Advertisement
ಮಾಗಿ ಮಾವ ಬಂದ ಮಂಜು ಗಿಂಜು ತಂದ: ಚಂದ್ರಮತಿ ಸೋಂದಾ ಸರಣಿ

ಮಾಗಿ ಮಾವ ಬಂದ ಮಂಜು ಗಿಂಜು ತಂದ: ಚಂದ್ರಮತಿ ಸೋಂದಾ ಸರಣಿ

ಉಳಿದ ದಿನಗಳಲ್ಲಿ ಸ್ನಾನಮಾಡಲು ಹಿಂದೇಟು ಹಾಕುತ್ತಿದ್ದ ನಾವು ಚಳಿಗಾಲದಲ್ಲಿ ಮಾತ್ರ ಸ್ನಾನ ಮಾಡಲು ನಾಮುಂದು ತಾಮುಂದು ಎಂದು ಓಡುತ್ತಿದ್ದೆವು. ಮೈ ಮೇಲೆ ಬಿಸಿನೀರು ಸುರಿದುಕೊಳ್ಳುವುದು ಬಹಳ ಆಪ್ಯಾಯಮಾನ ಎನಿಸುತ್ತಿತ್ತು. ʻಅದೆಷ್ಟು ಹೊತ್ತು? ನಿಂದೊಳ್ಳೆ ಊರ್ಮಿಳೆ ಸ್ನಾನ ಆಯ್ತುʼ ಅಂಥ ಅಮ್ಮನಿಂದ ಮಂತ್ರಾಕ್ಷತೆ ಸಿಗುವುದೂ ಇತ್ತು. ಚಿಕ್ಕವರಿರುವಾಗ ಇದರ ಅರ್ಥ ಗೊತ್ತಿರಲಿಲ್ಲ, ಆಮೇಲೆ ತಿಳಿಯಿತು. ರಾಮಲಕ್ಷ್ಮಣರು ಸೀತೆಯೊಂದಿಗೆ ವನವಾಸಕ್ಕೆ ಹೋಗುವಾಗ ಊರ್ಮಿಳೆ ಸ್ನಾನ ಮಾಡುತ್ತಿದ್ದಳಂತೆ. ಅವರು ಹದಿನಾಲ್ಕು ವರ್ಷ ವನವಾಸ ಮುಗಿಸಿ ಅಯೋಧ್ಯೆಗೆ ಹಿಂದಿರುಗಿದಾಗಲೂ ಆಕೆ ಸ್ನಾನ ಮಾಡುತ್ತಲೇ ಇದ್ದಳಂತೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹನ್ನೆರಡನೆಯ ಕಂತಿನಲ್ಲಿ ಚಳಿಗಾಲದ ಚಮತ್ಕಾರಗಳ ಕುರಿತ ಬರಹ ನಿಮ್ಮ ಓದಿಗೆ

ಚಳಿಯಪ್ಪ ಚಳಿರೊ
ಅಪ್ಪಗೈಯ್ಯ ಹಾಕಿ
ಒಲೆ ಮುಂದೆ ಕುಂತ್ರೆ
ಮಾಗಿ ಮಾವ ಬಂದ
ಮಂಜು ಗಿಂಜು ತಂದ
ನಾವು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಕಂದ ಎನ್ನುವ ಪುಸ್ತಕದಲ್ಲಿ ಈ ಪದ್ಯ ಇತ್ತು.
ಚಳಿಗಾಲ ಬಂತು ಅಂದ್ರೆ ಈ ಶಿಶುಪ್ರಾಸದಲ್ಲಿ ಇದ್ದ ಹಾಗೆ ನಾವು ಕೂಡ ಅಪ್ಪಗೈ ಹಾಕಿ ಒಲೆ ಮುಂದೆ ಬೆಂಕಿ ಕಾಯಿಸಲಿಕ್ಕೆ ಕೂರುತ್ತಿದ್ದೆವು. ʻಬೆಂಕಿ ಕಾಯಿಸಿದ್ದು ಸಾಕು, ಹಲ್ ತಿಕ್ಕಿ ಮುಖ ತೊಳೆದು ತಿಂಡಿಗೆ ಬನ್ನಿʼ ಅಂತ ಕರೆದರೂ ಬೆಂಕಿ ಬುಡದಿಂದ ಏಳಲು ಮನಸ್ಸಾಗುತ್ತಿರಲಿಲ್ಲ. ಡಿಸೆಂಬರ್ ತಿಂಗಳ ಚಳಿನೆ ಹಾಗೆ. ನಮಗೆ ಬೆಳಗಿನ ಹೊತ್ತು ಯಾವ ಕೆಲಸ ಮಾಡಲಿಕ್ಕೂ ಉತ್ಸಾಹನೆ ಇರುವುದಿಲ್ಲ. ಚಳಿಯಲ್ಲಿ ಹೇಗಪ್ಪ ಕೆಲಸ ಮಾಡೋದು ಅಂತ ಪೂರ್ತಿ ದಿನ ಮುದುಡಿ ಕುಳಿತುಕೊಳ್ಳಲಿಕ್ಕೆ ಆಗುವುದಿಲ್ಲ. ಮೈ ಕೊಡವಿ ಎದ್ದು ಕೆಲಸ ಮಾಡಲೇಬೇಕಲ್ಲ. ‘ಮುಡುಗಿದೋರನ್ನ ಮುಡುಗಿಸುತ್ತೆ ನಡುಗಿದೋರನ್ನ ನಡುಗಿಸುತ್ತೆ’ ಅಂತ ಚಳಿಯ ಬಗೆಗಿನ ವ್ಯಾಖ್ಯಾನ.
ಇದು ದೊಡ್ಡವರ ವಿಷಯ. ಆದರೆ ಮಕ್ಕಳಿಗೆ? ಚಳಿಯಲ್ಲಿ ಏಳುವುದು ಬಹಳ ಕಷ್ಟ. ಏನೇ ಇರಲಿ, ಶಾಲೆಗೆ ಹೋಗಲಿಕ್ಕೆ ಏಳಲೇಬೇಕು. ಚಳಿಗಾಲದಲ್ಲಿ ಬೆಳಗಾಗುವುದೇ ತಡವಾಗಿ. ಅಪ್ಪ-ಅಮ್ಮನ ಮಗ್ಗುಲಲ್ಲಿ ಬೆಚ್ಚಗೆ ಮಲಗುವುದಿದೆಯಲ್ಲ ಅದರ ಸೌಖ್ಯವೇ ಬೇರೆ. ಒಮ್ಮೆ ಅವರು ಎದ್ದು ಹೋದರೂ ಹೊದಿಕೆಯನ್ನು ಮತ್ತಷ್ಟು ಎಳೆದುಕೊಂಡು ʻಅಯ್‌ʼ ಅಂಥ ಆಚೆ ಈಚೆ ಹೊರಳಾಡುತ್ತ ಹಿರಿಯರಿಂದ ಸುಪ್ರಭಾತ ದೊರಕುವವರೆಗೆ ಏಳಲು ಸೋಮಾರಿತನ. ಎದ್ದರೂ ಸ್ವಲ್ಪವಾದರೂ ಮೈಬೆಚ್ಚಗೆ ಮಾಡಿಕೊಳ್ಳಬೇಡವೇ? ಬಿಸಿಲು ಕಾಯಿಸೋಣ ಅಂದರೆ ಪ್ರಖರವಾಗಿ ಬಿಸಿಲು ಬರುವುದೇ ಒಂಬತ್ತು ಗಂಟೆಯ ಮೇಲೆ. ಅದಕ್ಕೆ ಮೊದಲು ಮೋಡ ಮಂಜುಗಳ ಆಟ. ಹಾಗಾಗಿ ಒಲೆಯೆದುರು ಕೂರುವುದು ಅನಿವಾರ್ಯ. ಡಿಸೆಂಬರ ತಿಂಗಳ ಚಳಿ ಎಂಥವರನ್ನೂ ನಡುಗಿಸುತ್ತದೆ. ಚಳಿಗೆ ಒಂದೆಡೆ ಕುಳಿತು ಬೆಂಕಿ ಕಾಯಿಸುವ ಚಿತ್ರವನ್ನು ಪತ್ರಿಕೆಗಳಲ್ಲೋ ದೃಶ್ಯಮಾಧ್ಯಮಗಳಲ್ಲೋ ನೋಡುತ್ತೇವೆ. ಆಗೆಲ್ಲ ಬಾಲ್ಯದ ದಿನಗಳು ನೆನಪಾಗುತ್ತವೆ.
ಒಮ್ಮೆ ಬೆಂಕಿಗೆ ಬೆನ್ನು ಹಾಕಿ ಇನ್ನೊಮ್ಮೆ ಮುಖಮಾಡಿ ಬೆಂಕಿ ಕಾಯಿಸುವ ಸುಖವೇ ಸುಖ. ‘ದಾರಿತಲೆ ಮಾಸದಲ್ಲಿ ದರ್ಬೆ ಅಪ್ಪನ ಹೆಂಡತಿ ಕಾಟ’ ಅಂದ್ರೆ ಏನು ಹೇಳು? ಅಂತ ಒಬ್ಬರಿಗೊಬ್ಬರು ಸವಾಲು ಹಾಕುತ್ತಿದ್ದೆವು. ʻಗೊತ್ತಿಲ್ಲʼ ಎಂದರೆ ʻಅಯ್ಯೋ ಇಷ್ಟು ಗೊತ್ತಿಲ್ವಾ?ʼ ಅಂತ ನಗುತ್ತಿದ್ದೆವು. ದಾರಿತಲೆ ಅಂದರೆ ಮಾರ್ಗಶಿರ, ದರ್ಬೆ ಅಪ್ಪ ಅಂದರೆ ಕುಶನ ತಂದೆ ರಾಮ, ಅವನ ಹೆಂಡತಿ ಸೀತೆ ಅರ್ಥಾತ್ ಸೀತ, ಚಳಿ.  ಮಾರ್ಗಶಿರ ಮಾಸದ ಚಳಿ ಅಂದರೆ ಹೊಕ್ಕುಳಿನಿಂದ ನಡುಕ ಹುಟ್ಟಿಸುವಂಥ ಚಳಿ. ಉಳಿದ ದಿನಗಳಲ್ಲಿ ಸ್ನಾನಮಾಡಲು ಹಿಂದೇಟು ಹಾಕುತ್ತಿದ್ದ ನಾವು ಚಳಿಗಾಲದಲ್ಲಿ ಮಾತ್ರ ಸ್ನಾನ ಮಾಡಲು ನಾಮುಂದು ತಾಮುಂದು ಎಂದು ಓಡುತ್ತಿದ್ದೆವು. ಬಚ್ಚಲಿನಿಂದ ಈಚೆಗೆ ಬರಲು ಮನಸ್ಸೇ ಬರುತ್ತಿರಲಿಲ್ಲ, ತಡಮಾಡುತ್ತಿದ್ದೆವು.  ಮೈ ಮೇಲೆ ಬಿಸಿನೀರು ಸುರಿದುಕೊಳ್ಳುವುದು ಬಹಳ ಆಪ್ಯಾಯಮಾನ ಎನಿಸುತ್ತಿತ್ತು. ʻಅದೆಷ್ಟು ಹೊತ್ತು? ನಿಂದೊಳ್ಳೆ ಊರ್ಮಿಳೆ ಸ್ನಾನ ಆಯ್ತುʼ ಅಂಥ ಅಮ್ಮನಿಂದ ಮಂತ್ರಾಕ್ಷತೆ ಸಿಗುವುದೂ ಇತ್ತು. ಚಿಕ್ಕವರಿರುವಾಗ ಇದರ ಅರ್ಥ ಗೊತ್ತಿರಲಿಲ್ಲ, ಆಮೇಲೆ ತಿಳಿಯಿತು. ರಾಮಲಕ್ಷ್ಮಣರು ಸೀತೆಯೊಂದಿಗೆ ವನವಾಸಕ್ಕೆ ಹೋಗುವಾಗ ಊರ್ಮಿಳೆ ಸ್ನಾನ ಮಾಡುತ್ತಿದ್ದಳಂತೆ. ಅವರು ಹದಿನಾಲ್ಕು ವರ್ಷ ವನವಾಸ ಮುಗಿಸಿ ಅಯೋಧ್ಯೆಗೆ ಹಿಂದಿರುಗಿದಾಗಲೂ ಆಕೆ ಸ್ನಾನ ಮಾಡುತ್ತಲೇ ಇದ್ದಳಂತೆ.
ಕಾಲ ನಿಲ್ಲವುದಿಲ್ಲ. ನಾವು ದೊಡ್ಡವರಾಗುತ್ತಿದ್ದಂತೆ ಚಳಿಗಾಲದಲ್ಲಿಯೂ ಬೆಳಗ್ಗೆ ಬೇಗ ಎದ್ದು ಮಾಡಬೇಕಾದ ಕೆಲಸ ನಮ್ಮ ಪಾಲಿಗಿರುತ್ತಿತ್ತು. ನಮ್ಮೂರಿನಲ್ಲಿ ಪ್ರಾಥಮಿಕ ಶಾಲೆ ಮಾತ್ರ ಇತ್ತು. ಮುಂದೆ ಓದಬೇಕೆಂದರೆ ಸುಮಾರು ಎಂಟು ಕಿಲೋಮೀಟರ್‌ ದೂರ ಮಣ್ಣಿನ ರಸ್ತೆಯಲ್ಲಿ ನಡೆದು ಸೊರಬಕ್ಕೆ ಹೋಗಬೇಕಿತ್ತು. ಮಳೆಗಾಲದಲ್ಲಿ ಆ ರಸ್ತೆ ಕೆಸರುಗದ್ದೆ ಆಗಿರುತ್ತಿತ್ತು. ಹಾಗಾಗಿ ಅಲ್ಲಿಗೆ ಮಕ್ಕಳನ್ನು ಕಳಿಸುತ್ತಿರಲಿಲ್ಲ. ಓದುವ ಸಲುವಾಗ ಗಂಡುಮಕ್ಕಳನ್ನು ಯಾರದಾದರೂ ನೆಂಟರ ಮನೆಯಲ್ಲಿ ಬಿಡುತ್ತಿದ್ದರು. ಹೈಸ್ಕೂಲು ಮತ್ತು ಮುಂದಿನ ತರಗತಿಯಲ್ಲಿ ಓದುವ ಗಂಡುಮಕ್ಕಳು ಉಳಿದುಕೊಳ್ಳಲು ಅವಕಾಶ ಕಲ್ಪಿಸಿ ತಮ್ಮ ಮನೆಯಲ್ಲಿ ಇಟ್ಟುಕೊಂಡು ಓದಿಸುವವರೂ ಇದ್ದರು. ಹೆಣ್ಣುಮಕ್ಕಳನ್ನು ತಮ್ಮ  ಮನೆಯಲ್ಲಿ ಇರಿಸಿಕೊಳ್ಳಲು ಯಾವ ನೆಂಟರೂ ಒಪ್ಪುತ್ತಿರಲಿಲ್ಲ. ಹತ್ತುವರ್ಷಕ್ಕೆ ಪ್ರಾಥಮಿಕ ಶಾಲೆ ಮುಗಿಸಿದ ಮೇಲೆ ಮನೆಯ ಕೆಲಸಗಳು ಹೆಣ್ಣುಮಕ್ಕಳಿಗಾಗಿ ಕಾಯುತ್ತಿದ್ದವು.  ಚಳಿಗಾಲದ ಪ್ರಾರಂಭಕ್ಕೂ ತೋಟದಲ್ಲಿ ಅಡಿಕೆ ಹಣ್ಣಾಗಿ ಬೀಳುವುದಕ್ಕೂ ಸರಿಯಾಗುತ್ತಿತ್ತು.  ಬೆಳಗ್ಗೆ ಬೇಗ ಎದ್ದು ಬುಟ್ಟಿ ಸಮೇತವಾಗಿ ತೋಟಕ್ಕೆ ಹೋಗಿ ಬಿದ್ದಿರುವ ಹಣ್ಣಡಿಕೆಗಳನ್ನು ಹೆಕ್ಕೆ ತರುವ ಕೆಲಸ. ಸ್ವಲ್ಪ ತಡವಾದರೆ ಗಡಿಯಲ್ಲಿ ಬೀಳುವ ಅಡಿಕೆಯನ್ನು ಪಕ್ಕದ ಮನೆಯವರು ಮೊದಲೇ ಹೆಕ್ಕಿಬಿಡುತ್ತಾರೆ ಎಂದು ನಮ್ಮ ನಡುವೆ ಸ್ಪರ್ಧೆ ಇರುತ್ತಿತ್ತು. ಸಣ್ಣಗೆ ಹನಿಯುತ್ತಿದ್ದ ಇಬ್ಬನಿಯ ಪರಿಗಣನೆಯಿಲ್ಲದೆ ಅಡಿಕೆ ಹೆಕ್ಕಲು ಮುಂದಾಗಿ ಹೋಗುತ್ತಿದ್ದೆವು. ಮಲೆನಾಡಿನ ಚಳಿಯಲ್ಲಿ ಬೆಚ್ಚನೆ ಸ್ವೆಟರ್‌ ಧರಿಸಿ ಹೋಗುವ ಸುಖ ನಮಗಿರಲಿಲ್ಲ. ಮನೆತುಂಬ ಮಕ್ಕಳಿರುತ್ತಿದ್ದುದರಿಂದ ಎಲ್ಲರಿಗೂ ಸ್ವೆಟರ್‌ ಕೊಳ್ಳುವ ಆರ್ಥಿಕಶಕ್ತಿ ಇದ್ದ ಕುಟುಂಬ ಅಪರೂಪವಾಗಿತ್ತು. ಆಗ ನಮಗೆ ಅದು ಒಂದು ಕೊರತೆ ಎನಿಸುತ್ತಿರಲಿಲ್ಲ. ಅಲ್ಲದೆ, ನೂರಾರು ಬಾರಿ ಬಗ್ಗಿ ಬಗ್ಗಿ ಅಡಿಕೆ ಹೆಕ್ಕುವುದರಲ್ಲಿ ಚಳಿ ಪಲಾಯನ ಮಾಡಿರುತ್ತಿತ್ತು.
ಚಳಿಗಾಲದಲ್ಲಿ ಬೀಸುವ ಗಾಳಿ ಬರಿಯ ತಣ್ಣನೆ ಗಾಳಿಯಲ್ಲ, ಮೈಯನ್ನು ಕೊರೆಯುತ್ತದೆ. ಹಾಗಾಗಿಯೇ ಅದಕ್ಕೆ ಕುಳಿರ್ಗಾಳಿ ಎನ್ನುತ್ತಾರೇನೋ? ಹಿಂದಿನ ಶತಮಾನದ ಐದು-ಆರನೆಯ ದಶಕದ ಕಾದಂಬರಿಗಳಲ್ಲಿ ಕುಳಿರ್ಗಾಳಿಯ ಪ್ರಸ್ತಾಪ ಆಗುತ್ತಿತ್ತು. ತರಾಸು ಅವರ ಸಿಡಿಲುಮೊಗ್ಗು ಕಾದಂಬರಿ ಪ್ರಾರಂಭವಾಗುವುದೇ ʻಮಾಗಿಯ ಬಿಸಿಲಿಗೆ ಮೈಯೊಡ್ಡಿʼ ಎಂದು. ಅಂದಿನ ಲೇಖಕರು ಗದ್ಯದಲ್ಲಿಯೂ ಚಳಿಯ ತೀವ್ರತೆ ನಮ್ಮ ಅನುಭವಕ್ಕೆ ಬರುವಂತೆ ಚಿತ್ರಿಸುತ್ತಿದ್ದರು. ಕವಿಗಳಲ್ಲಿ ಕುವೆಂಪು ಅವರು ಚಿತ್ರಿಸಿದ ಕುಳಿರ್‌ಗಾಳಿಯ ಸ್ವರೂಪವೇ ವಿಶಿಷ್ಟ. ʻನೋಡು ನೋಡು ಕುಳಿರ ಬೀಡು ಮಾಗಿ ಬರುತಿದೆ/ ಹಲ್ಲ ಕಡಿದು ಮುಷ್ಟಿ ಹಿಡಿದು/ ಸೆಡೆದು ಬರುತಿದೆ/ ಐಕಿಲದರ ತಲೆಯ ತಿರುಳು/ ಕೊರೆಯುವ ಚಳಿ ಅದರ ಕರುಳು/ ಮಾಗಿ ಬರುತಿದೆ/ ನೋಡು ನೋಡು ಕುಳಿರ ಬೀಡಾಗಿ ಮಾಗಿ ಬರುತಿದೆʼ ಎಂದು ಕುವೇಂಪು ಅವರು ಮಾಗಿಯಲ್ಲಿ ಬೀಸುವ ಗಾಳಿಯ ಕೊರೆಯುವಿಕೆಯನ್ನು ಕಂಡರಿಸುತ್ತಾರೆ. ʻಹೇಮಂತದ ಚಳಿಗಾಳಿಗಳೇ/ ಜೀವಕೆ ನಡುಕವ ತಾರದಿರಿ/ ಹಗೆಯೊಲು ಕೆಂಗಣ್‌ ತೆರೆಯದಿರಿ/ ಸಮರೋತ್ಸಾಹವ ತಳೆಯದಿರಿʼ ಎಂದು ಕೆ.ಎಸ್. ನರಸಿಂಹಸ್ವಾಮಿಯವರು ಹೇಮಂತದ ಕೊರೆಯುವ ಚಳಿಗಾಳಿಯನ್ನು ಬಿನ್ನವಿಸುತ್ತಾರೆ. ʻದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ ಕುಸುಮಗಂಧವ ತರುವ ಮಾರುತವಿಲ್ಲʼ ಎಂದು ಹೇಮಂತದಲ್ಲಿ ಪ್ರಕೃತಿಯಲ್ಲಾದ ಬದಲಾವಣೆಯನ್ನು ಹೇಳುವ ಎಸ್.ವಿ. ಪರಮೇಶ್ವರ ಭಟ್ಟರು ಚಳಿಯ ಕಾರಣದಿಂದ  ʻಹೂವಿಲ್ಲ ಚಿಗುರಿಲ್ಲ ಹಸಿರೆಲೆಗಳಿಲ್ಲʼ ಎಂದು ವಿಷಾದಿಸುತ್ತಾರೆ.

ಚಳೆಗಾಲದಲ್ಲಿ ಬೀಳುವ ಇಬ್ಬನಿ ಅಥವಾ ಮಂಜು ನೋಡಲಿಕ್ಕೆ ಬಹಳ ಚಂದ. ಮಾರ್ಗಶಿರ ಮಾಸದ ಒಂದು ಬೆಳಗ್ಗೆ ಐದೂವರೆಯ ಬಸ್ಸಿಗೆ ನಾನು ಮತ್ತು ನನ್ನ ಗೆಳತಿ ಧಾರವಾಡದಿಂದ ಮೈಸೂರಿಗೆ ಹೊರಟಿದ್ದೆವು. ದಟ್ಟವಾಗಿ ಮಂಜು ಸುರಿಯುತ್ತಿತ್ತು. ಸುಮಾರು ಏಳು ಗಂಟೆಯಾಗುತ್ತಿದ್ದಂತೆ ಎಳೆಯ ಬಿಸಿಲು ಭೂಮಿಯನ್ನು ಸ್ಪರ್ಶಿಸುತ್ತಿತ್ತು. ಕೊರೆಯುವ ಚಳಿಯಲ್ಲಿ ಉಂಟಾದ ಪ್ರಯಾಣದ ಕಷ್ಟ ಕಿಟಕಿಯಲ್ಲಿ ಕಾಣುತ್ತಿದ್ದ ದೃಶ್ಯದಿಂದ ಒಮ್ಮೆಲೆ ಹಿಂದೆ ಸರಿದಿತ್ತು. ಜೇಡಗಳು ಕೌಶಲ್ಯದಿಂದ ಹೆಣೆದಿದ್ದ ಬಲೆಯ ಮೇಲೆ ಇಬ್ಬನಿ ತನ್ನ ಕುಶಲತೆಯನ್ನು ಮೆರೆದಿತ್ತು. ಸುಮಾರು ಅರ್ಧಗಂಟೆ ಕಾಲದ ಪಯಣದಲ್ಲಿ ಎಲ್ಲೆಲ್ಲೂ ಹಿಮಮಣಿಯ ಹೆಣಿಗೆ.  ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕು ಎನ್ನುವಂಥ ದೃಶ್ಯ. ಆದರೆ ಕೆಲವೇ ಕ್ಷಣಗಳಲ್ಲಿ ಇಬ್ಬನಿಯ ಹನಿಗಳು ಸೂರ್ಯನ ಶಾಖಕ್ಕೆ ಕರಗಿ ಕಾಣದಾದವು. ಪ್ರಕೃತಿಯ ಲೀಲೆ ಮನಸ್ಸಿಗೆ ಮುದನೀಡಿತ್ತು.

ಚಳಿಯಲ್ಲಿ ಏಳುವುದು ಬಹಳ ಕಷ್ಟ. ಏನೇ ಇರಲಿ, ಶಾಲೆಗೆ ಹೋಗಲಿಕ್ಕೆ ಏಳಲೇಬೇಕು. ಚಳಿಗಾಲದಲ್ಲಿ ಬೆಳಗಾಗುವುದೇ ತಡವಾಗಿ. ಅಪ್ಪ-ಅಮ್ಮನ ಮಗ್ಗುಲಲ್ಲಿ ಬೆಚ್ಚಗೆ ಮಲಗುವುದಿದೆಯಲ್ಲ ಅದರ ಸೌಖ್ಯವೇ ಬೇರೆ. ಒಮ್ಮೆ ಅವರು ಎದ್ದು ಹೋದರೂ ಹೊದಿಕೆಯನ್ನು ಮತ್ತಷ್ಟು ಎಳೆದುಕೊಂಡು ʻಅಯ್‌ʼ ಅಂಥ ಆಚೆ ಈಚೆ ಹೊರಳಾಡುತ್ತ ಹಿರಿಯರಿಂದ ಸುಪ್ರಭಾತ ದೊರಕುವವರೆಗೆ ಏಳಲು ಸೋಮಾರಿತನ. ಎದ್ದರೂ ಸ್ವಲ್ಪವಾದರೂ ಮೈಬೆಚ್ಚಗೆ ಮಾಡಿಕೊಳ್ಳಬೇಡವೇ? ಬಿಸಿಲು ಕಾಯಿಸೋಣ ಅಂದರೆ ಪ್ರಖರವಾಗಿ ಬಿಸಿಲು ಬರುವುದೇ ಒಂಬತ್ತು ಗಂಟೆಯ ಮೇಲೆ.

ಇಂತಹ ಮಂಜಿನ ಲೀಲೆಯನ್ನು ನೋಡಿಯೇ ರಾಜರತ್ನಂ ಅವರು ಬರೆದಿರಬೇಕು: ʻಬೂಮಿನ್‌ ತಬ್ಬಿದ್‌ ಮೋಡಿದ್ದಂಗೆ/ ಬೆಳ್ಳಿ ಬಳಿದಿದ್‌ ರೋಡ್‌ ಇದ್ದಂಗೆ/ ಸಾಫಾಗ್‌ ಅಳ್ಳ ತಿಟ್ಟಿಲ್ದಂಗೆ/ ಮಡಿಕೇರಿಲಿ  ಮಂಜುʼ ಅಂತ. ಮಂಜು ಬಿಳಿಯಾಗಿ ಕಾಣುವುದಷ್ಟೆ ಅಲ್ಲ, ʻಮಡಗಿದ್‌ ಅಲ್ಲೆ ಮಡಗಿದ್ದಂಗೆ/ ಲಂಗರ್‌ ಬಿದ್ದದ್‌ ಅಡಗಿದ್ದಂಗೆ/ ಸೀತಕ್‌ ಸಕ್ತಿ ಉಡೊಗೋದಂಗೆ/ ಅಳ್ಳಾಡಾಲ್ದು ಮಂಜುʼ ಎನ್ನುವಂತೆ ಕವಿಗೆ ಕಂಡಿದೆ. ಮಂಜಿನ ವೈಭವ ಏನೆನ್ನುವುದನ್ನು ಇಡಿಯಾಗಿ ಅವರ ʻಮಡಿಕೇರಿ ಮೇಲ್‌ ಮಂಜುʼ ಕವನವನ್ನು ಓದಿಯೇ ಸವಿಯಬೇಕು. ಮಂಜಿನ ಹನಿಗಳು ಮುತ್ತಿನ ಹನಿಗಳಂತೆ ಕಾಣುತ್ತವೆ. ಹುಲ್ಲಿನ ಮೇಲೆ ಬೀಳುವ ಹನಿಯ ಸೊಬಗನ್ನು ಕುವೆಂಪು ಅವರು ಕಂಡಿದ್ದು ಹೀಗೆ: ʻಹಚ್ಚನೆ ಪಚ್ಚನೆ ವೇದಿಕೆಯಲ್ಲಿ/ ಸಾಸಿರಗಟ್ಟಲೆ ಮುತ್ತನು ಚೆಲ್ಲಿ/ ರನ್ನದ ಕಿರು ಹಣತೆಗಳಲ್ಲಿ/ ಶ್ಯಾಮಲ ತೈಲದಿ ಹೊನ್ನಿನ ಬತ್ತಿ/ ಕಾಮನಬಿಲ್ಲಿನ ಬೆಂಕಿಯು ಹೊತ್ತಿ/ ಸೊಡರುರಿಯುತ್ತಿದೆ ಅಲ್ಲಲ್ಲಿʼ  ಪ್ರಕೃತಿಯನ್ನು ಆರಾಧಿಸುವ ಅವರು ʻದೇವರ ಮುಖ ದರ್ಶನಕೆ ಸಾಲದೇನಾ ಹನಿಯ ಕಿರುದರ್ಪಣಂʼ ಎಂದು ಅಧ್ಯಾತ್ಮ ಭಾವದಲ್ಲಿ ಪ್ರಶ್ನಿಸುತ್ತಾರೆ. ʻಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿ/ ಸುಯ್ಯೆಲರ ಸೂಸುತಿವೆ ನಿನ್ನ ಹಳಿದು/ ಮೆಲ್ಲಮೆಲ್ಲನೆ ಸರಿದು ಮೊಗದ ಜವನಿಕೆಯೆಳೆದು/ ತುಂಗೆ ತೊರೆ ಹರಿಯುತಿದೆ ನಡುಗಿ ಮೈನೆನೆದುʼ ಎನ್ನುವ ಎಸ್.ವಿ. ಪರಮೇಶ್ವರ ಭಟ್ಟರ ಕವಿತೆಯ ಸಾಲುಗಳು ಚಳಿಯ ತೀವ್ರತೆಯನ್ನು ಅನಾವರಣಗೊಳಿಸುತ್ತವೆ. ʻಹನಿ ಮಂಜು ಹನಿ ಮಂಜು ಉದುರುತಿಹ ಮಂಜು/ ಹೊತ್ತಿಲ್ಲ ದಿಕ್ಕಿಲ್ಲ ಉದುರುತಿಹ ಮಂಜು/ ಕಣ್ಣೀರು ಬಂದಂತೆ ಮಳೆಹನಿಯು ಬಿದ್ದಂತೆ/ ಕಣ್ಮನವ ತೋಯಿಸುವ ನೋಯಿಸುವ ಮಂಜುʼ ಎನ್ನುವ ಕವಿವಾಣಿಯಂತೆ ಮಂಜು ಮನಸ್ಸಿಗೆ ಮುದವನ್ನೂ ನೀಡುತ್ತದೆ. ಕೆಲವೊಮ್ಮೆ ಅದರ ತೀವ್ರತೆಗೆ ಉಂಟಾಗುವ ಅಸೌಖ್ಯದಿಂದ ನೋವನ್ನೂ ಉಂಟುಮಾಡುತ್ತದೆ.
ಚಳಿಗಾಲದಲ್ಲಿ ಮಂಜು ರೂಪಿಸುವ ದೃಶ್ಯ ವೈಭವವನ್ನು ಕಾಣಬೇಕಾದರೆ ಚಳಿಯನ್ನು ಲೆಕ್ಕಿಸದೆ ಬೆಳ್ಳಂಬೆಳಗ್ಗೆ ಏಳಬೇಕಾಗುತ್ತದೆ. ʻಸೂರ್ಯಪುತ್ರʼರಿಗೆ ಇಂತಹ ಸೌಂದರ್ಯವನ್ನು ಆಸ್ವಾದಿಸುವ ಸುಖ ದೊರೆಯದು. ಬಾಲರವಿಯ ಕಿರಣಗಳ ಬಿಸುಪಿಗೇ ಮಂಜಿನ ಹನಿಗಳು ಕರಗಿಹೋಗುತ್ತವೆ. ಎಂಟುಗಂಟೆಗೆ ಬೆಳಗಾಗುವವರಿಗೆ ಅದರ ಚೆಲುವನ್ನು ಸವಿಯಲು ಹೇಗೆ ಸಾಧ್ಯ?  ಕವಿಗಳು ಕಂಡ ಸೂರ್ಯೋದಯವನ್ನು ಕುರಿತ ಪಠ್ಯವನ್ನು ವಿವರಿಸುವಾಗ ನಮ್ಮ ಅಧ್ಯಾಪಕರೊಬ್ಬರು ಹೇಳುತ್ತಿದ್ದರು- ʻಸೂರ್ಯೋದಯದ ಸೊಬಗನ್ನು ಕಂಡು ಬಹಳ ವರ್ಷಗಳಾದುವುʼ ಎಂದು.
ನಾವು ಶನಿವಾರ ಬೆಳಗ್ಗೆ ಶಾಲೆಗೆ ಹೋಗುವಾಗ ನಮ್ಮ ಕಾಲುಗಳು ಹುಲ್ಲಿನ ಮೇಲೆ ಇರುತ್ತಿದ್ದವು. ಹುಲ್ಲಿನ ಮೇಲಿರುವ ತಣ್ಣಗಿನ ಹನಿಯನ್ನು ಕಾಲಿನಿಂದ ಒದೆಯುತ್ತ ನಡೆಯುವುದು ಒಂದು ರೀತಿಯಲ್ಲಿ ಮಜಾ ಎನಿಸುತ್ತಿತ್ತು. ಮೈಗೆ ಚಳಿಯಾದರೂ ಮನಸ್ಸಿಗೆ ಸುಖ ಇರುತ್ತಿತ್ತು. ಕಾಲಿನಲ್ಲಿ ಚಪ್ಪಲಿ ಇರುತ್ತಿರಲಿಲ್ಲ. ತುಸು ದೂರ ನಡೆಯುವಷ್ಟರಲ್ಲಿ ಕಾಲು ಮರಗಟ್ಟಿದಂತಾಗಿ ಜುಮ್ಮೆನ್ನುತ್ತಿತ್ತು. ʻಇಲ್ನೋಡು ನನ್ ಕಾಲು ಹ್ಯಾಗೆ ಹಸಿರಾಗಿದೆʼ ಅಂತಲೋ ʻಮುಟ್ಟಿದರೆ ಗೊತ್ತಾಗದೇ ಇಲ್ಲʼ ಅಂತಲೋ ಹೇಳುತ್ತಿದ್ದೆವು. ಮಾರನೆಯ ದಿನವೂ ಅದರದೇ ಪುನರಾವರ್ತನೆ. ತಣ್ಣಗಿರುವ ಕೈಯನ್ನು ಇನ್ನೊಬ್ಬರ ಕೆನ್ನೆಗೆ ತಾಗಿಸಿ ಅವರಿಗೆ ಕಚಗುಳಿ ಇಡುವ ಚೇಷ್ಟೆ ಇದೆಯಲ್ಲ ಅದು ಯಾವ ಪದಗಳಿಗೂ ನಿಲುಕದ್ದು. ವಾರದ ಕೊನೆಯಲ್ಲಿ ಬರುವ ರಜೆಯ ದಿನ ಮಾತ್ರ ಬೇಗ ಏಳುತ್ತಿರಲಿಲ್ಲ. ಒಂಬತ್ತು ಗಂಟೆ ಆಯಿತೆಂದರೆ ಮಾಗಿಯ ಬಿಸಿಲನ್ನು ಕಾಯಿಸುವ ಸುಖವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಮಾಗಿಯ ಬಿಸಿಲು ಕಾಯಿಸುವುದಿದೆಯಲ್ಲ ಅದು ಮಕ್ಕಳಿಗೆ ಮಾತ್ರವಲ್ಲ ಹಿರಿಯರಿಗೂ ಅದೊಂದು ತರಹ ಮತ್ತು ಬರಿಸುವಂತಾಗುತ್ತಿತ್ತು.

ನಮ್ಮ ಅಜ್ಜಿಯೊಬ್ಬರು ಮಧ್ಯಾಹ್ನ ಊಟವಾದ ಮೇಲೆ ಹಿಂದಿನ ಕೈಸಾಲೆಯಲ್ಲಿ ಕಂಬಳಿಹಾಸಿ ಅದರ ಮೇಲೆ ಪವಡಿಸುತ್ತಿದ್ದರು. ನಾಲ್ಕು ಗಂಟೆಯವರೆಗೆ ಜಪ್ಪಯ್ಯ ಎಂದರೂ ಅಲ್ಲಿಂದ ಕದಲುತ್ತಿರಲಿಲ್ಲ. ಒಮ್ಮೊಮ್ಮೆ ಫಜೀತಿಯಾಗುತ್ತಿತ್ತು. ಬಿಸಿಲಿನ ಝಳಕ್ಕೆ ತಲೆಸುತ್ತು ಬರುತ್ತಿತ್ತು. ಸುಸ್ತಾಗಿ ಹೊರಳಾಡುವುದನ್ನು ಕಂಡ ಮೊಮ್ಮಕ್ಕಳು ಅಜ್ಜಿಯನ್ನು ಬೈಯ್ಯತ್ತಲೇ ಅವರ ಕೈಹಿಡಿದು ಒಳಗೆ ಕರೆದುಕೊಂಡು ಹೋಗುತ್ತಿದ್ದರು. ಹಾಗಂತ ಅವರೇನು ಮರುದಿನ ಅಲ್ಲಿ ಮಲಗುವುದನ್ನು ಬಿಡುತ್ತಿರಲಿಲ್ಲ.

ಚಳಿಗಾಲದ ನೆನಪೇ ಹಾಗೆ. ಹಲವು ದೃಶ್ಯಕಾವ್ಯಗಳನ್ನು ಮನದ ಮೂಸೆಯಿಂದ ಹೊರಗೆ ತುಳುಕಿಸುತ್ತವೆ. ಆ ಬೆಚ್ಚಗಿನ ಅನುಭವವು ಈಗಿನ ಚಳಿಯ ತೀವ್ರತೆಯನ್ನು ಸಮಾಧಾನದಿಂದ ಸಹಿಸಿಕೊಳ್ಳುವ ಶಕ್ತಿಯನ್ನು ನಮಗೆ ನೀಡುತ್ತದೆ; ಋತುಮಾನಕ್ಕೆ ನಾವು ಹೊಂದಿಕೊಳ್ಳಲು, ಅದರ ಇತ್ಯಾತ್ಮಕ ಮುಖವನ್ನು ಆಸ್ವಾದಿಸಲು ಸಾಧ್ಯವಾಗಿಸುತ್ತದೆ. ನೆನಪುಗಳೇ ಹಾಗೆ, ನಮ್ಮನ್ನು ಮತ್ತೆಲ್ಲಿಗೋ ಕರೆದೊಯ್ಯುತ್ತವೆ. ಸುಖೋಷ್ಣತೆಯಲ್ಲಿ ಮೀಯಿಸುತ್ತವೆ.

About The Author

ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ