Advertisement
ಆಶಾ ಜಗದೀಶ್ ಬರೆದ ಈ ದಿನದ ಕವಿತೆ

ಆಶಾ ಜಗದೀಶ್ ಬರೆದ ಈ ದಿನದ ಕವಿತೆ

1

ನನ್ನ ಕೃಷ್ಣ ನೀನು
ನೀನು ಸಿಕ್ಕ ಕಾರಣಕ್ಕೆ
ರಾಧೆಯಾದವಳು ನಾನು
ಅಂತರಾಳದ ಮುರಳಿಯನ್ನೊಮ್ಮೆ
ನುಡಿಸಿಬಿಡು
ಭವಸಾಗರಗಳ ಕ್ಷಣದಲ್ಲಿ
ದಾಟಿಬಿಡುವೆ ನಾನು

ರೆಪ್ಪೆಯಡಿಯಲ್ಲಿ ಮುತ್ತಾಗುವ
ಘಳಿಗೆಗೆ ಲೇಬರ್ ವಾರ್ಡಿನ
ಸಹವಾಸ ಸಾಕಾಗಿದೆ
ಮತ್ತಷ್ಟು ಹೊತ್ತು ಉಸಿರಾಡುತ್ತಾ
ಕೂರುವ ವ್ಯವಧಾನವೆಲ್ಲಿದೆ

ಕೃಷ್ಣ
ಎನ್ನುತ್ತಾ
ಕಳೆದುಕೊಳ್ಳುತ್ತೇನೆ
ನನ್ನೆ ನಾ

2
ಮುಗಿಲ ಸಂಗ ತೊರೆದ
ಮಳೆ ಹನಿಯಂತೆ
ನಾನಿಲ್ಲಿ ನೋಯುತ್ತಿರುವೆ
ನಿನ್ನನೇ ನೆನೆದು
ನಾನೇ ಹತ್ತಿರುವ ಚಕ್ರ
ತಿರುಗುತ್ತದೆ
ರೂಢಿಯಂತೆ
ಹಲವು ನಿಲ್ದಾಣಗಳಲ್ಲಿ
ಹಂಚಿಹೋಗಿರುವ
ಬದುಕಿನ ತುಣುಕುಗಳನ್ನು
ಆರಿಸಿಕೊಳ್ಳುತ್ತಾ
ಮುದ್ದಾಗಿ ಚಿತ್ರವನ್ನು
ಪೂರ್ಣಗೊಳಿಸುತ್ತಾ
ಸಣ್ಣದೊಂದು ಖಾಲಿತನವನ್ನು
ಚಿತ್ರದಡಿಯಲ್ಲಿ
ಮರೆಮಾಚುತ್ತಾ…
ಆ ಸಣ್ಣ ನೋವಾದರೂ
ಅದೆಷ್ಟು ಚಂದ
ಎದೆಯ ಗೆಸ್ಟ್ ಹೌಸಿನಲಿ
ಆಗಾಗ ಬಂದು
ಉಳಿದು
ಹೋಗುತ್ತಿರಲಿ

ನನ್ನದೇನೂ
ಅಭ್ಯಂತರವಿಲ್ಲ

3

ಆ ಒಣ ಮರ
ಸತ್ತೇ ಹೋಗಿದೆ ಎನಿಸುವಷ್ಟು
ಎಲ್ಲವನ್ನೂ ಒದರಿ ನಿಂತ ಮರ
ಈ ವಸಂತಕ್ಕೇ ಕಾದಿತ್ತೆಂಬಂತೆ
ಚಿಗುರಿದೆ ನೋಡು
ನನ್ನ ಎದೆ ನಿನ್ನ ಉಸಿರಿಗೆ
ನುಡಿದದ್ದು ಹಾಗೆಯೇ
ಮತ್ತದನ್ನು ಒಂಟಿ ಮಾಡಿ
ಬಿಟ್ಟು ಹೋದವನು ನೀನು
ಈಗದರ ಅಸ್ತಿತ್ವವೇನು
ಧ್ವನಿ ಸೋತ ಮೂಕಹಕ್ಕಿಗೆ
ಹಾಡಲು ಹೇಳಿದವರಾರು
ಸಣ್ಣ ತಂತುವಿನಷ್ಟು ನಾಜೂಕು
ಜೀವವೊಂದು ಬದುಕಲು ಹಂಬಲಿಸುತ್ತಿದೆ
ಹೂತ ಧ್ವನಿಯ ಹೊರತೆಗೆಯುತ್ತಿದೆ
ಎದೆಯ ಬಾಗಿಲಿಗೆ ತೋರಣ ಕಟ್ಟಿ
ರಂಗವಲ್ಲಿಯ ಹಾಕಿ ಕಾಯುತ್ತಾ
ನಿರೀಕ್ಷೆಗಳಿಗೆ ಸಾವಿಲ್ಲ
ಮತ್ತೆ ಮತ್ತೆ ಆಸೆಯ ತೆಕ್ಕೆಗೆ ಬೀಳುತ್ತವೆ

ಏನಾದರಿರಲಿ
ಒಣಗಿದ ಎದೆಗಳಿಗೆ
ಸಂಜೀವಿನಿಯಂಥ
ಉಸಿರಿನ ಭ್ಯಾಗ್ಯವೊಂದು
ಸಿಗುತ್ತಿರಲಿ
ನಿನ್ನ ಬೆರಳುಗಳ ಒತ್ತಡಕ್ಕೆ ಸಿಕ್ಕು
ಹಿತವಾಗಿ ನರಳುವಂತಾಗಲಿ

About The Author

ಆಶಾ ಜಗದೀಶ್

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ "ಮೌನ ತಂಬೂರಿ."

4 Comments

  1. Prof.Venkat Ramu BR

    ಬಹಳ ದಿನಗಳ ನಂತರ ಒಂದು ಉತ್ತಮ ಕವನ ಓದಿದೆ. ರಚನಾ ಶೈಲಿ ಸೊಗಸಾಗಿದೆ. ಹೀಗೆ ಸಾಗಲಿ ನಿಮ್ಮ ಸಾಹಿತ್ಯ ಕೃಷಿ ಅನವರತ 🌷🌷
    ಪ್ರೊ. ವೆಂಕಟ ರಾಮು. ಬಿ. ಆರ್
    ಪ್ರಾಂಶುಪಾಲರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು
    ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಗುಡಿಬಂಡೆ
    ಮೊಬೈಲ್ 7899581146

    Reply
    • ಆಶಾ ಜಗದೀಶ್

      ಧನ್ಯವಾದಗಳು

      Reply
  2. Munikrishna

    ನಿಮ್ಮ ಕವಿತೆ ತುಂಬಾ ಚನ್ನಾಗಿ ಮೂಡಿ ಬಂದಿದೆ ಮೇಡಂ
    ಮುಂದಿನ ಕಾವ್ಯ ಬೇಗ ಬರಲಿ

    Reply
  3. N T yerri seamy

    ಆಶಾ ಜಗದೀಶ ರವರ ಕವನಗಳು
    ಆಶಾದಾಯಕವಾಗಿವೆ.
    ಅಪರೂಪದ ಉಪಮೆಗಳನ್ನು
    ಅಂದವಾಗಿ ಬಳಸಿದ್ದು ಮೆಚ್ಚತಕ್ಕ ವಿಚಾರ.
    ಕವಿಯಿತ್ರಿಗೆ ಅಭಿನ೦ದನೆಗಳು
    ಎನ್ ಟಿ. ಎರ್ರಿಸ್ವಾಮಿ
    ಜಗಳೂರು

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ