“ವರ್ಷದ ಆರು ತಿಂಗಳು ಇರುವ ಕಡು ಬೇಸಗೆಯ ಬಿಸಿಲನ್ನು ಸಹಿಸಲಾರದೆ ಬೈಯುತ್ತಲೇ ಇದ್ದರೂ … ಆಗಾಗ ಚಪ್ಪಲಿ ಹಾಕಿಕೊಳ್ಳದೆ ಬರಿಕಾಲಲ್ಲಿ ತಿರುಗಿ ಬೊಬ್ಬೆ ಬಂದು, ರಕ್ತ ಬಂದು ಬೊಂಬಡಾ ಬಜಾಯಿಸಿದಾಗಲೂ … ಮೆಲ್ಬೋರ್ನ್ ನಲ್ಲಿದ್ದಾಗ ರವೆಯಷ್ಟು ಬಣ್ಣ ಬಿಟ್ಟುಕೊಂಡಿದ್ದ ಮೈಚರ್ಮ ಬ್ರಿಸ್ಬನ್ ನ ಬಿಸಿಲಿಗೆ ಕಪ್ಪು ತಿರುಗಿ, ನಮ್ಮಪ್ಪ ಬೆಂಗಳೂರಿನಲ್ಲಿ ನನ್ನ ಕಪ್ಪುಬಣ್ಣವನ್ನ ನೋಡಿ ನಗಾಡಿದರೂ … ಸಂಪಿಗೆಯನ್ನು ಹುಡುಕಿಕೊಂಡು ಬೀದಿ ಸುತ್ತಿ ಅನುಮಾನದ ದೃಷ್ಟಿಗಳಿಗೆ ಆಹಾರವಾದರೂ …”
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ
ಕಣ್ಣಾ ಮುಚ್ಚೇ ಕಾಗೆ ಗೂಡೇ ಆಟದಲ್ಲಿ ಬಚ್ಚಿಟ್ಟುಕೊಳ್ಳೋಕೆ ಅಂತ ಎಲ್ರನ್ನೂ ಚದುರಿಸುವಾಗ ಅವ್ರ್ ಬಿಟ್ ಅವ್ರ್ ಬಿಟ್ ಅವ್ರ್ಯಾರು ಅಂತ ಕೇಳೋದಿದೆ. ಈಗ ನನ್ನನ್ನ ಕೇಳಿದ್ರೆ ಬೆಂಗಳೂರು ಆಮೇಲೆ ಬ್ರಿಸ್ಬನ್ ಅಂತ ಕೂಗುತ್ತೀನಿ ಅನ್ಸತ್ತೆ. ಒಂದಷ್ಟು ದೇಶಗಳನ್ನ ಸುತ್ತಿದ ಮೇಲೆ ಅದು ಗಟ್ಟಿ ಅನ್ನೋದು ದುಪ್ಪಟ್ಟು ಖಾತ್ರಿಯಾಗಿದೆ.
ಬೆಂಗಳೂರಿನಲ್ಲಿ ಇರೋ ಹಾಗೆ ಬ್ರಿಸ್ಬನ್ ನಲ್ಲೂ ಸಂಪಿಗೆ ಹೂ ಇದೆ, ಆದ್ರೆ ಸಂಪಿಗೆಯ ಘಮ ಸ್ವಲ್ಪ ಕಡಿಮೆ. ಬ್ರಿಸ್ಬನ್ ನಲ್ಲಿ ನಾನು ನೋಡಿರುವುದು ಸಾದಾ ಸಂಪಿಗೆ, ಕೆಂಡಸಂಪಿಗೆಯಲ್ಲ. ಆದ್ರಿಂದ, ಹೋಲಿಸುವುದು ತಪ್ಪು ಎಂದು ಗೊತ್ತಿದ್ದರೂ, ಬಣ್ಣದಿಂದ, ವಾಸನೆಯಿಂದ ಕೆಂಡಸಂಪಿಗೆಯೇ ಗೆಲ್ಲತ್ತೆ. ಬೆಂಗಳೂರು ನನ್ನ ಹುಟ್ಟಿದೂರು, ಬ್ರಿಸ್ಬನ್ ನಾನು ಪಡೆದೂರು ಅಲ್ವಾ ಅಂತ ನಗು ಬರತ್ತೆ.
ಬೆಂಗಳೂರಿನಲ್ಲಿ ಇರೋ ಹಾಗೆ ಬ್ರಿಸ್ಬನ್ ನಲ್ಲೂ ಸಂಪಿಗೆ ಹೂ ಇದೆ, ಆದ್ರೆ ಸಂಪಿಗೆಯ ಘಮ ಸ್ವಲ್ಪ ಕಡಿಮೆ. ಬ್ರಿಸ್ಬನ್ ನಲ್ಲಿ ನಾನು ನೋಡಿರುವುದು ಸಾದಾ ಸಂಪಿಗೆ, ಕೆಂಡಸಂಪಿಗೆಯಲ್ಲ. ಆದ್ರಿಂದ, ಹೋಲಿಸುವುದು ತಪ್ಪು ಎಂದು ಗೊತ್ತಿದ್ದರೂ, ಬಣ್ಣದಿಂದ, ವಾಸನೆಯಿಂದ ಕೆಂಡಸಂಪಿಗೆಯೇ ಗೆಲ್ಲತ್ತೆ.
ಸುಂದರ ಸಮುದ್ರತೀರದ ವೊಲೊಂಗೊಂಗ್ ಪಟ್ಟಣದಲ್ಲಿ ವಾಸಿಸುತ್ತಿದ್ದಾಗ ಒಮ್ಮೆ ದೂರದ Gold Coast ಗೆ ಹೋಗಿ ಬಂದಿದ್ದೆ. ಅದೂ ಡಿಸೆಂಬರ್ ತಿಂಗಳಲ್ಲಿ. ಆಗ ಕಡು ಬೇಸಗೆ. ನೆಲ ಸುಟ್ಟು, ಕಾಂಕ್ರೀಟ್ ಮೇಲೆ ಬರಿಕಾಲಿನಲ್ಲಿ ನಡೆದರೆ ಬೊಬ್ಬೆ ಏಳುತಿತ್ತು. ಕಣ್ಣಿಗೆ ತಂಪುಕನ್ನಡಕ, ತಲೆ ಮೇಲೆ ಹ್ಯಾಟ್ ಹಾಕಿಕೊಂಡೆ ಹೊರಗೆ ಹೋಗಬೇಕು. ಮುಖ, ಕೈ ಕಾಲನ್ನು ಮನ ಬಂದಂತೆ ಸುಡಲು ಸೂರ್ಯನಿಗೆ ಬಲು ಖುಷಿ. ಐದು ನಿಮಿಷ ಸೂರ್ಯಕಿರಣಗಳು ಸುಟ್ಟರೆ ಸಾಕು ಕಡು ಕಂದು ಬಣ್ಣದ ನನ್ನ ಚರ್ಮ ಭದ್ರಾವತಿ ಬಂಗಾರವಾಗುತ್ತಿತ್ತು. ಬಿಳಿಯರ ‘You are Black’ ಹಣೆಪಟ್ಟಿಗೆ ಸುಲಭದ ಅಭ್ಯರ್ಥಿ ಲಭ್ಯ!
ಅಂಥ ಪಾಡಿನ ಹೊತ್ತಿನಲ್ಲೂ ಆ ಚಿನ್ನದ ಸಾಗರ ತೀರದ ಬೆಚ್ಚಗಿನ ಸಮುದ್ರದ ನೀರು, ಅಲ್ಲಲ್ಲಿ ಮುಖ ತೋರಿಸಿ ಹಾಯ್ ಅಂದು ಕಣ್ಣು ಮಿಟುಕಿಸಿದ್ದ ತೆಂಗಿನ ಮರಗಳು, ಇಗೋ ನಾವಿದ್ದೇವೆ ಕೂಡ ಅನ್ನೋ ಒಂದೋ ಎರಡೊ ಮಾವಿನ ಮರಗಳು ಮನಸ್ಸನ್ನು ಅರಳಿಸಿದ್ದವು. ವೊಲೊಂಗೊಂಗ್ ಗೆ ವಾಪಸ್ಸಾದ ಮೇಲೆ ಕನಸಲ್ಲಿ ತೆಂಗಿನ ಗರಿಗಳು ತಂಪು ಗಾಳಿ ಬೀಸುತ್ತಿದ್ದವು. ಬೆಳಗಾದರೆ ಹಗಲುಗನಸು – ಬಾಲ್ಯದ ಎರಡು ಮನೆಗಳು, ಅಲ್ಲಿನ ತೆಂಗು, ಮಾವು …
ಆ ಚಿನ್ನದ ಸಾಗರ ತೀರದ ಬೆಚ್ಚಗಿನ ಸಮುದ್ರದ ನೀರು, ಅಲ್ಲಲ್ಲಿ ಮುಖ ತೋರಿಸಿ ಹಾಯ್ ಅಂದು ಕಣ್ಣು ಮಿಟುಕಿಸಿದ್ದ ತೆಂಗಿನ ಮರಗಳು, ಇಗೋ ನಾವಿದ್ದೇವೆ ಕೂಡ ಅನ್ನೋ ಒಂದೋ ಎರಡೊ ಮಾವಿನ ಮರಗಳು ಮನಸ್ಸನ್ನು ಅರಳಿಸಿದ್ದವು. ವೊಲೊಂಗೊಂಗ್ ಗೆ ವಾಪಸ್ಸಾದ ಮೇಲೆ ಕನಸಲ್ಲಿ ತೆಂಗಿನ ಗರಿಗಳು ತಂಪು ಗಾಳಿ ಬೀಸುತ್ತಿದ್ದವು.
ವರ್ಷಗಳಾದ ಮೇಲೆ ಮತ್ತದೇ ಒಂದು ಡಿಸೆಂಬರ್ ತಿಂಗಳಲ್ಲಿ ಮೆಲ್ಬೋರ್ನ್ ನಗರದಿಂದ ಬ್ರಿಸ್ಬನ್ ನಗರಕ್ಕೆ ಕಾರಿನಲ್ಲಿ ಪಯಣ. ಗಂಟುಮೂಟೆ ಸಹಿತ. ಆಸ್ಟ್ರೇಲಿಯಾದ ಪೂರ್ವ ಕರಾವಳಿಯ ದಾರಿಗುಂಟ ಸಾಗುತ್ತಾ ಸುಮಾರು ಎರಡು ಸಾವಿರ ಕಿಲೋಮೀಟರ್ ದೂರವನ್ನ ಕ್ರಮಿಸಿದ್ದು. ಆಗ್ನೇಯದಿಂದ ಈಶಾನ್ಯದ ಕಡೆಗೆ. ಟಾಸ್ಮನ್ ಸಮುದ್ರದ ಚಳಿ ಕೊರೆತವನ್ನ ಬಿಟ್ಟು ಕೋರಲ್ ಸಮುದ್ರದ ಬೆಚ್ಚಗಿನ ಸಾಗರ ಜಲದ ಕಡೆಗೆ. ಅಲ್ಲೇ ಖಾಯಮ್ಮಾಗಿ ಇರಲು, ಬೇರು ಬಿಡಲು ಹೋಗುತ್ತಿದ್ದೀನಿ ಅನ್ನೋ ವಿಷಯ ಗಾಬರಿ ಹುಟ್ಟಿಸುತ್ತಿತ್ತು. ದಾರಿಯುದ್ದಕ್ಕೂ ಇದ್ದ camp site ಗಳಲ್ಲಿ ನಮ್ಮ ಟೆಂಟ್ ಹೊಡೆದುಕೊಂಡು, ಸಮುದ್ರದಲ್ಲಿ ಈಜಿದ್ದು. ಅದೇನೋ ಉಲ್ಲಾಸ, ಎಂಥದ್ದೋ ಸಂಭ್ರಮ. ಬ್ರಿಸ್ಬನ್ ಊರನ್ನ ಎಂದೂ ಕಂಡಿರದಿದ್ದರೂ ಅಲ್ಲಿಗೆ ಹೋಗುತ್ತಿದ್ದೀನಿ ಅನ್ನೋ ಮಾತೇ ಯಾಕೋ ಇಷ್ಟವಾಗುತಿತ್ತು. Gold Coast ಬಿಟ್ಟು motorway ಹೊಕ್ಕು ಬ್ರಿಸ್ಬನ್ ಕಡೆಗೆ ಕಾರು ಧಾವಿಸಿದಾಗ ನನ್ನೆದೆ ಬಡಿತ ಎಲ್ಲರಿಗೂ ಕೇಳಿಸುತ್ತಿದೆಯೇನೋ ಅನ್ನೋ ಅನುಮಾನ. ದಕ್ಷಿಣದಿಂದ ನಗರ ಪ್ರವೇಶ, ಅಪ್ಪನನ್ನು ಕೇಳಬೇಕಿತ್ತು – ಒಳ್ಳೆ ದಿನ, ಒಳ್ಳೆ ದಿಕ್ಕು … ಟೂ ಲೇಟ್, ಆಗಲೇ CBD ತಲುಪಾಗಿತ್ತು. Motorway ನಲ್ಲಿ ಬಂದಿದ್ದರಿಂದ ಬರೀ ರಸ್ತೆ ನೋಡಿದ್ದು. ನಮ್ಮ ಕೆಲವಾರಗಳ ಬಿಡದಿಯನ್ನು ಸೇರಿಕೊಂಡು ಕಾಲು ಚಾಚಿದ್ದಾಯಿತು.
ಮರುದಿನ ಸ್ವಲ್ಪ ಅಕ್ಕಪಕ್ಕ ಕಣ್ಣಾಡಿಸಿದರೆ ಕಂಡಿದ್ದು ಬಲು ಹೆಸರುವಾಸಿಯಾದ Queenslander ವಾಸ್ತುವಿನ್ಯಾಸದ ಮನೆಗಳು, ಗಿಡಮರಗಳು – ಕಾಕಡ, ಮಲ್ಲಿಗೆ, ಕನಕಾಂಬರ, ಕಣಗಿಲೆ, ತರಾವರಿ ದಾಸವಾಳ, ಬಸಳೆ, ಮಾವು! ಅಲ್ಲಿನ ಬೇಸಗೆಯಲ್ಲಿ ಮಾವಿನ ಸೀಸನ್, ಜೊಂಪೆ ಜೊಂಪೆ ಮಾವು! ಮರದ ಮೇಲೆಲ್ಲಾ, ನೆಲದ ಮೇಲೆಲ್ಲಾ! ಮೆಲ್ಲಮೆಲ್ಲಗೆ ಸುತ್ತಿಬಳಸಿಕೊಂಡು ಬಂದು ಮೂಗಿಗೆ ಬಡಿದಿದ್ದು ಸಂಪಿಗೆಯ ಘಮ. ಹೌದೋ ಅಲ್ಲವೋ ಅನ್ನೋ ಅನುಮಾನ. ನನ್ನದೇ ಭ್ರಮೆ ಅಂದುಕೊಂಡು ಸುಮ್ಮನಾದೆ. ಆ ಜನವರಿ ಎರಡು ವಾರಗಳು ಪೂರ್ತಿ ಬಾಡಿಗೆಗೆ ಮನೆ ಹುಡುಕುತ್ತಾ ಅಲ್ಲಲ್ಲಿ ಓಡಾಡುತ್ತಿದ್ದಾಗ ಮತ್ತದೇ ಘಮ. ಕಣ್ಣಿಗೆ ಕಂಡಿದ್ದಿಲ್ಲ. ಹೌದೋ ಅಲ್ಲವೋ ತಳಮಳ. ಯಾರನ್ನ ಕೇಳುವುದು? ಸಂಪಿಗೆಯ ಇಂಗ್ಲಿಷ್ ಹೆಸರೇ ಗೊತ್ತಿಲ್ಲ!
ಕಾಕಡ, ಮಲ್ಲಿಗೆ, ಕನಕಾಂಬರ, ಕಣಗಿಲೆ, ತರಾವರಿ ದಾಸವಾಳ, ಬಸಳೆ, ಮಾವು! ಅಲ್ಲಿನ ಬೇಸಗೆಯಲ್ಲಿ ಮಾವಿನ ಸೀಸನ್, ಜೊಂಪೆ ಜೊಂಪೆ ಮಾವು! ಮರದ ಮೇಲೆಲ್ಲಾ, ನೆಲದ ಮೇಲೆಲ್ಲಾ! ಮೆಲ್ಲಮೆಲ್ಲಗೆ ಸುತ್ತಿಬಳಸಿಕೊಂಡು ಬಂದು ಮೂಗಿಗೆ ಬಡಿದಿದ್ದು ಸಂಪಿಗೆಯ ಘಮ. ಹೌದೋ ಅಲ್ಲವೋ ಅನ್ನೋ ಅನುಮಾನ. ನನ್ನದೇ ಭ್ರಮೆ ಅಂದುಕೊಂಡು ಸುಮ್ಮನಾದೆ.
ತಳಮಳ ಯಾಕೆ, ಇದೇನು ನನ್ನೂರೇ ಎಂಬ ಅರೆ ಸಮಾಧಾನ. ಆದರೆ ಆ ಭಾವನೆಯ ಹಿಂದೆಯೇ ಥಟ್ಟನೆ ಹೊಳೆದುಬಿಟ್ಟಿತು. ಬ್ರಿಸ್ಬನ್ ನಗರಕ್ಕೂ ನನ್ನೂರು ಬೆಂಗಳೂರಿಗೂ ಇದ್ದ ಹೋಲಿಕೆ. ನಾನು ಬೆಳೆದ ಆ ಹಿಂದಿನ ಚಿಕ್ಕ, ಜನನಿಬಿಡ, ಹಸಿರು ತುಂಬಿದ್ದ ನಗರ ಬೆಂಗಳೂರು ಹೇಗಿತ್ತೋ ಹಾಗಿತ್ತು ನನ್ನ ಕಣ್ಣ ಮುಂದಿದ್ದ ಚಿಕ್ಕ ಸುಂದರ ನಗರ ಬ್ರಿಸ್ಬನ್. ಒಂದು ವ್ಯತ್ಯಾಸ ಇತ್ತು – ನಗರಕೇಂದ್ರದ ನೈರುತ್ಯ ದಿಕ್ಕಿಗೆ ಇದ್ದ, ಹಾವಿನಂತೆ ಸುತ್ತಿಕೊಂಡು ಬಳಸಿಕೊಂಡು ಹರಿಯುತ್ತಿದ್ದ ಕಂಡು ಬಣ್ಣದ ನದಿ. ಈ ನದಿಯೊಂದನ್ನ ಬಿಟ್ಟರೆ ಇನ್ನೇನನ್ನ ನನ್ನೂರಿನಂತೆ ಅಂತ ಕರೆಯಬಹುದು ಎಂದುಕೊಂಡು ಕೂತರೆ ಅನ್ನಿಸಿದ್ದು ಅದೇ – ಕನಕಾಂಬರ, ಕಣಿಗಲೆ, ದಾಸವಾಳ, ಮಲ್ಲಿಗೆ, ಕಾಕಡ, ಜಾಜಿ, ಬಸಳೆ, ಕರಿಬೇವು, ದಂಟು, ಮೆಂತ್ಯೆ, ನುಗ್ಗೆಕಾಯಿ, ತುಳಸಿ, ಮಾವು, ಬಾಳೆ, ಬೇವು, ದಾಳಿಂಬೆ ಎಲ್ಲದರ ಜೊತೆಗೆ ಎಲ್ಲೋ ಇನ್ನೂ ಅಡಗಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಸಂಪಿಗೆಯ ಸುವಾಸನೆ … ತವರಿನ ನೆನಪು ಅಂದರೆ ಇದೇನೇ ಇರಬಹುದು. Teleporting ಮಾಡಿಕೊಂಡು ಇದ್ದಕ್ಕಿದ್ದಂತೆ ಬೆಂಗಳೂರಿನ ನಮ್ಮ ಐಟಿಐ ಕಾಲೋನಿಯಲ್ಲಿ ನಾನು ಪ್ರತ್ಯಕ್ಷವಾದಂತೆ.
ಆಸ್ಟ್ರೇಲಿಯಾದಲ್ಲಿ ಸರಕಾರೀ ಅನುಮೋದಿತ ಪದ್ಧತಿ ಒಂದಿದೆ. ಸ್ವದೇಶಿಗಳಿಗೆ (Aboriginal and Torres Strait Islanders), ಅವರ ಒಡೆತನ ಮತ್ತು ಹಕ್ಕುಗಳಿಗೆ, ಅವರು ಕಾಪಾಡಿಕೊಂಡು ಬಂದಿರುವ ನೆಲ, ಜಲ, ಪ್ರಕೃತಿ ಮೂಲಗಳಿಗೆ ಗೌರವವನ್ನು ಸೂಚಿಸುವುದು. ಹಾಗಾಗಿ ಎಲ್ಲಾ ಸಂಸ್ಥೆಗಳು ಅವುಗಳು ಕೆಲಸ ಮಾಡುವ ಪ್ರದೇಶದ ಸ್ವದೇಶಿ ಜನಪಂಗಡಗಳ ಹೆಸರನ್ನು ಹೇಳುತ್ತಾ ಆ ತರಹದ ಒಪ್ಪಿಗೆಯನ್ನು ತೋರಿಸಬೇಕು. ಅದು ಹೀಗಿರುತ್ತದೆ – ನಾನು/ನಾವು ನಿಂತಿರುವ ಈ ಭೂಮಿಯ, ಕುಡಿಯುತ್ತಿರುವ ನೀರಿನ ಮೂಲಗಳ, ಸುತ್ತಲೂ ಇರುವ ಸಮದ್ರಗಳ ಸಾಂಪ್ರದಾಯಿಕ ಒಡೆಯರಿಗೆ ನನ್ನ/ನಮ್ಮ ವಂದನೆಗಳು. ಈ ನೆಲದ ಸಾಂಪ್ರದಾಯಿಕ ಸ್ವದೇಶಿ ಹಿರಿಯರಿಗೆ ಮತ್ತು ಈಗಿರುವ ಸಮುದಾಯಗಳ ಅವರ ಮುಂದಾಳುಗಳಿಗೆ ನಾನು ಗೌರವವನ್ನು ಸೂಚಿಸುತ್ತೇನೆ. ಸ್ವದೇಶಿ ಜನರು ಮತ್ತು ದ್ವೀಪಗಳ ಜನರ ಅಮೂಲ್ಯ ಕೊಡುಗೆಗಳನ್ನು ನಾನು ಸ್ವೀಕರಿಸುತ್ತೀನಿ.
ಬ್ರಿಸ್ಬನ್ ನಗರವಾಸಿಯಾಗಿ ಅಲ್ಲಿನ ಒಂದು ಯೂನಿವರ್ಸಿಟಿಯಲ್ಲಿ ಕೆಲಸ ಮಾಡಲು ಆರಂಭಿಸಿದಾಗ ನಾನು ನನ್ನ ಇಮೇಲ್ ಸಹಿಯ ಕೆಳಗಡೆ ಆ ತರಹದ ಗೌರವಸೂಚಕ ಸಂದೇಶವನ್ನು ಮೊದಲ ಬಾರಿಗೆ ಅಳವಡಿಸಿಕೊಂಡೆ. ಆ ಪ್ರದೇಶದ ಟುರುಬುಲ್, ಜಾಗರ, ನಿಂಗಿ ನಿಂಗಿ ಮತ್ತು ಕಾಬಿ ಕಾಬಿ (Turubul, Jagara, Ningy Ningy, Kabi Kabi) ಕುಲಗಳಿಗೆ ನನ್ನ ವಂದನೆಗಳು ಎಂದು. ಅವರ ನಾಡನ್ನು ನನ್ನ ಮನೆ ಎಂದು ಕರೆದುಕೊಳ್ಳುವ ಅಪೂರ್ವ ಭಾವನೆಗೆ ಬಹುಶಃ ಅವರ Spirit ಶಕ್ತಿಗಳ ಸಮ್ಮತಿ ಇದೆಯೇನೋ. ಇಲ್ಲವಾಗಿದ್ದರೆ ಮುಂಚೆ ಒಪ್ಪಿಕೊಂಡಿದ್ದ Wollongong, ವಾಸವಾಗಿದ್ದ Melbourne ಗಳನ್ನ ಬಿಟ್ಟು ಬ್ರಿಸ್ಬನ್ ಗೆ ಯಾಕೆ ಹೋಗುತ್ತಿದ್ದೆ, ಆ ನಗರವನ್ನು ಕಂಡಾಪಟ್ಟೆ ಪ್ರೀತಿಸುವ ಚಾಳಿಗೆ ಯಾಕೆ ಬೀಳುತ್ತಿದ್ದೆ ಅನ್ನಿಸುತ್ತದೆ.
ಬ್ರಿಸ್ಬನ್ ನನ್ನ ಗಟ್ಟಿಮೇಳ. ಅದು ನಾನು ಹಾಕಿದ ಸಹಿ. ಅದು ಯಾಕೆಂದರೆ ಹೇಗೆಂದರೆ …ನನ್ನಮ್ಮ ಸತ್ತ ಮೇಲೆ ತವರಿಲ್ಲ ಎಂಬಂತೆ ಖಾಲಿಯಾಗಿದ್ದ, ಬಚ್ಚಿಟ್ಟಿದ್ದ ಮನಸ್ಸಿನ ಪೊಟರೆಗಳಿಗೆ ಹತ್ತಿಕೊಂಡಿದ್ದ ಧೂಳು, ಜೇಡರಬಲೆಯನ್ನು ಕೊಡವಿ ಸಗಣಿ ನೀರು ಹಾಕಿ ಸಾರಿಸಿ ಹೊಸ ಬಣ್ಣ ಹೊಡೆದು ರಂಗೋಲಿ ಬಿಡಿಸಿ ಏನಕ್ಕೋ ಅಣಿಯಾದಂತೆ …
ವರ್ಷದ ಆರು ತಿಂಗಳು ಇರುವ ಕಡು ಬೇಸಗೆಯ ಬಿಸಿಲನ್ನು ಸಹಿಸಲಾರದೆ ಬೈಯುತ್ತಲೇ ಇದ್ದರೂ … ಆಗಾಗ ಚಪ್ಪಲಿ ಹಾಕಿಕೊಳ್ಳದೆ ಬರಿಕಾಲಲ್ಲಿ ತಿರುಗಿ ಬೊಬ್ಬೆ ಬಂದು, ರಕ್ತ ಬಂದು ಬೊಂಬಡಾ ಬಜಾಯಿಸಿದಾಗಲೂ … ಮೆಲ್ಬೋರ್ನ್ ನಲ್ಲಿದ್ದಾಗ ರವೆಯಷ್ಟು ಬಣ್ಣ ಬಿಟ್ಟುಕೊಂಡಿದ್ದ ಮೈಚರ್ಮ ಬ್ರಿಸ್ಬನ್ ನ ಬಿಸಿಲಿಗೆ ಕಪ್ಪು ತಿರುಗಿ, ನಮ್ಮಪ್ಪ ಬೆಂಗಳೂರಿನಲ್ಲಿ ನನ್ನ ಕಪ್ಪುಬಣ್ಣವನ್ನ ನೋಡಿ ನಗಾಡಿದರೂ … ಸಂಪಿಗೆಯನ್ನು ಹುಡುಕಿಕೊಂಡು ಬೀದಿ ಸುತ್ತಿ ಅನುಮಾನದ ದೃಷ್ಟಿಗಳಿಗೆ ಆಹಾರವಾದರೂ …
ಬ್ರಿಸ್ಬನ್ ನನ್ನ ಗಟ್ಟಿಮೇಳ. ಅದು ನಾನು ಹಾಕಿದ ಸಹಿ. ಅದು ಯಾಕೆಂದರೆ ಹೇಗೆಂದರೆ …
ನನ್ನಮ್ಮ ಸತ್ತ ಮೇಲೆ ತವರಿಲ್ಲ ಎಂಬಂತೆ ಖಾಲಿಯಾಗಿದ್ದ, ಬಚ್ಚಿಟ್ಟಿದ್ದ ಮನಸ್ಸಿನ ಪೊಟರೆಗಳಿಗೆ ಹತ್ತಿಕೊಂಡಿದ್ದ ಧೂಳು, ಜೇಡರಬಲೆಯನ್ನು ಕೊಡವಿ ಸಗಣಿ ನೀರು ಹಾಕಿ ಸಾರಿಸಿ ಹೊಸ ಬಣ್ಣ ಹೊಡೆದು ರಂಗೋಲಿ ಬಿಡಿಸಿ ಏನಕ್ಕೋ ಅಣಿಯಾದಂತೆ …
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
ವಾವ್… ಸಂಪಿಗೆಯ ಘಮ ಬಹಳ ಚೆನ್ನಾಗಿದೆ…