Advertisement
ಕಪ್ಪಡಿಯಲ್ಲಿ ಕಂಡ ಮುಖ: ಅಬ್ದುಲ್ ರಶೀದ್ ಅಂಕಣ

ಕಪ್ಪಡಿಯಲ್ಲಿ ಕಂಡ ಮುಖ: ಅಬ್ದುಲ್ ರಶೀದ್ ಅಂಕಣ

ಪ್ರತಿ ವರುಷ ಶಿವರಾತ್ರಿಯಿಂದ ಉಗಾದಿಯವರೆಗೆ ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕು ಚುಂಚನಕಟ್ಟೆಯ ಪಕ್ಕದಲ್ಲಿರುವ ಕಪ್ಪಡಿಯ ಕಾವೇರಿ ನದಿ ತೀರದಲ್ಲಿ ರಾಚಪ್ಪಾಜಿಯ ಪರಿಷೆ ನಡೆಯುತ್ತದೆ. ಈ ಪರಿಷೆಯಲ್ಲಿ ಸರಿದಾಡುವ ಯಾವ ಮುಖವನ್ನಾದರೂ ನೀವು ನಿಮ್ಮ ಮುಖಕ್ಕೆ ಅಂಟಿಸಿಕೊಂಡು ಓಡಾಡಬಹುದು. ನಿಮ್ಮ ಮುಖವನ್ನು ಯಾರ ಮುಖಕ್ಕೆ ಬೇಕಾದರೂ ಬದಲು ಮಾಡಿಕೊಳ್ಳಬಹುದು. ಇಲ್ಲಿರುವ ಒಬ್ಬ ಕುರುಡ, ಒಬ್ಬ ಕುಂಟ, ವಕ್ರ ಮೂಗಿನ ಒಬ್ಬಳು ಬಿಕ್ಷುಕಿ, ನದಿಯಲ್ಲಿ ಅದಾಗ ತಾನೇ ಮಿಂದು ಕಾರಣಿಕ ಪುರುಷನ ಪೀಠದವರೆಗೆ ಹೆತ್ತವರ ಕೈಯಿಂದ ಮಣ್ಣಲ್ಲಿ ಉರುಳಾಡಿಸಿಕೊಂಡು ಅಳುತ್ತಾ ಉರುಳು ಸೇವೆಗಯ್ಯುತ್ತಿರುವ ಒಂದು ಮಗು, ಅರ್ದಂಬರ್ದ ಭಂಗಿ ಸೇದಿ ತಾನೇ ಕಾರಣಿಕ ಪುರುಷ ಎಂದು ನಗುಬರಿಸುವ ನೃತ್ಯಗೈಯುತ್ತಿರುವ ಮುದುಕ- ಇವರಲ್ಲಿ ಯಾರನ್ನೂ ಬೇಕಾದರೂ ನೀವೇ ಅಂದುಕೊಂಡು ಇಲ್ಲಿ ಸುಮ್ಮನೆ ಇರಬಹುದು.

ಹೀಗೆ ಸುಮ್ಮನೆ ಇರಬಹುದಾದಂತ ಜಾಗದಲ್ಲೂ ಸುಮ್ಮನೆ ಇರಲಾಗುತ್ತಿಲ್ಲವಲ್ಲಾ ದೇವರೇ ಎಂದು ಕಂಡಕಂಡ ಮುಖಗಳ ಫೋಟೋಗಳನ್ನೂ ತೆಗೆಯುತ್ತಾ ನಾನೂ ಓಡಾಡುತ್ತಿದ್ದೆ. ಎಲ್ಲರೂ ನನ್ನನ್ನು ಆತಂಕದಿಂದ ನೋಡುತ್ತಿದ್ದರು. ಬಹುಶಃ ಅವರು ನನ್ನನ್ನು ಪೋಲೀಸು ಇಲಾಖೆ ನೇಮಿಸಿದ ಫೋಟೋಗ್ರಾಫರನಿರಬಹುದು ಎಂದುಕೊಂಡಿದ್ದರಿಂದ ಆ ಆತಂಕವು ಅವರ ಮುಖಗಳಲ್ಲಿ ಇನ್ನೂ ಹೆಚ್ಚಾಗಿ ಕಂಡುಬರುತ್ತಿತ್ತು. ಏಕೆಂದರೆ ನೂರಾರು ವರ್ಷಗಳಿಂದ ಅನೂಚಾನವಾಗಿ ನೂರಾರು ಕೋಳಿಗಳನ್ನೂ, ಆಡುಗಳನ್ನೂ, ಟಗರುಗಳನ್ನೂ ಬಲಿಕೊಡುವ ಪರಿಷೆಯಾಗಿತ್ತು ಅದು. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲೂ ಹಾಗೂ ಸರಕಾರೀ ಇಲಾಖೆಗಳಲ್ಲೂ ಉಂಟಾಗಿರುವ ಜಾಗೃತಿಯಿಂದಾಗಿ ಪ್ರಾಣಿ ಬಲಿ ಸಲ್ಲದೆಂದೂ, ಹಾಗೆ ಬೇಕೇಬೇಕೆಂದಾದರೆ ಎಲ್ಲಾದರೂ ದೂರದಲ್ಲಿ ಪ್ರಾಣಿಗಳನ್ನು ಬಲಿಕೊಡಬೇಕೆಂದೂ ಇಲ್ಲಿ ತರಬಾರದೆಂದೂ ಟಾಂಟಾಂ ಹೊಡೆಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ನಾನು ಅಲ್ಲಿ ತಲುಪಿದಾಗ ಮಧ್ಯಾಹ್ನದ ಹೊತ್ತು ಕುರುಚಲು ಗಿಡಗಳ ನೆರಳಿನಲ್ಲಿ ತೂಕಡಿಸುತ್ತಾ ಪೋಲೀಸರು ಕಾವಲು ಕಾಯುತ್ತಿದ್ದರು. ಆದರೂ ಅದೆಲ್ಲಿಂದಲೋ ಪಸರಿಸುವ ಬಾಡು ಬೇಯುವ ಪರಿಮಳಗಳು ಅವರ ಮೂಗಿನ ಹೊಳ್ಳೆಗಳನ್ನು ಜಾಗೃತಗೊಳಿಸುತ್ತಿದ್ದುದರಿಂದ ನಿದ್ದೆಯೂ ಬಾರದೆ ಅವರು ಪರಿತಪಿಸುತ್ತಿದ್ದರು.

ಈ ನಡುವೆ ಈ ಪರಿಷೆಯೊಳಕ್ಕೆ ಕ್ಯಾಮರಾ ಸಮೇತ ಹೊಕ್ಕ ನನ್ನನ್ನು ಭಕ್ತರು ಪೋಲೀಸರ ಕಡೆಯವನಿರಬೇಕೆಂತಲೂ,ಪೋಲೀಸರು ಇವನು ಕೇಂದ್ರ ಸರಕಾರದ ಪಶು ಕಲ್ಯಾಣ ಇಲಾಖೆಯವನು ಇರಬೇಕೆಂತಲೂ ಗುಮಾನಿಯಿಂದ ನೋಡುತ್ತಿದ್ದರು. ‘ಉಭಯ ಕಡೆಗಳಿಂದಲೂ ಗುಮಾನಿಗೊಳಗಾಗ ಬೇಕಾಯಿತಲ್ಲಾ’ ಎಂದು ಸುಮ್ಮನೇ ಅಲ್ಲಿ ಹರಿಯುತ್ತಿದ್ದ ಕಾವೇರಿ ನದಿಯನ್ನು ನೋಡುತ್ತಾ ನಿಂತರೆ ಅದೆಲ್ಲಿಂದಲೋ ಬಂದ ಚಿಗುರು ಮೀಸೆಯ ಪೋಲೀಸನೊಬ್ಬ ‘ತಗೀಬ್ಯಾಡಿ ಸಾರ್, ಲೇಡೀಸ್ ಸ್ನಾನ ಮಾಡ್ತಿದಾರೆ’ ಅಂತ ಹೆದರಿಸಿದ. ನೋಡಿದರೆ ಆ ಬಿಸಿಲಿನಲ್ಲಿ ದೂರದಲ್ಲಿ ನದಿಯಲ್ಲಿ ಚುಕ್ಕಿಗಳಂತೆ ಹೆಂಗಸರು ಕಾಣಿಸುತ್ತಿದ್ದರು. ಆ ಪೋಲೀಸನು ಹೇಳಿರದಿದ್ದರೆ ಗಂಡಸೋ ಹೆಂಗಸೋ ಎಂಬ ವ್ಯತ್ಯಾಸಗಳಾವುದೂ ಅಷ್ಟು ದೂರದಿಂದ ಗೋಚರಿಸುತ್ತಿರಲಿಲ್ಲ. ನಾನು ಅದನ್ನೇ ಆತನಿಗೆ ವಿವರಿಸಿ ಹೇಳಿದರೂ ಆತನಿಗೆ ಅರಿವಾಗಲಿಲ್ಲ.

‘ನೀವು ಹೋಗಿ ಸಾ. ಕವಿಗಳ ಹಾಗೆ ಮಾತಾಡ್ತೀರಾ. ಏನೂ ಗೊತ್ತಾಗಕ್ಕಿಲ್ಲ ಅನ್ಕೋಬೇಡಿ. ನಾನೂ ಡಬಲ್ ಗ್ರಾಜುಯೇಟ್’ ಎನ್ನುತ್ತ ಬೆವರೊರೆಸಿಕೊಂಡ. ಆಮೇಲೆ ಮೆಲ್ಲಗಿನ ದನಿಯಲ್ಲಿ ‘ಈಗ ಬಿಡಿ ಸಾ ಎಲ್ಲ ಇಲಾಖೆಯಲ್ಲೂ ಮೂರು ನಾಲ್ಕು ಜನ ದೊಡ್ಡ ದೊಡ್ಡ ಕವಿಗಳಿದಾರೆ’ ಎನ್ನುತ್ತ ತನ್ನ ಇಲಾಖೆಯ ಇಬ್ಬರು ಮೂವರು ಕವಿಗಳ ಹೆಸರು ಹೇಳಿದ. ಈತನಿಂದಲೂ ನಾನು ಕವಿಯೆಂಬ ಗುಮಾನಿಗೊಳಗಾಗಬೇಕಾಯಿತಲ್ಲಾ ಎಂದು ಸುಮ್ಮನೆ ಕಾರಣಿಕ ಪುರುಷ ರಾಚಪ್ಪಾಜಿಯ ಸಮಾಧಿಯ ಮುಂದೆ ಕುಳಿತ ಭಿಕ್ಷುಕರ ಜೊತೆ ಅವರ ಹಾಗೇ ಕುಳಿತು ನೋಡುತ್ತಿದ್ದೆ. ಎಲ್ಲವೂ ಅವರಿಗೆ ಕಾಣಿಸುವ ಹಾಗೇ ಕಾಣುತ್ತಿತ್ತು. ಆ ಕಾರಣಿಕ ಪುರುಷನಿಗೆ ಹಚ್ಚಿದ ದೀಪವೂ, ಆ ದೀಪಕ್ಕೆ ತೂಗಿಸಿದ ಮಲ್ಲಿಗೆಯ ಮಾಲೆಯೂ, ಅಲ್ಲೇ ಬಲಿಕಲ್ಲಿನ ಮೇಲೆ ಉದುರಿ ಹರಡಿರುವ ಅರಸಿಣ ಕುಂಕುಮ ರಾಗರಂಜಿತ ಬಣ್ಣಗಳೂ, ಕೈಮುಗಿಯುತ್ತಿರುವ ಸುಂದರ ಸುಕೋಮಲ ನರಮನುಷ್ಯರೂ, ಎಲ್ಲ ಕಡೆಯಿಂದಲೂ ತೇಲಿಬರುತ್ತಿರುವ ಮಸಾಲೆ ಬೆರೆತ ಖಾದ್ಯ ಪ್ರಾಣಿಗಳ ಪರಿಮಳವೂ, ನದಿಯಿಂದ ಬರುತ್ತಿರುವ ತಂಗಾಳಿಯೂ ಎಲ್ಲವೂ ಇವುಗಳು ಯಾವುವೂ ನನಗೆ ಸೇರಿದ್ದಲ್ಲ ಎನ್ನುವ ಭಿಕ್ಷುಕ ಸಹಜ ಕೇವಲ ಜ್ಞಾನವನ್ನು ಮಸ್ತಕದೊಳಗೆ ತುಂಬುತ್ತಿತ್ತು.

ನಿಮಗೆಲ್ಲ ಗೊತ್ತಿರುವ ಹಾಗೆ ಈ ರಾಚಪ್ಪಾಜಿಯವರು ಕಾರಣಿಕ ಪುರುಷ ಮಂಟೇಸ್ವಾಮಿಯವರ ಶಿಷ್ಯ. ಉತ್ತರ ಕರ್ನಾಟಕದ ಕೃಷ್ಣಾ ನದೀ ತೀರದಿಂದ ಹೊರಟು ಕಾವೇರಿ ತಟದ ಕಪ್ಪಡಿಯಲ್ಲಿ ನೆಲೆಸಿದವರು. ನಿಮಗೆಲ್ಲ ಗೊತ್ತಿರುವ ಹಾಗೆ ಮಂಟೇಸ್ವಾಮಿಯವರು ಬಸವಣ್ಣನವರ ಸಮಕಾಲೀನರು. ಕುಷ್ಠರೋಗಿಯ ರೂಪದರಿಸಿ ಬಸವ ಕಲ್ಯಾಣಕ್ಕೆ ತೆರಳಿ ತಿಪ್ಪೆಯೊಂದರ ಮೇಲೆ ಮಲಗಿ ಬಸವಣ್ಣನವರ ಭಕ್ತಿಯನ್ನು ಪರಿಶೀಲಿಸಿದವರು.ನಿಮಗೆ ಬೇಕಾದರೆ ಈ ಎಲ್ಲ ವಿವರಗಳು ಮಂಟೆಸ್ವಾಮಿ ಕಾವ್ಯದಲ್ಲಿ ಸಿಗುತ್ತವೆ. ಶಿವರಾತ್ರಿ ಉಗಾದಿಯ ನಡುವೆ ಕಪ್ಪಡಿಯಲ್ಲಿ ನಡೆಯುವ ರಾಚಪ್ಪಾಜಿಯ ಪರಿಷೆ, ಪ್ರತಿ ವರ್ಷ ಜನವರಿ ತಿಂಗಳ ಮೊದಲ ಹುಣ್ಣಿಮೆಯಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕು ಮುತ್ತತ್ತಿಯ ಪಕ್ಕಕ್ಕಿರುವ ಚಿಕ್ಕಲ್ಲೂರಿನಲ್ಲಿ ನಡೆಯುವ ಸಿದ್ದಪ್ಪಾಜಿಯ ಪರಿಷೆ ಇಲ್ಲೆಲ್ಲ ನಡೆದಾಡಿದರೂ ಸಾಕು ಬಸವಣ್ಣನವರ ಆ ಕಾಲದ ಜನಜಂಗುಳಿಯೊಳಕ್ಕೆ ಹೊಕ್ಕ ಹಾಗಾಗುತ್ತದೆ.

ಆದರೆ ನಾನು ಇಲ್ಲಿ ಹೋಗಿದ್ದು ಈ ತರಹದ ಯಾವುದೇ ಗಹನ ಕಾರಣಗಳಿಗಾಗಿರಲಿಲ್ಲ. ಈ ದಿನಗಳಲ್ಲಿ ನಗುವನ್ನೂ, ಕೀಟಲೆಯನ್ನೂ, ವಯೋಸಹಜ ಲಾಲಸೆ ಪಾಲಸೆಗಳನ್ನೂ ಮರೆತು ಹುಬ್ಬುಗಟ್ಟಿಕ್ಕಿಕೊಂಡಿರುವ ಬಹುತೇಕ ಮಂದಿಯ ಮುಖಗಳಿಗೂ ನನ್ನ ಸ್ವಂತ ಮುಖಕ್ಕೂ ಅಂತಹ ದೊಡ್ಡ ವ್ಯತ್ಯಾಸವೇನೂ ಇಲ್ಲವಲ್ಲಾ ಅನಿಸಿ ಗಾಭರಿಯಾಗಿ ಎತ್ತ ಕಡೆಗೋ ಹೊರಟವನು ಗೊತ್ತಿಲ್ಲದೆ ಈ ಪರಿಷೆಯೊಳಕ್ಕೆ ಹೊಕ್ಕುಬಿಟ್ಟಿದ್ದೆ, ವರ್ತಮಾನದ ಜೀವಿತದಲ್ಲಿ ತಿಂದುಂಡು ಸುಖವಾಗಿ ಜೀವಿಸಲು ಅಂತಹ ದೊಡ್ಡ ಅಡ್ಡಿಗಳೇನೂ ಇಲ್ಲದಿದ್ದರೂ ಅದು ಯಾಕೆ ಈ ಪರಿಷೆಯೊಳಗೆ ಬಿಕ್ಷುಕರ ನಡುವೆ ಕುಳಿತಿರುವೆ ಎಂದು ಗೊತ್ತಿರುವವರು ಯಾರಾದರೂ ಕೇಳಿಯಾರು ಎಂಬ ಹೆದರಿಕೆಯೂ ಆಗಾಗ ಉಂಟಾಗುತ್ತಿತ್ತು. ಹಾಗೆ ಹೆದರಿಕೊಂಡು ಕುಳಿತಾಗಲೇ ನಾನು ಈತನನ್ನು ನೋಡಿದ್ದು. ಆದರೆ ಆತನು ಶಿವರಾತ್ರಿಯ ಪರಿಷೆ ಶುರುವಾದ ಇರುಳಿನಿಂದಲೇ ಅಲ್ಲಿ ಕುಳಿತುಕೊಂಡಿರುವವನು. ನನಗೆ ಅದಾಗ ತಾನೆ ಬಂದು ಕುಳಿತುಕೊಂಡಿರುವವನಂತೆ ಕಾಣಿಸಿದನು. ಸುಮ್ಮನೇ ಹೋಗಿ ಮೊದಲೇ ಗೊತ್ತಿದ್ದವನಂತೆ ಮಾತನಾಡಿಸಿದೆ. ಆತನೂ ಹಾಗೇ ಮಾತನಾಡಿದ. ಬಹುಶಃ ಮಾತನಾಡಿಸಿರದಿದ್ದರೆ ಆತನ ಬಾಯಲ್ಲಿ ಮಾತುಗಳಿದೆ ಅಂತಲೇ ಗೊತ್ತಾಗದ ಹಾಗಿರುವ ಆತನ ಮುಖ.

ಅವನಿಗೂ ಹೆಚ್ಚು ಕಡಿಮೆ ನನ್ನದೇ ವಯಸ್ಸು. ಮುಖವನ್ನು ವಿಕಾರವನ್ನಾಗಿ ಮಾಡಿರುವ ಈ ಕಾಯಿಲೆ ಈತನಿಗೆ ಹುಟ್ಟಿನ ಜೊತೆಗೇ ಬಂದಿರುವುದಂತೆ. ಈತ ತಾಯಿಯ ಹೊಟ್ಟೆಯಲ್ಲಿರುವಾಗಲೇ ಈ ಕಾಯಿಲೆ ಈತನ ಹೊಟ್ಟೆಯೊಳಗಿತ್ತಂತೆ. ಆಮೇಲೆ ಹಾಗೇ ಬೆಳೆಯುತ್ತಾ ಬಂದಿತಂತೆ. ತನಗೆ ಸಾವು ಬೇಕಾದರೂ ಬರಬಹುದು ಆದರೆ ಇದು ಸತ್ತ ಮೇಲೂ ಹೋಗದ ಕಾಯಿಲೆ ಎಂದು ಆತ ಹೇಳಿದ. ಈತ ವರ್ಷಂಪೂರ್ತಿ ಬೇರೆ ಬೇರೆ ಊರುಗಳ ಬೇರೆ ಬೇರೆ ದೇವರುಗಳ ಪರಿಷೆಗಳಲ್ಲೂ. ದರ್ಗಾ, ಚರ್ಚು, ಉರೂಸುಗಳಲ್ಲೂ ಹೀಗೆ ದೇವರ ಸನಿಹದಲ್ಲೇ ಕುಳಿತಿರುವನಂತೆ. ಈ ಕಾಯಿಲೆ ತಾನು ಪ್ರಪಂಚದ ಎಲ್ಲ ದೇವರುಗಳಿಗೆ ಹಾಕಿರುವ ಸವಾಲು ಎನ್ನುವ ಹಾಗೆ ಆತ ಕುಳಿತಿದ್ದ ‘ಎಲ್ಲರ ಹಾಗೇ ನನಗೂ ಭಾವನೆಗಳಿವೆ ಗುರುವೇ’ ಎಂದು ಆತ ಬಹಳ ಹೊತ್ತು ತನ್ನ ಬದುಕಿನ ಕುರಿತು ಮಾತನಾಡಿದ. ಬರೆದರೆ ಅದೇ ದೊಡ್ಡ ಕಥೆಯಾಗಬಹುದಾದ ಸಂಗತಿಗಳು. ನಾನು ತುಂಬ ಹೊತ್ತು ಅಲ್ಲಾಡದೆ ಕುಳಿತು ಆತನ ಮಾತುಗಳನ್ನು ಕೇಳುತ್ತಲೇ ಇದ್ದೆ. ಈಗ ಬಂದು ಕುಳಿತರೆ ಆತ ಹೇಳಿದ ಎಲ್ಲವೂ ಮರೆತು ಹೋಗುವ ಹಾಗೆ ಆತನ ಮುಖ ಮಾತ್ರ ಕಣ್ಣೆದುರು ನಿಂತಿದೆ.

(ಫೋಟೋಗಳೂ ಲೇಖಕರವು)

About The Author

ಅಬ್ದುಲ್ ರಶೀದ್

ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ