Advertisement
ಮಳೆಯಲಿ…ಚಳಿಯಲಿ…ಕಾಫಿ ಜೊತೆಯಲಿ: ಸುಮಾವೀಣಾ ಸರಣಿ

ಮಳೆಯಲಿ…ಚಳಿಯಲಿ…ಕಾಫಿ ಜೊತೆಯಲಿ: ಸುಮಾವೀಣಾ ಸರಣಿ

ಮಲೆನಾಡಲ್ಲಿ ಇರುವವರೆಗೂ ನಮಗೆ ಇವುಗಳಲ್ಲಿ ಕಾಫಿ ಕುಡಿದು ಅಭ್ಯಾಸವಿರಲಿಲ್ಲ. ಮಗ್‌ಗಳಲ್ಲಿ ಕುಡಿದು ಅಭ್ಯಾಸ. ಸ್ಟ್ರಾಂಗ್ ಕಾಫಿಯನ್ನಲ್ಲ ಲೈಟ್ ಕಾಫಿಯನ್ನು. ಬೈಟು ಕಾಫಿ, ಬೈ ತ್ರಿ ಕಾಫಿ ಪದಗಳನ್ನು ಮಲೆನಾಡು ಬಿಟ್ಟಮೇಲೆ ನಾನು ಪರಿಚಯಿಸಿಕೊಂಡದ್ದು. ಮನುಷ್ಯನ ಆಲೋಚನಾ ರೀತಿಯನ್ನು, ಅನುಭವಿಸುವ ತಳಮಳವನ್ನು, ಮನಸ್ಥಿತಿಯನ್ನು ಅವರವರು ಕಾಫಿ ಕಪ್ ಹಿಡಿಯುವ ಬಗೆ, ಅದನ್ನು ಸೇವಿಸುವ ಬಗೆ ಇತ್ಯಾದಿಗಳಲ್ಲಿ ಅವರ ಅಧ್ಯಯನ ಮಾಡಬಹುದು. ಕುಡಿದು ಉಳಿಸಿದ ಕಾಫಿ ಕಪ್‌ನಿಂದ ಭವಿಷ್ಯವನ್ನೂ ಹೇಳುವುದಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

‘ಕುಂಭದ್ರೋಣ ಮಳೆ’, ‘ಮುಸಲ ಧಾರೆ’ ಎಂಬೆರಡೂ ಪದಗಳು ಮಡಿಕೇರಿ ಮಳೆಗೆ ಅನ್ವಯ. ಕುಂಭದಿಂದ ದ್ರೋಣಕ್ಕೆ ಅಥವಾ ದೊನ್ನೆಗೆ ಬೀಳುವ ನೀರಿನ ವೇಗದಂತೆ ಮಳೆಯ ರಭಸ ಎನ್ನುವ ಅರ್ಥವಿದೆ. ಮುಸಲ ಎಂದರೆ ಒನಕೆ ಎಂದರ್ಥ. ಅಂದರೆ ಮಳೆ ಹನಿ ಒನಕೆಯ ಗಾತ್ರದಲ್ಲಿ ಓರೆಯಾಗಿ ಸುರಿಯುವುದು ಎಂದು ಅರ್ಥ ಬರುತ್ತದೆ. ಇದನ್ನು ಮಳೆಕೋಲು ಎನ್ನುವುದಿದೆ. ಪಟಪಟ ಸದ್ದಿನೊಂದಿಗೆ ಪ್ರಾರಂಭದ ಮಳೆ ಗಂಟೆಗಳ ಕಾಲ ಸುರಿಯುವುದು. ಎಂ. ಸ್ಯಾಂಡನ್ನೋ, ಜಲ್ಲಿಯನ್ನೋ ಅನ್ ಲೋಡ್ ಮಾಡುವಾಗ ಬರುವ ಸದ್ದನ್ನು ಕೇಳಿದ ಹಾಗಾಗುತ್ತಿತ್ತು, ಒಂದು ರೀತಿ ಬ್ರೇಕ್ ಫೇಲಾದ ವಾಹನ ಅಡ್ಡಾದಿಡ್ಡಿ ಓಡಾಢಿ ದಢಕ್ಕನೆ ನಿಲ್ಲುವಂತೆ ಈ ಮಳೆಯ ಆರೋಹಣ ಅವರೋಹಣ. ಆ ಮಳೆಯ ಸದ್ದನ್ನು ಅನುಕರಣೆ ಮಾಡಲಾಗುವುದಿಲ್ಲ. ಘನಸ್ವನಾದಿ ಧ್ವನಿಯಿದು. ಧ್ವನಿಯನ್ನು ಅನುಭವಿಸಬಹುದಷ್ಟೆ. ಆದರೆ ಅನುಕರಣೆ ಮಾಡಲಾಗುವುದಿಲ್ಲ.

ಇಷ್ಟು ಜೋರಿನ ಮಳೆ ಬಂದರಂತೂ ಚಿಕ್ಕ ಚಿಕ್ಕ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತವೆ. ಪ್ರವಾಸಿಗರಿಗೆ ವಾರಾಂತ್ಯದ ಮಸ್ತಿಗೆ ಹಾಟ್ ಸ್ಪಾಟ್‌ಗಳು. ಆದರೆ ಸ್ಥಳೀಯರಿಗೆ ಅಕ್ಷರಶಃ ಕೋಲ್ಡ್ ಸ್ಪಾಟ್. ಮನೆಯಿಂದ ಹೊರಬರಲಾಗದು. ಚಳಿ ಎಂದರೆ ಚಳಿ. ಎಲ್ಲಾ ವಸ್ತುಗಳ ಮೇಲೆಯೂ ಬೂಸ್ಟ್ ಬೆಳೆದು ಬೂದಿ ಬೆಳೆದಂತೆ ಕಾಣುವವು. ಭಾರೀ ಮಳೆಯ ಕಾರಣಕ್ಕೆ ಏರ್ಪಡುವ ಕಿರು ಜಲಪಾತಗಳಲ್ಲಿ ಮಡಿಕೇರಿ- ಮಂಗಳೂರು ರಸ್ತೆಯಲ್ಲಿರುವ ಜೋಡುಪಾಲವೂ ಒಂದು. (ಜೋಡುಪಾಲ ಎಂದರೆ ಕಿರು ಪ್ರದೇಶವನ್ನು ಜೋಡಿಸುವ ಸಂಕ ಎಂದಾಗುತ್ತದೆ) ಮಳೆಗಾಲದಲ್ಲಿ ಇದರ ವೈಭವವೇ ವೈಭವ. ಸುಮಾರು ಇನ್ನೂರು ಮೀಟರ್ ಎತ್ತರದಿಂದ ನೀರು ಧುಮುಕುತ್ತದೆ. ಅಪಘಾತ ವಲಯದಲ್ಲಿರುವ ಗ್ರಾಮಗಳಲ್ಲಿ ಇದೂ ಜೋಡುಪಾಲವೂ ಒಂದು. ಮಳೆ, ಗುಡ್ಡಕುಸಿತ, ಅಪಘಾತ ಮುಂತಾದ ಸಂಚಲನಗಳಿಂದ ಈ ಗ್ರಾಮ ಇನ್ನೂ ಚೇತರಿಸಿಕೊಳ್ಳುವುದರಲ್ಲಿಯೇ ಇದೆ. ಪಾಲ ಅಂದರೆ ಸಂಕ / ಕಾಲುಸಂಕ ಅರ್ಥಾತ್ ಚಿಕ್ಕ ಸೇತುವೆ ಎಂದರ್ಥ. ಊರ ಮುಂದಿನ ಅರಳಿಕಟ್ಟೆಯಲ್ಲಿ ಕುಳಿತು ಕೆಲವರು ಹರಟೆ ಹೊಡೆಯುವಂತೆ ಈ ಪಾಲಗಳ ಮೇಲೆ ಕುಳಿತು ಹರಟೆ ಹೊಡೆಯುವವರು ಇರುತ್ತಿದ್ದರು. ಇಂಥ ಲೆಕ್ಕವಿಲ್ಲದಷ್ಟು ಪಾಲಗಳು ಕೊಡಗಿನ ಎಲ್ಲಾ ಕಡೆ ಸಿಗುತ್ತವೆ.

ಪ್ರೈವೇಟ್ ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವಾಗ ಕಂಡಕ್ಟರಿಗೆ ಟಿಕೇಟಿಗಾಗಿ ಹಣಕೊಟ್ಟ ಪ್ರಯಾಣಿಕರು “ನೀರ್ಕೊಲ್ಲಿ ಒಂದು” ಎಂದರಂತೆ. ಅದಕ್ಕೆ ಕಂಡಕ್ಟರ್ “ಬೆಂಕಿಕೊಳ್ಳಿ ಬೇಡ್ವ” ಎಂದಿದ್ದು ದೊಡ್ಡ ಗಲಾಟೆಗೆ ಕಾರಣವಾಗಿತ್ತು ಎಂದು ಅದೇ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಗೆಳತಿ ಸುಜಾತ ಹೇಳಿದ್ದು ನೆನಪಾಯಿತು. ಕೊಲ್ಲಿ ಎಂದರೆ ಕಿರಿದಾದ ಜಾಗದಲ್ಲಿ ಹರಿಯುವ ನೀರು ಅರ್ಥಾತ್ ಎರಡು ಹಿರಿದಾದ ಬಂಡೆಗಳ ನಡುವಿನ ಕಿರಿದಾದ ಜಾಗ. ಅದೇ ಬೆಟ್ಟಗಳ ನಡುವಿನ ಕಿರಿದಾದ ಜಾಗ ಕಣಿವೆ ಆಗುತ್ತದೆ. ಕುಶಾಲನಗರ ಸಮೀಪದ ಕಣಿವೆ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ಬಹಳ ಪ್ರಸಿದ್ಧ. ಹಾಗೆ ಕಾವೇರಿ ನದಿ ಹಾರಂಗಿ ಜಲಾಶಯದಿಂದ ಕೆ.ಆರ್.ಎಸ್ ನತ್ತ ಸಾಗುವುದು ಇಲ್ಲಿಯೇ. ಕೊಲ್ಲಿ ನಾಮಾಂತ್ಯ ನೀರ್ ಕೊಲ್ಲಿ, ಕೋವರ್ ಕೊಲ್ಲಿ ಎಂಬ ಸ್ಥಳಗಳು ಕೊಡಗಿನಲ್ಲಿವೆ. (ಕೊಳ್ಳಿ ಪದವನ್ನು ನಾಮಪದದಲ್ಲಿ ಪ್ರಯೋಗಿಸಿದರೆ ಉರಿಯುತ್ತಿರುವ ಮರದ ಕೊರಡು ಎಂದಾದರೆ ಕ್ರಿಯಾಪದದಲ್ಲಿ ಕ್ರಯ ಎಂಬರ್ಥವನ್ನು ಸೂಚಿಸುತ್ತದೆ). ಇಂಥ ಸುಂದರ ಸ್ಥಳಗಳಲ್ಲಿ ಚುಮು ಚುಮು ಚಳಿಯಲ್ಲಿ ಫ್ರೆಶ್ ಕಾಫಿ ಹೀರುವುದೇ ಸುಖ. ಅಂದಹಾಗೆ ಮನೆ ಮನೆಯ ಅನುಭವಗಳನ್ನು ಹೇಳುವುದಾದರೆ ಕಾಫಿ ಹಣ್ಣನ್ನು ಒಣಿಗಿಸಿ ಪಲ್ಪ್ ಮಾಡಿ ಬೇಳೆ ಮಾಡಿಕೊಂಡು ಮರಳಿನ ಜೊತೆ ಹುರಿದು ಒರಳಲ್ಲಿ ಕುಟ್ಟಿ ಇಲ್ಲವೆ ಮಿಕ್ಸಿಯಲ್ಲಿ ಪುಡಿ ಮಾಡುವ ಕಾಫಿ ಘಮವೇ ಬೇರೆ ಇರುತ್ತದೆ. ಆದರೆ ರುಚಿ ಕಡಿಮೆ. ಚಿಕೋರಿ ಮಿಶ್ರಣವಾದಾಗಲೇ ಕಾಫಿಯ ಸ್ವಾದ ಸಿಗುವುದು. ಮಲೆನಾಡಿನ ಅಮೃತ ಅಂದರೆ ಕಾಫಿ ಅಲ್ವೆ!

ಕೊರೆಯುವ ಮೈ ಚಳಿ ಬಿಡಿಸಲು ಸುಖೋಷ್ಣ ಸ್ಥಿತಿಯಲ್ಲಿರುವ ಹಿತವಾದ ಪರಿಮಳ ಬೀರುವ ಕಾಫಿ ಬೇಕು! ಇರಬೇಕು! ಹಾಗಂತ ಇರಲೇಬೇಕು ಎಂದು ಹೇಳಲಾರೆ ಆಯ್ಕೆ ನಿಮಗೆ ಬಿಟ್ಟಿದ್ದು. ಕಾಫಿ ತನ್ನ ಪರಿಮಳ ಮತ್ತು ಬಣ್ಣದಿಂದ ಫೇಮಸ್. ಹಾಗಾಗಿ ಕಡು ಕಂದು ಬಣ್ಣವನ್ನು ಕಾಫಿ ಕಲರ್ ಅಥವಾ ಕಾಫಿಬ್ರೌನ್ ಎಂದು ಕರೆಯುವುದು. ಯುಗಾದಿ ಕಳೆದ ನಂತರ ಬರುವ ಮಳೆಯಿಂದ ಕಾಫಿ ಹೂ ಅರಳುತ್ತದೆ, ಅದರ ಪರಿಮಳವೇ ಚೇತೋಹಾರಿ. ಹೂವಿಂದ ಮೊದಲ್ಗೊಂಡು ಅರೋಮ್ಯಾಟಿಕ್ ಕಾಫಿಯವರೆಗೆ ಅಂದರೆ ಕಾಫಿ ಹೂ, ಕಾಫಿ ಹಣ್ಣು, ಕಾಫಿ ಕೊಯ್ಲು, ಕಾಫಿಕಣ, ಕಾಫಿ ಪಲ್ಪ್, ಕಾಫಿ ಬೇಳೆ, ರೊಬೋಸ್ಟ, ಪಾರ್ಚ್ಮೆಂಟ್, ಚೆರ್ರಿ, ಕಾಫಿ ಪ್ಲ್ಯಾಂಟರ್, ಕಾಫೀ ಪ್ಲಾಂಟೇಶನ್, ಕಾಫಿ ಬೋರ್ಡ್, ಕಾಫಿ ಕ್ಯೂರಿಂಗ್ ಪದಗಳನನ್ನೇ ಕೇಳಿ ಬೆಳೆದ ಕಾಫಿ ಮಂದಿ ನಾವು ಅಂದರೆ ತಪ್ಪಿಲ್ಲ. ನನ್ನ ಪ್ರಕಾರ ಕಾಫಿ ಅಂದರೆ ಅದೊಂದು ಕಂಫರ್ಟ್. ಹೆಚ್ಚು ಮಾತನಾಡುವವರು, ಹಾಡುಗಾರರು, ಪದೇ ಪದೇ ಕಾಫಿ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ.

ಯಾರಾದರೂ ಮಾತಿಗೆ ಸಿಕ್ಕರೆ ಕಾಫಿ ಆಯಿತ? ಸಂಜೆ ಕಾಫಿಗೆ ಏನು? ಎನ್ನುತ್ತಾರೆಯೇ ವಿನಃ ಟೀ ಆಯಿತ ಎನ್ನುವುದಿಲ್ಲ. ಕಾಫಿ ಬ್ರೇಕ್‌ನಂತೆ ಟೀ ಬ್ರೇಕ್ ಪದವೂ ಇದೆ ಒಪ್ಪಿಕೊಳ್ಳುತ್ತೇನೆ. ಕ್ಯಾರೆಟ್ -ಬಿಟ್ರೂಟ್, ಜಹಾಂಗಿರ್- ಜಿಲೇಬಿ ಅನ್ನುವಂತೆ ಕಾಫಿಯ ಹೆಸರು ಟೀ ಹೆಸರಿನ ಜೊತೆಗೆ ಕೇಳಿ ಬರುತ್ತದೆ. ಕಾಫಿ ಕುಡಿಯುವುದಕ್ಕೂ, ಹೀರುವುದಕ್ಕೂ, ಸವಿಯುವುದಕ್ಕೂ ವ್ಯತ್ಯಾಸವಿದೆ. ಕಾಫಿ ಕಪ್‌ಗಳಲ್ಲಿ ಎಷ್ಟು ವಿಧ! ಸ್ಟೀಲ್, ಹಿತ್ತಾಳೆ, ಬೆಳ್ಳಿ ಪಿಂಗಾಣಿ, ಗಾಜು, ಪೇಪರ್‌ಗ್ಲಾಸ್, ಪ್ಲಾಸ್ಟಿಕ್ ಗ್ಲಾಸ್ ಇತ್ಯಾದಿ ಇತ್ಯಾದಿ. ಮಲೆನಾಡಲ್ಲಿ ಇರುವವರೆಗೂ ನಮಗೆ ಇವುಗಳಲ್ಲಿ ಕಾಫಿ ಕುಡಿದು ಅಭ್ಯಾಸವಿರಲಿಲ್ಲ. ಮಗ್‌ಗಳಲ್ಲಿ ಕುಡಿದು ಅಭ್ಯಾಸ. ಸ್ಟ್ರಾಂಗ್ ಕಾಫಿಯನ್ನಲ್ಲ ಲೈಟ್ ಕಾಫಿಯನ್ನು. ಬೈಟು ಕಾಫಿ, ಬೈ ತ್ರಿ ಕಾಫಿ ಪದಗಳನ್ನು ಮಲೆನಾಡು ಬಿಟ್ಟಮೇಲೆ ನಾನು ಪರಿಚಯಿಸಿಕೊಂಡದ್ದು. ಮನುಷ್ಯನ ಆಲೋಚನಾ ರೀತಿಯನ್ನು, ಅನುಭವಿಸುವ ತಳಮಳವನ್ನು, ಮನಸ್ಥಿತಿಯನ್ನು ಅವರವರು ಕಾಫಿ ಕಪ್ ಹಿಡಿಯುವ ಬಗೆ, ಅದನ್ನು ಸೇವಿಸುವ ಬಗೆ ಇತ್ಯಾದಿಗಳಲ್ಲಿ ಅವರ ಅಧ್ಯಯನ ಮಾಡಬಹುದು. ಕುಡಿದು ಉಳಿಸಿದ ಕಾಫಿ ಕಪ್‌ನಿಂದ ಭವಿಷ್ಯವನ್ನೂ ಹೇಳುವುದಿದೆ. ಅರಾಮ ಕುರ್ಚಿ, ಶುಶ್ರಾವ್ಯವಾದ ಹಿನ್ನೆಲೆ ಸಂಗೀತ, ಪರಿಮಳ ಭರಿತವಾದ ಕಾಫಿ, ಜೊತೆಗೆ ಸುದ್ದಿ ಪತ್ರಿಕೆಯಿದ್ದ ಮಾರ್ನಿಂಗ್ ನಿಜ ಅರ್ಥದಲ್ಲಿ ಮಾರ್ನಿಂಗ್ ಸ್ವರ್ಗವೇ ಸರಿ!.

“ಕಾಫಿ ಮಾಡು”, “ಕಾಪಿ ಕಾಸು”, “ಕಾಫಿ ಇಡು”, “ಕಾಫಿ ಬೆರೆಸು”, “ಕಾಫಿ ಮಿಕ್ಸ್ ಮಾಡು”, ಎನ್ನುವ ಪದಗಳು ಕಾಫಿ ಮಾಡುವ ಬೇರೆ ಬೇರೆ ಪ್ರಕಾರಗಳನ್ನು ತಿಳಿಸುತ್ತದೆ. ಹಿಂದೆ ಕಾಫಿ ಪುಡಿಯನ್ನು ಬೇಯಿಸಿ ಹಾಲು ಹಾಕಿ ಸೋಸುತ್ತಿದ್ದರು, ನಂತರ ಕಾಫಿ ಪುಡಿಯನ್ನು ಲೋಟಕ್ಕೆ ಹಾಕಿ ಕುದಿಯುವ ಹಾಲನ್ನು ಹಾಕಿ ಒಂದು ನಿಮಿಷ ಬ್ಲೆಂಡ್ ಆಗಲು ಬಿಟ್ಟು ಸೋಸುವುದಿತ್ತು, ನಂತರ ಫಿಲ್ಟರ್ ಕಾಫಿ, ಈಗ instant ಕಾಫಿ ಪ್ಯಾಕನ್ನು ಕತ್ತರಿಸಿ ಬಿಸಿ ಹಾಲಿಗೆ ಸೇರಿಸುವುದು ಅಷ್ಟೇ. ಫಿಲ್ಟರ್ ಕಾಫಿ, ಹಾಲಲ್ಲಿ ಕಾಫಿ, ನೀರಲ್ಲಿ ಕಾಫಿ, ಏನೇ ಆದರೂ ಒಳ್ಳೆಯ ಕಾಫಿಗೆ ಒಳ್ಳೆಯ ಹಾಲೂ ಬೇಕು! ಹಸುವಿನ ಹಾಲಿಗಿಂತ ಎಮ್ಮೆ ಹಾಲಿನಲ್ಲಿ ಕಾಫಿ ಚೆನ್ನಾಗಿ ಆಗುತ್ತದೆ. ತೆಂಗಿನ ಹಾಲಿನಲ್ಲಿಯೂ ಕಾಫಿ ಮಾಡುತ್ತಾರೆ. ಕೆಲವರಿಗೆ ಹಾಲಲ್ಲಿ ಕೆನೆ ಇದ್ದರೆ ಖುಷಿ, ಇನ್ನಕೆಲವರಿಗೆ ಕೆನೆ ವರ್ಜ್ಯ. ಈಗ ಪ್ಯಾಕೆಟ್ ಹಾಲಿನ ಕಾಫಿ! ಹಾಲಿನ ಪೌಡರಿನ ಕಾಫಿ! ಇನ್ನು ಸುಲಭವಾಗಿ ಕಾಫಿಯೇ ಟೆಟ್ರಾ ಪ್ಯಾಕ್‌ಗಳಲ್ಲಿ ಬಂದಿವೆ. ಕಾಫಿ ವಿಚಾರದಲ್ಲಿ ಇನ್ನು ಎತ್ತರಕ್ಕೆ ಏರಲಾರೆವೇನೋ?

ಮತ್ತೆ ಬ್ಲ್ಯಾಕ್ ಕಾಫಿ ಅದೇ ಬರಗಾಫಿ ಅನ್ನುತ್ತಾರಲ್ಲ ಅಲ್ಲಿಗೆ ಬಂದಿದ್ದೇವೆ. ಹಿಂದೆ ಸರಿಸುಮಾರು ಎಲ್ಲಾ ಮಲೆನಾಡಿನ ಮನೆಗಳಲ್ಲಿ ಬೆಲ್ಲ ಕಾಫಿ ಪುಡಿ ಹಾಕಿದ ಕಾಫಿ ಇದ್ದೇ ಇರುತ್ತಿತ್ತು. ಅದೆ ಈಗ ಬ್ಲ್ಯಾಕ್ ಕಾಫಿ ಆಗಿದೆ, ಫ್ಯಾಷನ್ ಕಾಫಿ ಆಗಿದೆ. ಅದರಲ್ಲೂ ಆರ್ಗ್ಯಾನಿಕ್ ಬೆಲ್ಲ ಹಾಕಿದ ಖಾಲಿ ಕಾಫಿ ಈಗಿನ ಟ್ರೆಂಡ್. ಮನೆಯ ಆಚೆಯ ಒಲೆಯ ಮೇಲೆ ಮರಳು ಬಿಸಿ ಮಾಡಿ ಕಾಫಿ ಬೇಳೆ ಹುರಿಯುತ್ತಿದ್ದರು. ಇಲ್ಲಿ ರನ್ನನ ಗದಾಯುದ್ಧದಲ್ಲಿ ಬರುವ “ಪುರಿಗಡಲೆಗೆ ಮರಳ್ ಕಾಯ್ವ ತೆರದಿ” ಎಂಬ ಮಾತು ನೆನಪಾಗುತ್ತದೆ. ಇಲ್ಲಿ “ಕಾಫಿ ಬೀಜ ಹುರಿಯಲ್ ಮರಳ್ ಕಾಯ್ವ ತೆರದಿ” ಅನ್ನಬಹುದೇನೋ… ಕಾಫಿ ಬೇಳೆಯನ್ನು ಹದವಾಗಿ ಹುರಿದು ಒರಳಲ್ಲಿ ಕುಟ್ಟಿ ಪುಡಿ ಮಾಡಿ ಜರಡಿ ಹಿಡಿದು ಡಬ್ಬಗಳಲ್ಲಿ ತುಂಬಿಸುತ್ತಿದ್ದ ದಿನಗಳು ಸರಿದು ಓಬಿರಾಯನ ಕಾಲವಾಗಿದೆ. ನಂತರ ಅದೇ ಹೋಂಮೇಡ್ ಪುಡಿಗೆ ಚಿಕೋರಿ ತಂದು ಬೆರೆಸಿಕೊಳ್ಳುತ್ತಿದ್ದ ದಿನಗಳು. ಅವೂ ಕಳೆದು ಕಾಫಿ ಪುಡಿ ಮಿಲ್ಲಿಗೆ ಬೇಳೆಯನ್ನು ಕೊಟ್ಟು ನೈಸ್ ಇಲ್ಲವೆ, ಫಿಲ್ಟರ್ ಕಾಫಿ ಪುಡಿ ತರುತ್ತಿದ್ದ ದಿನಗಳೂ ಸರಿದಿವೆ. ಈಗ ಬ್ರ್ಯಾಂಡ್ ನೇಮ್ ನೋಡುವ, ಆಫರ್ ಇರುವ ಕಾಫಿ ಪುಡಿ, instsnt ಕಾಫಿ ಪುಡಿ ತರುವ ದಿನಗಳಿಗೆ ಬಂದಿದ್ದೇವೆ. ಅದೂ ಹೋಗಲಿ ಈಗ ರೆಡಿ ಡಿಕಾಕ್ಷನ್ ಕೂಡ ಸಿಗುತ್ತದೆ..

“ತೊಂಬತ್ಮೂರು ಡಿಗ್ರಿಯಲ್ಲಿ ಬಿಸಿ ಮಾಡಿದ ನೀರಿಗೆ..” ಭಯಬೇಡ ಕಾಫಿ ಮಾಡಲು ಥರ್ಮೋಮೀಟರ್ ಬೇಡ! ಸರಿಸುಮಾರು ತೊಂಬತ್ಮೂರು ಡಿಗ್ರಿಯಲ್ಲಿ ಕುದಿಸಿದ ನೀರಿಗೆ ಕಾಫಿ ಪುಡಿ, ಸ್ವಲ್ಪಸಕ್ಕರೆ ಹಾಕಿ ಸ್ಟವ್ ಆಫ್ ಮಾಡಿ ತೆಗೆದ ಡಿಕಾಕ್ಷನ್‌ಗೆ ಹಾಲು ಬೆರೆಸಿದರೆ ಕಾಫಿ ಬಹಳ ಚೆನ್ನಾಗಿರುತ್ತದೆ. ಇನ್ನು ಕಾಫಿ ಫಿಲ್ಟರ್‌ಗೆ ಪುಡಿ ಹಾಕಿ ನೀರು ಹಾಕುವುದರ ಮೊದಲು ಎರಡು ಚಿಟಿಕೆ ಸಕ್ಕರೆ ಸೇರಿಸಿ ನಂತರ ಇಳಿದ ಡಿಕಾಕ್ಷನ್ ಬಳಸಿದರೆ ಕಾಫಿ ಬಹಳ ಚೆನ್ನಾಗಿರುತ್ತದೆ. ಹಾಲಿನಲ್ಲಿ ಮಾಡಿದ ಕಾಫಿಯನ್ನು ತಕ್ಷಣ ಕುಡಿಯಬೇಕು ಮತ್ತೆ ಬಿಸಿ ಮಾಡಿದರೆ ನಾಲಗೆ ಸುಡುತ್ತದೆ ರುಚಿ ಗೊತ್ತಾಗುವುದಿಲ್ಲ.

ನಾನು ಎರಡನೆ ಮಗುವಿನ ಹೆರಿಗೆಗೆ ಹೊರಡುವ ಸಲುವಾಗಿ ಆಸ್ಪತ್ರೆಗೆ ಬೇಕಾದ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡುವಾಗ ನೆನಪಿಂದ ತೆಗೆದಿಟ್ಟ ವಸ್ತಗಳು ಅಂದರೆ ಸಕ್ಕರೆ, ಕಾಫಿ ಪುಡಿ. ಕಾಫಿ ಮಾಡಲೆಂದೇ ಖರೀದಿಸಿದ ಹೊಸ ಪಾತ್ರೆ. ಆಸ್ಪತ್ರೆಗೆ ‘ಮಗು’ ಹುಟ್ಟಿದೆ ಎಂದು ಬರುವ ಜನರಿಗಿಂತ ‘ಮಗ’ ಹುಟ್ಟಿದ್ದಾನೆ ಎಂದೋಡಿ ಬರುವ ಜನರೆ ಹೆಚ್ಚಾದಾಗ ಅವರನ್ನು ತಣಿಸಿದ್ದು ಹೋಮ್ ಮೇಡ್ ಕಾಫಿಯಲ್ಲ! ಹಾಸ್ಪಿಟಲ್ ಮೇಡ್ ಕಾಫೀ…!

ಪ್ರೈವೇಟ್ ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವಾಗ ಕಂಡಕ್ಟರಿಗೆ ಟಿಕೇಟಿಗಾಗಿ ಹಣಕೊಟ್ಟ ಪ್ರಯಾಣಿಕರು “ನೀರ್ಕೊಲ್ಲಿ ಒಂದು” ಎಂದರಂತೆ. ಅದಕ್ಕೆ ಕಂಡಕ್ಟರ್ “ಬೆಂಕಿಕೊಳ್ಳಿ ಬೇಡ್ವ” ಎಂದಿದ್ದು ದೊಡ್ಡ ಗಲಾಟೆಗೆ ಕಾರಣವಾಗಿತ್ತು ಎಂದು ಅದೇ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಗೆಳತಿ ಸುಜಾತ ಹೇಳಿದ್ದು ನೆನಪಾಯಿತು.

ಆಗ ನನಗೆ ಆಗಿದ್ದು ಸಿಝೇರಿಯನ್ ಹೆರಿಗೆ. ಕಾರಣ ಏನು ಗೊತ್ತಿಲ್ಲ? ವಿಪರೀತ ತಲೆನೋವು ಬರಲು ಪ್ರಾರಂಭವಾಗಿತ್ತು. ಆಗ ನನ್ನ ಡಾಕ್ಟರ್ ಅರಿವಳಿಕೆ ತಜ್ಞರಲ್ಲಿ ನನ್ನ ಸಮಸ್ಯೆಯ ಬಗ್ಗೆ ಚರ್ಚಿಸಿದರು. ಅವರು “ಸ್ಟ್ರಾಂಗ್ ಕಾಫಿ ಕುಡಿಯಿರಿ” ಎಂದರು. ನನಗೋ ಬಹಳ ಖುಷಿಯಾಯಿತು! (ಸಿಜೇರಿಯನ್‌ ಹೆರಿಗೆನೋ ಇಲ್ಲ ನಾರ್ಮಲ್ಲೋ ಹೆರಿಗೆಗೆ ಮುನ್ನ ಸ್ಟ್ರಾಂಗ್ ಕಾಫಿ ಕುಡಿಯುವುದು ಉತ್ತಮ ಎನ್ನುತ್ತಾರೆ). ಹಾಗೆ ಅಲ್ಲಿದ್ದ ವೈದ್ಯ ಪ್ರಶಿಕ್ಷಣಾರ್ಥಿಯನ್ನು “ಕಾಫಿಯಲ್ಲಿ ಏನಿರುತ್ತದೆ?” ಅಂದರೆ ಅವರು “ಕಾಫಿಯಲ್ಲಿ ಡಿಕಾಕ್ಷನ್ ಇರುತ್ತೆ” ಅಂದರು. ನಾನು ತಲೆನೋವಿನ ಭಾರದಲ್ಲೇ “ಕೆಫೆನ್” ಅಂದೆ ಅವರಿಗೆ ಕೇಳಿಸಲಿಲ್ಲ. ಕಾಫಿಯಲ್ಲಿ ಕೆಫೇನ್ ಇರುತ್ತದೆ” ಎಂದು ಅರಿವಳಿಕೆ ತಜ್ಞರು ಹೇಳಿ ಹೊರಟರು.

ಅತೀ ಅದರೆ ಯಾವುದೂ ವಿಷವೇ ಸರಿ! ಕಾಫಿಯಲ್ಲಿಯೂ ಆರೋಗ್ಯ ಸಹಾಯಕ, ಹಾಗು ಆರೋಗ್ಯ ಕೆಡಿಸುವ ಗುಣಗಳಿವೆ. ಕುಡಿಯುವ ಕಾಫಿಗೆ ಸ್ವಲ್ಪ ಜಜ್ಜಿದ ಶುಂಟಿ ಹಾಕುವುದರಿಂದ ಕೆಮ್ಮು, ನೆಗಡಿ ಕಡಿಮೆಯಾಗುತ್ತದೆ. “ಅಮ್ಮಾ ಸ್ವಲ್ಪ ಕಾಫಿ…, ಒಂದೊಟ್ಟು ಕಾಫಿ ಸಿಗಬಹುದ…..” ಎಂದು ಕೆಲವರು ಕೇಳುತ್ತಾರೆ. ಅಂದರೆ ಕಾಫಿಗೆ ಒತ್ತಡವನ್ನು ತಗ್ಗಿಸುವ ಶಕ್ತಿ ಇದೆ ಎಂದಾಯಿತಲ್ಲವೇ. ಪ್ರತಿ ದಿನ ಮೂರು ಕಪ್‌ಗಳಷ್ಟು ಕಾಫಿ ಸೇವನೆ ಮಾಡಿದರೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆ, ಆರು ಕಪ್‌ಗಳಿಗಿಂತ ಹೆಚ್ಚು ಕುಡಿದರೆ ಪಾರ್ಶ್ವವಾಯುವಿನ ಸಾಧ್ಯತೆ ಕಡಿಮೆ ಎನ್ನುತ್ತಾರೆ. ಇದಕ್ಕೆ ಕಾರಣ ಕಾಫಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು. ಇತ್ತೀಚೆಗೆ ಗ್ರೀನ್ ಕಾಫಿ ಕೂಡ ಬಂದಿದೆ. ವ್ಯಾಯಾಮದ ನಂತರ ಕಾಫಿ ಕುಡಿದರೆ ಸ್ನಾಯು ನೋವು ಕಡಿಮೆ ಆಗುತ್ತದೆ ಎನ್ನುತ್ತಾರೆ. ಇನ್ನು ಎಲ್ಲರಿಗು ತಿಳಿದಿರುವಂತೆ ತಲೆ ನೋವು ಕೂಡ ಕಡಿಮೆಯಾಗುತ್ತದೆ. ಒಂದು ಹಂತಕ್ಕೆ ನೈಸರ್ಗಿಕ ನೋವು ನಿವಾರಕ ಈ ಕಾಫಿ ಎಂದರೂ ತಪ್ಪಿಲ್ಲ.

ಇಷ್ಟೆಲ್ಲಾ ಮಾತುಗಳನ್ನು ವಿಶ್ವಕಾಫಿ ದಿನವನ್ನು ನೆನಪಿನಲ್ಲಿಟ್ಟುಕೊಂಡೇ ಆಡಿದ್ದು. ಅಕ್ಟೋಬರ್ ಒಂದು ಎಲ್ಲರಿಗೂ ತಿಳಿದಿರುವಂತೆ ವಿಶ್ವ ಕಾಫಿ ದಿನ. ಈ ದಿನಕ್ಕೂ ಕೊಡಗಿಗೂ ಅವಿನಾಭಾವ ಸಂಬಂಧ. ಕರ್ನಾಟಕ ಮೊದಲ್ಗೊಂಡು ವಿದೇಶಗಳಲ್ಲಿಯೂ ಇದನ್ನು ವ್ಯಾಪಕವಾಗಿ ಕಾಫಿಯನ್ನು ಪರಿಚಯ ಮಾಡಿದ ಕೀರ್ತಿ ಓರ್ವ ಮಹಿಳೆಗೆ ಸೇರುತ್ತದೆ. ಇವರು ಕಾಫಿಯೊಂದಿಗೆ ತಮ್ಮ ಹೆಸರನ್ನು ಅನ್ವರ್ಥವಾಗಿಸಿಕೊಂಡವರು. ಅವರೆ ಕೊಡಗಿನ ಸೋಮವಾರಪೇಟೆಯ ಸಾಕಮ್ಮ. “ಕಾಫಿಪುಡಿ ಸಾಕಮ್ಮ”. ಅಲ್ಲದೆ ಇವರ ಶಾಪ್ “ಸಾಕಮ್ಮಾಸ್ ಕಾಫಿ” ಎಂದೆ ಹೆಸರು ಮಾಡಿದೆ. ಕಾಫಿ ತೋಟಗಳ ನಡುವಿನ ಮನೆಗಳ ಮುಂದೆ ದೊಡ್ಡ ದೊಡ್ದ ಕಾಫಿ ಕಣಗಳೆ ಇರುತ್ತವೆ. ಭತ್ತ, ಕಾಳುಮೆಣಸು ಇತ್ಯಾದಿಗಳನ್ನೂ ಒಣಗಿಸಲು ಇವು ಸಹಾಯಕಾರಿ. ಇಂಥ ಕಣಗಳ ಕಾಫಿಗೆ ಕಳ್ಳರ ಕಾಟವೂ ಹೆಚ್ಚು. ಕಾಫಿ ಬೆಳೆಗಾರರಿಗೆ ಕಣಕಣದಲ್ಲೂ ಕಾಫಿಯಾದರೆ ಕಾಫಿ ಪ್ರಿಯರಿಗೆ ಮೈಯ ಕಣಕಣದಲ್ಲೂ ಕಾಫಿಯ ಸೆಳೆತ ಇರುತ್ತದೆ. ಕಾಫಿಯನ್ನು ಕಾಪಿ ಎನ್ನುವುದು ಗ್ರಾಮ್ಯ ಪ್ರಯೋಗ. ಚಿಕ್ಕವರಿರುವಾಗ ಪರೀಕ್ಷೆಗಳಲ್ಲಿ ಪಕ್ಕದವರು ಬರೆದ ಉತ್ತರವನ್ನು ಯಾರಾದರೂ ನೋಡಿ ಬರೆದರೆ “ಟೀಚರ್ ಟೀಚರ್ ಕಾಪಿಚಟ್ ಮಾಡದು” ಎಂದು ದೂರು ಹೇಳುತ್ತಿದ್ದೆವು. ‘ಕಾಪಿಚಟ್’ ಅಲ್ಲ ‘ಕಾಪಿಚಿಟ್’ ಸರಿಯಾದ ಪದಪ್ರಯೋಗ ಅನ್ನಿಸುತ್ತದೆ. ಹಾಗಿ ‘ಕಾಪಿ ಪುಸ್ತಕ’, ‘ಕಾಪಿ ರೈಟಿಂಗ್’ ಎನ್ನುವ ಮಾತುಗಳೂ ಇವೆ. ಇದನ್ನೆ ಮಂಗಳೂರು ಕಡೆಯವರು ‘ಕೊಪಿ ಪುಸ್ತಕ’, ‘ಕೊಪಿರೈಟಿಂಗ್’ ಎನ್ನುವುದಿದೆ.

ಕಾಫಿಬೆಳೆಗೆ ಬೆಲೆ ಬೇಕು, ವಿಪರ್ಯಾಸವೆಂಬಂತೆ ಬೆಲೆಯಿದ್ದಾಗ ಕಾಫಿ ಇಳುವರಿಯೇ ಕೆಲವೊಮ್ಮೆ ಇರುವುದಿಲ್ಲ. ವರ್ಷವಿಡಿ ಕಳೆ, ಗೊಬ್ಬರ, ಕೀಟನಾಶಕ ಸಿಂಪಡನೆ, ಕೊಯ್ಲು, ಸಂಸ್ಕರಣೆ ಮುಂತಾಗಿ ಉದ್ಯೋಗ ನೀಡುವ ಬೆಳೆ ಕಾಫಿ. ಆದರೆ ಮಳೆಯ ಅನಿಶ್ಚಿತತೆ, ಪ್ರಾಕೃತಿಕ ವಿಕೋಪ, ಸೂಕ್ತ ಬೆಲೆ ಇಲ್ಲದೆ ಇರುವುದು ಕಾರ್ಮಿಕರ ಸಮಸ್ಯೆ. ಕಾಡಾನೆ ಹಾವಳಿ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲಾ ಅಯಾಮಗಳನ್ನು ಯೋಚಿಸಿ ಈ ನಿಟ್ಟಿನಲ್ಲಿ ಚರ್ಚೆಗಳಾಗಬೇಕು ಶಾಶ್ವತ ಪರಿಹಾರಗಳಾಗಬೇಕು.

ಅಕ್ಟೋಬರ್ 2ನೆ ತಾರೀಖು ಬಂದಿತೆಂದರೆ ಗಾಂಧಿ ಜಯಂತಿ ಶಾಲೆಯಲ್ಲಿ ಏರ್ಪಡಿಸುತ್ತಿದ್ದ ಸರ್ವಧರ್ಮ ಪ್ರಾರ್ಥನೆ ನೆನಪಾಗುತ್ತದೆ. ಮಡಿಕೇರಿಯ ಸಂತಮೈಕಲರ ಶಾಲೆ ಪಕ್ಕದಲ್ಲಿಯೇ ಇರುವ ಗಾಂಧಿ ಮೈದಾನ ಜಿಲ್ಲೆಯಲ್ಲಿ ನಡೆಯುವ ಹಲವು ಪ್ರಮುಖ ಸಮಾವೇಶಗಳಿಗೆ ಸಾಕ್ಷಿಯಾಗುತ್ತದೆ. ದಸರಾದ ಮುಖ್ಯ ಕಾರ್ಯಕ್ರಮ ಇಲ್ಲಿಯೇ. ದೀಪಾವಳಿ ಅದರಲ್ಲೂ ಹುತ್ತರಿ ಹಬ್ಬದ ಪಟಾಕಿ ಅಂಗಡಿಗಳು ಬರುವುದು ಇಲ್ಲಿಗೇ. ಗಾಂಧಿಯನ್ನು ‘ರಾಷ್ಟ್ರಪಿತ’ ಮತ್ತು ‘ಮಹಾತ್ಮ’ ಎಂದು ಕರೆದವರು ರಬೀಂದ್ರನಾಥ ಟ್ಯಾಗೋರರು ಎಂದು ಬಹಳ ವರ್ಷಗಳ ನಂತರ ತಿಳಿದುಕೊಂಡೆ. ‘ಬಾಪು’ ಎಂದು ಕರೆದವರು ಸುಭಾಶ್ ಚಂದ್ರ ಬೋಸ್. ಬುದ್ಧ, ಬಸವ ಗಾಂಧಿ ಎಂದು ಮಹಾತ್ಮರ ಸಾಲಿಗೆ ಸೇರಿರುವ ನಮ್ಮ ನಾಯಕರು ನಿತ್ಯವೂ ನೆನಪಾಗುತ್ತಾರೆಯೇ? ಖಂಡಿತಾ ಇಲ್ಲ! ಕೆಲವರಿಗೆ ಮಾತ್ರ ನೆನಪಾಗುತ್ತಾರೆ. ಆದರೆ ಎಲ್ಲರಿಗೂ ನೆನಪಾಗುವುದು ಅವರ ಜನ್ಮದಿನಗಳಂದು ಮಾತ್ರ. ಇದೊಂದು ಅಪಸವ್ಯ. ಕಾರಣ ನಮ್ಮಲ್ಲಿ ಮಹಾತ್ಮರ ಜಯಂತಿಗೆ ಸರ್ಕಾರಿ ರಜೆಗಳಿವೆ. ಮಹಾತ್ಮರ ಸಾಲಿಗೆ ಸೇರಿರುವ ಗಾಂಧಿ ಸ್ವಾತಂತ್ರ್ಯ ಬಂದು ಕೆಲವೇ ದಿನಗಳಲ್ಲಿ ಇಲ್ಲವಾದರು. ಛೇ! ಹೀಗಾಗಬಾರದಿತ್ತು ಇನ್ನೂ ಇರಬೇಕಿತ್ತು ಅಲ್ವೇ! ಜಗತ್ತಿನಲ್ಲಿ ಕಾಲಕಾಲಕ್ಕೆ ಜಗದ ಕೊಳೆ ತೆಗೆಯಲು ಮಹಾನ್ ಪುರುಷರ ಅವತಾರವಾಗಿದೆ. ಅವರು ಇರುವಷ್ಟು ಕಾಲ ಜಗತ್ತಿನಲ್ಲಿ ಕ್ರಾಂತಿಯೋಪಾದಿಯಲ್ಲಿ ಬದಲಾವಣೆಗಳಾಗುತ್ತಿರುತ್ತವೆ. ಅವರು ಅಳಿದ ನಂತರ ಕ್ರಾಂತಿಯ ಗತಿ ಅಧೋಗತಿಯೇ ಸರಿ!

ಅಹಿಂಸೆ, ಸತ್ಯಾಗ್ರಹ, ಸ್ವದೇಶಿ ಅಸಹಕಾರ, ಗ್ರಾಮ ರಾಜ್ಯ, ಹರಿಜನೋದ್ಧಾರ ಇತ್ಯಾದಿ ಪದಗಳು ಗಾಂಧೀಯಿಂದಲೆ ಹುಟ್ಟಿಕೊಂಡವು. ಅದನ್ನೆ “ಗಾಂಧಿಗಿರಿ’’ ಎಂದು ಕರೆಯುವುದು. ಆದರೆ ‘ಗಾಂಧಿ’ ಪದವೇ ವ್ಯಂಗ್ಯಕ್ಕೆ ಪರ್ಯಾಯವಾಗಿ ಬಳಕೆಯಾಗುತ್ತಿದೆ. ಯಾವ ಊರಿನಲ್ಲಿ ನೋಡಿದರೂ ಗಾಂಧಿ ವೃತ್ತಗಳು ಇರುತ್ತವೆ. ಗಾಂಧಿ ಬಜಾರ್ ಹೆಸರಿನ ವಾಣಿಜ್ಯ ಕೇಂದ್ರಗಳನ್ನು ಕಾಣಬಹುದು. ಎಂ.ಜಿ ರಸ್ತೆಗಳನ್ನು ಕಾಣಬಹುದು. ಆದರೆ ಆ ರಸ್ತೆ ಗಾಂಧಿಯ ತತ್ವಗಳಿಗೆ ಬಹುಪಾಲು ಇರುತ್ತದೆ. ಗಾಂಧಿನಗರ ಎಂಬ ಜನವಸತಿ ಪ್ರದೇಶಗಳನ್ನೂ ಕಾಣಬಹುದು. ಆದರೆ ಅವೆಲ್ಲ ಹೆಸರಿಗಷ್ಟೇ. ಅವರ ಆದರ್ಶಗಳನ್ನು ಸ್ವೀಕರಿಸುವುದಿರಲಿ, ಅಲ್ಲಲ್ಲಿ ಹಾಕಿದ ಅವರ ಫೊಟೋಗಳಿಗೂ ಅವಮಾನ ಮಾಡುತ್ತೇವೆ. ಯಾವಾಗಲೋ ಹಾಕಿದ ಹೂವಿನ ಹಾರ ಬಾಡಿ ಹೂವಿನ ಎಸಳುಗಳೆಲ್ಲಾ ಉದುರಿ ಕೇವಲ ದಾರ ಮಾತ್ರ ನೇತಾಡುತ್ತಿರುತ್ತದೆ. ಅದನ್ನೇ ನೋಡಿಕೊಂಡು ನಾವುಗಳು ಓಡಾಡುವುದು. ಇನ್ನು ಕೆಲವು ತಿಳಿಗೇಡಿಗಳು ಮೂಲ ಫೋಟೊವನ್ನೇ ವಿಕಾರ ಮಾಡಿರುತ್ತಾರೆ.

ದೇಶದ ಬಗ್ಗೆ ಗಾಂಧಿಗಿದ್ದ ಕನಸು, ನಂಬಿಕೆ ಭವಿಷ್ಯದ ಬಾಳ್ನೋಟ ನಮ್ಮಲ್ಲಿ ಈಗ ಇಲ್ಲ. ಮೃಗೀಯ ನಡವಳಿಕೆಗಳೇ ವೈಭವಿಕರಣಗೊಂಡಿವೆ. ಉಪಕಾರ ಮಾಡುವವರಿಗೆ ಉಪದ್ರವ ಕೊಡುವ ಜನ ನಾವು. ಗಾಂಧಿಯ ಕನಸುಗಳು ಸಾಕಾರಗೊಳ್ಳಬೇಕಾದರೆ ಅವರ ತತ್ವಗಳೇ ಕಾನೂನುಗಳಾಗಬೇಕಿದೆ. ಗಾಂಧಿಗೆ ನಾವು ಕೊಟ್ಟಿರುವ ಗೌರವೆಂದರೆ ಬರಿ ಹೆಸರಿನ ಕಡೆಗೆ“ಜಿ”(ಗಾಂಧೀಜಿ) ಎಂಬ ಗೌರವ ಸಂಭೋಧನೆಯಷ್ಟೇ, ನೋಟುಗಳಲ್ಲಿ ಅವರ ನಗುವಿನ ಚಿತ್ರವನ್ನು ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ಸಂಕೇತವಾಗಿ ಅವರು ಧರಿಸುತ್ತಿದಸ್ದ ಉರುಟು ಕನ್ನಡಕದ ಮಾದರಿಯನ್ನು ಅಚ್ಚು ಹಾಕಿದ್ದೇವೆ ಅಷ್ಟೇ. ಗಾಂಧೀಜಿಯ ಆಶ್ರಮದಲ್ಲಿದ್ದ ಮೂರು ಕೋತಿಗಳ ಕತೆ ಗೊತ್ತಿರುವಂಥದ್ದೆ. ಆ ಮೂರೂ ಗೊಂಬೆಗಳನ್ನು ತಂದು ಶೋಕೇಸ್‌ನಲ್ಲಿ ಇಟ್ಟುಕೊಂಡು ಧೂಳೂ ತೆಗೆಯುತ್ತೇವೆಯೇ ವಿನಃ ಗೊಂಬೆಗಳು ಬಿಂಬಿಸುವ ಆಶಯಗಳನ್ನು ಖಂಡಿತಾ ಪಾಲನೆ ಮಾಡುವುದಿಲ್ಲ. “ಹೇರಾಮ್” ಎಂಬ ಶಬ್ದ “ವೈಷ್ಣವೋ ಜನತೊ” ಗೀ ತೆ ಕೇವಲ ಆಚರಣೆಯ ಒಂದು ಭಾಗವಷ್ಟೇ ಆಗಿದೆ. ಗಾಂಧಿ ಜಯಂತಿ ಎಂದರೆ ಬಹುಪಾಲು ಮಧ್ಯವಾರ್ಷಿಕ ಪರೀಕ್ಷೆಯ ಕಾಲ. ದಸರ ರಜೆಗೋಸ್ಕರ ಕಾಯುತ್ತಿದ್ದ ಕಾಲ. ಮಡಿಕೇರಿ ದಸರ ತುಂಬಾ ವಿಶೇಷ. ಅಕ್ಟೋಬರ್ 17-18 ಇನ್ನೂ ವಿಶೇಷ ಜೀವ ನದಿ ಕಾವೇರಿ ಸಂಕ್ರಮಣ. ಈ ಎಲ್ಲಾ ವಿಷಯಗಳೊಂದಿಗೆ ಮುಂದಿನ ಸರಣಿಯಲ್ಲಿ ಭೇಟಿಯಾಗುವೆ.

About The Author

ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ