Advertisement
ಕಪ್ಪುಬಿಳುಪಿನ ಉತ್ತರ ಕೊಡಲಾಗದ ಪ್ರಶ್ನೆಗಳು

ಕಪ್ಪುಬಿಳುಪಿನ ಉತ್ತರ ಕೊಡಲಾಗದ ಪ್ರಶ್ನೆಗಳು

ಬಸ್ಸಿನ ಕಿಟಕಿ ಸರಿಸಿದೆ. ಮಳೆಯ ಬಿಡಿಬಿಡಿ ಹನಿ ಈ ಬಾರಿ ಅಷ್ಟು ಕಿರಿಕಿರಿಗೊಳಿಸಲಿಲ್ಲ. ಆದರೂ ಗಂಡನ ಗೆಳೆಯ ಮತ್ತು ಆ ಮಂಗಳಮುಖಿಯ ಬಗ್ಗೆ ಯಾವುದೋ ಅವ್ಯಕ್ತ ಭಯ ಆಳದಲ್ಲಿತ್ತು. ಗಂಡ ನೂತನನಿಗೆ ಬೇರೆ ಯಾವ ಆಯ್ಕೆಗಳೂ ಇರಲಿಲ್ಲವಾ? ನಾನೊಂದು ಕೇವಲ ಅನಿವಾರ್ಯ ಆಯ್ಕೆಯಾಗಿದ್ದೆನಾ? ನೂತನ್ ನನ್ನನ್ನು ನಿಜಕ್ಕೂ ಇಷ್ಟ ಪಡುತ್ತಿದ್ದಾನಾ? ಅಥವಾ ಕೇವಲ ತನ್ನ ಕರ್ತವ್ಯವನ್ನಷ್ಟೇ ನಿಭಾಯಿಸುತ್ತಿದ್ದಾನಾ? ಎಲ್ಲವೂ ಗೋಜಲು ಗೋಜಲಿಗೆ ಇಟ್ಟುಕೊಂಡಿತು. ನನ್ನ ಗಂಡ ಬೈಸೆಕ್ಷುಯಲ್ ಅನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ಯಾಕಿಷ್ಟು ಭಯಪಟ್ಟುಕೊಳ್ಳುತ್ತಿದ್ದೇನೆ? ತರಗತಿಯಲ್ಲಿ ಹಾಗೆ ಲೀಲಾಜಾಲವಾಗಿ ಯಾವುದೇ ಭಿಡೆಯಿಲ್ಲದೆ ಮುಕ್ತವಾಗಿ ಪ್ರಶ್ನೆಗಳಿಗೆ ಉತ್ತರಿಸುವ ನಾನು ಇರುವುದನ್ನು ಇರುವ ಹಾಗೆ ಒಪ್ಪಿಕೊಳ್ಳಲು ಯಾಕಿಷ್ಟು ಭಯ ಪಟ್ಟುಕೊಳ್ಳುತ್ತಿದ್ದೇನೆ?
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್” ಅಂಕಣದಲ್ಲಿ ಹೊಸ ಬರಹ

ನಾನಾಗ ಪಾಠ ಮಾಡುತ್ತಿದ್ದೆ. ತರಗತಿ ಮುಗಿಯಲು ಹದಿನೈದು ನಿಮಿಷಗಳಿದ್ದವು. ಇದ್ದಕ್ಕಿದ್ದಂತೆ ಇಡೀ ತರಗತಿಯ ಕಣ್ಣುಗಳು ಹೊಸತಾಗಿ ಅರಳಿ, ಅವು ಮೂಗೇರಿಸುತ್ತಾ ಕತ್ತು ಮೇಲಕ್ಕೆತ್ತಿ ಕೆಳಗಿಳಿಸಿದವು. ಮಳೆ ಮತ್ತೆ ಆರಂಭವಾಗಿತ್ತು. ಬೆಳಿಗ್ಗೆಯಿಂದಲೇ ಜಿಟಿಜಿಟಿ ಹಿಡಿದುಬಿಟ್ಟಿತ್ತು. ಮಳೆ ಸುರಿಯುವ ಸದ್ದು, ತರಗತಿಯ ಒಳಗೂ ಮಳೆಹನಿಗಳ ಸಮೇತ ಇಣುಕುತ್ತಿದ್ದ ತಣ್ಣಗಿನ ಹವೆಗೆ ಇಡೀ ತರಗತಿಯೇ ಕ್ಷಣಕಾಲ ಒಂದು ತಾಜಾ ಅನುಭೂತಿಯನ್ನು ತನ್ನದಾಗಿಸಿಕೊಂಡಿತ್ತು. ಆದರೆ ನನಗೆ ಮಳೆಯೆಂದರೆ ಅಷ್ಟಕ್ಕಷ್ಟೇ… ಮಾನವ ಸಂತಾನೋತ್ಪತ್ತಿ ವಿಷಯದ ಪಾಠ ರೋಚಕವೆನಿಸಿದ್ದರಿಂದಲೋ ಏನೋ ತರಗತಿ ಹೌಸ್ ಫುಲ್ ಆಗಿತ್ತು. ಸಂಖ್ಯಾಶಾಸ್ತ್ರ, ಕಂಪ್ಯೂಟರ್ ಸೈನ್ಸ್ ವಿಭಾಗದ ಹುಡುಗರೂ ಅವರ ತರಗತಿಗಳಿಗೆ ಚಕ್ಕರ್ ಹೊಡೆದು ನನ್ನ ಪಾಠ ಕೇಳಲು ಜಮಾಯಿಸಿದ್ದರು.

ದೇಹ, ಕಾಮ ಮತ್ತು ಸಂತಾನೋತ್ಪತ್ತಿ ಇವು ನಮಗೆ ಎಂದೂ ಮುಗಿಯದ ಕುತೂಹಲಗಳಲ್ಲವೇ? ಗಂಡಸಿನ ಮತ್ತು ಹೆಂಗಸಿನ ಜನನಾಂಗದ ಚಿತ್ರ ಬೋರ್ಡಿನ ಮೇಲಿತ್ತು. ಅವುಗಳ ಪ್ರತಿಯೊಂದು ಭಾಗಗಳು, ಅವು ನಿರ್ವಹಿಸುವ ಕೆಲಸ, ಮಗು ತಾಯಿಯ ಗರ್ಭದಲ್ಲಿ ಹೇಗೆ ಬೆಳೆಯುತ್ತದೆ, ಋತುಚಕ್ರ, ಗರ್ಭ ನಿರೋಧದ ವಿಧಾನಗಳು ಎಲ್ಲವನ್ನೂ ಹೈಸ್ಕೂಲಿನಲ್ಲಿ ಕಲಿಸುವುದಕ್ಕಿಂತ ಹೆಚ್ಚು ವಿವರವಾಗಿ ಕಲಿಸಬೇಕಿತ್ತು. ಗಂಡುಹುಡುಗರಂತೂ ಧಾರಾಳವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕಾಂಡೋಮುಗಳಿಗೆ ಯಾಕೆ ಫ್ಲೇವರ್ ಇರುತ್ತವೆ ಮುಂತಾದ ತರಲೆ ಪ್ರಶ್ನೆಗಳಿಂದ ಹಿಡಿದು ಸಲಿಂಗಿಗಳು, ದ್ವಿಲಿಂಗಿಗಳು, ಉಭಯಲಿಂಗಿಗಳು ಮುಂತಾದವರ ದೇಹರಚನೆಯ ಸಾಮ್ಯತೆ ಮತ್ತು ವ್ಯತ್ಯಾಸಗಳ ಬಗ್ಗೆಯೂ ಪ್ರಶ್ನೆಗಳನ್ನೆಸೆಯುತ್ತಿದ್ದರು. ಅವೆಲ್ಲವುಗಳಿಗೆ ಸಾವಧಾನದಿಂದ, ಹೇವರಿಕೆಯಿಲ್ಲದೆ, ಮುಕ್ತವಾಗಿ ಉತ್ತರಿಸುವಾಗಲೇ ಮಳೆ ಬಂದಿತ್ತು. ಹುಡುಗರು ಇನ್ನೂ ಚುರುಕಾದರು. ಕೈಕೈ ಉಜ್ಜಿಕೊಂಡು ಅಕ್ಕಪಕ್ಕದ ಹುಡುಗರನ್ನು ನೋಡಿ ಕಣ್ಣು ಮಿಟುಕಿಸಿ ಮುಖದಲ್ಲೊಂದು ನಗು ತುಳುಕಿಸಿಕೊಂಡರು. ಪ್ರಶ್ನೆಗಳನ್ನು ಕೇಳಲು ಮುಜುಗರ ಪಟ್ಟುಕೊಳ್ಳುವವರು ಚೀಟಿಯಲ್ಲಿ ಪ್ರಶ್ನೆ ಬರೆದು ತಮ್ಮ ಹೆಸರು ನಮೂದಿಸದೆ ಪಾಸ್ ಮಾಡಬೇಕೆಂದು ಮೊದಲೇ ಹೇಳಿದ್ದರಿಂದ ಸಾಕಷ್ಟು ಪ್ರಶ್ನೆಗಳು ಬಂದಿದ್ದವು. ಆಗ ಕೇವಲ ಹತ್ತು ನಿಮಿಷವಷ್ಟೇ ಉಳಿದದ್ದರಿಂದ ಪ್ರಶ್ನೆಗಳನ್ನೆತ್ತಿಕೊಳ್ಳೋಣವೆಂದು ಹೇಳಿ ಒಂದು ಚೀಟಿ ಎತ್ತಿದೆ. ಮೊದಲನೇ ಪ್ರಶ್ನೆ ಓದಿದೆ. ಸೆಕ್ಷುಯಲ್ ಆಕ್ಟ್ ಮತ್ತು ರೇಪ್‌ಗೂ ಇರುವ ವ್ಯತ್ಯಾಸವೇನು? ಎಂದು ಬರೆದಿತ್ತು. ಆ ಪ್ರಶ್ನೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಾನೇ ಸಾವಧಾನ ತಂದುಕೊಂಡು ಗಟ್ಟಿದನಿಯಿಂದ ‘ಒಪ್ಪಿಗೆ’ ಎಂದಿದ್ದೆ. ದೇಹ ಒಳಗಿನಿಂದ ನಡುಗುತ್ತಿತ್ತು. ಎರಡನೇ ಪ್ರಶ್ನೆ ಕೈಗೆತ್ತಿಕೊಂಡೆ… ಸೆಕ್ಷುಯಲ್ ಪ್ರೆಫೆರೆನ್ಸ್ ಬಗ್ಗೆ ಇತ್ತು. ಆ ಪ್ರಶ್ನೆಗೆ ಅದೇಕೋ ಉತ್ತರ ಹೇಳಲಾಗದೆ ತಡವರಿಸಿದೆ. ಅದೇ ಹೊತ್ತಿಗೆ ಬೆಲ್ ಹೊಡೆದದ್ದು ಕೇಳಿಸಿ ಮುಂದಿನ ತರಗತಿಯಲ್ಲಿ ಸಿಗೋಣವೆಂದು ಹೇಳಿ ತರಗತಿಯಿಂದ ಹೊರಬಿದ್ದೆ…

ಕ್ಲಾಸ್ ರೂಮಿನಿಂದಾಚೆ ಬಂದಾಗ ಮಳೆ ಜೋರಾಗಿಯೇ ಸುರಿಯುತ್ತಿತ್ತು. ತಲೆಯಲ್ಲಿ ಆ ಕೊನೆಯ ಪ್ರಶ್ನೆಯೇ ನನ್ನ ತಲೆಯನ್ನು ಕೊರೆಯುತ್ತಿತ್ತು. ಈ ಮಳೆಯ ಸದ್ದು, ಅದರೊಂದಿಗೆ ಬೀಸುವ ಗಾಳಿ ಮೈಯಲ್ಲಿ ಮುಳ್ಳು ಚುಚ್ಚಿದ ಹಾಗಾಗುತ್ತಿತ್ತು. ನನಗೆ ಮಳೆಯೆಂದರೆ ಇತ್ತೀಚಿಗೆ ಕೆಲವು ವರುಷಗಳಿಂದ ಒಂದು ರೀತಿಯ ಅಸಹನೆ. ”ಯಾಕಾದರೂ ಈ ರೀತಿ ಮಳೆ ಹೊಯ್ಯುತ್ತೋ ಏನೋ,” ಎಂದು ಶಪಿಸುತ್ತಾ ಸ್ಟಾಫ್ ರೂಮಿಗೆ ಬಂದು ನನ್ನ ಲಾಕರಿನಿಂದ ಮೊಬೈಲ್ ತೆಗೆದು ನೋಡಿದರೆ ಅವನ ಮೆಸೇಜಿತ್ತು. ಅವನ ಮೆಸೇಜ್ ಬಂದಿದೆಯೆಂದರೆ ಅವನು ಇನ್ನೆರೆಡು ದಿನ ಮನೆ ಕಡೆ ಹಾಯುವುದಿಲ್ಲವೆಂದೇ ಅರ್ಥ. ಮೆಸೇಜಿನಲ್ಲಿರುವ ಒಕ್ಕಣಿಕೆಯೂ ಹೆಚ್ಚು ಕಡಿಮೆ ಒಂದೇ ಇರುತ್ತದೆ. ”ಹಾಯ್ ಡಿಯರ್. ಆಫೀಸ್ ಕೆಲಸ ಇನ್ನೊಂದೆರಡು ದಿನ ಆಗಬಹುದು. ಆದಷ್ಟು ಬೇಗ ಬರ್ತೀನಿ. ಟೇಕ್ ಕೇರ್” ಎಂದು ಬರೆದಿರುತ್ತಿತ್ತು. ಪ್ರತಿ ತಿಂಗಳು ಹೆಚ್ಚುಕಡಿಮೆ ಅದೇ ಒಕ್ಕಣಿಕೆ. ಅವನು ಮೆಸೇಜ್ ಅಂತ ಮಾಡುವುದು ತಿಂಗಳಿಗೆ ಒಂದೇ ಒಂದು ಬಾರಿ… ಉಳಿದ ದಿನ ಅವನು ಮೆಸೇಜ್ ಮಾಡುವುದಿಲ್ಲ. ನೇರವಾಗಿ ಕಾಲ್ ಮಾಡುತ್ತಾನೆ. ಒಬ್ಬ ಒಳ್ಳೆಯ ಗಂಡನಾಗಿ ಏನು ಮಾಡಬೇಕೋ ಅವೆಲ್ಲವನ್ನು ಚಾಚೂತಪ್ಪದೆ ಪಾಲಿಸುತ್ತಾನೆ. ಕುಟುಂಬಕ್ಕೆ ನೀಡಬೇಕಾದ ಸಮಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನನ್ನ ಬೇಕು ಬೇಡಗಳನ್ನೆಲ್ಲ ನನಗಿಂತ ಚೆನ್ನಾಗಿ ಅರಿತುಕೊಂಡಿದ್ದಾನೆ. ನನಗೇನಿಷ್ಟ? ಯಾವ ಬಣ್ಣ? ಯಾವ ಸೀರೆ? ಯಾವ ತಿಂಡಿ? ಯಾವ ರೀತಿಯ ಸಿನಿಮಾ? ಯಾವ ಪ್ರವಾಸಿ ತಾಣಗಳು ಇಷ್ಟ? ಹಾಸಿಗೆಯಲ್ಲಿ ನನ್ನ ಪ್ರತಿ ಬೇಕು ಬೇಡಗಳನ್ನೆಲ್ಲ ನನ್ನ ಉಸಿರಿನ ಏರಿಳಿತಗಳಿಂದಲೇ ಅರಿತು ಮುಂದುವರೆಯುವ ನಿಪುಣ! ಆದರೆ ಅವನು ತಿಂಗಳಿಗೊಂದು ಬಾರಿ ಹೀಗೆ ಕೆಲವು ದಿನಗಳ ಕಾಲ ಕಾಣೆಯಾಗುತ್ತಾನೆ. ಒಮ್ಮೊಮ್ಮೆ ಮೂರು ದಿನ, ಒಮ್ಮೊಮ್ಮೆ ನಾಲ್ಕು ದಿನ… ಅವನು ಆ ದಿನಗಳಲ್ಲಿ ನನಗೆ ಕರೆ ಮಾಡುವುದಿಲ್ಲ. ಮೆಸೇಜ್ ಮಾತ್ರ ಕಳಿಸುತ್ತಾನೆ. ನನಗೂ ಅದೇ ಅಭ್ಯಾಸವಾಗಿ ಹೋಗುವಂತೆ ಮಾಡಿದ್ದಾನೆ. ಅವನು ಪ್ರತಿ ಬಾರಿ ಒಂದೊಂದು ಊರಿಗೆ ಹೋಗುತ್ತಾನೆ. ಒಮ್ಮೊಮ್ಮೆ ಮೈಸೂರ್, ಡೆಲ್ಲಿ, ಗೋವಾ, ಮುಂಬೈ ಹೀಗೆ. ಹೋದರೇನು ತಪ್ಪು? ಯಾರ ಜೊತೆಗೆ ಹೋಗಿದ್ದಾನೆ ಎನ್ನುವುದು ಮುಖ್ಯವಲ್ಲವೇ? ಆ ಬಗ್ಗೆ ನನಗೊಮ್ಮೊಮ್ಮೆ ಹೊಟ್ಟೆ ಕಿಚ್ಚಾಗುತ್ತದೆ. ಅವನು ನನಗೆ ಮೋಸ ಮಾಡಿಬಿಟ್ಟ ಎನಿಸಿಬಿಡುತ್ತದೆ. ಮೊದಲೇ ಹೇಳಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಅವನು ನನಗೆ ಮೋಸ ಮಾಡಿದನಾ? ಈ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂಬ ಕಪ್ಪು ಬಿಳುಪಿನ ಉತ್ತರ ದೊರೆಯುವುದಿಲ್ಲ…

ಅಂದೂ ಸಹ ಮಳೆ ಹಿಡಿದುಕೊಂಡಿತ್ತು. ಯಾವುದೋ ಸ್ಟ್ರೈಕ್ ಎಂದು ಕಾಲೇಜಿಗೆ ಅರ್ಧ ದಿನ ರಜೆ ಕೊಟ್ಟು ಮನೆಗೆ ಬಂದು ಕಾಲಿಂಗ್ ಬೆಲ್ ಬಾರಿಸಿದಾಗ ಬಾಗಿಲು ತೆರೆದದ್ದು ಆ ಹುಡುಗನೇ ಅಲ್ಲವಾ? ಆಗ ನಾನು ಒಂದು ಕ್ಷಣ ನನ್ನದೇ ಮನೆಗೆ ಬಂದಿದ್ದೇನ? ಎಂಬ ಗೊಂದಲಕ್ಕೆ ಬಿದ್ದಿದ್ದೆ. ಆ ಹುಡುಗನ ಅಂಗಿಯ ಎರಡು ಗುಂಡಿಗಳು ತೆರೆದಿದ್ದು, ಕೂದಲು ಕೆದರಿದ್ದು… ನನಗೆ ಮೊದಲಬಾರಿ ಅನುಮಾನದ ವಾಸನೆ ಬಡಿಯಿತಾದರೂ ಅದನ್ನು ತೋರಗೊಟ್ಟಿರಲಿಲ್ಲ. ಹೊರಗೆ ಮಳೆ ಜೋರಾಗಿ ಸುರಿಯುತ್ತಿತ್ತು. ”ಸಂಧ್ಯಾ? ಹಾಯ್ ನಾನು ನಿಮ್ಮನೆಯವರ ಫ್ರೆಂಡ್. ಕ್ಲೋಸ್ ಫ್ರೆಂಡ್… ನೂತನ್ ಸ್ನಾನಕ್ಕೆ ಹೋಗಿದ್ದಾನೆ. ಬರ್ತಾನೆ. ಬನ್ನಿ ಒಳಗೆ ಬನ್ನಿ. ನಿಮ್ಮ ಕೈಯ ಕಾಫಿ ಸಖತ್ತಾಗಿರತ್ತೆ ಅಂತ ನೂತನ್ ಹೇಳ್ತಾ ಇರ್ತಾನೆ. ಒಂದು ಕಪ್ ಕಾಫಿ ಮಾಡ್ತೀರಾ?” ಎಂದು ಅದು ತನ್ನದೇ ಮನೆಯೇನೋ ಎಂಬ ಚಿರಪರಿಚಿತತೆಯಿಂದ ನಡೆದಾಡಿ ಸೋಫಾದ ಮೇಲೆ ಕುಳಿತ. ನೂತನ್ ಸ್ನಾನದ ಕೋಣೆಯಿಂದ ಆಚೆಬಂದು ತಡವರಿಸುತ್ತಾ ”ಸಂಧ್ಯಾ, ಇವನು ನನ್ನ ಫ್ರೆಂಡ್… ರಿಹಾನ್ ಅಂತ. ವೀ ಮೆಟ್ ಆಫ್ಟರ್ ಲಾಂಗ್ ಟೈಮ್” ಎಂದ.

”ಬರಿ ಫ್ರೆಂಡ? ಕ್ಲೋಸ್ ಫ್ರೆಂಡಾ?” ಎಂದು ಕೇಳಿದ್ದಕ್ಕೆ ಆ ಹುಡುಗ ಬೆಸ್ಟ್ ಫ್ರೆಂಡ್ ಎಂದು ಉತ್ತರಿಸಿ ನೂತನನನ್ನು ನೋಡಿ ಕಣ್ಣು ಮಿಟುಕಿಸಿದ್ದ. ಬಹುಷಃ ಅಂದಿನಿಂದಲೊ ಏನೋ ಮಳೆಯ ಮೇಲಿದ್ದ ನನ್ನ ಮೋಹ ಕಡಿಮೆಯಾಗುತ್ತ ಬಂದಿದ್ದು… ಅವನ ಬಗ್ಗೆ ಯಾವುದೋ ಒಂದು ಹೇಳಿಕೊಳ್ಳಲಾಗದ ಭಾವ ಮನಸ್ಸನ್ನ ಮುತ್ತಿಕೊಂಡಿತು. ಅದು ಭಯವಾ? ಹೇವರಿಕೆಯ? ಅಸಡ್ಡೆಯ? ಕುತೂಹಲವಾ? ಇದೆ ಹೌದು ಎಂದು ಹೇಳಿಕೊಳ್ಳಲಾಗದಷ್ಟು ಜಟಿಲವಾಗುತ್ತ ಬಂತು. ನಾನವನ ಫೇಸ್‌ಬುಕ್‌ ಪ್ರೊಫೈಲ್ ಜಾಲಾಡಿದೆ. ಅಲ್ಲಿ ರಿಹಾನ್ ಮತ್ತು ನೂತನರ ಒಂದೆರಡು ಫೋಟೋಗಳು ಇದ್ದವಷ್ಟೆ ಬಿಟ್ಟರೆ ಮತ್ಯಾವುವು ಸಿಗಲಿಲ್ಲ. ಆಗಾಗ ಅವನ ಬಗ್ಗೆ ಹಾಗೊಂದು ಹೀಗೊಂದು ಮಾತುಗಳಾಗುತ್ತಿದ್ದವೇ ಹೊರತು ಬೇರೇನೂ ಇರಲಿಲ್ಲ. ಒಮ್ಮೆ ಮಾತ್ರ ಸರಿರಾತ್ರಿ ಫೋನ್ ಬಂತು… ನೂತನ್ ಕೂಡಲೇ ದಡಬಡಾಯಿಸಿ ರೆಡಿ ಆದವನೇ ಹೊರಟ. ಹೋಗುವಾಗ ಏನನ್ನಿಸಿತೋ ಏನೋ ”ರಿಹಾನ್‌ಗೆ ಹುಷಾರಿಲ್ಲ. ಹೋಗ್ಲೇಬೇಕು” ಎಂದು ದೃಢವಾಗಿ ಹೇಳಿ ಹೋಗಿದ್ದ. ಅಂದು ನಾನು ಬಾಲ್ಕನಿಗೆ ಬಂದು ಸರಿರಾತ್ರಿ ಚೇರ್ ಹಾಕಿ ಕೂತು ಎಷ್ಟೋ ಹೊತ್ತು ನಕ್ಷತ್ರಗಳ ನೋಡುತ್ತಾ ಕೂತಿದ್ದೆ. ನನಗೆ ನನ್ನ ವಿಜ್ಞಾನದ ಮೇಷ್ಟ್ರು ಹೇಳಿಕೊಟ್ಟಿದ್ದ ಪಾಠ ನೆನಪಾಯಿತು. ನಕ್ಷತ್ರಗಳು ಹೊಳೆಯುವುದಿಲ್ಲ. ನಮಗೆ ಹೊಳೆದಂತೆ ಅನಿಸುತ್ತವೆ!

ಅವನು ತಿಂಗಳಿಗೊಂದು ಬಾರಿ ಹೀಗೆ ಕೆಲವು ದಿನಗಳ ಕಾಲ ಕಾಣೆಯಾಗುತ್ತಾನೆ. ಒಮ್ಮೊಮ್ಮೆ ಮೂರು ದಿನ, ಒಮ್ಮೊಮ್ಮೆ ನಾಲ್ಕು ದಿನ… ಅವನು ಆ ದಿನಗಳಲ್ಲಿ ನನಗೆ ಕರೆ ಮಾಡುವುದಿಲ್ಲ. ಮೆಸೇಜ್ ಮಾತ್ರ ಕಳಿಸುತ್ತಾನೆ. ನನಗೂ ಅದೇ ಅಭ್ಯಾಸವಾಗಿ ಹೋಗುವಂತೆ ಮಾಡಿದ್ದಾನೆ. ಅವನು ಪ್ರತಿ ಬಾರಿ ಒಂದೊಂದು ಊರಿಗೆ ಹೋಗುತ್ತಾನೆ. ಒಮ್ಮೊಮ್ಮೆ ಮೈಸೂರ್, ಡೆಲ್ಲಿ, ಗೋವಾ, ಮುಂಬೈ ಹೀಗೆ. ಹೋದರೇನು ತಪ್ಪು?

ಅಂದು ನನ್ನ ಸ್ಕೂಟರ್ ಕೆಟ್ಟುಹೋಗಿದ್ದರಿಂದ ಬೆಳಿಗ್ಗೆ ಬಸ್ಸಿನಲ್ಲಿಯೇ ಬಂದಿದ್ದೆ. ಸ್ವೆಟರ್ ಹಾಕಿಕೊಂಡು ಛತ್ರಿ ಮುಖವರಳಿಸಿ ಕಾಲೇಜಿನಿಂದ ಬಸ್ ಸ್ಟ್ಯಾಂಡಿಗೆ ಬಂದು ನಿಂತ ಕೆಲವು ನಿಮಿಷಕ್ಕೆ ಬಸ್ ಬಂತು. ಹತ್ತಿದವಳೇ ಕಿಟಕಿ ಪಕ್ಕದ ಸೀಟು ಅನಾಯಾಸವಾಗಿ ಸಿಕ್ಕಿತು. ಕೂತು ಐದು ನಿಮಿಷವಾಗುವುದರಲ್ಲಿ ಒಬ್ಬಳು ಮಂಗಳಮುಖಿ ಬಸ್ ಹತ್ತಿದಳು… ಹಸಿರು ಸೀರೆ, ಕುಂಕುಮ, ಕೆಂಪು ಗಾಜಿನ ಬಳೆ, ಮುಡಿಯ ತುಂಬಾ ಕೊಂಚ ಬಾಡಿದ ಮಲ್ಲಿಗೆ ಹೂವಿನ ದಂಡೆ ಇತ್ತು. ಆಕೆ ಬಸ್ ಹತ್ತಿ ನನ್ನ ಮುಂದಿನ ಸೀಟಿನಲ್ಲಿ ಕೂತಿದ್ದ ಗಂಡಸಿನ ಬಳಿ ಹಣ ಕೇಳಿದಳು. ಅವನು ಕೊಡಲಿಲ್ಲ. ಅವಳು ಅವನ ಮೈಮೇಲೆ ಎರಗಿದಳು. ಅವನ ನಡು ಚಿವುಟಿದಳು. ಬಲತೊಡೆಯ ಮೇಲೆ ಕೈಯಾಡಿಸಿದಳು. ತೊಡೆಯ ಮೇಲೆ ಕೂರುವುದಕ್ಕೆ ಹೋದಳು… ಇದನ್ನು ನೋಡುತ್ತಿದ್ದ ನನಗೆ ಕೋಪ ಉಕ್ಕಿತು. ಅವನು ಬೈದುಕೊಳ್ಳುತ್ತಾ ಹತ್ತು ರೂಪಾಯಿ ಅವಳ ಕೈಗಿತ್ತ… ಹೊರಗಡೆ ಮಳೆ ಧೋ ಎಂದು ಸುರಿಯಲಾರಂಭಿಸಿತು. ಬಸ್ಸಿನಲ್ಲಿ ಎಲ್ಲರ ಬಳಿ ಒಂದೆರಡು ರೂಪಾಯಿ ಪಡೆದು ತನ್ನ ಸೀರೆ ಸೆರಗು ಹೊದ್ದು ಬೇರೆ ಪ್ಲಾಟ್ ಫಾರ್ಮಿನಲ್ಲಿ ಮರೆಯಾದಳು. ಬಸ್ಸು ಇನ್ನೂ ಹೊರಟಿರಲಿಲ್ಲ… ಕೆಲ ಕ್ಷಣಗಳ ಬಳಿಕ ದೂರದೂರಿನ ನನ್ನ ಮಗನ ವಯಸ್ಸಿನ ಮಗು ಬಸ್ ಹತ್ತಿತು. ಅದಕ್ಕೆ ತಲಾ ಒಂದು ಕೈ ಮತ್ತು ಕಾಲು ಎರಡೂ ಇರಲಿಲ್ಲ.

ಆ ಮಗು ಬಸ್ ಹತ್ತಿದೊಡನೆ ಯಾರೂ ಏನೊಂದು ಮಾತನಾಡದೆ ಆ ಮಗುವಿಗೆ ಧಾರಾಳವಾಗಿ ಸಹಾಯ ಮಾಡಿದರು… ವಯಸ್ಸಾದ ಆ ಮಂಗಳಮುಖಿ ಮತ್ತು ಹರೆಯದ ಭಿಕ್ಷುಕ ಮಗು ಇಬ್ಬರೂ ಒಂದೇ ಬೇಡುವ ಕೆಲಸ ಮಾಡುತ್ತಿದ್ದರು. ಮಾಫಿಯಾ ಆ ಹುಡುಗನನ್ನು ಭಿಕ್ಷುಕನನ್ನಾಗಿ ಮಾಡಿರಬಹುದಾ ಎಂಬ ಯೋಚನೆ ಸುಳಿದುಹೋಯಿತು. ಅವನ ಅಂಗವೈಕಲ್ಯ ಭಿಕ್ಷೆ ಬೇಡುವ ವಿಧಾನದಿಂದಲೇ ನಗರದ ಅನೂಹ್ಯ ಮಾಫಿಯಾಕ್ಕೆ ಸಿಕ್ಕಿಬಿದ್ದ ಮಗು ಎಂದು ಬಲವಾಗಿ ಅನಿಸಹತ್ತಿತು. ನಾನೇ ಆ ರೀತಿ ವಿಪರೀತವಾಗಿ ಯೋಚಿಸುತ್ತಿದ್ದೆ ಎನಿಸುತ್ತದೆ. ಮೊದಲು ಈ ಕ್ರೈಂ ಸಂಬಂಧಿ ಕಾರ್ಯಕ್ರಮಗಳನ್ನು ನೋಡುವುದನ್ನು ನಿಲ್ಲಿಸಬೇಕೆಂದುಕೊಂಡೆ. ಆ ಹುಡುಗನ ದೇಹದ ಊನ ಜನರಲ್ಲಿ ಸುಲಭವಾಗಿ ಸಿಂಪಥಿ ಗಳಿಸಿಕೊಂಡುಬಿಡುತ್ತಿತ್ತು. ಆದರೆ ಅವಳ ವಿಷಯದಲ್ಲಿ ಹಾಗಾಗುವುದಿಲ್ಲವೆಂದು ಹೊಳೆಯಿತು. ಅವಳು ಫಿಸಿಕಲ್ ಬ್ಯಾರಿಯರ್ ಒಂದನ್ನು ಮೀರಿ ಸಿಂಪಥಿ ಗಿಟ್ಟಿಸಿಕೊಳ್ಳಬೇಕಾಗಿದ್ದರಿಂದ ಆ ರೀತಿ ನಡೆದುಕೊಳ್ಳಬೇಕಾಗುವುದು ಅವಶ್ಯವೇನೋ ಎಂದುಕೊಂಡೆ. ಮಳೆಯ ರಭಸ ನಿಧಾನಕ್ಕೆ ಕಡಿಮೆಯಾಗತೊಡಗಿತ್ತು.

ಬಸ್ಸಿನ ಕಿಟಕಿ ಸರಿಸಿದೆ. ಮಳೆಯ ಬಿಡಿಬಿಡಿ ಹನಿ ಈ ಬಾರಿ ಅಷ್ಟು ಕಿರಿಕಿರಿಗೊಳಿಸಲಿಲ್ಲ. ಆದರೂ ಗಂಡನ ಗೆಳೆಯ ಮತ್ತು ಆ ಮಂಗಳಮುಖಿಯ ಬಗ್ಗೆ ಯಾವುದೋ ಅವ್ಯಕ್ತ ಭಯ ಆಳದಲ್ಲಿತ್ತು. ಗಂಡ ನೂತನನಿಗೆ ಬೇರೆ ಯಾವ ಆಯ್ಕೆಗಳೂ ಇರಲಿಲ್ಲವಾ? ನಾನೊಂದು ಕೇವಲ ಅನಿವಾರ್ಯ ಆಯ್ಕೆಯಾಗಿದ್ದೆನಾ? ನೂತನ್ ನನ್ನನ್ನು ನಿಜಕ್ಕೂ ಇಷ್ಟ ಪಡುತ್ತಿದ್ದಾನಾ? ಅಥವಾ ಕೇವಲ ತನ್ನ ಕರ್ತವ್ಯವನ್ನಷ್ಟೇ ನಿಭಾಯಿಸುತ್ತಿದ್ದಾನಾ? ಎಲ್ಲವೂ ಗೋಜಲು ಗೋಜಲಿಗೆ ಇಟ್ಟುಕೊಂಡಿತು. ನನ್ನ ಗಂಡ ಬೈಸೆಕ್ಷುಯಲ್ ಅನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ಯಾಕಿಷ್ಟು ಭಯಪಟ್ಟುಕೊಳ್ಳುತ್ತಿದ್ದೇನೆ? ತರಗತಿಯಲ್ಲಿ ಹಾಗೆ ಲೀಲಾಜಾಲವಾಗಿ ಯಾವುದೇ ಭಿಡೆಯಿಲ್ಲದೆ ಮುಕ್ತವಾಗಿ ಪ್ರಶ್ನೆಗಳಿಗೆ ಉತ್ತರಿಸುವ ನಾನು ಇರುವುದನ್ನು ಇರುವ ಹಾಗೆ ಒಪ್ಪಿಕೊಳ್ಳಲು ಯಾಕಿಷ್ಟು ಭಯ ಪಟ್ಟುಕೊಳ್ಳುತ್ತಿದ್ದೇನೆ?

ಮನೆ ತಲುಪಿ ಮಗನ ಶಾಲೆಯ ಡೈರಿ ಚೆಕ್ ಮಾಡುವಾಗ ಅವನು ನಾನು ಕೈಬೆರಳಿಗೆ ಹಚ್ಚಿಕೊಂಡಿದ್ದ ಗುಲಾಬಿ ಲಾಲಿಯನ್ನು ತನಗೂ ಹಚ್ಚುವಂತೆ ಒತ್ತಾಯಿಸಿದ. ಮತ್ತೊಂದು ಭಯ ಒಳಗೆ ಟಿಸಿಲೊಡೆಯಿತು. ಕಾಲೇಜಿನಲ್ಲಿ ಆ ಹುಡುಗ ಕೇಳಿದ ‘ಬೈಸೆಕ್ಷುಯಲ್ ಅಂದರೆ ಏನು ಮ್ಯಾಮ್?’ ಎನ್ನುವ ಪ್ರಶ್ನೆ, ಮಗ, ಗಂಡ, ರಿಹಾನ್, ಬಸ್ಸಿನಲ್ಲಿ ಎದುರಾದ ಮಂಗಳಮುಖಿ, ಎದುರಿಗಿದ್ದ ಗುಲಾಬಿ ಲಾಲಿಯ ಬಾಟಲಿ, ಕಾಲೇಜಿನ ಜೀವಶಾಸ್ತ್ರ ಪಠ್ಯದ ಪಾಠಗಳು ಎಲ್ಲವೂ ನನ್ನೆದುರು ನಿಂತು ಅಣಕಿಸುತ್ತಿರುವಂತೆ ಅನಿಸಲಾರಂಭಿಸಿತು. ಕಾಲೇಜಿನಲ್ಲಿ ಕೇಳಿದ ಆ ಪ್ರಶ್ನೆ ”ರೇಪ್ ಮತ್ತು ಕಾಮಕ್ರಿಯೆಗೂ ಇರುವ ವ್ಯತ್ಯಾಸವೇನು?” ಎಂಬ ಪ್ರಶ್ನೆಗೆ ಗಟ್ಟಿಗಿತ್ತಿಯಾಗಿ ಉತ್ತರಿಸಿದವಳಿಗೆ ಈ ಯಾವ ಭಯಗಳು ಆವರಿಸಿ ಕುಸಿದು ಹೋಗುತ್ತಿದ್ದೇನೆ? ಅಸಲಿಗೆ ಇವು ಭಯಗಳೇ ಹೌದಾ? ಅಥವಾ ಹಿಂಜರಿಕೆಗಳಾ? ಈ ಭಯಗಳನ್ನು ಮೀರಿಕೊಳ್ಳದೆ ನಾನು ನಾನಾಗಿರುವುದಕ್ಕೆ ಸಾಧ್ಯವಿಲ್ಲವೆನಿಸಿತು. ಹೊರಗೆ ಜೋರಾಗಿ ಮಳೆ ಸುರಿಯುವ ಶಬ್ದ ಕಿವಿಗೆ ಅಪ್ಪಳಿಸಿದ್ದೆ ಮಗ ”ಅಮ್ಮಾ, ಇವತ್ತು ಅಪ್ಪ ಇಲ್ಲ. ಬಾಮ್ಮ. ಒಂದು ಸಲ ಮಳೆಯಲ್ಲಿ ನೆನೆದು ಬಂದುಬಿಡೋಣ,” ಎಂದು ನನ್ನ ಕೈಹಿಡಿದು ಜಗ್ಗತೊಡಗಿದ. ನಾನು ಗರಡುಗಂಬದಂತೆ ಹಾಗೆ ಕುಳಿತಿದ್ದನ್ನು ನೋಡಿ ”ನೀನು ಬರದಿದ್ದರೂ ಅಷ್ಟೇ ಹೋಯ್ತು. ನಾನು ಹೋಗ್ತೀನಿ,” ಎಂದವನೇ ಜೋರಾಗಿ ಮನೆಯ ಅಂಗಳಕ್ಕೆ ಓಡಿ ಹೋದ.

ಮನೆಯ ಮುಂದೆ ತುಳಸಿ, ಕಣಗಿಲೆ ಎಲ್ಲವೂ ನೆನೆಯುತ್ತಿದ್ದವು. ಮಗ ಮಳೆಯಲ್ಲಿ ನಿಂತು ಬೊಗಸೆಯಲ್ಲಿ ಮಳೆ ತುಂಬಿಸಿ ಮತ್ತೆ ಮುಗಿಲಿಗೆಸೆಯುತ್ತಿದ್ದ. ನನ್ನೊಳಗೆ ”ನಾನೂ ಹೋಗಿಬಿಡೋಣ. ಇವತ್ತು ಆಗಿದ್ದಾಗಲಿ ನೆನೆದುಬಿಡೋಣ. ಮಳೆಯ ಭಯ ಕೊಚ್ಚಿಹೋಗಲಿ,” ಎಂದು ಅಂದುಕೊಂಡವಳೇ ಒಂದು ಹೆಜ್ಜೆ ಮುಂದಿಟ್ಟು ಮತ್ತೆ ಹಿಂತೆಗೆಯತೊಡಗಿದೆ. ಹೊರಗಿನ ಮಳೆ ನನ್ನನ್ನು ಸೆಳೆದುಕೊಂಡು ಕೊಂದೇಬಿಡುವ ಮಾಯಾಜಾಲದಂತೆ ಅನಿಸುತ್ತಿತ್ತು. ಎಷ್ಟೋ ಹೊತ್ತು ಹೀಗೆ, ಒಂದು ಹೆಜ್ಜೆ ಮುಂದಿಡುವುದು, ಹೆಜ್ಜೆ ಹಿಂತೆಗೆಯುವುದು ನಡೆದೇ ಇತ್ತು. ಮಗನಿಗೆ ಅದು ಕೆರೆದಡ ಆಟದಂತಿನಿಸಿರಬೇಕು. ತಾನು ಮಳೆಯಲ್ಲಿ ಕೆರೆ ದಡ ಕೆರೆ ದಡ ಕೆರೆ ದಡ ಎಂದು ಕೂಗುತ್ತ ಕುಣಿಯತೊಡಗಿದ. ನನ್ನ ಸಿಟ್ಟು ನೆತ್ತಿಗೇರಿತು. ಕೂಡಲೇ ಅವನೆಡೆಗೆ ಧಾವಿಸಿದೆ… ಒಂದೊಂದು ಮಳೆಹನಿಯೂ ಕೂಡ ದೊಡ್ಡ ಕಲ್ಲಿನಂತೆ ತಲೆಮೇಲೆ ಬೀಳತೊಡಗಿತು… ಮಗ ನನಗೆ ಸಿಗದವನಂತೆ ಓಡತೊಡಗಿದ. ನಾನು ಅವನ ಹಿಡಿದೇ ತೀರುವಂತೆ ಅವನ ಹಿಂದೆ ಓಡಿದೆ. ಎಷ್ಟೋ ಹೊತ್ತು ಈ ಮುಟ್ಟಾಟ ನಡೆದೇ ಇತ್ತು… ಈ ನಡುವೆ ಮಳೆಹನಿಗಳ ಭಾರ ಲಕ್ಷ್ಯಕ್ಕೆ ಬಂದಿರಲಿಲ್ಲವೇನೋ ಎಂಬುದು ನನಗೆ ಈಗಲೂ ನೆನಪಿಲ್ಲ…

About The Author

ದಾದಾಪೀರ್ ಜೈಮನ್

ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಹಲವು ಕವಿತೆಗಳು, ಕಥೆಗಳು ನಾಡಿನ ಪ್ರಮುಖ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇಕ್ಬಾಲುನ್ನೀಸಾ ಹುಸೇನ್ ಅವರ 'ಪರ್ದಾ & ಪಾಲಿಗಮಿ' ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಛoದ ಪುಸ್ತಕ ಪ್ರಕಾಶನ ಅದನ್ನು ಹೊರತಂದಿದೆ. Dmitrij Gawrisch  ಅವರ 'ಬ್ಯಾರೆನ್ ಲ್ಯಾಂಡ್' ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಪ್ರಕಟಿತ ಕಥಾಸಂಕಲನ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ