Advertisement
ಕಾರ್ಗಿಲ್ಲಿನ ದಾರಿಯಲ್ಲಿ: ಅಬ್ದುಲ್ ರಶೀದ್ ಅಂಕಣ

ಕಾರ್ಗಿಲ್ಲಿನ ದಾರಿಯಲ್ಲಿ: ಅಬ್ದುಲ್ ರಶೀದ್ ಅಂಕಣ

ಕಳೆದ ವರ್ಷ ದ್ರಾಸ್, ಕಾರ್ಗಿಲ್ ,ಲೇಹ್ ದಾರಿಯಲ್ಲಿ ಹೋಗುತ್ತಿರುವಾಗ ದಾರಿಯ ಉದ್ದಕ್ಕೂ ಅಲ್ಲಲ್ಲಿ ‘`you are under enemy observation’ಎಂಬ ಪಲಕಗಳನ್ನು ಹಾಕಿದ್ದರು. ದೂರದೂರದಲ್ಲಿ ಎತ್ತರಕ್ಕೆ ಹಿಮ ತುಂಬಿಕೊಂಡಿರುವ ಪರ್ವತ ಶ್ರೇಣಿಗಳತ್ತ ಕೈತೋರಿಸಿ ನಮ್ಮನ್ನು ಕರೆದೊಯ್ಯುತ್ತಿದ್ದ ಚಾಲಕ ಅದು ಪಾಕಿಸ್ತಾನದ ಬೆಟ್ಟ, ಇದು ಇಂಡಿಯಾದ ಬೆಟ್ಟ ಎಂದು ತೋರಿಸುತ್ತಿದ್ದ. ಎಲ್ಲ ಕಡೆಯೂ ಒಂದೇ ತರಹ ಹಿಮತುಂಬಿಕೊಂಡು ಬಿಸಿಲಲ್ಲಿ ಹೊಳೆಯುತ್ತಿರುವ ಈ ಬೆಟ್ಟಗಳು ಆತನ ಮಾತುಗಳ ನಂತರ ಬೇರೆಯೇ ತರಹ ಕಾಣಿಸಿಕೊಳ್ಳುತ್ತಿತ್ತು. ಜೊತೆಯಲ್ಲಿದ್ದ ಮಕ್ಕಳಂತೂ ಆಮೇಲೆ ಅದನ್ನೇ ಕಸುಬನ್ನಾಗಿ ಮಾಡಿಕೊಂಡು ಪಾಕಿಸ್ತಾನದ ಬೆಟ್ಟ ಯಾವುದು ನಮ್ಮ ಬೆಟ್ಟ ಯಾವುದು ಅಂತ ಪುನಹ ಪುನಹ ಕೇಳುತ್ತಾ ತಲೆ ಚಿಟ್ಟು ಹಿಡಿಸಲು ಶುರು ಮಾಡಿದ್ದರು. ಆಚೆ ಕಡೆಯ ಪರ್ವತದ ಮೇಲೆ ಸಣ್ಣದೊಂದು ಶಿಲೆ ಎದ್ದು ನಿಂತಿದ್ದರೂ ಅದನ್ನು ಮನುಷ್ಯಾಕೃತಿಯೆಂದು ಗೃಹಿಸಿ `ಅಯ್ಯೋ ಅಲ್ಲಿಂದ ಪಾಕಿಸ್ತಾನದ ಸೋಲ್ಜರ್ ನಮ್ಮನ್ನು ಶೂಟ್ ಮಾಡುತ್ತಾನೆ’ ಎಂದು ಉಣ್ಣೆಯ ಟೋಪಿಯಿಂದ ತಲೆ ಮುಚ್ಚಿಕೊಳ್ಳುತ್ತಿದ್ದರು.

ನಮ್ಮೊಡನಿದ್ದ ಕಾಶ್ಮೀರಿ ಚಾಲಕನಿಗೆ ಕಳೆದ ಮೂವತ್ತು ವರ್ಷಗಳ ಇತಿಹಾಸ ಮಾತ್ರ ಗೊತ್ತಿತ್ತು. ಮತ್ತು ಆತ ಕಳೆದ ಮೂವತ್ತು ವರ್ಷಗಳಲ್ಲಿ ಕತ್ತಲಲ್ಲಿ ನಡೆಯುವಾಗ ಎಷ್ಟೋ ಹೆಣಗಳನ್ನು ಎಡವಿ ಬಿದ್ದಿದ್ದರಿಂದ ವಿಷಣ್ಣನಾಗಿ ತನಗೆ ಗೊತ್ತಿರುವ ಕಥೆಗಳನ್ನು ಹೇಳುತ್ತಿದ್ದ. ಆತನ ಪ್ರಕಾರ ಬಹುತೇಕ ಮರಣಗಳಿಗೆ ಮನುಷ್ಯರಿಗಿಂತ ದೆವ್ವಗಳೇ ಹೆಚ್ಚು ಕಾರಣವಾಗಿದ್ದವು. ನಾನು ಮಕ್ಕಳಿಗೆ ನನಗೆ ಗೊತ್ತಿರುವ ಇತಿಹಾಸವನ್ನು ಹೇಳುತ್ತಿದ್ದೆ. ಗಾಂಧಿ ನೆಹರು ಗಲಾಟೆ ಮಾಡಿ ಬ್ರಿಟಿಷರನ್ನು ಓಡಿಸಿದ್ದು, ಬ್ರಿಟಿಷರು ಬಿಟ್ಟು ಓಡಿ ಹೋಗುವಾಗ ಎರಡು ತುಂಡು ಮಾಡಿ ನಮಗೊಂದು ತುಂಡು, ಪಾಕಿಸ್ತಾನಕ್ಕೊಂದು ತುಂಡು ಮಾಡಿಕೊಟ್ಟು ಹೋಗಿದ್ದು, ಸಿಕ್ಕಿದ ಆ ತುಂಡು ಸರಿಯಿಲ್ಲವೆಂದು ಅವರು ಈಗಲೂ ಜಗಳವಾಡುತ್ತಿರುವುದು ಎಲ್ಲವನ್ನೂ ಆ ಮಕ್ಕಳಿಬ್ಬರ ದಿನನಿತ್ಯದ ಹೋರಾಟದ ಉದಾಹರಣೆಗಳ ಮೂಲಕವೇ ಹೇಳುತ್ತಿದ್ದೆ.

ಕಾಶ್ಮೀರಿ ಚಾಲಕ ಸುಮ್ಮನೇ ನಗುತ್ತಾ ತಾನೂ ಕಥೆ ಕೇಳುವ ಬಾಲಕನಂತಾಗಿದ್ದ. ‘ಮತ್ತೆ ಯಾಕೆ ಪಾಕಿಸ್ತಾನ ಈಗಲೂ ಜಗಳ ಮಾಡೋದು ತುಂಡು ಮಾಡಿ ಕೊಟ್ಟು ಆಯ್ತಲ್ಲಾ. bad people’ ಎಂದು ಮಗ ಕೇಳಿದ. ‘‘ಅವರಿಗೆ ಕಾಶ್ಮೀರ ಖಂಡಿತ ಕೊಡೋದು ಬೇಡ ’ ಮಗಳು ಹೇಳಿದಳು. ಕಾಶ್ಮೀರ ಇಂಡಿಯಾದಲ್ಲಿ ಇರಲಾರದು ಎಂದು ಊಹಿಸಿಯೇ ಅವಳಿಗೆ ಅಳುವೇ ಬಂದು ಬಿಟ್ಟಿತ್ತು. ಕಾಶ್ಮೀರ ಕೊಡೋದು ಬೇಡವೇ ಬೇಡ ಎಂದು ಮತ್ತೆ ಮತ್ತೆ ಗೊಣಗುತ್ತಿದ್ದಳು. 

ಕಾರಣ ಆಮೇಲೆ ಗೊತ್ತಾಯಿತು.ಕಾಶ್ಮೀರ ಹೋದರೆ ಇಂಡಿಯಾದ ಶೇಪ್ ಹೊರಟು ಹೋಗುತ್ತದೆ ಅಂತ ಅವಳ ಅಳು. ತುಂಬ ಕಷ್ಟಪಟ್ಟು ಆಕೆ ಭಾರತದ ನಕ್ಷೆ ಮಾಡಲು ಕಲಿತಿದ್ದಳು. ಈಗ ಕಾಶ್ಮೀರ ಹೋದರೆ ಪುನಹ ಕಲಿಯಬೇಕಲ್ಲಾ ಅನ್ನುವುದು ಆಕೆಯ ಟೆನ್ಸನ್. ಕಾಶ್ಮೀರ ಹೋಗಬಾರದು ಮತ್ತು ಅರುಣಾಚಲ ಹೋಗಬಾರದು ಹೋದರೆ ಶೇಪ್ ಹೋಗುತ್ತದೆ ಎನ್ನುವುದು ಅವಳ ಕಾಳಜಿಯಾಗಿತ್ತು. ‘ಜಾಸ್ತಿ ಮಾತನಾಡಬೇಡಿ, ನೋಡಿ ಅದೋ ಅಲ್ಲಿ ಪಾಕಿಸ್ತಾನದ ಸೋಲ್ಜರ್ ನಮ್ಮನ್ನೇ ದುರ್ಬೀನಿನಲ್ಲಿ ನೋಡುತ್ತಿದ್ದಾನೆ’ ಎಂದು ದೂರದಲ್ಲಿ ಎತ್ತರದಲ್ಲಿ ಖಾಲಿಯಾಗಿ ಮಲಗಿದ್ದ ಬೆಟ್ಟವೊಂದರ ಮೇಲಿನ ಪೊದೆಯನ್ನು ಕ್ಯಾಮೆರಾ ಜೂಃಮ್ ಮಾಡಿ ತೋರಿಸಿ ಹೆದರಿಸಿ ಅವಳ ಬಾಯಿ ಬಂದ್ ಮಾಡಿದೆ. ಆದರೂ ಅವಳು ಗೊಣಗುತ್ತಲೇ ಇದ್ದಳು.

‘ದೊಡ್ಡವಳಾದ ಮೇಲೆ ನಾನೂ ಬಾಂಬರ್ ಪೈಲಟ್ ಆಗುತ್ತೇನೆ’ ಅನ್ನುತ್ತಿದ್ದಳು. ಆದರೆ ಈಗಾಗಲೇ ಕಂಪ್ಯೂಟರಿನಲ್ಲಿ ಸಾಕಷ್ಟು ಬಾಂಬ್ ಆಟಗಳನ್ನು ಆದಿ ಹೈರಾಣಾಗಿರುವ ಮಗ ಸುಮ್ಮಗಿದ್ದ.

(ಫೋಟೋಗಳೂ ಲೇಖಕರವು)

About The Author

ಅಬ್ದುಲ್ ರಶೀದ್

ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ