Advertisement
ನಾಗಶ್ರೀ ಅಜಯ್‌ ಹೊಸ ಅಂಕಣ ಲೋಕ ಏಕಾಂತ ಆರಂಭ

ನಾಗಶ್ರೀ ಅಜಯ್‌ ಹೊಸ ಅಂಕಣ ಲೋಕ ಏಕಾಂತ ಆರಂಭ

ಮನೆ, ನೆಂಟರಿಷ್ಟರು, ಎಫ್ ಬಿ ಯಲ್ಲಿ ಸಾವಿರಾರು ಸ್ನೇಹಿತರು, ಸಹೋದ್ಯೋಗಿಗಳು ಹೀಗೆ ಪರಿಚಿತರ ಸಂಖ್ಯೆ ಹೆಚ್ಚಿರಬಹುದು. ಆದರೆ ನಮ್ಮ ಅಂತರಂಗದ ಪಿಸುಮಾತಿಗೆ ಕಿವಿಯಾಗುವವರು, ದುರ್ಬಲ ಘಳಿಗೆಯಲ್ಲಿ ಹೆಗಲಾಗುವವರು, ನೀನೇನೇ ಆಡಿದರೂ, ಮೌನವಾಗುಳಿದರೂ ಅರ್ಥಮಾಡಿಕೊಳ್ಳಬಲ್ಲೆ ಎನ್ನುವವರು ಎಷ್ಟು ಜನರಿಗಿದ್ದಾರೆ ಹೇಳಿ? ಅವರಿವರ ಮಾತು ಬಿಡಿ. ಮೊಬೈಲ್ ಬಂದ ಮೇಲಂತೂ ನಮಗೆ ನಾವು ದೊರಕುವುದೂ ಅಪರೂಪವೇ.ಯಾವುದೋ ಪುಟವೊಂದರಲ್ಲಿ ಮುಳುಗಿ ಹೋಗಿರುತ್ತೇವೆ. -ಹೀಗೆ ಬದುಕಿನ ಮಾಮೂಲಿ ಕ್ಷಣಗಳ ನಡುವೆ ನುಸುಳಿಕೊಂಡಿರುವ ಸೂಕ್ಷ್ಮಗಳನ್ನು ಗುರುತಿಸಿ ಹೊಸ ಅಂಕಣ ಬರೆಯಲಿದ್ದಾರೆ ಎಸ್.‌ ನಾಗಶ್ರೀ ಅಜಯ್.‌ ಅವರ ಮೊದಲ ಬರಹ ಇಂದಿನ ಓದಿಗಾಗಿ. 

ಏಕಾಂತ ಈ ದಿನಮಾನದ ದುಬಾರಿ ಸರಕು

“ನೀನು ನೆನಪುಗಳೊಟ್ಟಿಗೂ, ಕನಸುಗಳೊಟ್ಟಿಗೂ ಜೀಕುವಾಗ ಇಂದಿನ ದಿನ, ಇಂದಿನ ಕ್ಷಣವನ್ನು ಕಳೆದುಕೊಳ್ಳುತ್ತಿರುವೆ ಎಂಬ ಅರಿವಿದ್ದರೆ ಸಾಕು ಹುಡುಗಿ” ಅಂತಿದ್ದಳು ಗೆಳತಿ. ಇತ್ತೀಚೆಗೆ ಬದುಕೆಂದರೆ ಏನು? ಅದನ್ನು ಹೇಗೆ ಪರಿಗಣಿಸಬೇಕು? ಹೇಗೆ ಬಾಳಬೇಕು? ಸರಿಯೇನು? ತಪ್ಪೇನು? ಇತ್ಯಾದಿಗಳ ಉಪನ್ಯಾಸ ಮಾಲಿಕೆಗಳು ಎಲ್ಲೆಂದರಲ್ಲಿ ನಮ್ಮ ಬೆರಳ ತುದಿಯ ಒಂದು ಒತ್ತುಗುಂಡಿಯ ಸನಿಹದಲ್ಲಿ ಸಿಗಲು ತೊಡಗಿದ ಮೇಲೆ ಪ್ರತಿಯೊಬ್ಬರೂ ‘ಸದ್ಗುರು’ ಆಗುತ್ತಿದ್ದಾರೆನ್ನಿಸಿ ನಗು ಬಂದುಬಿಟ್ಟಿತು.

ಈ ಲೈವ್ ಇನ್ ಪ್ರಸೆಂಟ್ ರೀತಿಯ ಉಪದೇಶಗಳು, ‘ಟೇಕ್ ಒನ್ ಡೇ ಅಟ್ ಎ ಟೈಂ’ ಅಂತಹವು ಕೇಳಿದಾಗ ನೀಡುವ ನಿರುಮ್ಮಳ ಭಾವವಷ್ಟೇ ನಿಜವೆನ್ನಿಸುವುದು ಹಲವು ಸಲ. “ನಿನ್ನೆ ಕಲಿತ ಪಾಠ, ನಾಳೆಯೆಡೆಗಿನ ಹುಚ್ಚುಕನಸುಗಳು ಇರದ ಬದುಕು ನೀರಸ. ಅಂತಹ ಬೇಸರದ ಬದುಕು ಕೊಂಡೊಯ್ಯುವುದಾದರೂ ಎಲ್ಲಿಗೆ ಹೇಳು?” ಅಂದಿದ್ದೆ.

ಈ ರೀತಿಯ ಮಾತುಕತೆ ನಮ್ಮ ಮಧ್ಯೆ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಎಷ್ಟೋ ಸಲ ಕೊನೆಮೊದಲಿಲ್ಲದೆ ಎಲ್ಲಿಂದಲೋ ಶುರುವಾದ ಚರ್ಚೆ ಒಂದೊಂದೇ ಗೆರೆಗಳನ್ನು ಸೇರಿಸಿಕೊಳ್ಳುತ್ತಾ, ನಮ್ಮ ಮನಸ್ಸಿನ ಮೂಲೆಯಲ್ಲಿ ಅವಿತಿದ್ದ ವಸ್ತು, ವಿಚಾರಗಳನ್ನು ಚಿತ್ರವತ್ತಾಗಿ ಮೂಡಿಸಿದಾಗ ನಮಗೆ ನಾವೇ ಅಪರಿಚಿತ ಅದ್ಭುತ ವ್ಯಕ್ತಿಯಾಗಿ ಕಂಡಿದ್ದಿದೆ. ನಗರಜೀವನದ ಬಿಡುವಿಲ್ಲದ ದಿನಚರಿಯಲ್ಲಿ ಹೀಗೆ ಒಳಹೊಕ್ಕು ನೋಡುವ ಕಿಂಡಿಯಾಗಿ ಒಬ್ಬರಿಗೊಬ್ಬರು ಇದ್ದೇವೆಂಬುದೇ ಸಾಂತ್ವನವೀಯುವ ಸಂಗತಿ. ಮನೆ, ನೆಂಟರಿಷ್ಟರು, ಎಫ್ ಬಿ ಯಲ್ಲಿ ಸಾವಿರಾರು ಸ್ನೇಹಿತರು, ಸಹೋದ್ಯೋಗಿಗಳು ಹೀಗೆ ಪರಿಚಿತರ ಸಂಖ್ಯೆ ಹೆಚ್ಚಿರಬಹುದು. ಆದರೆ ನಮ್ಮ ಅಂತರಂಗದ ಪಿಸುಮಾತಿಗೆ ಕಿವಿಯಾಗುವವರು, ದುರ್ಬಲ ಘಳಿಗೆಯಲ್ಲಿ ಹೆಗಲಾಗುವವರು, ನೀನೇನೇ ಆಡಿದರೂ, ಮೌನವಾಗುಳಿದರೂ ಅರ್ಥಮಾಡಿಕೊಳ್ಳಬಲ್ಲೆ ಎನ್ನುವವರು ಎಷ್ಟು ಜನರಿಗಿದ್ದಾರೆ ಹೇಳಿ? ಅವರಿವರ ಮಾತು ಬಿಡಿ. ಮೊಬೈಲ್ ಬಂದ ಮೇಲಂತೂ ನಮಗೆ ನಾವು ದೊರಕುವುದೂ ಅಪರೂಪವೇ.

ಈಗ ಇಪ್ಪತ್ತು ವರ್ಷಗಳ ಹಿಂದಿನ ನಮ್ಮ ಬಾಲ್ಯದಲ್ಲಿ ಕಿಟಕಿ ಪಕ್ಕದ ಸೀಟು ಹಿಡಿದು ಸಿನಿಮಾ ಹಾಡು ಗುನುಗುತ್ತಾ, ಗಾಳಿಗೆ ಕಿವಿಯೊಡ್ಡಿ ಪಯಣಿಸುವುದು, ಸೈಕಲ್ ಟೈರಿಗೆ ಕಡ್ಡಿಹೊಡೆಯುತ್ತಾ ಅದರ ಸಮಕ್ಕೂ ಓಡುತ್ತಾ ಕೇರಿ ಸುತ್ತುವುದು, ಗಸಗಸೆ ಮರದ ಮೇಲೆ ಕೂತು ಒಂದೊಂದೇ ಕೆಂಪು, ಅರೆಹಳದಿ ಹಣ್ಣು ಕೀಳುತ್ತಾ ಮೈಮರೆಯುವುದು, ಪುಸ್ತಕದ ಕೊನೆಪುಟದಲ್ಲಿ ಕಣ್ಣು, ಸುರಳಿ, ಹೆಸರು ಗೀಚುತ್ತಾ ಸಮಯ ಕೊಲ್ಲುವುದು, ಕಥೆಪುಸ್ತಕ ಹಿಡಿದು ಚಂದಮಾಮನ ಲೋಕಕ್ಕೆ ಏರುವುದು ಎಷ್ಟು ಮಜವೆನಿಸುತ್ತಿತ್ತು! ಹರೆಯವಂತೂ ಸದಾ ಏಕಾಂತಕ್ಕೆ ತುಡಿಯುವ ಸಮಯ. ಮನಸು ಕದ್ದ ಚೋರನ ಹೆಸರು ಗಟ್ಟಿಯಾಗಿ ಹೇಳಲೂ ಭಯಮಿಶ್ರಿತ ನಾಚಿಕೆಯಿಂದ ಕಂಪಿಸುತ್ತಿದ್ದ, ಕನ್ನಡಿಯೊಳಗೆ ಇಣುಕಿ ಇಣುಕಿ ಮೋಹಿಸುವ, ಮೊದಮೊದಲ ಪ್ರೇಮವನ್ನು ಬಚ್ಚಿಡಲೂ ಆಗದೆ ಬಿಚ್ಚಿಡಲೂ ಆಗದೆ, ಡೈರಿಯೊಳಗೆ ತುಂಬಿಸುತ್ತಿದ್ದ ಭವ್ಯ ಏಕಾಂತವದು.

‘ನೀವೊಬ್ಬರೇ ಇದ್ದಾಗ ನೀವೇನಾಗಿರುತ್ತೀರೋ ಅದು ನಿಜವಾದ ನಿಮ್ಮ ವ್ಯಕ್ತಿತ್ವ’ ಎಂಬ ಮಾತು ಕೇಳಿರದ ಜನರೇ ಇಲ್ಲ. ಆದರೆ ನಾವೊಬ್ಬರೇ ನಮ್ಮೊಂದಿಗಿರುವ ಏಕಾಂತ ಈ ದಿನಮಾನದ ದುಬಾರಿ ಸರಕು. ದೇವಸ್ಥಾನ, ಆಸ್ಪತ್ರೆ, ಸಮಾರಂಭ, ಸಾವಿನ ಮನೆ, ಕಡೆಗೆ ಶೌಚಾಲಯದಲ್ಲೂ ಅರೆಕ್ಷಣ ಏಕಾಗ್ರ ಮನಃಸ್ಥಿತಿಯಲ್ಲಿ ನಮ್ಮೊಂದಿಗಿರಲಾರದೆ, ಜೇಬು ತಡಕಾಡುವ, ಮೊಬೈಲಲ್ಲಿ ಮಾತನಾಡುತ್ತಲೋ, ಬರೆಯುತ್ತಲೋ, ದಿಕ್ಕುತೋಚದೆ ಸ್ಕ್ರಾಲ್ ಮಾಡುತ್ತಲೋ ವಿಲಗುಟ್ಟುವ ವಿಲಕ್ಷಣ ಜನಾಂಗವಾಗಿದ್ದೇವೆ. ಅದೇ ಕಾರಣಕ್ಕೆ ಕಲೆ, ಸಾಹಿತ್ಯ, ಸಂಗೀತ, ರಂಗೋಲಿ, ಭಜನೆ, ಆಧ್ಯಾತ್ಮ, ಜನಸೇವೆ ಎನ್ನುತ್ತಾ ಓಡಾಡುವರು ವಿಶೇಷವೆನ್ನಿಸುತ್ತಾರೆ. ಹಾಡುವ ಅರ್ಧಗಂಟೆ, ಬರೆಯುವ ಇಪ್ಪತ್ತು ನಿಮಿಷ, ಧ್ಯಾನಕ್ಕೆ ಕೂತಾಗಿನ ಮೂರು ನಿಮಿಷ, ಗಿಡಗಳೊಂದಿಗೋ, ಮುದ್ದಿನ ನಾಯಿಮರಿಯೊಂದಿಗೋ ಆಡುತ್ತಾ ಕಳೆದ ಏಕಾಂತ ನಮ್ಮನ್ನು ಪೊರೆಯುತ್ತದೆ. ಕರೋನಾ ಸಮಯದಲ್ಲಿ ಮನೆಯಿಂದ ಆಚೆ ಬರಲಾಗದ, ಜನರೊಂದಿಗೆ ಸೇರಲಾಗದ ವಿಷಮ ಸನ್ನಿವೇಶದಲ್ಲಿ ಹವ್ಯಾಸಗಳನ್ನು ಹೊರತುಪಡಿಸಿದರೆ ನಮ್ಮನ್ನು ಕಾಪಾಡಿದ್ದು ಸಾಕುಪ್ರಾಣಿಗಳೇ. ಮನೆಮನೆಗಳಲ್ಲೂ ಬೆಕ್ಕು, ನಾಯಿ, ಮೀನು ಸಾಕುವ ಉಮೇದು ಹುಟ್ಟಿತು. ಮನುಷ್ಯನ ನಿಜವಾದ ಸ್ನೇಹಿತ ನಾಯಿ ಎಂದರು. ಬೀದಿನಾಯಿಗಳನ್ನು ಹುಡುಕುತ್ತಾ ಅಲೆದು ಊಟ ಹಾಕಿದರು. ಅವುಗಳು ಬೆದರಿ, ನಮಗೆ ನಿಮ್ಮ ಮುದ್ದು ಬೇಕು ಎಂದವಂತೆ. ಶಾಲೆಯ ವಾತಾವರಣದಿಂದ ವಂಚಿತರಾಗಿ, ಮಾನಸಿಕವಾಗಿ ಕುಗ್ಗಿದ ಮಕ್ಕಳನ್ನು ಸಾಕುಪ್ರಾಣಿಯ ಸಹವಾಸಕ್ಕೆ ಬಿಡಿ ಎನ್ನುತ್ತಿದ್ದಾರಂತೆ ತಜ್ಞರು. ಮಕ್ಕಳು ಮಾತ್ರವಲ್ಲ. ದೊಡ್ಡವರಿಗೂ ಒಂಟಿತನ ಶಾಪದಂತೆ, ವ್ರಣದಂತೆ ಕಾಡುವುದು ಸುಳ್ಳಲ್ಲ. ಹಾಗೆ ಯಾರೂ ಇಲ್ಲದಾಗಲೂ ಸಂತೋಷವಾಗಿ, ಸಮಾಧಾನದಿಂದ ಶಾಂತಚಿತ್ತರಾಗಿರುವುದು ಹಲವರ ಪಾಲಿಗೆ ಅಸಾಧ್ಯದ ಮಾತು. ಒಬ್ಬರೇ ಇದ್ದಾಗಲೂ ಒಂಟಿಯೆನಿಸದಿರಲು, ಸುಂದರ ಸಖ/ಸಖಿ ನಮಗೆ ನಾವಾಗಲು ಬಹಳ ಸಿದ್ಧತೆ ಬೇಕು. ಆ ಸಿದ್ಧತೆಗಳ ಮಾತಾಡಲು ತೊಡಗಿದರೆ ನಾನೂ ಉಪದೇಶಾಮೃತ ನೀಡುವ ಪ್ರವಚನಕಾರರಂತೆ ಕಾಣುವೆ. ಮತ್ತೆ ನಗು.

ಏಕಾಂತದಲ್ಲಿದ್ದಾಗ ತಲೆ ಖಾಲಿಯಿರಲು ಸಾಧ್ಯವೇ? ಯಾವುದೋ ಹಾಡು, ಬಾಲ್ಯದ ಆಟ, ಹದಿಹರೆಯದ ಪ್ರೇಮ, ಅರ್ಧಕ್ಕೆ ನಿಂತ ಜಗಳ, ನಾಳೆಯ ಕೆಲಸ, ನಿನ್ನೆಯ ಸಂಭ್ರಮ, ಸಣ್ಣಪುಟ್ಟ ರಗಳೆ, ಕಣ್ಮುಚ್ಚಲು ಬಿಡದ ಕನಸು, ಯಾವುದೋ ಮೋಹನ, ಯಾರೋ ರಾಧೆ ಏಕಾಂತದ ಸಂಜೆ ಬಲೆಬೀಸಿ ಮನದ ಮೀನು ಹಿಡಿಯುವರು. ಅದೊಂದು ಐಸ್ಕ್ಯಾಂಡಿಯಂತಹ ತಣ್ಣನೆ ಸುಖ. ಕಾಲದರಿವು ಇಲ್ಲದೆ ನಿನ್ನೆ-ನಾಳೆಗಳ ಮಧ್ಯೆ ಜೀಕುವುದು, ನಮ್ಮೊಳಗೆ ನಾವಿಳಿದು ವಿಚಾರ ಮಾಡುವುದು, ಆಗಾಗ ಆತ್ಮಸಾಕ್ಷಿಯನ್ನು ತಡವಿ ಎಚ್ಚರಿಸುವುದು ನನ್ನ ಪಾಲಿಗಂತೂ ‘ಇಂದ’ನ್ನು ಕಳೆದ ಹಾಗಲ್ಲ. ನಿನ್ನೆ-ನಾಳೆಗಳ ಹಂಗಿಲ್ಲದ ಇಂದಿಗೆ ಬೆಲೆಯಾದರೂ ಎಲ್ಲಿ? ಹೀಗೆ ಕನಸು ಕಾಣುವಾಗ ಎಲ್ಲರಿಗೂ ಅಂತರಂಗದ ಪಿಸುಮಾತು ಆಲಿಸುವ ಗೆಳೆಯನೊಬ್ಬ ಸಿಗಲಿ. ಕಡೇಪಕ್ಷ ಸಾಕುಪ್ರಾಣಿಯೆಂಬ ಜೀವ ಹೃದಯ ಬೆಚ್ಚಗಿಡಲಿ. ನಮ್ಮ ಏಕಾಂತ ಸಹನೀಯವಾಗಲಿ. ಲೋಕಾಂತ ಮುಂದುವರೆಯಲಿ.

About The Author

ಎಸ್. ನಾಗಶ್ರೀ ಅಜಯ್

ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.

11 Comments

  1. Sowmya

    So well written about today’s life…

    Reply
  2. Smitha Amrithraj.

    ಅಂತರಂಗದ ಲಹರಿ ಚೆಂದಿದೆ ನಾಗಶ್ರೀ,.

    Reply
  3. Kamala

    Simple and meaningful

    Reply
  4. Varun

    👏👏👏👏

    Reply
  5. Nataraja K

    Chennagide 😊

    Reply
  6. ಅಶೋಕ ಬಿ.ಎ

    ಅದ್ಭುತ ಲೇಖನ… ನಮ್ಮ ದಿನಚರಿಯ ಬಗ್ಗೆ ಯೋಚಿಸುವಂತೆ ಮಾಡುವ ಬರಹ

    Reply
  7. Jayashree Deshpande

    ಅತ್ಯಂತ ಆಪ್ತವಾಗಿದ ಬರಹ. ಮನವ
    ಶೋಧಿಸಿ ನೋಡಲು ಪ್ರೇರೆಪಿಸುತ್ತದೆ.

    ಜಯಶ್ರೀ ದೇಶಪಾಂಡೆ

    Reply
  8. Amulya S

    ‘ನಾವೊಬ್ಬರೇ ನಮ್ಮೊಂದಿಗಿರುವ ಏಕಾಂತ ಈ ದಿನಮಾನದ ದುಬಾರಿ ಸರಕು’.. ಆಹಾ ಎಂಥ ಸಾಲು. ಇಂದಿನ ನಮ್ಮ ಜೀವನಶೈಲಿಗೆ, ಬಾಲ್ಯದಲ್ಲಿ ಇಲ್ಲದೆ ಆದರೆ ಈಗ ಮೈಗೂಡಿಕೊಂಡಿರುವ ಒಂದಷ್ಟು ದುರಭ್ಯಾಸಗಳಿಗೆ, ಏಕಾಂತದ ಹೆಸರಲ್ಲಿ ಏಕತಾನತೆಯತ್ತ ಹೊರಳುತ್ತಿರುವ ಬದುಕಿಗೆ ಹಿಡಿದ ಕನಗನಡಿಯಂತಿದೆ. ನಾಗಶ್ರೀ ಅವರಿಗೆ ಅಭಿನಂದನೆಗಳು. ಮುಂದಿನ ಲೇಖನಕ್ಕೆ ಕಾತುರದಿಂದ ಕಾಯುತ್ತಿರುವೆ.

    Reply
  9. Sheela bhandarkar

    ನನ್ನೊಳಗಿನ ನನ್ನನ್ನೇ ಮಾತನಾಡಿಸಿದಂತಾಯ್ತ. ಆಪ್ತ ಬರಹ ನಾಗಶ್ರಿ. 👌♥👏

    Reply
  10. SUSHMA

    ತುಂಬಾ ರಿಫ್ರೇಶಿಂಗ್ ಬರಹ.. ಮುಂದುವರೆಯಲಿ.. ಅಭಿನಂದನೆಗಳು

    Reply
  11. ಗೋಪಾಲ ತ್ರಾಸಿ

    ಸೊಗಸಾದ ನಿರೂಪಣೆ..ಅಂಕಣಕೆ ಚೆಂದದ ಪ್ರವೇಶ.. ಶುಭವಾಗಲಿ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ