Advertisement
ನಗರ-ಬೆಟ್ಟಗಳ ಕಿರು ಕತೆಗಳು

ನಗರ-ಬೆಟ್ಟಗಳ ಕಿರು ಕತೆಗಳು

ಬೆಟ್ಟ ಹತ್ತೋದು ಎಂದರೆ ರಾಷ್ಟ್ರೀಯ ರಕ್ಷಿತ ವನಗಳಲ್ಲಿ ಅರಣ್ಯ ಇಲಾಖೆಯ ರೇಂಜರುಗಳು ಸೊಗಸಾದ ದಾರಿ ಮಾಡಿರುತ್ತಾರೆ. ಅದೇ ದಾರಿಯಲ್ಲೆ ನಾವು ನಡೆದು, ಬೆಟ್ಟದ ಮೇಲಿರುವ ವ್ಯೂ ಪಾಯಿಂಟ್ ತಲುಪಿ ಸುತ್ತಮುತ್ತಲಿನ ಪ್ರದೇಶಗಳನ್ನು ಪಕ್ಷಿನೋಟದಲ್ಲಿ ನೋಡುವುದು. ದಾರಿ ಬಿಟ್ಟು ಅಕ್ಕಪಕ್ಕ ಇರುವ ಕಾಡಿನಲ್ಲಿ ತಿರುಗಾಡುವಂತಿಲ್ಲ. ರಕ್ಷಿತ ವನ ಅಥವಾ ಕಾಡು ಎನ್ನುವ ಎಚ್ಚರಿಕೆಯನ್ನು ಪಾಲಿಸಿಯೇ ಮುಂದುವರೆಯಬೇಕು. ಇದರಿಂದ ಪರಿಸರಕ್ಕೆ ಒಳ್ಳೆಯದು. ಆದರೆ ಈ ಕಾನೂನು ಕಟ್ಟಳೆ ಮತ್ತು ಪರಿಸರ ಪ್ರಜ್ಞೆ ಎಚ್ಚೆತ್ತಿದ್ದು ಕಾಡುಗಳನ್ನು ಸಾಕಷ್ಟು ನಿರ್ನಾಮ ಮಾಡಿದ ಮೇಲೆಯೆ ಎನ್ನುವುದು ಮಾಹಿತಿ ಫಲಕಗಳಿಂದ ತಿಳಿಯುತ್ತದೆ.
ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

ಈ ವಾರವೆಲ್ಲಾ ಮಳೆ ಸುರಿಯುತ್ತಿದೆ. ಅಲ್ಲಲ್ಲಿ ಪ್ರವಾಹವುಂಟಾಗಿದೆ. ನಗರದಾಚೆ ಇರುವ ಉತ್ತರ ಪಯ್ನ್ ನದಿ ದಂಡೆ ದಾಟಿ ಆಚೆ ಈಚೆಗೆ ಮೈ ಹರಡಿದೆ. ನಗರದಲ್ಲಿರುವ ಚಿಕ್ಕಪುಟ್ಟ ತೊರೆಗಳು ಪುಟ್ಟ ನದಿಗಳಾಗಿ ಉಕ್ಕುತ್ತಿವೆ. ಅಕಾಲಿಕವಾದದ್ದು, ಇಷ್ಟೊಂದು ಮಳೆ ಮೇ ತಿಂಗಳಿನಲ್ಲಿ ಬೀಳಬಾರದು ಎಂದು ಹವಾಮಾನ ತಜ್ಞರ ಅಭಿಪ್ರಾಯ. ‘ಕ್ಲೈಮೇಟ್ ಚೇಂಜ್’ ಪರ-ವಿರೋಧಿ ಬಣಗಳಿಂದ ವಿವಿಧ ಬಾಣಗಳ ಸುರಿಮಳೆಯೆ ಆಗುತ್ತಿದೆ. ಫೆಬ್ರವರಿ ತಿಂಗಳ ಕೊನೆ, ಮಾರ್ಚ್ ತಿಂಗಳ ಆರಂಭದಲ್ಲಿ ಸಂಭವಿಸಿದ ಮಹಾನ್ ಮಳೆ-ಜಲ ಪ್ರವಾಹಗಳಿಂದ ಇನ್ನೂ ಚೇತರಿಸಿಕೊಳ್ಳದ ಜನರಿಗೆ ಈ ವಾರದ ಮಳೆ ಅಷ್ಟೊಂದು ಹಿತವಾಗಿಲ್ಲ.

ಮಳೆಗೂ ಮುಂಚೆ ಚಳಿ ಅಂಬೆಗಾಲನಿಕ್ಕುತ ಬಂದಿತ್ತು. ಅದೀಗ ದಾಪುಗಾಲನಿಕ್ಕುತ ನಮ್ಮನ್ನೆಲ್ಲ ಆವರಿಸಿಕೊಳ್ಳುತ್ತಿದೆ. ಕಳೆದ ವಾರ ಸಿಡ್ನಿ ನಗರ ಚಳಿಯ ತೀವ್ರತೆಗೆ ಗಡಗಡ ಎಂದಿತ್ತಂತೆ. ಸಿಡ್ನಿ ಹಾಗೆ ಅಲ್ಲಾಡಿದರೆ ಮೆಲ್ಬೋರ್ನ್ ಸುಮ್ಮನಿರುವುದೆ? ಭೂಪಟದಲ್ಲಿ ಇವರಿಬ್ಬರ ನೆತ್ತಿಯ ಮೇಲಿರುವ ನಮ್ಮ ರಾಣಿರಾಜ್ಯದ ದಕ್ಷಿಣವು ಹಾಗೆ ಹೀಗೆ ಎನ್ನುತ್ತಾ ಚಳಿಯೆನ್ನಲೊ ಇಲ್ಲಾ ಮಳೆಯೆನ್ನಲೊ ಎನ್ನುವ ಗೊಂದಲದಲ್ಲಿದೆ. ವಾತಾವರಣದಲ್ಲಿನ ಉಷ್ಣತೆ ಕಡಿಮೆಯಾಗಿದ್ದು ನಮಗೆಲ್ಲ ಸಂತೋಷ ತಂದಿತ್ತು. ಕಡು ಬಿಸಿಲಿನ ಕಾಟದ ಬೆವರಿಲ್ಲದೆ, ಹೆಚ್ಚು ಆಯಾಸವಿಲ್ಲದೆ ಹೊರಾಂಗಣ ಚಟುವಟಿಕೆಗಳನ್ನು ಆನಂದಿಸಬಹುದು.

ಹಾಗೆಂದುಕೊಂಡು ಮಳೆಗೂ ಮುಂಚೆ ನಾವು ಬ್ರಿಸ್ಬೇನ್ ನಗರದ ಆಸುಪಾಸಿನಲ್ಲಿರುವ ಚಿಕ್ಕಪುಟ್ಟ ಬೆಟ್ಟಗಳನ್ನು ಹತ್ತಿಳಿಯುವ ಹುಮ್ಮಸ್ಸನ್ನು ಮೈಗೆ ಏರಿಸಿಕೊಂಡೆವು. ಅದಾಗಲೇ ಒಂದಷ್ಟು ಬಿದ್ದು ಕಣ್ಮರೆಯಾಗಿದ್ದ ಮಳೆ ಹುಟ್ಟಿಸಿದ್ದ ಜಾರಿನಲ್ಲಿ ಬಿದ್ದು, ಮಳೆರಾಡಿ ಹತ್ತಿಸಿಕೊಂಡು, ಮೈಕೈ ನೆಕ್ಕುತ್ತಿದ್ದ ಒಂದಷ್ಟು ಲೀಚುಗಳನ್ನು ಕಿತ್ತೆಸೆದು ಕಾಡಿನಲ್ಲಿದ್ದೀವಿ ಎನ್ನುವ ಸೊಗಸಾದ ಭ್ರಾಂತಿ ಹುಟ್ಟಿಸಿಕೊಂಡೆವು.

ಬ್ರಿಸ್ಬೇನ್ ನಗರದ ವಾಯುವ್ಯ ದಿಕ್ಕಿನಲ್ಲಿ ಕ್ಯಾಂಪ್ ಮೌಂಟೇನ್ ಅನ್ನೋ ಪುಟ್ಟ ಬೆಟ್ಟವಿದೆ. ರಸ್ತೆ ಪಕ್ಕ ಕಾರು ನಿಲ್ಲಿಸಿ ಮನೆಮಂದಿಯೆಲ್ಲ, ಪುಟಾಣಿಗಳೂ, ಸೇರಿ ಒಂದೆರಡು ಗಂಟೆಯಲ್ಲೆ ಬೆಟ್ಟ ಹತ್ತಿ ಇಳಿದು ಕಾರಿಗೆ ಮರಳುತ್ತಾರೆ. ಬೆಟ್ಟ ಹತ್ತೋದು ಎಂದರೆ ರಾಷ್ಟ್ರೀಯ ರಕ್ಷಿತ ವನಗಳಲ್ಲಿ ಅರಣ್ಯ ಇಲಾಖೆಯ ರೇಂಜರುಗಳು ಸೊಗಸಾದ ದಾರಿ ಮಾಡಿರುತ್ತಾರೆ. ಅದೇ ದಾರಿಯಲ್ಲೆ ನಾವು ನಡೆದು, ಬೆಟ್ಟದ ಮೇಲಿರುವ ವ್ಯೂ ಪಾಯಿಂಟ್ ತಲುಪಿ ಸುತ್ತಮುತ್ತಲಿನ ಪ್ರದೇಶಗಳನ್ನು ಪಕ್ಷಿನೋಟದಲ್ಲಿ ನೋಡಬಹುದು. ದಾರಿ ಬಿಟ್ಟು ಅಕ್ಕಪಕ್ಕ ಇರುವ ಕಾಡಿನಲ್ಲಿ ತಿರುಗಾಡುವಂತಿಲ್ಲ. ಎಲ್ಲವೂ ರಕ್ಷಿತ ವನ ಅಥವಾ ಕಾಡು ಎನ್ನುವ ಎಚ್ಚರಿಕೆಯನ್ನು ಪಾಲಿಸಬೇಕು. ಇದರಿಂದ ಪರಿಸರಕ್ಕೆ ಒಳ್ಳೆಯದು. ಆದರೆ ಈ ಕಾನೂನು ಕಟ್ಟಳೆ ಮತ್ತು ಪರಿಸರ ಪ್ರಜ್ಞೆ ಎಚ್ಚೆತ್ತಿದ್ದು ಕಾಡುಗಳನ್ನು ಸಾಕಷ್ಟು ನಿರ್ನಾಮ ಮಾಡಿದ ಮೇಲೆಯೆ ಎನ್ನುವುದು ಮಾಹಿತಿ ಫಲಕಗಳಿಂದ ತಿಳಿಯುತ್ತದೆ.

ಕ್ಯಾಂಪ್ ಮೌಂಟೇನ್ ಬೆಟ್ಟವಿರುವುದು ಬ್ರಿಸ್ಬೇನ್ ನಗರದಿಂದ ಕೇವಲ ಇಪ್ಪತ್ತು ಕಿಲೋಮೀಟರ್ ದೂರದಲ್ಲಿ. ಡಗಿಲಾರ್ ಅರಣ್ಯಧಾಮದಲ್ಲಿದ್ದು ಇಡೀ ಪ್ರದೇಶವು ಮೊರೆಟೊನ್ ಬೇ ಪ್ರದೇಶವೆಂದು ಕರೆಸಿಕೊಳ್ಳುತ್ತದೆ. ಈ ಕಡೆ ಬೆಟ್ಟಗಳ ಸಾಲು, ಆ ಕಡೆ ಸಮುದ್ರದ ಅಂಚು. ಮಧ್ಯೆ ಹರಡಿರುವುದು ಕಾಡು. ದಟ್ಟ ನೀಲಗಿರಿ ಮರಗಳು, ಪೊದೆಗಳು, ಬೇರೆಬೇರೆ ವೃಕ್ಷಸಂಪತ್ತು ಕಣ್ಣುಸೆಳೆಯುತ್ತದೆ. ಸುತ್ತಲಿನ ಅರಣ್ಯವಲಯದಲ್ಲಿ ಸಣ್ಣ ತೊರೆಗಳ ಅಂದದೊಡನೆ ಹಾರುವ ಅಳಿಲು, ವಿವಿಧ ಪಕ್ಷಿಗಳ ವಾಸ.

ಅದಾಗಲೇ ಒಂದಷ್ಟು ಬಿದ್ದು ಕಣ್ಮರೆಯಾಗಿದ್ದ ಮಳೆ ಹುಟ್ಟಿಸಿದ್ದ ಜಾರಿನಲ್ಲಿ ಬಿದ್ದು, ಮಳೆರಾಡಿ ಹತ್ತಿಸಿಕೊಂಡು, ಮೈಕೈ ನೆಕ್ಕುತ್ತಿದ್ದ ಒಂದಷ್ಟು ಲೀಚುಗಳನ್ನು ಕಿತ್ತೆಸೆದು ಕಾಡಿನಲ್ಲಿದ್ದೀವಿ ಎನ್ನುವ ಸೊಗಸಾದ ಭ್ರಾಂತಿ ಹುಟ್ಟಿಸಿಕೊಂಡೆವು.

ಹಿಂದೊಮ್ಮೆ ನೈಸರ್ಗಿಕ ಕಾಡುಗಳಿಂದ ತುಂಬಿದ್ದ ಪ್ರದೇಶವನ್ನು ಬ್ರಿಟಿಷರ ವಸಾಹತು ಕಾಲದಲ್ಲಿ ಮರ ಕಡಿತಕ್ಕೆ (ಟಿಂಬರ್ ಲಾಗಿಂಗ್) ಒಳಪಡಿಸಿದ್ದರು. ಬಹುದೊಡ್ಡ ಪ್ರಮಾಣದಲ್ಲಿ ಜರುಗಿದ್ದ ಈ ಚಟುವಟಿಕೆಗೆಂದು ಇಲ್ಲೊಂದು ರೈಲ್ವೆ ದಾರಿಯನ್ನು ಕೂಡ ಮಾಡಲಾಯಿತು. ಆ ನಂತರ ಬಂದದ್ದು ಚಿನ್ನದ ಹುಡುಕಾಟ ಮತ್ತು ಚಿನ್ನಕ್ಕಾಗಿ ಗಣಿಗಾರಿಕೆ. ಇದು ಈಗಿನ ನಗರದಲ್ಲಿರುವ ಇನಾಗ್ಗೆರ ಎಂಬ ಸ್ಥಳದಲ್ಲಿ ನಡೆದರೂ ಇದೇನೂ ಅಷ್ಟೊಂದು ದೊಡ್ಡದಾಗಲಿಲ್ಲವಂತೆ. ಆದರೂ, ಇವೆರಡೂ ದೊಡ್ಡ ಆರ್ಥಿಕ ಚಟುವಟಿಕೆಗಳಿಗೆಂದು ಕರೆಸಿಕೊಳ್ಳಲಾದ ಕೆಲಸಗಾರರು ವಾಸಿಸಲು ಅಲ್ಲಲ್ಲಿ ಕ್ಯಾಂಪ್ ಹಾಕಲಾಯಿತು. ಕ್ರಮೇಣ ಬೆಟ್ಟಕ್ಕೆ ಕ್ಯಾಂಪ್ ಮೌಂಟೇನ್ ಎಂಬ ಹೆಸರು ಅಂಟಿಕೊಂಡಿತು. ಬೆಟ್ಟದ ಬುಡದಿಂದ ಶುರುವಾಗಿ ಹತ್ತಾರು ಕಿಲೋಮೀಟರ್ ಸುತ್ತಳತೆಯಲ್ಲಿ ಕ್ಯಾಂಪ್ ಗಳು ಹರಡಿದ್ದವು ಎಂದು ಮಾಹಿತಿಫಲಕ ಹೇಳಿತ್ತು.

ಬೆಟ್ಟ ಹತ್ತಿ ವ್ಯೂ ಪಾಯಿಂಟ್ ನಲ್ಲಿ ನಿಂತು ನೋಡಿದರೆ ಆಹಾ ಎಂತಹ ವಿಹಂಗಮ ನೋಟ! ಅದೋ ಎಡಕ್ಕೆ ದೂರದಲ್ಲಿ ಕಾಣುವ ಗ್ಲಾಸ್ ಹೌಸ್ ಬೆಟ್ಟಗಳ ಶ್ರೇಣಿ, ಇನ್ನೂ ದೂರದಲ್ಲಿ ಕಾಣುವ ಸಮುದ್ರದ ಅಂಚು, ಹತ್ತಿರವೆ ಇರುವ ಸಂಫೊರ್ಡ್ ಎನ್ನುವ ಶ್ರೀಮಂತರ ಬಡಾವಣೆ, ಬಲಕ್ಕೆ ತಿರುಗಿದರೆ ಮರಗಳ ಮಧ್ಯೆ ಇಣುಕುತ್ತಿದ್ದ ನಗರ ಕೇಂದ್ರದ ಕಟ್ಟಡಗಳು. ೩೬೦ ಕೋನದಲ್ಲಿ ತಿರುಗಿದರೆ ಹಸಿರಿನ ಸಮೃದ್ಧಿ. ಬೆಟ್ಟದ ಸುತ್ತಮುತ್ತಲೂ ಇರುವ ಆಸ್ತಿಗಳ ಒಡೆತನ ಬಲು ಶ್ರೀಮಂತರಿಗೆ ಸೇರಿದ್ದು. ದೊಡ್ಡ ಮನೆಗಳು, ಫಾರ್ಮ್ ಹೌಸ್, ಈಜುಕೊಳ, ಕುದುರೆಲಾಯ ಎಂಬಂತೆ ಐಷಾರಾಮದ ದೃಶ್ಯಗಳು.

ಆದರೆ ಈ ಬೆಟ್ಟ ಪ್ರದೇಶದಲ್ಲಿ ಕೆಫೆಗಳು ಇಲ್ಲವೆಂಬುದು ಅಚ್ಚರಿ ಹುಟ್ಟಿಸಿತು. ಹಿಂದಿನ ತಿಂಗಳು ಹೋಗಿದ್ದ ಮೌಂಟ್ ಪ್ಲೆಸೆಂಟ್ ಬೆಟ್ಟದ ದಾರಿಯಲ್ಲಿ ಮೂರ್ನಾಕು ಕೆಫೆಗಳು. ಕಾಫಿ ಜೊತೆ ಕೇಕು, ಸ್ಕಾನ್ ಮತ್ತು ಜಾಮ್, ಪಾನೀಯಗಳು, ಬೇಕರಿ ತಿಂಡಿಗಳು, ಸ್ಯಾಂಡ್ವಿಚ್. ಇವನ್ನೇ ನೋಡಿ ನೋಡಿ ಸಾಕಾಗಿರುವ ನನ್ನ ನಾಲಿಗೆ ನೀರೂರಿಸಲಿಲ್ಲ.

ಇವೆರೆಡೂ ಬೆಟ್ಟಗಳ ಬಳಿಯೆ ಇರುವುದು ಕೆಲವು ಸೀನಿಕ್ ರೂಟ್. ಬೇಸಿಗೆಯಲ್ಲಿ ರವರವ ಎನ್ನುವ ಬಿಸಿಲಿಗೆ ಒಣಗಿ, ಅಲ್ಲಲ್ಲಿ ಮೈಗೆ ಬೆಂಕಿ ಹತ್ತಿಸಿಕೊಂಡು ಒದ್ದಾಡುವ ಈ ನಗರ-ಕಾಡುಗಳಲ್ಲಿ ಮಳೆ-ಚಳಿ ಒಟ್ಟಾಗಿ ಬಂದರೆ ಅವುಗಳ ಸೌಂದರ್ಯವೇ ಪೂರ್ತಿ ಬದಲಾಗುತ್ತದೆ. ಬಂಡೆಗಳ ಮೇಲಿಂದ ಇಳಿದು ಬರುವ ದೊಡ್ಡ ತೊರೆಗಳಲ್ಲಿ ನೀರು ಉಕ್ಕಿ ಜನರು ತಮ್ಮ ಬೀಚ್ ಉಡುಗೆಗಳನ್ನು ಧರಿಸಿ ಬಂಡೆಗಳ ಮೇಲೆ ಜಾರಿ, ನೀರಿನ ಹಳ್ಳಗಳಲ್ಲಿ ಜಿಗಿದು, ಸುಸ್ತಾದ ನಂತರ ಪಕ್ಕದಲ್ಲೇ ಪಿಕ್ನಿಕ್ ಮ್ಯಾಟ್ ಹಾಸಿಕೊಂಡು ಆನಂದಿಸುತ್ತಾರೆ. ವಯಸ್ಸಾದ ಸೀನಿಯರ್ ಸಿಟಿಜನ್ಸ್ ಗಳಿಗಂತೂ ಇವೆಲ್ಲ ಸ್ವರ್ಗಸದೃಶ. ಬಲು ಶಿಸ್ತಾಗಿ ಅಲಂಕರಿಸಿಕೊಂಡು, ಬೆಲೆಬಾಳುವ ಪೋಷಾಕು ಧರಿಸಿ ತಮ್ಮ ಮೇಲ್ದರ್ಜೆ ಕಾರುಗಳಲ್ಲಿ ಹೊರಡುವ ಇವರುಗಳು ಈ ಸೀನಿಕ್ ರೂಟ್ ನಲ್ಲಿ ಇರುವ ಪುಟ್ಟ ಪುಟ್ಟ ಹಳ್ಳಿಗಳಲ್ಲಿ ಕಾರು ನಿಲ್ಲಿಸಿ ಆ ಹಳ್ಳಿಯಲ್ಲಿ ಕಾಫಿ, ಈ ಹಳ್ಳಿಯಲ್ಲಿ ಸ್ಯಾಂಡ್ವಿಚ್, ಮತ್ತೊಂದು ಕಡೆ ಅಲ್ಲಿನ ವಿಶೇಷ ಗಳನ್ನು ಸ್ವಾದಿಸುತ್ತ, ಇತರ ಪ್ರವಾಸಿಗರೊಂದಿಗೆ ಹರಟುತ್ತಾ ಇರುವುದು ಸಾಮಾನ್ಯ ದೃಶ್ಯ. ಅವೇ ದೃಶ್ಯಗಳಲ್ಲಿ ಕೂಡ ಕಾಣುವುದು ಅಂತಸ್ತಿನ ಅಹಂಭಾವ, ಮೇಲು-ಕೀಳೆಂಬ ತಾರತಮ್ಯ, ಕರಿ-ಬಿಳಿ ಬಣ್ಣಗಳ ಬಗೆಗಿನ ವಿರೋಧ-ಪರ ಧೋರಣೆ ಇನ್ನೂ ಏನೇನೊ. ಎಲ್ಲವನ್ನೂ ಸಾವಧಾನದಿಂದ ನೋಡುವ ಕಣ್ಣುಗಳಿಗೆ ಮನುಷ್ಯ ಬುದ್ಧಿಯ ನಿಕಟ ಪರಿಚಯವಾಗುತ್ತದೆ.

ಇಂತಹ ಧೋರಣೆಗಳಿಗೆ ಬಲಿಯಾಗುವುದು ಬೇಡವೆಂದೊ ಏನೋ ಬಿಳಿಯರನ್ನು ಬಿಟ್ಟರೆ ಪ್ರವಾಸಿಗರಲ್ಲಿ ವೈವಿಧ್ಯತೆಯೆ ಕಾಣುವುದಿಲ್ಲ. ಬೆಟ್ಟಕ್ಕೆ ಹೋದರೂ ಇದೆ ಕತೆ, ಸಮುದ್ರಕ್ಕೆ ಹೋದರೂ ಇದೆ ಕತೆ. ಆದರೆ ಕಳೆದ ಬೇಸಿಗೆಯಲ್ಲಿ ನಾವು ಕ್ಯಾಂಪಿಂಗ್ ಹೋಗಿದ್ದಾಗ ಭೇಟಿ ಕೊಟ್ಟಿದ್ದ ಜಲಪಾತಗಳಲ್ಲಿ ಮಾತ್ರ ಈ ಏಕರೂಪ ದೃಶ್ಯ ಕಾಣಲಿಲ್ಲ ಎಂಬುದು ನೆನಪಾಯಿತು. ಅಲ್ಲೆಲ್ಲ ಎಲ್ಲ ವಯಸ್ಸಿನ, ಬಣ್ಣಗಳ, ಉಡುಪುಗಳ, ತಿಂಡಿಗಳ ಜನರು ಕಂಡಿದ್ದರು. ಆದರೂ ಕೂಡ ನೀರಿನಲ್ಲಿ ಚಂಗನೆ ನೆಗೆಯುತ್ತಿದ್ದವರು ಬಿಳಿಯರೆ. ಮೀನಿನಂತೆ ಈಜಿಕೊಂಡು ದಡ ಸೇರಿ, ಬಂಡೆ ಹತ್ತಿ ಮತ್ತೆ ಆ ಎತ್ತರದಿಂದ ನೀರಿನ ಹಳ್ಳಕ್ಕೆ ಧುಮುಕುತ್ತಿದ್ದರು. ಅಲ್ಲೊಬ್ಬ ಇಲ್ಲೊಬ್ಬ ಅಬೊರಿಜಿನಲ್ ಜನರ ಜಿಗಿತದೊಡನೆ ಬೇರೆಬೇರೆ ಬಣ್ಣಗಳ ಮುಖ ಮೈಗಳು ಕಂಡಿದ್ದವು. ಆದರೂ ಬಲು ಕಡಿಮೆ. ಕ್ಯಾಂಪ್ ಸೈಟಿನಲ್ಲಂತೂ ತೊಂಭತ್ತೈದು ಭಾಗ ಬಿಳಿಯರು. ಬಿಳಿಯರಲ್ಲದವರು ಹೆಚ್ಚಿನ ಪಕ್ಷ ತಮ್ಮದೇ ಸಾಮಾಜಿಕ-ಸಾಂಸ್ಕೃತಿಕ ಗುಂಪುಗಳಲ್ಲಿದ್ದುಕೊಂಡು ಗುಂಪು-ಪ್ರವಾಸ ಹೋಗುತ್ತಾರೇನೋ. ಇಂತಹ ವಲಸೆಗಾರ ಜನರ ಇರುವಿಕೆಗೆ ಚುನಾವಣಾ ಸಮಯದಲ್ಲಿ ಬೇಡಿಕೆ ಬರುತ್ತದೆ. ಅವರ ಅಗತ್ಯಗಳನ್ನು ಸಾವಧಾನವಾಗಿ ಕೇಳಿಸಿಕೊಂಡು ಚುನಾವಣೆಯ ಕಣದಲ್ಲಿರುವ ಅಭ್ಯರ್ಥಿಗಳು ‘ಖಂಡಿತ… ಖಂಡಿತವಾಗಲೂ ನೆರವೇರಿಸುತ್ತೇವೆ’ ಎನ್ನುತ್ತಾರೆ. ಚುನಾವಣೆಯಾದ ಮೇಲೆ ವಲಸೆಗಾರರು ಯಥಾಪ್ರಕಾರ ತಮ್ಮ ಕೆಲಸ-ಮನೆ-ಕುಟುಂಬವೆಂಬ ಗೂಡನ್ನು ಸೇರುತ್ತಾರೆ. ಆದರೂ ಇತ್ತೀಚಿನ ವರ್ಷಗಳಲ್ಲಿ ವಲಸೆಗಾರ ಜನರ ರಾಜಕೀಯ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ ಎನ್ನುವುದು ಸಮಾಧಾನ ತರುವ ವಿಷಯ. ನಿಧಾನವಾಗಿ ಬೆಟ್ಟ, ಸಮುದ್ರ, ಜಲಪಾತಗಳ ಆಸುಪಾಸಿನ ಪ್ರವಾಸ ಸ್ಥಳಗಳಲ್ಲಿ ಕೂಡ ಬಹುತ್ವ ಕಾಣುವ ದಿನಗಳು ದೂರವೇನಿಲ್ಲ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ