರು. ಇಟ್ಟ ಹೆಜ್ಜೆ ಪಟ್ಟ ಶ್ರಮ ಪುಸ್ತಕ ಬರೆಯುವಾಗ ಸಾಕಷ್ಟು ಪೂರಕ ಮಾಹಿತಿ ನೀಡಿ ಸಹಕರಿಸಿದ್ದರು….

ಸಂಡೇ ಬಜಾರ್ ಕುರಿತು ಮುಂದೆ ತಿಳಿಸುವೆ ಅಂತ ಹಿಂದೆ ಹೇಳಿದ ನೆನಪು. ಈಗ ಅದರ ಬಗ್ಗೆ..

ಸಂಡೇ ಬಜಾರ್ ಆಗ ಬೆಂಗಳೂರು ನಗರದ (ಕಾಂಟ್ರಾ ಮೆಂಟೂ ಸೇರಿದ ಹಾಗೆ)ಅತಿ ದೊಡ್ಡ ಗುಜರಿ ಮತ್ತು ವಿಶೇಷ ಅಂದರೆ ಭಾನುವಾರ ಮಾತ್ರ ಇದು ಜೀವಂತ. ಕಾಂಟ್ರಾಮೆಂಟಿನ ಕಡೆ ಕೆಲವು ಏರಿಯಾಗಳು ವಾರ ಪೂರ್ತಿ ಗುಜರಿ ವ್ಯಾಪಾರಕ್ಕೆ ಎಂದೇ ಮೀಸಲು. ನಗರ ಭಾಗದಲ್ಲಿ ಸಹ ಕೆಲವು ಸ್ಥಳಗಳು ಗುಜರಿಗೆ ಎಂದೇ ಇದ್ದರೂ ಈ ಭಾನುವಾರದ ಗುಜರಿ ವಿಶೇಷ ಅನಿಸುತ್ತಾ ಇದ್ದದ್ದು ಅಲ್ಲಿನ ವೈವಿಧ್ಯಮಯ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದಿಂದ. ಉಪ್ಪಾರ ಪೇಟೆ ಪೊಲೀಸ್ ಸ್ಟೇಶನ್ ಎದುರಿನ ರಸ್ತೆಗೆ ಬಂದು ನೇರ ನಡೆಯಿರಿ. ಬಳೆ ಪೇಟೆ ಸರ್ಕಲ್ ದಾಟಿದರೆ ಸಾಕು ಸಂಡೇ ಬಜಾರ್ ಶುರು. ಏನು ಕೇಳುತ್ತಿರೋ ಅದೆಲ್ಲವೂ ಅಲ್ಲಿ. ಮುಂಜಾನೆ ಏಳಕ್ಕೆ ಈ ಬಜಾರ್ ಶುರು. ಅವೆನ್ಯೂ ರೋಡ್ ತುದಿವರೆಗೆ ಭಾನು ವಾರದ ಅಂಗಡಿಗಳು. ಬಳೆ ಪೇಟೆ ಸರ್ಕಲ್‌ನಿಂದ ಶುರುವಾಗಿ ತರಗು ಪೇಟೆ ಉದ್ದಕ್ಕೂ ಹರಡಿ ನಂತರ ಅವೆನ್ಯೂ ರಸ್ತೆಯ ಕೊಂಚ ಭಾಗ ಆವರಿಸುತ್ತಿತ್ತು ಈ ಬಜಾರ್. ನಿಮ್ಮ ಹಳೇ ರೆಕಾರ್ಡ್ ಪ್ಲೇಯರ್‌ನ ಯಾವುದೋ ಪಾರ್ಟ್ ಹೋಗಿದೆ ಅನ್ನಿ. ಅದು ಎಲ್ಲೂ ಯಾವ ಅಂಗಡಿಯಲ್ಲಿಯು ಸಿಗುತ್ತಾ ಇಲ್ಲ. ತಯಾರಿಕಾ ಕಂಪನಿಯು ಸಹ ಮುಚ್ಚಿದೆ. ಸಂಡೇ ಬಜಾರ್‌ನಲ್ಲಿ ಅದು ಸಿಕ್ಕೇ ಸಿಗುತ್ತೆ! ರೇಡಿಯೋಗಳ ಚಿಕ್ಕಪುಟ್ಟ ಪಾರ್ಟುಗಳು ಅಲ್ಲದೆ ಯಾವುದೋ ವಿಶೇಷವಾದ ಸ್ಕ್ರೂ ನಟ್ ಬೋಲ್ಟ್ ಈ ತೆರನಾದ ವಸ್ತುಗಳು ಇಲ್ಲಿ ಲಭ್ಯ. ಇವುಗಳದ್ದೆ ಕೆಲವು ಅಂಗಡಿ. ಪ್ರೆಶರ್ ಕುಕ್ಕರ್, ಅದರ ಬಿಡಿ ಭಾಗ, ಸ್ಟೋವುಗಳು.. ಹೀಗೆ ವೈವಿಧ್ಯಮಯ ವಸ್ತುಗಳು ಅಲ್ಲಿ ಕಾಣುತ್ತಿತ್ತು. ಒಂದು ಸಲ ಹಳೇ ಕಾಲದ ಸುಮಾರು ಹಿತ್ತಾಳೆಯ ಅಡಿಕೆ ಕತ್ತರಿ, ಸುಣ್ಣ ಕಡೆಯುವ ಕೋಲು, ಕಡಗೋಲು… ದಬರಿ ಕೊಳದಪ್ಪಳೆ ಕಾವಲಿ ಈ ರೀತಿಯ ವಸ್ತು ನೋಡಿದ್ದೆ ಅಲ್ಲಿ. ಬಾಣಂತಿಯರಿಗೆ ತಲೆ ಒಣಗಿಸಲು ಇದ್ದಲು ಒಲೆ ಇರುತ್ತೆ ನೋಡಿ ಅದೂ ಸಹ ಅಲ್ಲಿತ್ತು. ಇದ್ದಲು ಒಲೆ ಆ ವೇಳೆಗೆ obselete ಆಗಿತ್ತು. ಸ್ಟೀಲ್ ಪಾತ್ರೆಗಳು ಮತ್ತು ಅಡಿಗೆ ಸಾಮಾನು ಪಾತ್ರೆ ಪಡಗ ಇಲ್ಲಿ ಮಾರಾಟ ಆಗುತ್ತಿತ್ತು. ಸುಮಾರು ಐನೂರು ವರ್ಷ ಹಿಂದಿನ ಪಂಚಲೋಹದ ದೇವರುಗಳನ್ನು ಒಮ್ಮೆ ನೋಡಿದ್ದೆ. ಯಾರೋ ಒಬ್ಬ ಅದನ್ನು ಇಟ್ಟುಕೊಂಡು ಕೂತಿದ್ದ. Antique ಬೆಲೆ ಉಳ್ಳದ್ದು. ಹುಷಾರು ಪೊಲೀಸ್ ನೋಡಿದರೆ ಜೈಲಿಗೆ ಹಾಕ್ತಾರೆ, ಇದೆಲ್ಲಾ ಪುರಾತನ ಕಾಲದ್ದು… ಅಂತ ಅವನಿಗೆ ಹೇಳಿದೆ. ಅವನು ನಕ್ಕ ಬಿಡಿ ಸಾಮಿ ಕಾಸು ಕೊಟ್ಟರೆ ಬಿಡ್ತಾರೆ… ಅಂದ. ನಿನ್ನ ಹಣೆ ಬರಹ ಅಂದುಕೊಂಡೆ. ಮಾರನೇ ವಾರ ಅವನು ಕಾಣಿಸಲಿಲ್ಲ. ಹಳೇ ನಾಣ್ಯಗಳು, ರೂಪಾಯಿಗಳು ಇವೂ ಸಹ ಅಲ್ಲಿ ಮಾರಾಟಕ್ಕೆ ಇರೋದು. ನನ್ನ ಫ್ರೆಂಡ್ ಒಬ್ಬ ಹಳೇ ನಾಣ್ಯ ಸಂಗ್ರಹಿಸಿದ್ದವನಿಗೆ ಒಮ್ಮೆ ಇಲ್ಲಿ ಹಳೇದು ನಾಣ್ಯದ ವಿಷಯ ಹೇಳಿದೆ. ಅವರು ಟೋಪಿ ಹಾಕ್ತಾರೆ ಅಂದುಬಿಟ್ಟ. ನನಗೆ ನಾಣ್ಯ ಸಂಗ್ರಹಣೆ ಚಟ ಇರಲಿಲ್ಲ, ಹೌದಾ ಅಂತ ಸುಮ್ಮನಾದೆ. ಅಂದ ಹಾಗೆ ನನಗೆ ಅಂಟದೇ ಇರುವ ಹಲವು ಚಟಗಳಲ್ಲಿ ಈ ನಾಣ್ಯ ಸಂಗ್ರಹಣೆ ಸಹ ಒಂದು!

ಒಮ್ಮೆ ಅಂತೂ ಒಬ್ಬರು ನಾಟಕದ ವೇಷ ಧರಿಸಿ ನಾಟಕದ ಸಿನರಿ, ರಾಜ, ಮಂತ್ರಿಗಳ ವೇಷ ಭೂಷಣಗಳು, ಪೇಟ ರುಮಾಲು ನಿಲುವಂಗಿ ಮಾರಲು ಕೂತಿದ್ದರು. ರಾಜನ ವೇಷ ಕೊಳ್ಳುವ ಅದಮ್ಯ ಆಸೆ ಹುಟ್ಟಿತು. ಅದು ಹೇಗೋ ಅದನ್ನು ತಡೆದುಕೊಂಡೆ. ಯಾವುದೋ ನಾಟಕದ ಕಂಪನಿ ಮುಚ್ಚಿ ಅದರ ವಸ್ತುಗಳು ಇವರ ಮನೆಯಲ್ಲಿ ಐದಾರು ವರ್ಷದಿಂದ ಇದ್ದವಂತೆ. ಅದನ್ನು ಸಾಗಹಾಕಲು ಇಲ್ಲಿ ತಂದಿದ್ದರು!

ಒಮ್ಮೆ ಒಬ್ಬರು ಕೆಲವು ವಾದ್ಯಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಶ್ರುತಿ ಪೆಟ್ಟಿಗೆ, ಹಾರ್ಮೋನಿಯಂ, ಒಂದೆರೆಡು ವಾಲಗ, ತಂಬೂರಿ ಹಾಗೂ ತಬಲಾ ನೋಡಿದ ನೆನಪು. ಮತ್ತೊಮ್ಮೆ ಆಗಲೇ ಅಪರೂಪ ಅನಿಸಿದ್ದ ಲೆಗ್ ಹಾರ್ಮೋನಿಯಂ ನೋಡಿದ್ದೆ. ಒಮ್ಮೆ ಅಲ್ಲೇ ಬುಲ್ ಬುಲ್ ತರಂಗ ಮಾರೋದನ್ನು ನೋಡಿ ಅದನ್ನ ಕೊಂಡು ತಂದೆ. ಅದನ್ನು ನುಡಿಸುವ ಬಗ್ಗೆ ಒಂದು ಕತ್ತೆ ಕಾಗದದಲ್ಲಿ ಪ್ರಿಂಟ್ ಮಾಡಿದ್ದ ಪುಸ್ತಕ ಬೇರೆ ಕೊಟ್ಟಿದ್ದ. ಅದನ್ನು ಸುಮಾರು ತಿಂಗಳು ನುಡಿಸಲು ಪ್ರಯತ್ನ ಪಟ್ಟೆ. ಹೇಗೆ ನುಡಿಸಿದರೂ ಒಂದೇ ಶಬ್ದ ಬರುತ್ತಿತ್ತು. ಸುಮಾರು ವರ್ಷ ಅಟ್ಟದ ಮೇಲೆ ಕೂತಿತ್ತು ಇದು. ಆಮೇಲೆ ಯಾರೋ ಗೆಳೆಯ ತೆಗೆದುಕೊಂಡು ಹೋದ, ಅವನು ಇನ್ಯಾರಿಗೋ ಕೊಟ್ಟ. ಹಾಗೇ ಅದು ಕಣ್ಮರೆ ಆಯಿತು.

ಅಡಿಗೆ ಮನೆ ಸಲಕರಣೆ ಅಂದರೆ ಸೌಟು ಕಾವಲಿ ಒಲೆ ಚಮಚ ಮುಗಚೆ ಕಾಯಿ ಕಡಗೋಲು ಜರಡಿ ಮತ್ತಿತರ ಗೃಹ ಉಪಯೋಗಿ ವಸ್ತುಗಳ ರಾಶಿ. ಒಂದು ಕಡೆ ಒಬ್ಬ ತರಕಾರಿ ಹೆಚ್ಚುವ ಒಂದು ಮೆಷಿನ್ ಹಿಡಕೊಂಡು ನಿಮಿಷದಲ್ಲಿ ಕೇಜಿಕೇಜಿ ತರಕಾರಿ ಹೆಚ್ಚಿ ಗುಡ್ಡೆ ಹಾಕೋನು. ಅವನ ಪಕ್ಕವೇ ಮತ್ತೊಬ್ಬ ಒಂದು ಪುಟ್ಟ ಪ್ಲಾಸ್ಟಿಕ್ ಸಲಕರಣೆ ಮೂಲಕ ಚಕ್ಲಿ, ಶಾವಿಗೆ, ತೆಂಗೊಳಲು ಮಾಡುವ ಪ್ರಾತ್ಯಕ್ಷಿಕೆ ನಡೆಸೋನು! ಕಾರಿನ ಬಿಡಿ ಭಾಗಗಳು, ಸ್ಕೂಟರ್, ಮೋಟಾರ್ ಸೈಕಲ್, ಸೈಕಲ್ ಬಿಡಿಭಾಗಗಳು, ಹಳೇ ಟೈರು…. ಏನು ಬೇಕು ನಿಮಗೆ?

ಹಾಗೇ ಕ್ರಿಶ್ಚಿಯನ್ನರ ಮನೆ ಗೋಡೆ ಮೇಲೆ ಮೊಳೆ ಹೊಡೆದು ನೇತು ಹಾಕುವ ಬೈಬಲ್ ವಾಕ್ಯಗಳ ವಿವಿಧ ಆಕಾರದ, ಉದ್ದ ಅಗಲದ ಮರದ, ಹಿತ್ತಾಳೆ ಹಲಗೆಯ ವಸ್ತುಗಳೇ ಒಂದು ಕಡೆ. ಖುರಾನ್ ವಾಕ್ಯಗಳನ್ನು ಕೆತ್ತಿರುವ ಲೋಹದ ನೇಮ್ ಪ್ಲೇಟ್ ಒಂದು ಕಡೆ, ಅದೇ ಗುಂಪಿನಲ್ಲಿ ತಾಜ್ ಮಹಲ್, ಗೋಲ್ ಗುಂಬಜ್ ಫೋಟೋಗಳು, ಬೆಳ್ಳಿ ದೇವರನ್ನು ಒಳಗೆ ಇಟ್ಟು ಕಟ್ಟು ಹಾಕಿರುವ ಅಂಗಡಿ ಒಂದೆಡೆ… ಹಳೇ ಚಪ್ಪಲಿ ಅದರ ಪಕ್ಕವೇ ಹೊಸಾದು, ಚಪ್ಪಲಿ ಸ್ಟ್ರಾಪ್‌ಗಳು, ಅಟ್ಟೆ ಇತ್ಯಾದಿ. ಯಾವುದು ಬೇಕೋ ಆಯ್ಕೆ ನಿಮ್ಮದು. ಚುಮುಕು ಚುಮುಕೂ ಸೀರೆ ಮಾರಾಟ ಮುಸ್ಲಿಂ ಹೆಂಗಸರಿಗೆ ಅಂತ ಇದ್ದರೆ ಹಿಂದೂ ಗಳಿಗೆ ಬಿಂದಿ ಬಳೆಸರ…. ಏನು ಬೇಕು. ರೆಫ್ರಿಜರೇಟರ್ ಮತ್ತು ಅದರ ಸ್ಪೇರ್ ಪಾರ್ಟ್ಸ್, ಐರನ್ ಬಾಕ್ಸ್, ಏರ್ ಕೂಲರ್… ಹೀಗೆ ವೈವಿಧ್ಯಮಯ ವಸ್ತುಗಳು ಇಲ್ಲಿ ಸೇರುತ್ತಿತ್ತು.

ಒಂದು ಸಲ ಸುಮಾರು ಐನೂರು ಆರುನೂರರಷ್ಟು ಪಂಚಲೋಹದ ವಿಗ್ರಹ ಯಾರೋ ಇಟ್ಟಿದ್ದರು. ಎರಡು ಮೂರು ಇಂಚಿಂದ ಹಿಡಿದು ಎರಡು ಮೂರಡಿ ಎತ್ತರದ ವಿಗ್ರಹಗಳು ಇದ್ದವು. ಅದರ ಜತೆಗೆ ಆಂಜನೇಯನ ಗಂಟೆಗಳು, ಸಂಪುಟ, ಸಂಪುಟದಲ್ಲಿ ಸಾಲಿಗ್ರಾಮ ಇದ್ದ ಹಾಗಿತ್ತು, ಸಂಪುಟ ಅಂದರೆ ದೇವರ ವಿಗ್ರಹ ಇಡುವ ಪೆಟ್ಟಿಗೆ. ಸಾಮಾನ್ಯವಾಗಿ ಈ ಪೆಟ್ಟಿಗೆ ಜಿಂಕೆ ಚರ್ಮದ್ದು, ಇಲ್ಲ ಅಂದರೆ ಹಿತ್ತಾಳೆ ಅಥವಾ ಕಂಚಿನದು. ಇನ್ನೂ ಸ್ಟೀಲ್ ಪೆಟ್ಟಿಗೆ ಬಂದಿರಲಿಲ್ಲ!ಮಂಗಳಾರತಿ ತಟ್ಟೆ, ಅರ್ಘ್ಯ ಪಾತ್ರೆ… ಹೀಗೆ ಹಿಂದೂ ದೇವರ ಮನೆ ಅಲ್ಲಿತ್ತು. ಒಂದು ಗಂಟೆ ಕುತೂಹಲದಿಂದ ಅಲ್ಲಿರೋದನ್ನ ನೋಡ್ತಾ ನಿಂತಿದ್ದೆ. ಮಾರಾಟಕ್ಕೆ ಕೂತಿದ್ದೋನು ಆಗಾಗ ಸಂಡೇ ಬಜಾರ್‌ಗೆ ಭೇಟಿ ನೀಡುತ್ತಾ ಇದ್ದೆ ಅದರಿಂದ ಹೀಗೆ ನೋಡಿ ನೋಡಿ ಪರಿಚಯ. ಎಲ್ಲಿ ಸಿಕ್ತು ಇಷ್ಟೊಂದು ದೇವರು… ಅಂದೆ.

ಬಸವನಗುಡಿಯಲ್ಲಿ ಒಬ್ಬರು ಸಾಮಾನು ತಗೋತೀಯ ಅಂದ್ರು ಅಂತ ಅವರ ಮನೆಗೆ ಹೋದೆ. ದೊಡ್ಡ ಬಂಗಲೆ ಮನೆ ಅವ್ರು. ಎಲ್ರೂ ಅಮೆರಿಕ ಹೋಗ್ತಾರಂತೆ. ಇದೆಲ್ಲ ತಗೊಂಡು ಹೋಗು ಅಂದ್ರು…. ಅವರ ಮನೆಯಿಂದ ತಂದು ಚೆನ್ನಾಗಿ ಸೋಪ್ ವಾಟರು ಪೌಡರು ಹಾಕಿ ತೊಳೆದು ಮಾರಾಟಕ್ಕೆ ರೆಡಿ ಮಾಡಿದೆ ಅಂದ. ಮಾಮೂಲಾಗಿ ಊರು ಬಿಟ್ಟು ಹೊರದೇಶಕ್ಕೆ ಹೋಗುವವರು ದೇವರಿಗೆ ಸಂಬಂಧ ಪಟ್ಟ ಎಲ್ಲಾ ವಸ್ತುಗಳನ್ನೂ ಮಠಕ್ಕೆ, ದೇವಸ್ಥಾನಕ್ಕೆ ಕೊಡುತ್ತಾರೆ. ಪಾಪ ದೇವಸ್ಥಾನಕ್ಕೆ ಮಠಕ್ಕೆ ಕೊಡೋದಕ್ಕೆ ಸಮಯ ಸಿಕ್ಕಿಲ್ಲ, ಇವನಿಗೆ ಕೊಟ್ರೇನೋ ಅನ್ನಿಸಿತು. ಪಾಪ ಅದೆಷ್ಟು ವರ್ಷ ಪೂಜೆ ಮಾಡಿಸಿಕೊಂಡವೋ ಈ ವಿಗ್ರಹ ಗಳು ಈಗ ರಸ್ತೆಗೆ ಬಂದಿವೆ ಅಂತ ಮನಸ್ಸು ಒಂದು ಕ್ಷಣ ಪಿಚ್ ಅನ್ನಿಸಿಬಿಟ್ಟಿತು. ದೇವರಿಗೂ ಈ ಗತಿ ಅಂದರೆ ಪ್ರಪಂಚ ಕೆಟ್ಟು ಹೋಯಿತು ಅನಿಸಬೇಕೇ..!

ಒಮ್ಮೆ ಅದ್ಯಾರೋ ಕಿಟಕಿ, ಬಾಗಿಲನ್ನು ತಂದು ಇಟ್ಟಿದ್ದ ಮಾರಲು! ಕನ್ನಡಿಗಳು, ಬಾರ್ಬರ್ ಶಾಪಿಗೆ ಬೇಕಾದ ವಸ್ತುಗಳು… ಒಂದು ರೀತಿಯಲ್ಲಿ ಸಂಡೇ ಬಜಾರ್ ಅಂದರೆ ಸರ್ವ ವಸ್ತು ಭಂಡಾರ! ಪಾತ್ರೆ ಪಡಗ ಅದೂ ಸ್ಟೀಲ್, ತಾಮ್ರ, ಕಂಚಿನವು. ಹಂಡೆಗಳು, ಕೊಳದಪ್ಪಲೆ, ಪರಾತ…. ಓಹ್ ಅದೇನು ಕೇಳುವಿರಿ… ಇದರ ಮಧ್ಯೆ ಅಲ್ಲೊಂದು ಇಲ್ಲೊಂದು ಪುಸ್ತಕದ ಅಂಗಡಿ ಬೇರೆ! ಆದರೆ ಇಲ್ಲಿನ ಪುಸ್ತಕ ಅಂಗಡಿಗಳು ಹೆಚ್ಚು ಪುಸ್ತಕಗಳನ್ನು ಪ್ರದರ್ಶನ ಮಾಡುತ್ತಿರಲಿಲ್ಲ. ಹ್ಯಾಂಡ್ ಟೂಲ್ಸ್ ಅಂದರೆ ಗರಗಸ, ಸುತ್ತಿಗೆ, ಸ್ಪಾನರ್, ರಿಂಚು, ಅಳನ್ ಕೀ,…. ಮತ್ತಿತರ ಸಹಸ್ರಾರು ಇಂಜಿನಿಯರಿಂಗ್ ಟೂಲ್ಸ್, ವಿಧ ವಿಧವಾದ ಛತ್ರಿಗಳು, ಪಾಂಟ್ ಶರ್ಟ್ ಬಟ್ಟೆ ಇವು ರಸ್ತೆ ಉದ್ದಕ್ಕೂ ಹರಡಿರುತ್ತಿತ್ತು. ಹೊಸ ಬಟ್ಟೆ ರಾಶಿ ಒಂದು ಸಾಲು ಅಂದರೆ ಹಳೇ ಬಟ್ಟೆ ರಾಶಿ ಮತ್ತೊಂದು ಕಡೆ. ಇಲ್ಲಿ ಅಂದರೆ ಹಳೇ ಬಟ್ಟೆ ಮಾರಾಟದ ಸುತ್ತ ಸಾಮಾನ್ಯವಾಗಿ ಕೆಳಸ್ತರದ ಗಿರಾಕಿಗಳು. ಆಗ ತಾನೇ ಮಾರುಕಟ್ಟೆ ಪ್ರವೇಶಿಸಿದ ಹೊಸ ಉಪಕರಣಗಳು ಮತ್ತು ಡ್ರೆಸ್ ಮೆಟೀರಿಯಲ್ಸ್ ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತಿತ್ತು. ಮಧ್ಯ ವಯಸ್ಸಿನ ಹೆಂಗಸರು ಸೀರೆ ಮತ್ತು ಡ್ರೆಸ್‌ಗಳ ಸುತ್ತ ಇದ್ದರೆ ಅವರ ಜತೆ ಬರುತ್ತಿದ್ದ ಅವರ ಮಕ್ಕಳು ಜೀನ್ಸ್ ಪ್ಯಾಂಟ್ ಸುತ್ತಲೋ ಚಪ್ಪಲಿ ರಾಶಿಯ ಸುತ್ತ ಅವರ ಆಯ್ಕೆ ನಡೆಸುತ್ತಿದ್ದರು. ನಾನು ಅಲ್ಲಿ ಏನೇನು ಇರುತ್ತೆ ಹೊಸದು ಏನು ಕಾಣುತ್ತೆ ಅಂತ ನೋಡಲು ಹೋಗುತ್ತಿದ್ದೆ. ಕೆಲವು ಸಲ ಯಾವುದೋ ವಸ್ತು ಆಕರ್ಷಿಸಿತು ಅಂದರೆ ಚೌಕಾಸಿ ಮಾಡಿ ಕೊಂಡದ್ದೂ ಉಂಟು. ಒಮ್ಮೆ ಅಲ್ಲಿ ರೆಡಿಮೇಡ್ ಪ್ಯಾಂಟು ಮಾರುತ್ತಿದ್ದ. ಆಗ ತಾನೇ ಮಾರುಕಟ್ಟೆಗೆ ಸ್ಟ್ರೆಚ್ ಲಾನ್ ಎನ್ನುವ ಬಟ್ಟೆ ಬಂದಿತ್ತು. ಅದನ್ನು ಸರ್ಕಾರ ಕೋ ಆಪರೇಟಿವ್ ಸೊಸೈಟಿ ಮೂಲಕ ಮಾರಾಟಕ್ಕೆ ಇರಿಸಿದ್ದರು. ಸುಂಕ ತಪ್ಪಿಸಿ ಬಂದ ಬಟ್ಟೆಗಳನ್ನು ಕಸ್ಟಮ್ಸ್‌ನವರು ಹಿಡಿಯುತ್ತಿದ್ದರು. ಅದನ್ನು ಸೊಸೈಟಿ ಮೂಲಕ ಸರ್ಕಾರ ಮಾರಾಟಕ್ಕೆ ಇಡುತ್ತಿದ್ದರು.

ಗೀತಾ ಟಾಕೀಸ್ ಆವರಣದಲ್ಲಿ ಒಂದು ವೀರಶೈವ ಕೋ ಆಪರೇಟಿವ್ ಸೊಸೈಟಿ ಇತ್ತು. ಅಲ್ಲಿಂದ ಒಂದು ಸ್ಟ್ರೆಚ್ ಲಾನ್ ಪ್ಯಾಂಟ್ ಬಟ್ಟೆ ಪಿಂಕ್ ಕಲರ್‌ದನ್ನು ಖರೀದಿ ಮಾಡಿ ಪ್ಯಾಂಟು ಹೊಲಿಸಿದ್ದೆ. ತೊಡೆಗೆ ಅಂಟಿಕೊಂಡು ಇರುತ್ತಿದ್ದ ಬಟ್ಟೆ ಅದೇನೋ ನನಗೆ ತುಂಬಾ ಚೆನ್ನ ಅನಿಸಿತ್ತು. ಅದೇ ತರಹದ ಬಟ್ಟೆಯ ಬೇರೆ ಬಣ್ಣದ ಅಂದರೆ ಕಪ್ಪು ಪ್ಯಾಂಟ್ ನಾನು ಅಲ್ಲಿ ಮಾರುತ್ತಿದ್ದವನ ಹತ್ತಿರ ಕೊಂಡೆ. ಮನೆಗೆ ಬಂದು ನೋಡಿದರೆ ಜೇಬು ಪೂರ್ತಿ ಹರಿದಿದೆ ಮತ್ತು ಯಾರೋ ಹಾಕಿದ್ದ ಹಾಗಿದೆ! ಹಳೇ ಬಟ್ಟೆ ತಂದು ಹಾಕಿಕೊಂಡ ಅಂದರೆ ಮನೇಲಿ ಶೇಪ್ ತೆಗಿತಾರೆ ಅನಿಸಿತು. ಎರಡು ವಾರ ಅದನ್ನು ಮುಚ್ಚಿಟ್ಟು ನಂತರ ವಿಲೇವಾರಿ ಮಾಡಿದೆ. ಗೆಳೆಯ ರಾಮಕುಮಾರ್ ಸಹ ಸಂಡೇ ಬಜಾರ್‌ಗೆ ಆಗಾಗೆ ಭೇಟಿ ಕೊಡೋರು. ಅವರು ಹವ್ಯಾಸಕ್ಕಾಗಿ ರೇಡಿಯೋ ಮತ್ತು ಇತರೆ ಎಲೆಕ್ಟ್ರಾನಿಕ್ಸ್ ಉಪಕರಣ ರಿಪೇರಿ ಮಾಡಬೇಕಾದರೆ ಅದರ ಪಾರ್ಟ್ಸ್ ಬೇಕಾಗುತ್ತಿತ್ತು. ಅದು ಇಲ್ಲಿ ಸಲೀಸಾಗಿ ಸಿಗುತ್ತಿತ್ತು. ಇನ್ನೊಬ್ಬ ನನ್ನ ಸಹೋದ್ಯೋಗಿ ವಿಜಯೇಂದ್ರ ಅಲ್ಲಿ ಸಿಗುತ್ತಿದ್ದ, ಇವನು ಎಲೆಕ್ಟ್ರಾನಿಕ್ ಉಪಕರಣ ಹುಡುಕಿ ಬರ್ತಿದ್ದ. ಇವನ ಚಾಯ್ಸ್ ಅಂದರೆ ಕ್ಯಾಲ್ಕುಲೇಟರ್ ಮತ್ತು ಟಿವಿ ಸ್ಪೇರ್‌ಗಳು.

ಹಳೇ ನಾಣ್ಯಗಳು, ರೂಪಾಯಿಗಳು ಇವೂ ಸಹ ಅಲ್ಲಿ ಮಾರಾಟಕ್ಕೆ ಇರೋದು. ನನ್ನ ಫ್ರೆಂಡ್ ಒಬ್ಬ ಹಳೇ ನಾಣ್ಯ ಸಂಗ್ರಹಿಸಿದ್ದವನಿಗೆ ಒಮ್ಮೆ ಇಲ್ಲಿ ಹಳೇದು ನಾಣ್ಯದ ವಿಷಯ ಹೇಳಿದೆ. ಅವರು ಟೋಪಿ ಹಾಕ್ತಾರೆ ಅಂದುಬಿಟ್ಟ. ನನಗೆ ನಾಣ್ಯ ಸಂಗ್ರಹಣೆ ಚಟ ಇರಲಿಲ್ಲ, ಹೌದಾ ಅಂತ ಸುಮ್ಮನಾದೆ. ಅಂದ ಹಾಗೆ ನನಗೆ ಅಂಟದೇ ಇರುವ ಹಲವು ಚಟಗಳಲ್ಲಿ ಈ ನಾಣ್ಯ ಸಂಗ್ರಹಣೆ ಸಹ ಒಂದು!

ದೇವರ ಫೋಟೋ ಮಾರಾಟ ಮತ್ತೊಂದು ಆಕರ್ಷಣೆ. ಅಲ್ಲಿ ಇಟ್ಟಿರುತ್ತಿದ್ದ ಹಳೇ ಫೋಟೋಗಳಲ್ಲಿನ ದೇವರು ಯಾರು ಎಂದು ಹಲವು ಬಾರಿ ತಲೆ ಕೆಡಿಸಿಕೊಂಡು ಬಿಟ್ಟಿದ್ದೆ. ಅಲ್ಲಿ ಮಾರಲು ಕೂತವನನ್ನು ಕೇಳುವುದು ಅಂದರೆ ಅವನು ಬೇರೆ ಪಂಗಡದವನು, ನಮ್ಮ ದೇವರನ್ನು ಪೂಜೆ ಮಾಡುವ ಪೈಕಿ ಅಲ್ಲ! ಹೀಗಾಗಿ ಯಾರಾದರೂ ನನಗೆ ಗೊತ್ತಿರುವವರು ಸಿಕ್ಕಿದರೆ ಅವರನ್ನು ಫೋಟೋಗಳ ಮುಂದೆ ನಿಲ್ಲಿಸಿ ದೇವರ ಹೆಸರು ಹೇಳಿ ಪ್ಲೀಸ್ ಎನ್ನುತ್ತಿದ್ದೆ. ಸುಮಾರು ಜನರಿಗೆ ಗೊತ್ತಿರುತ್ತದೆ ಎನ್ನುವ ನನ್ನ ನಂಬಿಕೆ ಟುಸ್ ಎಂದು ಬಿಡುತ್ತಿತ್ತು. ಹೊಸಾ ಪೋಟೋಗಳು ಬಿಡಿ ಮಾರ್ಕೆಟ್ ದರಕ್ಕಿಂತಲೂ ಅರ್ಧಕ್ಕರ್ಧ ಕಡಿಮೆ! ನಾರಾಯಣ್ ಅಂತ ಒಬ್ಬ ಆಪರೇಟರ್‌ಗೆ ತರಹೇವಾರಿ ಟೋಪಿ ಧರಿಸುವ ಹುಚ್ಚು. ಆತ ಇಲ್ಲಿಗೆ ಬಂದರೆ ಕನಿಷ್ಠ ಅಂದರೂ ಹತ್ತು ಟೋಪಿ ಕೊಂಡು ತರುತ್ತಿದ್ದ. ಅದನ್ನು ಗೆಳೆಯರಿಗೆ ಮಾರುತ್ತಿದ್ದ!

ಐದಾರು ಜನ ಗಿಳಿ ಶಾಸ್ತ್ರ ಹೇಳುವವರೂ ಅಲ್ಲಿ ಕಾಣುತ್ತಿದ್ದರು. ಅವರ ಗಿರಾಕಿಗಳು ಅಂದರೆ ಕೂಲಿ ಕೆಲಸ ಮಾಡುವ ತಮಿಳು ಹೆಂಗಸರು. ಒಮ್ಮೊಮ್ಮೆ ಕುತೂಹಲದಿಂದ ನಾನೂ ಸಹ ಅಲ್ಲಿ ನಿಂತು ಶಾಸ್ತ್ರ ಹೇಳುವುದನ್ನು ನೋಡುತ್ತಿದ್ದೆ. ಗಿಳಿ ಪುಟ ಪುಟ ನಡೆದು ಅಲ್ಲಿನ ನೂರು ಕಾರ್ಡುಗಳಲ್ಲಿ ಒಂದನ್ನು ತೆಗೆದು ಪಕ್ಕ ಹಾಕಿ ಪಂಜರದೊಳಗೆ ಹೋಗುತ್ತಿತ್ತು. ಆ ಕಾರ್ಡ್ ನೋಡಿ ಶಾಸ್ತ್ರದವನು ಹೇಳುತ್ತಿದ್ದ. ಸುಮಾರು ತಮಿಳು ಭಾಷೆಯ ಕಾರ್ಡುಗಳು ಅವು. ಇಲಿ ಪಾಷಾಣ, ಜಿರಳೆ ಔಷಧಿ ಇವನ್ನು ಒಬ್ಬ ಹೆಗಲ ಮೇಲೆ ಜಿರಳೆ ಇಲಿ ಚಿತ್ರ ಹೊತ್ತ ಬೋರ್ಡು ಹೊತ್ತು ಅಲ್ಲಲ್ಲಿ ನಿಂತು ಮಾರಾಟ ಮಾಡುತ್ತಿದ್ದ. ತೀರಾ ಮೊನ್ನೆ ಮೊನ್ನೆ ಇದರ ಇಂಪ್ರೂವ್ ಆಗಿರುವ ವರ್ಷನ್ ನಮ್ಮ ಏರಿಯಾದಲ್ಲಿ ನೋಡಿದೆ. ಯಾವುದೋ ಶೂ ಅಂಗಡಿಯ ಬ್ಯಾನರ್ ಅನ್ನು ಹೆಗಲ ಮೇಲೆ ಹೊತ್ತು ಇಬ್ಬರು ಯುವಕರು ಪ್ರಚಾರ ಮಾಡುತ್ತಿದ್ದರು. ಇಲಿ ಪಾಷಾಣ ಅಂದ ಕೂಡಲೇ ಬೆಂಗಳೂರಿನ ಎಲ್ಲೆಡೆ ಒಂದು ಚೀಟಿ ನಿಮಗೆ ಕಾಣಿಸುತ್ತೆ. ಬಸ್ ಸ್ಟಾಪ್, ಎಲೆಕ್ಟ್ರಿಕ್ ಕಂಬ ಪಾರ್ಕಿನ ಮರದ ಕಾಂಡಗಳು… ಹೀಗೆ ಈ ಬೋರ್ಡು. ಇಲಿಯ ಕಾಟವೇ, ನಮ್ಮನ್ನು ಸಂಪರ್ಕಿಸಿ ಅಂತ ಪೋನ್ ನಂಬರುಗಳು ಚೀಟಿ ಮೇಲೆ ಇರುತ್ತೆ. ಅದಕ್ಕೆ ಪರ್ಯಾಯ ಒಂದು ಬೋರ್ಡ್ ನನ್ನ ತಲೆಯಲ್ಲಿ ಉಂಟು. ಮನೆಯಲ್ಲಿ ಗಂಡನ ಕಾಟವೇ, ನಮ್ಮನ್ನು ಸಂಪರ್ಕಿಸಿ. ಅಥವಾ ಹೀಗೆ ಮನೆಯಲ್ಲಿ ಹೆಂಡತಿ ಕಾಟವೇ, ನಮ್ಮನ್ನು ಸಂಪರ್ಕಿಸಿ. ಇದನ್ನು ಗಟ್ಟಿಯಾಗಿ ಹೇಳಿ ಕೆಲವು ಹೆಂಗಸರ ಉರಿಗಣ್ಣಿಗೆ ಹಾಗೂ ಅವರ ಭಸ್ಮ ಮಾಡುವ ಕೋಪಕ್ಕೆ ಗುರಿಯೂ ಆಗಿದ್ದೇನೆ!

ತೊಂಬತ್ತರ ದಶಕದ ಕೊನೆಯಲ್ಲಿ ಇಲ್ಲಿ ಮಾರಾಟ ಆಗುವ ವಸ್ತುಗಳಲ್ಲಿ ಕಪ್ಪು ಬಿಳುಪು ಟಿ ವಿ ಸಹ ಸೇರಿತ್ತು. ಸಂಡೇ ಬಜಾರ್ ಕೆಲವರಿಗೆ ಉದ್ಯೋಗ ಒದಗಿಸಿತ್ತು ಮತ್ತು ಎಂತಹ ಹಳೇ ವಸ್ತುವಾದರೂ ಅದಕ್ಕೆ ಬೆಲೆ ಇದೆ ಎಂದು ತೋರಿಸಿತ್ತು. ಅದರಿಂದ ಆದ ಒಂದು ಉಪಕಾರ ನನಗೆ ಅಂದರೆ ಯಾವುದೇ ಸಾಮಾನು ಬಿಸಾಕದೇ ಇಡೋದು! ಸಣ್ಣ ಸಣ್ಣ ಸ್ಕ್ರೂ(ಕನ್ನಡಕದ ಕಿವಿ ಮೇಲೆ ಇಡುವ ಕಡ್ಡಿಗೆ ಇವು ಬೇಕೇ ಬೇಕು)ಸಹ ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಅಟ್ಟದ ಮೇಲೆ ಇಡೋದು. ಯಾವಾಗಲಾದರೊಮ್ಮೆ ಇವು ಉಪಯೋಗಕ್ಕೆ ಬರೋದು. ಯಾವತ್ತೋ ಬೇಕು ಅಂತ ಕಸ ಇಟ್ಕೊತಿಯಾ ಅಂತ ಮನೇಲಿ ಕದನ ಆಗೋದು! ಆದರೆ ಅದಕ್ಕೆ ಕೇರ್ ಮಾಡುತ್ತಿರಲಿಲ್ಲ ಮತ್ತು ಮಾಡಬಾರದು. ಸಂಡೇ ಬಜಾರ್‌ನಲ್ಲಿ ಒಂದು ಸುತ್ತು ಹಾಕುವಲ್ಲಿ ನಿಮಗೆ ಪರಿಚಯದ ಹಲವರು ಸಿಗುತ್ತಿದ್ದರು.

ಆಯುರ್ವೇದ ಔಷಧಿ ಮಾರುವ ಅಂಗಡಿಗಳು, ಉಡದ ತುಪ್ಪ ಮಾರುವವರು, ಸುತ್ತಲೂ ಬಾಟಲಿಯಲ್ಲಿ ಇಟ್ಟುಕೊಂಡು ಜೇನು ತುಪ್ಪ ಮಾರುವವರು, ಸರ್ವರೋಗ ನಿವಾರಣಾ ಔಷಧ ಮಾರಾಟಗಾರರು, ಸೆಕ್ಸ್ ತೊಂದರೆ ಬಗೆ ಹರಿಸುವ ಸುತ್ತಲೂ ಚಿತ್ರಗಳನ್ನು ನೇತು ಜಾಕಿ ಮಧ್ಯ ಕೂತಿರುತ್ತಿದ್ದ ಬರಿಗಾಲಿನ ಸೆಕ್ಸ್ ಸ್ಪೆಷಲಿಸ್ಟ್‌ಗಳು, ಉತ್ತರ ಭಾರತದ ಯಾವುದೋ ಪ್ರಸಿದ್ಧ ಸ್ಥಳದ ಔಷಧಿ ಪಂಡಿತರು, ಚೌರಿ ಬಾಚಣಿಗೆ ಸೂಜಿ ಮಾರುವ ಲಂಬಾಣಿಗರು, ಡ್ರೈ ಫ್ರೂಟ್ಸ್ ಮಾರಾಟಗಾರರು(ಆಗ ಈಗಿನ ಹಾಗೇ ಎಲ್ಲಾ ಅಂಗಡಿಗಳಲ್ಲೂ ಎಲ್ಲಾ ಡ್ರೈ ಫ್ರೂಟ್ಸ್ ಸಿಗುತ್ತಿರಲಿಲ್ಲ. ದ್ರಾಕ್ಷಿ, ಗೋಡಂಬಿ ಕರ್ಜೂರ ಬಿಟ್ಟರೆ ಮಿಕ್ಕವು ಅಲಭ್ಯ, ಜನ ಸಾಮಾನ್ಯರಿಗೆ ಈ ಮೂರು ಬಿಟ್ಟರೆ ಮೀಕ್ಕವು ತಿಳಿದೇ ಇಲ್ಲ ಅಂತಲೇ ಹೇಳಬೇಕು, ಕೆಲವು ಉಳ್ಳವರ ಮನೆಯಲ್ಲಿ ವಿವಿಧ ರೀತಿಯ ಡ್ರೈ ಫ್ರೂಟ್ಸ್ ನೋಡಿರುತ್ತಿದ್ದರು). ಹಾಗೆ ನೋಡಿದರೆ ಸುಮಾರು ಡ್ರೈ ಫ್ರೂಟ್ಸ್ ಹೆಸರು ನಾವು ಕೇಳಿದ್ದೇ ದೊಡ್ಡವರಾದ ಮೇಲೆ. ಮನೆ ಮುಂದೆ ಲಂಬಾಣಿ ಹೆಂಗಸರು ಈ ಡ್ರೈ ಫ್ರೂಟ್ಸ್ ತರೋರು. ಅದರಲ್ಲಿ ವೈವಿಧ್ಯಮಯ ಹಣ್ಣುಗಳು ಇರುತ್ತಿತ್ತು. ಆದರೆ ಅವುಗಳ ಹೆಸರು ಅವರು ಹೇಳಿದರೂ ನಮಗೆ ಗೊತ್ತೇ ಆಗ್ತಾ ಇರಲಿಲ್ಲ.. ಯಾವುದೋ ಜಾಹೀರಾತಿನಲ್ಲಿ(ವಜ್ರದಂತಿ ಹಲ್ಲು ಪುಡಿ ಜಾಹೀರಾತು ಎಂದು ನೆನಪು)ಒಂದು ಎಪ್ಪತ್ತರ ಮುದುಕ ಎಪ್ರಿಕಾಟ್ ಡ್ರೈ ಫ್ರೂಟ್ ಮೇಲಿನ ತೊಗಟೆ ಸಮೇತ ಬಾಯಲ್ಲಿ ಇಟ್ಟು ಕಡಿತಾನೆ ನೆನಪಿದೆಯೇ? ಅದೊಂದು ಹಣ್ಣು ಗೊತ್ತಿತ್ತು. ಅಂದ ಹಾಗೆ ಇದನ್ನು ಹಣ್ಣು ಅಂತ ಯಾವ ಬುದ್ಧಿವಂತ ಮುಟ್ಟಾಳ ಕರೆದ ಅಂತ ತಲೆನೋವು ಬರಿಸಿಕೊಂಡಿದ್ದಿನಿ! ಎಂಟು ವರ್ಷದ ಹಿಂದೆ ಕಾಶ್ಮೀರಕ್ಕೆ ಹೋಗಿದ್ದಾಗ ಅಲ್ಲಿನ ಅಂಗಡಿಗಳಲ್ಲಿ ರಾಶಿ ರಾಶಿ ಡ್ರೈ ಫ್ರೂಟ್ಸ್ ನೋಡಿದೆ. ಎಲ್ಲಾ ಹತ್ತು ಹತ್ತು ಕೇಜಿ ಕೊಂಡು ಕೊಂಡು ತಿಂದು ಬಿಡಬೇಕು ಅಂತ ಅದಮ್ಯ ಆಸೆ ಹುಟ್ಟಿ ಬಿಟ್ಟಿತು. ಜೇಬಲ್ಲಿ ಸಾಕಷ್ಟು ರೂಪಾಯಿ ಸಹ ಇತ್ತು.. ನಮ್ಮ ಡಾಕ್ಟರು ಕಣ್ಣೆದುರು ಬಂದರು, ಡ್ರೈ ಫ್ರೂಟ್ಸ್ ನೋ ನೋ ನೋ ಇಟ್ ವಿಲ್ ಆಡ್ ಕೊಲೆಸ್ಟರಾಲ್ ಅಂತ ಅಡ್ಡಡ್ಡ ತೋರು ಬೆರಳು ಆಡಿಸಿದರು. ಒಂದು ನಲವತ್ತು ವರ್ಷ ಮೊದಲೇ ಇಲ್ಲಿ ಬರಬೇಕಿತ್ತು ಅನಂತ ಅನಿಸಿಬಿಟ್ಟಿತು. ಡ್ರೈ ಫ್ರೂಟ್ ನೆನಪು ಅಂದರೆ ಎಂ ಜಿ ರಸ್ತೆಯ ಒಂದು ಐಸ್ ಕ್ರೀಮ್ ಹೋಟೆಲ್‌ಗೆ ಮದುವೆ ಆದ ಹೊಸತರಲ್ಲಿಯೋ ಮದುವೆಗೆ ಮೊದಲೋ ಹೆಂಡತಿ ಜತೆ ಹೋಗಿದ್ದೆ. ಐಸ್ ಕ್ರೀಮ್ ಆರ್ಡರ್ ಆಯ್ತಾ. ಉದ್ದನೆ ಗಾಜಿನ ಬಟ್ಟಲಲ್ಲಿ ರುಮಾಲು ಕಮ್ಮರ್ ಬಂದ್ ಡ್ರೆಸಿನ ವೈಟರ್ ಐಸ್ ಕ್ರೀಮ್ ತಂದಿಟ್ಟ. ಕಮ್ಮರ್ ಬಂದ್ ಅಂದರೆ ಗೊತ್ತಾ? ಮೈಸೂರು ಮಹಾರಾಜರ ದರ್ಬಾರಿಗೆ ಹೋಗುವಾಗ ಒಂದು ಡ್ರೆಸ್ ಹಾಕ್ಕೋತಾ ಇದ್ದರಲ್ಲಾ ಅದು. ಅದನ್ನೇ ಸ್ವಲ್ಪ ಮಾರ್ಪಾಡು ಮಾಡಿ ಬಿಳೀ ಪೈಜಾಮ, ಬಿಳೀ ಶರ್ವಾನಿ, ಸೊಂಟಕ್ಕೆ ಹಸಿರು ಬಣ್ಣದ ಪಟ್ಟಿ ಮಾಡಿದ್ದಾರೆ ಅಷ್ಟೇ. ವೊಡ್ ಹೌಸ್ ಕಾದಂಬರಿಗಳಲ್ಲಿ ಈ ಕಮ್ಮರ ಬಂದ್ ವಿಷಯ ತಮಾಷೆಯಾಗಿ ಹೇಳುತ್ತಾನೆ. ವೈಟರ್ ಹತ್ತಿರ ಬಂದು ನನ್ನ ಕಿವಿಯಲ್ಲಿ ಮಾತ್ರ ಒಂದು ಗುಟ್ಟು ಹೇಳುವ ಹಾಗೆ ಪಿಸುಗುಟ್ಟಿದ, ಇಂಗ್ಲಿಷ್‌ನಲ್ಲಿ. ನನಗೆ ಇಷ್ಟು ಅರ್ಥ ಆಯಿತು ಅಷ್ಟೇ, ಕಾರಣ ಇಂಗ್ಲಿಷ್ ಬರ್ತಿರಲಿಲ್ಲ ನೋಡಿ! ಐಸ್ ಕ್ರೀಮ್ ಕೊನೆಯಲ್ಲಿ ಒಂದು ಡ್ರೈ ಫ್ರೂಟ್ ಬರುತ್ತೆ. ಅದರಲ್ಲಿ ಒಂದು ನಟ್ ಇರುತ್ತೆ. ಅದನ್ನೂ ತಿನ್ನಿ, ಬಿಸಾಕಬೇಡಿ…! ಐಸ್ ಕ್ರೀಮ್ ನಂತರ ಆ ಬೀಜ ತಿಂದು ಅದರಲ್ಲಿನ ಮತ್ತೊಂದು ಬೀಜ ಒಡೆದು ಇನ್ನೊಂದು ಗರ್ಭ ಸೀಳಿ ತಿಂದೇವಾ… ಆಮೇಲೆ ಪ್ರತಿ ಸಲ ಅಲ್ಲಿಗೆ ಹೋದಾಗಲೂ ಆತ ಆ ಸರ್ವರ್ ನನ್ನ ನೋಡಿ ನಕ್ಕು ಸರ್ ಅನ್ನೋವ್ರು, ನೆನಪಿದೆ ತಾನೇ ಅಂತ! ಐಸ್ ಕ್ರೀಮ್ ಅಂಗಡಿ ಹೆಸರು lake view ಅಂತೇನೂ ಇರಬೇಕು!

ಸಂಡೇ ಬಜಾರ್‌ನಲ್ಲಿ ಒಮ್ಮೆ ಒಬ್ಬ ಹಳ್ಳಿ ಕಡೆಯ ದಂತ ವೈದ್ಯನನ್ನು ನೋಡಿದ್ದೆ. ಒಂದು ಸ್ಟೀಲ್ ಕುರ್ಚಿ, ಒಂದು ಪೆಟ್ಟಿಗೆಯಲ್ಲಿ ಕೆಲವು ಟೂಲ್ಸ್ ಅವನ ಮುಖ್ಯ ಕಾರ್ಯಾಗಾರ. ಒಂದು ಬೋರ್ಡ್ ಯಾವಾಗಲೋ ಬರೆದಿದ್ದು ಮುಂದೆ ಇಟ್ಟುಕೊಂಡಿದ್ದ. ಎಲ್ಲಾ ತರಹದ ಹಲ್ಲಿನ ಸಮಸ್ಯೆಗೆ ಇಲ್ಲಿ ಔಷಧ ಕೊಡುತ್ತೇವೆ ಎನ್ನುವ ಅರ್ಥದ ಇಂಗ್ಲಿಷ್ ಬೋರ್ಡು ಅದು. ಕುತೂಹಲದಿಂದ ನಿಂತು ಅವನ ಕೆಲಸ ನೋಡಿದೆ. ಯಾರೋ ಹಲ್ಲು ನೋವು ಅಂತ ಬಂದವರಿಗೆ ಕುರ್ಚಿ ಮೇಲೆ ಕೂಡಿಸಿದ. ಬಾಯಿ ಅಗಲಿಸಿ ಹಲ್ಲಿಗೆ ದಾರ ಕಟ್ಟಿ ಎಳೆದ. ಹಲ್ಲು ಆಚೆ ಬಂತು! ಮುಂದೆ ನೋಡಲು ಹೆದರಿಕೆ, ಅಸಹ್ಯ ಎರಡೂ ಆಗಿ ಅಲ್ಲಿಂದ ಕಾಲು ತೆಗೆದೆ. ಎಷ್ಟೋ ವರ್ಷದ ನಂತರ ವಿಜಯಲಕ್ಷ್ಮಿ ಟಾಕೀಸ್ ಹತ್ತಿರದ ಗಲ್ಲಿಯಲ್ಲಿ ಇದೇ ತರಹದ ಡಾಕ್ಟರು ಸಿಕ್ಕಿದ. ಅವನ ಸುತ್ತಾ ಸುಮಾರು ರೋಗಿಗಳು, ಮುಖ್ಯವಾಗಿ ರಿಕ್ಷಾ ಡ್ರೈವರುಗಳು. ಇವನು ಇಕ್ಕಲದಲ್ಲಿ ಹಲ್ಲು ಕೀಳುತ್ತಿದ್ದ, ಹುಳುಕು ಹಲ್ಲಿಗೆ ಅದೇನೋ ಪುಡಿ ಕೊಡುತ್ತಿದ್ದ..! ಕೆಲವು ಹಳೇ ರೋಗಿಗಳು ಸಹ ಇದ್ದರು. ಡಾಕ್ಟರು ಅವರ ಜತೆ ಮಾತು ಆಡಿದ ರೀತಿಯಿಂದ ಅವರು ಹಳೇ ರೋಗಿಗಳು ಎಂದು ತಿಳಿಯಬಹುದಿತ್ತು. ಆದರೆ ವೈದ್ಯನ ಅವತಾರ ಅಷ್ಟೇನೂ ಆಸಕ್ತಿ ಹುಟ್ಟಿಸುವುದಲ್ಲ. ಎರಡು ವಾರದ ಕರೀ ಬಿಳೀ ಕೂದಲಿನ ಕುರುಚಲು ಗಡ್ಡ, ಕೊಳೆಯಾದ ಶರ್ಟು, ಹರಕಲು ಪ್ಯಾಂಟು ಹವಾಯಿ ಚಪ್ಪಲಿ. ಮುಂದುಗಡೆ ಬಿದ್ದಿರುವ ಎರಡು ಹಲ್ಲು, ಪಾಚಿ ಕಟ್ಟಿರುವ ಮಿಕ್ಕ ಹಲ್ಲುಗಳು ಹಾಗೂ ಬಾಯಲ್ಲಿ ಕಚ್ಚಿ ಹಿಡಿದಿರುವ ಬೀಡಿ…! ಹೀಗೆ ಸಂಡೇ ಬಜಾರ್ ಒಂದು ರೀತಿಯಲ್ಲಿ ಸರ್ವ ಋತು ಭಂಡಾರ!

ಸಂಡೇ ಬಜಾರ್ ಬಗ್ಗೆ ಒಂದು ಸಂಪೂರ್ಣ rosy ಪಿಚ್ಚರು ಕೊಟ್ಟೆ. ಅದರ ಇನ್ನೊಂದು ಮುಖ ಹೇಳಬೇಕು. ಇಕ್ಕಟ್ಟಿನ ರಸ್ತೆ ಅದು. ಎರಡೂ ಕಡೆ ಅಂಗಡಿಗಳು. ಒಬ್ಬರನ್ನು ನೂಕಿಕೊಂಡೆ ಮುಂದಕ್ಕೆ ಹೋಗಬೇಕು. ಇದು ಮಳೆ ಬರದ ದಿನ. ಮಳೆ ಬಂದರಂತೂ ಯಾರಿಗೂ ಆ ಪಾಡು ಬೇಡ. ಕೆಸರು ಕೆಸರು ಕೆಸರು ಎಲ್ಲೆಲ್ಲೂ ಕೆಸರು. ಆಗಾಗ ಇಲ್ಲಿ ಮೋರಿ ಕಟ್ಟಿ ಡ್ರೈನೇಜ್ ನೀರು ಇಡೀ ರಸ್ತೆ ತುಂಬಿ ಹರಿಯೋದು. ಇಡೀ ಏರಿಯಾ ಗಬ್ಬು ವಾಸನೆ ತುಂಬಿರೋದು. ನರಕ ಅಂದರೆ ಹೀಗೇ ಇರಬಹು ದು ಅನಿಸೋದು. ಕಾರ್ಪೋರೇಶನ್ ಆಗಲಿ ಜನ ಪ್ರತಿನಿಧಿ ಆಗಲಿ ಇದರ ಬಗ್ಗೆ ತಲೆ ಕೆಡಿಸಿಕೊಂಡವರೇ ಅಲ್ಲ. ಆದರೂ ಇಷ್ಟೆಲ್ಲಾ ಇದ್ದರೂ ಜನ ರಿಸ್ಕ್ ತೆಗೆದುಕೊಂಡು ಬರೋರು! ಆಗಿನ್ನೂ ಈಗ ಇರುವ ಹಾಗೆ ಹೊಸ ಹೊಸ ರೋಗಗಳ ಹೆಸರು ಕೇಳಿರಲಿಲ್ಲ. ಇಂತಹ ಕಡೆ ಓಡಾಡಿದರೆ ನೂರು ರೋಗ ಅಂಟಬಹುದು ಎನ್ನುವ ಭಯ ಸಹ ಯಾರಲ್ಲೂ ಇರಲಿಲ್ಲ. ಒಂದು ದೊಡ್ಡ ಸ್ಲಂ ಏರಿಯಾ ದಲ್ಲಿ ಜೀವಮಾನ ಪೂರ್ತಿ ಇದ್ದೆವು ಅನಿಸಿ ಬಿಡೋದು ಬಜಾರ್‌ನಿಂದ ಆಚೆ ಬಂದಾಗ. ಹೊರಗೆ ಬಂದು ಸ್ವಲ್ಪ ಒಳ್ಳೆ ಹವಾ ಕುಡಿದು ಒಂದು ಮಸಾಲೆ ತಿಂದು ಕಾಫಿ ಹೀರಿ ಕೊಂಡದ್ದು ಕೈಲಿ ಇದ್ದ ಬ್ಯಾಗಿನಲ್ಲಿ ತುರುಕಿಕೊಂಡು ಮತ್ತೆ ಮುಂದಿನ ವಾರದ ಸಂಡೇ ಬಜಾರ್‌ಗೆ ರೆಡಿ…!! ಇದು ಬೆಂಗಳೂರಿಗರ ಆಗಿನ ಒಂದು ಸಂಡೇ ಕತೆ.

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

3 Comments

  1. Vinathe Sharma

    ಗೋಪಾಲಕೃಷ್ಣ ಅವರೇ,
    ನಮಸ್ಕಾರ. ನೀವು ಮತ್ತೊಮ್ಮೆ ಪುಸ್ತಕದಂಗಡಿಗಳ ಮತ್ತು ಗುಜರಿ ಬಗ್ಗೆ ಹಳೆ ನೆನಪುಗಳನ್ನು ಹಂಚಿಕೊಂಡಿದ್ದು, ಲೇಖನದಲ್ಲಿನ ಫೋಟೋಗಳು ಬಹಳ ಖುಷಿ ಕೊಟ್ಟಿದೆ. ೧೯೮೦ ಮತ್ತು ೯೦ ರ ದಶಕಗಳಲ್ಲಿ ನೀವು ಹೆಸರಿಸಿರುವ ಹಲವಾರು ಪುಸ್ತಕದಂಗಡಿಗಳನ್ನು ನಾನು ಎಡತಾಕುತ್ತಿದ್ದೆ. ಅವೆನ್ಯೂ ರೋಡ್, ಮೈಸೂರ್ ಬ್ಯಾಂಕ್ ವೃತ್ತ, ಮೆಜೆಸ್ಟಿಕ್ ಪ್ರದೇಶ, ಎಂಜಿ ರೋಡ್, ಅವುಗಳ ಗಲ್ಲಿಗಳು ಚಿರಪರಿಚಿತವಾಗಿದ್ದವು. ಹೆಚ್ಚಿನ ಪಕ್ಷ ಅಪರೂಪದ ಪುಸ್ತಕಗಳನ್ನು ಹುಡುಕಿಕೊಂಡು ಹೋಗಿ ಪುಸ್ತಕಲೋಕದಲ್ಲಿ ಕಳೆದುಹೋಗುತ್ತಿದ್ದೆ. ಬಹಳಷ್ಟು ಬಾರಿ ಸೆಕೆಂಡ್ ಹ್ಯಾಂಡ್ ಬುಕ್ಸ್ ಕೊಳ್ಳುತ್ತಿದ್ದೆ. ಕಾಲಕ್ರಮೇಣ ಪುಸ್ತಕಗಳ ಜೊತೆ ಗುಜರಿ ಪ್ರಪಂಚವೂ ನನ್ನ ಅಚ್ಚುಮೆಚ್ಚಿನದಾಗಿತ್ತು. ನಿಮ್ಮ ಈ ಲೇಖನ ಓದಿ ನನ್ನ ಗುಜರಿ liking ದಿನಗಳು ನೆನಪಾದವು. ನಾನು ಗುಜರಿ ವಸ್ತುಗಳನ್ನು ಕೇವಲ ನೋಡಲೆಂದೆ ಶಿವಾಜಿನಗರದ ರಸೆಲ್ ಮಾರ್ಕೆಟ್ ಬಳಿ ಮತ್ತು ಅವೆನ್ಯೂ ರೋಡ್ ಅಲೆದಾಡಿದ್ದು ಕಣ್ಮುಂದೆ ಬಂತು. ಜೀವನದಲ್ಲಿ ಎಂದೂ ನೋಡಿರದಿದ್ದ ಕೆಲವು ಗುಜರಿವಸ್ತುಗಳು ಎಷ್ಟರಮಟ್ಟಿಗೆ ಕುತೂಹಲ, ಕೌತುಕ ಹುಟ್ಟಿಸುತ್ತಿತ್ತು ಎಂದರೆ ಇದ್ದಕ್ಕಿದ್ದಂತೆ ಅವುಗಳು ಜೀವತಳೆದು ನನಗೆಂದೇ ವಿಶೇಷವಾಗಿ ಯಾವುದೊ ಲೋಕದ ಕಥಗಳನ್ನು ಹೇಳುತ್ತಿದ್ದವೇನೋ ಎಂದೆನಿಸುತ್ತಿತ್ತು. ಆ ದಿನಗಳಲ್ಲಿ ನನ್ನ ಬಳಿಯೇನಾದರೂ ಹೆಚ್ಚಿನ ದುಡ್ಡಿದ್ದಿದ್ದರೆ, ಮನೆಯಲ್ಲಿ ಸದಾಕಾಲ ನನ್ನನ್ನು (ಹುಡುಗಿಯಾದ್ದರಿಂದ) ಬೈಯುವವರಿಲ್ಲ ಎಂದಾಗಿದ್ದಿದ್ದರೆ ನಾನು ಒಂದು ಪುಸ್ತಕ cum ಗುಜರಿ ಅಂಗಡಿ ಮಾಲೀಕಳಾಗುವ ಕನಸಿತ್ತು. ಈಗಲೂ, ನಾನು ವಾಸಿಸುವ ಬ್ರಿಸ್ಬೇನ್ ನಗರದಲ್ಲೂ, ಹಳೆ ಪುಸ್ತಕಗಳು, ಗುಜರಿ ವಸ್ತುಗಳು ಕಣ್ಣಿಗೆ ಬಿದ್ದರೆ ಮಂತ್ರದ ಬೂದಿ ಎರಚಿಸಿಕೊಂಡವಳಂತೆ ಅಲ್ಲೇ ನಿಂತುಬಿಡುತ್ತೀನಿ. ನಿಮ್ಮ ಸಂಡೇ ಬಜಾರ್ ವರ್ಣನೆ ಓದಿ ನಗು ಬಂತು. ನಿಮ್ಮ ಮತ್ತು ನಿಮ್ಮ ಸ್ನೇಹಿತರಿಗಿದ್ದ ಸ್ವಾತಂತ್ರ್ಯದ ಬಗ್ಗೆ ಹೊಟ್ಟೆಕಿಚ್ಚಾದರೆ, ಪುಸ್ತಕ ಮತ್ತು ಗುಜರಿ ಪ್ರಪಂಚವು ನನಗೆ ಕೊಟ್ಟ ಆನಂದವನ್ನು ಹಂಚಿಕೊಂಡಾಗಲೆಲ್ಲ ನಾನು ಬೈಸಿಕೊಂಡಿದ್ದೇ ಆಗಿತ್ತಲ್ಲಾ ಎಂದು ನೆನೆದು ಬೇಜಾರೂ ಆಯ್ತು. ನಿಮ್ಮ ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೀನಿ.
    ವಿನತೆ ಶರ್ಮ

    Reply
    • Gopalakrishna

      ಡಾ.ವಿನತೆ ಶರ್ಮಾ ಅವರೇ ನಮಸ್ಕಾರ. ನಿಮ್ಮ ಮೆಚ್ಚುಗೆಯ ನುಡಿಗಳು ನನ್ನನ್ನು ಮೂಕ ಆಗಿಸಿವೆ. ನನ್ನ ಗೆಳೆಯರಲ್ಲಿ ಸುಮಾರು ಜನ ಗುಜರಿ ಮತ್ತು ಪುಸ್ತಕ ಪ್ರೇಮಿಗಳು. ಕೆಲವರಿಗೆ ಗುಜರಿಗೆ ಹೋಗುವುದನ್ನು ಹೇಳಿಕೊಳ್ಳುವುದು ನಾಚಿಕೆ ಅಂತೆ! ಆದರೆ ಗುಜರಿ ಅನುಭವಗಳು ನಿರಂತರ ಖುಷಿ ಕೊಡುತ್ತದೆ ಎಂದು ನನ್ನ ಸ್ವಾನುಭವ. ನನ್ನಂತೆ ಯೋಚಿಸುವವರ ಬಳಗ ಹೆಚ್ಚಾಯಿತು, ನಿಮ್ಮ ಸೇರ್ಪಡೆಯಿಂದ.
      ಮೇಡಂ, ಥಾಂಕ್ಸ್.
      ಗೋಪಾಲಕೃಷ್ಣ

      Reply
  2. Gopalakrishna

    ಡಾ.ವಿನತೆ ಶರ್ಮಾ ಅವರೇ ನಮಸ್ಕಾರ. ನಿಮ್ಮ ಮೆಚ್ಚುಗೆಯ ನುಡಿಗಳು ನನ್ನನ್ನು ಮೂಕ ಆಗಿಸಿವೆ. ನನ್ನ ಗೆಳೆಯರಲ್ಲಿ ಸುಮಾರು ಜನ ಗುಜರಿ ಮತ್ತು ಪುಸ್ತಕ ಪ್ರೇಮಿಗಳು. ಕೆಲವರಿಗೆ ಗುಜರಿಗೆ ಹೋಗುವುದನ್ನು ಹೇಳಿಕೊಳ್ಳುವುದು ನಾಚಿಕೆ ಅಂತೆ! ಆದರೆ ಗುಜರಿ ಅನುಭವಗಳು ನಿರಂತರ ಖುಷಿ ಕೊಡುತ್ತದೆ ಎಂದು ನನ್ನ ಸ್ವಾನುಭವ. ನನ್ನಂತೆ ಯೋಚಿಸುವವರ ಬಳಗ ಹೆಚ್ಚಾಯಿತು, ನಿಮ್ಮ ಸೇರ್ಪಡೆಯಿಂದ.
    ಮೇಡಂ, ಥಾಂಕ್ಸ್.
    ಗೋಪಾಲಕೃಷ್ಣ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ