Advertisement
ನಿವೇದಿತಾ ಎಚ್‌ ಅನುವಾದಿಸಿದ ಗುಲ್ಝಾ಼ರರ ಎರಡು ಕವಿತೆಗಳು

ನಿವೇದಿತಾ ಎಚ್‌ ಅನುವಾದಿಸಿದ ಗುಲ್ಝಾ಼ರರ ಎರಡು ಕವಿತೆಗಳು

ಕನಸು ಕಳೆದು ಹೋಯಿತು

ಬೆಳ್ಳಂಬೆಳಗ್ಗೆಯೇ ಕನಸು ಕದ ತಟ್ಟಿದಾಗ
ಕಣ್ಣುಜ್ಜುತ್ತಾ ಬಾಗಿಲು ತೆರೆದೆ
ಸರಹದ್ದಿನಾಚೆಯಿಂದ
ಕೆಲ ಮನುಷ್ಯರು ಬಂದಿದ್ದು ಕಂಡಿತು

ಅವರ ಕಣ್ಣುಗಳಲ್ಲಿ ಕನಸೇ ಇರಲಿಲ್ಲ
ಅವರ ಮುಖಗಳು ಧೂಳಿನಿಂದ ಕಳೆಗೆಟ್ಟಿದ್ದವು
ಅವರನ್ನು ಮುಖ ಕೈಕಾಲು ತೊಳೆಯಲು ಹೇಳಿ
ಅಂಗಳದಲ್ಲಿ ಕೂಡಿಸಿದೆ

ಪಟಪಟನೆ ಒಲೆಹಚ್ಚಿ ರೊಟ್ಟಿಗಳನ್ನು ಸುಟ್ಟೆ
ಹಿಂದಿನ ವರ್ಷದ ಫಸಲಿನ ಬೆಲ್ಲವನ್ನು
ಪುಟ್ಟಪುಟ್ಟ ಗಂಟುಗಳಲ್ಲಿ ಕಟ್ಟಿಕೊಂಡು
ನನ್ನ ಅತಿಥಿಗಳು ಜೊತೆಯಲ್ಲಿ ತಂದಿದ್ದರು

ಕಣ್ಣುಗಳೂ ಪಟಕ್ಕನೆ ತೆರೆದುಕೊಂಡವು
ಮನೆಯಲ್ಲಿ ಯಾರೂ ಇರಲಿಲ್ಲ
ಒಲೆಯನ್ನು ಮುಟ್ಟಿನೋಡಿದೆ
ಅದು ಇನ್ನೂ ಬೆಚ್ಚಗಿತ್ತು
ನಾಲಿಗೆ ಬೆಲ್ಲದ ರುಚಿಯನ್ನು
ಇನ್ನೂ ಚಪ್ಪರಿಸುತ್ತಿತ್ತು…

ಅದೊಂದು ಕನಸಾಗಿತ್ತು!
ಬಹುಷಃ ಕನಸೇ ಆಗಿತ್ತು!
ಅಲ್ಲಿ… ಸರಹದ್ದಿನಾಚೆಯಲಿ
ನಿನ್ನೆ ರಾತ್ರಿ ಗುಂಡುಗಳು ಸಿಡಿದವಂತೆ

ನನ್ನ ಕೆಲವು ಕನಸುಗಳು
ಕಳೆದೇಹೋದವು…

ಒಂದು ಆತ್ಮಹತ್ಯೆ

ಆ ಕವಿ ಮಹಾಮೌನಿಯಂತೆ ಕಾಣುತ್ತಿದ್ದ
ಆದರೆ ಹುಚ್ಚು ಹಿಡಿದವನಂತೆ ಮಾತನಾಡುತ್ತಿದ್ದ
ಕಿವಿಗಳನ್ನೇ ಕಣ್ಣಾಗಿಸಿಕೊಂಡಿದ್ದ ಅವನು
ಮೌನದ ನಿಶ್ಯಬ್ಧ ಸಂಗೀತವನ್ನು ಆಲಿಸುತ್ತಿದ್ದ
ಚಂದ್ರನ ನೆರಳನ್ನು ಒಟ್ಟಾಗಿಸಿಕೊಂಡು
ಬೆಳಕಿನ ಪಸೆಯನ್ನು ಬೊಗಸೆಯಲ್ಲಿ ತುಂಬಿಕೊಂಡಿದ್ದ
ಮತ್ತವುಗಳನ್ನು ಮೆಲ್ಲನೆ ತೂಗುತ್ತಿದ್ದ
ರಾತ್ರಿಯ ಶುಷ್ಕ ಸಮಯಗಳಲ್ಲಿ
ಕಳೆದುಹೋಗುವಂತಹಾ ಸಮಯದ ಕಾಡಿನಲ್ಲಿ
ಪಕ್ವ ಅಪಕ್ವ ಘಳಿಗೆಗಳನ್ನು ಧೇನಿಸಿ…
ಹೌದು
ಆ ವಿಚಿತ್ರ ಕವಿ ಅಪರಾತ್ರಿಯಲ್ಲಿ ಎದ್ದು
ಮಂಡಿಯೂರಿ ಚಂದ್ರನ ಕೆನ್ನಯನ್ನು ಚುಂಬಿಸುತ್ತಿದ್ದ
ಚಂದ್ರನಿಂದ ಬಿದ್ದು ಜೀವವನ್ನೇ ಕಳೆದುಕೊಂಡುಬಿಟ್ಟ
ಜನ ಹೇಳುತ್ತಾರೆ…
ಕವಿ ಆತ್ಮಹತ್ಯೆ ಮಾಡಿಕೊಂಡ ಎಂದು…

ನಿವೇದಿತಾ ಎಚ್‌. ಯುವರಾಜ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡೇನಿಯಲ್ ಗ್ರೀನ್ಬರ್ಗ್ ನ Free At Last ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕವನಗಳನ್ನು ಬರೆಯುವ ಹವ್ಯಾಸದ ಜೊತೆ ಆಯ್ದ ಒಂದಷ್ಟು ಇಂಗ್ಲಿಷ್ ಕವನಗಳನ್ನು ಅಕನ್ನಡಕ್ಕೆ ಅನುವಾದಿಸಿದ್ದು, ಇವರ ಲೇಖನಗಳು ಮತ್ತು ಪ್ರಬಂಧಗಳು ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ