Advertisement
ವೆರೋನಾ: ಅಮರ ಪ್ರೇಮದ ನಿದರ್ಶನ

ವೆರೋನಾ: ಅಮರ ಪ್ರೇಮದ ನಿದರ್ಶನ

 ರೋಮಿಯೋ ಜೂಲಿಯೆಟ್ ಒಂದು ದುರಂತ ಪ್ರೇಮ ಕಥೆ. ಈ ಕಥೆಯ ಎಳೆಯ ಮೇಲೆ ಎಷ್ಟು ಸಿನೆಮಾಗಳು ಬಂದಿಲ್ಲ! ಇಂದಿಗೂ ಬರುತ್ತಿವೆ, ಮುಂದೆಯೂ ಬರುತ್ತವೆ. ಆದರೆ ಈ ಕಥೆ ಕಾಲ್ಪನಿಕವಲ್ಲ ಎಂಬುದು ನಿಮಗೆ ಗೊತ್ತೇ? ಇದು ನಿಜವಾಗಿಯೂ ಇಟಾಲಿಯ “ವೆರೋನಾ” ಎಂಬ ಪಟ್ಟಣದಲ್ಲಿ ನಡೆದಿರುವ ಘಟನೆ! ರೋಮಿಯೋ-ಜೂಲಿಯೆಟ್ ಅಮರ ಪ್ರೇಮದ ಘಟನೆಗಳು ಅನೇಕ ಸಾಹಿತಿಗಳನ್ನು ಪ್ರಭಾವಿಸಿದೆ. ಅದರಲ್ಲಿ ವಿಲಿಯಂ ಷೇಕ್ಸ್‌ಪಿಯರ್ ಕೂಡ ಒಬ್ಬರು!
‘ದೂರದ ಹಸಿರು’ ಸರಣಿಯಲ್ಲಿ ರೋಮೀಯೋ-ಜೂಲಿಯಟ್‌ ಕಥೆ ನಡೆದ ಸ್ಥಳದ ಕುರಿತು ಬರೆದಿದ್ದಾರೆ ಗುರುದತ್‌ ಅಮೃತಾಪುರ

ರೋಮಿಯೋ ಜೂಲಿಯಟ್

ಮೊದಲು ಚಿಕ್ಕದಾಗಿ ರೋಮಿಯೋ ಜೂಲಿಯೆಟ್ ಕಥೆ ಹೇಳಿ ಬಿಡ್ತೀನಿ:

ಅಕ್ಕ ಪಕ್ಕದ ಪಟ್ಟಣಗಳಲ್ಲಿದ್ದ ಪ್ರತಿಷ್ಠಿತ “ಕಾಪುಲೇಟ್” ಹಾಗೂ “ಮೊಂಟಾಗೆ” ಕುಟುಂಬಗಳ ನಡುವೆ ಎಂದೆಂದಿಗೂ ಸರಿಪಡಿಸಲಾರದಷ್ಟು ಹಗೆತನ. ಕಾಪುಲೇಟ್ ಕುಟುಂಬದ ಸುಂದರ ಹೆಣ್ಣು “ಜೂಲಿಯೆಟ್”. ಅವಳ ತಂದೆಯ ಆಸೆ ಈಕೆಯನ್ನು “ಪ್ಯಾರಿಸ್” ಎಂಬ ಹುಡುಗನಿಗೆ ಕೊಟ್ಟು ಮದುವೆ ಮಾಡುವುದು. ಮದುವೆ ನಿಶ್ಚಿತಾರ್ಥಕ್ಕಾಗಿ ಒಂದು ಔತಣ ಕೂಟವನ್ನು ಕಾಪುಲೇಟ್ ಕುಟುಂಬ ಏರ್ಪಡಿಸುತ್ತದೆ. ಈ ವಿಷಯ ಮೊಂಟಾಗೆ ಕುಟುಂಬದ ಕಣ್ಣು ಕುಕ್ಕುವಂತೆ ಮಾಡುತ್ತದೆ. ಮೊಂಟಾಗೆ ಪರಿವಾರದ “ರೋಮಿಯೋ” ಮತ್ತು ಇನ್ನಿಬ್ಬರು ಸ್ನೇಹಿತರು ಹೇಗಾದರೂ ಮಾಡಿ ಈ ಸಂದರ್ಭದಲ್ಲಿ ಕಾಪುಲೇಟ್ ಕುಟುಂಬದ ಹೆಸರು ಕೆಡಿಸಬೇಕೆಂದು ನಿರ್ಧರಿಸುತ್ತಾರೆ. ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿರುವಾಗ ಮುಸುಕುಧಾರಿಗಳಾಗಿ ಬಂದ ಈ ಮೂವರಲ್ಲಿ ರೋಮಿಯೋ ಕಾಪುಲೇಟ್ ಕುಟುಂಬದ ಮನೆಯ ಗೇಟನ್ನು ಒಡೆದು ಒಳನುಗ್ಗುತ್ತಾನೆ. ಧಿಡೀರ್ ಶಬ್ದ ಕೇಳಿ ಮೊದಲ ಅಂತಸ್ತಿನಲ್ಲಿದ್ದ ತನ್ನ ಕೊಠಡಿಯ ಬಾಲ್ಕನಿಗೆ ಓಡಿ ಬಂದ ಜೂಲಿಯೆಟ್ ಕಣ್ಣಿಗೆ ಬೀಳುವುದು ಬಿಸಿ ರಕ್ತದ ಯುವಕ “ರೋಮಿಯೋ”. ಆತನೂ ಸಹ ಚೆಲುವೆಯನ್ನು ನೋಡಿ, ಅರೆ ಕ್ಷಣ ಆಕೆಯ ಕಣ್ಣುಗಳಲ್ಲಿ ಕಳೆದು ಹೋಗುತ್ತಾನೆ. ಆಕ್ರೋಶ ಭರಿತನಾಗಿ ನಿಶ್ಚಿತಾರ್ಥವನ್ನು ಹಾಳು ಮಾಡಲು ಬಂದವನಿಗೂ ಹಾಗೂ ತನ್ನ ತಂದೆಯ ಹಠಕ್ಕೆ ಮದುವೆಗೆ ಒಪ್ಪಿಕೊಂಡಿದ್ದ ಹುಡುಗಿಗೂ ಮೊದಲ ನೋಟದಲ್ಲಿಯೇ ಪ್ರೇಮ ಹುಟ್ಟುತ್ತದೆ.

ಈ ಪ್ರೇಮವನ್ನರಿತ ಜೂಲಿಯೆಟ್ ನ ದಾದಿ ಇವರಿಬ್ಬರಿಗೂ ಗುಪ್ತವಾಗಿ ಮರು ದಿನವೇ ಒಂದು ಚರ್ಚಿನಲ್ಲಿ ಮದುವೆ ಮಾಡಿಸುತ್ತಾಳೆ! ಆದರೆ ಜೂಲಿಯೆಟ್ ನ ಸೋದರ ಸಂಬಂಧಿಯೊಬ್ಬನಿಗೆ ಈ ವಿಷಯ ತಿಳಿದು ರೋಮಿಯೋ ಮತ್ತವನ ಸ್ನೇಹಿತರ ಮಧ್ಯೆ ದೊಡ್ಡ ಹೊಡೆದಾಟವೇ ನಡೆಯುತ್ತದೆ. ಈ ಕಾಳಗದಲ್ಲಿ ಜೂಲಿಯೆಟ್ ಸೋದರ ಸಂಬಂಧಿ ಸಾವನ್ನಪ್ಪುತ್ತಾನೆ. ಸಾವಿನ ಸಂದರ್ಭವಾದ್ದರಿಂದ ಜೂಲಿಯೆಟ್ ಹಾಗೂ ಪ್ಯಾರಿಸ್ ನಡುವಿನ ನಿಶ್ಷತಾರ್ಥವನ್ನು ಒಂದು ದಿನ ಮುಂದೂಡಲಾಗುತ್ತದೆ. ಜೂಲಿಯೆಟ್ ಪ್ಯಾರಿಸ್‌ನನ್ನು ಮದುವೆಯಾಗುವುದಿಲ್ಲವೆಂದು ಹಠ ಹಿಡಿದು ಕೂರುತ್ತಾಳೆ. ಅವಳಿಗೆ ಈಗಾಗಲೇ ಮದುವೆಯಾಗಿರುವ ವಿಷಯ ತನ್ನ ಕುಟುಂಬಕ್ಕೆ ಇನ್ನೂ ತಿಳಿದಿರುವುದಿಲ್ಲ. ಆ ಕಡೆ ರೋಮಿಯೋ ಕೂಡ ಈ ಎಲ್ಲ ಬೆಳವಣಿಗೆಗಳಿಂದ ಭ್ರಮ ನಿರಸನಗೊಂಡು ತನ್ನ ಮನೆ ಸೇರಿರುತ್ತಾನೆ.

ಆಗ ಜೂಲಿಯೆಟ್ ಹಾಗೂ ರೋಮಿಯೋ ಗುಪ್ತ ಮದುವೆಗೆ ಸಾಕ್ಷಿಯಾದ ಚರ್ಚಿನ ಫಾದರ್ ಹೆಣೆಯುವ ಕಥೆಯಂತೆ ನಟಿಸಲು ಜೂಲಿಯೆಟ್ ಒಪ್ಪಿಕೊಳ್ಳುತ್ತಾಳೆ. ಜೂಲಿಯೆಟ್ ನಿದ್ದೆ ಗುಳುಗೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಸತ್ತಂತೆ ನಟಿಸಿ, ರೋಮಿಯೋನನ್ನು ಕರೆಸುವುದು ಅದರ ಯೋಜನೆ. ಆಕೆ ನಿದ್ದೆ ಮಾತ್ರೆಯನ್ನು ಸೇವಿಸಿ, ಸುದ್ದಿಯನ್ನು ರೋಮಿಯೋವರೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತದೆ. ಈ ಸುದ್ದಿಯನ್ನು ಕೇಳಿದ ರೋಮಿಯೋಗೆ ಸಿಡಿಲು ಬಡಿದಂತಾಗಿ, ಒಂದು ವಿಷದ ಬಾಟಲಿಯನ್ನು ತೆಗೆದುಕೊಂಡು ಹೊರಡುತ್ತಾನೆ. ತನ್ನ ನೆಚ್ಚಿನ ಸಂಗಾತಿಯ ಅಂತಿಮ ದರ್ಶನ ಪಡೆಯಲು ಬಂದವನಿಗೆ ಅಲ್ಲಿ ಪ್ಯಾರಿಸ್ ಅದಾಗಲೇ ಬಂದಿರುವುದು ಕಾಣುತ್ತದೆ. ಆಕ್ರೋಶ ಭರಿತನಾದ ರೋಮಿಯೋ ಪ್ಯಾರಿಸ್ ನನ್ನು ಸಾಯಿಸಿ, ವಿಷ ಕುಡಿದು ಸಾವನ್ನಪ್ಪುತ್ತಾನೆ. ಇಷ್ಟೆಲ್ಲಾ ನಡೆಯುತ್ತಿರುವಾಗ ಜೂಲಿಯೆಟ್ ಇನ್ನೂ ನಿದ್ರಾವಸ್ಥೆಯಲ್ಲಿರುತ್ತಾಳೆ. ಅವಳಿಗೆ ಎಚ್ಚರವಾಗುವಷ್ಟರಲ್ಲಿ ಈ ಅಚಾತುರ್ಯ ನಡೆದು ಹೋಗಿರುತ್ತದೆ. “ತನ್ನ ಪ್ರಿಯಕರನ ಸಾವಿಗೆ ತಾನೇ ಕಾರಣನಾದೆನಲ್ಲ” ಎನ್ನುವ ಕೊರಗಿನಿಂದ ಹೊರಬರಲಾರದೆ, ರೋಮಿಯೋ ತಂದಿದ್ದ ಚಾಕುವಿನಿಂದ ತನ್ನನ್ನು ತಾನೇ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಈ ಇಬ್ಬರ ಸಾವಿನಿಂದ ಮನಸ್ಸುಗಳು ಪರಿವರ್ತನೆಗೊಂಡು, ಮುಂದೆಂದೂ ಹಗೆತನ ಸಾಧಿಸದೆ ಶಾಂತಿಯ ಒಡಂಬಡಿಕೆ ಎರಡೂ ಕುಟುಂಬಗಳ ನಡುವೆ ನಡೆಯುತ್ತದೆ. – ಶುಭಂ –

ಈ ಕಥೆಯ ಎಳೆಯ ಮೇಲೆ ಎಷ್ಟು ಸಿನೆಮಾಗಳು ಬಂದಿಲ್ಲ! ಇಂದಿಗೂ ಬರುತ್ತಿವೆ, ಮುಂದೆಯೂ ಬರುತ್ತವೆ. ರೋಮಿಯೋ ಜೂಲಿಯೆಟ್ ಒಂದು ದುರಂತ ಪ್ರೇಮ ಕಥೆ ಎಂದು ನಿಮಗೂ ತಿಳಿಯಿತು. ಆದರೆ ಈ ಕಥೆ ಕಾಲ್ಪನಿಕವಲ್ಲ ಎಂಬುದು ನಿಮಗೆ ಗೊತ್ತೇ? ಇದು ನಿಜವಾಗಿಯೂ ಇಟಾಲಿಯ “ವೆರೋನಾ” ಎಂಬ ಪಟ್ಟಣದಲ್ಲಿ ನಡೆದಿರುವ ಘಟನೆ! ರೋಮಿಯೋ-ಜೂಲಿಯೆಟ್ ಅಮರ ಪ್ರೇಮದ ಘಟನೆಗಳು ಅನೇಕ ಸಾಹಿತಿಗಳನ್ನು ಪ್ರಭಾವಿಸಿದೆ. ಅದರಲ್ಲಿ ವಿಲಿಯಂ ಷೇಕ್ಸ್‌ಪಿಯರ್ ಕೂಡ ಒಬ್ಬರು!

ಈ ಎಲ್ಲ ಇತಿಹಾಸವನ್ನು ಕೆದಕುವಾಗ ತಿಳಿದ ಮತ್ತೊಂದು ಆಕರ್ಷಕ ಮಾಹಿತಿಯೆಂದರೆ, ವಿಲಿಯಂ ಷೇಕ್ಸ್‌ಪಿಯರ್ ಗಿಂತಲೂ ಮುಂಚೆಯೇ ಹಲವಾರು ಇಟಾಲಿಯನ್ ಸಾಹಿತಿಗಳು “ರೋಮಿಯೋ -ಜೂಲಿಯೆಟ್” ಪ್ರೇಮ ಕಥನದ ಬಗೆಗಿನ ಕಾದಂಬರಿ, ಸಾಹಿತ್ಯ ರಚನೆ ಮಾಡಿದ್ದಾರೆ ಎಂದು. ಈ ವಿಷಯವಾಗಿ 1476 ರಲ್ಲಿ ಕಾದಂಬರಿ ರಚಿಸಿದ Masuccio Salernitano ಮೊದಲಿಗರು. ಆದರೆ ವಿಲಿಯಂ ಷೇಕ್ಸ್‌ಪಿಯರ್ ಅವರ ಸಾಹಿತ್ಯದ ಪ್ರೌಢಿಮೆ “ರೋಮಿಯೋ -ಜೂಲಿಯೆಟ್” ಪ್ರೇಮ ಸನ್ನಿವೇಶವನ್ನು ಅಮರ ಪ್ರೇಮವಾಗಿಸಿತು ಎನ್ನುವುದು ನನ್ನ ಭಾವನೆ. ಸಮಯ ಕಳೆದಂತೆ ಆಗುವ ಬದಲಾವಣೆಗಳಿಗೆ ಅತೀತವಾಗಿ, ಸಾರ್ವಕಾಲಿಕ ಕಥಾ ಹಂದರವನ್ನು ಹುಟ್ಟು ಹಾಕುವುದು ಕೆಲವರಿಂದಷ್ಟೇ ಸಾಧ್ಯ. ಅದಕ್ಕೊಂದು ಉದಾಹರಣೆ ಹದಿನಾರನೇ ಶತಮಾನದಲ್ಲಿ ವಿಲಿಯಂ ಷೇಕ್ಸ್‌ಪಿರ್ ವಿರಚಿತ “ರೋಮಿಯೋ-ಜೂಲಿಯೆಟ್”!!

ಪ್ರವಾಸಿಗರಿಗೆ ವೆರೋನಾ ಪಟ್ಟಣದಲ್ಲಿ ಇರುವ ಎರಡು ಪ್ರಮುಖ ಆಕರ್ಷಣೆಗಳಲ್ಲಿ ಒಂದು “ಜೂಲಿಯೆಟ್ ಹೌಸ್”. ಈಗ ಇದೊಂದು ವಸ್ತು ಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ಅಲ್ಲಿ ಜೂಲಿಯೆಟ್ ಧರಿಸಿದ್ದ ಬಟ್ಟೆ- ಬರೆ, ಬಳಸುತ್ತಿದ್ದ ಕಪಾಟು ಇತ್ಯಾದಿಗಳನ್ನು ಜೋಪಾನ ಮಾಡಲಾಗಿದೆ. ಆಕೆ ಓಡಿ ಬಂದು ರೋಮಿಯೋನನ್ನು ಮೊದಲು ಬಾರಿ ನೋಡಿದ ಬಾಲ್ಕನಿ ಪ್ರವೇಶಿಸಲು ಪ್ರತ್ಯೇಕ ಟಿಕೆಟ್ ಪಡೆಯಬೇಕು! ಆ ಬಾಲ್ಕನಿ ಶಿಥಿಲಗೊಂಡು ಈಗ ಮತ್ತೆ ಅದನ್ನು ನವೀಕರಿಸಿದ್ದಾರೆ. ಜೂಲಿಯೆಟ್ ಪ್ರತಿಮೆಯೆದುರು ಎಲ್ಲರ ಭಾವಚಿತ್ರ ತೆಗೆದುಕೊಳ್ಳುವುದು ಒಂದು ಅಲಿಖಿತ ನಿಯಮ. ರೋಮಿಯೋ ಮನೆ ಕೂಡ ಇಲ್ಲಿದೆ. ಆದರೆ ಅಲ್ಲಿಗೆ ಭೇಟಿ ನೀಡುವ ಅವಕಾಶ ಪ್ರವಾಸಿಗರಿಗಿಲ್ಲ.

(ಜೂಲಿಯೆಟ್ ಹೌಸ್: ಜೂಲಿಯೆಟ್ ರೋಮಿಯೋನನ್ನು ನೋಡಿದ ಬಾಲ್ಕನಿ)

ಸಾವಿನ ಸಂದರ್ಭವಾದ್ದರಿಂದ ಜೂಲಿಯೆಟ್ ಹಾಗೂ ಪ್ಯಾರಿಸ್ ನಡುವಿನ ನಿಶ್ಷತಾರ್ಥವನ್ನು ಒಂದು ದಿನ ಮುಂದೂಡಲಾಗುತ್ತದೆ. ಜೂಲಿಯೆಟ್ ಪ್ಯಾರಿಸ್‌ನನ್ನು ಮದುವೆಯಾಗುವುದಿಲ್ಲವೆಂದು ಹಠ ಹಿಡಿದು ಕೂರುತ್ತಾಳೆ. ಅವಳಿಗೆ ಈಗಾಗಲೇ ಮದುವೆಯಾಗಿರುವ ವಿಷಯ ತನ್ನ ಕುಟುಂಬಕ್ಕೆ ಇನ್ನೂ ತಿಳಿದಿರುವುದಿಲ್ಲ.

ಅರೇನಾ

ಇಟಾಲಿಯ ರೋಮ್ ಎಂದಾಕ್ಷಣ ನೆನಪಾಗುವುದು “ಕೊಲೋಸಿಯಂ” ಎಂಬ ಆಂಫಿಥಿಯೇಟರ್‌. ಈ ರೀತಿಯ ಆಂಫಿಥಿಯೇಟರ್‌ಗಳಲ್ಲಿ ರೋಮನ್ನರು ಗ್ಲೇಡಿಯೇಟರ್ ಪ್ರದರ್ಶನವನ್ನು ನಡೆಸುತ್ತಿದ್ದರಂತೆ. ತನ್ನ ಸಾಮ್ರಾಜ್ಯದ ಅನೇಕ ಕಡೆಗಳಲ್ಲಿ ಈ ಕುರುಹುಗಳನ್ನು ಬಿಟ್ಟು ಹೋಗಿದ್ದಾರೆ. ಪ್ರಪಂಚದಾದ್ಯಂತ ಸುಮಾರು 230 ಆಂಫಿಥಿಯೇಟರ್‌ಗಳು ಕಂಡುಬರುತ್ತವೆ. ಕ್ರಿ.ಪೂ. ಮೂರನೇ ಶತಮಾನದಿಂದ ಹಿಡಿದು ಕ್ರಿ.ಶ. ಒಂದನೇ ಶತಮಾನದವರೆಗೂ ಇವನ್ನೆಲ್ಲ ನಿರ್ಮಿಸಲಾಗಿದೆ.

ಅದೇ ರೀತಿಯ ಒಂದು ಆಂಫಿಥಿಯೇಟರ್‌ ವೆರೋನಾ ನಗರದಲ್ಲಿದೆ. ಇದರ ಈಗಿನ ಹೆಸರು “ಅರೇನಾ”. ವೆರೋನಾ ಅರೇನಾ ನಿರ್ಮಾಣಗೊಂಡಿರುವುದು ಕ್ರಿ.ಶ. 30ನೇ ಇಸವಿಯಲ್ಲಿ. ಆಗಿನ ಕಾಲದಲ್ಲಿಯೇ 30,000 ಆಸನಗಳನ್ನೊಳಗೊಂಡ ವ್ಯವಸ್ಥೆ ಮಾಡಿದ್ದಾರೆ ಎಂದರೆ ಊಹಿಸಿಕೊಳ್ಳಲೂ ಅಸಾಧ್ಯ. ಇದರ ವಿಶೇಷ ಎಂದರೆ, ಪ್ರಪಂಚದಾದ್ಯಂತ ಇರುವ 230 ಆಂಫಿಥಿಯೇಟರ್‌ಗಳಲ್ಲಿ ಇಂದಿಗೂ ಕಾರ್ಯನಿರ್ವಹಿಸುತ್ತಿರುವ ಆಂಫಿಥಿಯೇಟರ್‌ ಇದೊಂದೆ! ಉಳಿದೆಲ್ಲವೂ ಇತಿಹಾಸದ ಸ್ಮಾರಕಗಳಷ್ಟೆ. ವೆರೋನಾ ಅರೇನಾದಲ್ಲಿ ಇವತ್ತಿಗೂ ಸಂಗೀತ ಕಛೇರಿಗಳು ನಡೆಯುತ್ತವೆ. ಜಗತ್ತಿನ ಪ್ರಸಿದ್ದ ಕಲಾವಿದರಿಗೆ ಗರಿಮೆಯನ್ನು ಹೆಚ್ಚಿಸುವ ಪ್ರತಿಷ್ಠಿತ ಸ್ಥಳವಾಗಿ ಮುಂದುವರೆದಿದೆ. ಯಾವುದೇ ಕಲಾವಿದನಿಗೆ ಇಲ್ಲಿ ಪ್ರದರ್ಶನ ನೀಡುವುದು ತನ್ನ ಜೀವಮಾನದ ಸಾಧನೆಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ! ಬಹುಪಾಲು ಪಾಶ್ಚಿಮಾತ್ಯ ಶೈಲಿಯ “ಒಪೇರಾ” ಸಂಗೀತ ಕಛೇರಿಗಳು ಇಲ್ಲಿ ನಡೆಯುತ್ತವೆ. ನಾವು ಭೇಟಿ ನೀಡಿದಾಗ ನವೀಕರಣದ ಕೆಲಸ ನಡೆಯುತ್ತಿದ್ದುದರಿಂದ ಒಳಗೆ ಪ್ರವೇಶವಿರಲಿಲ್ಲ. ಹೊರಗಿನಿಂದ ಒಂದು ಪ್ರದಕ್ಷಿಣೆ ಹಾಕಿದ್ದಾಯಿತು.

(ಕೃಪೆ : By Arne Müseler )

ಅಡಿಗೆ

ಇದೊಂದು ಇಟಲಿಯ ಪ್ರಮುಖ ನದಿ. ವೆರೋನಾ ನಗರದ ಹೃದಯ ಭಾಗದಲ್ಲಿ ಜೀವನಾಡಿಯಾಗಿ ಹರಿಯುತ್ತಾಳೆ. ಆಸ್ಟ್ರಿಯಾ ಮತ್ತು ಇಟಲಿ ಗಡಿ ಭಾಗದ ಪರ್ವತ ಪ್ರದೇಶಗಳಿಗೆ ಇಟಾಲಿಯನ್ ಭಾಷೆಯಲ್ಲಿ “ಅಡಿಗೆ” ಎನ್ನುತ್ತಾರೆ. ಆ ಪರ್ವತಗಳಿಂದ ಹುಟ್ಟಿದ ನದಿಯಾದ್ದರಿಂದ, ಇದಕ್ಕೂ ಅದೇ ಹೆಸರಿಟ್ಟಿದ್ದಾರೆ. ಕನ್ನಡದಲ್ಲಿ ಉಪಯೋಗಿಸುವ ಪದಗಳ ಹಲವಾರು ಹೆಸರಿನ ಊರುಗಳು ಇಟಲಿಯಲ್ಲಿವೆ. ಹೀಗೆಯೇ ಸುತ್ತಾಡುವಾಗ “ಗಂಡ”, “ಅಸ್ಥಿ”, “ಎಷ್ಟೇ” ಎಂಬ ಊರುಗಳನ್ನು ನೋಡಿದ ನೆನಪು. ಕನ್ನಡಿಗನಾಗಿ ನನಗೆ ಹಾಸ್ಯಾಸ್ಪದ ಎನ್ನಿಸಿದರೂ ಇಟಾಲಿಯನ್ ಭಾಷೆಯಲ್ಲಿ ಬೇರೆಯದೇ ಅರ್ಥಗಳಿವೆ ಎನ್ನುವುದು ನಂತರ ತಿಳಿಯಿತು.

ಆಸ್ಟ್ರಿಯಾ ಹಾಗೂ ಇಟಲಿ ಗಡಿ ಭಾಗದಲ್ಲಿ ಉಗಮಿಸುವ ಈ ನದಿ ಸುಮಾರು ನಾಲ್ಕುನೂರು ಕಿಲೋಮೀಟರ್ ಹರಿದ ನಂತರ ಏಡ್ರಿಯಾಟಿಕ್ ಸಮುದ್ರವನ್ನು ಸೇರುತ್ತದೆ. ಅನಾದಿ ಕಾಲದಿಂದಲೂ ಈ ಭಾಗದ ಜೀವನದಿಯಾಗಿ ಮಾನವನ ಜೀವನಕ್ಕೂ  ಸಹಾಯ ಮಾಡಿದ್ದಾಳೆ “ಅಡಿಗೆ”. ವೆರೋನಾದಲ್ಲಿ ಅಡಿಗೆ ನದಿಗೆ ಕಟ್ಟಲಾಗಿರುವ ಅನೇಕ ಸೇತುವೆಗಳಲ್ಲಿ Castelvecchio ಅತ್ಯಂತ ಪುರಾತನವಾದುದು. ಹದಿನಾಲ್ಕನೇ ಶತಮಾನದಲ್ಲಿ ನಿರ್ಮಿಸಿಲಾಗಿದ್ದ ಈ ಸೇತುವೆ ವಿಶ್ವ ಮಹಾ ಯುದ್ಧದಲ್ಲಿ ಸಂಪೂರ್ಣ ನೆಲಕಚ್ಚಿ ಹಾಳಾಯಿತು. ನಂತರ ಮತ್ತೆ ಅದೇ ರೀತಿ ಪುನರ್ ನಿರ್ಮಿಸಲಾಗಿದೆ.

(ಅಡಿಗೆ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ: Castelvecchio)

ವೆರೋನಾ ನಗರದ ಮತ್ತೊಂದು ಆಕರ್ಷಣೆ ಅಲ್ಲಿಯ ಪುರಾತನ ನಗರದ ಭಾಗ. ಈ ಭಾಗದಲ್ಲಿ ಇತಿಹಾಸದ ನಿದರ್ಶನಗಳಾಗಿ ನಿಂತಿರುವ ವೀಕ್ಷಣಾಲಯ, ನಗರದ ಹೃದಯ ಭಾಗದಲ್ಲಿರುವ ಮಾರುಕಟ್ಟೆಯ ಚೌಕ, ಬಸಿಲಿಕಾ ಇತ್ಯಾದಿ. ವೆರೋನಾದ ಇತಿಹಾಸ ಕ್ರಿಸ್ತ ಪೂರ್ವ ಒಂದನೇ ಶತಮಾನದಿಂದ ಪ್ರಾರಂಭವಾಗುತ್ತದೆ. ಇಂದು ವೆರೋನಾ ಯುನೆಸ್ಕೋ ಪಟ್ಟಿಯಲ್ಲಿ ಸೇರಿರುವ ಸ್ಥಳವಾಗಿದೆ. ಇಲ್ಲಿಗೆ ಭೇಟಿ ನೀಡುವವರಿಗೆ ಇಟಲಿಯ ಪ್ರಸಿದ್ಧ ಖಾದ್ಯವಾದ ಪಿಜ್ಜಾ ಹಾಗೂ ಪಾಸ್ತಾ ಹೋಟೆಲ್‌ಗಳು ಅಚ್ಚು ಮೆಚ್ಚು. ಭಾರತೀಯ ಶೈಲಿಯ ರೆಸ್ಟೋರೆಂಟ್ ಸಹ ಇವೆ. ವೆರೋನಾದಲ್ಲಿ ನಡೆಯುವ ಕ್ರಿಸ್ಮಸ್ ಹಬ್ಬ ಬಹಳ ಹೆಸರುವಾಸಿ.

ವೆನಿಸ್ ನಿಂದ ಕೇವಲ 90 ಕಿಲೋಮೀಟರ್ ದೂರದಲ್ಲಿರುವ ವೆರೋನಾ, ಒಂದು ಘಂಟೆಯ ರೈಲು ಪ್ರಯಾಣದಲ್ಲಿ ತಲುಪಬಹುದಾಗಿದೆ. ವೆರೋನಾದಲ್ಲಿ ವಿಮಾನ ನಿಲ್ದಾಣ ಸಹ ಇದ್ದು, ಯೂರೋಪಿನ ಹಲವಾರು ನಗರಗಳಿಂದ ನೇರ ಸಂಪರ್ಕವನ್ನು ಹೊಂದಿದೆ. ಇಟಲಿಯ “ಲೇಕ್ ಡಿಸ್ಟ್ರಿಕ್ಟ್” ಎಂದೇ ಹೆಸರುವಾಸಿಯಾಗಿರುವ ಗಾರ್ಡ ಸರೋವರ ವೆರೋನಾದಿಂದ ಸಮೀಪದಲ್ಲಿದೆ. ಪ್ರಪಂಚದ ಫ್ಯಾಷನ್ ರಾಜಧಾನಿ ಎಂದೇ ಚಿರಪರಿಚಿತವಾಗಿರುವ ಮಿಲಾನ್ ವೆರೋನಾದಿಂದ ಎರಡು ಘಂಟೆಯ ರೈಲು ಪ್ರಯಾಣ. ನಮ್ಮ ಉತ್ತರ ಕನ್ನಡದ ಯಾಣ ರೀತಿಯಲ್ಲೇ ಇರುವ ಇಟಾಲಿಯನ್ ಡೋಲೋಮೈಟ್ಸ್ ಪರ್ವತ ಶ್ರೇಣಿಗಳೂ ಸಹ ವೆರೋನಾದಿಂದ ದೂರದಲ್ಲಿಲ್ಲ. ಹಾಗಾಗಿ ರಜಾ ದಿನಗಳನ್ನು ಕಳೆಯಲು ಅಪ್ಯಾಯಮಾನವಾದ ಪ್ರದೇಶವಾಗಿ ವೆರೋನಾ ಮಾರ್ಪಟ್ಟಿದೆ.

ನಾವು ವೆರೋನಾ ಭೇಟಿ ನೀಡಿದ ದಿನ ಜೂನ್ 2. ಅಂದು ಇಟಲಿಯ “ರಾಷ್ಟ್ರೀಯ ದಿನ” ಹಾಗೂ “ಗಣತಂತ್ರ ದಿನ”. ವಿಶ್ವ ಎರಡನೇ ಮಹಾಯುದ್ಧದ ನಂತರ 1946, ಜೂನ್ 2 ರಂದು ಇಟಲಿಯಲ್ಲಿ ಮತ್ತೆ ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಹಾಗಾಗಿ ವೆರೋನಾದಲ್ಲಿ ಸಹ ಅಂದು ಮಿಲಿಟರಿ ಶೈಲಿಯ ವಾದ್ಯ ಪ್ರದರ್ಶನ ನಡೆಯಿತು.

(ಇಟಲಿ ಗಣತಂತ್ರ ದಿನದ ಮಿಲಿಟರಿ ಸಂಗೀತ)

ವಿಶ್ವ ಪ್ರಸಿದ್ಧ ಸೈಕಲ್ ಸವಾರಿಯ ಸ್ಪರ್ಧೆಗಳಲ್ಲಿ ಮೂರೂ “ಗ್ರಾಂಡ್ ಟೂರ್”ಗಳಿವೆ. ಸೈಕಲ್ ಸವಾರಿಯ ವಿಭಾಗದಲ್ಲಿ ಈ ಸ್ಪರ್ಧೆಯ ಮಹತ್ವ ಒಲಂಪಿಕ್ ಸ್ಪರ್ಧೆಯನ್ನೂ ಮೀರಿದ್ದಾಗಿದೆ. ಅದರಲ್ಲಿ ಒಂದು “ಗ್ರಾಂಡ್ ಟೂರ್” ವೆರೋನಾವನ್ನು ಸೇರಿ ಇಟಲಿಯ ಕೆಲವೇ ನಗರಗಳಲ್ಲಿ ನಡೆಯುತ್ತದೆ. ಅದರ ಹೆಸರು – “ಗಿರೋ ಡಿ ಇಟಾಲಿಯಾ”. ನಾವು ಭೇಟಿ ನೀಡಿದ ದಿನ ಆ ಸ್ಪರ್ಧೆ ನಡೆಯುತ್ತಿತ್ತು. ಮೈಸೂರಿನಲ್ಲಿ ದಸರಾ ಅಂಬಾರಿಯನ್ನು ಸ್ವಾಗತಿಸಲು ಬೆಳಗ್ಗಿನಿಂದ ಹೇಗೆ ಜನ ಕಾಯುತ್ತಿರುತ್ತಾರೋ, ಹಾಗೆಯೇ ಇಲ್ಲಿ ಜನ ಬೆಳಗ್ಗಿನಿಂದ ಸೇರಿದ್ದರು. ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು. ತಮ್ಮ ನೆಚ್ಚಿನ ಸೈಕಲ್ ಪಟುವನ್ನು ಹುರಿದುಂಬಿಸುತ್ತಿದ್ದರು.

ಒಟ್ಟಿನಲ್ಲಿ ವೆರೋನಾದಿಂದ ಹೊರಬರುವಾಗ ರೋಮಿಯೋ ಜೂಲಿಯೆಟ್ ಕಥೆಯ ಮೆಲುಕು ಹಾಕಿದ್ದಾಯಿತು. ವೆರೋನಾ ಅರೆನಾದಲ್ಲಿ ಒಮ್ಮೆಯಾದರೂ ಒಂದು ಸಂಗೀತ ಕಛೇರಿಯನ್ನು ಕಣ್ತುಂಬಿಕೊಳ್ಳಬೇಕೆನ್ನುವ ಬಯಕೆ ಇನ್ನೂ ಆಸೆಯಾಗಿಯೇ ಉಳಿದಿದೆ.

About The Author

ಗುರುದತ್ ಅಮೃತಾಪುರ

ಮೂಲತಃ ದಾವಣಗೆರೆಯವರಾದ ಗುರುದತ್ ಸಧ್ಯ ಜೆರ್ಮನಿಯ ಕಾನ್‌ಸ್ಟೆನ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೋಟೋಗ್ರಫಿ, ಪ್ರವಾಸ, ಚಾರಣ, ಪುಸ್ತಕಗಳ ಓದು ಇವರ ಹವ್ಯಾಸಗಳು..

6 Comments

  1. ಸಂತೋಷ್ ಸ.ಗು

    ಪ್ರಪಂಚದಾದ್ಯಂತ ರೋಮಿಯೊ-ಜೂಲಿಯೆಟ್‌ ಪ್ರೇಮ ಕಥಾನಕ ಗೊತ್ತಿಲ್ಲದವರು ಅತಿವಿರಳ… ಆದರೆ ಈ ಕಥೆಯ ಮೂಲ, ಅದರ ಉಗಮ ಸ್ಥಾನದ ಕುರಿತು ಅರಿತವರು ಬೆರಳೆಣಿಕೆಯಷ್ಟಿರಬಹುದು.

    ವೆನೀಸ್ ನಗರಕ್ಕೆ ‌ಭೇಟಿ ನೀಡಿದ ಸಂದರ್ಭದಲ್ಲಿ ವೆರೋನ ಎನ್ನುವ ಹೆಸರು ನೋಡಿದ ನೆನಪು ಇನ್ನೂ ಹಸಿರಾಗಿದೆ. ಆದರೆ ಆ ಊರಿನ ಐತಿಹ್ಯ, ವಿಶೇಷತೆಗಳ ಬಗ್ಗೆ ಆಗ, ಅಂದರೆ ಎರಡು ದಶಕಗಳ ಹಿಂದೆ ತಲೆ ಕೆಡೆಸಿಕೊಂಡಿರಲಿಲ್ಲ.

    ಈಗ ಅಂಗೈಲಿ ಪ್ರಪಂಚ ಪರಿಕ್ರಮಣ ನಡೆಸಬಹುದು, ಕುತೂಹಲ
    ಮೂಡಿಸಿದ ಸ್ಥಳಗಳ ಕುರಿತು ತತಕ್ಷಣ ತಿಳಿಯಬಹುದು. ಸಾಧ್ಯವಾದರೆ ಭೇಟಿ ನೀಡಬಹುದು, ನಂತರ ಆಪ್ತೇಷ್ಟರಿಗೆ ತಿಳಿಸಬಹುದು. ಬರೆಯಲಾದರೆ ಇನ್ನೂ ಸೊಗಸು.

    ನಮ್ಮ ಗುರುದತ್ ಇದನ್ನು ಪೂರ್ತಿಯಾಗಿ ಅನುಷ್ಠಾನಕ್ಕೆ ತಂದಿದ್ದಾರೆ. ಸೊಗಸಾಗಿ ಅನುಭವಗಳ ಹಂಚಿಕೊಂಡಿದ್ದಾರೆ. ಅನೇಕ ಸವಿನೆನಪುಗಳನ್ನು ಕಣ್ಮುಂದೆ ತರಿಸಿದ್ದಾರೆ.

    ಅವರಿಗೆ ನನ್ನ ಅಭಿನಂದನೆಗಳು, ಧನ್ಯವಾದಗಳು☺️?. ಈ ಪರಿಪಾಠ, ಈ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ ಎಂದು ಹಾರೈಸುತ್ತೇನೆ.

    Reply
  2. Bhagyalakshmi Amritapura

    ನಾವು ಸುತ್ತಾಡಿದ ವೆರೋನಾ ಅರೆನಾ ಎಲ್ಲ ಮತ್ತೊಮ್ಮೆ ಕಣ್ಮುಂದೆಸ
    ಸುಳಿಯಿತು. ಜೂಲಿಯೆಟ್ ಳ ಪ್ರತಿಮೆಯ ಪಟ ಹಾಕಿದ್ದರೆ ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು. ಎಲ್ಲೋ ಮಾಯಾಲೋಕದಲ್ಲಿ ವಿಹರಿಸಿದ ಅನುಭವ ಕೂತಲ್ಲೇ ಬರಹ ಮಾಡಿಸಿತು. ಚಂದದ ಬರಹ .
    ಧನ್ಯವಾದ ಗುರುದತ್ತ

    Reply
  3. Chandrasekhar

    ಇಟಲಿಯ “ವೆರೋನಾ” ಬಗ್ಗೆ ಬರೆದಿರುವ ಈ ಪುಟ ನನಗೆ ತುಂಬಾ ಇಷ್ಟವಾಯಿತು. ಗುರುದತ್ ಅವರಿಗೆ ನನ್ನ ಅಭಿನಂದನೆಗಳು.
    ಮುಂದಿನ ದೂರದ ಹಸಿರು ಸಂಚಿಕೆಗಾಗಿ ಕಾಯುತ್ತಿರುವೆ.

    Reply
  4. Smitha bhatta

    Chennagide baravanige, nagaeada hesarugalu nanagoo nage baresitu.

    Reply
  5. M G SEETHARAM

    Mr Gurudatt has beautifully narrated Romeo and Juliette story, in fact his story telling is very simple but effective. Anticipate more such articles from hi

    Reply
  6. Chandrashekhar D M

    “ರೋಮಿಯೋ -ಜೂಲಿಯೆಟ್” ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಬರೆದಿರುವ ಗುರುದತ್ ಅವರಿಗೆ ನನ್ನ ಅಭಿನಂದನೆಗಳು.
    ಹಲವಾರು ಕನ್ನಡ ಪದಗಳನ್ನು ಇಟಲಿಯಲ್ಲಿ ಬಳಸುತ್ತಿರುವುದು ತುಂಬಾ ಆಶ್ಚರ್ಯವೆನಿಸುತ್ತದೆ.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ